ಪ್ರೇಯಸಿ ಮದುವೆಗೆ ನಿರಾಕರಿಸಿದ್ದರಿಂದ ಆಕೆಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯುವಕನೊಬ್ಬ ‘ಒಟ್ಟಿಗೆ ಸಾಯೋಣ’ ಎಂದು ಹೇಳಿ ತನ್ನ ಜೇಬಿನಲ್ಲಿದ್ದ ನಾಡಬಾಂಬ್ ಸ್ಫೋಟಿಸಿಕೊಂಡು ಸಜೀವ ದಹನವಾಗಿರುವ ಘಟನೆ ತುಮಕೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು (ಜೂ.27) ನಡೆದಿದೆ. ಮೃತ ಯುವಕನನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ 30 ವರ್ಷದ ನಾಗೇಂದ್ರ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಆತನ ಪ್ರೇಯಸಿ ರಮ್ಯಾ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ನಾಗೇಂದ್ರ ಹಾಗೂ ರಮ್ಯಾ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ನಾಗೇಂದ್ರ ತನ್ನನ್ನು ಮದುವೆಯಾಗುವಂತೆ ಆಕೆಯ ಮೇಲೆ ತೀವ್ರ ಒತ್ತಡ ಹೇರುತ್ತಿದ್ದ. ಆದರೆ, ರಮ್ಯಾ ಮದುವೆಗೆ ನಿರಾಕರಿಸಿದ್ದಳು. ಇದರಿಂದಾಗಿ ಕಳೆದ ಆರು ತಿಂಗಳಿನಿಂದ ಆಕೆ ನಾಗೇಂದ್ರನಿಂದ ಅಂತರ ಕಾಯ್ದುಕೊಂಡಿದ್ದಲ್ಲದೆ, ಆತನ ಮೊಬೈಲ್ ಸಂಖ್ಯೆಯನ್ನೂ ಬ್ಲಾಕ್ ಮಾಡಿದ್ದಳು ಎಂದು ತಿಳಿದುಬಂದಿದೆ. ರಮ್ಯಾ ಅವರು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಆಪರೇಷನ್ ಥಿಯೇಟರ್ ಸಹಾಯಕ ತಂತ್ರಜ್ಞೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶನಿವಾರ ಬೆಳಿಗ್ಗೆ ಬೆಂಗಳೂರಿನ ಜಯನಗರದ ಭೈರಸಂದ್ರದಲ್ಲಿರುವ ರಮ್ಯಾಳ ಬಾಡಿಗೆ ಮನೆಗೆ ಬಂದ ನಾಗೇಂದ್ರ, ಆಕೆಯೊಂದಿಗೆ ಜಗಳವಾಡಿದ್ದಾನೆ. ತನ್ನೊಂದಿಗೆ ಬರದಿದ್ದರೆ ನಿನ್ನನ್ನು ಕೊಂದು ತಾನೂ ಸಾಯುವುದಾಗಿ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ. ಈ ದೃಶ್ಯವನ್ನು ನೋಡಿದ ಆಕೆಯ ರೂಮ್‌ಮೇಟ್ ನಯನಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ನಾಗೇಂದ್ರ, ಅಂಕೋಲಾಕ್ಕೆ ಹೋಗಲು ಪ್ರವೀಣ್ ಎಂಬುವವರು ಚಲಾಯಿಸುತ್ತಿದ್ದ ಕ್ಯಾಬ್ ಬುಕ್ ಮಾಡಿದ್ದು, ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಮೂವರೂ ಪ್ರಯಾಣ ಆರಂಭಿಸಿದ್ದಾರೆ.
ಇದನ್ನು ಓದಿದ್ದೀರಾ? ಎಂಜಿನ್‌ಗೆ ತುಕ್ಕು, ಮೈಲೇಜ್‌ಗೆ ಕತ್ತರಿ: ಮಾಲೀಕರಿಗೆ ತಲೆನೋವಾದ ‘ಎಥೆನಾಲ್ ಪೆಟ್ರೋಲ್’
ಇತ್ತ ನಯನಾ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ಮೂಲಕ ವಾಹನವನ್ನು ಪತ್ತೆ ಹಚ್ಚಿ, ಚಾಲಕ ಪ್ರವೀಣ್ ಅವರನ್ನು ಸಂಪರ್ಕಿಸಿದ್ದಾರೆ. ವಾಹನವು ಸಿರಾ ತಾಲ್ಲೂಕಿನ ಕಳ್ಳಂಬೆಳ್ಳ ಬಳಿ ಇರುವುದನ್ನು ತಿಳಿದ ಪೊಲೀಸರು, ಇದೊಂದು ಅಪಹರಣದ ಪ್ರಕರಣವಾಗಿರಬಹುದು ಎಂದು ಶಂಕಿಸಿ ಹತ್ತಿರದ ಪೊಲೀಸ್ ಠಾಣೆಯ ಬಳಿ ವಾಹನ ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಆದರೆ, ಚಾಲಕ ಮತ್ತು ಪೊಲೀಸರ ನಡುವಿನ ಸಂಭಾಷಣೆಯನ್ನು ಹಿಂದಿನ ಸೀಟಿನಲ್ಲಿದ್ದುಕೊಂಡು ಕೇಳಿಸಿಕೊಂಡ ನಾಗೇಂದ್ರ ಆಕ್ರೋಶಗೊಂಡಿದ್ದಾನೆ.
ತನ್ನ ವಿರುದ್ಧ ದೂರು ದಾಖಲಾಗಿದೆ ಎಂದು ಸಿಟ್ಟಿಗೆದ್ದ ಆತ, “ಒಟ್ಟಿಗೆ ಸಾಯೋಣ” ಎಂದು ಹೇಳುತ್ತಾ ತನ್ನ ಜೇಬಿನಿಂದ ನಾಡಬಾಂಬ್‌ಗಳನ್ನು ಹೊರತೆಗೆದಿದ್ದಾನೆ. ಬಳಿಕ ಆತ ರಮ್ಯಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಅಪಾಯವನ್ನು ಅರಿತ ಚಾಲಕ ತಕ್ಷಣವೇ ವಾಹನವನ್ನು ನಿಲ್ಲಿಸಿದ್ದು, ರಮ್ಯಾ ಮತ್ತು ಪ್ರವೀಣ್ ಕಾರಿನಿಂದ ಹೊರಬಂದು ಓಡಿಹೋಗಿದ್ದಾರೆ. ಕ್ಷಣಾರ್ಧದಲ್ಲಿಯೇ ಕಾರಿನೊಳಗೆ ಬಾಂಬ್ ಸ್ಫೋಟಗೊಂಡು ವಾಹನವು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ನಾಗೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಗಾಯಗೊಂಡಿರುವ ರಮ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿ ಸ್ಫೋಟಗೊಂಡ ವಸ್ತು ಹಾಗೂ ಘಟನೆಗೆ ಕಾರಣವಾದ ನಿಖರ ಅಂಶಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.




