ಉಡುಪಿಯ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್‌ಗೆ ಸಂಬಂಧಿಸಿದ ಬಹುಕೋಟಿ ಅವ್ಯವಹಾರದ ಆರೋಪಗಳು, ಶಾಖಾ ವ್ಯವಸ್ಥಾಪಕರ ಸಾವಿನ ಪ್ರಕರಣ ಹಾಗೂ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರ ಪಾತ್ರದ ಕುರಿತು ಕೇಳಿಬಂದಿರುವ ಪ್ರಶ್ನೆಗಳ ಬಗ್ಗೆ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಎಸ್‌ಐಟಿ ತನಿಖೆಗೆ ಆಗ್ರಹಿಸಿರುವುದನ್ನು ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಅಸಿಫ್ ಕೋಟೇಶ್ವರ ಸ್ವಾಗತಿಸಿದ್ದಾರೆ.
ಆದರೆ ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಪ್ರಶ್ನೆಯೊಂದನ್ನು ಅವರು ಮುಂದಿಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದ ಮಹಾಲಕ್ಷ್ಮೀ ಬ್ಯಾಂಕ್‌ಗೆ ಸಂಬಂಧಿಸಿದಂತೆ ಆರೋಪಗಳು ಮತ್ತು ದೂರುಗಳು ಸಾರ್ವಜನಿಕವಾಗಿ ಕೇಳಿಬರುತ್ತಿದ್ದರೂ, ಇಷ್ಟೊಂದು ಸಮಯ ಕಾಂಗ್ರೆಸ್ ಸರ್ಕಾರ ಸೂಕ್ತ ಹಾಗೂ ಪರಿಣಾಮಕಾರಿ ತನಿಖಾ ಕ್ರಮ ಕೈಗೊಳ್ಳದೆ ಇರುವುದಕ್ಕೆ ಕಾರಣವೇನು?
2024ರಲ್ಲಿಯೇ ಮಹಾಲಕ್ಷ್ಮೀ ಬ್ಯಾಂಕ್‌ನ ಅವ್ಯವಹಾರದ ಆರೋಪಗಳು ಸಾರ್ವಜನಿಕವಾಗಿ ಚರ್ಚೆಗೆ ಬಂದಿದ್ದವು ಮತ್ತು ಎಸ್‌ಐಟಿ ತನಿಖೆಗೆ ಆಗ್ರಹವೂ ಕೇಳಿಬಂದಿತ್ತು. ಬ್ಯಾಂಕ್ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಯಾವುದೇ ತನಿಖೆಯನ್ನು ಎದುರಿಸಲು ಬ್ಯಾಂಕ್ ಸಿದ್ಧವಿದೆ ಎಂದು ಹೇಳಿದ್ದರು.
ಹೀಗಿರುವಾಗ, ಆರೋಪಗಳು ಕೇಳಿಬಂದು ಸುಮಾರು ಎರಡು ವರ್ಷಗಳಾದರೂ ಕಾಂಗ್ರೆಸ್ ಸರ್ಕಾರ ಏಕೆ ನಿರ್ಣಾಯಕ ತನಿಖೆಗೆ ಮುಂದಾಗಿಲ್ಲ? ಈಗ ಅದೇ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಸದನದಲ್ಲಿ ಎಸ್‌ಐಟಿ ತನಿಖೆಗೆ ಒತ್ತಾಯಿಸುವ ಪರಿಸ್ಥಿತಿ ಏಕೆ ನಿರ್ಮಾಣವಾಯಿತು? ಸರ್ಕಾರದ ಬಳಿ ಇಷ್ಟು ದಿನ ಕ್ರಮ ಕೈಗೊಳ್ಳದಿರುವುದಕ್ಕೆ ಯಾವುದೇ ಸಮರ್ಥ ಕಾರಣವಿದೆಯೇ? ಎಂಬುದನ್ನು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರು ಜನರಿಗೆ ಸ್ಪಷ್ಟಪಡಿಸಬೇಕು.
ಯಶ್‌ಪಾಲ್ ಸುವರ್ಣ ಅವರು ಮಹಾಲಕ್ಷ್ಮೀ ಬ್ಯಾಂಕ್‌ನ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ, ಅವರ ವಿರುದ್ಧ ಕೇಳಿಬಂದಿರುವ ಆರೋಪಗಳ ಸತ್ಯಾಸತ್ಯತೆಯನ್ನು ಸ್ವತಂತ್ರ ತನಿಖೆಯ ಮೂಲಕ ಪರಿಶೀಲಿಸುವುದು ಅತ್ಯಂತ ಅಗತ್ಯವಾಗಿದೆ. ಇದು ರಾಜಕೀಯ ಪ್ರತೀಕಾರದ ಪ್ರಶ್ನೆಯಲ್ಲ; ಸಾರ್ವಜನಿಕರ ಹಣ, ಬ್ಯಾಂಕ್ ಗ್ರಾಹಕರ ಹಿತಾಸಕ್ತಿ ಮತ್ತು ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸದ ಪ್ರಶ್ನೆಯಾಗಿದೆ.
ಆರೋಪಗಳು ಆಧಾರರಹಿತವಾಗಿದ್ದರೆ ತನಿಖೆಯ ಮೂಲಕ ಅದನ್ನು ಸ್ಪಷ್ಟಪಡಿಸಲಿ. ಆರೋಪಗಳಲ್ಲಿ ಸತ್ಯಾಂಶವಿದ್ದರೆ ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳಲಿ. ಆದರೆ ತನಿಖೆಯನ್ನೇ ನಡೆಸದೆ ಆರೋಪಗಳನ್ನು ನಿರ್ಲಕ್ಷಿಸುವುದು ಸಂತ್ರಸ್ತರಿಗೆ ನ್ಯಾಯ ಒದಗಿಸುವ ಮಾರ್ಗವಲ್ಲ.
ಕಾಂಗ್ರೆಸ್ ಸರ್ಕಾರಕ್ಕೆ ನಿಜವಾಗಿಯೂ ಪಾರದರ್ಶಕತೆ ಮತ್ತು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆಯ ನಿಲುವು ಇದ್ದರೆ, ಬಿ.ಕೆ. ಹರಿಪ್ರಸಾದ್ ಅವರೇ ಸದನದಲ್ಲಿ ಮುಂದಿಟ್ಟಿರುವ ಎಸ್‌ಐಟಿ ತನಿಖೆಯ ಬೇಡಿಕೆಯನ್ನು ತಕ್ಷಣ ಅಂಗೀಕರಿಸಬೇಕು.
ಮಹಾಲಕ್ಷ್ಮೀ ಬ್ಯಾಂಕ್‌ನ ಹಣಕಾಸು ವ್ಯವಹಾರಗಳು, ಸಾಲ ಮಂಜೂರಾತಿಗಳು, ಗ್ರಾಹಕರ ದೂರುಗಳು, ಆಡಳಿತ ಮಂಡಳಿಯ ನಿರ್ಧಾರಗಳು, ಶಾಖಾ ವ್ಯವಸ್ಥಾಪಕರ ಸಾವಿನ ಪ್ರಕರಣ ಹಾಗೂ ಶಾಸಕ ಯಶ್‌ಪಾಲ್ ಸುವರ್ಣ ಅವರ ಆಡಳಿತಾತ್ಮಕ ಪಾತ್ರ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಯೊಂದು ಆಯಾಮವನ್ನು ಎಸ್‌ಐಟಿ ತನಿಖೆಗೆ ಒಳಪಡಿಸಬೇಕು.
“ಎರಡು ವರ್ಷಗಳಿಂದ ಆರೋಪಗಳು ಕೇಳಿಬರುತ್ತಿದ್ದಾಗ ಸರ್ಕಾರ ಮೌನವಾಗಿದ್ದು ಏಕೆ? ಈಗ ಸದನದಲ್ಲೇ ಎಸ್‌ಐಟಿ ತನಿಖೆಯ ಬೇಡಿಕೆ ಕೇಳಿಬಂದಿರುವಾಗಲೂ ಸರ್ಕಾರ ವಿಳಂಬ ಮಾಡಿದರೆ, ಈ ವಿಳಂಬದ ಹಿಂದೆ ಯಾರ ಒತ್ತಡವಿದೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಸರ್ಕಾರ ಕೂಡಲೇ ತನಿಖೆಗೆ ಆದೇಶಿಸಿ ತನ್ನ ನಿಷ್ಪಕ್ಷಪಾತತೆಯನ್ನು ಸಾಬೀತುಪಡಿಸಲಿ” ಎಂದು ಅಸಿಫ್ ಕೋಟೇಶ್ವರ ಆಗ್ರಹಿಸಿದ್ದಾರೆ.





