ಸಾಮಾನ್ಯವಾಗಿ ಧಾರ್ಮಿಕ ವಿಧಿವಿಧಾನಗಳು, ಮಂತ್ರೋಚ್ಚಾರಣೆ ಮತ್ತು ಸಂಪ್ರದಾಯಗಳ ನಡುವೆ ನಡೆಯುವ ವಿವಾಹ ಸಮಾರಂಭಗಳಿಗಿಂತ ಭಿನ್ನವಾಗಿ, ನಗರದ ರಾಯಲ್ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ನಡೆದ ಹೊಸಮನಿ ಕುಟುಂಬದ ವಿವಾಹ ಸಮಾರಂಭವು ಸಂವಿಧಾನದ ಪೀಠಿಕೆ ವಾಚಿಸುವ ಮೂಲಕ ಅರ್ಥಪೂರ್ಣವಾಗಿ ನೆರವೇರಿತು.
ಉಪಾಸಕ ಪ್ರಭಾಕರ ಹಾಗೂ ಉಪಾಸಿಕಾ ಕವಿತಾ ಅವರ ವಿವಾಹವು ಭಾರತೀಯ ಸಂವಿಧಾನದ ಪೀಠಿಕೆಯನ್ನು ಸಮೂಹವಾಗಿ ಓದುವ ಮೂಲಕ ಆರಂಭಗೊಂಡಿತು. ಬಳಿಕ ನವಜೋಡಿ ಪರಸ್ಪರ ಮಾಂಗಲ್ಯ ಧಾರಣೆ ಮಾಡುವ ಮೂಲಕ ವಿವಾಹ ಬಂಧನಕ್ಕೆ ಒಳಗಾದರು. ಈ ವಿಶಿಷ್ಟ ವಿವಾಹ ಸಮಾರಂಭವು ಸಾರ್ವಜನಿಕರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಮೆಚ್ಚುಗೆಗೆ ಪಾತ್ರವಾಯಿತು.
ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ ಬಂಧುಬಳಗ, ಸ್ನೇಹಿತರು ಹಾಗೂ ಸಮಾಜದ ಮುಖಂಡರು ನವಜೋಡಿಗೆ ಶುಭಾಶಯ ಕೋರಿದರು. “ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಸಮಾನತೆ, ಬಾಂಧವ್ಯ, ಧರ್ಮನಿರಪೇಕ್ಷತೆ ಮತ್ತು ಮಾನವೀಯ ಮೌಲ್ಯಗಳ ಸಂದೇಶವನ್ನು ನವಜೋಡಿ ಸಮಾಜಕ್ಕೆ ನೀಡಿದೆ” ಎಂದು ಹಲವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂವಿಧಾನದ ಮಹತ್ವ ಹಾಗೂ ಸಾಮಾಜಿಕ ಪರಿವರ್ತನೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಬುದ್ಧ, ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್, ಶಾಹು ಮಹಾರಾಜ್, ಪೆರಿಯಾರ್ ರಾಮಸ್ವಾಮಿ, ನಾರಾಯಣ ಗುರು, ಮಹಾತ್ಮ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು. ಸಭಾಂಗಣದಲ್ಲಿ ಅಳವಡಿಸಿದ್ದ ಈ ಮಹನೀಯರ ಭಾವಚಿತ್ರಗಳು ಅತಿಥಿಗಳ ಗಮನ ಸೆಳೆಯುವಂತಾಗಿದ್ದವು.
ಇಂತಹ ವಿಭಿನ್ನ ವಿವಾಹಗಳು ಸಮಾಜದಲ್ಲಿ ಸಮಾನತೆ ಮತ್ತು ಸಾಮಾಜಿಕ ಜಾಗೃತಿಗೆ ಪ್ರೇರಣೆಯಾಗುತ್ತವೆ. ಯುವಪೀಳಿಗೆ ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬ ಸಂದೇಶ ಈ ಕಾರ್ಯಕ್ರಮದ ಮೂಲಕ ವ್ಯಕ್ತವಾಗಿದೆ ಎಂದು ಹಿರಿಯರು ಅಭಿಪ್ರಾಯಪಟ್ಟರು. ಮೀನಾಕ್ಷಿ ಹಾಗೂ ಡಾ. ರವೀಂದ್ರನಾಥ ಹೊಸಮನಿ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಹೊಸಮನಿ ಹಾಗೂ ಚಿನ್ನಾಕಾರ ಕುಟುಂಬದ ಸದಸ್ಯರು, ಬಂಧುಬಳಗ, ಸ್ನೇಹಿತರು ಹಾಗೂ ಸಮಾಜದ ಗಣ್ಯರು ಭಾಗವಹಿಸಿ ನವಜೋಡಿಗೆ ಆಶೀರ್ವಾದ ಕೋರಿದರು.

ಡಾ. ರವೀಂದ್ರನಾಥ ಹೊಸಮನಿ, ಸೌಭಾಗ್ಯಲಕ್ಷ್ಮಿ, ಶರಣಬಸಪ್ಪ ಹೊಸಮನಿ, ಗುಂಡಮ್ಮ, ಸುರೇಶಬಾಬು ಹೊಸಮನಿ, ಡಾ. ಶ್ರೀಕೃಷ್ಣ ಹೊಸಮನಿ, ಚನ್ನಮ್ಮ ಬಾಬು ಭೂತಾಳಿ, ಚಂದ್ರಕಲಾ, ಚಿಕ್ಕಭೀಮೇಶ ಸೀತನಿ, ಸುಮಂಗಲಾ, ಮರಿಲಿಂಗಪ್ಪ ದೊಡ್ಡನಿ, ಸುಹಾಸಿನಿ, ರಾಜೇಂದ್ರ ಹೊಸಮನಿ, ಶಾರದಾ, ಬಸಲಿಂಗಪ್ಪ ದೇವರ್, ಸವಿತಾ, ಮಾನಪ್ಪ ರಾಜಾಪುರ, ಕವಿತಾ, ರಾಜೀವ್ ವಾಲ್ಮೀಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




