ನೂತನ ಕುಸ್ತಿ ಫೆಡರೇಷನ್‌ ಅಮಾನತು: ಜಾಟ್ ಆಯಾಮದ ಪರಿಣಾಮಕ್ಕೆ ಬೆಚ್ಚಿತೇ ಬಿಜೆಪಿ?

Date:

ಸಾಕ್ಷಿಯವರ ಹತಾಷೆ, ಭವಿಷ್ಯದ ರೂಪಕದಂತಿತ್ತು. ಜಾಟ್ ಆಯಾಮದ ಲೆಕ್ಕಾಚಾರವಷ್ಟೇ ಮುಖ್ಯವಾಗದೆ, ಸಂತ್ರಸ್ತ ಹೆಣ್ಣುಮಕ್ಕಳ ನಿಜವಾದ ಆತಂಕಕ್ಕೆ ಸರ್ಕಾರ ಉತ್ತರ ಕಂಡುಕೊಳ್ಳಲಿ

ಸರಣಿ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ, ಹಲವು ಅಪರಾಧಗಳ ಹಿನ್ನೆಲೆಯ ಬಿಜೆಪಿ ಸಂಸದ ಬ್ರಿಜ್‌ ಭೂಷಣ್ ಶರಣ್‌ ಸಿಂಗ್‌ ಬಣದ ಸಂಜಯ್ ಸಿಂಗ್ ನೇತೃತ್ವದ ಭಾರತೀಯ ಕುಸ್ತಿ ಒಕ್ಕೂಟವನ್ನು ಕೇಂದ್ರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದೆ.

ಬ್ರಿಜ್ ಭೂಷಣ್ ವಿರುದ್ಧ ಹೋರಾಡುತ್ತಿದ್ದ ಕುಸ್ತಿಪಟುಗಳು ಪ್ರಶಸ್ತಿ ವಾಪಸಾತಿ ಮಾಡುತ್ತಾ, ಕಣ್ಣೀರಿನ ವಿದಾಯವನ್ನು ಹೇಳಲು ಶುರು ಮಾಡಿದ ಬಳಿಕ ಈ ಬೆಳವಣಿಗೆಯಾಗಿದ್ದು ಕೇಂದ್ರ ಬಿಜೆಪಿ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿರುವುದು ನಿಚ್ಚಳ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಡಿಸೆಂಬರ್ 24ರಂದು ಪ್ರಕಟಿಸಿದ ನಿರ್ಧಾರದಲ್ಲಿ ಕೇಂದ್ರ ಕ್ರೀಡಾ ಸಚಿವಾಲಯವು, ವಿಶ್ವ ಕುಸ್ತಿ ಒಕ್ಕೂಟದ ನಿಯಮ ಮತ್ತು ನಿಬಂಧನೆಗಳನ್ನು ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಭಾರತೀಯ ಕುಸ್ತಿ ಒಕ್ಕೂಟವನ್ನು ಅಮಾನತುಗೊಳಿಸಿರುವುದಾಗಿ ಉಲ್ಲೇಖಿಸಿದೆ. ಬ್ರಿಜ್ ಭೂಷಣ್‌ ಮೇಲೆ ಈವರೆಗೆ ಯಾವುದೇ ಕಠಿಣ ಕ್ರಮ ಜರುಗಿಸದೆ, ಲೋಕಸಭೆ ಕಲಾಪಗಳಲ್ಲಿ ಭಾಗಿಯಾಗಲು ಅವಕಾಶ ನೀಡಿರುವ ಬಿಜೆಪಿಯ ಈ ನಡೆ ರಾಜಕೀಯ ಲೆಕ್ಕಾಚಾರಗಳನ್ನು ಹೊಂದಿಲ್ಲದೆ ಇಲ್ಲ.

ಸಾಕ್ಷಿ ಮಲ್ಲಿಕ್ ತಮ್ಮ ಬೂಟುಗಳನ್ನು ಮೇಜಿನ ಮೇಲಿಟ್ಟು ಕಣ್ಣೀರು ಹಾಕುತ್ತಾ ಕುಸ್ತಿಗೆ ವಿದಾಯ ಘೋಷಿಸಿದ್ದರು. ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ವೀರೇಂದ್ರ ಸಿಂಗ್‌ ಅವರು ಪದ್ಮಶ್ರೀ ಪ್ರಶಸ್ತಿಯನ್ನು ವಾಪಸು ನೀಡಿದ್ದರು. ದೇಶದ ಪ್ರಜ್ಞಾವಂತ ನಾಗರಿಕರು ಆಘಾತವನ್ನು ಅನುಭವಿಸುತ್ತಿರುವಾಗ, ಹಿಂದುತ್ವದ ಟ್ರೋಲ್ ಪಡೆ, ಸಾಕ್ಷಿಯವರ ಚಾರಿತ್ರ್ಯ ಹರಣ ಮಾಡುವ ದುಷ್ಕೃತ್ಯಕ್ಕೆ ಇಳಿದಿದ್ದವು. ದೇಶಕ್ಕೆ ಪದಕಗಳನ್ನು ತಂದವರು ಎಂಬುದನ್ನೂ ಗಣನೆಗೆ ತೆಗೆದುಕೊಳ್ಳದೆ, “ಈ ಕುಸ್ತಿಪಟುಗಳು ಕಾಂಗ್ರೆಸ್‌ನವರು” ಎಂಬು ಬಿಂಬಿಸುವ ಯತ್ನ ಮಾಡಲಾಯಿತು.

“ಇಂಡಿಯಾ ಒಕ್ಕೂಟಕ್ಕೆ ಸಾಕ್ಷಿ ಮಲ್ಲಿಕ್ ಸೇರಿದ್ದಾರೆ, I.N.D.I.A.N Wrestler” ಎಂಬಂತಹ ಕೀಳು ಮಟ್ಟದ ಪೋಸ್ಟರ್‌ಗಳನ್ನು ಹರಿಯಬಿಟ್ಟರು.

ಈ ದೇಶದ ಪ್ರತಿ ಪ್ರಜೆಗೂ ಅವರದ್ದೇ ಆದ ರಾಜಕೀಯ ನಿಲುವು ತೆಗೆದುಕೊಳ್ಳುವ ಹಕ್ಕು ಇದೆ. ಆದರೆ ಅನ್ಯಾಯದ ವಿರುದ್ಧ ದನಿ ಎತ್ತಿದ ಮಾತ್ರಕ್ಕೆ “ಈಕೆ ಕಾಂಗ್ರೆಸ್‌ನವಳು, ಹೀಗಾಗಿ ಕೇಂದ್ರ ಸರ್ಕಾರದ ವಿರುದ್ಧ ನಿಂತಿದ್ದಾಳೆ, ಈಕೆಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ” ಎಂದು ಅಪಪ್ರಚಾರ ಮಾಡುವುದು ಶುರುವಾಗಿತ್ತು.

ಲೈಂಗಿಕ ಕಿರುಕುಳದ ಸಂಸದನ ಪರ ನಿಂತಿದ್ದ ಹಿಂದುತ್ವದ ಟ್ರೋಲ್ ಪಡೆ, ಸಂತ್ರಸ್ತ ಹೆಣ್ಣುಮಕ್ಕಳ ಪರ ಹೋರಾಡುತ್ತಾ ಅಸಹಾಯಕಳಾಗಿ ಕಣ್ಣೀರಿಟ್ಟ ಸಾಕ್ಷಿಯವರನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ವಿಕೃತಿಯ ಪರಮಾವಧಿಯಾಗಿತ್ತು. ಆದರೆ ಕುಸ್ತಿಪಟುಗಳ ಹೋರಾಟ ತಂದೊಡ್ಡುವ ಭಾರಿ ನಷ್ಟವನ್ನು ಬಿಜೆಪಿ ಅರಿತಿದೆ ಎಂಬುದು ರಾಜಕೀಯ ವಿಶ್ಲೇಷಕರ ಊಹೆ.

ಹೋರಾಟ ಮಾಡುತ್ತಿದ್ದ ಕುಸ್ತಿಪಟುಗಳ ಹಿಂದೆ ಖಂಡಿತ ಜಾತಿ ಬಲ ಮತ್ತು ಲೆಕ್ಕಾಚಾರವೂ ಇದೆ. ಹೀಗಾಗಿಯೇ ಪಂಚ ರಾಜ್ಯ ಚುನಾವಣೆ ಆಗುವವರೆಗೂ ಕುಸ್ತಿ ಫೆಡರೇಷನ್‌ನ ಚುನಾವಣೆ ನಡೆದಿರಲಿಲ್ಲ. ಒಂದು ವೇಳೆ ಚುನಾವಣಾ ಪೂರ್ವದಲ್ಲಿ ಈ ಬೆಳವಣಿಗೆಯಾಗಿ ಸಾಕ್ಷಿಯವರು ಕಣ್ಣೀರು ಹಾಕಿದ್ದರೆ ರಾಜಸ್ಥಾನದ ಫಲಿತಾಂಶ ಬೇರೆಯೇ ರೀತಿ ಇರುತ್ತಿತ್ತು!

ಏನಿದು ಜಾತಿ ಲೆಕ್ಕಾಚಾರ?

ಬ್ರಿಜ್ ಭೂಷಣ್ ವಿರುದ್ಧ ಹೋರಾಟ ಮಾಡುತ್ತಿರುವ ಕುಸ್ತಿಪಟುಗಳಲ್ಲಿ ಮುಂಚೂಣಿಯಲ್ಲಿರುವವರು ಪ್ರಭಾವಿ ಜಾಟ್ ಸಮುದಾಯಕ್ಕೆ ಸೇರಿದವರು. ಬ್ರಿಜ್ ಭೂಷಣ್ ಶರಣ್ ಸಿಂಗ್ ಜಾಟ್ ಸಮುದಾಯದ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂಬ ಸ್ವರೂಪವನ್ನು ಈ ಪ್ರಕರಣ ಪಡೆದುಕೊಂಡಿತ್ತು. ಲಂಖಿಮ್ ಪುರ್ ಖೇರಿಯಲ್ಲಿ ರೈತರ ಮೇಲೆ ಕೇಂದ್ರದ ನಾಯಕ ಅಜಯ್ ಮಿಶ್ರಾನ ಪುತ್ರ ಕಾರು ಹತ್ತಿಸಿದ ಬಳಿಕ, ಐತಿಹಾಸಿಕ ರೈತ ಹೋರಾಟದ ನಂತರ ಜಾಟರು ಮತ್ತೆ ಬಿಜೆಪಿಗೆ ಸವಾಲಾಗಿದ್ದು ‘ಬ್ರಿಜ್ ಭೂಷಣ್ ಶರಣ್ ಸಿಂಗ್’ ಪ್ರಕರಣದಲ್ಲಿ.

ಇದು ಒಂದು ಹಂತದಲ್ಲಿ ‘ಜಾಟ್ v/s ಠಾಕೂರ್’ ಎಂಬ ಆಯಾಮವನ್ನೂ ಈ ಹೋರಾಟ ಪಡೆದುಕೊಂಡಿತ್ತು. ಠಾಕೂರ್ ಸಮುದಾಯಕ್ಕೆ ಸೇರಿದ ಬ್ರಿಜ್ ಭೂಷಣ್ ಪರವಾಗಿ ‘I Stand With BrijBhushan’ ಕ್ಯಾಂಪೇನ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ನಡೆದಿತ್ತು. ಆದರೆ ಬ್ರಿಜ್ ಭೂಷಣ್ ಮೇಲಿನ ಪ್ರಕರಣ ಗಂಭೀರವಾಗಿದ್ದು, ಸುಲಭವಾಗಿ ಸಮರ್ಥಿಸಲು ಜಾತಿಪ್ರೇಮಿಗಳಿಗೆ ಸಾಧ್ಯವಾಗಿರಲಿಲ್ಲ.

ರಾಜಸ್ತಾನ, ಹರಿಯಾಣ, ಪಂಜಾಬ್, ಉತ್ತರಪ್ರದೇಶ (ಮುಖ್ಯವಾಗಿ ಪಶ್ಚಿಮ ಯೂಪಿ), ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಜಾಟರ ಪ್ರಾಬಲ್ಯವಿದೆ. ಮೂಲತಃ ರೈತ ಸಮುದಾಯವಾದ ಜಾಟರನ್ನು ಸುಲಭವಾಗಿ ಎದುರಿಸುವುದು ಬಿಜೆಪಿಗೆ ಸಾಧ್ಯವಿಲ್ಲ. ನಾಲ್ಕು ರಾಜ್ಯಗಳ ಕನಿಷ್ಠ 40 ಲೋಕಸಭಾ ಕ್ಷೇತ್ರಗಳಲ್ಲಿ, 160 ವಿಧಾನಸಭಾ ಕ್ಷೇತ್ರಗಳಲ್ಲಿ ಜಾಟ್ ಮತದಾರರು ನಿರ್ಣಾಯಕ. ಜಾಟ್ ಹೆಣ್ಣುಮಕ್ಕಳ ಮೇಲಾದ ದೌರ್ಜನ್ಯವೆಂದೇ ಈ ಪ್ರಕರಣ ತಿರುವು ಪಡೆದುಕೊಂಡಿದೆ. ಹೀಗಾಗಿ ರಾಜಕೀಯವಾಗಿ ಹಿನ್ನಡೆಯಾಗುವುದನ್ನು ಬಿಜೆಪಿ ಅರ್ಥಮಾಡಿಕೊಳ್ಳದೆ ಇಲ್ಲ. ಇದು ಜಾಟರ ಮೇಲಾದ ದೌರ್ಜನ್ಯ ಎಂಬ ಸ್ವರೂಪ ಪಡೆದುಕೊಂಡರೆ ಏನಾಗುತ್ತದೆ ಎಂಬುದು ಬಿಜೆಪಿಗೆ ತಿಳಿದಿದೆ.

ಕೇಂದ್ರ ಕ್ರೀಡಾ ಸಚಿವಾಲಯ ಹೊರಡಿಸಿರುವ ಅಧಿಕೃತ ಪ್ರಕಟಣೆಯಲ್ಲಿ, “ವಿಶ್ವ ಕುಸ್ತಿ ಒಕ್ಕೂಟದ ಸಂವಿಧಾನದ 11ನೇ ನಿಯಮದ ಪ್ರಕಾರ ‘ನೋಟಿಸ್‌ಗಳು ಮತ್ತು ಸಭೆಗಳಿಗೆ ಕೋರಂ’ ವಿಧಿಸುವ, ಕಾರ್ಯಾಕಾರಿ ಸಮಿತಿಗಾಗಿ ಕನಿಷ್ಠ ಸೂಚನೆ ಅವಧಿಯು 15 ಸ್ಪಷ್ಟ ದಿನಗಳು ಮತ್ತು ಕೋರಂ ಪ್ರತಿನಿಧಿಗಳ 1/3 ಭಾಗವಾಗಿರಬೇಕು. ತುರ್ತು ಕಾರ್ಯಾಕಾರಿ ಸಮಿತಿ ಸಭೆ ಕೈಗೊಳ್ಳಲು ಕನಿಷ್ಠ ಸೂಚನೆ ಅವಧಿಯು 7 ಸ್ಪಷ್ಟ ದಿನಗಳು ಇರಬೇಕು ಮತ್ತು 1/3 ರಷ್ಟು ಪ್ರತಿನಿಧಿಗಳ ಕೋರಂ ಅಗತ್ಯತೆ ಇದೆ” ಎಂದು ಸಚಿವಾಲಯ ಹೇಳಿರುವುದು ತಾಂತ್ರಿಕ ಕಾರಣವಾದರೂ ನೈತಿಕ ಹೊಣೆಗಾರಿಕೆಯಿಂದ ಹಿಂದೆ ಸರಿಯುವುದು ಸರಿಯಲ್ಲ. ಸಾಕ್ಷಿಯವರ ಹತಾಷೆ, ಭವಿಷ್ಯದ ರೂಪಕದಂತಿತ್ತು. ಜಾಟ್ ಆಯಾಮದ ಲೆಕ್ಕಾಚಾರವಷ್ಟೇ ಮುಖ್ಯವಾಗದೆ, ಸಂತ್ರಸ್ತ ಹೆಣ್ಣುಮಕ್ಕಳ ನಿಜವಾದ ಆತಂಕಕ್ಕೆ ಸರ್ಕಾರ ಉತ್ತರ ಕಂಡುಕೊಳ್ಳಬೇಕಿದೆ.

ಯತಿರಾಜ್‌ ಬ್ಯಾಲಹಳ್ಳಿ
+ posts

ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ಪತ್ರಕರ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪೊಲೀಸ್‌ ಕಸ್ಟಡಿಯಲ್ಲೇ ನಡೆದಿವೆ 275 ಅತ್ಯಾಚಾರ ಪ್ರಕರಣಗಳು: ಎನ್‌ಸಿಆರ್‌ಬಿ ಡೇಟಾ

2017 ರಿಂದ 2022ರವರೆಗೆ 275 'ಪೊಲೀಸ್‌ ಕಸ್ಟಡಿಯಲ್ಲಿ ಅತ್ಯಾಚಾರ' ಪ್ರಕರಣಗಳು ದಾಖಲಾಗಿವೆ...

ಗುಜರಾತ್ | ಭಾರತದ ಅತಿ ಉದ್ದದ ಸೇತುವೆ ‘ಸುದರ್ಶನ್ ಸೇತು’ ಉದ್ಘಾಟಿಸಿದ ಪ್ರಧಾನಿ ಮೋದಿ

ಗುಜರಾತ್‌ನ ದ್ವಾರಕಾ ಜಿಲ್ಲೆಯ ಬೇಟ್ ದ್ವಾರಕಾ ದ್ವೀಪದಿಂದ ಓಖಾ ಪ್ರದೇಶಕ್ಕೆ ಸಂಪರ್ಕಿಸುವ,...

ಲೋಕಸಭಾ ಚುನಾವಣೆ | ಮುಂದಿನ ವಾರ ಬಿಜೆಪಿ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ವರದಿ

ಮುಂದಿನ ತಿಂಗಳು ಚುನಾವಣಾ ಆಯೋಗದಿಂದ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಗೂ ಮುನ್ನವೇ...

ಆಂಧ್ರ ಪ್ರದೇಶ | ಟಿಡಿಪಿ-ಜನಸೇನಾ ಮೈತ್ರಿ: 24 ಕ್ಷೇತ್ರ ಪವನ್‌ ಕಲ್ಯಾಣ್‌ಗೆ ಬಿಟ್ಟುಕೊಟ್ಟ ಚಂದ್ರಬಾಬು ನಾಯ್ಡು

ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೇ ನಡೆಯಲಿರುವ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತೆಲುಗು ದೇಶಂ...