ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಕೇಂದ್ರ ಚುನಾವಣಾ ಆಯೋಗವು ನಡೆಸಿದ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಜ್ಯದ ಅಂತಿಮ ಮತದಾರರ ಪಟ್ಟಿಯಿಂದ ಬರೋಬ್ಬರಿ 91 ಲಕ್ಷ ಜನರ ಹೆಸರುಗಳನ್ನು ಕೈಬಿಡಲಾಗಿದೆ. ಮೊದಲ ಹಂತದ ಚುನಾವಣೆಯ ನಾಮಪತ್ರ ಸಲ್ಲಿಕೆಯ ಅಂತಿಮ ದಿನಾಂಕ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ, ಕಾನೂನಿನ ಪ್ರಕಾರ “ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿ, ಸ್ಥಗಿತಗೊಳಿಸಲಾಗಿದೆ ಎಂದು ಆಯೋಗವು ಸ್ಪಷ್ಟಪಡಿಸಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷದ ನವೆಂಬರ್‌ನಲ್ಲಿ ಈ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಿತ್ತು. ಫೆಬ್ರವರಿ 28ರ ವರದಿಯಂತೆ, ಪ್ರಕ್ರಿಯೆಯ ಮೊದಲ ಹಂತದಲ್ಲಿ ಒಟ್ಟು ಮತದಾರರ ಪೈಕಿ ಶೇಕಡ 8.3ರಷ್ಟು, ಅಂದರೆ 63.66 ಲಕ್ಷ ಹೆಸರುಗಳನ್ನು ಕೈಬಿಡಲಾಗಿತ್ತು. ಇದರಿಂದ ಒಟ್ಟು ಮತದಾರರ ಸಂಖ್ಯೆ 7.66 ಕೋಟಿಯಿಂದ 7.04 ಕೋಟಿಗೆ ಇಳಿಕೆಯಾಗಿತ್ತು. ಬಳಿಕ ಈ 7.04 ಕೋಟಿ ಮತದಾರರ ಪೈಕಿ 60.06 ಲಕ್ಷ (60,06,675) ಹೆಸರುಗಳನ್ನು ಅನುಮಾನಾಸ್ಪದ ಎಂದು ಪರಿಗಣಿಸಿ ‘ಪರಿಶೀಲನಾ ಹಂತ’ದಲ್ಲಿ ಇರಿಸಲಾಗಿತ್ತು.
ನ್ಯಾಯಾಂಗ ಅಧಿಕಾರಿಗಳ ಕೂಲಂಕಷ ತಪಾಸಣೆಯ ಬಳಿಕ, ಈ 60.06 ಲಕ್ಷ ಮತದಾರರ ಪೈಕಿ 27.16 ಲಕ್ಷ (27,16,393) ಹೆಸರುಗಳನ್ನು ಪಟ್ಟಿಯಿಂದ ಅಂತಿಮವಾಗಿ ಡಿಲೀಟ್ ಮಾಡಲಾಗಿದ್ದು, ಉಳಿದ 32.68 ಲಕ್ಷ (32,68,119) ಮತದಾರರನ್ನು ನ್ಯಾಯಸಮ್ಮತವೆಂದು ಪರಿಗಣಿಸಿ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ, ಎಸ್‌ಐಆರ್ ಪ್ರಕ್ರಿಯೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಅಂತಿಮವಾಗಿ 90,83,345 (ಸುಮಾರು 91 ಲಕ್ಷ) ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ.
ಇದನ್ನು ಓದಿದ್ದೀರಾ? ಮೈಬಣ್ಣದ ತಾರತಮ್ಯಕ್ಕೆ ಆಟದ ಮೂಲಕವೇ ಉತ್ತರ: ಅಂದು ಬಿಳಿಯರನ್ನೇ ಬೆರಗುಗೊಳಿಸಿದ್ದ ಟೆನಿಸ್ ದಿಗ್ಗಜ
This video cannot be played in your browser. Open the video directly
ಈ ಕುರಿತು ಮಾಹಿತಿ ನೀಡಿರುವ ಆಯೋಗದ ಹಿರಿಯ ಅಧಿಕಾರಿಯೊಬ್ಬರು, “ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ಹಂತಹಂತವಾಗಿ ಮಾಡಲಾಗಿದೆ. ಸಂಪೂರ್ಣ ಹೊಣೆಗಾರಿಕೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾವಾರು ಅಂಕಿಅಂಶಗಳನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಪ್ರಕಟಿಸಲಾಗಿದೆ.
ಸುಪ್ರೀಂ ಕೋರ್ಟ್‌ನಿಂದ ಹೊಸದಾಗಿ ಯಾವುದೇ ನಿರ್ದೇಶನ ಬಂದರೆ ಮಾತ್ರ ಪಟ್ಟಿಯಲ್ಲಿ ಬದಲಾವಣೆ ಸಾಧ್ಯ; ಅಲ್ಲಿಯವರೆಗೆ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳ ಪೈಕಿ ಏಪ್ರಿಲ್ 23 ರಂದು 152 ಕ್ಷೇತ್ರಗಳಿಗೆ ಮತ್ತು ಏಪ್ರಿಲ್ 29 ರಂದು 142 ಕ್ಷೇತ್ರಗಳಿಗೆ ಒಟ್ಟು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಮತದಾರರ ಪಟ್ಟಿಯಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ಕೈಬಿಟ್ಟಿರುವುದಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಎಸ್‌ಐಆರ್ ಪ್ರಕ್ರಿಯೆಯ ನಂತರ ಪಟ್ಟಿಯಿಂದ ಕೈಬಿಡಲಾದ ಮತದಾರರ ಪರವಾಗಿ ಟಿಎಂಸಿ ನಿಲ್ಲಲಿದೆ. ಈ ಅನ್ಯಾಯದ ವಿರುದ್ಧ ನ್ಯಾಯಮಂಡಳಿಗಳಲ್ಲಿ ನಮ್ಮ ಕಾನೂನು ಹೋರಾಟ ಮುಂದುವರಿಯಲಿದೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.





