ಜಿಲ್ಲೆಯಲ್ಲಿ ಜೂನ್ 30ರಿಂದ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಮೊದಲ ಹಂತ ಪೂರ್ಣಗೊಂಡಿದ್ದು, ಬರೋಬ್ಬರಿ 2,97,147 ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿದಿರುವುದು ಜಿಲ್ಲಾಡಳಿತದ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.
ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಕೈಗೊಳ್ಳಲಾಗಿತ್ತು. ಒಟ್ಟು 19,82,114 ಮತದಾರರಿಗೆ ಬಿಎಲ್‌ಒಗಳ ಮೂಲಕ ಗಣತಿ ನಮೂನೆಗಳನ್ನು ವಿತರಿಸಲಾಗಿತ್ತು. ಈ ಪೈಕಿ 16,84,968 ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ.
ಪ್ರಕ್ರಿಯೆಯಲ್ಲಿ 1,52,169 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, 30,692 ಮಂದಿ ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿರುವುದು ಹಾಗೂ 525 ಮಂದಿ ಗಣತಿ ನಮೂನೆಗೆ ಸಹಿ ಮಾಡಿ ಮರಳಿಸದಿರುವುದು ಪತ್ತೆಯಾಗಿದೆ. ಅಲ್ಲದೆ 59,093 ಮತದಾರರು ಗೈರು ಉಳಿದಿದ್ದಾರೆ.
ವಿಜಯಪುರ ನಗರದಲ್ಲಿ ವಲಸೆ ಹೆಚ್ಚು
ಶಾಶ್ವತವಾಗಿ ಸ್ಥಳಾಂತರಗೊಂಡಿರುವ 1.52 ಲಕ್ಷ ಮತದಾರರ ಪೈಕಿ ವಿಜಯಪುರ ನಗರ ಕ್ಷೇತ್ರದಲ್ಲೇ 24,693 ಮಂದಿ ಇದ್ದಾರೆ. ನಂತರದ ಸ್ಥಾನದಲ್ಲಿ ನಾಗಠಾಣ ಕ್ಷೇತ್ರವಿದ್ದು, ಇಲ್ಲಿ 22,521 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ದಾಖಲಾಗಿದೆ. ಇವರಲ್ಲಿ ಬಹುತೇಕರು ಉದ್ಯೋಗ ಹಾಗೂ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಹೊರರಾಜ್ಯಗಳಿಗೆ ವಲಸೆ ಹೋಗಿರುವವರು ಎನ್ನಲಾಗಿದೆ.
ಕ್ಷೇತ್ರವಾರು ಅಂಕಿ-ಅಂಶಗಳ ಪ್ರಕಾರ, ಮುದ್ದೇಬಿಹಾಳದಲ್ಲಿ 2,28,285 ಮತದಾರರ ಪೈಕಿ 1,92,295 ನಮೂನೆಗಳು ಡಿಜಿಟಲೀಕರಣಗೊಂಡಿವೆ. 19,412 ಮಂದಿ ಸ್ಥಳಾಂತರಗೊಂಡಿದ್ದು, 8,858 ಮಂದಿ ಮೃತಪಟ್ಟಿರುವುದು, 2,937 ಮಂದಿ ಗೈರಾಗಿರುವುದು ಹಾಗೂ 4,760 ಮಂದಿ ಡುಪ್ಲಿಕೇಟ್ ಮತದಾರರಾಗಿರುವುದು ಪತ್ತೆಯಾಗಿದೆ.
ದೇವರಹಿಪ್ಪರಗಿ ಕ್ಷೇತ್ರದಲ್ಲಿ 2,30,780 ಮತದಾರರಿದ್ದು, 2,00,229 ನಮೂನೆಗಳು ಡಿಜಿಟಲೀಕರಣಗೊಂಡಿವೆ. 18,672 ಮಂದಿ ಸ್ಥಳಾಂತರಗೊಂಡಿದ್ದು, 7,955 ಮಂದಿ ಮೃತಪಟ್ಟಿದ್ದಾರೆ. 840 ಮಂದಿ ಗೈರಾಗಿದ್ದು, 3,017 ಮಂದಿ ಡುಪ್ಲಿಕೇಟ್ ಮತದಾರರಾಗಿದ್ದಾರೆ.
ಬಸವನ ಬಾಗೇವಾಡಿ ಕ್ಷೇತ್ರದಲ್ಲಿ 2,21,472 ಮತದಾರರ ಪೈಕಿ 1,96,418 ನಮೂನೆಗಳು ಡಿಜಿಟಲೀಕರಣಗೊಂಡಿವೆ. 13,027 ಮಂದಿ ಸ್ಥಳಾಂತರಗೊಂಡಿದ್ದು, 6,052 ಮಂದಿ ಮೃತಪಟ್ಟಿದ್ದಾರೆ. 1,478 ಮಂದಿ ಗೈರಾಗಿದ್ದು, 4,455 ಮಂದಿ ಡುಪ್ಲಿಕೇಟ್ ಮತದಾರರಾಗಿದ್ದಾರೆ.
ಬಬಲೇಶ್ವರ ಕ್ಷೇತ್ರದಲ್ಲಿ 2,25,779 ಮತದಾರರಿದ್ದು, 2,01,487 ನಮೂನೆಗಳು ಡಿಜಿಟಲೀಕರಣಗೊಂಡಿವೆ. 15,160 ಮಂದಿ ಸ್ಥಳಾಂತರಗೊಂಡಿದ್ದು, 5,276 ಮಂದಿ ಮೃತಪಟ್ಟಿದ್ದಾರೆ. 1,471 ಮಂದಿ ಗೈರಾಗಿದ್ದು, 2,346 ಮಂದಿ ಡುಪ್ಲಿಕೇಟ್ ಮತದಾರರಾಗಿದ್ದಾರೆ.
ವಿಜಯಪುರ ನಗರ ಕ್ಷೇತ್ರದಲ್ಲಿ ಒಟ್ಟು 2,90,479 ಮತದಾರರಿದ್ದು, 2,10,742 ನಮೂನೆಗಳು ಡಿಜಿಟಲೀಕರಣಗೊಂಡಿವೆ. 24,693 ಮಂದಿ ಸ್ಥಳಾಂತರಗೊಂಡಿದ್ದು, 8,076 ಮಂದಿ ಮೃತಪಟ್ಟಿದ್ದಾರೆ. 38,520 ಮಂದಿ ಗೈರಾಗಿದ್ದು, 8,328 ಮಂದಿ ಡುಪ್ಲಿಕೇಟ್ ಮತದಾರರಾಗಿದ್ದಾರೆ.
ನಾಗಠಾಣ ಕ್ಷೇತ್ರದಲ್ಲಿ 2,79,083 ಮತದಾರರಿದ್ದು, 2,38,557 ನಮೂನೆಗಳು ಡಿಜಿಟಲೀಕರಣಗೊಂಡಿವೆ. 22,521 ಮಂದಿ ಸ್ಥಳಾಂತರಗೊಂಡಿದ್ದು, 6,588 ಮಂದಿ ಮೃತಪಟ್ಟಿದ್ದಾರೆ. 8,368 ಮಂದಿ ಗೈರಾಗಿದ್ದು, 40,526 ಮತದಾರರು ವಿವಿಧ ಕಾರಣಗಳಿಂದ ಪಟ್ಟಿಯಿಂದ ಹೊರಗುಳಿದಿದ್ದಾರೆ.
ಇಂಡಿಯಲ್ಲಿ 2,55,475 ಮತದಾರರಿದ್ದು, 2,26,569 ನಮೂನೆಗಳು ಡಿಜಿಟಲೀಕರಣಗೊಂಡಿವೆ. 17,752 ಮಂದಿ ಸ್ಥಳಾಂತರಗೊಂಡಿದ್ದು, 5,979 ಮಂದಿ ಮೃತಪಟ್ಟಿದ್ದಾರೆ. 2,827 ಮಂದಿ ಗೈರಾಗಿದ್ದಾರೆ. ಸಿಂದಗಿ ಕ್ಷೇತ್ರದಲ್ಲಿ 2,50,761 ಮತದಾರರಿದ್ದು, 2,18,671 ನಮೂನೆಗಳು ಡಿಜಿಟಲೀಕರಣಗೊಂಡಿವೆ. 20,932 ಮಂದಿ ಸ್ಥಳಾಂತರಗೊಂಡಿದ್ದು, 5,984 ಮಂದಿ ಮೃತಪಟ್ಟಿದ್ದಾರೆ. 2,651 ಮಂದಿ ಗೈರಾಗಿದ್ದು, 2,439 ಮಂದಿ ಡುಪ್ಲಿಕೇಟ್ ಮತದಾರರಾಗಿದ್ದಾರೆ.
ವಲಸಿಗರ ನಿರಾಸಕ್ತಿ
ಜಿಲ್ಲೆಯಿಂದ ಉದ್ಯೋಗ ಹಾಗೂ ಬದುಕು ಕಟ್ಟಿಕೊಳ್ಳಲು ಗೋವಾ, ಮಹಾರಾಷ್ಟ್ರ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ಜನರು ವಲಸೆ ಹೋಗಿದ್ದಾರೆ. ತಾವು ವಾಸಿಸುತ್ತಿರುವ ಸ್ಥಳದಲ್ಲಿನ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ, ಸರ್ಕಾರಿ ಸೌಲಭ್ಯಗಳು ಹಾಗೂ ದಾಖಲೆಗಳಲ್ಲಿನ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ ತವರು ಜಿಲ್ಲೆಯಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹಲವರು ಆಸಕ್ತಿ ತೋರಿಲ್ಲ ಎನ್ನಲಾಗಿದೆ.
ಹೆಸರು ಬಿಟ್ಟಿದ್ದರೆ ಆತಂಕ ಬೇಡ: ಡಿಸಿ
ಈದಿನ.ಕಾಮ್‌ಗೆ ಪ್ರತಿಕ್ರಿಯಿಸಿದ ಪ್ರತಿಕ್ರಿಯಿಸಿದ ಜಿಲ್ಲಾ ಚುನಾವಣಾಧಿಕಾರಿ ಡಾ. ಆನಂದ ಕೆ., ಎಸ್‌ಐಆರ್ ಪ್ರಕ್ರಿಯೆಯಲ್ಲಿ ತಾಂತ್ರಿಕ ಅಥವಾ ಇತರೆ ಕಾರಣಗಳಿಂದ ಅರ್ಹ ಮತದಾರರ ಹೆಸರು ಬಿಟ್ಟುಹೋಗಿದ್ದರೆ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಕರಡು ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ ಹೆಸರು ಬಿಟ್ಟುಹೋಗಿರುವ ಅರ್ಹ ಮತದಾರರು 58 ದಿನಗಳೊಳಗೆ ಅಗತ್ಯ ದಾಖಲೆಗಳನ್ನು ಸಂಬಂಧಿಸಿದ ತಹಸೀಲ್ದಾರ್‌ರಿಗೆ ಸಲ್ಲಿಸಿ ಹೆಸರು ಸರಿಪಡಿಸಿಕೊಳ್ಳಲು ಅವಕಾಶವಿದೆ. ಅಲ್ಲದೆ ಕರಡು ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ನಮೂನೆ-6ರಲ್ಲಿ ಅರ್ಜಿ ಸಲ್ಲಿಸಿ ಮತ್ತೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.




