ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಉಡುಪಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಮತ್ತು ರಸ್ತೆ ಬದಿಯಲ್ಲಿ ಅಗೆತ ಕಾರ್ಯವನ್ನು ಅಕ್ಟೋಬರ್ ಅಂತ್ಯದವರೆಗೆ ನಿಷೇಧಿಸಲಾಗಿದೆ.
ಈಗಾಗಲೇ ಇಲಾಖೆಯಿಂದ ರಸ್ತೆ ಅಗೆತಕ್ಕೆ ಅನುಮತಿ ನೀಡಲಾಗಿದ್ದರೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಕ್ಟೋಬರ್ ಅಂತ್ಯದವರೆಗೆ ಯಾವುದೇ ಅಗೆತ ಕಾರ್ಯ ಕೈಗೊಳ್ಳದಂತೆ ಸೂಚಿಸಲಾಗಿದೆ. ಇದೇ ಅವಧಿಯಲ್ಲಿ ಹೊಸದಾಗಿ ರಸ್ತೆ ಅಗೆತಕ್ಕೆ ಯಾವುದೇ ಅನುಮತಿ ನೀಡುವುದಿಲ್ಲ ಎಂದು ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಅನಗತ್ಯವಾಗಿ ರಸ್ತೆ ತುಂಡರಿಸುವುದು ಅಥವಾ ಅಗೆತ ಕಾರ್ಯ ನಡೆಸುವುದು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.







