ಕಾಂಗ್ರೆಸ್ ಪಕ್ಷವು ದಲಿತ ಸಮುದಾಯದ ಬೆಂಬಲದಿಂದಲೇ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಬಲಿಷ್ಠವಾಗಿ ಬೆಳೆದಿದ್ದು, ಇದೀಗ ದಲಿತ ಸಮುದಾಯದ ಋಣ ತೀರಿಸುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ದಲಿತ ಸಮುದಾಯದ ನಾಯಕನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ನೇಮಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ರಿ) ಆಗ್ರಹಿಸಿದೆ.
ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಸಂಸ ಮುಖಂಡರು, ಕಾಂಗ್ರೆಸ್ ಪಕ್ಷ ಹುಟ್ಟಿದಾಗಿನಿಂದಲೂ ಬಡವರು, ಶೋಷಿತರು ಹಾಗೂ ದಲಿತರು ಪಕ್ಷದ ಬೆನ್ನೆಲುಬಾಗಿ ನಿಂತಿದ್ದಾರೆ. ಅನೇಕರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕಾಗಿ ಬಳಸಿಕೊಂಡು ಬೇರೆ ದಾರಿಯನ್ನು ಹಿಡಿದಿದ್ದರೂ, ದಲಿತ ಸಮುದಾಯ ಮಾತ್ರ ಪಕ್ಷವನ್ನು ತನ್ನ ಮನೆಯೆಂದು ಭಾವಿಸಿ ನಿಷ್ಠೆಯಿಂದ ಬೆಂಬಲಿಸುತ್ತ ಬಂದಿದೆ. ಆದರೆ ಇಷ್ಟೆಲ್ಲ ಕೊಡುಗೆಗಳಿದ್ದರೂ ಕರ್ನಾಟಕದಲ್ಲಿ ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆ ಸಿಗದಿರುವುದು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ ಎಂದು ಹೇಳಿದರು.
ರಾಜ್ಯದ ಜನಸಂಖ್ಯೆಯಲ್ಲಿ ಪ್ರಮುಖ ಸ್ಥಾನ ಹೊಂದಿರುವ ದಲಿತ ಸಮುದಾಯವನ್ನು ಕಾಂಗ್ರೆಸ್ ಪಕ್ಷ ನಿರಂತರವಾಗಿ ಕಡೆಗಣಿಸುತ್ತಿದೆ. ಇತರ ಸಣ್ಣ ಸಮುದಾಯಗಳ ನಾಯಕರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವ ಉದಾಹರಣೆಗಳಿದ್ದರೂ, ದಲಿತ ಸಿಎಂ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಆಸಕ್ತಿ ತೋರುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ಕೋಮು ಶಕ್ತಿಗಳ ವಿರುದ್ಧ ಹೋರಾಟ ನಡೆಸುವಲ್ಲಿ ದಲಿತ ಸಮುದಾಯ ಮತ್ತು ಬಾಬಾ ಸಾಹೇಬರ ಅನುಯಾಯಿಗಳು ಮಹತ್ವದ ಪಾತ್ರ ವಹಿಸಿದ್ದು, ಜಾತ್ಯಾತೀತ ಶಕ್ತಿಗಳ ಪರವಾಗಿ ಸದಾ ನಿಂತಿದ್ದಾರೆ. ಇದರ ಲಾಭ ಕಾಂಗ್ರೆಸ್ ಪಕ್ಷಕ್ಕೆ ದೊರೆತಿದೆ. ಆದರೆ ದಲಿತರಿಗೆ ರಾಜಕೀಯವಾಗಿ ಸಮರ್ಪಕ ಪ್ರತಿಫಲ ದೊರೆಯುತ್ತಿಲ್ಲ ಎಂದು ದೂರಿದರು.
ದಲಿತ ಸಮುದಾಯದಲ್ಲಿ ಅರ್ಹತೆ, ಅನುಭವ, ಪ್ರಬುದ್ಧತೆ ಹಾಗೂ ಜನಬೆಂಬಲ ಹೊಂದಿರುವ ಅನೇಕ ಹಿರಿಯ ನಾಯಕರು ಇದ್ದರೂ ಅವರಿಗೆ ಅವಕಾಶ ಸಿಗುತ್ತಿಲ್ಲ. ರಾಜಕೀಯ ಕುತಂತ್ರಗಳಿಂದ ದೂರವಿದ್ದು ಪಕ್ಷನಿಷ್ಠೆಯಿಂದ ಕೆಲಸ ಮಾಡುತ್ತಿರುವುದೇ ಅವರ ವಿರುದ್ಧ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ನಾಯಕರು. ಅವರಿಗೆ ದಲಿತ ಸಮುದಾಯವು ಸದಾ ಬೆಂಬಲವಾಗಿ ನಿಂತಿದೆ. ಆದ್ದರಿಂದ ಉಳಿದಿರುವ ಅವಧಿಯಲ್ಲಾದರೂ ದಲಿತ ಸಮುದಾಯದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್, ಡಾ. ಹೆಚ್.ಸಿ. ಮಹದೇವಪ್ಪ ಅಥವಾ ಕೆ.ಹೆಚ್. ಮುನಿಯಪ್ಪ ಅವರಲ್ಲಿ ಯಾರನ್ನಾದರೂ ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಹಾಗೂ ಸಿದ್ದರಾಮಯ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿಶೇಷವಾಗಿ ಡಾ. ಹೆಚ್.ಸಿ. ಮಹದೇವಪ್ಪ ಅವರು ಸಿದ್ದರಾಮಯ್ಯ ಅವರ ರಾಜಕೀಯ ಪಯಣದ ಪ್ರತಿಯೊಂದು ಹಂತದಲ್ಲೂ ಜೊತೆಯಾಗಿದ್ದು, ದಲಿತ ಸಮುದಾಯವನ್ನು ಕೋಮು ಶಕ್ತಿಗಳ ವಿರುದ್ಧ ಸಂಘಟಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬಿದ್ದಾರೆ. ಸಾಮಾಜಿಕ ನ್ಯಾಯದ ಹಲವು ಯೋಜನೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರೂ ಯಾವುದೇ ಪ್ರಚಾರದ ನಿರೀಕ್ಷೆ ಇಲ್ಲದೆ ಕೆಲಸ ಮಾಡಿದ್ದಾರೆ. ಆದ್ದರಿಂದ ಅವರನ್ನು ಮುಖ್ಯಮಂತ್ರಿ ಮಾಡಿದರೆ ಸಾಮಾಜಿಕ ನ್ಯಾಯದ ಆಡಳಿತಕ್ಕೆ ಮತ್ತಷ್ಟು ಬಲ ಸಿಗಲಿದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?ಮೈಸೂರಿನಲ್ಲಿ ಎಸ್ಐಆರ್ ವಿರೋಧಿ ಒಕ್ಕೂಟದ ಪ್ರತಿಭಟನೆ: ಮತದಾರರ ಹಕ್ಕುಗಳ ರಕ್ಷಣೆಗೆ ನಾಲ್ಕು ಪ್ರಮುಖ ಆಗ್ರಹಗಳು
ಈ ಅವಧಿಯಲ್ಲಿ ದಲಿತ ಮುಖ್ಯಮಂತ್ರಿ ನೇಮಕವಾಗದಿದ್ದರೆ ದಲಿತ ಸಮುದಾಯವು ಕಾಂಗ್ರೆಸ್ ಪಕ್ಷದ ಬಗ್ಗೆ ಮರುಚಿಂತನೆ ನಡೆಸುವ ಪರಿಸ್ಥಿತಿ ಉಂಟಾಗಬಹುದು ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ?ಮಂಡ್ಯ | ಅರ್ಹ ಮತದಾರರ ಹಕ್ಕು ರಕ್ಷಣೆಗೆ ಎಸ್ಐಆರ್ ಪ್ರಕ್ರಿಯೆಯಲ್ಲಿ ಸಮಗ್ರ ಬದಲಾವಣೆ ಅಗತ್ಯ: ಒಕ್ಕೂಟದ ಆಗ್ರಹ
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಜೀವನಹಳ್ಳಿ ವೆಂಕಟೇಶ್, ರಾಜ್ಯ ಸಂಘಟನಾ ಸಂಚಾಲಕ ದೇವಗಳ್ಳಿ ಸೋಮಶೇಖರ್, ವಿಭಾಗೀಯ ಸಂಚಾಲಕ ರಾಜಶೇಖರ ಕೋಟೆ, ಕ್ಯಾಲಸಹಳ್ಳಿ ಶ್ರೀನಿವಾಸ್, ಉಮಾಶಂಕರ್, ಹನುಮಂತರಾಜು ತಗಚಗುಪ್ಪೆ ಸೇರಿದಂತೆ ಹಲವರು ಇದ್ದರು.




