ಹಾವನೂರು ವರದಿ ಅನುಷ್ಠಾನ, ಅರಸರ ಐತಿಹಾಸಿಕ ಕ್ರಮ ಎಂದ ರವಿವರ್ಮಕುಮಾರ್

Date:

ಇಂದು ದೇವರಾಜ ಅರಸು ಜನ್ಮದಿನ. ಆ ನೆಪದಲ್ಲಿ ಹಿಂದುಳಿದ ವರ್ಗಗಳ ಪಾಲಿನ ಬೈಬಲ್ ಎಂದೇ ಹೆಸರಾದ ಹಾವನೂರು ವರದಿಯ ಆರಂಭ, ಅನುಷ್ಠಾನ ಮತ್ತು ಅದರಿಂದಾದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮಕುಮಾರ್ ಇಲ್ಲಿ ಸವಿಸ್ತಾರವಾಗಿ ಬಿಡಿಸಿಟ್ಟಿದ್ದಾರೆ. ದೇವರಾಜ ಅರಸು, ಎಲ್.ಜಿ. ಹಾವನೂರು ಮತ್ತು ಸಾಮಾಜಿಕ ನ್ಯಾಯದ ಸುತ್ತಲೂ ಬೆಳಕು ಚೆಲ್ಲಿದ್ದಾರೆ.   

ಐದೇ ತಿಂಗಳಿಗೆ ಆಯೋಗ: ದೇವರಾಜ ಅರಸು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡದ್ದು ಮಾರ್ಚ್ 1972ರಲ್ಲಿ. ಅಧಿಕಾರಕ್ಕೆ ಬಂದ ಐದು ತಿಂಗಳಲ್ಲಿಯೇ ಅರಸು, ಬೇಡ ಸಮುದಾಯದ ಮೇಧಾವಿ ವಕೀಲ ಎಲ್.ಜಿ. ಹಾವನೂರ್ ನೇತೃತ್ವದಲ್ಲಿ ಹಾವನೂರು ಆಯೋಗ ರಚಿಸಿದರು. ಈ ಸಮಿತಿಗೆ ವೈ. ರಾಮಚಂದ್ರ, ಧರಂಸಿಂಗ್, ಕೆ.ಆರ್.ಎಸ್. ನಾಯ್ಡು, ಕೆ.ಎಂ. ನಾಗಣ್ಣ, ಎಸ್.ಆರ್. ಮಾನಶೆಟ್ಟಿ ಮತ್ತು ಪಿ.ಜಿ. ಹಬೀಬ್‌ರನ್ನು ಸದಸ್ಯರನ್ನಾಗಿ ನೇಮಕ ಮಾಡಿದರು. ಈ ಆಯೋಗದ ಮುಖ್ಯ ಉದ್ದೇಶ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಜಾತಿಗಳನ್ನು ಗುರುತಿಸುವುದು, ಪ್ರತಿಯೊಂದು ಜಾತಿಯ ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸುವುದು, ಅಧ್ಯಯನ ನಡೆಸಿ ನಿರ್ಣಾಯಕ ಮಾನದಂಡಗಳನ್ನು ರೂಪಿಸುವುದು; ಅವರ ಉನ್ನತಿಗಾಗಿ ಸರಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸ್ಸು ಮಾಡುವುದು.

- Advertisement -

ಇಲ್ಲಿ ಇನ್ನೊಂದು ಮುಖ್ಯವಾದ ವಿಚಾರವನ್ನು ಹೇಳಲೇಬೇಕು. ದೇವರಾಜ ಅರಸು ಅತಿ ಸಣ್ಣ ಸಮುದಾಯದಿಂದ ಬಂದು ಮುಖ್ಯಮಂತ್ರಿಯಾದವರು. ಇವರು ಮುಖ್ಯಮಂತ್ರಿಯಾಗುವುದಕ್ಕೂ ಮುಂಚೆ, ಕರ್ನಾಟಕದ ರಾಜಕಾರಣದಲ್ಲಿ ಮುಂಚೂಣಿಯಲ್ಲಿದ್ದವರು; ಉನ್ನತ ಹುದ್ದೆಗಳನ್ನು ಅಲಂಕರಿಸಿದವರು ಬಹುಸಂಖ್ಯಾತರಾದ ಲಿಂಗಾಯತರು ಮತ್ತು ಒಕ್ಕಲಿಗರು. ಸಣ್ಣ ಪುಟ್ಟ ಜಾತಿಯ ಜನ ಮುಖ್ಯಮಂತ್ರಿಯಾದ ಉದಾಹರಣೆ ಇರಲಿಲ್ಲ. ಅಂತಹ ಸಂದಿಗ್ಧ ಸಂದರ್ಭದಲ್ಲಿ ಮುಖ್ಯಮಂತ್ರಿಯಾದ ಅರಸು, ಅಧಿಕಾರಕ್ಕೇರಿದ ಐದೇ ತಿಂಗಳಿಗೆ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ನೀಡಲು ಹಾವನೂರ್ ಆಯೋಗ ರಚಿಸಿದರು. ಇದಕ್ಕೆ ವಿರೋಧ ವ್ಯಕ್ತವಾಗಿ, ಕುರ್ಚಿಗೆ ಕಂಟಕ ತರುತ್ತದೆ ಎಂಬುದರ ಅರಿವಿತ್ತು. ಅರಿವಿದ್ದೂ ಸಮಿತಿ ರಚಿಸಿದ್ದು, ಅರಸರ ರಾಜಕೀಯ ಇಚ್ಛಾಶಕ್ತಿಗೊಂದು ಉತ್ತಮ ಉದಾಹರಣೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಇದಕ್ಕೆ ಬಲವಾದ ಕಾರಣವೂ ಇದೆ. 1962ರಲ್ಲಿ, ಹಿಂದುಳಿದ ಜಾತಿಗಳಿಗೆ ಮೀಸಲಾತಿ ಒದಗಿಸುವ ನಿಟ್ಟಿನಲ್ಲಿ, ನಾಗನಗೌಡ ಸಮಿತಿ ಹಿಂದುಳಿದ ವರ್ಗಗಳು ಮತ್ತು ಅತಿ ಹಿಂದುಳಿದ ವರ್ಗಗಳು ಎಂಬ ಎರಡು ಗುಂಪುಗಳನ್ನು ಮಾಡಿತ್ತು. ಈ ವರ್ಗಗಳಿಗೆ ಅನುಕ್ರಮವಾಗಿ ಶೇ. 28ರಷ್ಟು ಮತ್ತು ಶೇ. 22ರಷ್ಟು ಮೀಸಲಾತಿ ನೀಡಿ ವರದಿಯನ್ನು ನೀಡಿತ್ತು. ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಸರಕಾರ, ಸಮಿತಿಯ ವರದಿಯ ಶಿಫಾರಸ್ಸಿಗೆ ವಿರುದ್ಧವಾಗಿ ಬಹುಸಂಖ್ಯಾತರಾದ ಲಿಂಗಾಯತರನ್ನೂ ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸಿತ್ತು. ಆ ರೀತಿ ಸೇರಿಸುವ ಪ್ರಕ್ರಿಯೆಯಲ್ಲಿ ಕಾನೂನಾತ್ಮಕ ಸಮರ್ಥನೆಗೊಂದು ಪುಟ್ಟ ಕೈ ಚಳಕವೂ ನಡೆದಿತ್ತು.

devaraja urs havanur
ದೇವರಾಜ ಅರಸು ಮತ್ತು ಎಲ್.ಜಿ. ಹಾವನೂರು

ಮೇಲ್ಜಾತಿಗಳ ಕೈಚಳಕ: ಕರ್ನಾಟಕ ರಾಜ್ಯದ ಶಿಕ್ಷಣ ಮಟ್ಟ ಸರಾಸರಿ ಶೇ. 6.9 ಎಂದು ಗುರುತಿಸಲಾಗಿತ್ತು. ಅದನ್ನು ಹತ್ತಿರದ ಸಂಖ್ಯೆಯಾದ ಶೇ.7ಕ್ಕೆ ರೌಂಡಾಫ್ ಮಾಡಲಾಯಿತು. ಆ ಸಂದರ್ಭದಲ್ಲಿ ಲಿಂಗಾಯತರ ಶಿಕ್ಷಣಮಟ್ಟ ಶೇ. 7.1ರಷ್ಟಿತ್ತು. ಅದನ್ನು ಶೇ. 7ಎಂತಲೇ ಗುರುತಿಸಿ, ಹಿಂದುಳಿದ ಜಾತಿಗಳ ಶಿಕ್ಷಣಮಟ್ಟದ ಸರಾಸರಿಗೆ ಸರಿಹೊಂದಿಸಲಾಯಿತು. ಲಿಂಗಾಯತರನ್ನೂ ಹಿಂದುಳಿದ ವರ್ಗಕ್ಕೆ ಸೇರಿಸಿ, ಶಿಕ್ಷಣದಲ್ಲಿ-ಸರಕಾರಿ ಸೇವೆಗಳಲ್ಲಿ ಮೀಸಲಾತಿಯನ್ನು ಪಡೆಯುವಂತಾಯಿತು.

ಮೇಲ್ಜಾತಿಯ ಈ ಹುನ್ನಾರವನ್ನು ಅರಿತ ಪ್ರಜ್ಞಾವಂತರು ರಾಜ್ಯ ಹೈಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದರು. ಹಿಂದುಳಿದವರಿಗೆ ಶೇ.50 ಮೀಸಲಾತಿ ಹೆಚ್ಚಾಯಿತು ಎಂದು ಮೇಲ್ಜಾತಿಯವರೂ ತಕರಾರು ತೆಗೆದರು. ಅಷ್ಟೇ ಅಲ್ಲ ಸಂವಿಧಾನದ ಪರಿಚ್ಛೇದ 32ರ ಅಡಿ ನೇರವಾಗಿ ಸುಪ್ರೀಂ ಕೋರ್ಟ್ ನಲ್ಲೂ ಮೊಕದ್ದಮೆ ಹೂಡಿದರು. ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದು, ಇಡೀ ಸರಕಾರಿ ಆದೇಶವನ್ನೇ ಅನೂರ್ಜಿತಗೊಳಿಸಿತು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಪಟ್ಟಭದ್ರ ಹಿತಾಸಕ್ತಿಗಳು, ಕೋರ್ಟ್ ಆದೇಶವನ್ನು ಮುಂದೆ ಮಾಡಿ, ಅಧಿಕಾರ ಬಳಸಿ, 28.9.1962ರಲ್ಲಿ ಇಡೀ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಇಲ್ಲದಂತೆ ಮಾಡಿಬಿಟ್ಟರು.

ಇದನ್ನು ಓದಿದ್ದೀರಾ?: ಕರುನಾಡಿನ ಸಾಮಾಜಿಕ ಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸು ಜಯಂತಿ

ಆ ಕಾಲದ ವೃತ್ತಿಪರ ಶಿಕ್ಷಣದಲ್ಲಿ ಅವಕಾಶವಂಚಿತರಾದ ಹಿಂದುಳಿದ ಜಾತಿಯ ಜನರಿಗೆ, ಸರಕಾರಿ ಸೇವೆಗಳಲ್ಲೂ ಸಹ ಮೇಲ್ಜಾತಿಗಳಿಂದ ಅನ್ಯಾಯವಾಯಿತು. ಆರ್ಥಿಕವಾಗಿ, ಶೈಕ್ಷಣಿಕವಾಗಿ ಅವರೊಂದಿಗೆ ಸೆಣಸಾಡಲು ಸಾಧ್ಯವಿಲ್ಲದ ಕಾರಣಕ್ಕೆ ಇನ್ನಷ್ಟು ಹಿಂದುಳಿಯುವಂತಾಯಿತು. ಮೇಲ್ಜಾತಿಗಳು ಅಂಕದ ಆಧಾರದ ಮೇಲೂ, ಮೀಸಲಾತಿಯ ಆಧಾರದ ಮೇಲೂ- ಎರಡರಲ್ಲೂ ಅನುಕೂಲವನ್ನು, ಲಾಭವನ್ನು ಕೊಳ್ಳೆ ಹೊಡೆದರು.

ಇದು, 1962ರಿಂದ 1977ರವರೆಗೆ, 15 ವರ್ಷಗಳವರೆಗೆ, ದೇವರಾಜ ಅರಸು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ನಂತರವೂ ಜಾರಿಯಲ್ಲಿತ್ತು. ಕರ್ನಾಟಕದ ಜನಸಂಖ್ಯೆಯಲ್ಲಿ ಶೇ.45ರಷ್ಟಿದ್ದ ಹಿಂದುಳಿದ ಜಾತಿಗಳ ಮೇಲೆ ನಡೆದ ಈ ಭಾರೀ ವಂಚನೆ, ಶೋಷಣೆ ದೇವರಾಜ ಅರಸರನ್ನು ಧೃತಿಗೆಡಿಸಿತ್ತು. ಹಾಗಾಗಿ ಅರಸು ಅಧಿಕಾರಕ್ಕೆ ಬಂದಕೂಡಲೆ ಆ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು, ಆ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲು, ಸಂಘಟಿಸಲು, ಬಡಿದೆಬ್ಬಿಸಲು ಮುಂದಾದರು. ಅದಕ್ಕೆ ಕಾನೂನು ಪಂಡಿತ ಎಲ್.ಜಿ. ಹಾವನೂರ್ ಅರಸರಿಗೆ ವರದಂತೆ ಒದಗಿಬಂದರು, ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿದರು.

ಯಾರು ಈ ಹಾವನೂರು?: ಮುಂಬೈ-ಕರ್ನಾಟಕ ಪ್ರಾಂತ್ಯದ ರಾಣೆಬೆನ್ನೂರಿನ ಕುರುಬರ ಹಟ್ಟಿಯ ಬಡ ಕುಟುಂಬದಲ್ಲಿ ಹುಟ್ಟಿದ ಬೇಡ ಜಾತಿಯ ಎಲ್.ಜಿ. ಹಾವನೂರ್, ಅವಮಾನ, ಹಸಿವು, ಶೋಷಣೆಗಳನ್ನು ಕಂಡುಂಡವರು. ಧಾರವಾಡದಲ್ಲಿ ಪದವಿ ಓದುವಾಗ, ಜಾತಿ ತಾರತಮ್ಯದ ಅವಮಾನವನ್ನು ಖುದ್ದು ಅನುಭವಿಸಿದವರು. ಹಾವನೂರ್ ಹಾಸ್ಟೆಲ್‌ನಲ್ಲಿದ್ದಾಗ, ಅಲ್ಲಿನ ಪದ್ಧತಿಯಂತೆ ಮೊದಲು ಬ್ರಾಹ್ಮಣರು ಮತ್ತು ಲಿಂಗಾಯತರಿಗೆ ಊಟ. ಅವರಾದ ಮೇಲೆ ಮಿಕ್ಕವರು. ಒಂದು ದಿನ ಹಸಿವು ಹೆಚ್ಚಾಗಿ ಹಾವನೂರ್ ಮೊದಲು ಊಟ ಕೇಳಿದ್ದಾರೆ, ಅಡುಗೆ ಭಟ್ಟ ಪದ್ಧತಿ ಎಂದಿದ್ದಾನೆ. ಆದರೂ ಕೇಳದೆ, ಊಟ ಪಡೆದು ಉಣ್ಣುವಾಗ, ಮೇಲ್ಜಾತಿಯ ವಿದ್ಯಾರ್ಥಿಗಳ ಗುಂಪು ಸುತ್ತುವರೆದಿದೆ. ಆದರೆ ಹಾವನೂರರ ಕಟ್ಟುಮಸ್ತಾದ ಪೈಲ್ವಾನ್ ಬಾಡಿ ನೋಡಿ, ಅವರನ್ನು ಮುಟ್ಟದೆ ಬಡಪಾಯಿ ಭಟ್ಟನಿಗೆ ಬಡಿದಿದ್ದಾರೆ. ಇದನ್ನು ಕಂಡ ಹಾವನೂರ್, ಎಂಜಲು ಕೈಯಲ್ಲಿಯೇ ಆ ಮೇಲ್ಜಾತಿ ಹುಡುಗರಿಗೆ ಬಾರಿಸಿ, ಭಟ್ಟರನ್ನು ಬಿಡಿಸಿಕೊಂಡಿದ್ದಾರೆ.

ಇದು ಮೇಲ್ಜಾತಿಗಳ ಪ್ರಕಾರ ಮಹಾಪರಾಧ. ಮೇಲ್ಜಾತಿಗಳ ಒತ್ತಡಕ್ಕೆ ಒಳಗಾದ ಪ್ರಿನ್ಸಿಪಾಲ್, ಪದ್ಧತಿ ಮೀರಿದ ಮಹಾಪರಾಧಕ್ಕೆ ಹಾವನೂರರನ್ನು ಕಾಲೇಜಿನಿಂದ ಹೊರ ಹಾಕಿದರು. ಬಡ ಬೇಡ ಜಾತಿಯ ಹುಡುಗನ ವಿದ್ಯಾಭ್ಯಾಸಕ್ಕೆ ಕಲ್ಲು ಬಿತ್ತು. ಮನೆಯ ಆರ್ಥಿಕ ಸ್ಥಿತಿ ಸುಧಾರಿಸಲು ಪೋಸ್ಟ್ ಆಫೀಸಿನಲ್ಲಿ ನೌಕರಿ ಹಿಡಿದರು. ಅಲ್ಲಿ ಹುಡುಗನ ಶ್ರದ್ಧೆಯನ್ನು ಗಮನಿಸಿದ ಪೋಸ್ಟ್ ಮಾಸ್ಟರ್, `ಅವರು ಕಾಲೇಜಿನಿಂದ ಹೊರಗಟ್ಟಿದರೇನು, ನೀನು ಬೆಳಗಾವಿಯ ಲಾ ಕಾಲೇಜಿಗೆ ಸೇರಿ, ಕಾನೂನು ಪದವಿ ಪಡೆ’ ಎಂದು ಹುರಿದುಂಬಿಸಿದರು. ಕಾನೂನು ಪದವಿ ಪಡೆದು, ಮುಂಬೈನಲ್ಲಿ ವಕೀಲಿ ವೃತ್ತಿಗೆ ನೋಂದಣಿ ಮಾಡಿಸಿ, ರಾಣೆಬೆನ್ನೂರಿನಲ್ಲಿ ವಕೀಲಿಕೆ ಆರಂಭಿಸಿದರು.

devaraja urs
ಅಧ್ಯಯನನಿರತ ದೇವರಾಜ ಅರಸು

ಅಂಬೇಡ್ಕರ್ ಪ್ರೇರಣೆ: ಅದೇ ಸಂದರ್ಭದಲ್ಲಿ ಮುಂಬೈನಲ್ಲಿ ನ್ಯಾಯವಾದಿಯಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಸಂಪರ್ಕಕ್ಕೆ ಬಂದು, ಆತ್ಮೀಯರಾದರು. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಅಂಬೇಡ್ಕರ್ ಸಂವಿಧಾನದತ್ತವಾಗಿ ಲಭ್ಯವಿರುವ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಟ್ಟದ್ದನ್ನು ಖುದ್ದು ಕಂಡಿದ್ದರು. ಆಗ ಹಾವನೂರರ ಮನಸ್ಸಿನಲ್ಲಿ ಮೂಡಿದ್ದು, ಎಸ್ಸಿ, ಎಸ್ಟಿಗಿಂತ ದಯನೀಯ ಸ್ಥಿತಿಯಲ್ಲಿರುವ ನಾಯಿಂದ, ಕುಂಬಾರ, ಬೆಸ್ತ, ದರ್ಜಿ, ಮಡಿವಾಳ, ಬೇಡ ಇತ್ಯಾದಿ ಜಾತಿಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವುದು.

ಈ ನಿಟ್ಟಿನಲ್ಲಿ ಹಲವು ಹೋರಾಟಗಳಿಗೆ ಮುಂದಾದ ಹಾವನೂರ್, 1956ರಲ್ಲಿ ರಾಣೆಬೆನ್ನೂರಿನಲ್ಲಿ ಹಿಂದುಳಿದ ಜಾತಿಗಳ ಸಮ್ಮೇಳನ ರೂಪಿಸಿದರು. ರಾಜ್ಯದ ಮೂಲೆ ಮೂಲೆಗಳಿಂದ ಹಿಂದುಳಿದ ಜಾತಿಯ ನಾಯಕರನ್ನು ಕರೆಸಿ, ಆಚಾರ್ಯ ಕಾಲೇಲ್ಕರ್ ಕೊಟ್ಟ ಕವರಿಂಗ್ ಲೆಟರ್ ವಿರುದ್ಧ ತೀವ್ರವಾದ ಆಕ್ಷೇಪ ವ್ಯಕ್ತಪಡಿಸಿ, ಒಕ್ಕೊರಲಿನ ಧ್ವನಿ ಮೂಡುವಂತೆ ನೋಡಿಕೊಂಡರು. ಇದರಿಂದ ಹಿಂದುಳಿದ ಜಾತಿಗಳಲ್ಲಿ ಜಾಗೃತಿ, ಒಗ್ಗೂಡುವಿಕೆ ಸಾಧ್ಯವಾಯಿತು.

ಇದನ್ನು ಓದಿದ್ದೀರಾ?: ಪ್ರೊ. ಪಿ.ವಿ. ನಂಜರಾಜ ಅರಸು ಅವರಿಗೆ ಪ್ರತಿಷ್ಠಿತ ‘ಡಿ. ದೇವರಾಜ ಅರಸು’ ಪ್ರಶಸ್ತಿ

ತದನಂತರ 1962ರಲ್ಲಿ ನಾಗನಗೌಡ ಸಮಿತಿ ವರದಿಯ ವಿರುದ್ಧ ಬಾಲಾಜಿಯವರು ಸುಪ್ರೀಂ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದಾಗ, ಕೋರ್ಟ್ ಆ ವರದಿಯನ್ನು ಅನೂರ್ಜಿತಗೊಳಿಸಿತು. 1963ರಲ್ಲಿ ಈ ಅವಕಾಶವನ್ನು ಬಳಸಿಕೊಂಡ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರು, `ಮೀಸಲಾತಿಗೆ ಜಾತಿಯನ್ನು ಪರಿಗಣಿಸುವುದಿಲ್ಲ’ ಎಂದು ಘೋಷಿಸಿ, ಸರಕಾರಿ ಆದೇಶವನ್ನೂ ಹೊರಡಿಸಿಬಿಟ್ಟರು. ಇದನ್ನು ಮೈಸೂರು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ ಹಾವನೂರ್ ದೊಡ್ಡ ಮಟ್ಟದ ಸಾಂವಿಧಾನಿಕ ಹೋರಾಟವನ್ನೇ ಪ್ರಾರಂಭಿಸಿದರು. ಸಾಲದೆಂದು ಒಂದು ಮಾನೋಗ್ರಾಫ್ ಬರೆದು ಪ್ರಕಟಿಸಿದರು. ಆ ಮಾನೋಗ್ರಾಫ್ ಚರ್ಚೆಯ ವಸ್ತುವಾಗಿ, ವ್ಯಾಪಕ ಪ್ರಚಾರ ಪಡೆಯಿತು.

ಹಿಂದುಳಿದವರ ಏಳಿಗೆಗಾಗಿ ಇಷ್ಟೆಲ್ಲ ಶ್ರಮಿಸಿದ, ತಮ್ಮ ಬುದ್ಧಿಯನ್ನೆಲ್ಲ ಬಸಿದ ಹಾವನೂರ್, ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕಾದರೆ, ರಾಜಕೀಯ ಅಧಿಕಾರದ ಬಲವಿರಬೇಕೆಂದು ಮನಗಂಡರು. ರಾಜಕಾರಣದಲ್ಲಿ ಹಿಂದುಳಿದವರ ಶ್ರೇಯಸ್ಸಿಗಾಗಿ ಹಗಲಿರುಳು ಶ್ರಮಿಸುತ್ತಿದ್ದ ದೇವರಾಜ ಅರಸು, ಸೂಕ್ತ ವ್ಯಕ್ತಿಯಂತೆ ಕಂಡರು. ದೇವರಾಜ ಅರಸರಿಗೂ ಹಾವನೂರರ ಮೇಧಾವಿತನದ ಅರಿವಿತ್ತು. ಹಾಗಾಗಿ 1969ರಲ್ಲಿ ಕಾಂಗ್ರೆಸ್ ವಿಭಜನೆಯಾದಾಗ, ಕಾಂಗ್ರೆಸ್ ಕನ್ವೀನರ್ ಆದ ದೇವರಾಜ ಅರಸರಿಗೆ ಹಾವನೂರ್ ಪ್ರಮುಖ ಸಲಹೆಗಾರರಾದರು. ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದರು. 

ಹೋರಾಟದ ಬದುಕು: 10.11.70ರಂದು ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಅಣ್ಣಿಗೇರಿಯಲ್ಲಿ ಭಾಷಣ ಮಾಡುತ್ತ, ಐಎಎಸ್, ಐಪಿಎಸ್ ಸೇವೆಯಲ್ಲಿ ಎಸ್ಸಿ ಎಸ್ಟಿಗಿರುವ ಮೀಸಲಾತಿಯನ್ನು ತೆಗೆದುಹಾಕಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದರು. ಇದನ್ನು ಪ್ರಬಲ ಅಸ್ತ್ರ ಮಾಡಿಕೊಂಡ ಹಾವನೂರ್, ಹಿಂದುಳಿದ ವರ್ಗಗಳ ಪರವಾಗಿ ಸಿಎಂ ವಿರುದ್ಧ ದೊಡ್ಡ ಆಂದೋಲನವನ್ನೇ ದೇವರಾಜ ಅರಸರ ಸಾರಥ್ಯದಲ್ಲಿ ಆರಂಭಿಸಿಬಿಟ್ಟರು. ಇಬ್ಬರು ಹಿಂದುಳಿದ ನಾಯಕರ ನೇತೃತ್ವದಲ್ಲಿ ನಡೆದ ಆ ಆಂದೋಲನ ಉತ್ತಮ ರೀತಿಯಲ್ಲಿ ತಳ ಸಮುದಾಯಗಳಲ್ಲಿ ಜಾಗೃತಿಯನ್ನು ಬಿತ್ತಿತು.

ನಂತರ, 1971ರಲ್ಲಿ ಹಾವನೂರರು ರಾಜ್ಯ ಬುಡಕಟ್ಟು ಸಮಾವೇಶವನ್ನು ಆಯೋಜಿಸಿದರು. ಆ ಸಮಾವೇಶವನ್ನು ಉದ್ಘಾಟಿಸಿ ಭಾಷಣ ಮಾಡಿದ ಅರಸು, `ನಮ್ಮ ಸರಕಾರ ಬಂದರೆ ಹಿಂದುಳಿದವರಿಗೆ ಆದ್ಯತೆ ನೀಡಲಾಗುವುದು’ ಎಂದು ಘೋಷಿಸಿದರು. ಅದಕ್ಕೆ ಪೂರಕವಾಗಿ, ಅರಸರು ಅಧಿಕಾರಕ್ಕೆ ಬಂದಕೂಡಲೆ ಹಿಂದುಳಿದ ವರ್ಗಗಳ ಆಯೋಗ ರಚಿಸುವಂತೆ ಬಿ. ಬಸವಲಿಂಗಪ್ಪರಾದಿಯಾಗಿ ಹಲವು ಹಿಂದುಳಿದ ನಾಯಕರು ಅರಸರ ಮೇಲೆ ಒತ್ತಡ ಹಾಕಿದರು.

ಇದನ್ನು ಓದಿದ್ದೀರಾ?: ದೇವರಾಜ ಅರಸು, ಸುಬ್ಬಯ್ಯ ಶೆಟ್ಟಿ ಮತ್ತು ಉಳುವವನೇ ಭೂಮಿಯ ಒಡೆಯ

70ರ ದಶಕದ ಪ್ರಾರಂಭದ ಹೊತ್ತಿಗೆ ಕರ್ನಾಟಕದ ರಾಜಕೀಯ ವಿದ್ಯಮಾನಗಳು ಹೊಸ ತಿರುವನ್ನು ಪಡೆದವು. ಬಡವರ ಏಳ್ಗೆಗಾಗಿ ಶ್ರಮಿಸುವುದು ಸರಕಾರದ ಮುಖ್ಯ ಹೊಣೆ ಎಂಬ ವಿಚಾರ ಪ್ರಚಲಿತ ಮೌಲ್ಯ ಪಡೆಯಿತು. ಕರ್ನಾಟಕದ ನೆಲವೂ ಹದವಾಗಿತ್ತು. ಅರಸು ಹಿಂದುಳಿದ ವರ್ಗಗಳ ನಾಯಕರಾಗಿ ಪ್ರತಿಬಿಂಬಿಸಲ್ಪಟ್ಟರು. ಅದಕ್ಕೆ ಪೂರಕವಾಗಿ ಹಾವನೂರರ ಹಿಂದುಳಿದ ವರ್ಗಗಳ ಸಂಘಟನೆ, ಜಾಗೃತಿಯ ಫಲವಾಗಿ 1972ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಅರಸು ಮುಖ್ಯಮಂತ್ರಿಯಾದರು. ಅದಾದ 15 ದಿನಕ್ಕೆ ಹಾವನೂರು ನೇತೃತ್ವದಲ್ಲಿ ಆಯೋಗ ರಚಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು. ಅದಕ್ಕೆ ಅಂದಿನ ಅಡ್ವೋಕೇಟ್ ಜನರಲ್ ಆನಂದ ಭೈರಾರೆಡ್ಡಿಯವರು ಆಯೋಗ ರಚಿಸಲು ಸಲಹೆ ನೀಡಿದರು. ಜುಲೈ 1972ರಲ್ಲಿ ವಿಧಾನಮಂಡಲದಲ್ಲಿ ವಿಷಯ ಚರ್ಚೆಗೆ ಬಂದು, ಆಯೋಗ ರಚಿಸಲು ಘೋಷಿಸಲಾಯಿತು. ಇದಕ್ಕೆ ವಿರೋಧ ಪಕ್ಷಗಳಿಂದ ವ್ಯಾಪಕ ಬೆಂಬಲವೂ ವ್ಯಕ್ತವಾಯಿತು.

ಅರಸು 4
ಬಡವರ ಕಷ್ಟ ಆಲಿಸುತ್ತಿರುವ ಅರಸು

ಅಂತಿಮವಾಗಿ 18.7.1972ರಂದು ಸರಕಾರ ಎಲ್.ಜಿ. ಹಾವನೂರರ ಅಧ್ಯಕ್ಷತೆಯಲ್ಲಿ ಹಿಂದುಳಿದ ಆಯೋಗವನ್ನು ರಚಿಸಿತು. ಇದು ಕರ್ನಾಟಕದ ಇತಿಹಾಸದಲ್ಲಿ ಪ್ರಪ್ರಥಮ ಪ್ರಯೋಗವಾಗಿತ್ತು. ಅರಸು-ಹಾವನೂರು ಇಬ್ಬರ ಚಿಂತನೆ, ವಿಚಾರ, ಮನಸ್ಸು ಒಂದೇ ಆಗಿತ್ತು. ಕಾಲವೂ ಕೂಡಿ ಬಂದಿತ್ತು. ಆದರೆ ಅವರಂದುಕೊಂಡಂತೆ ಜನಸ್ಪಂದನ ಇರಲಿಲ್ಲ.

ಮಾಹಿತಿಯನ್ನೇ ಕದ್ದರು, ಉಚ್ಚಾಟಿಸಿದರು: ದೇವರಾಜ ಅರಸು ಸಮಾನತೆಯಲ್ಲಿ ನಂಬಿಕೆ ಇಟ್ಟಿದ್ದರು. ಆ ಸಮಾನತೆ ಸಮಾಜದಲ್ಲಿ ಕಾಣಬೇಕೆಂದರೆ ಜಾತಿ-ವರ್ಗ ಸಂಪೂರ್ಣ ನಾಶವಾಗಬೇಕು ಎನ್ನುವುದನ್ನು ಅರಿತಿದ್ದರು. ಸಮಾನತೆಗೆ ಪೂರಕವಾಗಿಯೇ ಸಮಾನರಲ್ಲದವರಿಗೆ ನೆರವು ನೀಡಿ, ಕೈಹಿಡಿದು ಮೇಲೆತ್ತಲು ಪ್ರಯತ್ನಿಸಿದರು. ತುಳಿತಕ್ಕೆ ಒಳಗಾದವರಿಗೆ ಬೇಕಾದುದು ಸಹಾನುಭೂತಿಯ ಅನುಕಂಪವಲ್ಲ, ಬದಲಾಗಿ ಸಮಾನತೆ ಮತ್ತು ಸಂಪತ್ತು. ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ತಿಳಿವು. ಅರಸರ ಮೀಸಲಾತಿ ಜಾರಿಗೆ ತರುವ ಕಲ್ಪನೆಯ ಹಿಂದಿನ ಆಶಯವೂ ಇದೇ ಆಗಿತ್ತು.

ಅರಸರ ಆಶಯಕ್ಕೆ ಪೂರಕವಾಗಿ, ಅವಕಾಶ ಸಿಕ್ಕಾಗಲೆಲ್ಲ ಹಾವನೂರ್, ನಿರ್ಲಕ್ಷಿತ ಸಮುದಾಯಗಳ ಪ್ರತಿಭಾವಂತರನ್ನು ಹುಡುಕುವುದು, ಸಣ್ಣಪುಟ್ಟ ಜಾತಿಗಳನ್ನು ಸಂಘಟಿಸುವುದು ಮತ್ತು ಅವರನ್ನೆಲ್ಲ ಹುರಿದುಂಬಿಸಿ ಸಮ್ಮೇಳನಗಳನ್ನು ಆಯೋಜಿಸುವುದನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲ, ಆ ಸಮ್ಮೇಳನಗಳಿಗೆ ತಪ್ಪದೆ ದೇವರಾಜ ಅರಸರನ್ನು ಕರೆದುಕೊಂಡು ಹೋಗುತ್ತಿದ್ದರು. ಆ ಮೂಲಕ ಅವರ ಸ್ಥಿತಿಗತಿಯನ್ನು ಪ್ರತ್ಯಕ್ಷವಾಗಿ ಅರಸರಿಗೆ ಪರಿಚಯಿಸುವುದು ಹಾವನೂರರ ಉದ್ದೇಶವಾಗಿತ್ತು.

ಇದರ ಫಲವಾಗಿ, ದೇವರಾಜ ಅರಸು ಈ ಜಾತಿಗಳಿಗೆ ಸೇರಿದ ಪ್ರತಿಭಾವಂತರನ್ನು ಹೆಕ್ಕಿ ಅವರಿಗೆ ಪಬ್ಲಿಕ್ ಸರ್ವಿಸ್ ಕಮಿಷನ್‌ನಲ್ಲಿ, ಬೋರ್ಡು-ಕಾರ್ಪೋರೇಷನ್‌ಗಳಲ್ಲಿ, ಸಮಿತಿಗಳಲ್ಲಿ, ವಿಧಾನ ಮಂಡಲದಲ್ಲಿ… ಅಷ್ಟೇ ಅಲ್ಲ, ನ್ಯಾಯಾಂಗದಲ್ಲಿ ಅತ್ಯುನ್ನತ ಸ್ಥಾನ ಕಲ್ಪಿಸಿಕೊಡುತ್ತಾ ಹೋದರು. ಅರಸರ ಈ ದಿಟ್ಟ ಹೆಜ್ಜೆ, ರಾಜಕಾರಣದಲ್ಲಿ ಅವರನ್ನು ಗಟ್ಟಿಗೊಳಿಸುತ್ತಾ ಹೋದರೆ, ಹಾವನೂರರಿಗೆ ಕಡುವೈರಿಗಳನ್ನು ಸೃಷ್ಟಿಸುತ್ತಾ ಹೋಯಿತು. ಮೊದಲಿಗೆ, ರಚನೆಯಾದ ಹಿಂದುಳಿದ ಆಯೋಗಕ್ಕೆ ಅಧಿಕಾರಿಗಳು ಅಸಹಕಾರ ತೋರಿದರು. ಮಾಹಿತಿ ನೀಡದೆ ಸತಾಯಿಸಿದರು. ಕೊಡಬಾರದ ಕಾಟ ಕೊಟ್ಟರು. ನಂತರ ರಾಜಕೀಯ ನಾಯಕರ ಕಿತಾಪತಿ. ಅದಾದ ಮೇಲೆ `ಹಿಂದುಳಿದ ವರ್ಗಗಳ ಆಯೋಗ ರಚನೆ ಅನಾಹುತಕ್ಕೆ ದಾರಿ’ ಎಂದು ಪತ್ರಕರ್ತರಿಂದ ಮಾಧ್ಯಮಗಳಲ್ಲಿ ನಿರಂತರ ಅಪಪ್ರಚಾರ… ಸುಮಾರು ಎರಡು ವರ್ಷಗಳ ಕಾಲ ಏನನ್ನೂ ಮಾಡದಂತೆ ಕೈ ಕಟ್ಟಿ ಹಾಕಿದರು.

ಇದನ್ನು ಓದಿದ್ದೀರಾ?: ದೇವರಾಜ ಅರಸು-ಸಿದ್ದರಾಮಯ್ಯ | ಸಾಮಾಜಿಕ ನ್ಯಾಯದ ನಿಜ ಹರಿಕಾರ ಯಾರು?

ದೇವರಾಜ ಅರಸರ ಜಾತ್ಯತೀತ ಆಶಯ, ಹಾವನೂರರ ಹಿಂದುಳಿದವರ ಸಬಲೀಕರಣ ಎನ್ನುವುದು ಕೇವಲ ರಾಜಕೀಯ ಘೋಷಣೆಯಾಗಿರಲಿಲ್ಲ. ಆ ಮೂಲಕ ಅಧಿಕಾರಕ್ಕೇರಬೇಕೆಂಬ ಸ್ವಾರ್ಥವೂ ಅವರಲ್ಲಿರಲಿಲ್ಲ. ಇಬ್ಬರೂ ಕಿಡಿಗೇಡಿಗಳಿಗೆ ಕಿವಿ ಕೊಡದೆ, ತಮ್ಮ ತಮ್ಮ ಕಾರ್ಯದಲ್ಲಿ ಮಗ್ನರಾದರು. ಅರಸರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಬಿ.ಟಿ. ಸೋಮಣ್ಣನವರನ್ನು ನೇಮಕ ಮಾಡಿ, ನಗರಪ್ರದೇಶದ ಜನರಿಗೆ ಸೈಟ್ ಹಂಚಿಕೆಯಲ್ಲಿ ಜಾತ್ಯತೀತ ನೀತಿಯನ್ನು ಅನುಷ್ಠಾನಕ್ಕೆ ತಂದರು. ಬ್ರಾಹ್ಮಣರ ಪಕ್ಕ ಮುಸ್ಲಿಮರು, ಲಿಂಗಾಯತರ ಪಕ್ಕ ಬೆಸ್ತರು, ಒಕ್ಕಲಿಗರ ಪಕ್ಕ ದಲಿತರು… ಹೀಗೆ ಸೈಟ್ ಹಂಚಿಕೆಯಲ್ಲಿ ಎಲ್ಲ ಜಾತಿಯ ಜನರೂ ಒಗ್ಗೂಡಿ ಬದುಕುವ ಸೌಹಾರ್ದ ವಾತಾವರಣವನ್ನು ಸೃಷ್ಟಿಸಿದರು. ಅದು ಜಯನಗರ ಬಡಾವಣೆಯಲ್ಲಿ ಈಗಲೂ ಇದೆ, ನೀವು ನೋಡಬಹುದು. ಹಾಗೆಯೇ ಹಾವನೂರರು, ತಮ್ಮ ಆಯೋಗದ ಕ್ಷೇತ್ರಕಾರ್ಯದಲ್ಲಿ ಮುಳುಗಿಹೋಗಿ 193 ಗ್ರಾಮಗಳು, 185 ನಗರ ಪ್ರದೇಶಗಳನ್ನು ಅಲೆದು, ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸಿದರು.

ಆದರೆ ಹಾವನೂರ್ ಆಯೋಗದಿಂದ ಏನಾಗುತ್ತದೆ ಎಂಬುದನ್ನು ಗ್ರಹಿಸಿದ್ದ; ರಾಜಕೀಯ ಅಧಿಕಾರವನ್ನು, ಸರಕಾರಿ ಸವಲತ್ತನ್ನು ನಿರಂತರವಾಗಿ ಅನುಭವಿಸುತ್ತಿದ್ದ ಮೇಲ್ಜಾತಿಯ ಪಟ್ಟಭದ್ರರಿಗೆ ಕೆಳಜಾತಿಗಳ ಸಬಲೀಕರಣ ನುಂಗಲಾರದ ತುತ್ತಾಯಿತು. ಇನ್ನುಮುಂದೆ ನಮ್ಮ ಆಟ ನಡೆಯದು ಎಂಬುದು ಅರಿವಾಗಿ, ಆ ಸಿಟ್ಟನ್ನೆಲ್ಲ ಹಾವನೂರರ ಮೇಲೆ ತೀರಿಸಿಕೊಳ್ಳತೊಡಗಿದರು. ಅದಷ್ಟೇ ಅಲ್ಲ, ಹಾವನೂರರು ಮೂರು ವರ್ಷಗಳ ಕಾಲ ಕರ್ನಾಟಕವನ್ನು ಅಲೆದು, ತಳಸಮುದಾಯಗಳ ಸ್ಥಿತಿಗತಿಯನ್ನು ಅಧ್ಯಯನ ಮಾಡಿ ತಯಾರಿಸಿದ ವರದಿ ಅಂತಿಮ ಹಂತದಲ್ಲಿದ್ದಾಗ, ಅವರು ಸಂಗ್ರಹಿಸಿದ ಮಾಹಿತಿಯನ್ನೇ ಕದ್ದುಬಿಟ್ಟರು. ಆ ವರದಿಯನ್ನಿಟ್ಟುಕೊಂಡು ಪರ್ಯಾಯ ಹಿಂದುಳಿದ ವರ್ಗಗಳ ವರದಿಯನ್ನು ಸಿದ್ಧಪಡಿಸಿ ಪ್ರಕಟಿಸಿಯೂಬಿಟ್ಟರು. ಇದರ ಪೂರ್ಣ ಪ್ರಯೋಜನ ಪಡೆದ ಅಂದಿನ ಕೆಪಿಸಿಸಿ ಅಧ್ಯಕ್ಷರು, ಶಿಸ್ತು ಕ್ರಮ ಮುಂದಿಟ್ಟು ಹಾವನೂರರನ್ನು ಪಕ್ಷದಿಂದ ಉಚ್ಚಾಟಿಸಿದರು.

ಆರು ತಿಂಗಳ ತಪಸ್ಸು: ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಿದರೂ, ಹಾವನೂರ್ ಧೃತಿಗೆಡಲಿಲ್ಲ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಮೇಲ್ಜಾತಿ ನಾಯಕರು ನಿರಂತರವಾಗಿ ಮಾಧ್ಯಮಗಳ ಮೂಲಕ ಟೀಕಾ ಪ್ರಹಾರದಲ್ಲಿ ನಿರತರಾದರೂ, ಹಾವನೂರ್ ಹೆದರಲಿಲ್ಲ. ಏಕೆಂದರೆ ಅವರು ಅನುಭವಿಸಿದ ಅವಮಾನ ಮತ್ತು ಶೋಷಣೆ ಅದಕ್ಕಿಂತ ಘೋರವಾದುದು ಎಂಬುದು ಕರುಳಿನಲ್ಲಿ ಕೂತಿತ್ತು. ಆ ಕಾರಣದಿಂದಾಗಿ ಒಂದು ದೃಢ ನಿರ್ಧಾರಕ್ಕೆ ಬಂದು, ಸರಕಾರ ಒದಗಿಸಿದ್ದ ಆಯೋಗದ ಸಕಲ ಸವಲತ್ತುಗಳನ್ನು ತ್ಯಜಿಸಿದರು. ಆಯೋಗದ ವರದಿಯನ್ನು ಸಿದ್ಧಪಡಿಸುವ ಮಹತ್ವದ, ಜವಾಬ್ದಾರಿಯುತ ಕೆಲಸದಲ್ಲಿ ಮಗ್ನರಾದರು.

ಸುಮಾರು 6 ತಿಂಗಳ ಕಾಲ ಬೆಂಗಳೂರನ್ನು ಬಿಟ್ಟು, ರಾಜಧಾನಿಗೆ ಹತ್ತಿರದ ತಿಪ್ಪಗೊಂಡನಹಳ್ಳಿ ಜಲಮಂಡಳಿಯ ಅತಿಥಿಗೃಹದಲ್ಲಿ ಠಿಕಾಣಿ ಹೂಡಿದರು. ಅಲ್ಲಿಯವರೆಗೆ ಅವರು ಸಂಗ್ರಹಿಸಿದ ಸಮಗ್ರ ಮಾಹಿತಿಯನ್ನು ಮತ್ತು ಆ ವರದಿ ರಚಿಸಲು ರೆಫರೆನ್ಸಿಗಾಗಿ ಬೇಕಾದ ಪುಸ್ತಕಗಳನ್ನು, ಸುಮಾರು 3 ಲಾರಿ ಲೋಡು ಸರಕನ್ನು ಕೊಂಡೊಯ್ದರು. ಜೊತೆಗೆ ಇಬ್ಬರು ಅತ್ಯುತ್ತಮ ಟೈಪಿಸ್ಟ್ ಗಳು, ಶಿಷ್ಯ ಸಿ.ಎನ್. ಕೃಷ್ಣಾರೆಡ್ಡಿಯವರನ್ನು ಕರೆದುಕೊಂಡು ಹೋದರು. 6 ತಿಂಗಳುಗಳ ಕಾಲ ತಪಸ್ಸಿನಂತೆ ಕೂತು ಹಿಂದುಳಿದ ವರ್ಗಗಳ ವರದಿ ಸಿದ್ಧಪಡಿಸಿದರು.

Urs 1024x562 1
ದೂರದೃಷ್ಟಿಯುಳ್ಳ ನಾಯಕ… ದೇವರಾಜ ಅರಸು

ಅಂತಿಮವಾಗಿ, 19.11.1975ರಂದು, ಇಂದಿರಾ ಗಾಂಧಿಯವರ ಹುಟ್ಟುಹಬ್ಬದ ದಿನವೆಂದು ಕಾಣುತ್ತದೆ, ಮುಖ್ಯಮಂತ್ರಿ ದೇವರಾಜ ಅರಸರ ಸರಕಾರಕ್ಕೆ ಹಾವನೂರ್ ಆಯೋಗದ ವರದಿಯನ್ನು ಹಸ್ತಾಂತರಿಸಿದರು. ಅಲ್ಲದೆ, ವರದಿಯನ್ನು ಪ್ರಕಟಿಸಿಯೂಬಿಟ್ಟರು. ಇದು ದೇವರಾಜ ಅರಸು ಮತ್ತು ಎಲ್.ಜಿ. ಹಾವನೂರರ ಒಗ್ಗಟ್ಟಿನ ಫಲ. ನನ್ನ ಪ್ರಕಾರ ಇದು ಹಿಂದುಳಿದ ವರ್ಗಗಳ ಪಾಲಿನ ಬೈಬಲ್.

ಇದನ್ನು ಓದಿದ್ದೀರಾ?: ಅರಸು – ಸಿದ್ದರಾಮಯ್ಯ: ʼಬದಲಾದ ಕಾಲಘಟ್ಟದ ಪಾತ್ರʼಕ್ಕೆ ಸಿಗದ ವಿಶ್ಲೇಷಣಾ ನ್ಯಾಯ

ಮೇಲ್ಜಾತಿಗಳ ವಿರೋಧ, ಕೊಲೆ ಯತ್ನ: ಹಾವನೂರ್ ಆಯೋಗದ ವರದಿ ಪ್ರಕಟವಾಗುತ್ತಿದ್ದಂತೆ ವಿರೋಧಿಗಳು ಜಾಗೃತರಾದರು. ದೇವರಾಜ ಅರಸರ ಸರಕಾರದ ಮೇಲಿನ ಸಿಟ್ಟನ್ನು ಹಾವನೂರರ ಮೇಲೆ ತೀರಿಸಿಕೊಳ್ಳಲು ಮುಂದಾದರು. ಆ ಸಮಯದಲ್ಲಿ ಅರಸು ಅತ್ಯಂತ ಜಾಣ್ಮೆಯಿಂದ, ರಾಜಕೀಯ ಮುತ್ಸದ್ದಿತನದಿಂದ ನಡೆದುಕೊಂಡರು. ಯಾವುದೇ ಬಹಿರಂಗ ಹೇಳಿಕೆಗಳನ್ನು ನೀಡದೆ, ಶ್ರದ್ಧೆಯಿಂದ ವರದಿಯನ್ನು ಕೂಲಂಕಷ ಅಧ್ಯಯನ ಮಾಡಿದರು. ಹಾವನೂರರ ಜೊತೆ ಕೂತು ದೀರ್ಘವಾಗಿ ಚರ್ಚಿಸಿದರು. ಹಾವನೂರರೂ ಅಷ್ಟೆ, ಕಾಂಗ್ರೆಸ್‌ನಿಂದ ಉಚ್ಚಾಟಿತರಾದರೂ, ಅರಸರೊಂದಿಗಿನ ಸ್ನೇಹವನ್ನು ಕಡಿದುಕೊಂಡಿರಲಿಲ್ಲ. ಅರಸರ ಮೇಲಿನ ನಿಷ್ಠೆ ಒಂಚೂರು ಕಡಿಮೆಯಾಗಿರಲಿಲ್ಲ.

ಈ ನಡುವೆ, ಅರಸು ಮತ್ತು ಹಾವನೂರರ ಶ್ರಮದ ದಿಕ್ಕು ತಪ್ಪಿಸಲು, ಅವರ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹಳ್ಳ ಹಿಡಿಯುವಂತೆ ಮಾಡಲು, ಅವರ ಉತ್ಸಾಹವನ್ನು ಕುಗ್ಗಿಸಲು, ಧೃತಿಗೆಡಿಸಲು ಮೇಲ್ಜಾತಿಯ ಜನ ಇನ್ನಿಲ್ಲದ ಷಡ್ಯಂತ್ರ ರೂಪಿಸಿದರು. ಇದಕ್ಕೆ ಪೂರಕವಾಗಿ ವೀರಶೈವ ಮಹಾಸಭಾದ ಅಧ್ಯಕ್ಷ ಜೆ.ಬಿ. ಮಲ್ಲಾರಾಧ್ಯರ ಮುಂದಾಳತ್ವದಲ್ಲಿ ಹಾವನೂರ್ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಯಿತು. ಆ ರಾಜ್ಯವ್ಯಾಪಿ ಹೋರಾಟಕ್ಕೆ ಒಕ್ಕಲಿಗರು, ಬ್ರಾಹ್ಮಣರು ಕೂಡ ಕೈಜೋಡಿಸಿದರು. ಆ ಆಕ್ರೋಶಿತ ಮೇಲ್ಜಾತಿಗಳ ಪ್ರತಿಭಟನೆಯ ಸಮಯದಲ್ಲಿ ಹಾವನೂರ್ ಕಾರಿನ ಮೇಲೆ ಕಲ್ಲು ತೂರಾಟ ನಡೆಯಿತು. ಇನ್ನು ಕೆಲವು ಕಡೆ ಉದ್ರಿಕ್ತ ಗುಂಪು ಹಾವನೂರರ ಕಾರನ್ನು ಅಡ್ಡಗಟ್ಟಿ ಕೊಲೆ ಪ್ರಯತ್ನಕ್ಕೂ ಮುಂದಾಯಿತು. ಹಾವನೂರರ ಕುಟುಂಬಕ್ಕೆ ಎಲ್ಲ ರೀತಿಯಿಂದಲೂ ತೊಂದರೆಗಳು ಎದುರಾದವು. ಕಿಡಿಗೇಡಿಗಳ ಕಣ್ಣಿಂದ ತಪ್ಪಿಸಿಕೊಳ್ಳಲು ಹಾವನೂರ್ ಕಾರಿನಲ್ಲಿ ಓಡಾಡುವುದನ್ನೇ ಬಿಟ್ಟರು. ತಮ್ಮ ಶಿಷ್ಯ ಕೃಷ್ಣಾರೆಡ್ಡಿಯವರ ಲ್ಯಾಂಬ್ರಟ ಸ್ಕೂಟರಿನಲ್ಲಿ ಸಾಮಾನ್ಯರಂತೆ ಅಡ್ಡಾಡತೊಡಗಿದರು.

ಆಶ್ಚರ್ಯಕರ ಬೆಳವಣಿಗೆ ಎಂದರೆ, ಎಲ್.ಜಿ. ಹಾವನೂರ್ ಎಂದರೆ ಯಾರು, ಅವರು ಶ್ರಮವಹಿಸಿ ಹೆಕ್ಕಿ ತೆಗೆದು ಪ್ರಕಟಿಸಿರುವ ವರದಿ ಎಂತಹದ್ದು, ಅದು ನಾಡಿಗೆ ಎಂತಹ ಬದಲಾವಣೆ ತರಲಿದೆ ಎಂಬುದರ ಬಗ್ಗೆ ಅರಿವಿದ್ದ ರೈತನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ, ಸಾಹಿತಿ ಪಿ. ಲಂಕೇಶ್, ಪತ್ರಕರ್ತರಾದ ಎಸ್.ಜಿ. ಮೈಸೂರು ಮಠ, ಕಲ್ಲೇ ಶಿವೋತ್ತಮ ರಾವ್‌ರಂತಹ ಚಿಂತಕರು ದಿಟ್ಟವಾಗಿ ಹಾವನೂರ್‌ರನ್ನು ಬೆಂಬಲಿಸಿದರು. ಅಂದಿನ ವಿರೋಧ ಪಕ್ಷದ ನಾಯಕ ಎಚ್.ಡಿ. ದೇವೇಗೌಡ ಮತ್ತು ಆಡಳಿತ ಪಕ್ಷದ ನಾಯಕರಾದ ಕೆ.ಎಚ್. ಪಾಟೀಲರು ವರದಿಯನ್ನು ವಿರೋಧಿಸಿ, ತಮ್ಮ ಜಾತಿನಿಷ್ಠೆಯನ್ನು ಮೆರೆದರು.

ಎಮರ್ಜೆನ್ಸಿಯಲ್ಲಿ ವರದಿ ಅನುಷ್ಠಾನ: 1975ರಲ್ಲಿ ಎಲ್.ಜಿ. ಹಾವನೂರ್ ಆಯೋಗದ ವರದಿಯನ್ನು ಸರಕಾರಕ್ಕೆ ಹಸ್ತಾಂತರಿಸಿದ ನಂತರ ಮೇಲ್ಜಾತಿಗಳಿಂದ ಶುರುವಾದ ಪ್ರತಿಭಟನೆಯ ಕಿಚ್ಚನ್ನು ಶಮನಗೊಳಿಸಲು ದೇವರಾಜ ಅರಸರ ರಾಜ್ಯ ಸರಕಾರ ಕಷ್ಟಪಡಬೇಕಾಗಲಿಲ್ಲ. ಏಕೆಂದರೆ, ಆ ಸಂದರ್ಭದಲ್ಲಿ ದೇಶದ ಮೇಲೆ ಕೇಂದ್ರ ಸರಕಾರ ತುರ್ತು ಪರಿಸ್ಥಿತಿ ಹೇರಿತ್ತು. ಅದು ಅರಸರ ಸರಕಾರಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸಿತು. ತುರ್ತು ಪರಿಸ್ಥಿತಿಯ ಕಾರಣಕ್ಕೆ ಪ್ರತಿಭಟನೆಗಳು, ಹೋರಾಟಗಳು ಸ್ತಬ್ಧವಾದರೂ ಆಯೋಗದ ವರದಿಯ ಅನುಷ್ಠಾನಕ್ಕಾಗಿ ಎರಡು ವರ್ಷಗಳ ಕಾಲ ಕಾಯಬೇಕಾಯಿತು.

ಈ ಎರಡು ವರ್ಷಗಳಲ್ಲಿ ಅರಸು ಮತ್ತು ಹಾವನೂರ್ ಹಿಂದುಳಿದ ಜಾತಿಗಳಿಗೆ ಹಂತ ಹಂತವಾಗಿ ಮೀಸಲಾತಿ ಒದಗಿಸುವ ಕುರಿತು ಚರ್ಚಿಸಿದರು. ಅಂತಿಮವಾಗಿ 22.2.1977 ರಂದು ದೇವರಾಜ ಅರಸರ ಸರಕಾರ ವರದಿಯನ್ನು ಅಂಗೀಕರಿಸಿ, ವಿಧಾನ ಮಂಡಲದಲ್ಲಿ ಮಂಡಿಸಿ, ಕಾಯ್ದೆಯಾಗಿ ರೂಪಿಸಿ ಆದೇಶ ಹೊರಡಿಸಿತು. ಅದರಲ್ಲಿ ವಿವಿಧ ಹಿಂದುಳಿದ ವರ್ಗಗಳನ್ನು ಮೂರು ಗುಂಪುಗಳಲ್ಲಿ ವಿಂಗಡಿಸಲಾಗಿ, ಹಿಂದುಳಿದ ಸಮುದಾಯಗಳಿಗೆ-ಶೇ.20; ಹಿಂದುಳಿದ ಜಾತಿಗಳಿಗೆ-ಶೇ.20; ಹಿಂದುಳಿದ ಪಂಗಡಗಳಿಗೆ-ಶೇ.5 ಮೀಸಲಾತಿಯನ್ನು ನೀಡಲಾಯಿತು. ಇವುಗಳ ಜೊತೆಗೆ ವಿವಿಧ ಸಮುದಾಯಗಳ ಬಡವರನ್ನು ವಿಶೇಷ ಗುಂಪೆಂದು ಪರಿಗಣಿಸಿ ಅವರಿಗೆ ಶೇ.5ರಷ್ಟು ಮೀಸಲಾತಿಯನ್ನು ನೀಡಲಾಯಿತು. ಈ ಎಲ್ಲ ವರ್ಗಗಳ ಹಿಂದುಳಿದ ಜಾತಿ ಮತ್ತು ಸಮುದಾಯಗಳ ವ್ಯಕ್ತಿಗಳಿಗೆ ಮೀಸಲಾತಿ ಸೌಲಭ್ಯ ಪಡೆಯಲು ವಾರ್ಷಿಕ 10 ಸಾವಿರ ರೂ.ಗಳ ಆದಾಯ ಮಿತಿಯನ್ನು ವಿಧಿಸಲಾಯಿತು. ಮೊದಲಿಗೆ ಶಿಕ್ಷಣದಲ್ಲಿ ಮೀಸಲಾತಿಯನ್ನು ಘೋಷಿಸಿದ ಸರಕಾರ, 4.3.1977ರಂದು ಸರಕಾರಿ ಸೇವೆಗಳಲ್ಲೂ ಮೀಸಲಾತಿಯನ್ನು ಘೋಷಿಸಿತು.

ಇದನ್ನು ಓದಿದ್ದೀರಾ?: ದೇವರಾಜ ಅರಸು-ಸಿದ್ದರಾಮಯ್ಯ: ಸಾಧನೆಯಲ್ಲಿ ಸಮಾನತೆ ಇದೆಯೇ?

ಅರಸರ ಸರಕಾರದ ಕ್ರಮವನ್ನು ಪ್ರಶ್ನಿಸಿದ ಮೇಲ್ಜಾತಿಯವರು ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದರು. ಹಾವನೂರ್ ವರದಿಯ ವಿರುದ್ಧವಾಗಿ ಕೋ. ಚೆನ್ನಬಸಪ್ಪನವರು ನ್ಯಾಯವಾದಿಯಾದರೆ, ಸರಕಾರದ ಪರವಾಗಿ ಆರ್.ಎನ್. ಭೈರಾರೆಡ್ಡಿ, ವರದಿಯ ಪರವಾಗಿ ನಾನು ಕೋರ್ಟ್ ನಲ್ಲಿ ವಾದ ಮಂಡನೆಗೆ ಅಪಿಯರ್ ಆದೆವು. ಕೊನೆಗೆ ಜಯ ನಮ್ಮದಾಯಿತು.

ಇಲ್ಲೊಂದು ಇಂಟರೆಸ್ಟಿಂಗ್ ಪ್ರಸಂಗವಿದೆ, ಕೇಳಿ… ನ್ಯಾಯಮೂರ್ತಿ ದೇಸಾಯಿಯವರು ಇ.ಎಸ್.ವೆಂಕಟರಾಮಯ್ಯನವರೊಂದಿಗೆ ಖಾಸಗಿಯಾಗಿ ಮಾತನಾಡುತ್ತ, `ಹಾವನೂರರಂತಹ ಕಾನೂನು ಪಂಡಿತ, ಹಿಂದುಳಿದ ವರ್ಗಕ್ಕೆ ಅವರು ಮಾಡಿದ ತ್ಯಾಗ, ಬೇರೆ ಯಾವ ದೇಶದಲ್ಲಾದರೂ ಆಗಿದ್ದರೆ, ಪ್ರತಿಯೊಂದು ಊರಿನಲ್ಲೂ ಅಮೃತಶಿಲೆಯ ಪ್ರತಿಮೆ ನಿಲ್ಲಿಸುತ್ತಿದ್ದರು’ ಎಂದಿದ್ದರಂತೆ. ಇದು ದೇವರಾಜ ಅರಸರಿಗೆ ಗೊತ್ತಿತ್ತು. ಗೊತ್ತಿದ್ದರಿಂದಲೇ ಅವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡು, ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ್ದರು.

images 3 7
ದೇವರಾಜ ಅರಸು

ಮಂತ್ರಿ ಮಾಡಿದ ಅರಸು: ಏತನ್ಮಧ್ಯೆ, 1976ರಲ್ಲಿ ಎಲ್.ಜಿ.ಹಾವನೂರ್ ಅವರ ವಿದ್ವತ್ತು, ಪಾಂಡಿತ್ಯ, ಹಿರಿತನವನ್ನು ಪರಿಗಣಿಸಿ ದೇವರಾಜ ಅರಸು ರಾಜ್ಯಸಭಾ ಎಂಪಿಯನ್ನಾಗಿ ಮಾಡಿದರು. 1978ರಲ್ಲಿ ದೇವರಾಜ ಅರಸರ ನೇತೃತ್ವದ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದಾಗ, ರಾಜ್ಯಸಭಾ ಎಂಪಿಯಾಗಿದ್ದ ಹಾವನೂರರನ್ನು ರಾಜೀನಾಮೆ ಕೊಡಿಸಿ, ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಸಂಪುಟದರ್ಜೆ ಸಚಿವರನ್ನಾಗಿ ಮಾಡಿದರು. ಕಾನೂನು ಪರಿಣತರಾದ್ದರಿಂದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಕೊಟ್ಟು ಗೌರವಿಸಿದರು, ಪುರಸ್ಕರಿಸಿದರು. ಅಷ್ಟೇ ಅಲ್ಲ, ಹಿಂದುಳಿದ ವರ್ಗಗಳಿಗೆ ಪ್ರತ್ಯೇಕ ಇಲಾಖೆ ಸೃಷ್ಟಿಸಿ, ಹಾವನೂರು ವರದಿಯ ಸಂಪೂರ್ಣ ಅನುಷ್ಠಾನದ ಜವಾಬ್ದಾರಿಯನ್ನು ಹಾವನೂರರಿಗೆ ವಹಿಸಿಕೊಟ್ಟರು. ಅದು ಹಿಂದುಳಿದ ವರ್ಗಕ್ಕೆ ನೀಡಿದ ಅವಕಾಶದಂತೆಯೂ, ಪುರಸ್ಕಾರದಂತೆಯೂ ಇತ್ತೆಂದು ರಾಜಕೀಯ ಪಂಡಿತರು ವಿಶ್ಲೇಷಿಸಿದರು. ಹಿಂದುಳಿದ ವರ್ಗಗಳ ಇತಿಹಾಸದಲ್ಲಿ ಈ ಘಟನೆ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದಂಥದ್ದೆಂದು ಭಾವಿಸಿದರು. 

ಹಾವನೂರರು ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಅತ್ಯಂತ ಪ್ರಗತಿಪರ ನಿರ್ಧಾರಗಳನ್ನು ತೆಗೆದುಕೊಂಡರು. ಸರಕಾರಿ ಸೇವೆಯಲ್ಲಿರುವ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಕೊಡಲು ಅಣಿಯಾದರು. ಅದರ ಮೊದಲ ಹೆಜ್ಜೆಯಾಗಿ 27.4.1978ರಂದು ಪರಿಶಿಷ್ಟ ಜಾತಿಗಳಿಗೆ ಶೇ. 15, ಪರಿಶಿಷ್ಟ ಪಂಗಡಗಳಿಗೆ ಶೇ. 3 ಮೀಸಲಾತಿ ಸೌಲಭ್ಯವನ್ನು ಒದಗಿಸಿಕೊಟ್ಟರು. ಮುಂದುವರೆದು, 1.1.1979ರಿಂದ ಜಾರಿಗೆ ಬರುವಂತೆ ಪಿಟಿಸಿಎಲ್(ಪ್ರಾಹಿಬಿಷನ್ ಆಫ್ ಟ್ರಾನ್ಸ್ಫರ್ ಆಫ್ ಸರ್ಟನ್ ಲ್ಯಾಂಡ್ಸ್) ಕಾಯ್ದೆಯನ್ನು ಜಾರಿಗೊಳಿಸಿದರು. ಎಸ್ಸಿ ಎಸ್ಟಿಗಳಿಗೆ ಸರಕಾರದಿಂದ ಕೊಟ್ಟಿದ್ದ ಜಮೀನುಗಳನ್ನು ಪರಭಾರೆಯಲ್ಲಿ ಊರ್ಜಿತಗೊಳಿಸಿ ಅದರ ವಾರಸುದಾರರಿಗೆ ಜಮೀನುಗಳನ್ನು ವಾಪಸ್ ಕೊಡುವ ಕಾನೂನನ್ನು ಜಾರಿಗೆ ತಂದರು. ಎಸ್ಸಿ ಎಸ್ಟಿ ಸಮುದಾಯದ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಇದು ಐತಿಹಾಸಿಕ ತೀರ್ಮಾನವೆಂದೇ ದಾಖಲಾಗಿದೆ.

ಇದನ್ನು ಓದಿದ್ದೀರಾ?: ದೇವರಾಜ ಅರಸು ಮತ್ತು ‍ತುರ್ತುಪರಿಸ್ಥಿತಿ: ಒಡನಾಡಿಗಳು ಕಂಡಂತೆ

ಮುಂದುವರೆದು, ಅತ್ಯಂತ ನಿರ್ಲಕ್ಷಿತ ಸಮುದಾಯವಾದ ಬುಡಕಟ್ಟು ಜನಾಂಗಗಳ ಶೈಕ್ಷಣಿಕ ಅಭಿವೃದ್ಧಿಗಾಗಿ, ಅವರು ವಾಸಿಸುವ ಸ್ಥಳದಲ್ಲಿಯೇ ಆಶ್ರಮ ಶಾಲೆಗಳನ್ನು ತೆರೆದು, ಸುಮಾರು 2 ಸಾವಿರ ಹೊಸ ಹಾಸ್ಟೆಲ್‌ಗಳ ಸೌಲಭ್ಯ ಒದಗಿಸಿಕೊಟ್ಟರು. ಇದರಿಂದಾಗಿ 2 ಲಕ್ಷಕ್ಕೂ ಮಿಗಿಲಾಗಿ ಹಿಂದುಳಿದ ಜಾತಿಗಳಿಗೆ ಸೇರಿದ ವಿದ್ಯಾರ್ಥಿಗಳು ಮುಫತ್ತಾಗಿ ವಸತಿ, ಊಟ ಪಡೆದು ಶಿಕ್ಷಣ ಪಡೆಯಲು ಪೂರಕ ವಾತಾವರಣ ಸೃಷ್ಟಿಯಾಯಿತು.

ಮುನ್ಸೀಫ್, ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾ ಜಡ್ಜ್ ಹುದ್ದೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಕಡ್ಡಾಯವಾಗಿ ಪ್ರಾತಿನಿದ್ಯ ದೊರೆಯುವಂತೆ ನೋಡಿಕೊಂಡರು. ಮೀಸಲಾತಿ ಹುದ್ದೆಗಳು ಅರ್ಹ ಅಭ್ಯರ್ಥಿಗಳಿಗೆ ದಕ್ಕದೆ ಹೋದಾಗ, ಎಸ್ಸಿ ಎಸ್ಟಿ ಮತ್ತು ಹಿಂದುಳಿದ ಜಾತಿಗಳಿಗೆ ಸೇರಿದ ಹೊಸದಾಗಿ ನೋಂದಾಯಿತ ವಕೀಲರಿಗೆ 4 ವರ್ಷಗಳ ಕಾಲ ಸತತವಾಗಿ ಸ್ಟೆಪಂಡ್ ಕೊಡುವಂತೆ ನೋಡಿಕೊಂಡರು.

ಅರಸು ಬಿಟ್ಟು ರಾಜಕೀಯ ಮಾಡಲ್ಲ: ಹಾವನೂರರು ಹಿಂದುಳಿದ ಬಡವರಿಗಾಗಿ ರೂಪಿಸಿದ ಹೊಸ ಕಾಯ್ದೆ ಕಾನೂನುಗಳಿಗೆ ಮುಖ್ಯಮಂತ್ರಿ ದೇವರಾಜ ಅರಸರಿಂದ ಪೂರ್ಣ ಪ್ರಮಾಣದ ಬೆಂಬಲವಿತ್ತು. ಹಾವನೂರರು ತರುವ ಕಡತಗಳಿಗೆ ಮರು ಮಾತಾಡದೆ ಸಹಿ ಹಾಕುತ್ತಿದ್ದರು. ಮತ್ತು ಅವರ ಹೊಸ ಯೋಜನೆಗಳು, ಕಾರ್ಯಕ್ರಮಗಳಿಗೆ ಹಣವಿಲ್ಲ ಎಂದು ಸಬೂಬು ಹೇಳದಂತೆ ತಮ್ಮ ಅಧಿಕಾರಿಗಳಿಗೆ ಮೊದಲೇ ತಾಕೀತು ಮಾಡಿದ್ದರು. ಹೀಗಾಗಿ ಅರಸು ಮತ್ತು ಹಾವನೂರರ ಕಾಲ- ಹಿಂದುಳಿದ ವರ್ಗಗಳ ಸುವರ್ಣಯುಗವೆಂದೇ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಲಕ್ಷ್ಮಣ್ ಜಿ. ಹಾವನೂರ್ ಅವರಿಗೆ 3 ಸಲ ಹೈಕೋರ್ಟ್ ನ್ಯಾಯಮೂರ್ತಿಗಳಾಗಲು ಕರೆ ಬಂದಿತ್ತು. ಮೂರು ಸಲವೂ ಅವರು ಅದನ್ನು ತಿರಸ್ಕರಿಸಿದ್ದರು. ದೇವರಾಜ ಅರಸರು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದಾಗ, ಅರಸರಿಂದಾಗಿಯೇ ರಾಜಕಾರಣಕ್ಕೆ ಬಂದ ಹಿಂದುಳಿದ ವರ್ಗಗಳ ಶಾಸಕರು ಗುಂಡೂರಾವ್ ಹಿಂದೆ ಹೋದ ಸಂದರ್ಭದಲ್ಲಿ, ನಾನು ಹಾವನೂರರ ಮನೆಯಲ್ಲಿದ್ದೆ. ದೆಹಲಿಯಿಂದ ಇಂದಿರಾ ಗಾಂಧಿಯವರೇ ಖುದ್ದಾಗಿ ಹಾವನೂರರಿಗೆ ಫೋನ್ ಮಾಡಿ, `ನಮ್ಮ ಪಕ್ಷಕ್ಕೆ ಬಂದುಬಿಡಿ, ನಿಮ್ಮನ್ನು ಪಕ್ಷದ ಅಧ್ಯಕ್ಷರನ್ನಾಗಿಸುತ್ತೇನೆ, ಬೇಡವೆಂದರೆ ಮುಖ್ಯಮಂತ್ರಿಯನ್ನಾಗಿಸುತ್ತೇನೆ’ ಎಂದರು.

ಇದನ್ನು ಓದಿದ್ದೀರಾ?: ದೇವರಾಜ ಅರಸು ನೆನಪು | ಅಪ್ಪಾಜಿ ಅಂದರೆ ಸಾಗರ ಎಂದ ಭಾರತಿ ಅರಸು

ಇಂದಿರಾ ಗಾಂಧಿಯವರ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ ಹಾವನೂರ್, `ನಾನು ಬೇಕಾದರೆ ರಾಜಕೀಯವನ್ನೇ ಬಿಟ್ಟು ಅರಸು ಜೊತೆಗಿರುತ್ತೇನೆ; ಆದರೆ ಅರಸು ಬಿಟ್ಟು ರಾಜಕೀಯ ಮಾಡಲ್ಲ’ ಎಂದರು. ಹೇಳಿದಂತೆಯೇ ಅರಸರ ಕೊನೆಯ ಕ್ಷಣದವರೆಗೂ ಜೊತೆಯಲ್ಲಿದ್ದರು. ಅವರ ಅಂದಿನ ಖಡಕ್ ಮಾತು, ಇವತ್ತಿಗೂ ನನ್ನ ಕಿವಿಯಲ್ಲಿದೆ. ಅರಸೂಗೆ ಹಾವನೂರು, ಹಾವನೂರಿಗೆ ಅರಸು- ಇಬ್ಬರಿಂದ ಕರ್ನಾಟಕದ ಹಿಂದುಳಿದ ವರ್ಗಕ್ಕಾದ ಅನುಕೂಲ… ಅಗಣಿತ.

27 1445911270 ravivarmakumar
ಪ್ರೊ. ರವಿವರ್ಮಕುಮಾರ್

ಪ್ರೊ. ರವಿವರ್ಮಕುಮಾರ್: ಶಿರಾ ತಾಲೂಕಿನ ನೆಲದಿಮ್ಮನಹಳ್ಳಿಯವರು. ತಂದೆ ಶಿಕ್ಷಕರು, ಸ್ವಾತಂತ್ರ್‍ಯ ಹೋರಾಟಗಾರರ ಕುಟುಂಬ. ಪ್ರಾಥಮಿಕ ವಿದ್ಯಾಭ್ಯಾಸ ಲಿಂಗದಹಳ್ಳಿಯ ಏಕೋಪಾಧ್ಯಾಯ ಶಾಲೆಯಲ್ಲಿ. ನಂತರ ತುಮಕೂರಿನ ಸರ್ವೋದಯ ಸ್ಕೂಲ್, ದಾವಣಗೆರೆಯಲ್ಲಿ ಬಿಎಸ್ಸಿ ಪದವಿ, ಬೆಂಗಳೂರಿನ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದವರು. ಕಾನೂನು ಪದವಿ ಓದುತ್ತಿರುವಾಗಲೇ ರೈತನಾಯಕ-ಚಿಂತಕ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ಶಿಷ್ಯರಾಗಿ ಗುರುತಿಸಿಕೊಂಡ ರವಿವರ್ಮಕುಮಾರ್, ಅವರ ಪ್ರೇರಣೆಯಿಂದ ಎಲ್.ಜಿ. ಹಾವನೂರ್ ಅವರ ಬಳಿ 1975ರಲ್ಲಿ ಜ್ಯೂನಿಯರ್ ಆಗಿ ವೃತ್ತಿ ಆರಂಭಿಸಿದರು. 2003ರಲ್ಲಿ ಹೈಕೋರ್ಟ್ ನ್ಯಾಯವಾದಿಗಳಾಗಿ ಸ್ವತಂತ್ರ ವಕೀಲರಾದರು. ಬೆಂಗಳೂರಿನ ಹಾವನೂರು ಕಾನೂನು ಕಾಲೇಜು, ನ್ಯಾಷನಲ್ ಲಾ ಸ್ಕೂಲ್‌ನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ರವಿವರ್ಮಕುಮಾರ್, 1978ರಲ್ಲಿ ದೇವರಾಜ ಅರಸರ ಸಂಪರ್ಕಕ್ಕೆ ಬಂದು, ಸರಕಾರಿ ವಕೀಲರಾಗಿ ನೇಮಕಗೊಂಡು, ಸುಮಾರು 15 ಸಾವಿರ ಗೇಣಿದಾರರ ಪರ ಉಚಿತವಾಗಿ ವಾದ ಮಾಡಿ, ನ್ಯಾಯ ಕೊಡಿಸಿದವರು. 1975ರಲ್ಲಿ, ದೇವರಾಜ ಅರಸರ ಸರಕಾರಕ್ಕೆ ಎಲ್.ಜಿ. ಹಾವನೂರ್ ಆಯೋಗದ ವರದಿ ಹಸ್ತಾಂತರಿಸಿದ ದಿನದಿಂದ ಅದು 1977ರಲ್ಲಿ ಅನುಷ್ಠಾನಗೊಳ್ಳುವವರೆಗೆ ಆದ ಘಟನಾವಳಿಗಳನ್ನು ಖುದ್ದಾಗಿ ಕಂಡವರು. 1997ರಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೊದಲ ಅಧ್ಯಕ್ಷರಾಗಿ ನೇಮಕಗೊಂಡ ರವಿವರ್ಮಕುಮಾರ್, ಸುಮಾರು 85 ವರದಿಗಳನ್ನು ಸರಕಾರಕ್ಕೆ ಸಲ್ಲಿಸುವ ಮೂಲಕ ಮುಂದೆ ಬರುವ ಅಧ್ಯಕ್ಷರಿಗೆ ಮಾದರಿ ಹಾಕಿಕೊಟ್ಟವರು. ಈ ನಡುವೆ, ಕರ್ನಾಟಕ ಲೋಕಾಯುಕ್ತ ನ್ಯಾಯಾಲಯದ ಸ್ಟಾಂಡಿಂಗ್ ಕೌನ್ಸಿಲ್ ಆಗಿ ಕೆಲ ಕಾಲ ಕಾರ್ಯ ನಿರ್ವಹಿಸಿದ್ದೂ ಇದೆ. 2013ರಲ್ಲಿ ಕರ್ನಾಟಕ ಸರಕಾರದ ಅಡ್ವೋಕೇಟ್ ಜನರಲ್ ಆಗಿ ನೇಮಕಗೊಂಡು, 2016ರಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾದಾಗ, ಆ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮತ್ತೆ ಹೈಕೋರ್ಟ್ ವಕೀಲಿಕೆ ಆರಂಭಿಸಿದವರು. ಲೋಹಿಯಾರ ಸಮಾಜವಾದ, ಪ್ರೊ. ಎಂಡಿಎನ್‌ರ ರೈತ ಹೋರಾಟ, ಹಾವನೂರರ ಕಾನೂನು- ಮೂವರ ವಿಚಾರವನ್ನು ಕರುಳಿಗಿಳಿಸಿಕೊಂಡವರು. ಸಂಪ್ರದಾಯ, ಮೂಢನಂಬಿಕೆಗಳನ್ನು ಧಿಕ್ಕರಿಸಿ, ಕುವೆಂಪು ಮಂತ್ರಮಾಂಗಲ್ಯದ ರೀತಿ ಸರಳ ಅಂತರ್ಜಾತಿ ಮದುವೆಯಾಗುವ ಮೂಲಕ ಸಮಾಜಕ್ಕೊಂದು ಸಂದೇಶ ರವಾನಿಸಿದವರು. ಸಂವಿಧಾನಾತ್ಮಕ ಕಾನೂನು, ಮಾನವ ಹಕ್ಕುಗಳ ಉಲ್ಲಂಘನೆ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ, ಚುನಾವಣಾ ವಿವಾದ, ಶಿಕ್ಷಣ, ಲಂಚ ವಿರೋಧಿ ಕಾನೂನುಗಳಲ್ಲಿ ಪರಿಣಿತರು. ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯರಾಗಿರುವ ರವಿವರ್ಮಕುಮಾರ್‌ಗೆ ತುಮಕೂರು ವಿವಿ ಡಾಕ್ಟರೇಟ್ ಪದವಿ, ಚಿಕಾಗೋ ಪೆರಿಯಾರ್ ವಿವಿ ಕೆ. ವೀರಮಣಿ ಸೋಷಿಯಲ್ ಜಸ್ಟೀಸ್ ಅವಾರ್ಡ್ ನೀಡಿ ಗೌರವಿಸಿದೆ.

(ಕೃಪೆ: ನಮ್ಮ ಅರಸು, ಲೇ: ಬಸವರಾಜು ಮೇಗಲಕೇರಿ, ಪ್ರ: ಪಲ್ಲವ ಪ್ರಕಾಶನ, ಬೆಲೆ: ರೂ. 700, ಸಂಪರ್ಕ: 88800 87235, 89700 45554)

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ಯಾನೇಶ್ ಕುಮಾರ್ ಪರ ಬಿಜೆಪಿ ಬ್ಯಾಟಿಂಗ್: ಬೋಗಸ್ ಮತಗಳನ್ನು ತಡೆಯುವುದೇ SIR ಉದ್ದೇಶ ಎಂದ ಫಡ್ನವೀಸ್

ಚುನಾವಣಾ ಆಯೋಗದ (ಇಸಿಐ) ಸ್ವಾಯತ್ತತೆ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ...

ಪಾಕಿಸ್ತಾನಿ ಜಾಲದ ಹನಿಟ್ರ್ಯಾಪ್‌ಗೆ ಬಿದ್ದ ಭಾರತೀಯ ನೌಕಾಪಡೆ ಸೈನಿಕನಿಂದ ಗೌಪ್ಯ ಮಾಹಿತಿ ಸೋರಿಕೆ; ಬಂಧನ

ಪಾಕಿಸ್ತಾನಕ್ಕೆ ಭಾರತೀಯ ನೌಕಾಪಡೆಯ ಗುಪ್ತ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದ್ದ ಭಾರತೀಯ ನೌಕಾಪಡೆಯ...

ಜನರೇ ತೀರ್ಮಾನಿಸುತ್ತಾರೆ, ಇಸಿಐ ಅಲ್ಲ: ಗ್ಯಾನೇಶ್ ಕುಮಾರ್ ವಿರುದ್ಧ ಒಂದಾದ ಠಾಕ್ರೆ ಸಹೋದರರು

ಕೇಂದ್ರ ಚುನಾವಣಾ ಆಯೋಗ (ಇಸಿಐ) ಜಾರಿಗೆ ತಂದಿರುವ ಮತದಾರರ ಪಟ್ಟಿ ವಿಶೇಷ...

SIR | ಸತ್ಯ ಹೇಳದೇ ಸಹಿ ಪಡೆದರು; ಎಫ್‌ಐಆರ್ ದಾಖಲಾಗುತ್ತಿದ್ದಂತೆ ತಮ್ಮ ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ (ಡಿಲಿಷನ್) ಪ್ರಕ್ರಿಯೆ...