ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ದೇಶಾದ್ಯಂತ ಸುದ್ದಿಯಲ್ಲಿದೆ. ಈ ನಡುವೆ ಮೊದಲ ಬಾರಿಗೆ ಸಾರ್ವಜನಿಕ ಹೇಳಿಕೆ ನೀಡಿರುವ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ,”ಸತ್ಯ ಆದಷ್ಟು ಬೇಗ ಹೊರಬರಲಿದೆ” ಎಂದು ಟ್ವೀಟ್ ಮಾಡಿದ್ದಲ್ಲದೇ, ಎಸ್‌ಐಟಿ ಮುಂದೆ ಹಾಜರಾಗಲು ಏಳುದಿನಗಳ ಕಾಲಾವಕಾಶ ಕೋರಿದ್ದಾರೆ.
ಇಂದು(ಮೇ 1) ಸಂಜೆ 04:02ಕ್ಕೆ ವಿದೇಶದಿಂದಲೇ ಟ್ವೀಟ್ ಮಾಡಿರುವ ಪ್ರಜ್ವಲ್ ರೇವಣ್ಣ, “ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನಾನು ನನ್ನ ವಕೀಲರ ಮೂಲಕ ಸಿಐಡಿ ಬೆಂಗಳೂರಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆ” ಎಂದು ಟ್ವೀಟ್ ಮಾಡಿದ್ದಾರೆ. ತನ್ನ ವಕೀಲರು ವಿಶೇಷ ತನಿಖಾ ತಂಡಕ್ಕೆ ಬರೆದಿರುವ ಮನವಿ ಪತ್ರವನ್ನೂ ಕೂಡ ಹಂಚಿಕೊಂಡಿದ್ದಾರೆ.
ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನಾನು ನನ್ನ ವಕೀಲರ ಮೂಲಕ C.I.D ಬೆಂಗಳೂರಿಗೆ ಮನವಿ ಮಾಡಿದ್ದೇನೆ.
ಸತ್ಯ ಆದಷ್ಟು ಬೇಗ ಹೊರಬರಲಿದೆ.
As I am not in Bangalore to attend the enquiry, I have communicated to C.I.D Bangalore through my Advocate. Truth will prevail soon. pic.twitter.com/lyU7YUoJem
— Prajwal Revanna (@iPrajwalRevanna) May 1, 2024
ಈ ಮನವಿ ಪತ್ರವನ್ನು ಪ್ರಜ್ವಲ್ ರೇವಣ್ಣ ಅವರ ವಕೀಲ ಅರುಣ್ ಜಿ ಅವರ ಮೂಲಕ ವಿಶೇಷ ತನಿಖಾ ತಂಡಕ್ಕೆ ಬರೆದಿದ್ದಾರೆ. ಈ ಮನವಿ ಪತ್ರದಲ್ಲಿ, ಕಲಂ 41 (ಎ) ಸಿ.ಆರ್.ಪಿ.ಸಿ ಅಡಿಯಲ್ಲಿ ನೀಡಿರುವ ನೋಟಿಸ್‌ಗೆ ಖುದ್ದಾಗಿ ಹಾಜರಾಗಲು ಏಳುದಿನಗಳ ಕಾಲಾವಕಾಶ ಕೋರಲಾಗಿದೆ.
“ನನ್ನ ಕಕ್ಷಿದಾರರಾದ ಪ್ರಜ್ವಲ್ ರೇವಣ್ಣರವರು ಬೆಂಗಳೂರಿನಿಂದ ಹೊರಗಡೆ ಪ್ರವಾಸದಲ್ಲಿದ್ದು ಅವರಿಗೆ ನೋಟಿಸ್‌ನ ಬಗ್ಗೆ ವಿಷಯ ತಿಳಿಸಿದ್ದು, ಬೆಂಗಳೂರಿಗೆ ಬಂದು ತಮ್ಮ ಮುಂದೆ ನೋಟಿಸ್‌ನ ಸೂಚನೆಯಂತೆ ಹಾಜರಾಗಲು ಏಳು ದಿನಗಳ ಕಾಲಾವಕಾಶ ಅಗತ್ಯವಿರುವುದಾಗಿ ತಿಳಿಸಿದ್ದಾರೆ. ಸುಮಾರು ಏಳು ದಿನಗಳ ಕಾಲಾವಕಾಶ ಕೊಟ್ಟು ಮತ್ತೊಂದು ದಿನಾಂಕದಂದು ತಮ್ಮ ಮುಂದೆ ವಿಚಾರಣೆಗಾಗಿ ಹಾಜರಾಗಲು ಅವಕಾಶ ನೀಡಬೇಕೆಂದು” ಪ್ರಜ್ವಲ್ ರೇವಣ್ಣ ಪರ ವಕೀಲರು ಎಸ್‌ಐಟಿ ಅಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಹಾಸನದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಮೇ 1ರಂದು ಹಾಜರಾಗುವಂತೆ ಪ್ರಜ್ವಲ್ ರೇವಣ್ಣ ಹಾಗೂ ಹೆಚ್ ಡಿ ರೇವಣ್ಣನವರಿಗೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ಸಮನ್ಸ್ ಕಳುಹಿಸಿದ್ದರು.