ಸುದ್ದಿ ನೋಟ | ರಾಬರ್ಟ್ ವಾದ್ರಾ ಕ್ಲೀನ್‌ಚಿಟ್‌; ವ್ಯರ್ಥ ವಿಚಾರಣೆಯಿಂದ ಬಿಜೆಪಿ ಚುನಾವಣಾ ಲಾಭ ಪಡೆಯಿತೆ?

Date:

ಹನ್ನೊಂದು ವರ್ಷಗಳ ವಿಚಾರಣೆಯ ನಂತರ ರಾಬರ್ಟ್ ವಾದ್ರಾ ಮತ್ತು ಭೂಪಿಂದರ್ ಹೂಡಾಗೆ ಕ್ಲೀನ್ ಚಿಟ್ ನೀಡಿದ ಬಿಜೆಪಿ ನೇತೃತ್ವದ ಮನೋಹರಲಾಲ್ ಕಟ್ಟರ್ ಸರ್ಕಾರ

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಮತ್ತು ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ವಿರುದ್ಧ ಎಂಟು ವರ್ಷಗಳ ಕಾಲ ಅಬ್ಬರದ ದೋಷಾರೋಪಣೆ ನಂತರ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಸರ್ಕಾರ ರಚಿಸಿಕೊಂಡಿರುವ ಬಿಜೆಪಿ, ಇದೀಗ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿದಾವತ್‌ನಲ್ಲಿ ಇಬ್ಬರನ್ನೂ ದೋಷಮುಕ್ತರನ್ನಾಗಿಸಿದೆ!

ಹರಿಯಾಣದ ಬಿಜೆಪಿ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿದಾವತ್‌ನಲ್ಲಿ, “ಪ್ರಕರಣದಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ” ಮತ್ತು “ರಾಜ್ಯ ಬೊಕ್ಕಸಕ್ಕೆ ನಷ್ಟವಾಗಿಲ್ಲ” ಎಂದು ವರದಿ ನೀಡಿದೆ.

ವಾದ್ರಾ ವರ್ಚಸ್ಸಿಗೆ ಧಕ್ಕೆ ತಂದ ಹಗರಣವೇನು?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2018ರಲ್ಲಿ ಗುರುಗ್ರಾಮದ ಭೂಮಿ ಒಪ್ಪಂದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪತಿ ರಾಬರ್ಟ್ ವಾದ್ರಾ ಮತ್ತು 2005ರಿಂದ 2014 ನಡುವೆ ಹರಿಯಾಣದ ಮುಖ್ಯಮಂತ್ರಿಯಾಗಿದ್ದ ಭೂಪಿಂದರ್ ಹೂಡಾ ವಿರುದ್ಧ ವಂಚನೆ, ಫೋರ್ಜರಿ ಹಾಗೂ ಭ್ರಷ್ಟಾಚಾರದ ಆರೋಪವನ್ನು ಬಿಜೆಪಿ ಸರ್ಕಾರ ಹೊರಿಸಿತ್ತು.

2018ರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕ್ರಿಮಿನಲ್ ಪಿತೂರಿ, ಮೋಸ, ವಂಚನೆ ಮತ್ತು ಫೋರ್ಜರಿ ಮಾಡಿರುವ ಆರೋಪಗಳನ್ನು ಭೂಪಿಂದರ್ ಹೂಡಾ, ರಾಬರ್ಟ್ ವಾದ್ರಾ ಹಾಗೂ ರಿಯಲ್ ಎಸ್ಟೇಟ್ ಕಂಪನಿಗಳಾದ ಡಿಎಲ್‌ಎಫ್‌ ಮತ್ತು ಓಂಕಾರೇಶ್ವರ್ ಪ್ರಾಪರ್ಟೀಸ್ ಮೇಲೆ ಹೊರಿಸಿ ಎಫ್‌ಐಆರ್ ದಾಖಲಿಸಲಾಗಿತ್ತು.

ಈ ಒಪ್ಪಂದವನ್ನು ರಾಬರ್ಟ್ ವಾದ್ರಾರಿಗೆ ಲಾಭವಾಗುವಂತೆ ವಿನ್ಯಾಸಗೊಳಿಸಲಾಗಿದ್ದು, ರೂ 44 ಕೋಟಿ ಲಾಭ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.

ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಪಾತ್ರವೇನು?

ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರು 2012 ಅಕ್ಟೋಬರ್‌ನಲ್ಲಿ ವಿಧಾನಸಭಾ ಚುನಾವಣೆಗೆ ಮೊದಲು ಈ ಭೂ ಒಪ್ಪಂದದ ಮ್ಯುಟೇಶನ್‌ ರದ್ದುಗೊಳಿಸಿರುವುದು ಬಿಜೆಪಿಗೆ ಆರೋಪ ಹೊರಿಸುವ ಅವಕಾಶ ನೀಡಿತ್ತು. ವಾದ್ರಾರ ಭೂ ವ್ಯವಹಾರದ ತನಿಖೆ ಆರಂಭಿಸಿದ ತಕ್ಷಣ ಗಂಟೆಗಳ ಒಳಗೆ 2012 ಅಕ್ಟೋಬರ್ 11ರಂದು ಮುಖ್ಯಮಂತ್ರಿ ಹೂಡಾ ಅವರು ಅಶೋಕ್ ಖೇಮ್ಕಾ ವರ್ಗಾವಣೆಗೊಳಿಸಿ ಆದೇಶಿಸಿದ್ದರು.

ಆದರೆ ಖೇಮ್ಕಾ ಅವರು ಹರಿಯಾಣ ಬೀಜ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕರಾಗಿ ತಮ್ಮ ಹೊಸ ಹುದ್ದೆಗೆ ವರ್ಗವಾಗಿ ಹೋಗುವ ಮೊದಲು ತನಿಖೆ ಮುಂದುವರಿಸಿ 2012 ಅಕ್ಟೋಬರ್ 15ರಂದು ಮ್ಯುಟೇಶನ್ ರದ್ದುಗೊಳಿಸಿದ್ದರು. “ಈ ಮ್ಯುಟೇಶನ್‌ಗೆ ಅವಕಾಶ ನೀಡಿದ ಸಹಾಯಕ ಕನ್ಸಾಲಿಡೇಶನ್ ಅಧಿಕಾರಿ, ಅಂತಹ ನಿರ್ಧಾರಕ್ಕೆ ಸಮರ್ಥರಲ್ಲ” ಎಂದು ಅಶೋಕ್ ಖೇಮ್ಕಾ ಹೇಳಿದ್ದರು. “ಅಧಿಕೃತ ಕನ್ಸಾಲಿಡೇಶನ್ ಅಧಿಕಾರಿಯ ಮಂಜೂರಾತಿ ಇಲ್ಲದೆ ಸಹಾಯಕ ಕನ್ಸಾಲಿಡೇಶನ್ ಅಧಿಕಾರಿ ಆಸ್ತಿ ವರ್ಗಾವಣೆಗೆ ಪರವಾನಗಿ ನೀಡುವಂತಿಲ್ಲ” ಎನ್ನುವುದು ಖೇಮ್ಕಾ ಅವರು ರದ್ದತಿಗೆ ನೀಡಿದ ಕಾರಣವಾಗಿತ್ತು.

ಮ್ಯುಟೇಶನ್ ರದ್ದುಗೊಳಿಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಯಿತು. ಹೂಡಾ ಸರ್ಕಾರ ಮೂವರು ಹಿರಿಯ ಐಎಎಸ್ ಅಧಿಕಾರಿಗಳಾದ ಕೃಷ್ಣ ಮೋಹನ್‌, ರಾಜನ್ ಗುಪ್ತಾ ಹಾಗೂ ಕೆಕೆ ಜಲನ್‌ ಅವರ ತನಿಖಾ ಸಮಿತಿ ರಚಿಸಿ ಸಂಪೂರ್ಣ ಪ್ರಕರಣದ ವರದಿ ಸಲ್ಲಿಸುವಂತೆ ಆದೇಶಿಸಿತು. 2013 ಏಪ್ರಿಲ್‌ನಲ್ಲಿ ರಾಜ್ಯ ಸರ್ಕಾರ ವಾದ್ರಾ ಮತ್ತು ಡಿಎಲ್‌ಎಫ್ ವ್ಯವಹಾರಕ್ಕೆ ಕ್ಲೀನ್‌ ಚಿಟ್ ನೀಡಿತ್ತು. ಬದಲಾಗಿ, “ಖೇಮ್ಕಾ ಅವರು ತಮ್ಮ ಅಧಿಕಾರದ ವ್ಯಾಪ್ತಿ ಮೀರಿ ಸ್ವಾರ್ಥ ಹಿತಾಸಕ್ತಿಯಲ್ಲಿ ಕೆಲಸ ಮಾಡಿದ್ದಾರೆ” ಎಂದು ಸಮತಿ ಹೇಳಿತ್ತು.

ಪ್ರಕರಣ ಬಿಜೆಪಿಗೆ ಹೇಗೆ ಲಾಭವಾಯಿತು?

ಹನ್ನೊಂದು ವರ್ಷಗಳ ಹಿಂದೆ ವಾದ್ರಾ ಅವರ ಸ್ಕೈಲೈಟ್ ಹಾಸ್ಪಿಟಾಲಿಟಿ ಮತ್ತು ರಿಯಲ್ ಎಸ್ಟೇಟ್ ದೈತ್ಯ ಡಿಎಲ್‌ಎಫ್ ಯುನಿವರ್ಸಲ್ ಲಿಮಿಟೆಡ್‌ ನಡುವಿನ ಒಪ್ಪಂದದಲ್ಲಿ ಹಗರಣವಾಗಿದೆ ಎಂದು ಬಿಜೆಪಿ ಅಬ್ಬರದ ಚುನಾವಣಾ ಪ್ರಚಾರ ಕೈಗೊಂಡಿತ್ತು. 2014ರ ಲೋಕಸಭಾ ಚುನಾವಣೆ ಮತ್ತು ನಂತರ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಜಯ ದಾಖಲಿಸಲು ಬಿಜೆಪಿಗೆ ಈ ಹಗರಣ ನೆರವಾಗಿತ್ತು. ಹರಿಯಾಣದಲ್ಲಿ ಬಿಜೆಪಿ ಸ್ವಂತ ನೆಲೆಯಲ್ಲಿ ಅಧಿಕಾರಕ್ಕೇರಲು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗಾಂಧಿ ಪರಿವಾರದ ವಿರುದ್ಧ ಜನರಲ್ಲಿ ನೆಗೆಟಿವ್ (ನಕಾರಾತ್ಮಕ) ಅಭಿಪ್ರಾಯ ರೂಪಿಸಲು ಈ ಪ್ರಕರಣ ನೆರವಾಗಿತ್ತು.

ಅಶೋಕ್ ಖೇಮ್ಕಾ ಅವರು ವಿಧಾನಸಭಾ ಚುನಾವಣೆಗೆ ಮೊದಲು ಈ ಭೂ ಒಪ್ಪಂದದ ಮ್ಯುಟೇಶನ್‌ ರದ್ದುಗೊಳಿಸಿದ ನಂತರ ಬಿಜೆಪಿ ಆರು ಪುಟಗಳ ‘ದಾಮಾದ್ ಶ್ರೀ’ ಎನ್ನುವ ಕೈಪಿಡಿ ಹೊರತಂದಿತ್ತು. ಅದರಲ್ಲಿ ರಾಜಸ್ಥಾನ ಮತ್ತು ಹರಿಯಾಣದಲ್ಲಿ ರಾಬರ್ಟ್ ವಾದ್ರಾ ಅವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಲಾಗಿತ್ತು.

ಪಕ್ಷ ಸುಮಾರು ಎಂಟು ನಿಮಿಷಗಳ ಪ್ರಚಾರಾಭಿಯಾನದ ದೃಶ್ಯರೂಪಕವನ್ನೂ ತಯಾರಿಸಿತ್ತು. ಕಾಂಗ್ರೆಸ್ ಹರಿಯಾಣದಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಗಾಂಧಿ ಕುಟುಂಬದ ಉದ್ಯಮ ವ್ಯವಹಾರಗಳಿಗೆ ವಾದ್ರಾ ನೆರವಾಗಿದ್ದಾರೆ ಎಂದು ಅದರಲ್ಲಿ ಆರೋಪಿಸಲಾಗಿತ್ತು.

ಹರಿಯಾಣ ಚುನಾವಣೆಯಲ್ಲಿ 90 ಸ್ಥಾನಗಳಲ್ಲಿ 47ನ್ನು ಗೆದ್ದು ಅಧಿಕಾರಕ್ಕೆ ಬರಲು ಈ ಹಗರಣದ ಆರೋಪ ನೆರವಾಗಿದೆ.

ಪ್ರಕರಣದ ತನಿಖೆ ಹೇಗೆ ಸಾಗಿತ್ತು?

ಬಿಜೆಪಿಯ ಮನೋಹರ್‌ಲಾಲ್ ಕಟ್ಟರ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ನ್ಯಾಯಮೂರ್ತಿ (ನಿವೃತ್ತ) ಎಸ್‌ ಎನ್ ಧಿಂಗ್ರಾ ನೇತೃತ್ವದಲ್ಲಿ 2015ರಲ್ಲಿ ಒಬ್ಬ ಆಯುಕ್ತರಿರುವ ವಿಶೇಷ ತನಿಖಾ ತಂಡ ರಚಿಸಿತು. ಮುಖ್ಯವಾಗಿ ವಾದ್ರಾ ಕಂಪನಿಗೆ ಕಾಲನಿ ಪರವಾನಗಿ ನೀಡಿರುವ ಬಗ್ಗೆ ತನಿಖೆ ನಡೆಸಲಾಗಿತ್ತು.

2018ರಲ್ಲಿ ಪೊಲೀಸರು ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಪ್ರಕರಣ ದಾಖಲಾದ ನಂತರ ತನಿಖೆ ನಿಧಾನಗತಿಯಲ್ಲಿ ಸಾಗಿತ್ತು. ಹತ್ತು ವರ್ಷಗಳಾದರೂ ಪೊಲೀಸರು ಜಾರ್ಜ್ ಶೀಟ್ ಸಲ್ಲಿಸಲಿಲ್ಲ. ಧಿಂಗ್ರಾ ಕಮಿಷನ್ 182 ಪುಟಗಳ ವರದಿಯನ್ನು 2016 ಆಗಸ್ಟ್ 31ರಂದು ಸಲ್ಲಿಸಿತ್ತು. 2020ರಲ್ಲಿ ಕಟ್ಟರ್ ಸರ್ಕಾರ, ವಿವಿಧ ದೋಷಗಳಿವೆ ಎನ್ನುವ ಕಾರಣ ನೀಡಿ ವರದಿಯನ್ನು ರದ್ದುಗೊಳಿಸಿತ್ತು. ಬಿಜೆಪಿ ಸರ್ಕಾರ ವರದಿಯ ವಿವರಗಳನ್ನು ಬಹಿರಂಗಪಡಿಸಿಲ್ಲ.

2016 ನವೆಂಬರ್‌ನಲ್ಲಿ ಭೂಪಿಂದರ್ ಹೂಡಾ ತನಿಖಾ ಸಮಿತಿ ರಚಿಸಿದ ವಿರುದ್ಧ ಪಂಜಾಬ್‌-ಹರಿಯಾಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. 2016 ನವೆಂಬರ್ 23ರಂದು ಹೈಕೋರ್ಟ್ ವಿಚಾರಣೆ ನಡೆಯುತ್ತಿದ್ದಾಗ ರಾಜ್ಯ ಬಿಜೆಪಿ ಸರ್ಕಾರ ವರದಿ ಪ್ರಕಟಿಸುವುದಿಲ್ಲ ಎಂದು ಹೇಳಿತು.

ಆದರೆ, ವರದಿಯಲ್ಲಿ ಹೂಡಾ ಮೇಲೆ ಸ್ವಜನಪಕ್ಷಪಾತದ ಆರೋಪ ಹೊರಿಸಲಾಗಿತ್ತು ಎಂದು ಸುದ್ದಿ ಹರಡಿದೆ. 2018ರಲ್ಲಿ ಹೂಡಾ ಮತ್ತು ವಾದ್ರಾ ವಿರುದ್ಧ ಭೂ ಅವ್ಯವಹಾರದ ಎಫ್‌ಐಆರ್ ದಾಖಲಿಸಲಾಯಿತು.

ಈ ಸುದ್ದಿ ಓದಿದ್ದೀರಾ?: ರಾಹುಲ್ ಗಾಂಧಿಯಿಂದ ಇಂದು ಅಧಿಕೃತ ಬಂಗಲೆ ತೆರವು

ಈಗಿನ ಅಫಿದಾವತ್‌ನಲ್ಲಿ ಏನು ಹೇಳಲಾಗಿದೆ?

ಇದೀಗ ದಶಕಗಳ ನಂತರ ಮುಖ್ಯಮಂತ್ರಿ ಕಟ್ಟರ್ ನೇತೃತ್ವದ ಬಿಜೆಪಿ-ಜೆಜೆಪಿ ಹರಿಯಾಣ ಸರ್ಕಾರ  ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ಗೆ ಸಲ್ಲಿಸಿದ ಅಫಿದಾವತ್‌ನಲ್ಲಿ “ರಾಬರ್ಟ್ ವಾದ್ರಾ ಅವರ ಸ್ಕೈಲೈಟ್ ಹಾಸ್ಪಿಟಾಲಿಟಿಯಿಂದ ಡಿಎಲ್‌ಎಫ್ ಯುನಿವರ್ಸಲ್ ಲಿಮಿಟೆಡ್‌ಗೆ ಭೂಮಿ ವರ್ಗಾಯಿಸಿದಾಗ ಯಾವುದೇ ನಿಯಮಗಳು ಉಲ್ಲಂಘನೆಯಾಗಿಲ್ಲ” ಎಂದು ಹೇಳಿದೆ.

2012ರಲ್ಲಿ ವಾದ್ರಾ ಅವರ ಸ್ಕೈ ಲೈಟ್ ಹಾಸ್ಪಿಟಾಲಿಟಿ ಲಿಮಿಟೆಡ್‌ನಿಂದ ಡಿಎಲ್‌ಎಫ್ ಖರೀದಿಸಿದ ಗುರುಗ್ರಾಮದ ಶಿಖೋಪುರ್ ಗ್ರಾಮದ (ಈಗ ಸೆಕ್ಟರ್ 83) 3.5 ಎಕರೆ ಭೂ ಒಪ್ಪಂದದಲ್ಲಿ ಯಾವುದೇ ಉಲ್ಲಂಘನೆ ಕಂಡುಬಂದಿಲ್ಲ ಎಂದು ಗುರುಗ್ರಾಮ್‌ನ ಮನ್‌ಸೇರ್ ಪಟ್ಟಣದ ತಹಶೀಲ್ದಾರ್ ಅವರು ವರದಿ ನೀಡಿದ್ದಾರೆ.

ಮನ್‌ಸೇರ್‌ನ ತಹಶೀಲ್ದಾರ್ ಅವರು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ಸಮಿತಿಗೆ ಕಳೆದ ವರ್ಷ ಮೇ 12ರಂದು ವರದಿ ನೀಡಿದ್ದರು. ಈ ವರದಿಯಲ್ಲಿ ಭೂ ಒಪ್ಪಂದದಿಂದ ರಾಜ್ಯದ ಬೊಕ್ಕಸಕ್ಕೆ ಯಾವುದೇ ನಷ್ಟವಾಗಿಲ್ಲ ಎಂದೂ ಹೇಳಲಾಗಿದೆ.

ಹೈಕೋರ್ಟ್‌ನಲ್ಲಿ ಅಫಿದಾವತ್ ಸಲ್ಲಿಸಿದ ಒಂದು ದಿನದ ನಂತರ ಭೂಪಿಂದರ್ ಸಿಂಗ್ ಹೂಡಾ ಅವರು, “ಇದು ರಾಜಕೀಯ ಪ್ರೇರಿತ ಪ್ರಕರಣ, ರಾಜಕೀಯ ಲಾಭಕ್ಕಾಗಿ ತನಿಖೆ ನಡೆಸಲಾಗುತ್ತಿದೆ ಎಂದು ನಾನು ಹಿಂದೆಯೇ ಹೇಳಿದ್ದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಅಂದರೆ, ಬಿಜೆಪಿ ಚುನಾವಣೆಯಲ್ಲಿ ಗೆಲ್ಲಲು ವಿನಾಕಾರಣ ವಾದ್ರಾ ಮೇಲೆ ಸುಳ್ಳು ಆರೋಪ ಹೊರಿಸಿತೆ? ಶಾಸಕಾಂಗ ಮತ್ತು ನ್ಯಾಯಾಂಗವನ್ನು ದುರುಪಯೋಗಪಡಿಸಿಕೊಂಡಿತೆ? ಬಿಜೆಪಿ ಪರ ಮಾಧ್ಯಮಗಳು ಅದಕ್ಕೆ ವ್ಯಾಪಕ ಪ್ರಚಾರ ನೀಡಿತೆ? ಈ ಪ್ರಶ್ನೆಗಳನ್ನು ದೇಶದ ಜನ ಕೇಳಿಕೊಳ್ಳಬೇಕಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ಬಿಜೆಪಿ ಗೆಲುವಿಗೆ 13 ರಾಜ್ಯಗಳ ಸವಾಲು! ಆಕ್ಸಿಸ್ ಎಂಡಿ ಗುಪ್ತಾ ಹೇಳುವುದೇನು? 

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂಬ...

ರಾಹುಲ್ V/s ಪಿಣರಾಯಿ; ಕೇರಳದಲ್ಲಿ ಲೋಕಸಭಾ ಚುನಾವಣಾ ಅಬ್ಬರ

ಕೇರಳದಲ್ಲಿ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಮತದಾನಕ್ಕೆ ಒಂದು ವಾರವಷ್ಟೇ ಬಾಕಿ...

ಮೊದಲ ಹಂತದ ಮತದಾನ | ಪಶ್ಚಿಮ ಬಂಗಾಳ ಬಿಜೆಪಿ ನಾಯಕನ ಮನೆಯಲ್ಲಿ ಬಾಂಬ್ ಪತ್ತೆ, ಮಣಿಪುರದಲ್ಲೂ ಹಿಂಸಾಚಾರ

2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಪಶ್ಚಿಮ...

ಕಲಬುರಗಿಯಲ್ಲಿ ಬಿಜೆಪಿಗೆ ಹಿನ್ನಡೆ; ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್‌ ಸೇರ್ಪಡೆ

ಲೋಕಸಭೆ ಚುನಾವಣೆಯ ವೇಳೆ ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. ಮಾಜಿ...