ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಸಲ್ಲಿಸಿರುವ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ಜೊತೆಗೆ, ಎಣಿಕೆ ಕೇಂದ್ರದ ಸಿಸಿಟಿವಿ ದೃಶ್ಯಾವಳಿ ಹಾಗೂ ಇವಿಎಂಗಳನ್ನು ಕಡ್ಡಾಯವಾಗಿ ಸಂರಕ್ಷಿಸಿಡುವಂತೆ ಆದೇಶಿಸಿದೆ.
ಏಪ್ರಿಲ್‌ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಮತಾ ಬ್ಯಾನರ್ಜಿ ಅವರು 58,812 ಮತಗಳನ್ನು ಪಡೆದಿದ್ದರೆ, ಸುವೇಂದು ಅಧಿಕಾರಿ ಅವರು 73,917 ಮತಗಳನ್ನು ಪಡೆಯುವ ಮೂಲಕ 15,105 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಮಮತಾ ಈ ಫಲಿತಾಂಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗೌರಂಗ್ ಕಾಂತ್ ಅವರಿದ್ದ ಏಕಸದಸ್ಯ ಪೀಠವು, ಜನಪ್ರತಿನಿಧಿ ಕಾಯ್ದೆಯಡಿ (ಆರ್‌ಪಿ ಕಾಯ್ದೆ) ಅರ್ಜಿ ಸಲ್ಲಿಸಲು ಇರುವ ನಿಯಮಗಳನ್ನು ಈ ಅರ್ಜಿಯು ಪೂರೈಸಿದೆ ಎಂದು ಮೇಲ್ನೋಟಕ್ಕೆ ಅಭಿಪ್ರಾಯಪಟ್ಟಿದೆ. ಪ್ರತಿವಾದಿಗಳು ನಾಲ್ಕು ವಾರಗಳೊಳಗೆ ತಮ್ಮ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿರುವ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು 12 ವಾರಗಳ ನಂತರ ನಡೆಸುವುದಾಗಿ ತಿಳಿಸಿದೆ. ಅಲ್ಲದೆ, ಭವಾನಿಪುರ ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿ ಬಳಸಲಾದ ಎಲೆಕ್ಟ್ರಾನಿಕ್ ಮತಯಂತ್ರಗಳು (EVM), ವಿವಿಪ್ಯಾಟ್ (VVPAT) ಹಾಗೂ ಮತ ಎಣಿಕೆ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಕಡ್ಡಾಯವಾಗಿ ಸಂರಕ್ಷಿಸಿಡಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಇದನ್ನು ಓದಿದ್ದೀರಾ? ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಕುಟುಂಬದಿಂದ ನೂರಾರು ಎಕರೆ ಭೂಮಿ ಖರೀದಿ: ತನಿಖಾ ವರದಿಯಿಂದ ಬಯಲು
ವಿಶೇಷವೆಂದರೆ, ಅರ್ಜಿಯ ವಿಚಾರಣೆ ಆರಂಭಿಸುವ ಮುನ್ನ ನ್ಯಾಯಮೂರ್ತಿ ಗೌರಂಗ್ ಕಾಂತ್ ಅವರು ತಮ್ಮ ಸಹೋದರನೋರ್ವ ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿರುವುದನ್ನು ಮುಕ್ತವಾಗಿ ಬಹಿರಂಗಪಡಿಸಿದರು. “ಈ ಅರ್ಜಿಯ ವಿಚಾರಣೆ ನಡೆಸುವುದರಿಂದ ಮುಂದೆ ಯಾವುದೇ ಆಕ್ಷೇಪಣೆಗಳು ಅಥವಾ ಸಮಸ್ಯೆಗಳು ಎದುರಾಗಬಾರದು ಎಂಬ ಕಾರಣಕ್ಕೆ ಸಂಪೂರ್ಣ ಪಾರದರ್ಶಕತೆಗಾಗಿ ಈ ವಿಷಯವನ್ನು ಮೊದಲೇ ಸ್ಪಷ್ಟಪಡಿಸುತ್ತಿದ್ದೇನೆ,” ಎಂದು ಅವರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ ಪರ ಹಿರಿಯ ವಕೀಲ ಕಲ್ಯಾಣ್ ಬಂಡೋಪಾಧ್ಯಾಯ ಅವರು, “ನ್ಯಾಯಮೂರ್ತಿಗಳ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದ್ದು, ನೀವು ವಿಚಾರಣೆ ನಡೆಸುವುದಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ” ಎಂದು ಸ್ಪಷ್ಟಪಡಿಸಿದರು.
ಬಳಿಕ ವಾದ ಮಂಡಿಸಿದ ವಕೀಲ ಕಲ್ಯಾಣ್ ಬಂಡೋಪಾಧ್ಯಾಯ, “ಮತ ಎಣಿಕೆ ಪ್ರಕ್ರಿಯೆಯಲ್ಲಿ ಗಂಭೀರ ಸ್ವರೂಪದ ಅಕ್ರಮಗಳು ನಡೆದಿವೆ. ಭವಾನಿಪುರ ಕ್ಷೇತ್ರದ ಚುನಾವಣಾಧಿಕಾರಿಯನ್ನು ಹಿತಾಸಕ್ತಿ ಸಂಘರ್ಷದ (Conflict of interest) ನಡುವೆಯೂ ನೇಮಕ ಮಾಡಲಾಗಿತ್ತು. 2021ರ ನಂದಿಗ್ರಾಮ ಚುನಾವಣೆಯಲ್ಲೂ ಇವರೇ ಚುನಾವಣಾಧಿಕಾರಿಯಾಗಿದ್ದರು ಮತ್ತು ಆಗಲೂ ಮಮತಾ ಬ್ಯಾನರ್ಜಿ ಸೋತಿದ್ದರು. ಆ ಅಧಿಕಾರಿಯ ವಿರುದ್ಧ ಹಲವು ದೂರುಗಳಿದ್ದರೂ, ಈಗ ಅವರನ್ನು ಮುಖ್ಯಮಂತ್ರಿಯವರ ಕಚೇರಿಗೆ ನಿಯೋಜಿಸಲಾಗಿದೆ,” ಎಂದು ಗಂಭೀರ ಆರೋಪ ಮಾಡಿದರು.
ಜೊತೆಗೆ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ವೇಳೆ ಸಾಕಷ್ಟು ಸಂಖ್ಯೆಯ ಮತದಾರರನ್ನು ಕಾನೂನುಬಾಹಿರವಾಗಿ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಅಂಶವನ್ನೂ ಮಮತಾ ಬ್ಯಾನರ್ಜಿ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿರುವುದನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ.




