ರಾಜ್ಯದ ಅಭಿವೃದ್ಧಿ ಹಾಗೂ ಗ್ರಾಮೀಣ ಸ್ವರಾಜ್ಯದ ಬಲವರ್ಧನೆಗೆ ಸ್ಥಳೀಯ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಸರ್ಕಾರ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಶೀಘ್ರವಾಗಿ ನಡೆಸಬೇಕು ಎಂದು ಗ್ರಾಮ ಸ್ವರಾಜ್ಯ ಕರ್ನಾಟಕ ರಾಜ್ಯಾಧ್ಯಕ್ಷ ಸತೀಶ ಕಾಡಶೆಟ್ಟಿಹಳ್ಳಿ ಒತ್ತಾಯಿಸಿದರು.
ದಾಂಡೇಲಿಯಲ್ಲಿ ನಡೆದ ಗ್ರಾಮ ಸ್ವರಾಜ್ಯ ಕರ್ನಾಟಕ ಸಂಘಟನೆಯ ರಾಜ್ಯ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, “ರಾಜ್ಯದ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತ್, ನಗರಸಭೆ, ಪುರಸಭೆ ಹಾಗೂ ಮಹಾನಗರ ಪಾಲಿಕೆಗಳ ಪಾತ್ರ ಮಹತ್ವದ್ದಾಗಿದೆ. ಆದರೆ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆದಿಲ್ಲದೆ ಆರು ವರ್ಷಗಳು ಕಳೆದಿದ್ದು, ಗ್ರಾಮ ಪಂಚಾಯಿತಿಗಳ ಅವಧಿಯೂ ಮುಕ್ತಾಯವಾಗಿದೆ. ಹಲವು ನಗರ ಸ್ಥಳೀಯ ಸಂಸ್ಥೆಗಳ ಅವಧಿಯೂ ಕೊನೆಗೊಂಡಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ” ಎಂದು ಅವರು ಆರೋಪಿಸಿದರು.
“ಜನಪ್ರತಿನಿಧಿಗಳ ಅನುಪಸ್ಥಿತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಮಸ್ಯೆಗಳು ಹೆಚ್ಚಾಗಿದ್ದು, ಆಡಳಿತಾಧಿಕಾರಿಗಳ ಮೂಲಕ ಪರಿಣಾಮಕಾರಿ ಆಡಳಿತ ಸಾಧ್ಯವಾಗುತ್ತಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬದಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ” ಎಂದು ಆತಂಕ ವ್ಯಕ್ತಪಡಿಸಿದರು.
“ಸ್ಥಳೀಯ ಸಂಸ್ಥೆಗಳ ಚುನಾವಣೆ ಅಗತ್ಯದ ಕುರಿತು ರಾಜ್ಯಾದ್ಯಂತ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಚುನಾವಣೆಗಳನ್ನು ತ್ವರಿತವಾಗಿ ನಡೆಸುವಂತೆ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಒತ್ತಾಯಿಸಲಾಗುವುದು. ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ರಾಜ್ಯ ಸಮಿತಿಯ ಪದಾಧಿಕಾರಿಗಳಿಗೆ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು. “ರಾಜ್ಯದ ಜನಪರ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟನೆಯನ್ನು ಜಿಲ್ಲೆ, ಹೋಬಳಿ ಹಾಗೂ ಗ್ರಾಮ ಮಟ್ಟಕ್ಕೆ ವಿಸ್ತರಿಸಬೇಕು ಎಂದು” ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಎಂ. ಚಲಪತಿ ಕರೆ ಆಗ್ರಹಿಸಿದರು.
ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಆನಂದ ಹವಳಣ್ಣನವರ, ಪಂಪಯ್ಯ, ಪ್ರದೀಪ ಪಾಟೀಲ, ರಾಜ್ಯ ಮಾಧ್ಯಮ ಕಾರ್ಯದರ್ಶಿ ನಿಂಗಪ್ಪ ಆರೇರ, ಸಹ ಕಾರ್ಯದರ್ಶಿ ಚಂದ್ರಮೋಳಿ, ರಾಜ್ಯ ಖಜಾಂಚಿ ನಾಗೇಶ, ರಾಜ್ಯ ಸಮಿತಿ ಕಾರ್ಯದರ್ಶಿ ಪ್ರವೀಣ ಅರಕೇರಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.




