ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರದ ಮೊದಲ ಆಯವ್ಯಯ (2026-27) ಮಂಡನೆಯಾಗಿದ್ದು, ಇದರಲ್ಲಿ ಘೋಷಿಸಲಾದ ಹೊಸ ಉಚಿತ ಯೋಜನೆಗಳ ಬಗ್ಗೆ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ, ಟೀಕೆ ಮತ್ತು ವಿಮರ್ಶೆಗಳು ವ್ಯಕ್ತವಾಗಿವೆ.
ತಮಿಳುನಾಡು ಹಣಕಾಸು ಸಚಿವ ಎನ್. ಮೇರಿ ವಿಲ್ಸನ್ ಬಜೆಟ್ ಮಂಡಿಸುತ್ತಾ ಮಹಿಳಾ ಫಲಾನುಭವಿಗಳಿಗೆ ಎಂಟು ಗ್ರಾಂ ಚಿನ್ನ ಮತ್ತು ರೇಷ್ಮೆ ಸೀರೆಯನ್ನು ಪಡೆಯುವ “ಚಿನ್ನದ ನಾಣ್ಯ, ರೇಷ್ಮೆ ಸೀರೆ ಯೋಜನೆ”ಗೆ ₹812 ಕೋಟಿ ಮೀಸಲಿಟ್ಟಿರುವುದಾಗಿ ಘೋಷಿಸಿದ್ದಾರೆ. ಇದಲ್ಲದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳಿಗೆ ಚಿನ್ನದ ಉಂಗುರ ಯೋಜನೆಗೆ ₹560 ಕೋಟಿ ಮೀಸಲಿಡಲಾಗಿದೆ.
ಇದನ್ನೂ ಓದಿ: ನವಜಾತ ಶಿಶುಗಳಿಗೆ ಚಿನ್ನದುಂಗುರ, ರೇಷ್ಮೆ ಸೀರೆ ಯೋಜನೆ, ಹಜ್ ಯಾತ್ರೆಗೆ ಸಬ್ಸಿಡಿ: ತಮಿಳುನಾಡು ಬಜೆಟ್‌ನಲ್ಲೇನಿದೆ?
ಆದರೆ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದ ಬೊಕ್ಕಸಕ್ಕೆ ಈಗಾಗಲೇ ಸಾಲದ ಹೊರೆ ಇರುವಾಗ, ಇಂತಹ ಯೋಜನೆಗಳಿಗೆ ಬೃಹತ್ ಮೊತ್ತವನ್ನು ವಿನಿಯೋಗಿಸುವುದು ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ರಸ್ತೆ, ನೀರಾವರಿ ಮತ್ತು ಕೈಗಾರಿಕಾ ಮೂಲಸೌಕರ್ಯಗಳಿಗೆ ಬಳಸಬೇಕಾದ ಸಾರ್ವಜನಿಕ ಹಣವನ್ನು ಇಂತಹ ಚಿನ್ನ, ರೇಷ್ಮೆ ಸೀರೆ ಉಡುಗೊರೆಗಾಗಿ ವ್ಯಯಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
This video cannot be played in your browser. Open the video directly
ವಿಧಾನಸಭೆಯಲ್ಲಿ ಬಜೆಟ್ ಮಂಡನೆಯಾದ ತಕ್ಷಣವೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹಾಗೂ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ, ಈ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
“ರಾಜ್ಯವು ಸಾಲದ ಸುಳಿಯಲ್ಲಿ ಸಿಲುಕಿರುವಾಗ ಮತ್ತು ಆದಾಯ ಕುಸಿತದ ಬಿಕ್ಕಟ್ಟು ಎದುರಿಸುತ್ತಿರುವಾಗ, ಸರ್ಕಾರ ಉಚಿತ ಚಿನ್ನದ ನಾಣ್ಯ ಹಾಗೂ ರೇಷ್ಮೆ ಸೀರೆಗಳಂತಹ ಆಕರ್ಷಕ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿರುವುದು ಸೂಕ್ತವಲ್ಲ. ಸಾರ್ವಜನಿಕರ ತೆರಿಗೆ ಹಣವನ್ನು ಇಂತಹ ಜನಪ್ರಿಯ ಯೋಜನೆಗಳಿಗೆ ಪೋಲು ಮಾಡುವ ಬದಲು, ಗ್ರಾಮೀಣ ರಸ್ತೆ ಅಭಿವೃದ್ಧಿ, ನೀರಾವರಿ ಯೋಜನೆಗಳು, ಮೂಲಸೌಕರ್ಯ ಹಾಗೂ ಕೃಷಿ ವಲಯಕ್ಕೆ ಆದ್ಯತೆಯ ಮೇಲೆ ಹಣ ಮೀಸಲಿಡಬೇಕಿತ್ತು” ಎಂದು ಪಳನಿಸ್ವಾಮಿ ಅವರು ಬಹಿರಂಗವಾಗಿ ಟೀಕಿಸಿದ್ದಾರೆ.
ಇದಲ್ಲದೆ, ಡಿಎಂಕೆ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹಾಗೂ ಹಲವು ಅರ್ಥಶಾಸ್ತ್ರಜ್ಞರು ಸಹ ಸರ್ಕಾರದ ಧನಸಹಾಯ ಆದ್ಯತೆಗಳನ್ನು ಪ್ರಶ್ನಿಸಿದ್ದು, ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡುವುದನ್ನು ಬಿಟ್ಟು ಕೇವಲ ಚುನಾವಣಾ ಭರವಸೆಗಳ ಈಡೇರಿಕೆಗೆ ಸಾರ್ವಜನಿಕ ನಿಧಿಯನ್ನು ಬಳಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ವೈದ್ಯಕೀಯ ಉಪಕರಣಗಳು ಮತ್ತು ಸಿಬ್ಬಂದಿ ಇಲ್ಲದಿರುವಾಗ, ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಮಕ್ಕಳಿಗೆ ಬಂಗಾರದ ಉಂಗುರ ಕೊಡುವ ಬದಲು ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಬೇಕಿತ್ತು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ. ಮಹಿಳೆಯರ ಸಬಲೀಕರಣದ ಹೆಸರಿನಲ್ಲಿ ಕೇವಲ ಮತಗಳನ್ನು ಸೆಳೆಯಲು ಇಂತಹ ಜನಪ್ರಿಯ ಯೋಜನೆಗಳನ್ನು ತರಲಾಗಿದೆಯೇ ಹೊರತು, ಇದರಿಂದ ಮಹಿಳೆಯರ ದೀರ್ಘಾವಧಿಯ ಆರ್ಥಿಕ ಸ್ವಾವಲಂಬನೆ ಸಾಧ್ಯವಿಲ್ಲ ಎಂದು ವಿಶ್ಲೇಷಕರು ಟೀಕಿಸಿದ್ದಾರೆ. ಅಷ್ಟಕ್ಕೂ ಚಿನ್ನದ ನಾಣ್ಯ ಮತ್ತು ರೇಷ್ಮೆ ಸೀರೆ ನೀಡುವುದು ಕೇವಲ ಸಾಂಕೇತಿಕ ಆಚರಣೆ. ಇದು ಬಡತನ ನಿರ್ಮೂಲನೆಗೆ ಶಾಶ್ವತ ಪರಿಹಾರವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.





