- ಸಾವರ್ಕರ್ ಹೇಳಿಕೆ ಬಗ್ಗೆ ಉದ್ಧವ್ ಠಾಕ್ರೆ ರಾಹುಲ್‌ಗೆ ಎಚ್ಚರಿಕೆ
- ರಾಹುಲ್ ಗಾಂಧಿ ಹೇಳಿಕೆಗೆ ಶಿವಸೇನಾದ ಸಾಮ್ನಾ ಖಂಡನೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಸಾವರ್ಕರ್ ಕುರಿತು ಟೀಕಾತ್ಮಕ ಹೇಳಿಕೆ ನೀಡದಂತೆ ಮನವೊಲಿಸಲು ಯತ್ನಿಸುತ್ತೇನೆ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಸೋಮವಾರ (ಮಾರ್ಚ್ 27) ಹೇಳಿದ್ದಾರೆ.
ವಿ ಡಿ ಸಾವರ್ಕರ್ ಕುರಿತು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಭಾನುವಾರ (ಮಾರ್ಚ್ 26) ಖಂಡಿಸಿದ್ದರು. ಇದಾದ ಒಂದು ದಿನದ ಬಳಿಕ ಸಂಜಯ್ ರಾವುತ್ ಈ ಹೇಳಿಕೆ ನೀಡಿದ್ದಾರೆ.
“ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಅವರಿಗೆ ತಮ್ಮ ಭಾಷಣ ಹಾಗೂ ಮಾಧ್ಯಮಗೋಷ್ಠಿಗಳಲ್ಲಿ ಸಾವರ್ಕರ್ ಕುರಿತು ಟೀಕೆಗಳನ್ನು ಮಾಡದಿರುವಂತೆ ಮನವಿ ಮಾಡಲಾಗುವುದು. ಸಾವರ್ಕರ್ ಎಂಬುದು ಉದ್ಧವ್ ನೇತೃತ್ವದ ಶಿವಸೇನೆಗೆ ನಂಬಿಕೆಯ ವಿಷಯ ಎಂದು ತಿಳಿಸಲಾಗುವುದು” ಎಂದು ಪುಣೆಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಸಾವರ್ಕರ್ ನಮ್ಮ ದೇವರು. ಅವರು ನಮ್ಮ ನಂಬಿಕೆ. ಅವರಿಗೆ ಅವಮಾನ ಮಾಡುವುದನ್ನು ನಾವು ಸಹಿಸುವುದಿಲ್ಲ” ಎಂದು ಸಂಜಯ್ ರಾವುತ್ ಹೇಳಿದ್ದಾರೆ.
ಮಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆಯೂ ಈ ವಿಷಯ ಪ್ರಸ್ತಾಪಿಸಿದರು. “ಸಾವರ್ಕರ್ ಕುರಿತ ಹೇಳಿಕೆ ವಿಚಾರವಾಗಿ ನಾನು ರಾಹುಲ್ ಅವರನ್ನು ಶೀಘ್ರ ದೆಹಲಿಯಲ್ಲಿ ಭೇಟಿಯಾಗುತ್ತೇನೆ. ಈ ಬಗ್ಗೆ ಅವರೊಂದಿಗೆ ಚರ್ಚಿಸುತ್ತೇನೆ. ಸಾವರ್ಕರ್ ಬಲಿದಾನದ ಬಗ್ಗೆ ನಾನು ಅವರಿಗೆ ಮನವರಿಕೆ ಮಾಡುತ್ತೇನೆ. ಸಾವರ್ಕರ್ 14 ವರ್ಷ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಜೈಲಿನಲ್ಲಿರುವುದನ್ನು ವಿವರಿಸುತ್ತೇನೆ” ಎಂದು ರಾವುತ್ ತಿಳಿಸಿದರು.
“ನಾನು ಹೇಳುವುದನ್ನು ಸಾವಧಾನದಿಂದ ರಾಹುಲ್ ಅವರು ಆಲಿಸುತ್ತಾರೆ ಎಂಬ ಖಾತ್ರಿ ಇದೆ. ರಾಹುಲ್ ಅವರಿಗೆ ಯಾವುದೇ ರೀತಿಯ ಮುಜುಗರ ಅಥವಾ ಅವಮಾನವಾಗದ ರೀತಿಯಲ್ಲಿ ಸಾವರ್ಕರ್ ಜೀವನದ ಬಗ್ಗೆ ಅವರಿಗೆ ತಿಳಿಸಲು ಪ್ರಯತ್ನಿಸುತ್ತೇನೆ” ಎಂದು ಸಂಜಯ್ ರಾವುತ್ ಹೇಳಿದರು.
“ಈಗ ಜೀವಂತವಿಲ್ಲದ ವ್ಯಕ್ತಿಯ ವಿರುದ್ಧ ರಾಹುಲ್ ಅವರು ತಮ್ಮ ಹಗೆತನ ಮುಂದುವರಿಸುತ್ತಾರೆ ಎಂದು ನಾವು ಬಯಸಿರಲಿಲ್ಲ. ರಾಹುಲ್ ಅವರು ಸಾವರ್ಕರ್ ಕುರಿತ ಹೇಳಿಕೆಗಳಿಗೆ ತಿಲಾಂಜಲಿ ಹಾಡಬೇಕು. ತಮ್ಮ ಭಾಷಣಗಳಲ್ಲಿ ಸಾವರ್ಕರ್ ಕುರಿತು ಮಾತನಾಡುವುದನ್ನು ತಪ್ಪಿಸಬೇಕು. ರಾಹುಲ್ ಅವರು ಧೈರ್ಯದಿಂದ ತಮ್ಮ ಧ್ವನಿ ಎತ್ತಬೇಕಾದ ಹಲವು ರಾಷ್ಟ್ರೀಯ ಸಮಸ್ಯೆಗಳಿವೆ. ಅವರು ಅದನ್ನು ಮುಂದುವರಿಸಬೇಕು. ದೇಶಕ್ಕೆ ಈಗ ಅವರಂತಹ ನಾಯಕರ ಅಗತ್ಯವಿದೆ” ಎಂದು ರಾವುತ್ ಸುದ್ದಿಗಾರರಿಗೆ ಹೇಳಿದರು.
ಮೋದಿ ಉಪನಾಮದ ಬಗೆಗಿನ ಟೀಕೆಗೆ ಸೂರತ್ ನ್ಯಾಯಾಲಯ ಮಾರ್ಚ್ 23 ರಂದು ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ತಾವು ನೀಡಿರುವ ಹೇಳಿಕೆ ಬಗ್ಗೆ ನ್ಯಾಯಾಲಯದ ಮುಂದೆ ಕ್ಷಮೆಯಾಚನೆ ಕುರಿತು ಮಾಧ್ಯಮಗೋಷ್ಠಿಯೊಂದರಲ್ಲಿ ಕೇಳಲಾದ ಪ್ರಶ್ನೆಗೆ ರಾಹುಲ್ ಅವರು ಸಾವರ್ಕರ್ ಕುರಿತು ಹೇಳಿಕೆ ನೀಡಿದ್ದರು. “ನಾನು ಗಾಂಧಿ, ಕ್ಷಮೆ ಕೇಳಲು ಸಾವರ್ಕರ್ ಅಲ್ಲ. ಗಾಂಧಿ ಕುಟುಂಬದವರು ಎಂದಿಗೂ ಕ್ಷಮೆ ಕೇಳುವುದಿಲ್ಲ” ಎಂದು ರಾಹುಲ್ ಹೇಳಿದ್ದರು.