ಸಹೋದರನ ಜೊತೆ ಜಗಳವಾಡಿದ ಬಾಲಕಿಯೊಬ್ಬಳು ಕೋಪದಲ್ಲಿ ಮೊಬೈಲ್‌ಅನ್ನು ನುಂಗಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿದೆ.
ಮೊಬೈಲ್ ನುಂಗಿದ ಬಳಿಕ ವಿಪರೀತ ಹೊಟ್ಟೆ ನೋವು ಅನುಭವಿಸಿದ್ದ ಬಾಲಕಿಯನ್ನು ಗ್ವಾಲಿಯರ್‌ನ ಜಯಾರೋಗ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಬಾಲಕಿಯ ಹೊಟ್ಟೆಯಿಂದ ಫೋನ್ ಹೊರತೆಗೆದಿದ್ದಾರೆ.
ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಅಮಯಾನ್ ಪ್ರದೇಶದ ನಿವಾಸಿಯಾಗಿರುವ ಬಾಲಕಿ ತನ್ನ ಅಣ್ಣನ ಜೊತೆ ಯಾವುದೋ ವಿಷಯಕ್ಕೆ ಜಗಳವಾಡಿದ್ದಳು. ಬಳಿಕ ಕೋಪಗೊಂಡು ತನ್ನ ಕೀಪ್ಯಾಡ್ ಮೊಬೈಲ್ ಫೋನ್ ನುಂಗಿದ್ದಾಳೆ. ಬಳಿಕ ವಿಪರೀತ ಹೊಟ್ಟೆನೋವಿನಿಂದ ಬಳಲಿದ ಬಾಲಕಿ, ಅತಿಯಾಗಿ ವಾಂತಿ ಮಾಡತೊಡಗಿದ್ದಳು. ಇದರಿಂದ ಆತಂಕಗೊಂಡ ಹೆತ್ತವರು ಬಾಲಕಿಯನ್ನು ಭಿಂಡ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಆದರೆ ವಿಷಯದ ಗಂಭೀರತೆಯನ್ನು ಅರಿತ ವೈದ್ಯರು, ತಕ್ಷಣವೇ ಗ್ವಾಲಿಯರ್‌ನ ಜಯಾರೋಗ್ಯ ಆಸ್ಪತ್ರೆಗೆ ಕರೆದೊಯ್ಯವಂತೆ ಸೂಚಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಜೈಪುರ | ಹಿಂದೂ ಗುರುಗಳು ನೀಡಿರುವ ಸೇವೆ ಮಿಷನರಿಗಳಿಗಿಂತಲೂ ಹೆಚ್ಚು: ಮೋಹನ್ ಭಾಗವತ್
ಜೆಎಎಚ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಬಾಲಕಿಯನ್ನು ಅಲ್ಟ್ರಾಸೌಂಡ್, ಎಕ್ಸ್-ರೇ ಹಾಗೂ ಸಿಟಿ ಸ್ಕ್ಯಾನ್ ಸೇರಿದಂತೆ ಹಲವು ರೀತಿಯ ಪರೀಕ್ಷೆಗೆ ಒಳಪಡಿಸಿದ್ದು, ಈ ವೇಳೆ ಹೊಟ್ಟೆಯಲ್ಲಿ ಮೊಬೈಲ್ ಸಿಕ್ಕಿಹಾಕಿಕೊಂಡಿರುವುದು ಪತ್ತೆಯಾಗಿದೆ. ಸುಮಾರು ಒಂದು ಗಂಟೆಯ ಶಸ್ತ್ರಚಿಕಿತ್ಸೆಯ ಬಳಿಕ ವೈದ್ಯರು ಬಾಲಕಿಯ ಹೊಟ್ಟೆಯಿಂದ ಮೊಬೈಲ್ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೊಬೈಲ್ ನುಂಗಿ ಆಸ್ಪತ್ರೆಗೆ ದಾಖಲಾದ ಮತ್ತು ಶಸ್ತ್ರಚಿಕಿತ್ಸೆ ಮಾಡಿ ಮೊಬೈಲ್ ಹೊರತೆಗೆದ ಮೊದಲ ಪ್ರಕರಣ ಇದಾಗಿದೆ ಎಂದು ಡಾ ನವೀನ್ ಕುಶ್ವಾಹಾ ತಿಳಿಸಿದ್ದಾರೆ.