ವ್ಯಕ್ತಿಯ ಸಣ್ಣ ಸಣ್ಣ ಸಂತೋಷಗಳು ಕೂಡ ಜೀವನದ ದೊಡ್ಡ ಬದಲಾವಣೆಗಳಿಗೆ ಕಾರಣವಾಗಬಹುದು; ಮಾಗಿದ ಮನಸುಗಳಿಗೆ ಮೌನದಷ್ಟೇ ಮಾತು ಕೂಡ ಮುಖ್ಯವಾಗಬಹುದು ಎಂಬ ಸಂದೇಶವನ್ನು 'ಚಿನ್ನ ಚಿನ್ನ ಆಸೈ' ಚಿತ್ರ ಪರಿಣಾಮಕಾರಿಯಾಗಿ ನೋಡುಗರೆದೆಗೆ ದಾಟಿಸುತ್ತದೆ.
‘ಚಿನ್ನ ಚಿನ್ನ ಆಸೈ’ ಚಿತ್ರದಲ್ಲಿ ಮುಖ್ಯವಾಗಿ ಎರಡು ಪಾತ್ರಗಳಿವೆ. ಒಂದು ನಡುವಯಸ್ಸಿನ ನತದೃಷ್ಟೆ ಎಂದುಕೊಂಡಿರುವ ಲೀಲಾ; ಮತ್ತೊಂದು ಬದುಕು ಬಂದಂತೆ ಸ್ವೀಕರಿಸಿರುವ ನಿವೃತ್ತ ಸ್ಕೂಲ್ ಮಾಸ್ಟರ್ ಮಾಧವನ್. ಲೀಲಾಗೆ ಮದುವೆಯಾಗಿದೆ, ಮಕ್ಕಳಿಲ್ಲ, ಗಂಡನಿಲ್ಲ ಪ್ರೀತಿ ಸಿಕ್ಕಿಲ್ಲ. ಪ್ರೀತಿಸಿ ಮದುವೆಯಾದ ಮಾಧವನ್‌ಗೆ ಮಗಳಿದ್ದಾಳೆ, ಹೆಂಡತಿ ಇಲ್ಲ. ಇಬ್ಬರೂ ಪ್ರೀತಿವಂಚಿತರು. ಇಬ್ಬರೂ ದಕ್ಷಿಣ ಭಾರತದವರು. ದೂರದ ಬನಾರಸ್‌ನಲ್ಲಿ ಆಕಸ್ಮಿಕವಾಗಿ ಭೇಟಿಯಾಗುತ್ತಾರೆ.
ತಮಿಳುನಾಡು ತಂಜಾವೂರಿನ ಲೀಲಾಗೆ ಬನಾರಸ್ ನೋಡಬೇಕೆನ್ನುವುದು ಬಹುದಿನಗಳ ಬಯಕೆ. ಪ್ರವಾಸದ ನೆಪದಲ್ಲಿ ನೆರೆಹೊರೆಯವರೊಂದಿಗೆ ಬನಾರಸ್‌ಗೆ ಬಂದಿಳಿದಾಗ, ಮನಸ್ಸು ಮುದಗೊಳ್ಳುತ್ತದೆ. ಆದರೆ, ಜೊತೆಗೆ ತಮ್ಮದೇ ಭಾಷೆಯ ಜನರಿದ್ದರೂ, ಅದೇನೋ ಅನಾಥಭಾವ. ಅಹಿತಕರವೆನಿಸಿ ಗುಂಪಿನಿಂದ ದೂರ. ದೂರವಿರುವಾಗಲೇ ತಂಡದಿಂದ ತಪ್ಪಿಸಿಕೊಳ್ಳುತ್ತಾಳೆ. ಕೈಯಲ್ಲಿದ್ದ ಪರ್ಸ್, ಫೋನ್ ಕಳುವಾಗುತ್ತದೆ. ಕಾಣದ ಊರಲ್ಲಿ ಒಬ್ಬಂಟಿಗಳಾಗಿ, ಕಂಗಾಲಾಗಿ ಕಣ್ಣೀರಿಡುತ್ತ ಕೂರುತ್ತಾಳೆ.
ಆಕೆಯ ಸ್ಥಿತಿಯನ್ನು ದೂರದಿಂದಲೇ ಧ್ಯಾನಿಸಿದ ಸ್ಕೂಲ್ ಮಾಸ್ಟರ್ ಮಾಧವನ್, ಅಳುಕಿನಿಂದಲೇ ಹತ್ತಿರ ಬಂದು, ಹಿಂಜರಿಕೆಯಿಂದಲೇ ಮಾತಿಗೆಳೆದು, ಟೀ ಕೊಡಿಸಿ, ಕೊಂಚ ಹಗುರವೆನಿಸಿದಾಗ ತನ್ನನ್ನು ಪರಿಚಯಿಸಿಕೊಳ್ಳುತ್ತಾನೆ. ಆತ ಮಲಯಾಳಿ, ತಮಿಳು ಅರ್ಥವಾಗುತ್ತದೆ, ಬನಾರಸ್‌ನಲ್ಲಿ ಮಗಳು ಕಥಕ್ ಕಲಿಯುತ್ತಿದ್ದಾಳೆ. ಆಗಾಗ ಬಂದುಹೋಗುವ ಮಾಧವನ್‌ಗೆ ಬನಾರಸ್ ಮತ್ತು ಅಲ್ಲಿಯ ಜನರು ಪರಿಚಿತರು.
ಇದನ್ನು ಓದಿದ್ದೀರಾ?: ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’: ಪುರಾಣ, ಅಸ್ತಿತ್ವ ಮತ್ತು ಸಿನೆಮಾದ ಹೊಸ ಭಾಷೆ
ಲೀಲಾ ಮತ್ತು ಮಾಧವನ್ ಪರಿಚಯವಾಗುತ್ತದೆ. ಪ್ರವಾಸಿ ತಂಡದೊಂದಿಗೆ ಆಕೆಯನ್ನು ಸೇರಿಸಲು ಮಾಧವನ್ ಸಹಾಯ ಮಾಡುವುದಾಗಿ ತಿಳಿಸುತ್ತಾನೆ. ಆ ತಂಡವನ್ನು ಹುಡುಕುವ ಹೊತ್ತಲ್ಲಿ ಇಬ್ಬರ ನಡುವೆ ಸಣ್ಣ ಸ್ನೇಹ ಮೊಳಕೆಯೊಡೆಯುತ್ತದೆ. ಇಷ್ಟಾದರೂ ಲೀಲಾ ಅಳುಕಿನಿಂದ, ಅನುಮಾನದಿಂದ ಮಾಧವನ್‌ನಿಂದ ಅಂತರ ಕಾಯ್ದುಕೊಂಡೇ ಮುಂದುವರೆಯುತ್ತಾಳೆ. ಆದರೆ ಮಾಧವನ್ ಸಿಕ್ಕಾಪಟ್ಟೆ ಸಹನೆಯ ಮನುಷ್ಯ. ಆಕೆಯ ಮೌನಕ್ಕೂ ಸಮಯ ಕೊಡುತ್ತಾನೆ, ಮಾತಿಗೂ ಮನ್ನಣೆ ನೀಡುತ್ತಾನೆ. ಆತನೊಂದಿಗೆ ಮಾತು-ಕತೆ ಸಹನೀಯವೆನಿಸಿದಾಗ, ‘ನಾನು ನಿಮ್ಮನ್ನು ನಂಬಬಹುದಾ’ ಎನ್ನುತ್ತಾಳೆ. ಆತ ‘ಹೂಂ’ ಎನ್ನುತ್ತಾನೆ. ಆತ ಕೊಂಚ ಹದ್ದುಮೀರಿ ವರ್ತಿಸಿದಾಗ, ‘ಸ್ಸಾರಿ ಕೇಳಿ’ ಎನ್ನುತ್ತಾಳೆ. ಆತ, ‘ಸ್ಸಾರಿ’ ಎನ್ನುತ್ತಾನೆ. ಆಕೆಗೆ ಬೇಕಾಗಿದ್ದು ಆ ರೀತಿಯ ತಾಳ್ಮೆಯ ಕೇಳುಗ. ಹಾಗಾಗಿ ವಾರಣಾಸಿಯಲ್ಲಿ ಓಡಾಡುವಾಗ ತನ್ನ ನತದೃಷ್ಟ ಬದುಕಿನ ಪಕಳೆಗಳನ್ನು ಬಿಡಿಸಿಡುತ್ತಾಳೆ. ಆತನೂ ಪ್ರೀತಿಸಿ ಮದುವೆಯಾಗಿದ್ದು, ಮಗಳು ಹುಟ್ಟಿದ ನಂತರ ಪತ್ನಿ ತೀರಿಹೋದದ್ದು, ಮಗಳನ್ನು ನೋಡಿಕೊಳ್ಳುತ್ತಲೇ ವಯಸ್ಸು ಕರಗಿಹೋದದ್ದು ಎಲ್ಲವನ್ನು ಹೇಳಿಕೊಂಡು ಹಗುರಾಗುತ್ತಾನೆ. ಆಕೆ ವಿಧವೆ, ಆತ ವಿಧುರ. ಆ ಸಾಂಗತ್ಯವೇ ಅವರನ್ನು ಸಂತೈಸುವ ಸಾಧನವಾಗುತ್ತದೆ.

ಹೀಗೆ ಇಬ್ಬರೂ ತಂತಮ್ಮ ಕತೆಗಳನ್ನು ಹಂಚಿಕೊಳ್ಳುತ್ತಿರುವಾಗಲೇ ಬನಾರಸ್ ನದಿ ತೀರ, ಗಂಗಾರತಿ, ಹಾಡುಗಾರರ ತಂಡದೊಂದಿಗೆ ನೃತ್ಯ, ಮಸಾಲೆ ದೋಸೆ, ಹೆಣ ಸುಡುವ ಜಾಗ, ಪಿಂಡ ಹಾಕುವುದು, ಅದಕ್ಕಾಗಿ ಎಲ್ಲೆಲ್ಲಿಂದಲೋ ಬರುವ ಜನ, ಅವರವರದೇ ಆದ ಸಂಕಟಗಳು ಎಲ್ಲವೂ ಕತೆಯ ಪಾತ್ರಗಳಾಗುತ್ತವೆ. ಇವರ ಬದುಕಿನೊಂದಿಗೆ ತಳಕು ಹಾಕಿಕೊಂಡು ಪಾಠ ಹೇಳುತ್ತವೆ. ಅದೆಲ್ಲವನ್ನು ನೋಡುತ್ತ, ಮರುಗುತ್ತ, ಮರೆಯುತ್ತ ಮಾಧವನ್‌ನನ್ನು ಮನದಲ್ಲೇ ಮೆಚ್ಚುವ ಲೀಲಾಗೆ, ಕೊನೆಗೂ ತನ್ನ ಮಾತಿಗೆ ಕಿವಿಯಾಗುವ ವ್ಯಕ್ತಿಯೊಬ್ಬ ಸಿಕ್ಕನಲ್ಲ ಎಂಬ ಸಂತೃಪ್ತಭಾವ. ಮಾಧವನ್ ಕೂಡ, ಕಳೆದುಕೊಂಡ ಪ್ರೀತಿಯನ್ನು ಮತ್ತೆ ಗಳಿಸುವ ನಿಟ್ಟಿನಲ್ಲಿ ಆಕೆಯನ್ನು ಪ್ರವಾಸಿ ತಂಡಕ್ಕೆ ಒಪ್ಪಿಸಬೇಕು ಎಂದುಕೊಳ್ಳುತ್ತಲೇ; ಆಕೆ ಇಲ್ಲೇ ಉಳಿಯಲಿ ಎಂಬ ಒಳಾಸೆಯ ಒದ್ದಾಟ. ಇಬ್ಬರಿಗೂ ಮೌನ ಇಷ್ಟ. ಆ ಇಷ್ಟಕ್ಕೆ ನಂಬಿಕೆಯೇ ಆಧಾರ.
ಇದನ್ನು ಓದಿದ್ದೀರಾ?: ‘ಸಟ್ಲುಜ್’ ಸಿನಿಮಾ: ಹೇಳಬೇಕಾಗಿದ್ದೇನು, ಹೇಳಿದ್ದೇನು?
ಅದಕ್ಕೆ ಪೂರಕವಾಗಿ ಮಗಳಿಗೆ ಸೀರೆ ಖರೀದಿಸುವುದು, ಒಂದಕ್ಕೊಂದು ಫ್ರೀಯಾಗಿ ಸಿಗುವ ಸೀರೆಯನ್ನು ಲೀಲಾಗೆ ಉಡಿಸಿ ನೋಡುವುದು, ಮಗಳ ಬರ್ತ್‌ಡೇ ಸಲುವಾಗಿ ಊಟ ಕೊಡಲು ಅನಾಥಾಶ್ರಮಕ್ಕೆ ಭೇಟಿ ಕೊಡುವುದು, ತಿರುಗಾಡಿ ಸುಸ್ತಾದಾಗ ಹೋಟೆಲ್ ರೂಂ ಮಾಡಿ, ಸ್ನಾನ ಮಾಡಿ ಬಟ್ಟೆ ಬದಲಿಸುವುದು, ತಂಡ ಸಿಕ್ಕಾಗ ಮಾಧವನ್ ಬಿಟ್ಟುಹೋಗುವುದು, ಲೀಲಾ ಹೋಗದೆ ಅಲ್ಲೇ ಉಳಿಯುವುದು, ಗೈಡ್ ಕುಳ್ಳನ ಪರಿಚಯವಾಗಿ, ಆತನ ಮೂಲಕ ಕಳೆದುಹೋದ ಪರ್ಸ್, ಫೋನ್ ಸಿಗುವುದು- ಇವೆಲ್ಲವೂ ಅವರಿಬ್ಬರ ಅಗೋಚರ ಪ್ರೀತಿಗೆ ಕಾವು ಕೊಡುತ್ತವೆ.
ಆ ಕಾವಿಗೆ ಕುಮ್ಮಕ್ಕು ಕೊಡುವಂತೆ ಅವರಿಬ್ಬರನ್ನು ಸಂದರ್ಭ ಒಂದುಮಾಡುತ್ತದೆ. ಮಾತಿಲ್ಲ, ಮೌನವೇ ಎಲ್ಲ. ಕೊನೆಗೆ ಇಬ್ಬರೂ ತಮ್ಮಿಷ್ಟದಂತೆ ಆ ದಿನವನ್ನು ಬದುಕಲು ಬಯಸುತ್ತಾರೆ. ಆ ನೀರವ ರಾತ್ರಿ ಗಂಗಾನದಿ ದಡದಲ್ಲಿ ಕಟ್ಟಿಹಾಕಿರುವ ದೋಣಿಯಲ್ಲಿ, ಸಮಾನ ಅಂತರದಲ್ಲಿ ಮಲಗಿ ಮಾತನಾಡುತ್ತಲೇ ನಿದ್ರೆಗೆ ಜಾರುತ್ತಾರೆ… ದೋಣಿಯಲ್ಲಿ ಮಲಗಿದವರ ಬದುಕು ದಡ ಸೇರಿತೇ… ಚಿತ್ರ ನೋಡಿ.
ಚಿತ್ರದಲ್ಲಿ… ಅವಸರವೂ ಸಾವಧಾನದ ಬೆನ್ನೇರುತ್ತದೆ. ಇಲ್ಲಿ ಎಲ್ಲಕ್ಕೂ ಇದೆ ಅರ್ಥ, ಯಾವುದೂ ಅಲ್ಲ ವ್ಯರ್ಥ ಎನ್ನುವುದನ್ನು ನಿಜ ಮಾಡುತ್ತಲೇ ಚಿತ್ರ ಸಾಗುತ್ತದೆ. ಕತೆ ಸರಳವಾಗಿದ್ದರೂ ಭಾವನಾತ್ಮಕ ಆಳವನ್ನು ಹೊಂದಿದೆ. ಚಿತ್ರಕಥೆಯಲ್ಲಿ ಅನಗತ್ಯ ತಿರುವುಗಳಿಗೆ ಅವಕಾಶ ನೀಡದೆ, ನಿಜ ಜೀವನದ ಅನುಭವಗಳಿಗೆ ಹತ್ತಿರವಾಗಿರುವ ನಿರೂಪಣಾ ಶೈಲಿಯನ್ನು ಬಳಸಲಾಗಿದೆ. ನಾಯಕ ಮತ್ತು ನಾಯಕಿಯ ವ್ಯಕ್ತಿತ್ವಗಳು ಕೇವಲ ವೈಯಕ್ತಿಕ ಆಸೆ-ಆಕಾಂಕ್ಷೆಗಳನ್ನು ಮಾತ್ರವಲ್ಲದೆ; ಸಮಾಜದಲ್ಲಿನ ಮೌಲ್ಯಗಳು ಹಾಗೂ ಹೊಣೆಗಾರಿಕೆಗಳನ್ನೂ ಪ್ರತಿಬಿಂಬಿಸುತ್ತವೆ. ಇದರಿಂದ ಪ್ರೇಕ್ಷಕರು ಪಾತ್ರಗಳ ಭಾವನೆಗಳೊಂದಿಗೆ ಸುಲಭವಾಗಿ ತಾದಾತ್ಮ್ಯ ಹೊಂದುತ್ತಾರೆ.
ಮಾಧವನ್ ಪಾತ್ರದಲ್ಲಿ ಇಂದ್ರನ್ಸ್, ಲೀಲಾ ಪಾತ್ರದಲ್ಲಿ ಮಧೂ ಅದ್ಭುತವಾಗಿ ನಟಿಸಿದ್ದಾರೆ. ಪ್ರತಿಯೊಂದು ಚಿತ್ರದಲ್ಲೂ ತಮ್ಮ ಅಭಿನಯವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಿರುವ ಇಂದ್ರನ್ಸ್ ಹಾಗೂ 34 ವರ್ಷಗಳ ಹಿಂದೆ ಮಣಿರತ್ನಂ ಅವರ ‘ರೋಜಾ’ ಚಿತ್ರದ ಮೂಲಕ ಹರೆಯದ ಯುವತಿಯಾಗಿ ಭಾರತೀಯ ಚಿತ್ರರಂಗಕ್ಕೆ ಪರಿಚಿತರಾದ ಮಧೂ- ಇಬ್ಬರೂ ನಿಜಬದುಕಿನ ಪಾತ್ರಗಳಾಗಿ ಬದುಕಿದ್ದಾರೆ.
ಇದನ್ನು ಓದಿದ್ದೀರಾ?: ಪ್ರೀತಮ್ ಅಂಡ್ ಪೆಡ್ರೊ | ಮುದ ನೀಡುವ ಸೈಬರ್ ಕ್ರೈಮ್ ಕಾಮಿಡಿ ಥ್ರಿಲ್ಲರ್
ಚಿತ್ರದ ದೊಡ್ಡ ಶಕ್ತಿ ಅದರ ಸಂಭಾಷಣೆ. ಲೀಲಾ ಹೆಚ್ಚಾಗಿ ತಮಿಳಿನಲ್ಲಿ ಮಾತನಾಡುತ್ತಿದ್ದರೆ, ಮಾಧವನ್ ತಮಿಳು ಮತ್ತು ಮಲಯಾಳಂ ಮಿಶ್ರಿತ ಭಾಷೆಯಲ್ಲಿ ಮಾತನಾಡುತ್ತಾರೆ. ಆರಂಭದಲ್ಲಿ ಲೀಲಾ ಮಾತನಾಡಲು ಹಿಂಜರಿಯುವುದರಿಂದ ಕತೆಯ ಲಯಕ್ಕೆ ಪ್ರೇಕ್ಷಕರು ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ ನಂತರ ನಿರ್ದೇಶಕಿ ಅವರ ಸಂಬಂಧವನ್ನು ತುಂಬಾ ಸೂಕ್ಷ್ಮವಾಗಿ ಮತ್ತು ಮೃದುವಾಗಿ ಬೆಳೆಸಿರುವ ರೀತಿ ಮೆಚ್ಚುಗೆಗೆ ಪಾತ್ರವಾಗುತ್ತದೆ. ದುಃಖಿತ, ನಿರಾಶಾದಾಯಕ ಲೀಲಾ, ಸಣ್ಣ ಸಣ್ಣ ಸಂತೋಷಗಳಲ್ಲಿ ಖುಷಿ ಕಂಡುಕೊಳ್ಳುವ ವ್ಯಕ್ತಿಯಾಗಿ ರೂಪಾಂತರಗೊಳ್ಳುವ ಪ್ರಯಾಣವನ್ನು ಮಧೂ ಅತ್ಯಂತ ಸಹಜವಾಗಿ ಅಭಿನಯಿಸಿದ್ದಾರೆ. ಮಾಧವನ್ ಪಾತ್ರದಲ್ಲಿ ಇಂದ್ರನ್ಸ್ ಅವರ ಅಭಿನಯ ಅತ್ಯುತ್ತಮವಾಗಿದೆ. ಅವರ ಮುಗ್ಧ ಕಣ್ಣುಗಳು, ಮುಖಭಾವಗಳು, ಸಂಭಾಷಣೆ ಹೇಳುವ ರೀತಿ, ದೇಹಭಾಷೆಯ ಬಗೆ ಮತ್ತು ಮುಗುಳ್ನಗೆ- ಇವೆಲ್ಲವೂ ಲೀಲಾಳಿಗೂ ಪ್ರೇಕ್ಷಕರಿಗೂ ಮಾಧವನ್ ಪಾತ್ರವನ್ನು ಹತ್ತಿರವಾಗಿಸುತ್ತವೆ.

ನಿರ್ದೇಶಕಿ ವರ್ಷಾ ವಾಸುದೇವ್, ತಮ್ಮ ಮೊದಲ ನಿರ್ದೇಶನದ ‘ಚಿನ್ನ ಚಿನ್ನ ಆಸೈ‘ ಚಿತ್ರವನ್ನು ಕಾವ್ಯಾತ್ಮಕ ಶೈಲಿಯಲ್ಲಿ, ಮನಮುಟ್ಟುವ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಚಿತ್ರಕ್ಕೆ ಬಳಸಿರುವ ಬನಾರಸ್‌ನ ಆಧ್ಯಾತ್ಮಿಕ ಹಿನ್ನೆಲೆ, ನಿಜಬದುಕನ್ನೇ ಸೆರೆಹಿಡಿದಿರುವ ಛಾಯಾಗ್ರಹಣ, ಕತೆಯ ಭಾವನಾತ್ಮಕ ವಾತಾವರಣವನ್ನು ಸಮರ್ಥವಾಗಿ ಕಟ್ಟಿಕೊಡುತ್ತದೆ. ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಕತೆಗೆ ಪೂರಕವಾಗಿವೆ. ಸಂಕಲನವು ಚಿತ್ರದ ನಿರೂಪಣೆಯ ವೇಗವನ್ನು ಸಮತೋಲನದಲ್ಲಿರಿಸಿದೆ. ಚಿತ್ರ ನಿಧಾನಗತಿಯಲ್ಲಿ ಸಾಗಿದರೂ, ಪ್ರೇಕ್ಷಕರ ಆಸಕ್ತಿಯನ್ನು ನಿರಂತರವಾಗಿ ಕಾಯ್ದುಕೊಳ್ಳುತ್ತದೆ.
ವ್ಯಕ್ತಿಯ ಸಣ್ಣ ಸಣ್ಣ ಸಂತೋಷಗಳು ಕೂಡ ಜೀವನದ ದೊಡ್ಡ ಬದಲಾವಣೆಗಳಿಗೆ ಕಾರಣವಾಗಬಹುದು ಎಂಬ ಸಂದೇಶವನ್ನು ಚಿತ್ರ ಪರಿಣಾಮಕಾರಿಯಾಗಿ ನೋಡುಗರೆದೆಗೆ ದಾಟಿಸುತ್ತದೆ. ಒಂದೊಳ್ಳೆಯ ಸಿನೆಮಾ ನೋಡಿದ ಸಂತೃಪ್ತಿ, ಸಮಾಧಾನ ನಿಮ್ಮದಾಗುತ್ತದೆ.
(ಚಿತ್ರ ಜಿಯೋ ಹಾಟ್‌ಸ್ಟಾರ್ ಒಟಿಟಿಯಲ್ಲಿದೆ. ಆಸಕ್ತರು ವೀಕ್ಷಿಸಬಹುದು)

ಲೇಖಕ, ಪತ್ರಕರ್ತ



