ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 157ನೇ ಜಯಂತಿ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಸಹಬಾಳ್ವೆ ಹಾಗೂ ಅಸ್ಪೃಶ್ಯತೆ ನಿವಾರಣೆಗಾಗಿ ಅವರು ನಡೆಸಿದ ಪ್ರಯೋಗಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ‘ಬಾಪೂಜಿ ಪ್ರಬಂಧ ಸ್ಪರ್ಧೆ’ಯನ್ನು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಆಯೋಜಿಸಲಾಗಿದೆ.
ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದ ವಿದ್ಯಾರ್ಥಿಗಳಿಗೆ ಒಟ್ಟು ಮೂರು ವಿಭಾಗಗಳಲ್ಲಿ ಪ್ರಬಂಧ ಸ್ಪರ್ಧೆ ನಡೆಯಲಿದೆ. ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ₹31,000, ದ್ವಿತೀಯ ಬಹುಮಾನ ₹21,000 ಹಾಗೂ ತೃತೀಯ ಬಹುಮಾನ ₹11,000 ನೀಡಲಾಗುವುದು. ಜಿಲ್ಲಾಮಟ್ಟದಲ್ಲಿ ಪ್ರಥಮ ಬಹುಮಾನ ₹3,000, ದ್ವಿತೀಯ ಬಹುಮಾನ ₹2,000 ಹಾಗೂ ತೃತೀಯ ಬಹುಮಾನ ₹1,000 ನೀಡಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರೌಢಶಾಲಾ ವಿಭಾಗ:
- 1.ಗಾಂಧೀಜಿ ಕಲಿಸಿದ ಸರಳ ಜೀವನ -ಮಹಾನ್ ಸಂದೇಶ, 2.ನಾನು ಗಾಂಧೀಜಿಯಂತೆ ಸತ್ಯ ಹೇಳುವೆನು, 3.ಗಾಂಧೀಜಿಯ ಜೀವನ ಕಥೆಯಿಂದ ಕಲಿಯುವ ಐದು ಪಾಠಗಳು
ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಮೇಲಿನ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯದ ಕುರಿತು 700ರಿಂದ 800 ಪದಗಳ ಮಿತಿಯಲ್ಲಿ ಪ್ರಬಂಧ ಬರೆಯಬೇಕು.
ಪದವಿ ಪೂರ್ವ ಶಿಕ್ಷಣ ವಿಭಾಗ:
- 1.ಗಾಂಧೀಜಿಯ ದೃಷ್ಟಿಯಲ್ಲಿ ನಿಜವಾದ ಸ್ವಾತಂತ್ರ್ಯ, 2.ಸತ್ಯ ಮತ್ತು ಅಹಿಂಸೆ-ನನ್ನ ಜೀವನದ ದಾರಿ, 3.ಅಸಮಾನತೆ ನಿವಾರಣೆಗೆ ಗಾಂಧೀಜಿಯವರ ಕೊಡುಗೆ
ಪದವಿ ಪೂರ್ವ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳು ಮೇಲಿನ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯದ ಕುರಿತು 900ರಿಂದ 1,000 ಪದಗಳ ಮಿತಿಯಲ್ಲಿ ಪ್ರಬಂಧ ಬರೆಯಬೇಕು.
ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗ:
- 1.ನೈತಿಕ ರಾಜಕಾರಣ-ಗಾಂಧೀಜಿಯ ತತ್ವಗಳ ಇಂದಿನ ಪ್ರಾಸಂಗಿಕತೆ, 2.ಸತ್ಯಾಗ್ರಹ-ಇಂದಿನ ಕಾಲದ ಅವಶ್ಯಕತೆ, 3.ಗಾಂಧೀಜಿಯ ಶಿಕ್ಷಣತತ್ವ–ನೈತಿಕತೆ, ಕೌಶಲ್ಯ, ಸೇವಾಭಾವ
ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳು ಮೇಲಿನ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯದ ಕುರಿತು 1,400ರಿಂದ 1,500 ಪದಗಳ ಮಿತಿಯಲ್ಲಿ ಪ್ರಬಂಧ ಬರೆಯಬೇಕು.
ವಿದ್ಯಾರ್ಥಿಗಳು ತಮ್ಮ ಪ್ರಬಂಧಗಳನ್ನು ಶಾಲಾ-ಕಾಲೇಜುಗಳ ಮುಖ್ಯಸ್ಥರಿಗೆ ಸಲ್ಲಿಸಬೇಕು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗದ ಉಪನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿ ಅತ್ಯುತ್ತಮವಾದ ಮೂರು ಪ್ರಬಂಧಗಳನ್ನು ಆಯ್ಕೆ ಮಾಡಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರು, ಬೀದರ ಅವರಿಗೆ ಸೆಪ್ಟೆಂಬರ್ 8, 2026ರೊಳಗಾಗಿ ಸಲ್ಲಿಸಬೇಕು.
ಪ್ರತಿ ವಿಭಾಗದಲ್ಲಿನ ಅತ್ಯುತ್ತಮ ಮೂರು ಪ್ರಬಂಧಗಳ ರಚನೆಕಾರರಿಗೆ ಅಕ್ಟೋಬರ್ 2ರಂದು ನಡೆಯುವ ಜಿಲ್ಲಾ ಮಟ್ಟದ ಗಾಂಧೀಜಿ ಜಯಂತಿ ಆಚರಣೆ ಸಮಾರಂಭದಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು.
ನಿಬಂಧನೆಗಳು
ಪ್ರಬಂಧವು ಸಂಪೂರ್ಣವಾಗಿ ಸ್ವರಚಿತವಾಗಿರಬೇಕು. ಸ್ಪರ್ಧೆ ನಡೆಯುವ ಸ್ಥಳದಲ್ಲಿಯೇ ಶುದ್ಧ ಕೈಬರಹದಲ್ಲಿ ಪ್ರಬಂಧ ಬರೆಯಬೇಕು. ಪ್ರಬಂಧ ರಚನೆಗೆ ಬಳಸಿದ ಪರಾಮರ್ಶನ ಅಥವಾ ಆಧಾರ ಗ್ರಂಥಗಳ ವಿವರಗಳನ್ನು ಪ್ರಬಂಧದ ಕೊನೆಯಲ್ಲಿ ನಮೂದಿಸಬೇಕು. ಆದರೆ, ಸ್ಪರ್ಧೆ ನಡೆಯುವ ಸ್ಥಳದಲ್ಲಿ ಪರಾಮರ್ಶನ/ಆಧಾರ ಗ್ರಂಥಗಳು ಹಾಗೂ ಮೊಬೈಲ್ಗಳ ಬಳಕೆಗೆ ಅವಕಾಶವಿರುವುದಿಲ್ಲ.
ಇದನ್ನೂ ಓದಿ : ವಚನ ಕಲ್ಯಾಣ | ಒಬ್ಬರ ಮನವ ಘಾತವ ಮಾಡಿ, ಗಂಗೆಯ ಮುಳುಗಿದಡೇನಾಗುವುದಯ್ಯಾ?
ಪ್ರಬಂಧಕಾರರು ತಮ್ಮ ಹೆಸರು ಮತ್ತು ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು. ಪ್ರಬಂಧವು ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು. ಆಯ್ಕೆಯಾದ ಪ್ರಬಂಧಗಳನ್ನು ಪ್ರಕಟಿಸುವ ಹಕ್ಕನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾಯ್ದಿರಿಸಿಕೊಂಡಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




