ಪ್ರತಿ ಮೂರು ಅಥವಾ ಆರು ತಿಂಗಳಿಗೊಮ್ಮೆ ಚುನಾವಣೆಗಳು ನಡೆಯುತ್ತಿವೆ. ಅಭಿವೃದ್ಧಿ ಯೋಜನೆಗಳನ್ನು ಚುನಾವಣೆಯೊಂದಿಗೆ ಜೋಡಿಸಲಾಗುತ್ತಿದೆ. ಪದೇ-ಪದೇ ನಡೆಯುವ ಚುನಾವಣೆಗಳು ದೇಶದ ಪ್ರಗತಿಗೆ ಅಡೆತಡೆ ಸೃಷ್ಟಿಸುತ್ತವೆ ಎಂದು ಪ್ರಧಾನಿ ಮೋದಿ ಹೇಳಿದ್ದು, ತಮ್ಮ ‘ಒಂದು ರಾಷ್ಟ್ರ – ಒಂದು ಚುನಾವಣೆ’ ತಂತ್ರವನ್ನು ಸಮರ್ಥಿಸಿಕೊಂಡಿದ್ದಾರೆ.
78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾವರೋಹಣ ನೆರವೇರಿಸಿ ಅವರು ಮಾತನಾಡಿದರು.”ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ದೇಶಾದ್ಯಂತ ಚರ್ಚೆಗಳು ನಡೆಯುತ್ತಿವೆ. ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದು ರಾಜಕೀಯ ಸ್ಥಿರತೆಯನ್ನು ಹೆಚ್ಚಿಸುತ್ತದೆ” ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ʼಸಂಘಿ ಭಕ್ತರುʼ ಏಕೆ ಹೀಗೆ ಸಾವು-ನೋವು-ಸೋಲುಗಳನ್ನು ಸಂಭ್ರಮಿಸುತ್ತಾರೆ?
“2047ರ ವೇಳೆಗೆ ವಿಕಸಿತ ಭಾರತದ ಗುರಿ ಸಾಧಿಸಬೇಕು. ಅದಕ್ಕಾಗಿ, ನಾನು ಹಗಲಿರುಳು ಶ್ರಮಿಸಲು ಬದ್ಧನಾಗಿದ್ದೇನೆ. 1947ರಲ್ಲಿ ಕೇವಲ 40 ಕೋಟಿ ಜನರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಇಂದು 140 ಕೋಟಿ ಜನರಿದ್ದೇವೆ. ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ ಮುಂದೆ ಸಾಗಿದರೆ, ಯಾವುದೇ ಸವಾಲನ್ನು ಎದುರಿಸಬಹುದು” ಎಂದು ಮೋದಿ ಹೇಳಿದ್ದಾರೆ.
“ಭಾರತವು ವಿಶ್ವದ ಕೌಶಲ್ಯ ರಾಜಧಾನಿಯಾಗಬೇಕು. ಬಾಹ್ಯಾಕಾಶದಲ್ಲಿ ಭಾರತವು ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಬೇಕು. ಭಾರತವು ಶೀಘ್ರವಾಗಿ ಸಾಧ್ಯವಾದರೆ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬೇಕು” ಎಂದು ತಿಳಿಸಿದ್ದಾರೆ.