8 ತಿಂಗಳಲ್ಲಿ ಯುಪಿ ಚುನಾವಣೆ ಎದುರಾಗಲಿದೆ. ಈ ಹೊತ್ತಿನಲ್ಲಿ ಕಾಂಗ್ರೆಸ್ ಹೊಸ ರಾಜಕೀಯ ತಂತ್ರಗಳನ್ನು ರೂಪಿಸುತ್ತಿದೆ. ರಾಜೇಂದ್ರ ಪಾಲ್ ಗೌತಮ್ ಅವರಿಗೆ ಎಐಸಿಸಿ ಉಸ್ತುವಾರಿ ವಹಿಸಿರುವುದರ ಹಿಂದೆ ಜಾತಿ ಸಮೀಕರಣಗಳ ಲೆಕ್ಕಾಚಾರವಂತೂ ಇದೆ.
“ಮೋದಿಯವರೇ ನೀವು, ಬಹಳ ದುರ್ಬಲ ಪ್ರಧಾನಿ. ಈ ಜಾತಿವಾದಿ ಕೀಳು ಕೃತ್ಯಗಳನ್ನು ನಿಲ್ಲಿಸಿ. ಇಲ್ಲದಿದ್ದರೆ ರಾಜೀನಾಮೆ ನೀಡಿ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ನೀವು ಎಷ್ಟು ದುರ್ಬಲ ಪ್ರಧಾನಿ ಎಂದರೆ, ಯೋಗಿ ಅವರನ್ನು ಕುರ್ಚಿಯಿಂದ ಕೆಳಗಿಳಿಸಲು ನಿಮಗೆ ಸಾಧ್ಯವಾಗುತ್ತಿಲ್ಲ. ನೀವು ಚಿಂತಿಸಬೇಡಿ, ನನ್ನ ಬಹುಜನ ಸಮಾಜ ಉತ್ತರ ನೀಡುತ್ತದೆ…”- ದಲಿತ ವ್ಯಕ್ತಿಯೊಬ್ಬರ ಮೇಲೆ ಮೇಲ್ಜಾತಿ ಜನರು ದಾಳಿ ನಡೆಸುತ್ತಿರುವ ವಿಡಿಯೊವನ್ನು 2022ರ ಅಕ್ಟೋಬರ್ 10ರಂದು ಹಂಚಿಕೊಂಡು ಹೀಗೆ ಪ್ರತಿಕ್ರಿಯೆ ನೀಡಿದ್ದು ಬಹುದೊಡ್ಡ ಅಂಬೇಡ್ಕರ್ ವಾದಿ ಹೋರಾಟಗಾರ ರಾಜೇಂದ್ರ ಪಾಲ್ ಗೌತಮ್.
ಮ್ಯಾನವರ್ ಕಾನ್ಶಿರಾಮ್ ಅವರ ಗರಡಿಯಲ್ಲಿ ಬೆಳೆದ ರಾಜೇಂದ್ರ ಪಾಲ್ ಗೌತಮ್, ಆರಂಭದಲ್ಲಿ ಬಿಎಸ್‌ಪಿ ಮೂಲಕ ರಾಜಕೀಯ ಆರಂಭಿಸಿದರೂ, 2014ರಲ್ಲಿ ಆಮ್ ಆದ್ಮಿ ಪಾರ್ಟಿ ಸೇರುತ್ತಾರೆ. ಕೇಜ್ರಿವಾಲ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿಯೂ ಕೆಲಸ ಮಾಡುತ್ತಾರೆ. ದಲಿತ ಚಳವಳಿಗಳೊಂದಿಗೆ ನಿರಂತರ ಒಡನಾಟದಲ್ಲಿರುವ ಅವರು ಬೌದ್ಧಧಮ್ಮದ ಪ್ರಬಲ ಪ್ರತಿಪಾದಕರು ಹೌದೂ; ಬೌದ್ಧಧಮ್ಮದ ಅನುಯಾಯಿಗಳ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಅದರ ಸುತ್ತ ಬಿಜೆಪಿ ಎಬ್ಬಿಸಿದ ವಿವಾದದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ದುರಂತ ದಲಿತ ನಾಯಕರೂ ಹೌದು. ಎಎಪಿ ತೊರೆದು 2024ರಲ್ಲಿ ಕಾಂಗ್ರೆಸ್ ಸೇರಿದ ರಾಜೇಂದ್ರ ಅವರು ಎಐಸಿಸಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರೂ ಆದರು. ಈಗ ಅವರನ್ನು ಮುಂದಿನ ಯುಪಿ ವಿಧಾನಸಭಾ ಚುನಾವಣೆಯ ಪ್ರಮುಖ ಅಸ್ತ್ರವನ್ನಾಗಿ ಪ್ರಯೋಗಿಸಲು ಕಾಂಗ್ರೆಸ್ ಯೋಚಿಸಿರುವುದು ಸ್ಪಷ್ಟವಾಗಿದೆ. ಯುಪಿಯ ಎಐಸಿಸಿ ಉಸ್ತುವಾರಿಯನ್ನಾಗಿ ರಾಜೇಂದ್ರ ಅವರನ್ನು ನೇಮಕ ಮಾಡಿರುವುದರ ಹಿಂದೆ ಕಾಂಗ್ರೆಸ್ ದೊಡ್ಡ ರಾಜಕೀಯ ಲೆಕ್ಕಾಚಾರಗಳನ್ನೇ ಹಾಕಿದಂತೆ ಕಾಣುತ್ತಿದೆ.
ಮುಂದಿನ ವರ್ಷ, ಅಂದರೆ ಇನ್ನೆಂಟು ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣೆ ಎದುರಾಗಲಿದೆ. ಈ ಹೊತ್ತಿನಲ್ಲಿ ರಾಜೇಂದ್ರ ಪಾಲ್ ಗೌತಮ್ ಅವರು ಉಸ್ತುವಾರಿಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈವರೆಗೆ ಯುಪಿಯ ಉಸ್ತುವಾರಿ ಹೊತ್ತಿದ್ದ, ಬ್ರಾಹ್ಮಣ ಸಮುದಾಯದ ಅವಿನಾಶ್ ಪಾಂಡೆ ಅವರ ಜಾಗಕ್ಕೆ ದಲಿತ ನಾಯಕನನ್ನು ಕರೆತಂದಿರುವುದು ಗಮನಾರ್ಹ.
ಇತ್ತೀಚೆಗೆ ಗೌತಮ್ ಅವರು ಪಕ್ಷದ ಅನುಮತಿಯಿಲ್ಲದೆ, ಯಾವುದೇ ಪೂರ್ವನಿಯೋಜಿತ ಭೇಟಿಯಿಲ್ಲದೆ ಮಾಯಾವತಿಯವರ ಮನೆಗೆ ಕೆಲವು ನಾಯಕರೊಂದಿಗೆ ಭೇಟಿ ನೀಡಿದ್ದರು. ಈ ಘಟನೆಯು ಪಕ್ಷದಲ್ಲಿ ಅಸಮಾಧಾನ ಮೂಡಿಸಿತ್ತು. ಜೊತೆಗೆ ಕಾರಣ ಕೇಳಿ ‘ಶೋ-ಕಾಸ್ ನೋಟಿಸ್’ ಕೂಡ ನೀಡಲಾಗಿತ್ತು. ಇದಾದ ಎರಡೇ ತಿಂಗಳಲ್ಲಿಯೇ ಗೌತಮ್ ಅವರಿಗೆ ಉಸ್ತುವಾರಿ ಹುದ್ದೆ ನೀಡಿರುವುದನ್ನು ನೋಡಿದರೆ, ರಾಜೇಂದ್ರ ಅವರ ಶಕ್ತಿ ಅರ್ಥವಾಗುತ್ತದೆ. ತನ್ನ ಮಿತ್ರಪಕ್ಷಗಳ ಜೊತೆ ಸಮನ್ವಯ ಸಾಧಿಸುವ ಜೊತೆಗೆ, ‘ಬಹುಜನ’ ಸಮುದಾಯಗಳನ್ನು ತಲುಪಬೇಕಾದರೆ ಕಾಂಗ್ರೆಸ್‌ಗೆ ಈಗ ದಲಿತ ಮುಖ ಅನಿವಾರ್ಯ.
“ದಲಿತ ನಾಯಕರು ಮತ್ತು ಸಂಘಟನೆಗಳೊಂದಿಗೆ ನಿಕಟ ಸಂಬಂಧ ಹೊಂದಿರುವ 58 ವರ್ಷದ ರಾಜೇಂದ್ರ ಅವರು, ಕಾಂಗ್ರೆಸ್ ಪಕ್ಷದ ಮುಂದಿನ ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಸಮಾಜವಾದಿ ಪಕ್ಷದೊಂದಿಗಿನ ಸೀಟು ಹಂಚಿಕೆ ಮಾತುಕತೆಗಳಲ್ಲಿ ಕಾಂಗ್ರೆಸ್ಗೆ ಹಿನ್ನಡೆಯಾಗದಂತೆ ನೋಡಿಕೊಳ್ಳುವುದು ಅವರ ಮುಂದಿರುವ ಮೊದಲ ಸವಾಲು” ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ರಾಹುಲ್ ಗಾಂಧಿಯವರು ಮುನ್ನಡೆಸುತ್ತಿರುವ ‘ಸಂವಿಧಾನ ಉಳಿಸಿ’ ಅಭಿಯಾನವನ್ನು ರಾಜೇಂದ್ರ ಅವರು ಬಲಪಡಿಸುವುದಂತೂ ಖಚಿತ. ದೇಶದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶವು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಆಘಾತ ನೀಡಿತ್ತು. ಬಿಜೆಪಿ ಅಧಿಕಾರಕ್ಕೆ ಬಂದರೆ, ಸಂವಿಧಾನವನ್ನು ಬದಲಿಸುತ್ತದೆ ಎಂಬ ಭಯ ಹಾಗೂ ರಾಹುಲ್ ಗಾಂಧಿಯವರು ನಡೆಸಿದ ಭಾರತ್ ಜೋಡೋ ಯಾತ್ರೆಯ ವಿಶಿಷ್ಟ ಪ್ರಯೋಗವು ಚುನಾವಣೆಯ ಮೇಲೆ ಪರಿಣಾಮ ಬೀರಿದವು. ಕಾಂಗ್ರೆಸ್ನ ಪ್ರಮುಖ ಮಿತ್ರಪಕ್ಷ ಎಸ್‌ಪಿ ಮತ್ತು ಅದರ ನಾಯಕ ಅಖಿಲೇಶ್ ಯಾದವ್ ಅವರು ‘ಪಿಡಿಎ’ ಸೂತ್ರವನ್ನು (ಪಿಚಡಿ/ಹಿಂದುಳಿದ, ದಲಿತ, ಅಲ್ಪಸಂಖ್ಯಾತ’ ಸೂತ್ರವನ್ನು ಸಶಕ್ತವಾಗಿ ಪ್ರಯೋಗಿಸಿದರು.
ಸಾಮಾಜಿಕ ಎಂಜಿನಿಯರಿಂಗ್‌ನಲ್ಲಿ ಯಶಸ್ವಿಯಾದ ಕಾರಣ ಎಸ್‌ಪಿ ಮತ್ತು ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಉತ್ತಮ ಪ್ರದರ್ಶನ ನೀಡಿದವು. ಒಟ್ಟು 37 ಲೋಕಸಭಾ ಸ್ಥಾನಗಳನ್ನು ಎಸ್‌ಪಿ ಗೆದ್ದರೆ, ಒಟ್ಟು 6 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿತು. ಮೈತ್ರಿಕೂಟವು ಒಟ್ಟಾರೆಯಾಗಿ 43 ಸ್ಥಾನಗಳನ್ನು ಗಳಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿಗೆ ಏಟು ನೀಡಿತು. ಬಿಜೆಪಿ 33 ಸ್ಥಾನಗಳಿಗೆ ಸೀಮಿತವಾಯಿತು. ಅಹಿಂದ ಮತಗಳು ಅತ್ತಿತ್ತ ಚದುರಿ ಹೋಗದಂತೆ ನೋಡಿಕೊಳ್ಳಲಾಯಿತು. ಇನ್ನೊಂದೆಡೆ ಉತ್ತರ ಪ್ರದೇಶದಲ್ಲಿ ದಲಿತ ಮತಗಳ ಮೇಲೆ ಮಾಯಾವತಿಯವರ ಪ್ರಭಾವ ಕಡಿಮೆಯಾಯಿತು. ಬಿಎಸ್‌ಪಿ ದೊಡ್ಡ ಹಿನ್ನಡೆಯನ್ನು ಅನುಭವಿಸಿತು. 2024ರ ಆ ಮ್ಯಾಜಿಕ್ ಮುಂದುವರಿಯಬೇಕಾದರೆ ಕಾಂಗ್ರೆಸ್ ತನ್ನ ಚುನಾವಣಾ ಸೂತ್ರಗಳನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಲೇಬೇಕು. ಹೀಗಾಗಿ ಪ್ರಬಲ ದಲಿತ ನಾಯಕತ್ವವನ್ನು ಉಸ್ತುವಾರಿ ಮಾಡುವುದರಿಂದ ದಲಿತ ಮತಗಳು ಮತ್ತೆ ಹರಿದುಬರಬಹುದೆಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದ್ದಂತೆ ಕಾಣುತ್ತಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜಾತಿ ಗಣತಿ ಮತ್ತು ‘ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ’ ಎಂಬ ತತ್ವಗಳನ್ನು ನಿರಂತರವಾಗಿ ಮುಂದಿಡುತ್ತಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಅಜಯ್ ರಾಯ್ ಅವರು ಪ್ರಭಾವಿ ಭೂಮಿಹಾರ್ ಸಮುದಾಯಕ್ಕೆ ಸೇರಿದವರು. ಈ ಹಿಂದೆ ಉಸ್ತುವಾರಿಯಾಗಿದ್ದ ಅವಿನಾಶ್ ಪಾಂಡೆ ಬ್ರಾಹ್ಮಣರಾಗಿದ್ದರು. ಪಕ್ಷದ ರಾಜ್ಯ ಘಟಕ ಮತ್ತು ಎಐಸಿಸಿ ಉಸ್ತುವಾರಿಗಳೆರಡನ್ನೂ ಪ್ರಬಲ ಜಾತಿಗಳ ನಾಯಕರೇ ವಹಿಸಿದ್ದು ರಾಹುಲ್ ಗಾಂಧಿಯವರ ಘೋಷಿತ ನಿಲುವಿಗೆ ವಿರುದ್ಧವಾಗಿತ್ತು. ಈಗ ಆ ತಪ್ಪನ್ನು ಬದಲಿಸಿಕೊಳ್ಳುವ ಪ್ರಯತ್ನದಲ್ಲಿ ಕಾಂಗ್ರೆಸ್ ಇರುವಂತೆ ಕಾಣುತ್ತಿದೆ. 2027ರ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಕಾಂಗ್ರೆಸ್ ಪಕ್ಷವು ದಲಿತ-ಒಬಿಸಿ ಮತಬ್ಯಾಂಕ್‌ಗಳನ್ನು ಆಕರ್ಷಿಸಲು ಹೊಸ ಸೂತ್ರಕ್ಕೆ ಮಾರುಹೋಗಿದೆ. ಅಜಯ್ ರಾಯ್ ಅವರ ನಾಯಕತ್ವಕ್ಕೆ ಪೂರಕವಾಗಿ ಅಥವಾ ಸಮತೋಲನ ಕಾಯ್ದುಕೊಳ್ಳಲು ಉಸ್ತುವಾರಿ ಬದಲಾವಣೆ ಮಾಡಲಾಗಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಡುತ್ತಾರೆ.
ಪ್ರಖರ ಅಂಬೇಡ್ಕರ್‌ವಾದಿ ರಾಜೇಂದ್ರ ಗೌತಮ್
ರಾಜೇಂದ್ರ ಪಾಲ್ ಗೌತಮ್ ಅವರು ಜನಿಸಿದ್ದು ದೆಹಲಿಯಲ್ಲಿ. ಪಡೆದದ್ದು- ದೆಹಲಿ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿ. ವಕೀಲಿ ವೃತ್ತಿಯನ್ನೂ ಮಾಡಿದ್ದಾರೆ. 2014ರಲ್ಲಿ ಇವರು ಆಮ್ ಆದ್ಮಿ ಪಕ್ಷದ ಸದಸ್ಯರಾಗುವ ಹೊತ್ತಿಗೆ ಬಹುಜನ ಚಳವಳಿಯಲ್ಲಿ ಪಳಗಿದ್ದರು. ದೆಹಲಿಯ ಆರನೇ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದರು. 2015ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಕರಮ್ವೀರ್ ಅವರನ್ನು 48,821 ಮತಗಳ ಅಂತರದಿಂದ ಸೋಲಿಸಿದ್ದು ಗಮನಾರ್ಹ. 2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮರು ಆಯ್ಕೆಯಾಗಿದ್ದ ಇವರು, 2015ರ ಫೆಬ್ರವರಿ 14ರಿಂದ 2022ರ ಅಕ್ಟೋಬರ್ 8 ವರೆಗೆ ಕೇಜ್ರಿವಾಲ್ ಸಂಪುಟದಲ್ಲಿ ಸಚಿವರಾಗಿದ್ದರು. ಸಮಾಜ ಕಲ್ಯಾಣ ಇಲಾಖೆ, ಸಹಕಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ನಿಭಾಯಿಸಿದ್ದರು.
ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಸಂದರ್ಭದಲ್ಲಿ ‘ಜೈ ಭೀಮ್ ಮುಖ್ಯಮಂತ್ರಿ ಪ್ರತಿಭಾ ವಿಕಾಸ್ ಯೋಜನೆ’ಯನ್ನು ಪ್ರಾರಂಭಿಸಿ ಜನಮನ್ನಣೆ ಗಳಿಸಿದರು. ಅರವಿಂದ್ ಕೇಜ್ರಿವಾಲ್ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳಲ್ಲಿ ಇದೂ ಒಂದಾಗಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳು ಐಐಟಿ ಜೆಇಇ (IIT JEE), ನೀಟ್ (NEET) ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸ್ ಮಾಡುವಂತೆ ಉಚಿತ ತರಬೇತಿಯನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿತ್ತು. ಈ ಕಾರ್ಯಕ್ರಮ ಪ್ರಾರಂಭವಾದಾಗ ಸುಮಾರು 4,900 ವಿದ್ಯಾರ್ಥಿಗಳು ಉಚಿತ ತರಬೇತಿ ತರಗತಿಗಳಿಗೆ ದಾಖಲಾಗಿದ್ದರು. 2022ರಲ್ಲಿ ಈ ಯೋಜನೆಯಡಿ ಸುಮಾರು 15,000 ವಿದ್ಯಾರ್ಥಿಗಳು ದಾಖಲಾಗಿದ್ದರು.
ಬಡವರ ಮಕ್ಕಳು ವ್ಯಸನಗಳಿಗೆ ಬಲಿಯಾಗಬಾರದೆಂಬುದು ಅವರ ಬಹುದೊಡ್ಡ ಕಾಳಜಿ. ಅದಕ್ಕಾಗಿ ವ್ಯಸನಮುಕ್ತ ಅಭಿಯಾನಗಳನ್ನು ಕಾಲಕಾಲಕ್ಕೆ ನಡೆಸುತ್ತಾ ಬಂದಿದ್ದಾರೆ. ದಲಿತರ ಉನ್ನತಿ ಮತ್ತು ಹಕ್ಕುಗಳಿಗಾಗಿ ಅವಿರತವಾಗಿ ದನಿ ಎತ್ತುತ್ತಿದ್ದಾರೆ. 2017ರಲ್ಲಿ ಸಮತಾ ಸೈನಿಕ ದಳದ ಡಾ. ಅಂಬೇಡ್ಕರ್ ಪ್ರಶಸ್ತಿಗೆ ಭಾಜರಾಗಿರುವ ಇವರು, ‘ಪರಿವರ್ತನ್’ ಎಂಬ ಸರ್ಕಾರೇತರ ಸಂಸ್ಥೆಯನ್ನು ನಡೆಸುತ್ತಿದ್ದರು. 2022ರ ವೇಳೆಗೆ ‘ಮಿಷನ್ ಜೈ ಭೀಮ್’ ಎಂಬ ಸಂಸ್ಥೆಯನ್ನು ಕಟ್ಟಿ ಮುನ್ನಡೆಸಿದರು.
ಈ ಲೇಖನ ಓದಿದ್ದೀರಾ?: ರಾಮ ಮಂದಿರ ದೇಣಿಗೆ ದಗಾ: ಬಿಜೆಪಿಯ ಅವನತಿ ಆರಂಭ
ರಾಜೇಂದ್ರ ಪಾಲ್ ಗೌತಮ್ ಅವರು 2024ರ ಸೆಪ್ಟೆಂಬರ್ 6ರಂದು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಬರುವ ವೇಳೆಗೆ ರಾಜಕೀಯ ದಾಳಿಗಳಿಗೆ ತುತ್ತಾಗಿದ್ದರು. 2022ರ ಅಕ್ಟೋಬರ್ 5ರಂದು ಬೌದ್ಧ ಸೊಸೈಟಿ ಆಫ್ ಇಂಡಿಯಾ ಮತ್ತು ಮಿಷನ್ ಜೈ ಭೀಮ್ ಜಂಟಿಯಾಗಿ ದೆಹಲಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದವು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಜೇಂದ್ರ ಅವರು “ಬೌದ್ಧ ಧರ್ಮವನ್ನು ಸ್ವೀಕರಿಸುವುದಾಗಿ ಮತ್ತು ಭಾರತವನ್ನು ಜಾತಿವಾದ ಹಾಗೂ ಅಸ್ಪೃಶ್ಯತೆಯಿಂದ ಮುಕ್ತಗೊಳಿಸುವುದಾಗಿ 10,000ಕ್ಕೂ ಹೆಚ್ಚು ಜನರು ಪ್ರತಿಜ್ಞೆ ಮಾಡಿದ್ದಾರೆ” ಎಂದು ಹೇಳಿದರು. ಅಂದು ಕಾರ್ಯಕ್ರಮದಲ್ಲಿ ಬೋಧಿಸಲಾದ ಪ್ರತಿಜ್ಞಾ ವಿಧಿಯು ವಿವಾದವನ್ನು ಹುಟ್ಟುಹಾಕಿತು.
1956ರಲ್ಲಿ ಬಾಬಾಸಾಹೇಬರು ಬೌದ್ಧಧಮ್ಮವನ್ನು ಸ್ವೀಕರಿಸುವ ಸಂದರ್ಭದಲ್ಲಿ ತಮ್ಮ ಅನುಯಾಯಿಗಳಿಗೆ 22 ಪ್ರತಿಜ್ಞಾವಿಧಿಗಳನ್ನು ಬೋಧಿಸಿದ್ದರು. ಅದರಲ್ಲಿ ಹಿಂದೂ ಧರ್ಮದ ದೇವರುಗಳನ್ನು ಪೂಜಿಸುವುದಿಲ್ಲ ಎಂಬಂತಹ ಪ್ರತಿಜ್ಞೆಗಳೂ ಸೇರಿವೆ. ಸಾಮಾನ್ಯವಾಗಿ ಬೌದ್ಧ ಅನುಯಾಯಿಗಳು ಇವುಗಳನ್ನು ಪುನರುಚ್ಚರಿಸುತ್ತಾರೆ. ಅಂದಿನ ಕಾರ್ಯಕ್ರಮದಲ್ಲಿ ಆ 22 ಪ್ರತಿಜ್ಞೆಗಳನ್ನು ಸ್ವೀಕರಿಸಲಾಗಿತ್ತು. ರಾಜೇಂದ್ರ ಅವರು ಈ ಕಾರ್ಯಕ್ರಮದ ಭಾಗವಾಗಿದ್ದಕ್ಕೆ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಲು ಆರಂಭಿಸಿದರು. ಪ್ರತಿಜ್ಞಾವಿಧಿಯ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿ, ವಿವಾದ ಸೃಷ್ಟಿಸಿತು. ಗೌತಮ್ ವಿವಾದಾತ್ಮಕ ಭಾಷಣ ಮಾಡಿದ್ದಾರೆಂದು ಆರೋಪಿಸಲಾಯಿತು. 2022ರ ಗುಜರಾತ್ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ರಾಜೇಂದ್ರ ಅವರನ್ನು ಟಾರ್ಗೆಟ್ ಮಾಡಿ ಮಾತನಾಡಲಾಯಿತು.
ಬಿಜೆಪಿ ತನ್ನ ಬಗ್ಗೆ ವದಂತಿಗಳನ್ನು ಹರಡುತ್ತಿದೆ ಎಂದು ಗೌತಮ್ ಪ್ರತಿಕ್ರಿಯಿಸಿದರು. “ನಾನು ಬೌದ್ಧ ಧರ್ಮವನ್ನು ನಂಬಿದರೆ, ಅದರಲ್ಲಿ ತಪ್ಪೇನಿದೆ? ಬಿಜೆಪಿಯವರು ದೂರು ನೀಡಬೇಕೆಂದರೆ ನೀಡಬಹುದು. ಭಾರತದ ಸಂವಿಧಾನವು ನಮಗೆ ಯಾವುದೇ ಧರ್ಮವನ್ನು ಅನುಸರಿಸುವ ಸ್ವಾತಂತ್ರ್ಯವನ್ನು ನೀಡುತ್ತದೆ. ಬಿಜೆಪಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ ಮತ್ತು ಆಮ್ ಆದ್ಮಿ ಪಕ್ಷಕ್ಕೆ ಹೆದರುತ್ತಿದೆ. ಅವರು ನಮ್ಮ ವಿರುದ್ಧ ಕೇವಲ ಸುಳ್ಳು ಪ್ರಕರಣಗಳನ್ನು ದಾಖಲಿಸಬಲ್ಲರು” ಎಂದು ಹೇಳಿದರು. ಈ ಕಾರ್ಯಕ್ರಮದ ಕುರಿತು ಎಎಪಿ ಅಧಿಕೃತವಾಗಿ ಪ್ರತಿಕ್ರಿಯೆ ನೀಡಲಿಲ್ಲ. 2022ರ ಅಕ್ಟೋಬರ್ 9ರಂದು, ಅವರು ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
“ನನ್ನ ಜೀವನದುದ್ದಕ್ಕೂ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬೋಧನೆಗಳನ್ನು ಅನುಸರಿಸುತ್ತೇನೆ. ನಾನು ಬಾಬಾಸಾಹೇಬರ ವಿಚಾರಗಳನ್ನು ಅನುಸರಿಸುವುದರಲ್ಲಿ ಬಿಜೆಪಿಗೆ ಸಮಸ್ಯೆ ಇದೆ. ಇದನ್ನು ಬಳಸಿಕೊಂಡು ಗಲೀಜು ರಾಜಕೀಯ ಮಾಡುತ್ತಿದೆ” ಎಂದು ಟೀಕಿಸಿದ ರಾಜೇಂದ್ರ ಅವರು, ಎಎಪಿಯಿಂದ ಹೊರಬಂದರು. ನಂತರ ಎಐಸಿಸಿ ನಾಯಕ ಕೆ.ಸಿ.ವೇಣುಗೋಪಾಲ್ ಅವರು ರಾಜೇಂದ್ರರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡರು. ಈಗ ಉತ್ತರಪ್ರದೇಶದ ಉಸ್ತುವಾರಿಯನ್ನು ಅವರ ಹೆಗಲಿಗೆ ಹಾಕಲಾಗಿದೆ. ಕಾಂಗ್ರೆಸ್ ಪಕ್ಷದ ಈ ಪ್ರಯೋಗ ಫಲ ಕೊಡುತ್ತದೆಯೋ ಇಲ್ಲವೋ ತಿಳಿಯಲು ಇನ್ನು ಎಂಟು ತಿಂಗಳು ಕಾಯಬೇಕು!



