ಕುಟುಂಬ ಕದನ | ಕಳೆದುಕೊಂಡ ಸಾಮ್ರಾಜ್ಯವನ್ನು ಮರಳಿ ಗಳಿಸಲು ಯುದ್ಧಕ್ಕೆ ಸಿದ್ಧರಾದರೇ ಶಿವಕುಮಾರ್?

Date:

ಇದು ದೊಡ್ಡಾಲಳ್ಳಿಯ ಕೆಂಪೇಗೌಡ ಮತ್ತು ಹರದನಹಳ್ಳಿಯ ದೇವೇಗೌಡ ಕುಟುಂಬಗಳ ಕದನ. ಈ ಎರಡು ಕುಟುಂಬಗಳ ರಾಜಕೀಯ ಅಧಿಕಾರಕ್ಕಾಗಿ, ಅಭಿವೃದ್ಧಿಗಾಗಿ, ಸಂಪತ್ತಿನ ಸಂರಕ್ಷಣೆಗಾಗಿ ಒಕ್ಕಲಿಗ ಸಮುದಾಯ ಕಾಲಾಳುಗಳಾಗಿ, ಕಾದಾಟದ ಅಸ್ತ್ರಗಳಾಗಿ ಬಳಕೆಯಾಗುತ್ತಿದೆ. ದುರದೃಷ್ಟಕರ ಸಂಗತಿ ಎಂದರೆ, ಈ ಸಮುದಾಯ ನಲವತ್ತು ವರ್ಷಗಳ ಹಿಂದೆ ಹೇಗಿತ್ತೋ ಇವತ್ತು ಕೂಡ ಹಾಗೆಯೇ ಇದೆ. 

ಕಳೆದ ಬುಧವಾರ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ದೇವಸ್ಥಾನಗಳ ಲೆಕ್ಕಕ್ಕಿಳಿದಿದ್ದರು. ಒಂದೇ ದಿನ ಸರಿಸುಮಾರು ಹದಿನೈದು ದೇವಸ್ಥಾನಗಳಿಗೆ ಭೇಟಿ ಕೊಟ್ಟು ದೇವರಿಗೆ ದೀರ್ಘದಂಡ ಹಾಕಿದ್ದರು.

ಅಧಿಕಾರಸ್ಥ ರಾಜಕಾರಣಿಗಳು ಹೀಗೆ ಸುಖಾಸುಮ್ಮನೆ ಬೀದಿಗಿಳಿಯುವವರಲ್ಲ; ಬೀದಿಗಿಳಿದರು ಎಂದರೆ ಏನೋ ಇದೆ ಎಂಬ ಅನುಮಾನ ಜನರಲ್ಲಿ ಮೂಡುವುದು ಸಹಜ. ಅಂತಹ ಅನುಮಾನ ಚನ್ನಪಟ್ಟಣದ ಜನರಲ್ಲೂ ಮೂಡಿತ್ತು.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದ ಎಚ್.ಡಿ. ಕುಮಾರಸ್ವಾಮಿಯವರು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತೆರವಾದ ಸ್ಥಾನಕ್ಕೆ ಸದ್ಯದಲ್ಲಿಯೇ ಉಪಚುನಾವಣೆ ನಡೆಯಲಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಅಥವಾ ಯೋಗೀಶ್ವರ್ ಕಣಕ್ಕಿಳಿಯಬಹುದೆಂಬ ಸುದ್ದಿ ಇದೆ. ಹಾಗೆಯೇ ಕಾಂಗ್ರೆಸ್ ಪಕ್ಷದಿಂದ ಯಾರು ಎನ್ನುವುದು ಸದ್ಯಕ್ಕೆ ಕುತೂಹಲ ಕೆರಳಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆ ಕುತೂಹಲಕ್ಕೆ ಕಾವು ಕೊಡುವಂತೆ ಡಿಸಿಎಂ ಡಿಕೆ ಶಿವಕುಮಾರ್ ಚನ್ನಪಟ್ಟಣದ ಬೀದಿಗಳಲ್ಲಿ ಅಡ್ಡಾಡುತ್ತಿದ್ದಾರೆ. ಕಂಡ ಕಂಡ ದೇವರಿಗೆ ಕೈ ಮುಗಿಯುತ್ತಿದ್ದಾರೆ. ದೇವರ ಕೆಲಸ ಮುಗಿದ ನಂತರ ಮತದಾರರತ್ತ ತಿರುಗಿ, ‘ಕೆಂಗಲ್ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿಯೇ ನನ್ನ ರಾಜಕೀಯ ಹೊಸ ಅಧ್ಯಾಯ ಪ್ರಾರಂಭ ಮಾಡಲು ಬಂದಿದ್ದೇನೆ. ಆಂಜನೇಯ ರಾಮನ ಭಂಟ, ಸೇವೆಯ ಪ್ರತೀಕ. ಚನ್ನಪಟ್ಟಣವನ್ನು ಚಿನ್ನದ ನಾಡನ್ನಾಗಿ ಪರಿವರ್ತಿಸುತ್ತೇನೆ’ ಎಂದು ಭಾರಿ ಭರವಸೆಯ ಮಾತುಗಳನ್ನಾಡಿದ್ದಾರೆ.

ಗೊಂಬೆಯ ನಾಡಾಗಿ ಉಳಿಯದ ಚನ್ನಪಟ್ಟಣವನ್ನು ಚಿನ್ನದ ನಾಡನ್ನಾಗಿ ಪರಿವರ್ತಿಸುವ ಭರವಸೆಯ ಜೊತೆಗೆ ಹನುಮಂತನಂತೆ ಸೇವೆ ಮಾಡಲು ಸಿದ್ಧ ಎನ್ನುತ್ತಿರುವ ಡಿಕೆ ಮಾತುಗಳು ಚನ್ನಪಟ್ಟಣದ ಜನತೆಯ ಕಿವಿ ಮೇಲೆ ಬಿದ್ದಾಗ, ಕೆಲವರು ಕಿವಿ ಚಿವುಟಿಕೊಂಡರು. ಇನ್ನು ಕೆಲವರು ನಿಂತ ನೆಲ ನೋಡಿಕೊಂಡರು. ಹಲವರು, ‘ಸಿಎಂ ಶಿವಕುಮಾರ್‍‌ಗೆ… ಜೈ’ ಎಂದರು. ಆಗ ಚನ್ನಪಟ್ಟಣದ ಜನತೆಗೆ ನಿಜಸ್ಥಿತಿ ಅರ್ಥವಾಯಿತು!

ಅಂದರೆ, ಮುಂಬರುವ ಚನ್ನಪಟ್ಟಣದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಡಿ.ಕೆ. ಶಿವಕುಮಾರ್ ಸ್ಪರ್ಧಿಸುವುದು ಹೆಚ್ಚೂಕಡಿಮೆ ಪಕ್ಕಾ ಆಗಿದೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಡಿ.ಕೆ. ಶಿವಕುಮಾರ್ ಈಗಾಗಲೇ ಸರ್ಕಾರದ ನಂಬರ್ ಟು ಹುದ್ದೆಯಾದ ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ಉಳಿದಿರುವುದು ಮುಖ್ಯಮಂತ್ರಿ ಹುದ್ದೆ. ಅದು ಸಿದ್ದರಾಮಯ್ಯನವರ ನಂತರ ಸಿಗಬಹುದು ಎಂದು ಜನ ಯೋಚಿಸಿದ್ದರೆ, ಡಿಕೆಯ ಯೋಚನೆ ಬೇರೆಯೇ ಇದೆ.

ಡಿ.ಕೆ. ಶಿವಕುಮಾರ್ ಚನ್ನಪಟ್ಟಣದ ಅಭ್ಯರ್ಥಿಯಾಗುವ ಹಿಂದೆ ನಾಲ್ಕಾರು ಯೋಚನೆಗಳಿವೆ. ಜೊತೆಗೆ ಅವರು ಅತಿಯಾಗಿ ನಂಬುವ ನೊಣವಿನಕೆರೆ ಅಜ್ಜಯ್ಯನ ಆದೇಶವೂ ಇದೆ. ಆ ಆದೇಶದಂತೆ, ಚನ್ನಪಟ್ಟಣ ದೇವಮೂಲೆಯಂತೆ, ಅಲ್ಲಿಂದ ಒಕ್ಕಲಿಗರ ನಾಯಕ ಕೆಂಗಲ್ ಹನುಮಂತಯ್ಯನವರು ಗೆದ್ದು ಮುಖ್ಯಮಂತ್ರಿಯಾಗಿದ್ದರಂತೆ, ಅಂತಹ ಸ್ಥಳದಿಂದ ಸ್ಪರ್ಧಿಸಿದರೆ, ಗೆದ್ದು ಗದ್ದುಗೆ ಏರುವುದು ಸುಲಭವಂತೆ. ಅದನ್ನು ಅವರು ಬಲವಾಗಿ ನಂಬಿದ್ದಾರೆ.

ಇನ್ನು ಅವರ ಅಸ್ತಿತ್ವಕ್ಕಾಗಿ, ಮೆರೆದಾಟಕ್ಕಾಗಿ ಮಾಡಿರುವ ರಾಜಕೀಯ ಲೆಕ್ಕಾಚಾರಗಳು ನೂರಾರು. ಮೊದಲಿಗೆ ಅವರು ಕಳೆದುಕೊಂಡಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಮರಳಿ ಪಡೆಯುವುದು. ಅಂದರೆ, ಕಳೆದ ನಲವತ್ತು ವರ್ಷಗಳಿಂದ ಆಳುತ್ತಿದ್ದ ಸಾಮ್ರಾಜ್ಯವನ್ನು ಚನ್ನಪಟ್ಟಣದ ಯುದ್ಧದ ಮೂಲಕ ಮರಳಿ ಗಳಿಸುವುದು. ಅದಕ್ಕಾಗಿ ಚನ್ನಪಟ್ಟಣದಲ್ಲಿ ಶಿವಕುಮಾರ್ ‘ನಾವು ಬೆಂಗಳೂರು ಜಿಲ್ಲೆಯವರು’ ಎಂಬ ದಾಳ ಉರುಳಿಸಿದ್ದಾರೆ.

ಅದರ ಒಳಾರ್ಥ ಇಷ್ಟೇ, ಹಾಸನ ಜಿಲ್ಲೆಯವರಾದ ದೇವೇಗೌಡರ ಕುಟುಂಬ ಇಲ್ಲಿಗೆ ವಲಸೆ ಬಂದಿದೆ, ಬೆಂಗಳೂರು ಜಿಲ್ಲೆಯನ್ನು ಹರಿದು ಹಂಚಿದೆ, ಅಲ್ಲಿಂದ ಗೆದ್ದು ಅಕ್ಕಪಕ್ಕದ ಗ್ರಾಮಾಂತರ ಮತ್ತು ಮಂಡ್ಯವನ್ನು ಆಕ್ರಮಿಸಿಕೊಂಡಿದೆ. ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಲೇ ಸಾಗಿದೆ. ಸ್ಥಳೀಯ ಪಾಳೇಯಗಾರರಾದ ನಮಗೆ ಆಳಲು, ಆಟವಾಡಲು ಮೈದಾನವಿಲ್ಲದಂತೆ ಮಾಡಿದೆ. ಆ ಕಾರಣದಿಂದ, ಆ ಆಟದ ಮೈದಾನವನ್ನು ಮರಳಿ ಪಡೆಯಬೇಕಾಗಿದೆ ಎನ್ನುವುದು ಡಿಕೆ ಶಿವಕುಮಾರ್ ಇಂಗಿತ.

ಹಾಗೆಯೇ ಆ ಸಾಮ್ರಾಜ್ಯವನ್ನು ಮರಳಿ ಪಡೆಯಬೇಕಾದರೆ ಚನ್ನಪಟ್ಟಣದಲ್ಲಿ ಗೆಲ್ಲಬೇಕು. ಆ ಮೂಲಕ, ತೆರವಾದ ಕನಕಪುರದಿಂದ ಸಹೋದರನನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳಬೇಕು. ಅದರ ಬಲದಿಂದ ಬೆಂಗಳೂರು ಗ್ರಾಮಾಂತರದಿಂದ ಗೌಡರ ಕುಟುಂಬವನ್ನು ಹಿಮ್ಮೆಟ್ಟಿಸುವುದು, ಮಂಡ್ಯಕ್ಕೂ ದಂಡೆತ್ತಿ ಹೋಗುವುದು. ಹಾಗೆ ದಂಡೆತ್ತಿ ಹೋಗಲಿಕ್ಕೆ ಚನ್ನಪಟ್ಟಣದ ದೇವಮೂಲೆ, ಅದರಿಂದ ದತ್ತವಾಗುವ ಮುಖ್ಯಮಂತ್ರಿ ಸ್ಥಾನ ಬಳಸಿಕೊಳ್ಳುವ ಇರಾದೆಯೂ ಇದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಕಳಪೆ ಫಲಿತಾಂಶಕ್ಕೆ ಸಿ ಎಂ ಸಿಟ್ಟಾದರೆ ಸಾಲದು, ಶಿಕ್ಷಣ ಇಲಾಖೆಗೆ ಬಿಸಿ ಮುಟ್ಟಿಸಬೇಕು

ಈ ಎರಡು ಬಲಾಢ್ಯ, ಬಲಿಷ್ಠ ಕುಟುಂಬಗಳ ಕಾದಾಟಕ್ಕೆ ನಲವತ್ತು ವರ್ಷಗಳ ಸುದೀರ್ಘ ಇತಿಹಾಸವಿದೆ. 1985ರಲ್ಲಿ, ದೊಡ್ಡಾಲಳ್ಳಿಯ ಯುವಕ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಓಡಾಡಿಕೊಂಡಿದ್ದ ದಿನಗಳಲ್ಲಿ, ಎದುರಾದ ವಿಧಾನಸಭಾ ಚುನಾವಣೆಗೆ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾದರು. ಆಗ ರಾಜ್ಯದಲ್ಲಿ ಜನತಾಪಕ್ಷ ಅಧಿಕಾರದಲ್ಲಿತ್ತು. ದೇವೇಗೌಡರು ಬಲಿಷ್ಠ ಒಕ್ಕಲಿಗ ನಾಯಕರಾಗಿದ್ದು, ಹೆಗಡೆಯವರೊಂದಿಗೆ ರಾಜಕೀಯ ಕಾದಾಟಕ್ಕಿಳಿದಿದ್ದ ಸಂದರ್ಭವದು. ಆ ಚುನಾವಣೆಯಲ್ಲಿ ಗೌಡರು ಹೊಳೆನರಸೀಪುರ ಮತ್ತು ಸಾತನೂರು- ಎರಡೂ ಕಡೆಯಿಂದ ಸ್ಪರ್ಧಿಸಿದರು. ಸುಲಭವಾಗಿ ಗೆಲ್ಲಲು ಅಂದಿನ ಕಾಂಗ್ರೆಸ್ ಮುಖಂಡರೊಂದಿಗೆ ಹೊಂದಾಣಿಕೆ ಮಾಡಿಕೊಂಡರು. ಆ ಹೊಂದಾಣಿಕೆಯ ಫಲವಾಗಿ ಸಾತನೂರು ಕ್ಷೇತ್ರಕ್ಕೆ ಡಮ್ಮಿ ಕ್ಯಾಂಡಿಡೇಟ್ ಆಗಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದವರು ಇದೇ ಡಿ.ಕೆ. ಶಿವಕುಮಾರ್.

ದೊಡ್ಡವರ ಹೊಂದಾಣಿಕೆಯ ಫಲವಾಗಿ ಶಿವಕುಮಾರ್ ಸೋತರೂ, ದೊಡ್ಡಗೌಡರೊಂದಿಗೆ ಸೆಣೆಸಿದ ಪುಟ್ಟ ಪೈಲ್ವಾನ ಎಂದು ಪ್ರಚಾರ ಪಡೆದು ರಾಜಕೀಯವಾಗಿ ನೆಲೆಯೂರಿದರು. 1987ರಲ್ಲಿ ಸಾತನೂರು ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದರು. 1989ರ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷದಿಂದ ಸಾತನೂರು ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಮೊತ್ತ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಿದರು. ಅದೇ ಸಂದರ್ಭದಲ್ಲಿ ದೇವೇಗೌಡರು ಸೋತು, ಅಧಿಕಾರ ಕಳೆದುಕೊಂಡು ಹಿನ್ನೆಲೆಗೆ ಸರಿದಿದ್ದರು.

ವಿಧಾನಸೌಧ ಪ್ರವೇಶಿಸಿದ ಮೊದಲ ಅವಧಿಯಲ್ಲಿಯೇ ಡಿಕೆಯವರ ಅದೃಷ್ಟ ಖುಲಾಯಿಸಿತು. 1991ರಲ್ಲಿ ಮುಖ್ಯಮಂತ್ರಿಯಾದ ಎಸ್.ಬಂಗಾರಪ್ಪನವರು, ಡಿಕೆಗೆ ಬಂದೀಖಾನೆ ಖಾತೆ ಸಚಿವ ಸ್ಥಾನ ನೀಡಿ, ರಾಜಕೀಯವಾಗಿ ಬೆಳೆಯಲು ಅವಕಾಶ ಕಲ್ಪಿಸಿಕೊಟ್ಟರು. ಆದರೆ 1994ರಲ್ಲಿ ಎದುರಾದ ಚುನಾವಣೆಗೆ ಡಿಕೆಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನಿರಾಕರಿಸಿತು. ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದ ಡಿಕೆ, ಮತ್ತೆ ಕಾಂಗ್ರೆಸ್ ಸೇರಿದರು.

ಅದೇ ಸಮಯದಲ್ಲಿ, 1994ರಲ್ಲಿ ಹರದನಹಳ್ಳಿಯ ದೇವೇಗೌಡರು ಹೊಳೆನರಸೀಪುರ ಕ್ಷೇತ್ರವನ್ನು ಪುತ್ರ ರೇವಣ್ಣಗೆ ಬಿಟ್ಟುಕೊಟ್ಟು ರಾಮನಗರದತ್ತ ಹೆಜ್ಜೆ ಹಾಕಿದರು. ಒಕ್ಕಲಿಗರ ಸ್ವಾಮೀಜಿಯನ್ನು ಪಕ್ಕಕ್ಕಿಟ್ಟುಕೊಂಡು ಸಮಾವೇಶ ಮಾಡಿ, ಒಕ್ಕಲಿಗರನ್ನು ಒಟ್ಟುಗೂಡಿಸಿದರು. ಗೆದ್ದು ಮುಖ್ಯಮಂತ್ರಿಯೂ ಆದರು. ಅಷ್ಟೇ ಅಲ್ಲ, ಮುಖ್ಯಮಂತ್ರಿಯ ಪರಮಾಧಿಕಾರ ಬಳಸಿ, ಮತ್ತೊಬ್ಬ ಪುತ್ರ ಕುಮಾರಸ್ವಾಮಿಯವರನ್ನು ಕನಕಪುರದಿಂದ ಕಣಕ್ಕಿಳಿಸಿ ಗೆಲ್ಲಿಸಿಕೊಂಡು, 1996ರಲ್ಲಿ ದೇಶದ ಪ್ರಧಾನಿಯೂ ಆದರು. ನಿಧಾನವಾಗಿ ಒಕ್ಕಲಿಗ ಸಮುದಾಯ ದಟ್ಟವಾಗಿರುವ ಬೆಂಗಳೂರು ಗ್ರಾಮಾಂತರವನ್ನು ಹಿಡಿತಕ್ಕೆ ತೆಗೆದುಕೊಂಡರು.

ಆದರೆ, 1999ರ ಚುನಾವಣೆಯ ವೇಳೆಗೆ, ದೇವೇಗೌಡರು ಅಧಿಕಾರ ಕಳೆದುಕೊಂಡು ಮೂಲೆಗುಂಪಾಗಿದ್ದರು. ಬದಲಾದ ರಾಜಕೀಯ ಬೆಳವಣಿಗೆಗಳಿಂದಾಗಿ ಎಸ್.ಎಂ. ಕೃಷ್ಣ ಕೆಪಿಸಿಸಿ ಅಧ್ಯಕ್ಷರಾಗುವ ಮೂಲಕ, ಮತ್ತೊಬ್ಬ ಒಕ್ಕಲಿಗ ನಾಯಕ ಮುನ್ನೆಲೆಗೆ ಬಂದಿದ್ದರು. ಕೃಷ್ಣ ಪಾಂಚಜನ್ಯ ಮೊಳಗಿಸಿ, ಕಾಂಗ್ರೆಸ್ ಬಹುಮತ ಗಳಿಸಿ ಅಧಿಕಾರ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿ ಮುಖ್ಯಮಂತ್ರಿಯಾದರು. ಎಸ್.ಎಂ. ಕೃಷ್ಣರ ನೀಲಿಗಣ್ಣಿನ ಹುಡುಗನಾದ ಶಿವಕುಮಾರ್, ನಗರಾಭಿವೃದ್ಧಿ, ಸಹಕಾರ ಸಚಿವರಾಗಿ ರಾಜಕಾರಣದ ಒಳ-ಹೊರಗನ್ನು ಅರ್ಥ ಮಾಡಿಕೊಳ್ಳತೊಡಗಿದರು. ಅಧಿಕಾರವನ್ನು ಅಸ್ತ್ರವನ್ನಾಗಿ ಪ್ರಯೋಗಿಸಿ ಹಣ ಮಾಡುವ ಕಲೆಯನ್ನು ಕರಗತ ಮಾಡಿಕೊಂಡರು. ಕೃಷ್ಣರು ಕಲ್ಪಿಸಿದ ಅವಕಾಶವನ್ನು ಕೊಂಚ ಹೆಚ್ಚಾಗಿಯೇ ದುರುಪಯೋಗಪಡಿಸಿಕೊಂಡು ವಿರೋಧಿಗಳನ್ನು ಮಟ್ಟಹಾಕಿದರು. ಕಾಂಗ್ರೆಸ್ಸಿನ ಹಿರಿಯರನ್ನು ಹಿಂಬದಿಗೆ ಸರಿಸಿ ಮುಂಚೂಣಿ ನಾಯಕನಾಗಿ ಹೊರಹೊಮ್ಮಿದರು.

ಹಳೇ ಮೈಸೂರು ಭಾಗದಲ್ಲಿ ಕೃಷ್ಣ-ಶಿವಕುಮಾರ್ ಒಂದಾಗಿ ಒಕ್ಕಲಿಗರನ್ನು ಒಗ್ಗೂಡಿಸುವ, ಸಮುದಾಯದ ಮುಖಂಡರಾಗುವ, ಪ್ರಭಾವಿ ನಾಯಕರಾಗಿ ಹೊರಹೊಮ್ಮತೊಡಗಿದರು. ಇದು ಮತ್ತೊಬ್ಬ ಒಕ್ಕಲಿಗ ನಾಯಕ ದೇವೇಗೌಡರಿಗೆ ಸಹಿಸಲಸಾಧ್ಯವಾದ ಸಂಕಟವಾಯಿತು. ಅದರ ಫಲವಾಗಿ 2004ರಲ್ಲಿ ರಚನೆಯಾದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಗೌಡರ ಕೈ ಮೇಲಾಯಿತು. ಧರಂಸಿಂಗ್‌ರನ್ನು ಡಮ್ಮಿ ಸಿಎಂ ಮಾಡಿಕೊಂಡು, ಶಿವಕುಮಾರ್‍‌ಗೆ ಸಚಿವ ಸ್ಥಾನ ನೀಡದೆ ಅವಮಾನಿಸಿ, ಅಧಿಕಾರದಿಂದ ದೂರವಿಡಲಾಯಿತು. ಅಷ್ಟೇ ಅಲ್ಲ, ತಮ್ಮ ಹಿಡಿತದಲ್ಲಿದ್ದ ಸಮ್ಮಿಶ್ರ ಸರ್ಕಾರವನ್ನು ಬಳಸಿಕೊಂಡು ಕ್ಷೇತ್ರ ಮರುವಿಂಗಡಣೆ ಮಾಡುವಾಗ, ಡಿಕೆಯವರ ಸಾತನೂರು ಕ್ಷೇತ್ರವನ್ನು ಇಲ್ಲದಂತೆ ಮಾಡಿ, ರಾಜಕೀಯ ಅಸ್ತಿತ್ವಕ್ಕೇ ಧಕ್ಕೆ ತರಲಾಯಿತು. ಎದೆಗುಂದದ ಡಿಕೆ, 2008ರಲ್ಲಿ ಕನಕಪುರ ಕ್ಷೇತ್ರದಿಂದಲೂ ಗೆದ್ದರು. 2013ರಲ್ಲಿಯೂ ಗೆಲುವು ಸಾಧಿಸಿದರು. ಆದರೆ, 2004ರಿಂದ 2014ರವರೆಗೆ ಡಿಕೆಗೆ ಯಾವುದೇ ಅಧಿಕಾರದ ಸ್ಥಾನವಿಲ್ಲದಂತೆ ನೋಡಿಕೊಳ್ಳಲಾಯಿತು.

ಅದೇ ಸಮಯದಲ್ಲಿ, 2004ರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಮತ್ತು 2006ರ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಲದಿಂದ, ದೇವೇಗೌಡರ ಕುಟುಂಬ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ ಮತ್ತು ಮೈಸೂರಿನವರೆಗೂ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿತ್ತು. ಆದರೆ, 2008ರಲ್ಲಿ ಅಧಿಕಾರ ಕಳೆದುಕೊಂಡ ಕುಮಾರಸ್ವಾಮಿ ನೇಪಥ್ಯಕ್ಕೆ ಸರಿದರು. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು, ಜೆಡಿಎಸ್ ಕುಟುಂಬದ ಪಕ್ಷವಾಗಿ ಸೊರಗತೊಡಗಿತು.

ಇದು ಒಕ್ಕಲಿಗ ಸಮುದಾಯವನ್ನು ಹಿಡಿತಕ್ಕೆ ತೆಗೆದುಕೊಳ್ಳಲು, ಸಮುದಾಯದ ಮೇಲೆ ಪ್ರಭಾವ ಹೆಚ್ಚಿಸಿಕೊಳ್ಳಲು ಎರಡು ಕುಟುಂಬಗಳ ನಡುವಿನ ಕದನವಾಗಿ ಮಾರ್ಪಾಡಾಯಿತು. ಇದರ ಮುಂದುವರೆದ ಭಾಗವಾಗಿ ಡಿಕೆ, 2004ರ ಲೋಕಸಭಾ ಚುನಾವಣೆಯಲ್ಲಿ, ಕನಕಪುರ ಲೋಕಸಭಾ ಕ್ಷೇತ್ರದಿಂದ ದೇವೇಗೌಡರ ವಿರುದ್ಧ ತೇಜಸ್ವಿನಿ ಎಂಬ ಪತ್ರಕರ್ತೆಯನ್ನು ಅಭ್ಯರ್ಥಿಯನ್ನಾಗಿ ಮಾಡಿ, ಗೆಲ್ಲಿಸುವ ಮೂಲಕ ಸೇಡು ತೀರಿಸಿಕೊಂಡಿದ್ದರು. ಇದಷ್ಟೇ ಅಲ್ಲ, ಚಿತ್ರನಟಿ ರಮ್ಯಾ ಅವರನ್ನೂ ರಾಜಕೀಯಕ್ಕೆ ಕರೆತಂದು, ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿ, ಗೆಲ್ಲಿಸಿಕೊಂಡು ಬರುವಲ್ಲಿ ಶಿವಕುಮಾರ್ ಯಶಸ್ವಿಯಾದರು.

ಈ ನಡುವೆ, 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗ, ಡಿಕೆ ಶಿವಕುಮಾರ್ 2014ರಲ್ಲಿ ಇಂಧನ ಖಾತೆ ಸಚಿವರಾದರು. ಇದು ದೇವೇಗೌಡ ಮತ್ತವರ ಕುಟುಂಬಕ್ಕೆ ಭಾರೀ ಹಿನ್ನಡೆಯಂತೆ ಕಾಣತೊಡಗಿತು. ಏಕೆಂದರೆ, ದೇವೇಗೌಡರಿಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ್- ಇಬ್ಬರೂ ರಾಜಕೀಯ ಶತ್ರುಗಳು. ಅವರಿಬ್ಬರೂ ಒಂದಾಗಿ, ಅಧಿಕಾರ ಅವರ ಕೈಯಲ್ಲಿದ್ದಾಗ, ಗೌಡರ ಶಕ್ತಿ ಕುಂದತೊಡಗಿತು.

ಶಿವಕುಮಾರ್
ಶಿವಕುಮಾರ್

ಏತನ್ಮಧ್ಯೆ, 2017ರಲ್ಲಿ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ, ಪಕ್ಷದ ಸೂಚನೆಯಂತೆ ಅಲ್ಲಿನ ಶಾಸಕರನ್ನು ಬೆಂಗಳೂರಿಗೆ ಕರೆತಂದು, ಆಗಬಹುದಾಗಿದ್ದ ಕುದುರೆ ವ್ಯಾಪಾರವನ್ನು ಡಿಕೆ ತಪ್ಪಿಸಿದರು. ಇದರಿಂದ ಅಹ್ಮದ್ ಪಟೇಲ್ ಗೆದ್ದು ರಾಜ್ಯಸಭಾ ಸದಸ್ಯರಾದರೆ, ಡಿಕೆ ಟ್ರಬಲ್ ಶೂಟರ್ ಎಂಬ ಹೆಸರು ಗಳಿಸಿದರು. ಅತ್ತ ಬಿಜೆಪಿಯ ಸೋಲನ್ನು ಸಹಿಸಿಕೊಳ್ಳಲಾಗದ ಅಮಿತ್ ಶಾ ಕೆಂಡಾಮಂಡಲರಾದರು. ಇದರ ಪ್ರತೀಕಾರವಾಗಿ, ಕೇಂದ್ರದ ಐಟಿ ಇಲಾಖೆಯ 300 ಅಧಿಕಾರಿಗಳು ಡಿಕೆ ಮನೆ, ಕಚೇರಿಗಳ ಮೇಲೆ ಏಕಾಏಕಿ ದಾಳಿ ಇಟ್ಟರು. ಲೆಕ್ಕವಿಲ್ಲದ 8 ಕೋಟಿ ಹಣವನ್ನು ವಶಪಡಿಸಿಕೊಂಡು ಕೇಸು ದಾಖಲಿಸಿದರು. ಕಂಬಿಗಳ ಹಿಂದೆ ಕೂರಿಸಿದರು. ಡಿಕೆಗೆ ರಾಜಕಾರಣದಲ್ಲೊಂದು ಕಪ್ಪು ಚುಕ್ಕೆ ಅಂಟಿಕೊಂಡಿತು.

ಇದರಿಂದ ವಿಚಲಿತರಾದರೂ ತೋರ್ಪಡಿಸಿಕೊಳ್ಳದ ಡಿಕೆ, 2018ರ ಚುನಾವಣೆಯಲ್ಲಿ ಮತ್ತೆ ಗೆದ್ದು, ಕಾಂಗ್ರೆಸ್ ಬಹುಮತ ಗಳಿಸುವಲ್ಲಿ ವಿಫಲವಾದಾಗ, ಕ್ಷಿಪ್ರಕ್ರಾಂತಿಗೆ ಕೈಹಾಕಿ, ಬಿಜೆಪಿ ವಿರುದ್ಧ ಬಹಿರಂಗ ಸಮರ ಸಾರಿದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಜಾತ್ಯತೀತ ಶಕ್ತಿಗಳು ಒಂದಾಗಿ, ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಈ ತಂತ್ರ ಫಲಿಸಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ, ಡಿಕೆ ಶಿವಕುಮಾರ್ ಜಲ ಸಂಪನ್ಮೂಲ, ವೈದ್ಯಕೀಯ ಶಿಕ್ಷಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರಾದರು. ಆದರೆ ಈ ಸರ್ಕಾರ ಬಹಳ ದಿನ ಬದುಕಲಿಲ್ಲ. 2019ರಲ್ಲಿ ಕೊನೆಯುಸಿರೆಳೆಯಿತು.

ಕಾಂಗ್ರೆಸ್-ಜೆಡಿಎಸ್ ಸರ್ಕಾರ ಬಿದ್ದುಹೋಗಿದ್ದಕ್ಕೆ ಸಿದ್ದರಾಮಯ್ಯ ಕಾರಣ ಎಂದು ಕುಮಾರಸ್ವಾಮಿ ಮತ್ತು ಗೌಡರು ಬಹಿರಂಗವಾಗಿಯೇ ದೂರತೊಡಗಿದರು. ಸಮಯ ಸಿಕ್ಕಾಗೆಲೆಲ್ಲ ಕೆಂಡ ಕಾರತೊಡಗಿದರು. ಆದರೆ, ಡಿಕೆ ಶಿವಕುಮಾರ್ ಸುಮ್ಮನೆ ಕೂರಲಿಲ್ಲ. 2020ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟಿಸತೊಡಗಿದರು. ಅದರ ಫಲವಾಗಿ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿ, ಅಧಿಕಾರಕ್ಕೇರಿದಾಗ ಸಿದ್ದರಾಮಯ್ಯ ಮುಖ್ಯಮಂತ್ರಿ, ಡಿಕೆ ಉಪ ಮುಖ್ಯಮಂತ್ರಿಯಾದರು. ಜೆಡಿಎಸ್ 19 ಸ್ಥಾನಗಳಿಗೆ ಕುಸಿದು, ಹೀನಾಯ ಸೋಲು ಕಂಡಿತು. ಇದು ದೇವೇಗೌಡ ಮತ್ತವರ ಕುಟುಂಬದ ಜಂಘಾಬಲವನ್ನೇ ಉಡುಗಿಸಿತು.

ಅಲ್ಲಿಗೆ ಒಕ್ಕಲಿಗರ ಪಕ್ಷ ಎಂದು ತನಗೆ ತಾನೇ ಬಿಂಬಿಸಿಕೊಳ್ಳುತ್ತಿದ್ದ ಜೆಡಿಎಸ್ ವರಿಷ್ಠರ ಸಾಮ್ರಾಜ್ಯ ಕುಸಿದಿತ್ತು. ಅದು ಬಿಜೆಪಿಯ ಒಕ್ಕಲಿಗ ನಾಯಕರಿಗೂ ಸಿಗದಂತಾಗಿತ್ತು. ಸಹಜವಾಗಿಯೇ ಡಿಕೆ ಸಹೋದರರ ಸಾಮ್ರಾಜ್ಯ ವಿಸ್ತರಣೆಗೆ ಅದು ಅನುವು ಮಾಡಿಕೊಟ್ಟಿತ್ತು. ಅದಕ್ಕೆ ಪೂರಕವಾಗಿ ಎಸ್.ಎಂ. ಕೃಷ್ಣರಿಗೆ ವಯಸ್ಸಾಗಿ, ಬಿಜೆಪಿ ಸೇರಿ ನೇಪಥ್ಯಕ್ಕೆ ಸರಿದಿದ್ದರು. ಅದು ರಾಜ್ಯದಲ್ಲಿ ಒಕ್ಕಲಿಗರು ಎಂದಾಕ್ಷಣ ಗೌಡರ ಕುಟುಂಬ ಮತ್ತು ಡಿಕೆ ಕುಟುಂಬದ ನಡುವೆ ಹರಿದು ಹಂಚಿಹೋದಂತೆ ಭಾಸವಾಗತೊಡಗಿತು. ಅದಕ್ಕೆ ಪೂರಕವಾಗಿ, ಆ ಕುಟುಂಬಗಳ ಅಪರಿಮಿತ ಆಸ್ತಿ, ಅವರ ಅಟ್ಟಹಾಸ ಎದ್ದು ಕಾಣತೊಡಗಿತು.

ಅದೇ ಸಮಯದಲ್ಲಿ ಬೆಂ. ಗ್ರಾಮಾಂತರ ಲೋಕಸಭಾ ಸದಸ್ಯ ಸುರೇಶ್ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಗುಟುರು ಹಾಕಿದರು. ಅವರ ಮೇಲೆ ಮೋದಿ ಕಣ್ಣು ಬಿತ್ತು. ಡಿಕೆ ಮೇಲೆ ಅಮಿತ್ ಶಾಗೆ ಹಳೆಯ ಸಿಟ್ಟಿತ್ತು. ದೆಹಲಿಯಲ್ಲಿ ರಾಜ್ಯ ಸರ್ಕಾರ ಪ್ರತಿಭಟಿಸುವ ಮೂಲಕ ಆ ಕಣ್ಣುರಿ ಇನ್ನಷ್ಟು ಹೆಚ್ಚಾಯಿತು. ಇದಕ್ಕಾಗಿ ಕಾದಿದ್ದ ದೇವೇಗೌಡರು, 2024ರ ಲೋಕಸಭಾ ಚುನಾವಣೆಯ ನೆಪದಲ್ಲಿ ದಿಲ್ಲಿಗೆ ಹೋಗಿ ಮೋದಿಯ ಕೈ ಕುಲುಕಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಸುರೇಶ್ ಮಣಿಸಲು ಡಾ. ಮಂಜುನಾಥರನ್ನು ಕಣಕ್ಕಿಳಿಸಲು ಮುಂದಾದರು. ಅಲ್ಲಿಯವರೆಗೆ ಬಿಜೆಪಿಯತ್ತ ಒಲವು ತೋರದಿದ್ದ ಒಕ್ಕಲಿಗರು ಗೌಡರ ಕೃಪೆಯಿಂದ ಬಿಜೆಪಿಯತ್ತ ವಾಲತೊಡಗಿದರು. ಮೋದಿಗೂ ಅದೇ ಬೇಕಿತ್ತು.

ಮೋದಿ-ದೇವೇಗೌಡ
ಮೋದಿ-ದೇವೇಗೌಡ

ಈ ಮೈತ್ರಿಯ ಫಲವಾಗಿ ಹಳೇ ಮೈಸೂರು ಭಾಗದ ಒಕ್ಕಲಿಗರು ಮೈತ್ರಿ ಪಕ್ಷಗಳತ್ತ ವಾಲಿದರು. ತವರು ಜಿಲ್ಲೆ ಹಾಸನವೊಂದನ್ನು ಬಿಟ್ಟು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಮಂಡ್ಯದಲ್ಲಿ ಮತ್ತೆ ಗೌಡರ ಕುಟುಂಬದ ಪ್ರಭಾವ ಮತ್ತು ಪ್ರಾಬಲ್ಯ ಹೆಚ್ಚಿತು. ಕುಮಾರಸ್ವಾಮಿ ಗೆದ್ದು ಕೇಂದ್ರದ ಮಂತ್ರಿಯೂ ಆದರು. ಹಾಗೆಯೇ ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸಹೋದರರ ಕೋಟೆಯನ್ನು ಗೌಡರ ಅಳಿಯ ಡಾ. ಮಂಜುನಾಥ್ ಛಿದ್ರ ಮಾಡಿದರು. ಇದರಿಂದ ಜರ್ಜರಿತರಾದ ಡಿಕೆ ಸಹೋದರರು ಸಾಮ್ರಾಜ್ಯ ಕಳೆದುಕೊಂಡು ಕಂಗಾಲಾಗಿ ಕೂರುವಂತಾಯಿತು.

ಹೀಗೆ ಸುಮ್ಮನೆ ಕೂರುವುದು ಪೈಲ್ವಾನರ, ಪಾಳೇಗಾರರ ಸ್ವಭಾವವಲ್ಲವಾದ್ದರಿಂದ, ಡಿಸಿಎಂ ಡಿಕೆ ಶಿವಕುಮಾರ್ ಚನ್ನಪಟ್ಟಣ ಉಪಚುನಾವಣೆ ನೆಪದಲ್ಲಿ ಬೀದಿಗಿಳಿದಿದ್ದಾರೆ. ದೇವರಿಗೆ ಕೈ ಮುಗಿಯುತ್ತಿದ್ದಾರೆ. ಒಳಗೊಳಗೆ ಗೌಡರ ಕುಟುಂಬದ ವಿರುದ್ಧ ಹೂಂಕರಿಸುತ್ತಿದ್ದಾರೆ. ಅತ್ತ ಕಡೆಯಿಂದ ಕುಮಾರಸ್ವಾಮಿಯವರು ಕೂಡ ತೊಡೆ ತಟ್ಟಿ ಅಖಾಡಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ. ಒಬ್ಬರು ಸಹೋದರನಿಗಾಗಿ, ಮತ್ತೊಬ್ಬರು ಮಗನಿಗಾಗಿ- ಕದನಕ್ಕೆ ಕಾತರಿಸುತ್ತಿದ್ದಾರೆ.

ಹಾಗಾಗಿ ಇದು ದೊಡ್ಡಾಲಳ್ಳಿಯ ಕೆಂಪೇಗೌಡ ಮತ್ತು ಹರದನಹಳ್ಳಿಯ ದೇವೇಗೌಡ ಕುಟುಂಬಗಳ ಕದನ. ಈ ಎರಡು ಕುಟುಂಬಗಳ ರಾಜಕೀಯ ಅಧಿಕಾರಕ್ಕಾಗಿ, ಅಭಿವೃದ್ಧಿಗಾಗಿ, ಸಂಪತ್ತಿನ ಸಂರಕ್ಷಣೆಗಾಗಿ ಒಕ್ಕಲಿಗ ಸಮುದಾಯ ಕಾಲಾಳುಗಳಾಗಿ, ಕಾದಾಟದ ಅಸ್ತ್ರಗಳಾಗಿ ಬಳಕೆಯಾಗುತ್ತಿದೆ. ದುರದೃಷ್ಟಕರ ಸಂಗತಿ ಎಂದರೆ, ಈ ಸಮುದಾಯ ನಲವತ್ತು ವರ್ಷಗಳ ಹಿಂದೆ ಹೇಗಿತ್ತೋ ಇವತ್ತು ಕೂಡ ಹಾಗೆಯೇ ಇದೆ.

ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಈ ಬಹುಸಂಖ್ಯಾತ ಸಮುದಾಯ ರಾಜಕೀಯ ಪ್ರಜ್ಞೆ ಬೆಳೆಸಿಕೊಂಡು ಯೋಗ್ಯ ನಾಯಕನನ್ನು ಆಯ್ಕೆ ಮಾಡಿಕೊಳ್ಳುವುದು ಯಾವಾಗ?

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇನ್ಸೈಡ್ ಔಟ್ ಸಿನಿಮಾ ನೋಡಿ- ಒಳಗಿನ ಹೊರಗೊಂದು ವಿಸ್ಮಯ ಅರಿಯಿರಿ

ಪಿಕ್ಸರ್ ಅವರ 'ಇನ್ಸೈಡ್ ಔಟ್' (inside out) ಬಂದು ಒಂಬತ್ತು ವರ್ಷಗಳೇ...

ರೈತನಿಗೆ ಅವಮಾನ | ಏಳು ದಿನ ಜಿ ಟಿ ಮಾಲ್‌ ಮುಚ್ಚಿಸಲು ರಾಜ್ಯ ಸರ್ಕಾರ ಕ್ರಮ

ರೈತರ ವಿಷಯದಲ್ಲಿ ಯಾರೇ ಅವಮಾನ ಮಾಡಿದರೂ ಸಹಿಸುವುದಿಲ್ಲ ಎಂದು ವಾರದ ಹಿಂದೆ...

ಯುಪಿ ಬಿಜೆಪಿಯಲ್ಲಿ ಯೋಗಿ-ಮೌರ್ಯ ನಡುವೆ ಗುದ್ದಾಟ; ಮೋದಿ-ಶಾ ಚರ್ಚೆ

ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ತೀರಾ ಕಳಪೆ ಪ್ರದರ್ಶನ ನೀಡಿದೆ....

ಕನ್ನಡಿಗರಿಗೆ ಉದ್ಯೋಗ | ‘ಅಸ್ತು’ ಎಂದು ಹೆಜ್ಜೆ ಇಟ್ಟ ಸರ್ಕಾರ ದಿನ ಕಳೆಯುವುದರೊಳಗೇ ‘ಸುಸ್ತು’: ವಿಜಯೇಂದ್ರ ವ್ಯಂಗ್ಯ

ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ತಂದದ್ಯಾಕೆ? ತಡೆಹಿಡಿದಿದ್ದೇಕೆ? ಕನ್ನಡಿಗರ ಬದುಕಿನೊಂದಿಗೆ ಚೆಲ್ಲಾಟವೇಕೆ?...