ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ವಾಯು ಗುಣಮಟ್ಟ ಇದೀಗ ರಾಜ್ಯದ ಹಲವು ಭಾಗಗಳಲ್ಲಿ ಮತ್ತೆ ಆತಂಕಕಾರಿ ಸ್ಥಿತಿಗೆ ತಲುಪಿದೆ. ಬೆಂಗಳೂರು ಮಾತ್ರವಲ್ಲದೆ ಉಡುಪಿ, ಮಂಗಳೂರು, ಕಲಬುರ್ಗಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ (AQI) 150ರ ಗಡಿ ಮೀರಿ ಆರೋಗ್ಯಕ್ಕೆ ಹಾನಿಕಾರಕ ಮಟ್ಟದಲ್ಲಿ ದಾಖಲಾಗುತ್ತಿದೆ.
ಕಲಬುರ್ಗಿಯಲ್ಲಿ AQI 195ಕ್ಕೆ ಏರಿಕೆಯಾಗಿದ್ದು, 200ರ ಗಡಿ ತಲುಪುವ ಭೀತಿ ಎದುರಾಗಿದೆ. ಬೆಂಗಳೂರುದಲ್ಲಿಯೂ ವಾಯು ಗುಣಮಟ್ಟ ಇನ್ನೂ ಸುರಕ್ಷಿತ ಮಟ್ಟಕ್ಕಿಂತ ದೂರವಿದ್ದು, ಜನಾರೋಗ್ಯದ ಮೇಲೆ ಪರಿಣಾಮ ಬೀರುವ ಸ್ಥಿತಿಯಲ್ಲೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸ್ವಲ್ಪ ಏರುಪೇರು ಕಂಡರೂ, ವಿಶ್ವ ಆರೋಗ್ಯ ಸಂಸ್ಥೆ (WHO) ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿ ಇನ್ನೂ ಅಪಾಯಕಾರಿ ಎಂಬುದು ತಜ್ಞರ ಅಭಿಪ್ರಾಯ.

ಇದೀಗ ಉಡುಪಿ ನಗರದಲ್ಲಿನ ವಾಯು ಗುಣಮಟ್ಟವು ವಿಶೇಷವಾಗಿ ಕಳವಳಕಾರಿ ಹಂತ ತಲುಪಿದೆ. ನಿಗದಿತ 0-100 ಮಟ್ಟವನ್ನು ಮೀರಿದ AQI 160ರಿಂದ 180ರ ನಡುವೆ ದಾಖಲಾಗುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ‘ಪರಿಸರ ಸಂಗಮ’ ಸಂಘಟನೆ ರಾಜ್ಯದ ಹಲವು ಗಣ್ಯರ ಸಹಿಯೊಂದಿಗೆ ಇತ್ತೀಚಗೆ ಉಡುಪಿ ನಗರಸಭಾ ಆಯುಕ್ತರಿಗೆ ಪತ್ರ ಬರೆದು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದೆ.
ಪರಿಸರ ಸಂರಕ್ಷಣೆ, ಹವಾಮಾನ ಬದಲಾವಣೆ ನಿಯಂತ್ರಣ ಹಾಗೂ ಜೀವ ವೈವಿಧ್ಯತೆ ಉಳಿವಿಗಾಗಿ ಹೋರಾಟ ಮಾಡುತ್ತಿರುವ ‘ಪರಿಸರ ಸಂಗಮ’ ಸಂಘಟನೆ, ಉಡುಪಿ ನಗರದ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣಗಳನ್ನು ಸ್ಪಷ್ಟಪಡಿಸಿದೆ. ಗಾಳಿಯಲ್ಲಿ ಪಿಎಂ 2.5 ಮತ್ತು ಪಿಎಂ 10 ಕಣಗಳ ಪ್ರಮಾಣ ಹೆಚ್ಚಿರುವುದರ ಜೊತೆಗೆ ಕಾರ್ಬನ್ ಮೋನೋಕ್ಸೈಡ್ (348 ಪಿಪಿಬಿ), ಸಲ್ಫರ್ ಡೈಆಕ್ಸೈಡ್ (2 ಪಿಪಿಬಿ), ನೈಟ್ರೋಜನ್ ಡೈಆಕ್ಸೈಡ್ (8 ಪಿಪಿಬಿ) ಮತ್ತು ಓಜೋನ್ (26 ಪಿಪಿಬಿ) ಮಟ್ಟಗಳು ಸಹ ಹೆಚ್ಚಾಗಿರುವುದೇ ಮಾಲಿನ್ಯದ ಮೂಲ ಕಾರಣಗಳಾಗಿವೆ ಎಂದು ತಿಳಿಸಿದೆ.

ಇದಲ್ಲದೆ, 2.5 ಮೈಕ್ರೋನ್‌ಗಿಂತ ಕಡಿಮೆ ವ್ಯಾಸದ ಪಿಎಂ 2.5 ಕಣಗಳು ಗಾಳಿಯಲ್ಲಿ ಹೆಚ್ಚಿರುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಹೆಚ್ಚಿಸಿದೆ. ವಿಶೇಷವಾಗಿ ವೃದ್ಧರು, ಮಕ್ಕಳಂತಹ ಅಶಕ್ತ ವರ್ಗದವರು ಹಾಗೂ ಶ್ವಾಸಕೋಶ ಸಂಬಂಧಿತ ಸಮಸ್ಯೆ ಇರುವವರು ಹೆಚ್ಚಿನ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ನಗರ ನಿವಾಸಿಗಳು ಕನಿಷ್ಠ ಎನ್ 95 ಮಾಸ್ಕ್‌ಗಳನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘಟನೆ ತನ್ನ ಮಾರ್ಚ್ 25ರ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದೆ.
ವಾಯು ಮಾಲಿನ್ಯ ಸಮಸ್ಯೆ ಇದೀಗ ಜನರ ಮೂಲಭೂತ ಹಕ್ಕುಗಳಿಗೂ ಧಕ್ಕೆಯಾಗಿ ಪರಿಣಮಿಸಿದೆ. ಶುದ್ಧ ಮತ್ತು ಸುರಕ್ಷಿತ ಪರಿಸರದಲ್ಲಿ ಬದುಕುವ ಹಕ್ಕು ನಾಗರಿಕರಿಗೆ ಇರುವುದರಿಂದ, ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ನಗರಸಭೆ ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಮುಂದಿನ 2026-27ನೇ ಸಾಲಿನ ಬಜೆಟ್‌ನಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಆದ್ಯತೆ ನೀಡಬೇಕೆಂದು ಸೂಚಿಸಿರುವ ‘ಪರಿಸರ ಸಂಗಮ’, ನಗರದಲ್ಲಿನ ಖಾಲಿ ಜಾಗಗಳಲ್ಲಿ ಹಸಿರು ವಲಯಗಳನ್ನು ಅಭಿವೃದ್ಧಿಪಡಿಸುವುದು, ಗಿಡಮರಗಳನ್ನು- ವಿಶೇಷವಾಗಿ ಬಿದಿರು ಗಿಡಗಳನ್ನು ನೆಡುವ ಮೂಲಕ ಪರಿಸರ ಸಮತೋಲನ ಸಾಧಿಸುವಂತೆ ಸಲಹೆ ನೀಡಿದೆ.
‘ಹವಾಮಾನ ಬದಲಾವಣೆ ಮತ್ತು ತುರ್ತು ಪರಿಸರ ಕ್ರಿಯೆ’ ಅಂಶಗಳನ್ನು ಪಾಲಿಸಿ, ಉಡುಪಿ ನಗರಸಭೆ ಉತ್ತಮ ನಗರವಾಗಿ ತನ್ನ ಹಿರಿಮೆಯನ್ನು ಉಳಿಸಿಕೊಳ್ಳಬೇಕು ಎಂಬ ಆಶಯವನ್ನು ಸಂಘಟನೆ ವ್ಯಕ್ತಪಡಿಸಿದೆ.
ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಪರಿಸರವಾದಿ ಪ್ರೇಮಾನಂದ ಕಲ್ಮಾಡಿ ಅವರು, “ಉಡುಪಿ ಎಂದಾಕ್ಷಣ ದೇವಾಲಯಗಳು ಮತ್ತು ಬೀಚ್‌ಗಳು ನೆನಪಿಗೆ ಬರುತ್ತವೆ. ಆದರೆ ಕಳೆದ ಎರಡು–ಮೂರು ವರ್ಷಗಳಿಂದ ಇಲ್ಲಿನ ವಾಯು ಗುಣಮಟ್ಟ ಬಹಳ ಕಳಪೆಯಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರದ ಮಾನದಂಡಗಳ ಪ್ರಕಾರ 0–50 ಉತ್ತಮ, 50–100 ಮಧ್ಯಮ (ಮಾಡರೇಟ್), 100–200 ಕಳಪೆ ಗುಣಮಟ್ಟವೆಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಉಡುಪಿ ನಗರದ ವಾಯುಗುಣಮಟ್ಟವು 160–180 ದಾಖಲಾಗುತ್ತಿದೆ ಹಾಗಾಗಿ ಉಡುಪಿ ನಗರಸಭೆ ಮತ್ತು ಜಿಲ್ಲಾಡಳಿತವು ತಕ್ಷಣ ಗಮನಹರಿಸಬೇಕು ಎಂದು ಅವರು ಒತ್ತಾಯಿಸಿದರು.
ನಗರದಲ್ಲಿ ಕಾರ್ಬನ್ ಮೋನಾಕ್ಸೈಡ್, ನೈಟ್ರೋಜನ್ ಹಾಗೂ ಸಲ್ಫರ್ ಮಾಲಿನ್ಯ ಅಂಶಗಳು ಹೆಚ್ಚುತ್ತಿರುವುದು ಗಮನಕ್ಕೆ ಬರುತ್ತಿದೆ. ವಿಶೇಷವಾಗಿ ಪಡುಬಿದ್ರಿಯ ವಿದ್ಯುತ್ ಘಟಕದಿಂದ ಸಲ್ಫರ್ ಡೈಆಕ್ಸೈಡ್ ಉತ್ಸರ್ಗವಾಗುವ ಸಾಧ್ಯತೆಯಿದೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಈ ಬಗ್ಗೆ ಕಂಪನಿ ಆರಂಭದ ಹಂತದಲ್ಲಿಯೇ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದರು ಎಂದು ಅವರು ಹೇಳಿದರು.
ಇಲ್ಲಿನ ಹೆಚ್ಚಿನ ತೇವಾಂಶದ ಕಾರಣದಿಂದ ಅಶುದ್ಧ ಗಾಳಿ ತಕ್ಷಣ ವಿಸರ್ಜನೆಯಾಗದೆ ಉಳಿಯುವುದು ಹಾಗೂ ಆಮ್ಲಜನಕದ ಕೊರತೆ ಉಂಟಾಗಿರುವುದೂ ವಾಯು ಗುಣಮಟ್ಟ ಹದಗೆಡುವುದಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಇದನ್ನು ಸುಧಾರಿಸಲು ಇತ್ತೀಚೆಗೆ ನಡೆದ 2026–27ರ ನಗರಸಭೆ ಬಜೆಟ್ ಪೂರ್ವ ಸಭೆಯಲ್ಲಿ ಭಾಗವಹಿಸಿ, ನಗರಸಭೆಯ ವಶದಲ್ಲಿರುವ ಖಾಲಿ ಭೂಮಿಯನ್ನು ಬೇರೆ ಉದ್ದೇಶಗಳಿಗೆ ಬಳಸದೆ ಹಸಿರು ವಲಯವಾಗಿ ಅಭಿವೃದ್ಧಿಪಡಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು.
ಬಿದಿರು ಗಿಡಗಳು ವೇಗವಾಗಿ ಬೆಳೆಯುವವುಗಳಾಗಿದ್ದು, ಇತರ ಮರಗಳಿಗಿಂತ ಸುಮಾರು 35% ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತವೆ. ಮೂರೇ ವರ್ಷಗಳಲ್ಲಿ ಕಟಾವಿಗೆ ಸಿದ್ಧವಾಗುವ ಕಾರಣ, ತಕ್ಷಣದ ಮಟ್ಟದಲ್ಲಿ ಅವುಗಳನ್ನು ನೆಡುವ ಮೂಲಕ ವಾಯು ಗುಣಮಟ್ಟವನ್ನು ಸುಧಾರಿಸಬಹುದು ಎಂದು ಅವರು ಸಲಹೆ ನೀಡಿದರು.
ಇದನ್ನೂ ಓದಿ: ಉಡುಪಿ | ಜಿಲ್ಲೆಯಾದ್ಯಂತ ವೈಭವದ ಈಸ್ಟರ್ ಜಾಗರಣೆ
ಈ ದಿಸೆಯಲ್ಲಿ ನಗರಸಭೆ ತುರ್ತಾಗಿ ಬಜೆಟ್ ಮೀಸಲಿಡಬೇಕು. ಇಲ್ಲವಾದರೆ ಭವಿಷ್ಯದಲ್ಲಿ ಜನರು ಮಾಸ್ಕ್ ಧರಿಸಿ ಸಂಚರಿಸುವ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ನಗರಸಭೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಒಟ್ಟಿನಲ್ಲಿ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಹದಗೆಡುತ್ತಿರುವುದು ಭವಿಷ್ಯದಲ್ಲಿ ಗಂಭೀರ ಪರಿಸರ ಮತ್ತು ಆರೋಗ್ಯ ಸಮಸ್ಯೆಗಳ ಸೂಚಕವಾಗಿದ್ದು, ತಕ್ಷಣದ ಸಮಗ್ರ ಕ್ರಮಗಳ ಅಗತ್ಯತೆಯನ್ನು ಈ ಬೆಳವಣಿಗೆ ಮತ್ತೊಮ್ಮೆ ನೆನಪಿಸಿದೆ. ಪರಿಸರ ಈ ಮಟ್ಟಿಗೆ ಹದಗೆಟ್ಟು ನಾಶವಾಗುತ್ತಿರುವುದು ಮಾನವನ ಅತಿಯಾದ ಹಸ್ತಕ್ಷೇಪದಿಂದಲೇ ಎನ್ನುವುದು ತಿಳಿಯದ ಸಂಗತಿಯಲ್ಲ. ತಾನೇ ನಾಶ ಮಾಡುತ್ತಿರುವ ಪ್ರಕೃತಿಯನ್ನು ಮಾನವ ಮುಂದಿನ ಪೀಳಿಗೆಗಾದರೂ ತಾನೇ ಮರು ನಿರ್ಮಿಸಬೇಕಿದೆ. ಇಲ್ಲದಿದ್ದರೆ ನಮ್ಮನ್ನೂ ಸೇರಿ ಮುಂದಿನ ತಲೆಮಾರುಗಳು ಧೂಳು, ಹೊಗೆಗಳಿಂದ ತುಂಬಿದ ಗಾಳಿಯನ್ನೇ ಉಸಿರಾಡಬೇಕಾದೀತು.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




