ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಆಂಧ್ರಪ್ರದೇಶದ ಯುವಕನೊಬ್ಬ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಮೂಲತಃ ಆಂಧ್ರಪ್ರದೇಶ ರಾಜ್ಯದ ನೆಲ್ಲೂರು ಜಿಲ್ಲೆಯ ಕೊತ್ತಬಂಗಾರಿಪಾಲಂ ನಿವಾಸಿಯಾಗಿರುವ ವಯಾಲ್ ರವಿ ಕುಮಾರ್ (21) ಮೇ 20ರಂದು ಮಂಗಳೂರು ಬಂದರಿನಿಂದ ಮೀನುಗಾರಿಕಾ ಬೋಟ್‌ನಲ್ಲಿ ಸಮುದ್ರಕ್ಕೆ ತೆರಳಿದ್ದರು. ಮೇ 25ರಂದು ಬೋಟ್ ಗಂಗೊಳ್ಳಿ ಬಂದರಿನತ್ತ ಬರುತ್ತಿದ್ದ ವೇಳೆ ವಿಪರೀತ ಗಾಳಿ ಬೀಸಿದ ಪರಿಣಾಮ ರಾತ್ರಿ ಸುಮಾರು 10.30ಕ್ಕೆ ಅವರು ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ.

ಬೋಟ್‌ನಲ್ಲಿದ್ದ ಇತರೆ ಮೀನುಗಾರರು ತಕ್ಷಣ ಹುಡುಕಾಟ ನಡೆಸಿದರೂ ಯುವಕನ ಸುಳಿವು ಪತ್ತೆಯಾಗಿಲ್ಲ. ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ನಾಪತ್ತೆಯಾದ ರವಿ ಕುಮಾರ್ ಸುಮಾರು 165 ಸೆಂ.ಮೀ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ತೆಲುಗು ಭಾಷೆ ಮಾತನಾಡುತ್ತಾರೆ.
ಸದರಿ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆ (08254-265333 / 9480805457), ಬೈಂದೂರು ವೃತ್ತ ನಿರೀಕ್ಷಕರ ಕಚೇರಿ (08254-251031 / 9480805434) ಅಥವಾ ಪೊಲೀಸ್ ಕಂಟ್ರೋಲ್ ರೂಂ 112 (08254-232338) ಸಂಪರ್ಕಿಸುವಂತೆ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಪ್ರಕಟಣೆಯಲ್ಲಿ ಮನವಿ ಮಾಡಿದೆ.






