ಅಪ್ರಾಪ್ತ ವಯಸ್ಸಿನ ಬಾಲಕರಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ ಇಬ್ಬರು ವಾಹನ ಮಾಲೀಕರಿಗೆ ಯಲ್ಲಾಪುರದ ಮಾನ್ಯ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ತಲಾ ₹25 ಸಾವಿರದಂತೆ ಒಟ್ಟು ₹50 ಸಾವಿರ ದಂಡ ವಿಧಿಸಿದೆ.
ಜೂನ್ 9ರಂದು ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್‌ಐ ರಾಜಶೇಖರ ವಂದಲಿ ಹಾಗೂ ಪಿಎಸ್‌ಐ ಸಿದ್ದಪ್ಪ ಗುಡಿ ನೇತೃತ್ವದಲ್ಲಿ ಕಿರವತ್ತಿ ಸಮೀಪ ವಾಹನ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ಸಂಚಾರ ನಿಯಮ ಉಲ್ಲಂಘನೆ ತಡೆಗೆ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು, ಎರಡು ಪ್ರತ್ಯೇಕ ಮೋಟಾರ್ ಸೈಕಲ್‌ಗಳನ್ನು ಅಡ್ಡಗಟ್ಟಿ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ವೇಳೆ ವಾಹನ ಚಲಾಯಿಸುತ್ತಿದ್ದವರು ಅಪ್ರಾಪ್ತ ಬಾಲಕರು ಎಂಬುದು ಬೆಳಕಿಗೆ ಬಂದಿದ್ದು, ಅವರಿಗೆ ಚಾಲನಾ ಪರವಾನಗಿ ಇಲ್ಲದಿರುವುದೂ ದೃಢಪಟ್ಟಿದೆ. ಇಬ್ಬರೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಸಂಬಂಧಿತ ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಜೇನುನೊಣ ದಾಳಿಗಿಂತ ಭಯಾನಕ ಅವ್ಯವಸ್ಥೆ: ಮೊರಾರ್ಜಿ ವಸತಿ ಶಾಲೆ ವಿರುದ್ಧ ಗಂಭೀರ ಆರೋಪ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಮಕ್ಕಳ ಪಾಲಕರನ್ನು ಹಾಜರಾಗುವಂತೆ ಸೂಚಿಸಿ, ವಿಚಾರಣೆ ಬಳಿಕ ಕಲಘಟಗಿ ತಾಲೂಕಿನ ಚಿತ್ರಗಿ ಓಣಿಯ ಬಾಬುರಾವ್ ಆರ್. ಯಲ್ಲಾಪುರಕರ್ ಹಾಗೂ ರಾಮಣ್ಣ ಅಮೃತ ಕಲ್ಯಾಣಕರ್ ಅವರಿಗೆ ತಲಾ ₹25 ಸಾವಿರ ದಂಡ ವಿಧಿಸಿ ಆದೇಶಿಸಿದೆ.ಈ ಎರಡೂ ಪ್ರಕರಣಗಳಲ್ಲಿ ಪಿಎಸ್‌ಐ ಸಿದ್ದಪ್ಪ ಗುಡಿ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ಕಲ್ಪಿಸುವುದು ಗಂಭೀರ ಕಾನೂನು ಉಲ್ಲಂಘನೆಯಾಗಿದ್ದು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ವಾಹನ ನೀಡುವುದು ಮೋಟಾರ್ ವಾಹನ ಕಾಯ್ದೆಯ ಸೆಕ್ಷನ್ 199(ಎ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಪಾಲಕರು ಹೆಚ್ಚಿನ ಜಾಗರೂಕತೆ ವಹಿಸುವಂತೆ ಮನವಿ ಮಾಡಿದ್ದಾರೆ.





