ಭಾರತದ ಅರುಣಾಚಲ ಪ್ರದೇಶಕ್ಕೆ ಅಂಟಿಕೊಂಡಿರುವ ಟಿಬೆಟಿಯನ್ ಪ್ರಾಂತ್ಯದ ಯಾರ್ಲುಂಗ್ ತ್ಸಾಂಗ್ಪೋ (ಭಾರತದಲ್ಲಿ ಬ್ರಹ್ಮಪುತ್ರ) ನದಿಯ ಕೆಳಭಾಗದಲ್ಲಿ ಚೀನಾ ಸರ್ಕಾರವು ವಿಶ್ವದ ಅತ್ಯಂತ ದೊಡ್ಡ ಜಲವಿದ್ಯುತ್ ಅಣೆಕಟ್ಟೆ ನಿರ್ಮಾಣ ಮಾಡುತ್ತಿದೆ. ಶುಕ್ರವಾರ, ನಿರ್ಮಾಣ ಕಾಮಗಾರಿಯನ್ನು ಅಧಿಕೃತವಾಗಿ ಆರಂಭಿಸಿದೆ. ಅರುಣಾಚಲ ಪ್ರದೇಶದ ಗಡಿಯಿಂದ ಕೇವಲ 50 ಕಿ.ಮೀ. ದೂರದಲ್ಲಿ ತಲೆಯೆತ್ತುತ್ತಿರುವ ಈ ಬೃಹತ್ ಯೋಜನೆಯು ಭಾರತಕ್ಕೆ ತಾಂತ್ರಿಕ, ರಾಜತಾಂತ್ರಿಕ ಹಾಗೂ ಭೌಗೋಳಿಕವಾಗಿ ಅತ್ಯಂತ ಗಂಭೀರವಾದ ಹಿನ್ನಡೆಯನ್ನು ತಂದೊಡ್ಡಿದೆ ಎಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಚೀನಾದ ಈ ಯೋಜನೆ ಭಾರತಕ್ಕೆ ಜ್ವಲಂತ ಹಿನ್ನಡೆಯಾಗಿ ಪರಿಣಮಿಸಲು ಪ್ರಮುಖ ಕಾರಣವೆಂದರೆ ಎರಡೂ ದೇಶಗಳ ನಡುವೆ ಇರುವ ಯೋಜನಾ ಪ್ರಗತಿಯ ವೇಗ. ಚೀನಾ ಉದ್ದೇಶಿಸಿರುವ ‘ಮೆಡೋಗ್ ಜಲವಿದ್ಯುತ್ ಯೋಜನೆ’ಯು ಬರೋಬ್ಬರಿ 60,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಈಗಾಗಲೇ ಅಲ್ಲಿ ನಿರ್ಮಾಣ ಕಾರ್ಯಗಳು ಅತ್ಯಂತ ಚುರುಕಾಗಿ ಸಾಗುತ್ತಿವೆ. ಆದರೆ, ಇದಕ್ಕೆ ಪ್ರತಿಯಾಗಿ ಭಾರತವು ಸಿಯಾಂಗ್ ನದಿಗೆ ಅಡ್ಡಲಾಗಿ 11,000 ಮೆಗಾವ್ಯಾಟ್ ಸಾಮರ್ಥ್ಯದ ‘ಸಿಯಾಂಗ್ ಅಪ್ಪರ್ ಮಲ್ಟಿಪರ್ಪಸ್ ಪ್ರಾಜೆಕ್ಟ್’ (SUMP) ಅಡಿಯಲ್ಲಿ ಅಣೆಕಟ್ಟು ನಿರ್ಮಿಸಲು ಮುದಾಗಿದೆ. ಆದರೆ, ಈ ಯೋಜನೆ ಇನ್ನು ಕೂಡ ಕೇವಲ ಆರಂಭಿಕ ಹಂತದ ಪರಿಶೀಲನೆಯಲ್ಲೇ ಉಳಿದುಕೊಂಡಿದೆ. ಸುಮಾರು 1.5 ಲಕ್ಷ ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗೆ ಇನ್ನು ತಳಹದಿಯ ಕೆಲಸಗಳೇ ಆರಂಭವಾಗಿಲ್ಲ.
ನೀರಿನ ಅಸ್ತ್ರ ಮತ್ತು ಭೌಗೋಳಿಕ ಬಿಕ್ಕಟ್ಟು
ಯಾರ್ಲುಂಗ್ ತ್ಸಾಂಗ್ಪೋ ನದಿಯು ಭಾರತದ ಗಡಿಯನ್ನು ಪ್ರವೇಶಿಸುತ್ತಿದ್ದಂತೆ ‘ಸಿಯಾಂಗ್’ ನದಿಯಾಗಿ ಬದಲಾಗಿ, ಮುಂದೆ ಅಸ್ಸಾಂ ಕಣಿವೆಯಲ್ಲಿ ಜೀವಾಳವಾಗಿರುವ ‘ಬ್ರಹ್ಮಪುತ್ರ’ ನದಿಯಾಗಿ ರೂಪಾಂತರಗೊಳ್ಳುತ್ತದೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಕೋಟ್ಯಂತರ ಜನರ ಬದುಕು, ಕೃಷಿ ಮತ್ತು ಆರ್ಥಿಕತೆ ಈ ನದಿಯನ್ನೇ ನಂಬಿಕೊಂಡಿದೆ. ಗಡಿಯ ಅತ್ಯಂತ ಸಮೀಪದಲ್ಲೇ ಚೀನಾ ಇಷ್ಟು ದೊಡ್ಡ ಅಣೆಕಟ್ಟನ್ನು ನಿರ್ಮಿಸುತ್ತಿರುವುದರಿಂದ, ಕೆಳಹಂತದಲ್ಲಿರುವ ಭಾರತಕ್ಕೆ ಬರುವ ನೀರಿನ ಹರಿವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಶಕ್ತಿ ಬೇಜಿಂಗ್ ಪಾಲಾಗಲಿದೆ. ಭವಿಷ್ಯದಲ್ಲಿ ಉಭಯ ದೇಶಗಳ ನಡುವೆ ಸಂಘರ್ಷ ಉಂಟಾದಾಗ ಚೀನಾ ಇದನ್ನು ಒಂದು ‘ನೀರಿನ ಅಸ್ತ್ರ’ವನ್ನಾಗಿ ಬಳಸಿಕೊಳ್ಳುವ ಅಪಾಯವಿದೆ.
ಬೇಸಿಗೆಯ ಸಮಯದಲ್ಲಿ ನೀರನ್ನು ತಡೆಹಿಡಿದು ಭಾರತದ ಈಶಾನ್ಯ ರಾಜ್ಯಗಳಲ್ಲಿ ಕೃತಕ ಬರಗಾಲ ಸೃಷ್ಟಿಸಬಹುದು ಅಥವಾ ಮುಂಗಾರಿನ ಅವಧಿಯಲ್ಲಿ ದಿಢೀರನೆ ಅಪಾರ ಪ್ರಮಾಣದ ನೀರನ್ನು ಹರಿಬಿಟ್ಟು ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಸರಿಪಡಿಸಲಾಗದ ಮಹಾಪ್ರವಾಹದ ವಿಪತ್ತನ್ನು ಉಂಟುಮಾಡಬಹುದು.
ಪರಿಸರ ಮತ್ತು ಕೃಷಿ ವಲಯದ ಮೇಲಿನ ಗಂಭೀರ ಪರಿಣಾಮಗಳು
ಚೀನಾದ ಈ ಬೃಹತ್ ನಿರ್ಮಾಣವು ಈಶಾನ್ಯ ಭಾರತದ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಏರುಪೇರು ಮಾಡಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ನದಿಯ ನೈಸರ್ಗಿಕ ಹರಿವಿನ ಬದಲಾವಣೆಯಿಂದಾಗಿ ನದಿ ಪಾತ್ರದ ಜೈವಿಕ ವೈವಿಧ್ಯತೆ ನಾಶವಾಗಲಿದ್ದು, ನದಿ ತಟದ ಫಲವತ್ತಾದ ಮಣ್ಣಿನ ಸವಕಳಿಗೆ ಕಾರಣವಾಗುತ್ತದೆ. ಇದು ನೇರವಾಗಿ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಕೃಷಿ ವಲಯದ ಬೆನ್ನೆಲುಬನ್ನೇ ಮುರಿಯಲಿದೆ.
ಭಾರತದ ಪ್ರಸ್ತಾವಿತ ಸಿಯಾಂಗ್ (SUMP) ಯೋಜನೆಯನ್ನು ಪ್ರವಾಹ ನಿಯಂತ್ರಣ ಮತ್ತು ಚೀನಾದ ನೀರಿನ ತಿರುವು ತಂತ್ರವನ್ನು ತಡೆಯುವ ಉದ್ದೇಶದಿಂದಲೇ ವಿನ್ಯಾಸಗೊಳಿಸಲಾಗಿದ್ದರೂ, ಚೀನಾದ ಅಣೆಕಟ್ಟು ಅದಕ್ಕಿಂತ ಮೊದಲೇ ಪೂರ್ಣಗೊಂಡರೆ ಭಾರತದ ರಕ್ಷಣಾತ್ಮಕ ಹಿತಾಸಕ್ತಿಗಳಿಗೆ ತೀವ್ರ ಧಕ್ಕೆಯಾಗಲಿದೆ.
ರಾಜತಾಂತ್ರಿಕ ಅಸಹಾಯಕತೆ ಮತ್ತು ಭಾರತದ ಮುಂದಿನ ಸವಾಲು
ಈ ಗಂಭೀರ ವಿಷಯದ ಕುರಿತು ಕೇಂದ್ರ ಸರ್ಕಾರವು ಲೋಕಸಭೆಗೆ ಲಿಖಿತ ಉತ್ತರವನ್ನು ನೀಡಿದ್ದು, ಬ್ರಹ್ಮಪುತ್ರ ನದಿ ಪಾತ್ರದಲ್ಲಿ ಚೀನಾ ನಡೆಸುತ್ತಿರುವ ಪ್ರತಿಯೊಂದು ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ತಿಳಿಸಿದೆ. ಗಡಿಭಾಗದ ಜನರ ಜೀವ ಮತ್ತು ಜೀವನೋಪಾಯವನ್ನು ರಕ್ಷಿಸಲು ಅಗತ್ಯ ಮುನ್ನೆಚ್ಚರಿಕೆ ಹಾಗೂ ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದೆ.
ಈ ಲೇಖನ ಓದಿದ್ದೀರಾ?: ವಿಶ್ವದ ಪ್ರತಿ ಐವರು ನಾವಿಕರಲ್ಲೊಬ್ಬರು ಭಾರತೀಯರು: ‘ಸಾಗರ ಯೋಧ’ರ ಕಣ್ಣೀರಿನ ಕಥನ ಬಲ್ಲಿರಾ?
ಆದರೆ, ರಾಜತಾಂತ್ರಿಕ ರಂಗದಲ್ಲಿ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅಂತರರಾಷ್ಟ್ರೀಯ ನದಿ ನಿಯಮಗಳ ಅಡಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ, ನಿಖರವಾದ ಡೇಟಾ ಹಂಚಿಕೊಳ್ಳುವಂತೆ ಹಾಗೂ ಯೋಜನೆ ಆರಂಭಿಸುವ ಮುನ್ನ ಪರಸ್ಪರ ಸಮಾಲೋಚನೆ ನಡೆಸುವಂತೆ ಭಾರತವು ನಿರಂತರವಾಗಿ ಚೀನಾದ ಮೇಲೆ ಒತ್ತಡ ಹೇರುತ್ತಾ ಬಂದಿತ್ತು. ಆದರೂ, ಚೀನಾ ಇದಕ್ಕೆ ಯಾವುದೇ ಸಕಾರಾತ್ಮಕ ಸ್ಪಂದನೆ ನೀಡಿಲ್ಲ.
ಪ್ರಸ್ತುತ ಪರಿಸ್ಥಿತಿಯಲ್ಲಿ, ಭಾರತವು ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ ಮುನ್ಸೂಚನೆ ವ್ಯವಸ್ಥೆಗಳು, ನದಿ ಕಣ್ಗಾವಲು ಜಾಲಗಳು ಹಾಗೂ ಮೂಲಸೌಕರ್ಯಗಳ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು ತಾತ್ಕಾಲಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದಾಗ್ಯೂ, ಚೀನಾದ ಆಕ್ರಮಣಕಾರಿ ವೇಗದ ಎದುರು ಭಾರತವು ತನ್ನ ಬೃಹತ್ ಸಿಯಾಂಗ್ ಯೋಜನೆಯನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರದೆ ಹೋದರೆ, ಇಡೀ ಈಶಾನ್ಯ ಭಾರತದ ಜಲ ಭದ್ರತೆಯು ಚೀನಾದ ಮುಷ್ಟಿಗೆ ಸಿಲುಕುವುದು ನಿಶ್ಚಿತ ಎಂದೇ ಹೇಳಲಾಗಿದೆ.



