ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಇಂದು (ಆ.31) ಬೆಳಗ್ಗೆ ಶಂಕಿತ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಗ್ರಾಮಸ್ಥರು ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯಲ್ಲಿ 35 ವರ್ಷದ ಲಮ್ತಿಂಥಾಂಗ್ ಮತ್ತು ನೈಚಿನ್ ಮೃತಪಟ್ಟಿದ್ದಾರೆ. 65 ವರ್ಷದ ಸೀಲೂನ್ ಎಂಬ ಗ್ರಾಮಸ್ಥನಿಗೆ ಗುಂಡೇಟು ತಗುಲಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯ ಟಿ ವೈಚಾಂಗ್ ಉಪವಿಭಾಗದ ವ್ಯಾಪ್ತಿಯಲ್ಲಿರುವ ಕುಕಿ ಸಮುದಾಯದ ಜನರು ವಾಸಿಸುವ ಎನ್ ಟೀಖಾಂಗ್ ಗ್ರಾಮದಲ್ಲಿ ಬೆಳಗ್ಗೆ 9.30ರ ಸುಮಾರಿಗೆ ಈ ದಾಳಿ ನಡೆದಿದೆ. ಸುಧಾರಿತ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಶಸ್ತ್ರಧಾರಿಗಳು ಗ್ರಾಮವನ್ನು ಗುರಿಯಾಗಿಸಿಕೊಂಡು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಹಲವು ಮನೆಗಳಿಗೂ ಬೆಂಕಿ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ದಾಳಿ ಮುಂದುವರಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿದ್ದ ಹಲವು ನಿವಾಸಿಗಳು ಜೀವ ಉಳಿಸಿಕೊಳ್ಳಲು ಮನೆಗಳನ್ನು ತೊರೆದು ಸಮೀಪದ ಅರಣ್ಯ ಪ್ರದೇಶಗಳಿಗೆ ತೆರಳಿ ಆಶ್ರಯ ಪಡೆದಿದ್ದಾರೆ. ಇದೇ ವೇಳೆ, ಎರಡು ಸಮುದಾಯಗಳಿಗೆ ಸೇರಿದ ಶಸ್ತ್ರಸಜ್ಜಿತ ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿವೆ.
ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂಸಾಚಾರ ಮುಂದುವರಿದಿದ್ದು, ಆಗಸ್ಟ್ 27ರಂದು ಶಂಕಿತ ಉಗ್ರರು ವಾಹನದ ಮೇಲೆ ನಡೆಸಿದ ಹೊಂಚುದಾಳಿ (ambush)ಯಲ್ಲಿ ನಾಲ್ವರು ನಾಗಾ ಸಮುದಾಯದ ನಾಗರಿಕರು ಮೃತಪಟ್ಟಿದ್ದರು. ಮತ್ತೋರ್ವರು ಗಾಯಗೊಂಡಿದ್ದು, ಇನ್ನೊಬ್ಬರು ನಾಪತ್ತೆಯಾಗಿದ್ದರು. ಮಣಿಪುರದಲ್ಲಿ ಫೆಬ್ರವರಿಯಲ್ಲಿ ನಾಗಾ ಮತ್ತು ಕುಕಿ ಸಮುದಾಯಗಳ ನಡುವೆ ಹಿಂಸಾಚಾರ ಆರಂಭವಾದ ಬಳಿಕ, ಪ್ರತ್ಯೇಕ ಗುಂಡಿನ ದಾಳಿ ಹಾಗೂ ಸಂಘರ್ಷದ ಘಟನೆಗಳಲ್ಲಿ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಹಲವು ಮನೆಗಳಿಗೂ ಬೆಂಕಿ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ನಡುವೆ, ಮಣಿಪುರದ ಕಕ್ಚಿಂಗ್ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ರಾಷ್ಟ್ರೀಯ ನಾಗರಿಕರ ನೋಂದಣಿ (NRC)ಯನ್ನು ನವೀಕರಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯೂ ಹಿಂಸಾಚಾರಕ್ಕೆ ತಿರುಗಿದೆ. ಜನಗಣತಿ ಪ್ರಕ್ರಿಯೆ ಆರಂಭಿಸುವ ಮುನ್ನ ಎನ್ಆರ್ಸಿಗೆ ಸಂಬಂಧಿಸಿದಂತೆ ಸ್ಪಷ್ಟ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರರು ಟಾರ್ಚ್ಲೈಟ್ ಮೆರವಣಿಗೆ ನಡೆಸಿದ್ದರು. ಈ ವೇಳೆ ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯು ಸಿಡಿಸಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: 2023ರಿಂದ ಈವರೆಗೆ 58,800ಕ್ಕೂ ಅಧಿಕ ಮಂದಿ ಸ್ಥಳಾಂತರ
2023ರಲ್ಲಿ ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ ಮುಖ್ಯವಾಗಿ ಮೈತೇಯಿ ಮತ್ತು ಕುಕಿ–ಝೋ ಸಮುದಾಯಗಳ ನಡುವಿನ ಸಂಘರ್ಷವಾಗಿತ್ತು. ಇದರ ತಕ್ಷಣದ ಕಾರಣ, ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ST) ಸ್ಥಾನಮಾನ ನೀಡುವ ಬೇಡಿಕೆಯನ್ನು ಪರಿಗಣಿಸುವಂತೆ ಮಣಿಪುರ ಹೈಕೋರ್ಟ್ ನೀಡಿದ್ದ ಸೂಚನೆ. ಇದನ್ನು ಕುಕಿ, ನಾಗಾ ಸೇರಿದಂತೆ ಬುಡಕಟ್ಟು ಸಮುದಾಯಗಳು ವಿರೋಧಿಸಿದವು. 2023ರ ಮೇ 3ರಂದು ಈ ಬೇಡಿಕೆ ವಿರೋಧಿಸಿ ನಡೆದ ‘Tribal Solidarity March’ ಬಳಿಕ ಘರ್ಷಣೆ ಭುಗಿಲೆದ್ದು, ಎರಡೂ ಸಮುದಾಯಗಳ ನಡುವೆ ವ್ಯಾಪಕ ಹಿಂಸಾಚಾರ ನಡೆಯಿತು.
ಆದರೆ ಸಂಘರ್ಷಕ್ಕೆ ST ವಿಚಾರವೊಂದೇ ಕಾರಣವಲ್ಲ. ಭೂಮಿ ಮತ್ತು ಅರಣ್ಯದ ಹಕ್ಕು, ಕಣಿವೆ-ಬೆಟ್ಟ ಪ್ರದೇಶಗಳ ನಡುವಿನ ಅಭಿವೃದ್ಧಿ ಅಸಮಾನತೆ, ರಾಜಕೀಯ ಪ್ರಾಬಲ್ಯ, ಅಕ್ರಮ ವಲಸೆ ಮತ್ತು ಮ್ಯಾನ್ಮಾರ್ ಗಡಿಯಿಂದ ಬಂದವರ ವಿಚಾರ ಸೇರಿದಂತೆ ಹಲವು ವರ್ಷಗಳಿಂದ ಇದ್ದ ಅಸಮಾಧಾನಗಳು ಸಂಘರ್ಷಕ್ಕೆ ಕಾರಣವಾಗಿದ್ದವು. ಹಿಂಸಾಚಾರದಲ್ಲಿ ನೂರಾರು ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ಮನೆಗಳನ್ನು ತೊರೆದು ನಿರಾಶ್ರಿತರಾಗಿದ್ದಾರೆ. ನಾಗಾ-ಕುಕಿ ನಡುವಿನ ಹಳೆಯ ಭೂಮಿ ಮತ್ತು ಪ್ರದೇಶದ ಹಕ್ಕಿನ ವಿವಾದಗಳೂ ಮಣಿಪುರದ ಇಂದಿನ ಜನಾಂಗೀಯ ಸಂಘರ್ಷದ ಸಂಕೀರ್ಣ ಹಿನ್ನೆಲೆಯ ಭಾಗವಾಗಿವೆ.




