‘ಕಲ್ಯಾಣ ಕೆಡುವ ಹಾದಿ’: ಕರ್ನಾಟಕದ ಆಡಳಿತ ವ್ಯವಸ್ಥೆಯ ಅಧಃಪತನದ ಕಾಲಾನುಕ್ರಮ ಚಿತ್ರಣ

Date:

ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್ ಅವರ ಜೀವನ ಕಥನ ‘Fall from Grace: Memoirs of a Rebel IAS Officer’ ಪುಸ್ತಕದ ಕನ್ನಡ ಅನುವಾದ ‘ಕಲ್ಯಾಣ ಕೆಡುವ ಹಾದಿ’ಯ ಬಿಡುಗಡೆ ಕಾರ್ಯಕ್ರಮ ಅಕ್ಟೋಬರ್ 2ರಂದು ಇನ್‌ಫೆಂಟ್ರಿ ರಸ್ತೆಯಲ್ಲಿರುವ ಐಎಎಸ್ ಅಧಿಕಾರಿಗಳ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ. ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ವಿ. ಗೋಪಾಲಗೌಡರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ.

ಇದು ‘ಬಾಲು’ ಅವರ ಆತ್ಮಕತೆಯಷ್ಟೇ ಅಲ್ಲ. ಜೊತೆಗೆ, ಅವರು 1965ರಲ್ಲಿ ಐಎಎಸ್ ಅಧಿಕಾರಿಯಾಗಿ ಕರ್ನಾಟಕ ಸರ್ಕಾರದ ಸೇವೆಗೆ ಸೇರಿದಂದಿನಿಂದ ಇಂದಿನವರೆಗೆ ಅವರು ಕಂಡ, ಜೊತೆಯಲ್ಲಿ ಕೆಲಸ ಮಾಡಿದ ಕರ್ನಾಟಕದ ಹತ್ತು ಮಂದಿ ಮುಖ್ಯಮಂತ್ರಿಗಳು ಹಾಗೂ 27 ಮಂದಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕಾರ್ಯವೈಖರಿ, ಧೋರಣೆ, ಅದರ ನೇರ ಫಲವಾಗಿ ರಾಜ್ಯದ ಆಡಳಿತ ವ್ಯವಸ್ಥೆಯು ಅಂದಿನ ಗಣನೀಯ ಮಟ್ಟದ ಉತ್ತಮ ಸ್ಥಿತಿಯಿಂದ ಇಂದು ತಲುಪಿರುವ ಪರಮ ಅಧೋಗತಿ… ಇವೆಲ್ಲವುಗಳ ಅತ್ಯಂತ ಒಳವಲಯದ ನಿಖರವಾದ ಚಿತ್ರಣವೂ ಹೌದು. ಅವರ ಅಪಾರವಾದ ಓದಿನ ಜ್ಞಾನ ಮತ್ತು ಅದನ್ನು ಸಂದರ್ಭಕ್ಕೆ ತಕ್ಕನಾಗಿ ಉಲ್ಲೇಖಿಸುವ ನೆನಪಿನ ಶಕ್ತಿ, ಇವು ಪ್ರತೀ ಪುಟದಲ್ಲೂ ಪುಷ್ಕಳವಾಗಿರುವ ಉಲ್ಲೇಖಗಳಲ್ಲಿ ವ್ಯಕ್ತವಾಗುತ್ತವೆ.

ವಿ.ಬಾಲಸುಬ್ರಮಣಿಯನ್ ಬಗ್ಗೆ ಸಾರ್ವಜನಿಕರಿಗೆ ಸಾಕಷ್ಟು ಪರಿಚಯವಿದೆ. ಸರ್ಕಾರಿ ಭೂಮಿ ಕಬಳಿಕೆ ಪತ್ತೆ ಹಚ್ಚಲು ರಚನೆಯಾದ ಎರಡು ಸಮಿತಿಗಳ ಪೈಕಿ ಜೆಡಿಎಸ್ ಶಾಸಕ ಎ.ಟಿ ರಾಮಸ್ವಾಮಿ ಅಧ್ಯಕ್ಷತೆಯಲ್ಲಿ 2005ರಲ್ಲಿ ನೇಮಕವಾಗಿದ್ದ ಜಂಟಿ ಸದನ ಸಮಿತಿಗೆ ಸಲಹೆಗಾರರಾಗಿ, ನಂತರ ಇಡೀ ರಾಜ್ಯ ವ್ಯಾಪ್ತಿಯಲ್ಲಿನ ಭೂ ಕಬಳಿಕೆಯನ್ನು ಪತ್ತೆ ಹಚ್ಚಲು ಯಡಿಯೂರಪ್ಪ ಸರ್ಕಾರ ನೇಮಿಸಿದ್ದ ಕಾರ್ಯಪಡೆಯ ಅಧ್ಯಕ್ಷರಾಗಿ ಬಹುದೊಡ್ಡ ಕೆಲಸ ಮಾಡಿದ ಕಾರಣಕ್ಕೆ ‘ಸದನದ ಹಕ್ಕುಚ್ಯುತಿ’ಯ ಆರೋಪವನ್ನು ಹೊತ್ತರೂ ಜಗ್ಗದೆ ದಿಟ್ಟವಾಗಿ ನಿಂತು, ಆರೋಪ ಮಾಡಿದ ಸರ್ಕಾರವನ್ನೇ ಹಿಮ್ಮೆಟ್ಟಿಸಿದವರು ಅವರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ತಮ್ಮ 47 ವರ್ಷಗಳ ಸುದೀರ್ಘ ಸೇವಾ ಅವಧಿಯುದ್ದಕ್ಕೂ ಘಟಿಸಿದ ಅಸಂಖ್ಯಾತ ಸಂಗತಿಗಳು ಸುಮಾರು 600 ಪುಟಗಳ ಈ ಪುಸ್ತಕದುದ್ದಕ್ಕೂ ಹರಡಿವೆ. ತಿಳಿ ಹಾಸ್ಯ, ಲಘು ವ್ಯಂಗ್ಯದ ಆಕರ್ಷಕ ಶೈಲಿಯಲ್ಲಿ ವರ್ಣಿತವಾಗಿರುವ ಸ್ವಾರಸ್ಯಕರ ಘಟನೆಗಳಲ್ಲದೆ ಗಂಭೀರವಾದ ಪ್ರಕರಣಗಳೂ ವಿವರಣೆಗಳೂ ಇಲ್ಲಿವೆ. ಕನ್ನಡಕ್ಕೆ ಅನುವಾದಿಸಿರುವ ಎನ್. ಸಂಧ್ಯಾರಾಣಿಯವರು ಮೂಲಕ್ಕೆ ಚ್ಯುತಿ ಬರದಂತೆ, ಸಾಧ್ಯವಾದಷ್ಟು ಅದರ ಶೈಲಿಯನ್ನೂ ಕನ್ನಡದಲ್ಲಿ ಉಳಿಸಿಕೊಳ್ಳಲು ಶ್ರಮಿಸಿದ್ದಾರೆ. ಲಡಾಯಿ ಪ್ರಕಾಶನ ಇದನ್ನು ಪ್ರಕಟಿಸಿದೆ.

ಹಿಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರನ್ನು ಬಹುತೇಕ ಕಾನೂನುಬದ್ಧವಾಗಿ ಆಡಳಿತ ನಡೆಸಿದವರು ಹಾಗೂ ಅಧಿಕಾರಿಗಳ ಜೊತೆ ಸಜ್ಜನಿಕೆಯಿಂದ ವರ್ತಿಸುತ್ತಿದ್ದವರು ಎಂದು (ಅಂಥ ಇನ್ನೊಬ್ಬ ಸಿಎಂ ಎಂದರೆ ರಾಮಕೃಷ್ಣ ಹೆಗಡೆ ಎನ್ನುತ್ತಾರೆ) ಮೆಚ್ಚಿಕೊಂಡರೆ, ದೇವರಾಜ ಅರಸರನ್ನು ಬಹಳ ದಿಟ್ಟ ಆಡಳಿತಗಾರರೆಂದು ಪರಿಗಣಿಸುತ್ತಾರೆ. ಕೇವಲ ಲಿಂಗಾಯತ ಮತ್ತು ಒಕ್ಕಲಿಗ ಬಲಾಢ್ಯ ವರ್ಗಗಳಿಗೆ ಮಾತ್ರ ಸೀಮಿತವಾಗಿದ್ದ ರಾಜ್ಯದ ರಾಜಕೀಯ ಅಧಿಕಾರವನ್ನು ಅರಸು ಅವರು ತುಂಬಾ ಹಿಂದುಳಿದ ವರ್ಗಗಳ ಸಾಮಾನ್ಯ ವ್ಯಕ್ತಿಗಳಿಗೂ ಎಟಕುವಂತೆ ಮಾಡಿದವರು, ಬಡಜನರ ಏಳ್ಗೆಗಾಗಿ ಕಾನೂನು ವ್ಯಾಪ್ತಿಯಲ್ಲೇ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದ ವೇಳೆಯಲ್ಲೇ ಲಿಂಗಾಯತ, ಒಕ್ಕಲಿಗ ಸಮುದಾಯದ ನಾಯಕರನ್ನು ಸಹ ಎದುರು ಹಾಕಿಕೊಳ್ಳದೆ ಜೊತೆಗಿಟ್ಟುಕೊಂಡು ಆಡಳಿತ ನಡೆಸಿದ ಮುತ್ಸದ್ದಿ ಎಂಬುದನ್ನು ಅನೇಕ ದೃಷ್ಟಾಂತಗಳ ಮೂಲಕ ನಿರೂಪಿಸುತ್ತಾರೆ.

ಹಾಗೆಯೇ ಗುಂಡೂರಾವ್, ಬಂಗಾರಪ್ಪ, ಜೆ.ಎಚ್ ಪಟೇಲ್ ಮತ್ತು ಎಸ್.ಎಂ ಕೃಷ್ಣ ಇವರುಗಳ ಆಳ್ವಿಕೆಯ ಬಗ್ಗೆ ಹಲವಾರು ಪ್ರಕರಣಗಳ ಉದಾಹರಣೆಗಳ ಸಹಿತ ಸಾಕಷ್ಟು ಕಟುವಾಗಿ ವಿಮರ್ಶೆ ಮಾಡಿದ್ದಾರೆ. ಎಚ್.ಡಿ ಕುಮಾರಸ್ವಾಮಿ ಅವರನ್ನೂ, ‘ಪ್ರಾಮಾಣಿಕ’ ಎನ್ನಿಸಿಕೊಳ್ಳುವ ಸಿದ್ಧರಾಮಯ್ಯನವರನ್ನು ಸಹ ‘ಯಥೋಚಿತವಾಗಿ’ ವಿಮರ್ಶೆಗೆ ಗುರಿಪಡಿಸಿದ್ದಾರೆ. ಸಾಂದರ್ಭಿಕವಾಗಿ ನ್ಯಾಯಾಲಯಗಳ ನಡವಳಿಕೆಗಳನ್ನು ಸಹ ವಿಮರ್ಶಿಸದೆ ಬಿಟ್ಟಿಲ್ಲ. ಅದೇ ವೇಳೆಯಲ್ಲಿ, ಅನೇಕ ರಾಜಕಾರಣಿಗಳ ಬಗ್ಗೆ, ಹಿರಿಯ-ಕಿರಿಯ ಅಧಿಕಾರಿಗಳ ಬಗ್ಗೆ ಉದಾಹರಣೆಗಳ ಸಹಿತ ಒಳ್ಳೆಯ ಮಾತುಗಳನ್ನೂ ಆಡಿದ್ದಾರೆ.

ಇದನ್ನು ಓದಿದ್ದೀರಾ?: ದೇವರಾಜ ಅರಸು- ಕರ್ನಾಟಕದ ಒಂದು ವಿಶಿಷ್ಟ ಗ್ರೀಕ್ ದುರಂತಗಾಥೆ

ಕಾನೂನಿನ, ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತ ಕಾರ್ಯ ನಿರ್ವಹಣೆಗೆ ಅತ್ಯಂತ ಮಹತ್ವ ನೀಡುವ ಈ ಕೃತಿ, ರಾಜಕಾರಣಿಗಳ ಹಾಗೂ ಉನ್ನತ ಅಧಿಕಾರಿಗಳ ಅಲ್ಪತನಗಳನ್ನು ಪುಟಪುಟಗಳಲ್ಲೂ ಬಿಚ್ಚಿಡುತ್ತಾ ಹೋಗಿದೆ. ‘ರಾಜಕೀಯ ಇಚ್ಛಾಶಕ್ತಿ ಕೊರತೆ’ ಮಾತ್ರವೇ ಅಲ್ಲ, ‘ಆಡಳಿತಾತ್ಮಕ ಇಚ್ಛಾಶಕ್ತಿಯ ಕೊರತೆ’ ಕೂಡ ಸರ್ಕಾರಿ ಆಡಳಿತ ವ್ಯವಸ್ಥೆಯ ಅಧಃಪತನಕ್ಕೆ ಕಾರಣವಾಗುತ್ತದೆ, ಆಗಿದೆ ಎನ್ನುತ್ತಾರೆ ಬಾಲು. ಸಂವಿಧಾನದ 310 ಮತ್ತು 311ನೇ ಕಲಮಿನಡಿ ಅಪಾರ ರಕ್ಷಣೆ ಹೊಂದಿರುವ ಐಎಎಸ್‌ನಂತಹ ಉನ್ನತ ಅಧಿಕಾರಶಾಹಿ ವರ್ಗವು ರಾಜಕಾರಣಿಗಳ ಎಲ್ಲ ಕಾನೂನುಬಾಹಿರ ಕೃತ್ಯಗಳಲ್ಲಿ ಶಾಮೀಲಾಗದೆ, ಕಾನೂನು ವ್ಯಾಪ್ತಿಯಲ್ಲೇ ಸಾರ್ವಜನಿಕ ಆಡಳಿತವನ್ನು ಬಹಳಷ್ಟು ಸ್ವಚ್ಛವಾಗಿಡಲು ಸಾಧ್ಯವಿದೆ, ತುಳಿತಕ್ಕೊಳಗಾದ ಜನಸಮುದಾಯಗಳಿಗೆ ನೆರವಾಗಲು ಸಾಧ್ಯವಿದೆ. ಹಾಗಿದ್ದೂ ಅವರು ರಾಜಕಾರಣಿಗಳ ಮತ್ತು ಪಟ್ಟಭದ್ರ ಶಕ್ತಿಗಳ ಸಾರ್ವಜನಿಕ ಲೂಟಿಯಲ್ಲಿ ಶಾಮೀಲಾಗಲು ಅವರ ಬೆನ್ನೆಲುಬಿಲ್ಲದ ವರ್ತನೆಯೇ ಮುಖ್ಯ ಕಾರಣ ಎಂದು ವಿಶ್ಲೇಷಿಸುತ್ತಾರೆ.

ಬಹುಮಟ್ಟಿಗೆ ಒಳ್ಳೆಯ ಆಡಳಿತಕ್ಕೆ ಹೆಸರಾಗಿದ್ದ ಕರ್ನಾಟಕವು ಗುರುತಿಸಲಾಗದಷ್ಟು ಅಧಃಪತನ ಹೊಂದಿ, ಈಚಿನ ನಾಲ್ಕೈದು ವರ್ಷಗಳಲ್ಲಂತೂ ಎಲ್ಲ ತರಹದ ಅಕ್ರಮಗಳ-ಅಕ್ರಮಿಗಳ ಆಡುಂಬೊಲವಾಗಿರುವುದನ್ನು ಬಾಲು ಸೂಕ್ಷ್ಮವಾಗಿ ಗುರುತಿಸುತ್ತಾರೆ. ದೌರ್ಜನ್ಯ ದುರಾಡಳಿತಗಳಿಗೆ ಕುಖ್ಯಾತಿಯಾಗಿರುವ ಉತ್ತರ ಪ್ರದೇಶದಂತೆ ಕರ್ನಾಟಕವೂ ರಕ್ತದಾಹಿ ರಾಜಕಾರಣಕ್ಕೆ ದಕ್ಷಿಣ ಭಾರತದ ಮಾದರಿ ಎನ್ನಿಸಿದ್ದನ್ನು; ನಾಲ್ಕು ವರ್ಷಗಳ ಆಳ್ವಿಕೆಯಲ್ಲಿ ಜನಸಾಮಾನ್ಯರಿಗೆ ಮತ್ತು ರಾಜ್ಯದ ಏಳಿಗೆಗೆ ಏನೂ ಕೊಡುಗೆ ನೀಡದೆ ಅಧಿಕಾರ ದಾಹದಲ್ಲೇ ಕಳೆದ ಆಳುವ ಪಕ್ಷದವರು, ಅಷ್ಟು ಸಾಲದೆಂದು ಉತ್ತರ ಪ್ರದೇಶದ ಬುಲ್‌ಡೋಜರ್ ಆಡಳಿತದ ಮಾದರಿಯನ್ನು ಕರ್ನಾಟಕದಲ್ಲೂ ಜಾರಿಗೆ ತರಬೇಕೆಂದು ಹಪಹಪಿಸಿದ್ದನ್ನು ಈ ಕೃತಿಯಲ್ಲಿ ಕಾಣಿಸಿದ್ದಾರೆ. ಈ ದೃಷ್ಟಿಯಲ್ಲಿ ಕೃತಿಗೆ ‘ಕಲ್ಯಾಣ ಕೆಡುವ ಹಾದಿ’ ಶೀರ್ಷಿಕೆ ಅನ್ವರ್ಥವಾಗಿದೆ ಎನ್ನಿಸದಿರದು.

ರಾಜ್ಯವನ್ನು ಪುನಃ ಕಾನೂನಿನ ಆಳ್ವಿಕೆ ಮತ್ತು ಅಭಿವೃದ್ಧಿಯ ಕಡೆ ಮುಖ ಮಾಡುವಂತೆ ಮಾಡುವಲ್ಲಿ ಸಾರ್ವಜನಿಕರ ಬಾಧ್ಯತೆ ಎಷ್ಟಿದೆಯೋ ಅಷ್ಟೇ ಜವಾಬ್ದಾರಿ ಅಧಿಕಾರಶಾಹಿಯ ಮೇಲಿದೆ ಎನ್ನುವ ಬಾಲು, ಯುವ ಅಧಿಕಾರಿಗಳಿಗೆ ‘ದಿಟ್ಟವಾಗಿ ತಲೆಯೆತ್ತಿ ನಡೆಯಿರಿ; ಅನ್ಯಾಯಕ್ಕೆ ತಲೆಬಾಗದಿರಿ. ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ಪರಿಣಾಮ ಹೇಗೂ ಇರಲಿ, ನಿಮ್ಮ ನ್ಯಾಯವಂತ, ಘನತೆಯ ನಡವಳಿಕೆಯೇ ನಿಮಗೆ ದೊರೆವ ಪ್ರತಿಫಲ. ಅದಕ್ಕಿಂತ ಶ್ರೇಷ್ಠ ಸಂತೋಷ ಇನ್ನೊಂದಿಲ್ಲ’ ಎಂದು ಕರೆ ಕೊಡುತ್ತಾರೆ.

ಈ ಕೃತಿ ಉನ್ನತ ಹಂತದ ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರದ ವಿದ್ಯಾರ್ಥಿಗಳಿಗೊಂದು ಉತ್ಕೃಷ್ಟವಾದ ಕೈಪಿಡಿ ಆಗಬಲ್ಲದು, ಆಗಲೂಬೇಕಿದೆ. ವಿಶ್ವವಿದ್ಯಾಲಯಗಳು ತಮ್ಮ ಗ್ರಂಥಾಲಯಗಳಲ್ಲಿ ತಪ್ಪದೆ ಹೊಂದಿರಬೇಕಾದ ಒಂದು ಸಾರ್ವಕಾಲಿಕ ಆಕರ ಗ್ರಂಥವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ಸಿರಿಮನೆ ನಾಗರಾಜ್‌
+ posts

ಲೇಖಕ, ಸಾಮಾಜಿಕ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಸಿರಿಮನೆ ನಾಗರಾಜ್‌
ಸಿರಿಮನೆ ನಾಗರಾಜ್‌
ಲೇಖಕ, ಸಾಮಾಜಿಕ ಚಿಂತಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚರ್ಚೆಗೆ ಸಿದ್ದ ಇದ್ದೇನೆ ಬನ್ನಿ; ಡಿಕೆ ಶಿವಕುಮಾರ್‌ಗೆ ಕುಮಾರಸ್ವಾಮಿ ಪ್ರತಿ ಸವಾಲು

"ಮಿಸ್ಟರ್​ ಕುಮಾರಸ್ವಾಮಿ, ಹೆದರಿ ಪಕ್ಕದ ಜಿಲ್ಲೆಗೆ ಹೋಗಿದ್ದೀಯ​. ಚರ್ಚೆ ಮಾಡಲು ಸದನಕ್ಕೆ...

ಯಾರಿಗೂ ಮುಖ ತೋರಿಸದ ಸನ್ನಿವೇಶ ಕುಮಾರಸ್ವಾಮಿಗೆ ನಿರ್ಮಾಣವಾಗಲಿದೆ: ಡಿಕೆ ಶಿವಕುಮಾರ್‌

ಕುಮಾರಸ್ವಾಮಿ ಅವರು ನನ್ನ ಮೇಲೆ ಮನಬಂದಂತೆ ಆರೋಪಿಸುವುದನ್ನು ನೋಡಿಯೂ ನಮ್ಮ ಸಮುದಾಯಕ್ಕಾಗಿ...

ಚಿತ್ರದುರ್ಗ | ನೀತಿ ಸಂಹಿತೆ ನೆಪದಲ್ಲಿ ನೀಲಿ ಬಾವುಟ ತೆರವು; ಕೇಸರಿ ಬಿಟ್ಟಿದ್ದೇಕೆ ಎಂದಾಗ ರಾತ್ರೋರಾತ್ರಿ ಮರುಸ್ಥಾಪನೆ

ಆರಂಭದಲ್ಲಿ ನೆಪ ಹೇಳುತ್ತಿದ್ದ ಪಿಡಿಓಗೆ, ಜನರ ಜೈಭೀಮ್ ಘೋಷಣೆಗಳು ಅಪ್ಪಳಿಸಿದವು... ಡಾ.ಬಿ.ಆರ್‌.ಅಂಬೇಡ್ಕರ್ ಜಯಂತಿಯಂದು...

ಇಂಫಾಲ| ಮಣಿಪುರವನ್ನು ವಿಭಜಿಸಲು ಪಿತೂರಿ ಮಾಡಲಾಗುತ್ತಿದೆ ಎಂದ ಅಮಿತ್ ಶಾ!

ಮಣಿಪುರದ ಜನರನ್ನು ವಿಭಜಿಸಲು ಪಿತೂರಿ ಮಾಡಲಾಗುತ್ತಿದೆ, ಆದರೆ ಬಿಜೆಪಿ ರಾಜ್ಯದ ವಿಭಜನೆಗೆ...