ಲಿವಿಂಗ್ ರೂಮಿನಲ್ಲಿ ಗೂಢಚಾರ, ಗ್ಯಾರೇಜಿನಲ್ಲಿ ಡೇಟಾ ಕಳ್ಳ: ಯಾರೀ ʼಡಿಜಿಟಲ್‌ ಸ್ಪೈʼಗಳು?

Date:

ಇದು ಯಾವುದೇ ಸೈನ್ಸ್ ಫಿಕ್ಷನ್ ಸಿನಿಮಾದ ಕಥೆಯಲ್ಲ, ಸತ್ಯ. ನಾವೇ ಕಾಸು ಕೊಟ್ಟು ಮನೆಗೆ ತಂದುಕೊಂಡಿರುವ ಐಷಾರಾಮಿ ವಸ್ತುಗಳು ನಮ್ಮ ಸಮ್ಮತಿಯಿಲ್ಲದೆಯೇ ನಮ್ಮ ಗುಟ್ಟುಗಳನ್ನು ಜಗತ್ತಿಗೆ ಮಾರುತ್ತಿವೆ. ಲಿವಿಂಗ್ ರೂಮ್‌ನಲ್ಲಿರುವ ಸ್ಮಾರ್ಟ್ ಟಿವಿ, ಆಸೆಪಟ್ಟು ಕೊಂಡ ಸ್ಮಾರ್ಟ್ ಕಾರು ನಮ್ಮ ಖಾಸಗಿ ಜೀವನದ ಮೇಲೆ ಕಣ್ಣಿಟ್ಟಿರುವ ʼಡಿಜಿಟಲ್ ಸ್ಪೈʼಗಳೆಂದರೆ ನೀವು ನಂಬಲೇಬೇಕು!

- Advertisement -

ಬೆಳ್ಳಂಬೆಳಗ್ಗೆ ಸ್ಮಾರ್ಟ್ ಕಾರಿನ ಸ್ಟೇರಿಂಗ್ ಹಿಡಿದು ಕಚೇರಿಗೆ ಹೊರಡುವುದರಿಂದ ಹಿಡಿದು, ರಾತ್ರಿ ಮನೆಯಲ್ಲಿ ಸ್ಮಾರ್ಟ್ ಟಿವಿಯ ಮುಂದೆ ಕುಳಿತು ರಿಲ್ಯಾಕ್ಸ್ ಆಗುವವರೆಗೆ ನಮ್ಮ ಇಡೀ ದಿನಚರಿ ಇಂದಿನ ಮೋಸ್ಟ್‌ ಅಡ್ವಾನ್ಸ್ಡ್ ತಂತ್ರಜ್ಞಾನದ ಆವೃತ್ತಿಯಾಗಿದೆ. ನಮಗೇ ಗೊತ್ತಿಲ್ಲದಂತೆ ನಮ್ಮದೇ ಮನೆಯ ಲಿವಿಂಗ್ ರೂಮ್‌ನಲ್ಲಿರುವ ಸ್ಮಾರ್ಟ್ ಟಿವಿ ಹಾಗೂ ಆಸೆಪಟ್ಟು ಕೊಂಡ ಸ್ಮಾರ್ಟ್ ಕಾರು ನಮ್ಮ ಖಾಸಗಿ ಜೀವನದ ಮೇಲೆ 24 ಗಂಟೆಯೂ ಕಣ್ಣಿಟ್ಟಿರುವ ʼಡಿಜಿಟಲ್ ಸ್ಪೈʼ ಆಗಿ ಬದಲಾಗಿವೆ ಎಂದರೆ ನೀವು ನಂಬಲೇಬೇಕು!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಇದು ಯಾವುದೇ ಸೈನ್ಸ್ ಫಿಕ್ಷನ್ ಸಿನಿಮಾದ ಕಥೆಯಲ್ಲ, ಸತ್ಯ. ನಾವೇ ಕಾಸು ಕೊಟ್ಟು ಮನೆಗೆ ತಂದುಕೊಂಡಿರುವ ಐಷಾರಾಮಿ ವಸ್ತುಗಳು ನಮ್ಮ ಸಮ್ಮತಿಯಿಲ್ಲದೆಯೇ ನಮ್ಮ ಗುಟ್ಟುಗಳನ್ನು ಜಗತ್ತಿಗೆ ಮಾರುತ್ತಿವೆ. ಇವು ನಮ್ಮ ಮೇಲೆ ಹೇಗೆ ನಿಗಾ ಇಡುತ್ತಿವೆ? ನಮ್ಮ ಡೇಟಾವನ್ನು ಹೇಗೆ ಕದಿಯುತ್ತಿವೆ? ಯಾರಿಗೆ ಮಾರಿ ಏನು ಲಾಭ ಮಾಡಿಕೊಳ್ಳುತ್ತವೆ? ನಾವೇನು ಮಾಡಬೇಕು? ಒಮ್ಮೆ ತಲೆಗೆ ಕೆಲಸ ಕೊಡೋಣ…

ಲಿವಿಂಗ್ ರೂಮಿನ ಗೂಢಚಾರ ʼಸ್ಮಾರ್ಟ್ ಟೀವಿ!ʼ

ಒಂದು ಕಾಲದಲ್ಲಿ ಟಿವಿ ಎಂದರೆ ಕೇವಲ ಸುದ್ದಿ, ಮನರಂಜನಾ ಕಾರ್ಯಕ್ರಮಗಳನ್ನು ತೋರಿಸುವ ಡಬ್ಬವಾಗಿತ್ತು. ಕಾಲ ಕಳೆದಂತೆ ಮೂರ್ಖರ ಪೆಟ್ಟಿಗೆಯೂ ಆಯಿತು. ಆದರೀಗ ಇಂಟರ್ನೆಟ್ ಸಂಪರ್ಕ ಹೊಂದಿದ ಸ್ಮಾರ್ಟ್ ಟಿವಿಗಳು ಏಕಮುಖ ಸಾಧನಗಳಲ್ಲ (One-way Devices). ನಾವು ಟಿವಿ ನೋಡುತ್ತಿರುವಾಗ, ಟಿವಿ ಕೂಡ ನಮ್ಮನ್ನ ಮತ್ತು ನಮ್ಮ ಇಡೀ ಮನೆಯ ವಾತಾವರಣವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ.

image 2026 05 21T183451.680

1. ACR ತಂತ್ರಜ್ಞಾನವೆಂಬ ಮಾಯಾಜಾಲ: ಸ್ಮಾರ್ಟ್ ಟಿವಿಗಳಲ್ಲಿ ACR (Automatic Content Recognition) ಎಂಬ ಇನ್‌ಬಿಲ್ಟ್ ಸಾಫ್ಟ್‌ವೇರ್ ಇರುತ್ತದೆ. ಇದರ ಕೆಲಸವೇ ಪತ್ತೇದಾರಿಕೆ ಮಾಡುವುದು. ನೀವು ನೆಟ್‌ಫ್ಲಿಕ್ಸ್‌ನಲ್ಲಿ ಯಾವ ಸರಣಿ ನೋಡುತ್ತಿದ್ದೀರಿ?, ಸ್ಥಳೀಯ ಕೇಬಲ್ ಚಾನೆಲ್‌ನಲ್ಲಿ ಯಾವ ಸುದ್ದಿ ವೀಕ್ಷಿಸುತ್ತಿದ್ದೀರಿ?, ನೀವು ಯಾವ ಜಾಹೀರಾತನ್ನು ಪೂರ್ತಿ ನೋಡಿದ್ದೀರಿ ಮತ್ತು ಯಾವುದನ್ನು ತಕ್ಷಣ ಸ್ಕಿಪ್ ಮಾಡಿದ್ದೀರಿ?, ಗೇಮಿಂಗ್ ಕನ್ಸೋಲ್ ಬಳಸಿ ಎಷ್ಟು ಹೊತ್ತು ವಿಡಿಯೋ ಗೇಮ್ ಆಡಿದ್ದೀರಿ? ದಿನಕ್ಕೆ ಎಷ್ಟೊತ್ತು ಟಿವಿ ಮುಂದೆ ಕೂತಿರುತ್ತೀರಿ… ಹೀಗೆ ಪ್ರತಿಯೊಂದು ಸೆಕೆಂಡ್‌ನ ಮಾಹಿತಿಯನ್ನೂ ACR ಡಿಜಿಟಲ್ ಫಿಂಗರ್‌ಪ್ರಿಂಟ್ ರೂಪದಲ್ಲಿ ದಾಖಲಿಸಿ, ಟಿವಿ ತಯಾರಕ ಕಂಪನಿಗಳ ಸರ್ವರ್‌ಗೆ ರವಾನಿಸುತ್ತದೆ.

2. ಗೋಡೆಗೆ ಕಿವಿ ಇಲ್ಲ, ಆದರೆ ಟಿವಿಗೆ ಮೈಕ್ರೋಫೋನ್ ಅಂತೂ ಇದೆ: “ಅಲೆಕ್ಸಾ, ಈ ಸಿನಿಮಾ ಪ್ಲೇ ಮಾಡು” ಅಥವಾ “ಹಲೋ ಗೂಗಲ್, ವಾಲ್ಯೂಮ್ ಜಾಸ್ತಿ ಮಾಡು” ಎಂದು ರಿಮೋಟ್ ಮುಂದೆ Voice Command ನೀಡುವುದು ನಮಗೆ ಬೆಸ್ಟ್‌ ಟೆಕ್ನಾಲಜಿ ಎನಿಸಬಹುದು. ಆದರೆ, ಈ ವಾಯ್ಸ್ ಅಸಿಸ್ಟೆಂಟ್‌ಗಳು ಸಕ್ರಿಯವಾಗಿರಬೇಕಾದರೆ ನಿಮ್ಮ ರಿಮೋಟ್ ಅಥವಾ ಟಿವಿಯಲ್ಲಿನ ಮೈಕ್ರೋಫೋನ್ ಸದಾ ʼಆಲಿಸುವ’ (Listening Mode) ಸ್ಥಿತಿಯಲ್ಲಿರಬೇಕು. ನೀವು ಟಿವಿ ಮುಂದೆ ಕುಳಿತು ನಿಮ್ಮ ಸಂಗಾತಿಯೊಂದಿಗೆ ಆಡುವ ಆರ್ಥಿಕ ವ್ಯವಹಾರಗಳ ಮಾತುಕತೆ, ಮನೆಯ ಆಂತರಿಕ ವಿಷಯಗಳು ಅಥವಾ ನಿಮ್ಮ ಆರೋಗ್ಯದ ಸಮಸ್ಯೆಗಳ ಕುರಿತಾದ ಚರ್ಚೆಗಳೂ ಸಹ ಈ ಮೈಕ್ರೋಫೋನ್‌ಗಳ ಮೂಲಕ ಪರೋಕ್ಷವಾಗಿ ರೆಕಾರ್ಡ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈಗ ಆಗುತ್ತಲೂ ಇರಬಹುದು.

3. ಖಾಸಗಿ ಕ್ಷಣಗಳ ಮೇಲೆ ಕ್ಯಾಮೆರಾ ಕಣ್ಣು?: ಹಲವಾರು ಹೈ-ಎಂಡ್ ಸ್ಮಾರ್ಟ್ ಟಿವಿಗಳಲ್ಲಿ ವಿಡಿಯೋ ಕಾಲಿಂಗ್ ಅಥವಾ ಗೆಸ್ಚರ್ ಕಂಟ್ರೋಲ್ (ಹಾವಭಾವದ ಮೂಲಕ ಟಿವಿ ನಿಯಂತ್ರಣ) ಫೀಚರ್‌ಗಳಿಗಾಗಿ ಇನ್‌ಬಿಲ್ಟ್ ಕ್ಯಾಮೆರಾಗಳನ್ನು ನೀಡಲಾಗಿರುತ್ತದೆ. ಈ ಟಿವಿಗಳ ಆಪರೇಟಿಂಗ್ ಸಿಸ್ಟಮ್ ಹ್ಯಾಕ್ ಆದಲ್ಲಿ ಅಥವಾ ಅದರಲ್ಲಿ ಭದ್ರತಾ ಲೋಪಗಳೇನಾದರೂ (Security Bugs) ಇದ್ದಲ್ಲಿ ಹ್ಯಾಕ್‌ ಮಾಡುವ ಖದೀಮರು ನಿಮ್ಮನ್ನ ಕ್ಯಾರೇ ಎನ್ನದೆ ನಿಮ್ಮ ಲಿವಿಂಗ್ ರೂಮ್ ಅಥವಾ ಬೆಡ್‌ರೂಮ್‌ನ ದೃಶ್ಯಗಳನ್ನು ನೇರವಾಗಿ ಲೈವ್ ಸ್ಟ್ರೀಮ್ ಮಾಡಿಕೊಳ್ಳಬಲ್ಲರು.

ನಾಲ್ಕು ಚಕ್ರದ ʼಡೇಟಾ ದರೋಡೆಕೋರʼ

ನಿಮ್ಮ ಸ್ಮಾರ್ಟ್ ಟಿವಿ ಕೇವಲ ಮನೆಯ ನಾಲ್ಕು ಗೋಡೆಗಳ ಮಧ್ಯದ ಮಾಹಿತಿಯನ್ನು ಕದ್ದರೆ, ನಿಮ್ಮ ಸ್ಮಾರ್ಟ್ ಕಾರು ನೀವು ಎಲ್ಲೆಲ್ಲಿಗೆ ಓಡಾಡುತ್ತೀರಿ ಎನ್ನುವ ಇಡೀ ಚಿತ್ರಣವನ್ನೇ ಕದಿಯುತ್ತದೆ. ಜಾಗತಿಕ ತಂತ್ರಜ್ಞಾನ ಮತ್ತು ಗ್ರಾಹಕ ಹಕ್ಕುಗಳ ಸಂಸ್ಥೆಯಾದ ʼಮೊಜಿಲ್ಲಾ ಫೌಂಡೇಶನ್ʼ (Mozilla Foundation) ಇತ್ತೀಚೆಗೆ ಜಗತ್ತಿನ ಪ್ರಮುಖ 25 ಕಾರು ಬ್ರ್ಯಾಂಡ್‌ಗಳ ಮೇಲೆ ಸುದೀರ್ಘ ಸಂಶೋಧನೆ ನಡೆಸಿತು. ಆ ಆಘಾತಕಾರಿ ಸಂಶೋಧನಾ ವರದಿ ಪ್ರಕಾರ, “ಪ್ರಪಂಚದಲ್ಲೇ ಗ್ರಾಹಕರ ಗೌಪ್ಯತೆಯನ್ನು ಅತ್ಯಂತ ಭೀಕರವಾಗಿ ಮತ್ತು ಕೆಟ್ಟದಾಗಿ ಉಲ್ಲಂಘಿಸುವ ಸಾಧನಗಳೆಂದರೆ ಅದು ಆಧುನಿಕ ಸ್ಮಾರ್ಟ್ ಕಾರುಗಳು!”

image 2026 05 21T183608.584

ಇಂದಿನ ಕಾರುಗಳು ಇಂಟರ್ನೆಟ್‌ಗೆ ಸಂಪರ್ಕ ಹೊಂದಿದ ಸೂಪರ್ ಕಂಪ್ಯೂಟರ್‌ಗಳಂತೆ ಕೆಲಸ ಮಾಡುತ್ತವೆ. ಅವು ಕದಿಯುವ ನಮ್ಮ ಡೇಟಾಗೆ ಇತಿ ಮಿತಿಯೇ ಇಲ್ಲ.

1. ನಿಮ್ಮ ಚಾಲನಾ ಶೈಲಿ ಮತ್ತು ಸ್ಥಳದ ಮಾಹಿತಿ: ಕಾರಿನಲ್ಲಿರುವ ಜಿಪಿಎಸ್ (GPS) ಮತ್ತು ಸೆನ್ಸಾರ್‌ಗಳು ನಿಮ್ಮ ಪ್ರತಿಯೊಂದು ನಡವಳಿಕೆಯನ್ನೂ ಗಮನಿಸುತ್ತವೆ. ನೀವು ದಿನಾಲೂ ಯಾವ ಹಾದಿಯಲ್ಲಿ ಕಚೇರಿಗೆ ಹೋಗುತ್ತೀರಿ? ಯಾವ ಆಸ್ಪತ್ರೆಗೆ ಭೇಟಿ ನೀಡುತ್ತೀರಿ? ವೀಕೆಂಡ್‌ನಲ್ಲಿ ಯಾವ ಬಾರ್ ಅಥವಾ ಹೋಟೆಲ್‌ಗೆ ಹೋಗುತ್ತೀರಿ? ನಿಮ್ಮ ಕಾರಿನ ಸರಾಸರಿ ವೇಗ ಎಷ್ಟು? ನೀವು ಹಠಾತ್ ಬ್ರೇಕ್ (Harsh Braking) ಹಾಕುತ್ತೀರಾ? ಈ ಇಡೀ ಪ್ರೊಫೈಲ್ ಅನ್ನು ಕಾರ್ ಕಂಪನಿಗಳು ಸಂಗ್ರಹಿಸುತ್ತವೆ.

2. ನಿಮ್ಮ ಮೊಬೈಲ್‌ನ ಸಂಪೂರ್ಣ ಡೇಟಾ ಸ್ವಾಹಾ!:‌ ನಾವು ಕಾರು ಹತ್ತಿದ ತಕ್ಷಣ ಆಪಲ್ ಕಾರ್‌ಪ್ಲೇ (Apple CarPlay) ಅಥವಾ ಆಂಡ್ರಾಯ್ಡ್ ಆಟೋ (Android Auto) ಮೂಲಕ ನಮ್ಮ ಸ್ಮಾರ್ಟ್‌ಫೋನ್ ಅನ್ನು ಕಾರಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗೆ ಕನೆಕ್ಟ್ ಮಾಡುತ್ತೇವೆ ಅಲ್ಲವೇ? ಹೀಗೆ ಕನೆಕ್ಟ್ ಮಾಡಿದ ಕೆಲವೇ ಸೆಕೆಂಡುಗಳಲ್ಲಿ ಕಾರು ನಿಮ್ಮ ಫೋನಿನಲ್ಲಿರುವ:

  • ಇಡೀ ಕಾಂಟ್ಯಾಕ್ಟ್ ಲಿಸ್ಟ್
  • ಕಾಲ್ ಹಿಸ್ಟರಿ
  • ವೈಯಕ್ತಿಕ ಎಸ್‌ಎಮ್‌ಎಸ್‌ಗಳು ಮತ್ತು ವಾಟ್ಸಾಪ್ ಸಂದೇಶಗಳು
  • ನಿಮ್ಮ ಸರ್ಚ್ ಹಿಸ್ಟರಿಯನ್ನು ತನ್ನ ಸರ್ವರ್‌ಗೆ ಡೌನ್‌ಲೋಡ್ ಮಾಡಿಕೊಳ್ಳುತ್ತದೆ.

3. ಬಯೋಮೆಟ್ರಿಕ್ ಮತ್ತು ದೈಹಿಕ ಮಾಹಿತಿ: ಕೆಲವು ಅತ್ಯಾಧುನಿಕ ಕಾರುಗಳು ಚಾಲಕನ ಮುಖದ ಹಾವಭಾವಗಳನ್ನು ಗಮನಿಸಿ ಆತನಿಗೆ ಆಕಳಿಕೆ ಬರುತ್ತಿದೆಯೇ ಅಥವಾ ತೂಕಡಿಸುತ್ತಿದ್ದಾನೆಯೇ ಎಂದು ಕ್ಷಣಾರ್ಧದಲ್ಲಿ ಪತ್ತೆಹಚ್ಚುತ್ತವೆ. ಸಿಗ್ನಲ್‌ ಕೊಟ್ಟು ಚಾಲಕನನ್ನು ಎಚ್ಚರಿಸುತ್ತವೆ. ಕೇಳಲು ಇದು ಸುರಕ್ಷತಾ ಫೀಚರ್ ಎನಿಸಿದರೂ, ನಿಮ್ಮ ಮುಖದ ಸ್ಕ್ಯಾನ್, ಧ್ವನಿಯ ಗುರುತು ಮತ್ತು ಸೀಟಿನ ತೂಕದ ಸೆನ್ಸಾರ್‌ಗಳ ಮೂಲಕ ನಿಮ್ಮ ತೂಕ ಹಾಗೂ ದೈಹಿಕ ಲಕ್ಷಣಗಳ ಡೇಟಾವನ್ನು ಸಹ ಕಂಪನಿಗಳಿಗೆ ಮಾರಿಬಿಡುತ್ತವೆ.

ಈ ಡೇಟಾವನ್ನು ಏನು ಮಾಡಲಾಗುತ್ತದೆ? ಇದರ ಹಿಂದಿನ ದಂಧೆ ಎಂತಹುದು ಗೊತ್ತೇ?

ನಿಮ್ಮ ಸ್ಮಾರ್ಟ್ ಟಿವಿ ಮತ್ತು ಕಾರು ಕದ್ದ ಈ ಕೋಟ್ಯಂತರ ರೂಪಾಯಿ ಮೌಲ್ಯದ ಡೇಟಾ ನೇರವಾಗಿ ʼಡೇಟಾ ಬ್ರೋಕರ್ಸ್ʼ ಮತ್ತು ದೊಡ್ಡ ಕಾರ್ಪೊರೇಟ್ ಕಂಪನಿಗಳ ಕೈ ಸೇರುತ್ತದೆ. ಇದರಿಂದ ಎರಡು ದೊಡ್ಡ ಅಪಾಯಗಳಿವೆ:

1. ನಿಮ್ಮ ಮೆದುಳನ್ನು ನಿಯಂತ್ರಿಸುವ ʼಟಾರ್ಗೆಟೆಡ್ ಅಡ್ವರ್ಟೈಸಿಂಗ್ʼ: ನೀವು ಟಿವಿಯಲ್ಲಿ ಯಾವುದೋ ಒಂದು ಹೊಸ ಸ್ಮಾರ್ಟ್‌ಫೋನ್ ಅಥವಾ ಇನ್ವೆಸ್ಟ್‌ಮೆಂಟ್ ಜಾಹೀರಾತನ್ನು ಆಸಕ್ತಿಯಿಂದ ನೋಡಿದ್ದೀರಿ ಎಂದುಕೊಳ್ಳಿ. ಆ ಡೇಟಾ ತಕ್ಷಣವೇ ಫೇಸ್‌ಬುಕ್, ಗೂಗಲ್ ಅಥವಾ ಇನ್‌ಸ್ಟಾಗ್ರಾಮ್‌ಗೆ ಮಾರಾಟವಾಗುತ್ತದೆ. ನೀವು ಮರುದಿನ ಮೊಬೈಲ್ ಆನ್ ಮಾಡಿದಾಗ ಅದೇ ಸ್ಮಾರ್ಟ್‌ಫೋನ್‌ನ ಜಾಹೀರಾತುಗಳು ನಿಮ್ಮ ಸ್ಕ್ರೀನ್ ಮೇಲೆ ಪ್ರತ್ಯಕ್ಷವಾಗುತ್ತವೆ. ಅಂದರೆ, ನಿಮ್ಮ ಯೋಚನಾ ಲಹರಿಯನ್ನೇ ಈ ಅಗೋಚರ ಡಿಜಿಟಲ್ ಕಂಪನಿಗಳು ಮ್ಯಾನಿಪುಲೇಟ್ ಮಾಡುತ್ತವೆ.

ಇದನ್ನೂ ಓದಿ: ಪ್ರಶ್ನಿಸುವವರ ಮೇಲೆ ಡಿಜಿಟಲ್ ಸೆನ್ಸಾರ್‌ಶಿಪ್: ಸಿಂಗರ್‌ ರಿಹಾನಾರಿಂದ ಜರ್ನಲಿಸ್ಟ್‌ ಲಿಂಗ್‌ವರೆಗೆ… 

image 2026 05 21T183856.272

2. ಇನ್ಶೂರೆನ್ಸ್ ಕಂಪನಿಗಳ ಬಲೆ: ಇದು ಅತ್ಯಂತ ಗಂಭೀರವಾದ ಆರ್ಥಿಕ ಹೊಡೆತ. ಕಾರು ಕಂಪನಿಗಳು ನಿಮ್ಮ ಡ್ರೈವಿಂಗ್ ಹ್ಯಾಬಿಟ್ಸ್ (ವೇಗ, ಬ್ರೇಕ್ ಹಾಕುವ ಶೈಲಿ) ಡೇಟಾವನ್ನು ಇನ್ಶೂರೆನ್ಸ್ ಕಂಪನಿಗಳೊಂದಿಗೆ ಹಂಚಿಕೊಳ್ಳುತ್ತವೆ. ವಿಮಾ ಕಂಪನಿಗಳು ನಿಮ್ಮ ಕಾರಿನ ಡೇಟಾವನ್ನು ಪರಿಶೀಲಿಸಿ, “ನೀವು ರಿಸ್ಕಿ ಡ್ರೈವರ್, ನಿಮ್ಮ ಕಾರಿನ ವೇಗ ಹೆಚ್ಚಿರುತ್ತದೆ” ಎಂಬ ಕಾರಣ ನೀಡಿ ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಬಿಡುತ್ತವೆ! ನಿಮಗೇ ಗೊತ್ತಿಲ್ಲದೆ ನಿಮ್ಮ ಜೇಬಿಗೆ ಕತ್ತರಿ ಬೀಳುತ್ತದೆ.

ಹಾಗಾದರೆ ಈ ಡಿಜಿಟಲ್‌ ಗೂಢಚರ್ಯೆಯಿಂದ ರಕ್ಷಿಸಿಕೊಳ್ಳುವುದು ಹೇಗೆ?

ನಾವು ತಂತ್ರಜ್ಞಾನ ಯುಗದಲ್ಲಿದ್ದೇವೆ, ಹಾಗಾಗಿ ಇವುಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಅಸಾಧ್ಯ. ಆದರೆ ಸ್ಮಾರ್ಟ್ ಆಗಿ ಕೆಲವು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವ ಮೂಲಕ ನಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಬಹುದು.

ಸಾಧನಮಾಡಬೇಕಾದ ಸುರಕ್ಷತಾ ಕ್ರಮಗಳು
ಸ್ಮಾರ್ಟ್ ಟೀವಿ• ಸೆಟ್ಟಿಂಗ್ಸ್‌ಗೆ ಹೋಗಿ ACR/ Viewing Data/ Privacy Policy ಆಯ್ಕೆಯನ್ನು ಹುಡುಕಿ ಅದನ್ನು Turn Off ಮಾಡಿ.

• ಟಿವಿಗೆ ಅನಗತ್ಯವಾಗಿ ನಿಮ್ಮ ಪರ್ಸನಲ್ ಇ-ಮೇಲ್ ಐಡಿ ನೀಡಬೇಡಿ.

• ಕ್ಯಾಮೆರಾ ಇದ್ದರೆ, ಅದರ ಮೇಲೆ ಒಂದು ಸಣ್ಣ ಕಪ್ಪು ಟೇಪ್ ಅಥವಾ ವೆಬ್‌ಕ್ಯಾಮ್ ಕವರ್ ಹಾಕಿ ಮುಚ್ಚಿ.
ಸ್ಮಾರ್ಟ್ ಕಾರುಗಳು• ಬ್ಲೂಟೂತ್ ಮೂಲಕ ಫೋನ್ ಕನೆಕ್ಟ್ ಮಾಡುವಾಗ ʼSync Contactsʼ ಮತ್ತು ʼAllow Messagesʼ ಪರ್ಮಿಷನ್ ಅನ್ನು ನಿರಾಕರಿಸಿ (Deny).

• ಕಾರಿನ ಆಪ್‌ಗಳಲ್ಲಿ ಪ್ರೈವೆಸಿ ಸೆಟ್ಟಿಂಗ್ಸ್ ಪರಿಶೀಲಿಸಿ, ಡೇಟಾ ಶೇರಿಂಗ್ ಆಫ್ ಮಾಡಿ.

• ಕಾರಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ನಿಯಮಿತವಾಗಿ ರಿಸೆಟ್ ಮಾಡ್ತಿರಿ.
ಇಂಟರ್ನೆಟ್• ಮನೆಯ ವೈಫೈ (Wi-Fi) ರೂಟರ್‌ಗೆ ಸ್ಟ್ರಾಂಗ್ ಪಾಸ್‌ವರ್ಡ್ ಇಡಿ. ಇದರಿಂದ ಸ್ಮಾರ್ಟ್ ಸಾಧನಗಳು ಸುಲಭವಾಗಿ ಹ್ಯಾಕ್ ಆಗುವುದನ್ನು ತಡೆಯಬಹುದು.

ಸಿಲಿಕಾನ್ ವ್ಯಾಲಿಯಲ್ಲಿ ಒಂದು ಪ್ರಸಿದ್ಧವಾದ ಮಾತಿದೆ.. “ಯಾವುದೇ ಒಂದು ಆಪ್ ಅಥವಾ ಡಿಜಿಟಲ್ ಸೌಕರ್ಯ ನಿಮಗೆ ಉಚಿತವಾಗಿ ಸಿಗುತ್ತಿದೆ ಎಂದರೆ, ಅಲ್ಲಿ ನೀವು ಗ್ರಾಹಕರಲ್ಲ; ನೀವೇ ಸರಕು”.

ಇದನ್ನೂ ಓದಿ: SIR | ಮತಪಟ್ಟಿಯಿಂದ ಕೋಟ್ಯಂತರ ಜನರ ಉಚ್ಚಾಟನೆ; ಭಾರತದಲ್ಲಿ ಹಕ್ಕುವಂಚಿತರ ಹೊಸ ವರ್ಗ ಸೃಷ್ಟಿ?

ತಂತ್ರಜ್ಞಾನವು ನಮ್ಮ ಸೌಕರ್ಯಕ್ಕಾಗಿ ಇರಬೇಕೇ ಹೊರತು ನಮ್ಮನ್ನು ಗುಲಾಮರನ್ನಾಗಿ ಮಾಡಲು ಅಥವಾ ನಮ್ಮ ಖಾಸಗಿ ಬದುಕನ್ನು ರಸ್ತೆಯಲ್ಲಿ ಹರಾಜು ಹಾಕಲು ಅಲ್ಲ. ಮುಂದಿನ ಬಾರಿ ನೀವು ನಿಮ್ಮ ಸ್ಮಾರ್ಟ್ ಟಿವಿಯ ಮುಂದೆ ಕುಳಿತುಕೊಳ್ಳುವಾಗ ಅಥವಾ ನಿಮ್ಮ ಐಷಾರಾಮಿ ಸ್ಮಾರ್ಟ್ ಕಾರಿನ ಎಕ್ಸಿಲರೇಟರ್ ಒತ್ತುವಾಗ, ಯಾರೋ ನಿಮ್ಮ ಪ್ರತಿಯೊಂದು ಚಲನವಲನವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಿ. ಡಿಜಿಟಲ್ ಜಗತ್ತಿನಲ್ಲಿ ಅತಿಯಾದ ಮುಗ್ಧತೆ ಅಪಾಯಕಾರಿ, ಇಲ್ಲಿ ಜಾಗರೂಕತೆಯೇ ಜೀವರಕ್ಷೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಉದ್ಯೋಗ ಖಾತ್ರಿ ಪೂರ್ಣ ಕೂಲಿ ಪಾವತಿಗೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿರುವ ಕೂಲಿಕಾರರಿಗೆ ಅವರ ಶ್ರಮಕ್ಕೆ ತಕ್ಕಂತೆ...

ಬೀದರ್‌ | ಆಟವಾಡುತ್ತಿದ್ದ ಸಹೋದರರ ಮೇಲೆ ಬೀದಿ ನಾಯಿ ದಾಳಿ, ಬ್ರಿಮ್ಸ್‌ಗೆ ದಾಖಲು

ಮನೆಯ ಮುಂದೆ ಆಟವಾಡುತ್ತಿದ್ದ ಸಹೋದರರ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿ,...