ಸುಮಾರು 2,000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಒಂದು ಸಮರ್ಪಕ ಬಸ್ ನಿಲ್ದಾಣವೂ ಇಲ್ಲದಿರುವುದು ಗ್ರಾಮದ ನೈಜ ಚಿತ್ರಣವನ್ನು ತೆರೆದಿಡುತ್ತಿದೆ. ಮಳೆಗಾಲದಲ್ಲಿ ಬಸ್‌ಗಾಗಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಮರದ ಬುಡದಲ್ಲಿ ಅಥವಾ ರಸ್ತೆಯ ಬದಿಯಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ನ್ಯಾಸರ್ಗಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಗ್ರಾಮಸ್ಥರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ರಾಮದಲ್ಲಿ ಸಮರ್ಪಕ ಗಟಾರು ವ್ಯವಸ್ಥೆ ಇಲ್ಲದ ಕಾರಣ ಚರಂಡಿ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯಲ್ಲೇ ನಿಂತುಕೊಳ್ಳುತ್ತಿದೆ. ಇದರಿಂದ ದುರ್ವಾಸನೆ ಹಾಗೂ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಮನೆಗಳ ಮುಂಭಾಗದಲ್ಲಿಯೇ ಕೊಳಚೆ ನೀರು ನಿಲ್ಲುತ್ತಿರುವುದರಿಂದ ವಿವಿಧ ರೋಗಗಳು ಹರಡುವ ಆತಂಕ ಗ್ರಾಮಸ್ಥರಲ್ಲಿ ಮೂಡಿದೆ.
ಶಾಲೆ ಪಕ್ಕದಲ್ಲೇ ಅಪಾಯಕಾರಿ ಕಾಲುವೆ
ಗ್ರಾಮದಲ್ಲಿರುವ ಶಾಲೆಯ ಪಕ್ಕದಲ್ಲೇ ಸುಮಾರು 30 ಅಡಿ ಆಳದ ದೊಡ್ಡ ಕಾಲುವೆಯಿದ್ದು, ಅದಕ್ಕೆ ಸಮರ್ಪಕ ತಡೆಗೋಡೆ ಅಥವಾ ಯಾವುದೇ ಸುರಕ್ಷತಾ ವ್ಯವಸ್ಥೆ ಇಲ್ಲದಿರುವುದು ಮತ್ತೊಂದು ಗಂಭೀರ ಸಮಸ್ಯೆಯಾಗಿದೆ.
ಶಾಲೆಗೆ ತೆರಳುವ ಮಕ್ಕಳು ಪ್ರತಿನಿತ್ಯ ಈ ಅಪಾಯಕಾರಿ ಸ್ಥಳದ ಪಕ್ಕದಲ್ಲೇ ಸಂಚರಿಸುತ್ತಿದ್ದಾರೆ. ಕೆಲ ಮಕ್ಕಳು ಕಾಲುವೆಯ ಅಪಾಯದ ಅರಿವಿಲ್ಲದೆ ಅದರ ಸಮೀಪವೇ ನಿಂತು ಆಟವಾಡುತ್ತಿದ್ದು, ಸಣ್ಣ ಕಲ್ಲುಗಳನ್ನು ಕಾಲುವೆಗೆ ಎಸೆಯುತ್ತಿರುವುದು ಕಂಡುಬರುತ್ತಿದೆ. ಈ ಸಂದರ್ಭದಲ್ಲಿ ಆಯತಪ್ಪಿ ಯಾರಾದರೂ ಕಾಲುವೆಗೆ ಬಿದ್ದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಲುವೆ ರಸ್ತೆಯ ಪಕ್ಕದಲ್ಲೇ ಇರುವುದರಿಂದ ಒಂದೇ ಸಮಯದಲ್ಲಿ ಎರಡು ವಾಹನಗಳು ಎದುರಾದಾಗ, ಹೊಸದಾಗಿ ಗ್ರಾಮಕ್ಕೆ ಬರುವ ವಾಹನ ಸವಾರರಿಗೆ ಕಾಲುವೆಯ ಬಗ್ಗೆ ಮಾಹಿತಿ ಇಲ್ಲದಿದ್ದರೆ, ವಾಹನವನ್ನು ಪಕ್ಕಕ್ಕೆ ಇಳಿಸುವ ಸಂದರ್ಭದಲ್ಲಿ ಕಾಲುವೆಯೊಳಗೆ ಬೀಳುವ ಅಪಾಯವೂ ಇದೆ.
ಶಾಲೆಯ ಸಮೀಪದಲ್ಲಿಯೇ ಇಂತಹ ಅಪಾಯಕಾರಿ ಪರಿಸ್ಥಿತಿ ಇರುವುದರಿಂದ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಆತಂಕಗೊಂಡಿದ್ದಾರೆ. ಇದೇ ಪ್ರದೇಶದ ಸಮೀಪ ಅಂಗನವಾಡಿಯೂ ಇದ್ದು, ಅಲ್ಲಿಯೂ ಮೂಲಭೂತ ಸೌಕರ್ಯಗಳ ಕೊರತೆ ಕಂಡುಬರುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸಮರ್ಪಕವಾಗಿಲ್ಲ ಬಸ್ ವ್ಯವಸ್ಥೆ
ಗ್ರಾಮಸ್ಥರು ಎದುರಿಸುತ್ತಿರುವ ಮತ್ತೊಂದು ಪ್ರಮುಖ ಸಮಸ್ಯೆ ಸಾರಿಗೆ ವ್ಯವಸ್ಥೆ. ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಸಮರ್ಪಕ ಬಸ್ ಸೌಲಭ್ಯವಿಲ್ಲದೆ, ಕೇವಲ ಒಂದೇ ಬಸ್ ಸಂಚರಿಸುತ್ತಿದೆ ಎನ್ನಲಾಗಿದೆ.
ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ತೆರಳಬೇಕಾದರೆ ಸ್ವಂತ ವಾಹನ ಅಥವಾ ಕಾಲ್ನಡಿಗೆಯನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಸುಮಾರು 2,000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಒಂದು ಸಮರ್ಪಕ ಬಸ್ ನಿಲ್ದಾಣವೂ ಇಲ್ಲದಿರುವುದು ಗ್ರಾಮದ ನೈಜ ಚಿತ್ರಣವನ್ನು ತೆರೆದಿಡುತ್ತಿದೆ. ಮಳೆಗಾಲದಲ್ಲಿ ಬಸ್‌ಗಾಗಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಮರದ ಬುಡದಲ್ಲಿ ಅಥವಾ ರಸ್ತೆಯ ಬದಿಯಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮಕ್ಕೆ ನಾಮಫಲಕವೂ ಇಲ್ಲ
ಗ್ರಾಮದ ಮತ್ತೊಂದು ಸಮಸ್ಯೆಯೆಂದರೆ ನ್ಯಾಸರ್ಗಿ ಗ್ರಾಮಕ್ಕೆ ಸಮರ್ಪಕ ನಾಮಫಲಕ ಇಲ್ಲದಿರುವುದು. ಹೊಸದಾಗಿ ಗ್ರಾಮಕ್ಕೆ ಬರುವವರು ರಸ್ತೆಯಲ್ಲಿ ಸಂಚರಿಸುವವರನ್ನು ಊರಿನ ಹೆಸರು ಕೇಳಬೇಕಾದ ಪರಿಸ್ಥಿತಿ ಇದೆ.
ಗ್ರಾಮವು ಪಕ್ಕದ ಹಾವೇರಿ ಜಿಲ್ಲೆಯ ಗಡಿಭಾಗದಲ್ಲಿರುವುದರಿಂದ ದಿನನಿತ್ಯ ಹೆಚ್ಚಿನ ವಾಹನಗಳ ಓಡಾಟವಿರುತ್ತದೆ. ಸೂಕ್ತ ನಾಮಫಲಕ ಇಲ್ಲದ ಕಾರಣ ವಾಹನ ಸವಾರರೂ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಶಿಥಿಲಾವಸ್ಥೆಯಲ್ಲಿರುವ ಯುವಕರ ಭವನ, ಮಾರಿಕಾಂಬಾ ದೇವಸ್ಥಾನ
ಗ್ರಾಮದಲ್ಲಿರುವ ಯುವಕರ ಸಂಘದ ಸಭಾಭವನವೂ ಸಂಪೂರ್ಣವಾಗಿ ಹಾಳಾಗಿದ್ದು, ಅದನ್ನು ದುರಸ್ತಿ ಮಾಡಿ ಗ್ರಾಮಸ್ಥರು ಹಾಗೂ ಯುವಕರ ಬಳಕೆಗೆ ಅನುಕೂಲವಾಗುವಂತೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದೇ ರೀತಿ ಗ್ರಾಮದ ಹಳೆಯ ಮಾರಿಕಾಂಬಾ ದೇವಸ್ಥಾನವೂ ಶಿಥಿಲಾವಸ್ಥೆಯಲ್ಲಿದೆ. ಕಟ್ಟಡದೊಳಗೆ ಹೆಗ್ಗಣ, ಹಾವು ಸೇರಿದಂತೆ ವಿಷಕಾರಿ ಜೀವಿಗಳು ಸೇರಿಕೊಳ್ಳುತ್ತಿರುವ ಪರಿಸ್ಥಿತಿ ಇದ್ದು, ಹಳೆಯ ಕಟ್ಟಡವನ್ನು ತೆರವುಗೊಳಿಸಿ ಗ್ರಾಮದೇವಿಯ ಪಾದಗಟ್ಟೆ ನಿರ್ಮಿಸಿಕೊಡಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.
ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸದ ಅಧಿಕಾರಿಗಳು
ಈ ಎಲ್ಲ ಸಮಸ್ಯೆಗಳ ಕುರಿತು ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಇದುವರೆಗೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಸಾಂಕ್ರಾಮಿಕ ರೋಗಗಳು ಹರಡಿದ ಸಂದರ್ಭದಲ್ಲಿ ಗ್ರಾಮಸ್ಥರು ಸಾಕಷ್ಟು ಸಂಕಷ್ಟ ಅನುಭವಿಸಿದ್ದರು. ಆಸ್ಪತ್ರೆಗಳಲ್ಲಿ ಒಂದೇ ಹಾಸಿಗೆಯಲ್ಲಿ ಇಬ್ಬರು-ಮೂರು ಮಂದಿ ಚಿಕಿತ್ಸೆ ಪಡೆಯುವಂತಹ ಪರಿಸ್ಥಿತಿಯನ್ನು ಎದುರಿಸಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇದೀಗ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡದಿದ್ದರೆ ಮತ್ತೆ ರೋಗರುಜಿನಗಳು ಹರಡುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ, ಗಟಾರು ವ್ಯವಸ್ಥೆ, ಕಾಲುವೆಗೆ ತಡೆಗೋಡೆ, ಶಾಲೆ ಹಾಗೂ ಅಂಗನವಾಡಿ ಸುತ್ತಮುತ್ತ ಸುರಕ್ಷತಾ ಕ್ರಮಗಳು, ಸಮರ್ಪಕ ಬಸ್ ವ್ಯವಸ್ಥೆ, ಯುವಕರ ಭವನ ಹಾಗೂ ಮಾರಿಕಾಂಬಾ ದೇವಸ್ಥಾನದ ದುರಸ್ತಿ ಸೇರಿದಂತೆ ಗ್ರಾಮದ ಮೂಲಭೂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರೆಯದಿದ್ದಲ್ಲಿ ಗ್ರಾಮ ಪಂಚಾಯಿತಿ ಎದುರು ಧರಣಿ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.



