ಕೇರಳದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರೂ ಆಗಿರುವ ವಿ. ಡಿ. ಸತೀಶನ್ ಅವರು ವಿಧಾನಸಭೆಯಲ್ಲಿ ಹೊಸ ಯುಡಿಎಫ್ ಸರ್ಕಾರದ ಮೊದಲ 2026-27ನೇ ಸಾಲಿನ ಪರಿಷ್ಕೃತ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ರಾಜ್ಯದ ಆರ್ಥಿಕತೆಯನ್ನು ಸುಧಾರಿಸಲು, ಆರೋಗ್ಯ ಕ್ಷೇತ್ರ, ಕಡಲ ತೀರದ ಪ್ರಗತಿ ಮತ್ತು ಸುಸ್ಥಿರ ಮೂಲಸೌಕರ್ಯಗಳ ಸುಧಾರಣೆಗೆ ಒತ್ತು ನೀಡಲಾಗಿದೆ.
ಕೇರಳವನ್ನು ಜಾಗತಿಕ ಕಡಲ ಮತ್ತು ಆರ್ಥಿಕ ಹಬ್ ಆಗಿ ಪರಿವರ್ತಿಸಲು ‘ಮಿಷನ್ ಸಮುದ್ರ’ ಯೋಜನೆಯನ್ನು ಕೇರಳ ಸರ್ಕಾರ ಘೋಷಿಸಿದೆ. ಹಾಗೆಯೇ ಕೇರಳವನ್ನು ಪ್ರಮುಖ ‘ಏಕೀಕೃತ ಬಂದರು ನಗರ’ (Unified Port City) ಆಗಿ ಅಭಿವೃದ್ಧಿಪಡಿಸುವ ಮೂಲಕ ಬಂದರು ಆಧಾರಿತ ಆರ್ಥಿಕತೆಗೆ ಉತ್ತೇಜನ ನೀಡಲು ತೀರ್ಮಾನಿಸಿದೆ. ಇನ್ನು ಮೀನುಗಾರರ ವಸತಿ ಯೋಜನೆಗಳಿಗೆ ನೆರವು ಮತ್ತು ಅವರು ಮೀನುಗಾರಿಕೆಗೆ ಹೋಗಲಾಗದ ಕಷ್ಟದ ದಿನಗಳಲ್ಲಿ ವಿಶೇಷ ಆರ್ಥಿಕ ಸಹಾಯ ಒದಗಿಸಲು ನಿರ್ಧರಿಸಲಾಗಿದೆ.
ಇದನ್ನು ಓದಿದ್ದೀರಾ? ಕೇರಳ ಬಜೆಟ್ | ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೂರ್ವ ಪ್ರಾಥಮಿಕ ಶಿಕ್ಷಕಿಯರ ಗೌರವ ಧನ ಹೆಚ್ಚಳ
ಆರೋಗ್ಯ ರಕ್ಷಣೆಗೆ ಒಟ್ಟು ₹2,076 ಕೋಟಿ ಅನುದಾನ ಮೀಸಲಿಡಲಾಗಿದೆ. ಈ ಬಜೆಟ್‌ನಲ್ಲಿ ಹೊಸದಾಗಿ ಉಮ್ಮನ್ ಚಾಂಡಿ ಆರೋಗ್ಯ ವಿಮೆ ಯೋಜನೆಯನ್ನು ಘೋಷಿಸಲಾಗಿದೆ. ಇದಕ್ಕಾಗಿ ₹10 ಕೋಟಿ ಆರಂಭಿಕ ಅನುದಾನ ನೀಡಲಾಗಿದೆ. ಹಾಗೆಯೇ ಹರಿಪಾಡ್‌ನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ವೃದ್ಧರ ಆರೈಕೆಗಾಗಿ ₹10 ಕೋಟಿ ಮೀಸಲಿಡಲಾಗಿದ್ದು, ಇದಕ್ಕಾಗಿ ವಿಶೇಷ ಕೇರ್‌ಗಿವರ್ ಪ್ರಮಾಣಪತ್ರ ಕೋರ್ಸ್‌ಗಳನ್ನು ಆರಂಭಿಸುವುದಾಗಿ ಕೇರಳ ಯುಡಿಎಫ್ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ.
ಇನ್ನು ರಬ್ಬರ್ ಕನಿಷ್ಠ ಬೆಂಬಲ ಬೆಲೆಯನ್ನು (MSP) ₹250 ಕ್ಕೆ ಹೆಚ್ಚಿಸಲಾಗಿದೆ. ಕೃಷಿ ವಲಯಕ್ಕೆ ಒಟ್ಟು ₹1,535 ಕೋಟಿ ನೀಡಲಾಗಿದ್ದು, ಮಹಿಳಾ ರೈತರನ್ನು ಉತ್ತೇಜಿಸಲು ‘ಕೃಷಿ ಸಖಿ’ ಯೋಜನೆ ಆರಂಭಿಸಲಾಗಿದೆ. ಮಾನವ-ವನ್ಯಜೀವಿ ಸಂಘರ್ಷವನ್ನು ತಡೆಗಟ್ಟಲು ₹192 ಕೋಟಿಗಳ ವಿಶೇಷ ಪ್ಯಾಕೇಜ್ ಅನ್ನು ಕೇರಳ ಸಿಎಂ ವಿ. ಡಿ. ಸತೀಶನ್ ಘೋಷಿಸಿದ್ದಾರೆ.
ಪರಿಸರಸ್ನೇಹಿ ಇವಿ ಕಾರುಗಳ ರೋಡ್ ಟ್ಯಾಕ್ಸ್ (ರಸ್ತೆ ತೆರಿಗೆ) ಅನ್ನು ಕಡಿತಗೊಳಿಸಲಾಗಿದೆ, ಇದರಿಂದ ಇವಿ ಕಾರುಗಳು ಅಗ್ಗವಾಗಲಿವೆ. ಖಾಸಗಿ ಬಸ್ ಆಪರೇಟರ್‌ಗಳಿಗೆ ಮೂರು ತಿಂಗಳಿಗೊಮ್ಮೆ ಪಾವತಿಸಬೇಕಾದ ತೆರಿಗೆಯಲ್ಲಿ ಶೇ. 50ರಷ್ಟು ಕಡಿತ ಘೋಷಿಸಲಾಗಿದೆ. ಆಲ್ ಇಂಡಿಯಾ ಪರ್ಮಿಟ್ ವಾಹನಗಳ ತೆರಿಗೆಯನ್ನೂ ಶೇ. 50 ರಷ್ಟು ಇಳಿಸಲಾಗಿದೆ. ಕಡಿಮೆ ಆಲ್ಕೋಹಾಲ್ ಇರುವ ಪಾನೀಯಗಳಿಗೆ ಹೊಸ ತೆರಿಗೆ ಸ್ಲ್ಯಾಬ್ ಪರಿಚಯಿಸಲಾಗಿದೆ ಮತ್ತು ಮದ್ಯದ ಬೆಲೆಯಲ್ಲಿ ಏರಿಕೆಯಾಗಿದೆ.
ಶಿಕ್ಷಣ ವಲಯಕ್ಕೆ ₹1,032 ಕೋಟಿ ಹಾಗೂ ಕೈಗಾರಿಕಾ ಪ್ರಗತಿಗೆ ₹1,558 ಕೋಟಿ ಹಂಚಿಕೆ ಮಾಡಲಾಗಿದೆ. ಮಹಿಳೆಯರ ಉಚಿತ ಬಸ್ ಪ್ರಯಾಣದ ಇಂದಿರಾ ಗಾಂಧಿ ಯೋಜನೆಗಾಗಿ ₹600 ಕೋಟಿಗಳನ್ನು ಮೀಸಲಿಡಲಾಗಿದೆ. ವಯನಾಡು, ಕಾಸರಗೋಡು ಮತ್ತು ಇಡುಕ್ಕಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆಯಾಗಿದೆ. ಮಾದಕ ದ್ರವ್ಯ ಮುಕ್ತ ಕೇರಳಕ್ಕಾಗಿ ‘ಆಪರೇಷನ್ ತೂಫಾನ್’ ಯೋಜನೆಗೆ ₹10 ಕೋಟಿ ನೀಡಲಾಗಿದೆ.




