ನುಡಿನಮನ | ನಮ್ಮೂರ ಗೋವಿಂದ್ರಾಯಣ್ಣ ಬಾರದೂರಿಗೆ ಹೊರಟುಹೋಗಿದ್ದಾರೆ…

Date:

ಪ್ರಗತಿಪರ ಚಿಂತಕರೂ, ನಿಷ್ಠುರ ವಿಮರ್ಶಕರೂ, ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಜಿ ಎಚ್‌ ನಾಯಕರು ತಮ್ಮ ಹಲವಾರು ಲೇಖನಗಳು ಹಾಗೂ ವಿಮರ್ಶಾ ಕೃತಿಗಳ ಮೂಲಕ ಪ್ರಸಿದ್ಧರಾಗಿದ್ದರು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಮುಂತಾದವುಗಳಿಗೆ ಭಾಜನರಾಗಿದ್ದರು

ನಮ್ಮ ಅತ್ತೆಗಿಂತ ಎರಡು ವರ್ಷ ಚಿಕ್ಕವರಾದ ಜಿ ಎಚ್ ನಾಯಕರು ಅತ್ತೆಯ ಬಾಯಲ್ಲಿ “ನಮ್ಮ ಗೋದ್ರಾಯ”. ಅವರಿಗೆ ನಮ್ಮತ್ತೆ “ಶೆಟಗೇರಿ ಅಕ್ಕ”.

ಐದಾರು ವರ್ಷಗಳ ಹಿಂದೆ ಅಂಕೋಲೆಯ ವಿಷ್ಣು ನಾಯಕರ ಅಂಗಳದ ಕಾರ್ಯಕ್ರಮವೊಂದರಲ್ಲಿ ಜಿ ಎಚ್ ನಾಯಕರನ್ನು ಭೇಟಿಯಾಗಿ ನನ್ನ ಮೊದಲ ಪುಸ್ತಕ ʼಮೀನುಪೇಟೆಯ ತಿರುವುʼ ಅನ್ನು ಅವರ ಕೈಗಿಡುವಾಗಿನವರೆಗೂ ಅವರು ನನ್ನ ಅತ್ತೆಯ ಹತ್ತಿರದ ಸಂಬಂಧಿ ಎಂದು ನನಗೆ ಗೊತ್ತಿರಲಿಲ್ಲ. ಪುಸ್ತಕ ಕೈಗೆ ತಗೊಳ್ಳುವುದಕ್ಕೂ ಪೂರ್ವದಲ್ಲಿ ನೀನು ಯಾರ ಮನೆಯವಳು ಏನು ಎತ್ತ ಎಂಬ ಪ್ರಶ್ನೆ ಮೂಲಕ ಅವರಿಗೆ ನನ್ನ ಗುರ್ತು ಹತ್ತಿ ನೀನು ನಮ್ಮ ಶೆಟಗೇರಿ ಅಕ್ಕನ ಸೊಸೆ. ಬಹಳ ದೂರದವಳಲ್ಲ ಎಂಬುದಾಗಿ ಹೇಳುತ್ತ ಬಾಲ್ಯದ ಶೆಟಗೇರಿ ಮತ್ತು ಸೂರ್ವೆಯ ಮಕ್ಕಳ ಗದ್ದೆಬಯಲಿನ ಕರಾಮತಿಗಳನ್ನೂ. ಸಗಣಿ ಹೆಕ್ಕುವುದು ಗುಳ್ಳಿ ಹೆಕ್ಕುವುದು( ಫೀಲ್ಡ್ ಸ್ನೇಲ್. ಮಳೆಗಾಲದ ಆರಂಭದಲ್ಲಿ ಗದ್ದೆಯ ನೀರಲ್ಲಿ ಸಿಗುತ್ತದೆ. ಮಾಂಸಾಹಾರ) ಬೇಣ ಹಕ್ಕಲಗಳಲ್ಲಿ ದನಗಳ ಕಾಲಡಿಗೆ ಸೊಪ್ಪು ಕೊಯ್ದ ತಂದು ಹಾಕುತ್ತಿದ್ದುದನ್ನೂ ಸಣ್ಣ ಮಗುವಿನ ಹಾಗೆ ನನ್ನೊಡನೆ ಹೇಳುತ್ತ ನೀನು “ಸರ್” ಅನ್ನುದೆಲ್ಲ ಎಂತಕೆ ? ಅಣ್ಣ ಅಂದ್ರೆ ಸಾಕು. ಊರು ಕೇರಿಯ ಅಣ್ಣ, ಅಪ್ಪ, ಅಪ್ಪಜ್ಜಿ ಅನ್ನೋ ಆತ್ಮೀಯತೆಯ ಕರೆ ಈಗ ಕಡ್ಮಿಯಾಗೇ ಬಿಟ್ಟೀದು ಎಂದು ನೆಲದ ಭಾಷೆಯಲ್ಲೇ ಮಾತಾಡಿದ್ದರು.

ಅಂಕೋಲೆಯ ಪ್ರತಿ ಊರಲ್ಲೂ ನಡೆವ ಬಂಡಿಹಬ್ಬದಲ್ಲಿ ಕೋಳಿಆಶೆ ತಿನ್ನಲು ಅಪ್ಪನೊಡನೆ ನಿಮ್ಮತ್ತೆ ಮನೆಗೆ ಬರ್ತಿದ್ದೆ.‌ ನಿಮ್ಮತ್ತೆಯೂ ನಮ್ಮನೆಗೆ ಬರ್ತಿದ್ದಳು. ಅವಳು ಜಗಳಗಂಟಿ. ಅದೂ ನಾನೂ ಶರಂಪರ ಜಗಳ ಆಡ್ತಿದ್ದೆವು, ಹಾಂಗೇ ಒಂದೇ ಕ್ಷಣದಲ್ಲಿ ಮರೆತು ಆಟಾನೂ ಆಡ್ತಿದ್ದೆವು ಎಂದು ಹೆಣ್ಮಕ್ಕಳು ಗೆರಟೆ ಆಟ ಆಡುವಾಗ ತಾವು ಹುಡುಗರು ಸಣ್ಣ ಜಿಗ್ಗಿನ ಸೌದೆ ತಂದು ಕೊಡುವುದು, ಹೂ, ಎಲೆ ತಂದು ಕೊಡುತ್ತಿದ್ದುದನ್ನು ಹೇಳಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅವರು ಊರಿಗೆ ಬಂದಾಗಲೆಲ್ಲ ಅವರೊಡನೆ ಸಣ್ಣ ಸಂವಾದ ಕಾರ್ಯಕ್ರಮವನ್ನು ಅವರ ಕುಟುಂಬಸ್ಥರು ಏರ್ಪಡಿಸುತ್ತಿದ್ದರು. ಇತ್ತೀಚೆಗೆ ಅವರ ಕಿವಿ ಸ್ವಲ್ಪ ಮಂದವಾಗಿ ಸಂವಾದದ ಪ್ರಶ್ನೆ ಸರಿಯಾಗಿ ಕೇಳಿಸದಿದ್ದರೆ ಬೇರೆಯದೇ ಏನನ್ನೋ ಉತ್ತರಿಸುತ್ತಿದ್ದರು. ಸಾಹಿತ್ಯ, ವಿಮರ್ಶೆಯ ಹೊರತಾಗಿ ಅವರಿಗೆ ಊರ ನೆಲದಲ್ಲಿ ಬಾಲ್ಯ,ಯೌವನ ಹೆಚ್ಚೆಚ್ಚು ನೆನಪಾಗಿ ಅಂದಿನ ಅನುಭವಗಳ ಕುರಿತೇ ಓತಪ್ರೋತವಾಗಿ ಮಾತಾಡುತ್ತಿದ್ದರು. ಅವ್ವ ಬಾಳುವಿನ ಕುರಿತು ಹೆಚ್ಚೆಚ್ಚು ಹೇಳುತ್ತಿದ್ದರು. ಆಗ ಅವರ ಮುಖ ಹರವಾಗಿ ನಗು ಕಣ್ಣುಗಳಲ್ಲಿ ಕುಣಿಯುತ್ತಿತ್ತು. ಮಾತಾಡುತ್ತ, ಆಡುತ್ತ ಉದ್ವೇಗಕ್ಕೊಳಗಾಗಿ ಸಮಯದ ಪರಿವೆ ಇಲ್ಲದೇ ಮುಂದಕ್ಕೆ ಮುಂದಕ್ಕೆ ಮಾತಾಡತೊಡಗಿದ ಹಾಗೆ ಅವರ ಪತ್ನಿ ಮೀರಕ್ಕ ಅವರ ಕೈ ಅದುಮಿ ಶಾಂತವಾಗಿ,ಮೆಲ್ಲಗೆ ಮಾತಾಡಲು ಸೂಚಿಸುತ್ತಿದ್ದರು.

ಮನೆಗೆ ಬಂದು ನಾನು ನಮ್ಮತ್ತೆಯೊಡನೆ ಜಿ ಎಚ್ ನಾಯಕರು ನಿನಗೆ ಸಂಬಂಧ ಅಂತಲ್ಲ ಅಂದಾಗ ಅತ್ತೆಯೂ ಅವರಷ್ಟೇ ಮುಖ ಅಗಲಮಾಡಿಕೊಂಡಿದ್ದರು. ನಮ್ಮ ಗೋದ್ರಾಯ ಭಾಳ ಪುಸ್ತಕ ಬರ್ದಾನಂತೆ.ಇಡೀ ರಾಜ್ಯದಲ್ಲಿ ದೊಡ್ಡ ಹೆಸರು ಮಾಡಾನಂತೆ. ಅವನೂ ನಾನೂ ಜೋರು ಗಾಳಿ ಮಳೆ ಬರುವಾಗ ಮಾವಿನಹಣ್ಣು ಹೆಕ್ಕುಕೆ ಯಾವುದೋ ದೊಡ್ಡ ಕಾಟು ಮಾವಿನ ಮರದ ಕೆಳಗೆ ತನಗೆ ಹೆಚ್ಚು, ನನಗೆ ಹೆಚ್ಚು ಎಂದು ಜಗಳ ಆಡುತ್ತಿದ್ದುದನ್ನು ನೆನಪಿಸಿಕೊಂಡು ಇವರೂ ಓತಪ್ರೋತ ಶುರು ಹಚ್ಚಿಕೊಂಡುಬಿಟ್ಟಿದ್ದರು. ಹಳೆಯ ನೆನಪುಗಳು ಹೇಗೆಲ್ಲ ಇರುತ್ತವೆ ಮತ್ತು ಅದರ ಅನುಭವದ ಕಲ್ಪನೆ ಈಗಿನವರಿಗೆ ಎಷ್ಟು ಬಾಯಿಮಾತಿನಲ್ಲಿ ಹೇಳಿದರೂ ದಕ್ಕುವುದಿಲ್ಲ ಎಂಬುವುದಕ್ಕೆ ಈಗ ಸಗಣಿ ಹೆಕ್ಕುವವರು,ದನಕ್ಕೆ ಸೊಪ್ಪು ಸದೆ ಕೊಯ್ವವರು ಯಾರೂ ಕಾಣುವುದಿಲ್ಲ ಎಂಬುದು ಸಾಕ್ಷಿ. ಪುಕ್ಕಟೆ ನಮ್ಮ ಗದ್ದೆ ನೀವೇ ಮಾಡಿ, ಗೇಣಿ ಕೊಡುವುದೂ ಬೇಡವೆಂದರೂ ಯಾರೂ ಗದ್ದೆ ಮಾಡುವವರಿಲ್ಲ. ನಮ್ಮ ಮಕ್ಕಳಿಗೆ ನಮ್ಮ ಗದ್ದೆ ಯಾವುದೆಂದೂ ಗುರ್ತಿಸಲಾಗುವುದಿಲ್ಲ.

ಅಂಕೋಲಾ ತಾಲೂಕಿನ ಸೂರ್ವೆ ಎಂಬ ನಲ್ವತ್ತು ಕುಟುಂಬಗಳ ಊರೊಂದರಲ್ಲಿ ಹುಟ್ಟಿದವರು ಜಿ ಎಚ್ ನಾಯಕರು.ಅವರ ಅಪ್ಪನ ಮನೆಮಂದಿಯೆಲ್ಲ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಕರನಿರಾಕರಣೆ, ಶೇಂದಿ ನಿಷೇಧ ಮುಂತಾಗಿ ತೀವ್ರವಾಗಿ ಬ್ರಿಟಿಷರ ವಿರುದ್ಧ ತೊಡಗಿಕೊಂಡವರು. ಈ ಕಾರಣಕ್ಕಾಗಿ ನಾಯಕರು ಹುಟ್ಟುವುದಕ್ಕೂ ಪೂರ್ವದ ಐದು ವರ್ಷಗಳಾಚೆ ಅವರ ಮನೆ ಮತ್ತು ಜಮೀನನ್ನು ಸರ್ಕಾರ ಮುಟ್ಟುಗೋಲು ಹಾಕಿ ಅದನ್ನು ಯಕಶ್ಚಿತ್ ಬೆಲೆಗೆ ಲಿಲಾವು ಹಾಕಿತ್ತಂತೆ. ಅದನ್ನು ಕೊಂಡ ನಿವೃತ್ತ ಮಿಲಿಟರಿ ಅಧಿಕಾರಿ ಇವರನ್ನೆಲ್ಲ ಮನೆಯಿಂದ ಹೊರದಬ್ಬಿದ ಕಾರಣ ಅಲ್ಲೆಲ್ಲೋ ವಠಾರದ ಮೂಲೆಯಲ್ಲಿ ಗುಡಿಸಲು ಹಾಕಿ ವಾಸವಿತ್ತು ಕುಟುಂಬ.. ಹಾಗೆ ನೋಡಿದರೆ ‘ನಾಡವರೆ ನಿಜ ನಾಡಿಗರು ನೋಡು ಕಾಳಗವ ಹೂಡಿಹರು’ ಎಂದು ದಿನಕರ ದೇಸಾಯಿಯವರು ಹಾಡಿದ ಅಂಕೋಲೆಯ ನಾಡವ ಮತ್ತು ಇನ್ನಿತರ ಜನಾಂಗಗಳ ನೂರಾರು,ಸಾವಿರಾರು ಮನೆಗಳು ಕಾಯಿದೆ ಭಂಗ ಮುಂತಾದ ಬ್ರಿಟಿಷರ ವಿರುದ್ಧದ ಪ್ರತಿಭಟನೆಯ ಕಾರಣಕ್ಕೆ ಅವರಿಂದ ನಾನಾ ರೀತಿಯ ಕಿರುಕುಳಕ್ಕೆ ಒಳಗಾದವರೇ.

ನಾಯಕರು ಹುಟ್ಟಿದ ವರ್ಷ ಅಂದರೆ 1935 (ಸೆಪ್ಟೆಂಬರ್ 18) ರಲ್ಲಿ ನಮ್ಮ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಬ್ರಿಟಿಷ್ ಸರ್ಕಾರದ ನಡುವೆ ಆದ ವಿಶೇಷ ಒಪ್ಪಂದದ ಪ್ರಕಾರ ನಾಯಕರಾದಿಯಾಗಿ ಸಾವಿರಾರು ಕುಟುಂಬಕ್ಕೆ ಅವರ ಮನೆ ಜಮೀನುಗಳು ಒಂದಾಂಶ ಪರತ್ ಸಿಕ್ಕಿ ನಾಯಕರು ತಮ್ಮ ದೊಡ್ಡ ಮನೆಯ ಒಂದು ಕೋಣೆಯಲ್ಲಿ ಜನ್ಮ ತಳೆವಂತಾಯಿತು.

ನಾಯಕರ ತಂದೆ ಹಮ್ಮಣ್ಣ ಹಾಗೂ ತಾಯಿ ಬಾಳುವಿಗೆ ಹತ್ತು ಜನ ಮಕ್ಕಳಾದರೂ ಉಳಿದವರು ರಾಕಮ್ಮ, ನಾರಾಯಣ, ಹೊನ್ನಮ್ಮ, ಗಂಗೆ ಮತ್ತು ಕೊನೆಯವರಾಗಿ ಇವರು ಗೋವಿಂದ್ರಾಯ ಎಂಬ ಐವರು ಮಾತ್ರ.

ಯಕ್ಷಗಾನದ ಖ್ಯಾತ ಭಾಗವತರೂ, ಪಾತ್ರಧಾರಿಯೂ ಆಗಿದ್ದ ನಾಯಕರ ತಂದೆ ಹಮ್ಮಣ್ಣ ಯಕ್ಷಗಾನ ಪ್ರಸಂಗವನ್ನೂ ಬರೆಯುತ್ತಿದ್ದರಂತೆ‌ ಈ ಕುರಿತು, ತನ್ನ ತಾಯಿ ಬಾಳಕ್ಕವ್ವಿಯ ಕುರಿತು ಹಾಗೂ ತನ್ನ ಬದುಕಿನ ಹತ್ತು ಹಲವು ಮಜಲುಗಳ ಕುರಿತು ನಾಯಕರು ತಮ್ಮ ಆತ್ಮಚರಿತ್ರೆ “ಬಾಳು” ಎಂಬುದರಲ್ಲಿ ಸವಿವರವಾಗಿ ಉಲ್ಲೇಖಿಸಿದ್ದಾರೆ. ಇದರಲ್ಲಿ ಅವರ ಮೈಸೂರು ಕಾಲೇಜ್ ಪ್ರವೇಶ, ಅವರೊಳಗಿನ ತೇಜಸ್ವಿ, ಕುವೆಂಪು ದರ್ಶನ ಮುಂತಾದ ಮೈಸೂರು ಬದುಕಿನ ಕುರಿತೂ ಅರ್ಧಾಂಶದ ಬರಹಗಳಿವೆ.

ಇದನ್ನು ಓದಿ ಪ್ರಾಧ್ಯಾಪಕ, ವಿಮರ್ಶಕ ಜಿ ಎಚ್ ನಾಯಕ ಇನ್ನಿಲ್ಲ

ಪ್ರಗತಿಪರ ಚಿಂತಕರೂ, ನಿಷ್ಠುರ ವಿಮರ್ಶಕರೂ, ಮೈಸೂರು ವಿಶ್ವವಿದ್ಯಾಲಯದ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿದ ನಾಯಕರು ತಮ್ಮ ಹಲವಾರು ಲೇಖನಗಳು ಹಾಗೂ ವಿಮರ್ಶಾ ಕೃತಿಗಳ ಮೂಲಕ ಪ್ರಸಿದ್ಧರಾಗಿದ್ದರು ಮತ್ತು ಅಕಾಡೆಮಿ,ಪಂಪ ಪ್ರಶಸ್ತಿ ಮುಂತಾದವುಗಳಿಗೆ ಭಾಜನರಾಗಿದ್ದರು.ಇಷ್ಟೆಲ್ಲ ಸಾಧನೆಗಳಿದ್ದೂ ಅವರು ಊರಿಗೆ ಬಂದಾಗ ತನ್ನ ಸಮ್ಮಾನ,ಸಾಧನೆಗಳ ಕುರಿತು ಮಾತಾಡದೇ. ತಾನು ಊರು ಕೇರಿಗಳಲ್ಲಿ ಓಡಾಡಿದ ಜಾಗ, ತನ್ನ ಒಡನಾಡಿಗಳು, ಗದ್ದೆ ಬಯಲು, ಅಪ್ಪ ಮತ್ತು ತಾನು ಮೀನು ಹಿಡಿಯುತ್ತಿದ್ದ ಹರಗಂಡಿ ಹೊಂಡ, ಗದ್ದೆ ಬಯಲು ದಾಟಿ ಹಾಲು ಕೊಡಲು ಹೋಗುತ್ತಿದ್ದ ಒಳದಾರಿ ಮುಂತಾದವುಗಳ ಕುರಿತೇ ಹೆಚ್ಚೆಚ್ಚು ಮಾತಾಡಲು ಹಾತೊರೆಯುತ್ತಿದ್ದರು. ಮತ್ತು ಆ ಮಾತಿಗೆ ಪುಟಕ್ಕಿಡುವ, ಸಪೋರ್ಟ್ ಸಿಕ್ಕುವ ಪ್ರತಿ ಮಾತುಗಾರರು ಸಿಕ್ಕರೆ ಉಮ್ಮೇದಿ ಹೆಚ್ಚಿ ಮತ್ತೆ ಮತ್ತೆ ಅದನ್ನೇ ಮಾತಾಡುತ್ತ ಹಿಂದಿನದೆಲ್ಲವನ್ನು ನೆನಪಿಸಿಕೊಂಡು ಖುಷಿಪಡುತ್ತಿದ್ದರು. ಆಗಾಗ ಕಣ್ಣಲ್ಲಿ ನೀರಾಡಿಸಿಕೊಳ್ಳುತ್ತಿದ್ದರು.

“ಮುಂದಿನ ಸಲ ಗೋದ್ರಾಯ ಬಂದಾಗೆ ನನ್ನ ಕರ್ಕೊಂಡು ಹೋಗು ಹಾಂ” ಎಂದು ತಾಕೀತು ಮಾಡಿದ್ದ ನಮ್ಮ ಅತ್ತೆ, ಅವರ ಒಡನಾಡಿ ಈಗಿಲ್ಲ. ಹಾಗೇ ನನ್ನೊಂದಿಗೆ ತನ್ನನ್ನು ಸರ್ ಅನ್ನದೇ ಅಣ್ಣ ಎಂದು ಕರೆ ಎಂದು ಗದರಿದ್ದ ಜಿ ಎಚ್ ನಾಯಕರೂ ಇಲ್ಲ.

ಮರಳಿ ಬಾರದ ದಾರಿಯ ಹಿಡಿದು ಎಲ್ಲರೂ ಹೋಗಲೇಬೇಕಲ್ಲ ಒಂದಾನೊಂದು ದಿನ ಎಂಬಂತೆ ನಮ್ಮೂರ ಗೋವಿಂದ್ರಾಯಣ್ಣ ಬಾರದೂರಿಗೆ ಹೊರಟುಹೋಗಿದ್ದಾರೆ. ಅವರ ಕೃತಿಗಳ ಜೊತೆ ಅವರ ಮುಗ್ಧ ಮನಸ್ಸಿನ ಒಡನಾಟದ ನೆನಪು ಸದಾ ನಮ್ಮೊಂದಿಗಿದೆ.

ರೇಣುಕಾ ರಮಾನಂದ ಅಂಕೋಲಾ
+ posts

ಕವಿ, ಲೇಖಕಿ

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಆಪ್ತವಾದ ಲೇಖನ. ಧನ್ಯವಾದಗಳು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಟಿ ಕೋಟಿ ಲೂಟಿ ಮಾಡಿದ ಸ್ಕ್ಯಾಮರ್‌ಗಳನ್ನು ಮೋದಿ ಸರ್ಕಾರ ಮಟ್ಟ ಹಾಕಿದ್ದು ಹೀಗೆ!

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಸಭೆಯಲ್ಲಿ ಮಾತನಾಡುತ್ತಾ, "ಕಾಂಗ್ರೆಸ್‌ ಮತ್ತು...

ಬಾಬಾ ರಾಮ್‌ದೇವ್‌ಗೂ ಪ್ರಧಾನಿ ಮೋದಿಗೂ ಏನು ಸಂಬಂಧ? ಕೇಂದ್ರ ಸರ್ಕಾರವೇಕೆ ಕಣ್ಮುಚ್ಚಿ ಕೂತಿದೆ?

ಸನಾತನದ ನೆಪದಲ್ಲಿ ದೇಶವನ್ನು ಪುರಾತನ ಕಾಲಕ್ಕೆ ಕೊಂಡೊಯ್ಯುತ್ತಿರುವ ಸಂಘಿಗಳ ಸಾರಥ್ಯದ ಬಿಜೆಪಿಯ...

ಡಾ ಮಂಜುನಾಥ್ ರಾಜಕಾರಣದಲ್ಲಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು

ಇತ್ತೀಚಿನ ದಿನಗಳಲ್ಲಿ ಕೆಲವು ಅವಿವೇಕಿಗಳು ಮತ್ತು ಜಾತಿವಾದಿಗಳು ಡಾ ಮಂಜುನಾಥ್ ಅವರು...

ಬಿಜೆಪಿ & ಗೋದಿ ಮೀಡಿಯಾ ʼಪಾಕಿಸ್ತಾನ್‌ ಜಿಂದಾಬಾದ್‌ ಎಂದರುʼ ಎಂಬ ಸುಳ್ಳನ್ನು ಹಬ್ಬಿಸಿದ 22 ಪ್ರಕರಣಗಳು

'ಪಾಕಿಸ್ತಾನ್‌ ಜಿಂದಾಬಾದ್’ ಎಂದು ಕೂಗಿರುವುದಾಗಿ ಮಾಧ್ಯಮ ಮತ್ತು ಬಿಜೆಪಿ ಸುಳ್ಳು ಹಬ್ಬಿಸುವುದು...