ಮಕ್ಕಳಲ್ಲಿ ಉತ್ತಮ ಗುಣ, ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸುವ ಕಾರ್ಯ ಕೇವಲ ಮಕ್ಕಳ ದಿನಾಚರಣೆಗೆ ಸೀಮಿತವಾಗಬಾರದು. ಪ್ರತಿದಿನವೂ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕು ಎಂದು ಬಿ.ವಿ.ವಿ.ಎಸ್. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಚಾರ್ಯ ಪ್ರವೀಣ ಗುಂಡಗಾವಿ ಹೇಳಿದರು.
ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿರುವ ಬಿ.ವಿ.ವಿ.ಎಸ್. ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಂಡಿತ ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಮಕ್ಕಳೇ ನಾಳಿನ ಸಮಾಜ ಮತ್ತು ದೇಶವನ್ನು ಮುನ್ನಡೆಸುವ ಶಕ್ತಿಯಾಗಿದ್ದಾರೆ. ಅವರಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಮಾನವೀಯತೆ, ಶಿಸ್ತು, ನೈತಿಕತೆ ಹಾಗೂ ಜೀವನ ಮೌಲ್ಯಗಳನ್ನು ಕಲಿಸುವುದು ಅತ್ಯಂತ ಮುಖ್ಯ. ದೇಶದ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ವಿದ್ಯಾರ್ಥಿಗಳಲ್ಲಿ ಅಂಕಗಳ ಸ್ಪರ್ಧೆಯೊಂದೇ ಮುಖ್ಯವಾಗದೆ, ಉತ್ತಮ ವ್ಯಕ್ತಿತ್ವ ಮತ್ತು ನಾಗರಿಕ ಪ್ರಜ್ಞೆ ಬೆಳೆಯುವಂತೆ ಶಿಕ್ಷಕರು ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಪೀಸಾ ಅಂಜುಮ್ ಮೋಮಿನ್ ಹಾಗೂ ಅಪೇಕ್ಷಾ ದೇಶಪಾಂಡೆ ಅವರು ಮಕ್ಕಳ ದಿನಾಚರಣೆಯ ಮಹತ್ವ ಮತ್ತು ಪಂಡಿತ ಜವಾಹರಲಾಲ್ ನೆಹರು ಅವರ ಜೀವನ ಹಾಗೂ ಮಕ್ಕಳ ಮೇಲಿನ ಪ್ರೀತಿಯ ಕುರಿತು ಮಾತನಾಡಿದರು.
ಉಪಪ್ರಾಚಾರ್ಯ ವಿ.ಎಸ್. ಪೋಲಿಸಗೌಡರ, ವಿದ್ಯಾರ್ಥಿ ವಿಜಯಕುಮಾರ ಗಂಗಲ್, ವಿದ್ಯಾರ್ಥಿನಿ ಅಮೃತ ಕುಂಭಾರ ವೇದಿಕೆಯಲ್ಲಿದ್ದರು.ಶೈಕ್ಷಣಿಕ ಸಾಧನೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿವಿಧ ತರಗತಿಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ‘ಸ್ಟಾರ್ ವಿದ್ಯಾರ್ಥಿ’ ಎಂದು ಗುರುತಿಸಿ ಪ್ರಮಾಣಪತ್ರ ವಿತರಿಸಲಾಯಿತು. ಅಲ್ಲದೆ, ಪ್ರತಿ ತರಗತಿಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಮಕ್ಕಳ ಸಂಭ್ರಮಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಮೆರುಗು ನೀಡಿದವು.
ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಹಾಗೂ ಸಾಮೂಹಿಕ ದೇಶಭಕ್ತಿಗೀತೆ ಗಾಯನ ಪ್ರಸ್ತುತಗೊಂಡವು. ಬಣ್ಣಬಣ್ಣದ ಹೂಗಳಿಂದ ಅಲಂಕರಿಸಿದ್ದ ಶಾಲಾ ಆವರಣದಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ ಮನೆಮಾಡಿತ್ತು.ಶಾಲೆಯ ಶಿಕ್ಷಕರು, ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.



