ನೆನಪು | ಸಾಮಾನ್ಯನ ಪತ್ರಕ್ಕೂ ಪ್ರತಿಕ್ರಿಯಿಸಿದ ಅಪರೂಪದ ಆಡಳಿತಗಾರ ಅರಸು

Date:

ಐವತ್ತು ವರ್ಷಗಳ ಹಿಂದೆ ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಶ್ರೀಸಾಮಾನ್ಯನ ಪತ್ರಕ್ಕೂ ಕೂಡಲೇ ಪ್ರತಿಕ್ರಿಯಿಸಿ ಸೂಕ್ತ ಕ್ರಮವನ್ನು ಜರುಗಿಸಿದ ಒಂದು ಅಪರೂಪದ ಘಟನೆ... ನೆನಪಿನ ಬುತ್ತಿಯಿಂದ... ಅರಸು ಜನ್ಮದಿನದಂದು 

ದೇವರಾಜ ಅರಸು ಅವರಂಥ ‘ಸಾವಿರದ’ ಮುತ್ಸದ್ದಿ ರಾಜಕಾರಣಿಗಳು ವರ್ತಮಾನದ ಅಗತ್ಯವಾಗಿದ್ದಾರೆ. ಅವರ ಪ್ರಾಂಜಲ ಕಾರ್ಯತತ್ಪರತೆ, ಅವರ ಆ ದಿನಗಳ ಆಡಳಿತ ವೈಖರಿಯ ನೆನಪಿನ ಒಂದು ಮೆಲುಕು. ಸಂಗತಿ ಸಣ್ಣದಾದರೂ ಸತ್ಯವಾದ, ಸ್ವಾನುಭವದ ಘಟನೆಯೊಂದನ್ನು ಇಲ್ಲಿ ಹಂಚಿಕೊಳ್ಳಬಯಸುತ್ತೇನೆ.

- Advertisement -

ನಾನಾಗ ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದೆ. ನಮ್ಮ ತಂದೆ ಸರ್ಕಾರಿ ಪ್ರಾಥಮಿಕ ಶಾಲೆಯ ಏಕೋಪಾಧ್ಯಾಯ ಶಿಕ್ಷಕರಾಗಿದ್ದರು. ಮಹಾತ್ಮಾ ಗಾಂಧೀಜಿಯವರನ್ನು ಕಂಡವರು, ಅವರ ಸರಳತೆಗೆ ಮಾರುಹೋಗಿದ್ದವರು. ಆಗಲೇ ಮನೆಪಾಠದ ಕಡುವಿರೋಧಿಯಾಗಿದ್ದವರು. ಮನೆಯ ಆರ್ಥಿಕ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಸುಸ್ಥಿತಿಯಲ್ಲಿ ಇಲ್ಲದಿದ್ದರೂ, ಬೇರೆಯವರಿಗೆ ಹೋಲಿಸಿದರೆ ಪರವಾಗಿಲ್ಲ ಎನ್ನುವಂತಿತ್ತು. ಆ ದಿನಮಾನಗಳಲ್ಲಿ ಅವರ ಸಂಬಳ 200ರಿಂದ 300 ರೂ.ಗಳ ಆಸುಪಾಸಿನಲ್ಲಿತ್ತು. ಒಂದು, ಎರಡು, ಮೂರು, ಐದು, ಹತ್ತು ಪೈಸೆಗಳ ನಾಣ್ಯಗಳೂ ಚಲಾವಣೆಯಲ್ಲಿದ್ದ ಆ ಕಾಲಕ್ಕೆ ಆ ಸಂಬಳ ಕಡಿಮೆಯೇನಲ್ಲ, ಉತ್ತಮವಾದದ್ದೇ ಎನಿಸಿತ್ತು. ತಂದೆಯವರ ಪ್ರಾಮಾಣಿಕತೆ, ಸ್ವಾಭಿಮಾನ ಹಾಗೂ ಸರಳತೆಗಳಿಂದಾಗಿ, ಯಾವುದೇ ಅನ್ಯಮೂಲಗಳಿಲ್ಲದ ಬರುವ ಸಂಬಳವೊಂದರಲ್ಲೇ ಒಟ್ಟು ಆರು ಜನರಿರುವ ಕುಟುಂಬವನ್ನು ನಿಭಾಯಿಸಬೇಕಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಇವರಲ್ಲಿ ಕೊನೆಯವ ನಾನು. ತುಮಕೂರು ಜಿಲ್ಲೆಯ ಶೂನ್ಯಸಂಪಾದನೆಯ ಸಿದ್ಧವೀರಣ್ಣೊಡೆಯನ ಗೂಳೂರಿನಲ್ಲಿ ಶ್ರೀ ಸಿದ್ಧಗಂಗಾ ಮಠದ ಶಾಖೆಯಾದ ‘ಶ್ರೀ ಗಣೇಶ ಗ್ರಾಮಾಂತರ ಪ್ರೌಢಶಾಲೆ’ಯಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಎಂಟನೇ ತರಗತಿಗೆ 1975ರಲ್ಲಿ ಸೇರಿದಾಗ ಶಾಲೆಯಿಂದ ಕೆಲವೇ ರೂಪಾಯಿಗಳ ನಿಯತ ಸರ್ಕಾರಿ ಶಾಲಾ ಶುಲ್ಕದ ಜೊತೆಗೆ ‘ದಾಸೋಹ ನಿಧಿಗೆ ವಂತಿಗೆ’ ಎಂಬ ಒಂದೂವರೆ ಅಂಗುಲ ಉದ್ದಳತೆಯ ಚೌಕಾಕಾರದ ಕೆಂಗುಲಾಬಿ ಬಣ್ಣದ ಕಾಗದದಲ್ಲಿ ರೂ. 30 ಎಂದು ಮುದ್ರಿಸಿದ ಚೀಟಿಯೊಂದನ್ನು ನೀಡಿದರು. ಕೆಲವೇ ದಿನಗಳಲ್ಲಿ ಆ ಹಣವನ್ನು ಪಾವತಿಸಬೇಕೆಂದೂ ಸೂಚಿಸಿದರು. ಮನೆಯಲ್ಲಿನ ಆಗಿನ ಆರ್ಥಿಕ ಮುಗ್ಗಟ್ಟಿನಿಂದಾಗಿ ಶುಲ್ಕ ಕಟ್ಟುವುದು ಸಾಧ್ಯವಾಗಲಿಲ್ಲ. ವಾರ, ತಿಂಗಳು ಕಳೆದರೂ ವಂತಿಗೆ ಶುಲ್ಕ ಕಟ್ಟಲಾಗಲಿಲ್ಲ. ನಮ್ಮ ಹಿರಿಯ ಅಣ್ಣ ಆ ಚೀಟಿಯನ್ನು ನೋಡಿ ಅಚ್ಚರಿಪಟ್ಟ, ‘ಇದೇನು ಬಡವರೂ ದಾಸೋಹ ನಿಧಿಗೆ ವಂತಿಗೆ ಕಟ್ಟಬೇಕೆ! ಬಡವರಿಂದ ಹಣ ವಸೂಲಿ ಮಾಡಿ ಅನ್ನದಾನ ಮಾಡೋದು ಯಾವ ನ್ಯಾಯ?’ ಎಂದು ಕೋಪಗೊಂಡ. ನಮ್ಮ ತಂದೆ ಏನೂ ಹೇಳಲಿಲ್ಲ, ಸುಮ್ಮನಿದ್ದರು. ಸ್ವಲ್ಪ ತಡವಾಗಿ ಕಟ್ಟಿದರಾಯಿತು, ಎಂದುಕೊಂಡರೇನೋ.

ಇದನ್ನು ಓದಿದ್ದೀರಾ?: ಹಾವನೂರು ವರದಿ ಅನುಷ್ಠಾನ, ಅರಸರ ಐತಿಹಾಸಿಕ ಕ್ರಮ ಎಂದ ರವಿವರ್ಮಕುಮಾರ್

ಒಂದು ದಿನ ಶಾಲೆಯಲ್ಲಿ ಆ ಶುಲ್ಕವನ್ನು ಪಾವತಿಸದೆ ಇರುವುದಕ್ಕಾಗಿ ನನ್ನನ್ನು ಶಾಲೆಯಿಂದ ಹೊರಹಾಕಿದರು. ನಾನು ಕಣ್ಣೀರು ಹಾಕುತ್ತಾ ಮನೆಗೆ ಬಂದೆ. ನಮ್ಮ ಅಣ್ಣನಿಗೆ ರೇಗಿ ಹೋಯಿತು. ಆನಂತರ ಏನಾಯ್ತೋ ನನಗೆ ನೆನಪಿಲ್ಲ. ಆಗ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದವರು ಡಿ. ದೇವರಾಜ ಅರಸು ಅವರು. ಬಹುಶಃ ನೇರವಾಗಿ ಅವರಿಗೇ ನಮ್ಮಣ್ಣ ದೂರು ಬರೆದಿರಬೇಕು. ಬರೆದಿದ್ದರೆಂಬುದು ಆಮೇಲೆ ದೃಢವಾಯಿತು. ಹತ್ತು, ಹದಿನೈದು ದಿನಗಳ ತರುವಾಯ ಒಂದು ದಿನ ಶನಿವಾರ ಬೆಳಗ್ಗೆ ಶಾಲೆಗೆ ನಡೆದಾಡುವ ದೇವರೆಂದೇ ಆ ಕಾಲಕ್ಕಾಗಲೇ ಪ್ರಖ್ಯಾತರಾಗಿದ್ದ ಸಿದ್ಧಗಂಗಾ ಶ್ರೀಗಳಾದ ಶ್ರೀ ಶಿವಕುಮಾರ ಸ್ವಾಮೀಜಿಯವರು ತಮ್ಮ ಕಾರಿನಲ್ಲಿ ಬಂದರು. ಅತ್ಯಂತ ಜನಾನುರಾಗಿ ಆಗಿದ್ದ ತಮ್ಮ ಜಾತ್ಯತೀತ ಮನೋಭಾವ ಹಾಗೂ ಕಾರ್ಯಗಳಿಂದ ಇಡೀ ಊರನ್ನೇ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದ, ಒಂದರ್ಥದಲ್ಲಿ ‘ಸರ್ವಜನಾಂಗದ ಶಾಂತಿಯ ತೋಟ’ವೇ ಆಗಿದ್ದರೆಂದರೆ ಅತ್ಯುಕ್ತಿಯಲ್ಲ. ಅಂತಹ ಜನಪ್ರಿಯ ಚೇರ್ಮನ್ ಶಿವಣ್ಣನವರನ್ನೂ ಕರೆಸಿದರು. ನಮ್ಮ ತಂದೆಯವರನ್ನೂ ಕರೆಸಿದರು. ನಮ್ಮ ತಂದೆ ತಮ್ಮ ಕಷ್ಟಗಳನ್ನು ಹೇಳಿಕೊಂಡರು, ‘ನಮ್ಮ ಮೊದಲ ಮಗ ಸ್ವಲ್ಪ ದುಡುಕು ಸ್ವಭಾವ, ಮಂಗೋಪಿ. ನಮಗೆ ತಿಳಿಸದೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರಬೇಕು’ ಎಂದು ಹೇಳಿದರು. ಚೇರ್ಮನ್ನರು ‘ಮೇಷ್ಟ್ರೆ, ನನಗೆ ಒಂದು ಮಾತು ತಿಳಿಸಿದ್ದರೆ ನಾನೇ ಬಗೆಹರಿಸುತ್ತಿದ್ದೆನಲ್ಲ’ ಎಂದರು. ನಮ್ಮ ಪರಿಸ್ಥಿತಿಯನ್ನರಿತ ಸ್ವಾಮೀಜಿಯವರು ‘ಈ ವಿದ್ಯಾರ್ಥಿಗೆ ಇನ್ನು ಮುಂದೆ ಯಾವುದೇ ವಂತಿಗೆ (ಡೊನೇಷನ್) ಶುಲ್ಕವನ್ನು ವಿಧಿಸಬೇಡಿ, ಕೇವಲ ಸರ್ಕಾರಿ ಶುಲ್ಕವನ್ನಷ್ಟೇ ಪಾವತಿಸಲಿ, ಚೆನ್ನಾಗಿ ಓದಲಿ’ ಎಂದು ಹೆಡ್‌ಮಾಸ್ತರಿಗೆ ಹೇಳಿದರು. ಅಲ್ಲಿಂದ ನಾನು ಮೂರು ವರ್ಷ ಯಾವುದೇ ವಂತಿಗೆ ಶುಲ್ಕವನ್ನು ಕಟ್ಟಲಿಲ್ಲ. ಉಚಿತವಾಗಿ ವ್ಯಾಸಂಗ ಮಾಡಿದೆ.

devaraja urs6
ಪತ್ರ ಪರಿಶೀಲಿಸುತ್ತಿರುವ ಅರಸು

ಈ ಘಟನೆ ನನ್ನ ನೆನಪಿನ ಭಿತ್ತಿಯಿಂದ ಇಂದಿಗೂ ಮಾಸಿಲ್ಲ, ಮಾಸುವುದೂ ಇಲ್ಲ. ಅದಕ್ಕೆ ಮುಖ್ಯ ಕಾರಣ, ಆ ಸಂದರ್ಭದಲ್ಲಿ ಊರಿನ ಚೇರ್ಮನ್ನರು, ಸಿದ್ಧಗಂಗಾ ಶ್ರೀಗಳವರ ನಡೆ, ನಿರ್ಧಾರಗಳು, ಎಷ್ಟು ಜನಮುಖಿಯಾಗಿದ್ದವು, ಮಾನವೀಯವಾಗಿದ್ದವು! ಬಡವರ, ಹಿಂದುಳಿದವರ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು ಸ್ಪಂದಿಸುತ್ತಿದ್ದರು ಎಂಬುದನ್ನು ನೆನೆದರೆ ಮನಸ್ಸು ಉಲ್ಲಸಿತಗೊಳ್ಳುತ್ತದೆ.

ಇಂದು ಯಾವುದೇ ನಾಡದೊರೆಗಳನ್ನು, ರಾಜಕಾರಿಣಿ ಅಥವಾ ಅಧಿಕಾರಿಗಳನ್ನು ಭೇಟಿಯಾಗುವುದಿರಲಿ ಮನವಿಗಳನ್ನಾಗಲೀ, ದೂರುಗಳನ್ನಾಗಲೀ ಪತ್ರದ ಮುಖೇನ ಬರೆದಲ್ಲಿ ಅದಕ್ಕೆ ಪ್ರತಿಕ್ರಿಯೆಯನ್ನು ನಿರೀಕ್ಷಿಸುವುದು ವ್ಯರ್ಥವೆನಿಸುತ್ತದೆ, ಮೂಢತನವೆನಿಸುತ್ತದೆ. ಎಷ್ಟೋ ಸಲ ಅಂತಹ ಪತ್ರಗಳು ಕಬುವಿನೊಡಲನ್ನು(ಕಸದಬುಟ್ಟಿ) ಸೇರಿಬಿಟ್ಟಿರುತ್ತವೆ.

ಆದರೆ, ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿರುವ ಡಿ. ದೇವರಾಜ ಅರಸು ಅಂದು, ಅಂದರೆ ಐವತ್ತು ವರ್ಷಗಳ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕರ್ನಾಟಕದ ಆಡಳಿತ ವ್ಯವಸ್ಥೆಯನ್ನು ಎಷ್ಟು ದಕ್ಷವಾಗಿ, ಸಮರ್ಪಕವಾಗಿ, ತ್ವರಿತವಾಗಿ, ಸುಸೂತ್ರವಾಗಿ ನಿರ್ವಹಿಸುತ್ತಿದ್ದರು, ಅವರ ಆಡಳಿತ ಎಷ್ಟು ಅಚ್ಚುಕಟ್ಟಾಗಿತ್ತು ಎಂಬುದಕ್ಕೆ ಮೇಲಿನ ಘಟನೆ ಒಂದು ಸಣ್ಣ ನಿದರ್ಶನವಷ್ಟೇ. ಒಬ್ಬ ಶ್ರೀಸಾಮಾನ್ಯನ ಪತ್ರಕ್ಕೂ ಕೂಡಲೇ ಪ್ರತಿಕ್ರಿಯಿಸಿ ಸೂಕ್ತ ಕ್ರಮವನ್ನು ಜರುಗಿಸುತ್ತಿದ್ದ ವಿಧಾನ ಬಹು ಮುಖ್ಯವೆನಿಸುತ್ತದೆ.

ಇದನ್ನು ಓದಿದ್ದೀರಾ?: ಕರುನಾಡಿನ ಸಾಮಾಜಿಕ ಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸು ಜಯಂತಿ

ನಮ್ಮಣ್ಣ ಬರೆದ ಪತ್ರ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿಗಳಿಂದ ಸಿದ್ಧಗಂಗಾ ಶ್ರೀಯವರಿಗೆ ಹೋದದ್ದು, ಕೂಡಲೇ ಸ್ವಾಮೀಜಿಯವರು ಖುದ್ದಾಗಿ ಶಾಲೆಗೆ ಭೇಟಿಯಿತ್ತು, ಸನ್ನಿವೇಶವನ್ನು ಪರಿಶೀಲಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಿಕೊಟ್ಟದ್ದು; ಊರಿನ ಚೇರ್ಮನ್ನರೂ ಸಹ ಸಮಸ್ಯೆ ಪರಿಹಾರದಲ್ಲಿ ಕೈಜೋಡಿಸಿದ್ದು ಇವೆಲ್ಲ ಅಚ್ಚರಿಯೆನಿಸಿದರೂ ಪವಾಡಸದೃಶವೆನಿಸುತ್ತವೆ. ಈ ಬಗೆಯ ಮನಃಸ್ಥಿತಿಗಳು, ಸಾಮಾಜಿಕ ಬದ್ಧತೆ, ಮಾನವೀಯ ತುಡಿತ, ನಿಸ್ಪೃಹ ಮನೋಭಾವ, ಪಾರದರ್ಶಕತೆ, ವರ್ತಮಾನದ ಪೀಳಿಗೆಯಲ್ಲಿ, ಅಧಿಕಾರಿಗಳಲ್ಲಿ, ಸರ್ವರಲ್ಲಿ ಪಡಿಮೂಡಬೇಕಲ್ಲವೇ? ತಮ್ಮ ತಮ್ಮ ಹೊಣೆಗಾರಿಕೆಗಳನ್ನು ನಿಸ್ಪೃಹತೆಯಿಂದ ನಿರ್ವಹಿಸುವ ಕಾರ್ಯತತ್ಪರತೆಗಳು ಇಂದಿಗೂ ಅವಶ್ಯವಲ್ಲವೇ?

Dr. B.G. Kanakeshmurthy
ಡಾ. ಬಿ.ಜಿ. ಕನಕೇಶಮೂರ್ತಿ
+ posts

ನಿವೃತ್ತ ಪ್ರಾಧ್ಯಾಪಕ, ಲೇಖಕ ಹಾಗೂ ಅನುವಾದಕ. ಖಾಲಿ ಡಬ್ಬಗಳ ಕ್ಯೂ(1995), ಲಕ್ಷ್ಮೀಶ(1995), ಹಳಗನ್ನಡ ಕಾವ್ಯ ಸಂಗ್ರಹ(2017), ಆಧುನಿಕ ಕವಿತೆಗಳ ಮಾಲೆ(2018), ಹಳಗನ್ನಡ ಕಾವ್ಯ ರಸಗ್ರಹಣ- ಅನುಸಂಧಾನ(2018), ವಿಶ್ವಮಾನವ ಕುವೆಂಪು(2022), ಬೊಗಸೆ ಹಿಡಿವಷ್ಟು(ಈವರೆಗಿನ ಸಮಗ್ರ ಕವಿತೆಗಳು- 2023), ಹಣತೆಯ ಹಾದಿ(2025), ಕಿ ರಂ ನಾಗರಾಜ(2026) ಕೊಳಲ ಗಾರುಡಿ ಮತ್ತು ಇತರ ಕಥೆಗಳು(ಅನುವಾದಿತ ಕಥೆಗಳು-2026) ಇವರ ಕೃತಿಗಳು.

ಪೋಸ್ಟ್ ಹಂಚಿಕೊಳ್ಳಿ:

ಡಾ. ಬಿ.ಜಿ. ಕನಕೇಶಮೂರ್ತಿ
ಡಾ. ಬಿ.ಜಿ. ಕನಕೇಶಮೂರ್ತಿ
ನಿವೃತ್ತ ಪ್ರಾಧ್ಯಾಪಕ, ಲೇಖಕ ಹಾಗೂ ಅನುವಾದಕ. ಖಾಲಿ ಡಬ್ಬಗಳ ಕ್ಯೂ(1995), ಲಕ್ಷ್ಮೀಶ(1995), ಹಳಗನ್ನಡ ಕಾವ್ಯ ಸಂಗ್ರಹ(2017), ಆಧುನಿಕ ಕವಿತೆಗಳ ಮಾಲೆ(2018), ಹಳಗನ್ನಡ ಕಾವ್ಯ ರಸಗ್ರಹಣ- ಅನುಸಂಧಾನ(2018), ವಿಶ್ವಮಾನವ ಕುವೆಂಪು(2022), ಬೊಗಸೆ ಹಿಡಿವಷ್ಟು(ಈವರೆಗಿನ ಸಮಗ್ರ ಕವಿತೆಗಳು- 2023), ಹಣತೆಯ ಹಾದಿ(2025), ಕಿ ರಂ ನಾಗರಾಜ(2026) ಕೊಳಲ ಗಾರುಡಿ ಮತ್ತು ಇತರ ಕಥೆಗಳು(ಅನುವಾದಿತ ಕಥೆಗಳು-2026) ಇವರ ಕೃತಿಗಳು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ ಪೊಲೀಸ್ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಪತ್ರಕರ್ತೆ ಸೇರಿ 17 ಮಂದಿ ಬಂಧನ

ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ನಡೆದ ಪ್ರತಿಭಟನೆಯ ವರದಿಗಾರಿಕೆ ವೇಳೆ ತಮ್ಮ...

ದೀಪ್ಕೆ, ಇತರೆ ಸಿಜೆಪಿ ನಾಯಕರ ಬಂಧನಕ್ಕೆ ಸರ್ಕಾರ ಸಂಚು: ಜೈಲಿಗೆ ಹೋಗಲು ಹೆದರಲ್ಲ ಎಂದ ಸೌರವ್ ದಾಸ್

ಅಕ್ಟೋಬರ್ 10 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೂ...

ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಲು ದೆಹಲಿ ಪೊಲೀಸರು ಅನುಮತಿ...