ಎಂಎಲ್ಎ ಹಾಗೂ ಎಂಪಿಗಳು ತಮ್ಮ ಮಕ್ಕಳನ್ನು ಮುಂದಿನ ಶಾಸಕರು, ಸಂಸದರನ್ನಾಗಿ ಮಾಡುವ ಭರದಲ್ಲಿ ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆಯೇ? ಎಂಬ ಚರ್ಚೆ ನಡೆಯಬೇಕಿದೆ ಎಂದು ಗ್ರಾಮ ಸ್ವರಾಜ್ಯ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಪ್ರದೀಪ್ ಚ. ಪಾಟೀಲ(ನಾಗರದಿನ್ನಿ) ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯಪುರದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, “20 ವರ್ಷಗಳ ಹಿಂದೆ ಶಾಸಕರಿಗೆ ಹುಟ್ಟುಹಬ್ಬದ ಶುಭಾಷಯ ಕೋರುತ್ತಿದ್ದ ಕಾರ್ಯಕರ್ತರು, ಇಂದು ಅದೇ ನಾಯಕರ ಮಕ್ಕಳು ರಾಜ್ಯಮಟ್ಟದ ನಿಗಮ–ಮಂಡಳಿಗಳಿಗೆ ನಿರ್ದೇಶಕರಾದಾಗ ಅವರಿಗೆ ಶುಭಾಷಯ ಕೋರುವ ದುಃಸ್ಥಿತಿ ನಿರ್ಮಾಣವಾಗಿದೆ. ಇದನ್ನು ಪಕ್ಷ ನಿಷ್ಠೆ ಎನ್ನಬೇಕೇ ಅಥವಾ ಕಾರ್ಯಕರ್ತರ ರಾಜಕೀಯ ಅವಕಾಶಗಳ ಕುಂಠಿತತೆ ಎನ್ನಬೇಕೇ” ಎಂದು ಪ್ರಶ್ನಿಸಿದ್ದಾರೆ.
“ರಾಜಕೀಯವೆಂದರೆ ಕೇವಲ ಪೋಸ್ಟರ್ಗಳಲ್ಲಿ ಕಾಣಿಸಿಕೊಳ್ಳುವುದಲ್ಲ. ಜನರ ನಡುವೆ ನಿಂತು, ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಜನರಿಗಾಗಿ ಕೆಲಸ ಮಾಡುವುದೇ ನಿಜವಾದ ರಾಜಕೀಯ. ಈ ನಿಟ್ಟಿನಲ್ಲಿ ಮುಂಬರುವ ಮೂರು ಹಂತದ ಪಂಚಾಯಿತಿ ಚುನಾವಣೆಗಳಲ್ಲಿ 18ರಿಂದ 35 ವರ್ಷದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಬೇಕು. ಗೆಲುವು–ಸೋಲಿಗಿಂತ ಚುನಾವಣೆಯಲ್ಲಿ ಭಾಗವಹಿಸುವುದು ಮುಖ್ಯ” ಎಂದು ತಿಳಿಸಿದ್ದಾರೆ.
“ಗ್ರಾಮ ಪಂಚಾಯಿತಿಗಳು ಕೇವಲ ಅಧಿಕಾರದ ಕೇಂದ್ರಗಳಲ್ಲ. ಅವು ರಾಜಕೀಯದ ಗರಡಿ ಮನೆಗಳಾಗಬೇಕು. ಇಲ್ಲಿಂದಲೇ ಭವಿಷ್ಯದ ಜನಪ್ರತಿನಿಧಿಗಳು, ನಾಯಕರು ಹಾಗೂ ಗ್ರಾಮ ಸ್ವರಾಜ್ಯದ ಕಾರ್ಯಕರ್ತರು ರೂಪುಗೊಳ್ಳಬೇಕು. ಗ್ರಾಮಗಳ ಅಭಿವೃದ್ಧಿ ಮತ್ತು ಸ್ವಯಂ ಆಡಳಿತದಲ್ಲಿ ಯುವಜನತೆ ಸಕ್ರಿಯವಾಗಿ ಪಾಲ್ಗೊಳ್ಳಬೇಕು” ಎಂದು ಕರೆ ನೀಡಿದ್ದಾರೆ.
“ಸ್ವಾತಂತ್ರ್ಯ ಪೂರ್ವದಲ್ಲಿ ಮೂರು ಹೊತ್ತು ಊಟಕ್ಕಾಗಿ ಪರದಾಡುತ್ತಿದ್ದ ಅನೇಕ ಗ್ರಾಮಗಳು ಇಂದು ಸಾಕಷ್ಟು ಅಭಿವೃದ್ಧಿ ಹೊಂದಿವೆ. ಮಹಾತ್ಮ ಗಾಂಧೀಜಿ ಅವರ ಅಹಿಂಸಾ ಮಾರ್ಗದ ಹೋರಾಟದ ಮೂಲಕ ದೇಶ ರಾಜಕೀಯ ಸ್ವಾತಂತ್ರ್ಯ ಪಡೆದಿದೆ. ಆದರೆ ರಾಜಕೀಯ ಸ್ವಾತಂತ್ರ್ಯವನ್ನು ನಿಜವಾದ ಗ್ರಾಮ ಸ್ವರಾಜ್ಯವಾಗಿ ಪರಿವರ್ತಿಸುವ ಜವಾಬ್ದಾರಿ ಇನ್ನೂ ನಮ್ಮ ಮುಂದಿದೆ” ಎಂದಿದ್ದಾರೆ.
ಇದನ್ನೂ ಓದಿದ್ದೀರಾ? ಸಂವಿಧಾನದ ಕರಡು ಸಮಿತಿ ರಚನೆಯಾದ ದಿನವಿದು: ಏಳು ಮಂದಿಯ ಪೈಕಿ ಅಂಬೇಡ್ಕರ್ ಅಧ್ಯಕ್ಷರಾದದ್ದು ಹೇಗೆ?
“ಮೇಲ್ಮಟ್ಟದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನೇ ಅವಲಂಬಿಸದೆ, ಸ್ವಯಂ ಆಡಳಿತ, ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ಜನರ ಭಾಗವಹಿಸುವಿಕೆಯ ಮೂಲಕ ಗ್ರಾಮಗಳನ್ನು ಸ್ವರಾಜ್ಯ ಗ್ರಾಮಗಳನ್ನಾಗಿ ರೂಪಿಸುವ ಗುರಿಯನ್ನು ಯುವಜನತೆ ಹೊಂದಬೇಕು. ‘ಯತ್ರ ದೃಷ್ಟಿ, ತತ್ರ ಸೃಷ್ಟಿ’ ಎಂಬಂತೆ ನಮ್ಮ ದೃಷ್ಟಿಕೋನ ಬದಲಾದರೆ ಗ್ರಾಮದ ಭವಿಷ್ಯವೂ ಬದಲಾಗುತ್ತದೆ” ಎಂದು ಹೇಳಿದ್ದಾರೆ.
“ಮುಂಬರುವ ಮೂರು ಹಂತದ ಪಂಚಾಯಿತಿ ಚುನಾವಣೆಗಳಲ್ಲಿ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಿ, ಗೆಲುವು–ಸೋಲನ್ನು ಮೀರಿ ಗ್ರಾಮಗಳ ಅಭಿವೃದ್ಧಿ ಹಾಗೂ ಗ್ರಾಮ ಸ್ವರಾಜ್ಯಕ್ಕಾಗಿ ರಾಜಕೀಯವಾಗಿ ಸಕ್ರಿಯವಾಗಿ ಭಾಗವಹಿಸಬೇಕು. ಗ್ರಾಮ ಪಂಚಾಯಿತಿಗಳನ್ನು ಗ್ರಾಮ ಸ್ವರಾಜ್ಯದ ಗರಡಿ ಮನೆಗಳನ್ನಾಗಿ ಮಾಡುವ ಮೂಲಕ ಯುವಕರಿಗೆ ರಾಜಕೀಯದಲ್ಲಿ ಅವಕಾಶದ ಬಾಗಿಲು ತೆರೆಯಬೇಕು” ಎಂದು ಪ್ರದೀಪ್ ಚ. ಪಾಟೀಲ ಕರೆ ನೀಡಿದ್ದಾರೆ.




