ಜಿಲ್ಲೆಯಲ್ಲಿ ಗಣೇಶ ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಲು ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 2,570 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, 48 ಸ್ಥಳಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ 14 ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ತಿಳಿಸಿದ್ದಾರೆ.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಸಿಂಧನೂರು ನಗರದ ಏಳುರಾಗಿ ಕ್ಯಾಂಪ್, 3 ನೇ ಮೈಲ್ ಕ್ಯಾಂಪ್, ಪಿಡಬ್ಲ್ಯುಡಿ ಹಾಗೂ ಲಕ್ಷ್ಮೀ ಕ್ಯಾಂಪ್, ಸಿಂಧನೂರು ಗ್ರಾಮೀಣದ ಗೋರೆಬಾಳ ಕ್ಯಾಂಪ್, ತುರ್ವಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಹತ್ತಿಗುಡ್ಡ, ಎಲೆಕೂಡ್ಲಿಗಿ , ಗುಂಡಾ ಗ್ರಾಮ, ಬಳಗಾನೂರು ಠಾಣೆಯ ಉದ್ಭಾಳ, ತಿಮ್ಮಾಪುರು, ಸಿರವಾರ ಠಾಣಾ ವ್ಯಾಪ್ತಿಯ ಕಡದಿನ್ನಿ, ಹೊಕ್ರಾಣಿ, ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಹದ್ದಿನಾಳ, ಸುಂಕೇಶ್ವರಹಾಳ ಹಾಗೂ ಜಾಲಹಳ್ಳಿ ಠಾಣೆಯ ಊಟಿ ಗ್ರಾಮದಲ್ಲಿ ಗಣೇಶ ಪ್ರತಿಷ್ಟಾಪನೆ ಆಚರಣೆ ನಿಷೇಧಿಸಲಾಗಿದೆ ಎಂದರು.
148 ಗಣೇಶ ಹಬ್ಬದ ಶಾಂತಿ ಸಭೆಗಳನ್ನು ನಡೆಸಲಾಗಿದೆ. ಎಸ್‌ಪಿ, ಹೆಚ್ಚುವರಿ ಎಸ್‌ಇ ಸೇರಿದಂತೆ ನಾಲ್ಕು ಜನ ಡಿವೈಎಸ್‌ಪಿ, 15 ಜನ ಸಿಪಿಐ, 31 ಜನ ಪಿಎಸ್‌ಐ, 122 ಎಎಸ್‌ಐ, 670 ಮುಖ್ಯಪೇದೆ, ಪೇದೆ, 500 ಜನ ಗೃಹ ರಕ್ಷಕದಳ, 10 ಸಶಸ್ತ್ರ ಮೀಸಲು ತುಕಡಿ, 6 ಕೆಎಸ್‌ಆರ್‌ಪಿ ತುಕಡಿ, ಒಂದು ಎಎಸ್‌ಸಿ ತಂಡಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ
ಕಾನೂನು ಸುವ್ಯವಸ್ಥೆ ನಿಯಂತ್ರಿಸಲು 1557 ರೌಡಿಗಳಲ್ಲಿ 1474 ರೌಡಿಗಳನ್ನು ಮುಂಜಾಕ್ರಮ ಕ್ರಮ ಕೈಗೊಳ್ಳಲಾಗಿದೆ. 1124 ಜನರಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 23 ಜನರನು ಗಡಿಪಾರು ಮಾಡಲಾಗಿದ್ದು ಇನ್ನೂ ಐದು ಜನ ಗಡಿಪಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರೂಢಿಗತ ರೌಡಿಗಳನ್ನು ಒಂದು ತಿಂಗಳ ಜೈಲಿಗೆ ಕಳುಹಿಸಲಾಗಿದೆ. ಜಿಲ್ಲೆಯಾಧ್ಯಂತ 16 ಸಾವಿರಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ನಗರದಲ್ಲಿ 180 ಸಿಸಿಟಿವಿಗಳನ್ನು ಮಹಾನಗರ ಪಾಲಿಕೆಯಿಂದ ಪಡೆಯಲಾಗಿದೆ. ಬೇರೆ ಬೇರೆ ಇಲಾಖೆ ಅಧಿಕಾರಿಗಳನ್ನು ಸಹ ಮೇಲ್ವಿಚಾರಣೆಗೆ ನಿಯುಕ್ತಿಗೊಳಿಸಲಾಗಿದೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಮಾಹಿತಿ ಒದಗಿಸಲು ಸೂಚಿಸಲಾಗಿದೆ ಎಂದರು.
ರಾಯಚೂರು ನಗರದಲ್ಲಿ 361 , ರಾಯಚೂರು ತಾಲೂಕಿನ 155, ಸಿಂಧನೂರ ನಗರದಲ್ಲಿ 194, ಗ್ರಾಮೀಣ ಪ್ರದೇಶದಲ್ಲಿ 196 ಮಾನ್ವಿಯಲ್ಲಿ 217, ಸಿರವಾರದಲ್ಲಿ 87, ದೇವದುರ್ಗದಲ್ಲಿ 154, ಮಸ್ಕಿಯಲ್ಲಿ 107, ಲಿಂಗಸೂಗೂರುನಲ್ಲಿ 119 ಸೇರಿದಂತೆ ಹಟ್ಟಿ, ಮುದುಗಲ್ ಒಳಗೊಂಡಂತೆ ಅನೇಕ ಕಡೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆ ನೊಂದಣಿಯಾಗಿದೆ ಎಂದರು.
ಗಣೇಶ ಮೂರ್ತಿ ಪ್ರತಿಷ್ಟಾಪಿಸುವ ಮಂಡಳಿಗಳು ಸೂಕ್ತ ಮುನ್ನಚ್ಚರಿಕಾ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ. ವಿದ್ಯುತ್, ಬೆಂಕಿ ಅವಘಡಗಳಾದಂತೆ ಎಚ್ಚರವಹಿಸಬೇಕು. ರಸ್ತೆಯಲ್ಲಿ ಮೂರ್ತಿಗಳನ್ನುಪ್ರತಿಷ್ಟಾಪಿಸಬಾರದು. ಸಾರ್ವಜನಿಕರಿಂದ ದೂರ ಬಂದಲ್ಲಿ ಮಂಡಳಿಗಳ ವಿರುದ್ದ ಕ್ರಮಕೈಗೊಳ್ಳುವದಾಗಿ ಹೇಳಿದರು. ಗಣೇಶ ವಿಸರ್ಜನೆ ಸಮಯ ಪಾಲನೆ ಮಾಡಬೇಕು. ರಾತ್ರಿ 10:30 ರೊಳಗೆ ಮೂರ್ತಿ ವಿಸರ್ಜನೆ ಮಾಡಲು ಗಣೇಶ ಮಂಡಳಿಗಳ ಸಹಕರಿಸಬೇಕಿದೆ. ಇಡಿ ರಾತ್ರಿ ವಿಸರ್ಜನೆಯಿಂದ ತೊಂದರೆಯಾಗುತ್ತಿರುವದನ್ನು ತಡೆಯಲು ಎಲ್ಲರು ಸಹಕಾರ ನೀಡಬೇಕೆಂದರು.
ಗಣೇಶ ಹಬ್ಬದ ಆಚರಣೆಯಲ್ಲಿ ಬೇರೆ ಧರ್ಮದವರೂ ಸಹ ಆಚರಿಸುತ್ತಿರುವುದು ಸೌಹಾರ್ದತೆಗೆ ಸಾಕ್ಷಿಯಾಗಿದೆ. ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ಎರಡು ಕಡೆ, ಲಿಂಗಸೂಗೂರಿನಲ್ಲಿ ಅಂಜುಮನ್ ಕಮಿಟಿ, ಇಡಪನೂರು ಠಾಣಾ ವ್ಯಾಪ್ತಿಯಲ್ಲಿ ಕ್ರೈಸ್ತ ಸಮಾಜದವರು ಮೂರ್ತಿ ಪ್ರತಿಷ್ಟಾಪಿಸಿ ಪೂಜಿಸುತ್ತಿರುವದು ಮಾದರಿಯಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ತಿಂಗಳೊಳಗೆ ಮೂವರು ದಲಿತರ ಹತ್ಯೆ: ದಲಿತಪರ ಹೋರಾಟಗಾರರ ಕಳವಳ
ಸಿರವಾರ ತಾಲೂಕಿನ ಅತ್ತನೂರು ಗ್ರಾಮದಲ್ಲಿ ಬೆಳಗಿನ ಜಾವ ಗಣೇಶ ಮೂರ್ತಿ ತಂದಿದ್ದು, ವಿದ್ಯುತ್ ತಂತಿ ಮೂರ್ತಿ ತಗುಲಿ ಮೂರ್ತಿ ಬಿದ್ದು ಯುವಕನೋರ್ವ ಮೃತಪಟ್ಟಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಕೋಮು ಭಾವನೆ ಕೆರಳಿ ಶಾಂತಿ ಭಂಗ ಉಂಟು ಮಾಡುವವರ ಮೇಲೆ ನಿಗಾ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೋಮು ಉದ್ರೇಕಗೊಳಿಸುವ ಸಂದೇಶ ರವಾನಿಸಿದರೆ ಕಾನೂನು ಕ್ರಮ ಕೈಗೊಳ್ಳುವದಾಗಿ ಎಚ್ಚರಿಸಿದರು.





