ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ವಿವಾದದ ಬಳಿಕ ನೈತಿಕ ಹೊಣೆ ಹೊತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಟ್ರಸ್ಟ್ ಅಧಿಕೃತವಾಗಿ ಖಚಿತಪಡಿಸಿದೆ.
ಟ್ರಸ್ಟ್‌ನ ಕೋಶಾಧಿಕಾರಿ ಗೋವಿಂದ್ ದೇವ್ ಗಿರಿ ಅವರು ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರ ರಾಜೀನಾಮೆ ಪತ್ರಗಳು ತಲುಪಿರುವುದನ್ನು ದೃಢಪಡಿಸಿದ್ದು, ಜುಲೈ 11 ರಂದು ನಡೆಯಲಿರುವ ಟ್ರಸ್ಟ್‌ನ ಮುಂದಿನ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚಂಪತ್ ರಾಯ್ ರಾಜೀನಾಮೆ ಕೊಟ್ಟಿಲ್ಲ: ರಾಮಮಂದಿರ ಟ್ರಸ್ಟ್‌ನ ‘ವಾಟ್ಸ್ಯಾಪ್’ ಗುಟ್ಟು ಬಿಚ್ಚಿಟ್ಟ ಪೇಜಾವರ ಶ್ರೀ
ಹಾಗೆಯೇ ರಾಮಮಂದಿರದ ಹುಂಡಿ ಹಣ ಹಾಗೂ ಭಕ್ತರು ನೀಡಿದ ಚಿನ್ನ, ಬೆಳ್ಳಿ ಇಟ್ಟಿಗೆಗಳು ಸೇರಿದಂತೆ ಎಲ್ಲಾ ಕಾಣಿಕೆಗಳು ಸುರಕ್ಷಿತವಾಗಿವೆ ಮತ್ತು ಅವುಗಳ ವ್ಯವಸ್ಥಿತ ದಾಖಲೆಗಳಿವೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಭಕ್ತರಿಗೆ ಆಶ್ವಾಸನೆ ನೀಡಿದೆ.
ರಾಮಮಂದಿರ ಲೂಟಿ ಬಹಿರಂಗವಾಗುತ್ತಿದ್ದಂತೆ, ಚಂಪತ್ ರಾಯ್ ಅವರು ತಮ್ಮ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿಗಳು ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಹರಿದಾಡುತ್ತಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಮುಖ ಧರ್ಮದರ್ಶಿಗಳಲ್ಲಿ ಒಬ್ಬರಾದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ “ಈ ನಮ್ಮ ವಾಟ್ಸ್ಯಾಪ್ ಗುಂಪಿನಲ್ಲಿ ತಮ್ಮ ರಾಜೀನಾಮೆ ಕುರಿತಾಗಿ ಚಂಪತ್ ರಾಯ್ ಅವರು ನಮಗೇನೂ ಅಧಿಕೃತವಾಗಿ ತಿಳಿಸಿಲ್ಲ. ಅಂತಹ ಯಾವುದೇ ಸಂದೇಶವನ್ನು ಅವರು ನಮ್ಮೊಂದಿಗೆ ಹಂಚಿಕೊಂಡಿಲ್ಲ” ಎಂದು ಹೇಳುವ ಮೂಲಕ ರಾಜೀನಾಮೆ ವದಂತಿ ಎಂದಿದ್ದರು. ಆದರೆ ಈಗ ಟ್ರಸ್ಟ್ ಸ್ಪಷ್ಟನೆ ನೀಡಿದೆ.
ಮಂದಿರದ ಕಾಣಿಕೆ ಪೆಟ್ಟಿಗೆಗಳಿಂದ ಸುಮಾರು ₹7 ರಿಂದ ₹7.5 ಕೋಟಿಯಷ್ಟು ಹಣ ದುರುಪಯೋಗವಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು. ಎಸ್‌ಐಟಿ ನೀಡಿದ ಪ್ರಾಥಮಿಕ ವರದಿಯ ಶಿಫಾರಸಿನ ಮೇರೆಗೆ, ದೇಣಿಗೆ ಹಣ ಎಣಿಕೆ ಪ್ರಕ್ರಿಯೆಯಲ್ಲಿ ತೊಡಗಿದ್ದ ಸಿಬ್ಬಂದಿ ಸೇರಿದಂತೆ ಒಟ್ಟು 8 ಜನರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಎಂಟು ಆರೋಪಿಗಳಲ್ಲಿ ಚಂಪತ್ ರಾಯ್ ಅವರ ಮಾಜಿ ಚಾಲಕ ಹಾಗೂ ಆಪ್ತನಾದ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಕೂಡ ಸೇರಿದ್ದಾನೆ. ಆದರೆ ಎಫ್‌ಐಆರ್‌ನಲ್ಲಿ ಆರ್‌ಎಸ್‌ಎಸ್ ಪ್ರಮುಖರಾದ ಚಂಪತ್ ರಾಯ್ ಮೊದಲಾದವರ ಹೆಸರು ಕಾಣಿಸದಿರುವುದು ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ.




