ಪ್ರೀತಮ್ ಅಂಡ್ ಪೆಡ್ರೊ | ಮುದ ನೀಡುವ ಸೈಬರ್ ಕ್ರೈಮ್ ಕಾಮಿಡಿ ಥ್ರಿಲ್ಲರ್

Date:

ಆರು ಕಂತುಗಳ 'ಪ್ರೀತಮ್ ಅಂಡ್ ಪೆಡ್ರೊ' ಸರಣಿಯನ್ನು ನಿರ್ದೇಶಿಸಿರುವ ಅವಿನಾಶ್ ಅರುಣ್, ಸೈಬರ್ ಅಪರಾಧದಂತಹ ಗಂಭೀರ ವಿಷಯಕ್ಕೆ ಸ್ನೇಹ, ಹಾಸ್ಯ, ರಹಸ್ಯವನ್ನು ಲೇಪಿಸಿದ್ದಾರೆ. ಭಾವನಾತ್ಮಕ ಬೆಸುಗೆ ಹಾಕಿದ್ದಾರೆ. ಆನ್‌ಲೈನ್ ಮೋಸಗಳಂತಹ ಇಂದಿನ ಸಮಸ್ಯೆಗಳನ್ನು ಕಥೆಯಲ್ಲಿ ತರುವ ಮೂಲಕ ಸಮಕಾಲೀನಗೊಳಿಸಿದ್ದಾರೆ. 

ಇತ್ತೀಚಿನ ವರ್ಷಗಳಲ್ಲಿ ಕ್ರೈಮ್ ಥ್ರಿಲ್ಲರ್‍‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಸಾಮಾನ್ಯ ಕತೆ, ಪ್ರೇಮಕಥೆ ಅಥವಾ ಆಕ್ಷನ್‌ಗಿಂತ ಕುತೂಹಲ ಕೆರಳಿಸುವ, ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ, ಕ್ಷಣಕ್ಷಣಕ್ಕೂ ತಿರುವುಗಳಿರುವ, ಊಹೆಗೂ ನಿಲುಕದ ಕ್ಲೈಮ್ಯಾಕ್ಸ್ ಹೊಂದಿರುವ ಕಾರಣಗಳಿಗೆ ಕ್ರೈಮ್ ಥ್ರಿಲ್ಲರ್‍‌ಗಳನ್ನು ಜನ ಹೆಚ್ಚು ಇಷ್ಟಪಡುತ್ತಿದ್ದಾರೆ. ನಿಜವಾದ ಅಪರಾಧ ಪ್ರಕರಣಗಳು, ತನಿಖೆಗಳು ಮತ್ತು ಸಾಕ್ಷ್ಯಚಿತ್ರಗಳು ಜನರಲ್ಲಿ ಅಪರಾಧ ಮನೋವಿಜ್ಞಾನದ ಬಗ್ಗೆ ಕುತೂಹಲ ಹೆಚ್ಚಿಸಿವೆ. ಅದರ ಪರಿಣಾಮವಾಗಿ ಕಾಲ್ಪನಿಕ ಕ್ರೈಮ್ ಥ್ರಿಲ್ಲರ್‍‌ಗಳಿಗೆ ಬೇಡಿಕೆ ಹೆಚ್ಚಾಗಿದೆ.

- Advertisement -

ಕೊರಿಯನ್, ಸ್ಕ್ಯಾಂಡಿನೇವಿಯನ್, ಬ್ರಿಟಿಷ್ ಮತ್ತು ಸ್ಪ್ಯಾನಿಷ್ ಕ್ರೈಮ್ ಥ್ರಿಲ್ಲರ್‍‌ಗಳ ಯಶಸ್ಸು ಇತರ ಭಾಷೆಗಳ ಚಿತ್ರರಂಗಕ್ಕೂ ಪ್ರೇರಣೆ ನೀಡಿದೆ. ಅದರ ಪರಿಣಾಮ ಭಾರತೀಯ ಚಿತ್ರರಂಗದಲ್ಲೂ ಅದು ಕಾಣುತ್ತಿದೆ. ಭಾರಿ ಬಜೆಟ್‌ನ ದೃಶ್ಯ ವೈಭವದ ಅಗತ್ಯವಿಲ್ಲದೆ, ಗಟ್ಟಿ ಕಥೆ, ಸಹ್ಯ ಸಂಭಾಷಣೆ ಮತ್ತು ಉತ್ತಮ ಅಭಿನಯದಿಂದಲೇ ಯಶಸ್ಸು ಸಾಧಿಸಬಹುದಾದ ಪ್ರಕಾರವಾಗಿರುವುದರಿಂದ ನಿರ್ಮಾಪಕರಿಗೂ ಇದು ವಯಬಲ್ ಆಗಿದೆ. ಹಾಗೆಯೇ ಒಟಿಟಿ ವೇದಿಕೆಗಳ ವಿಸ್ತರಣೆ ಹಾಗೂ ಪ್ರೇಕ್ಷಕರ ಅಭಿರುಚಿಯೂ ಇದಕ್ಕೆ ಜೊತೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಇಂದಿನ ಕ್ರೈಮ್ ಥ್ರಿಲ್ಲರ್‍‌ಗಳು ಕೇವಲ ‘ಅಪರಾಧಿ ಯಾರು’ ಎಂಬ ಪ್ರಶ್ನೆಗೆ ಸೀಮಿತವಾಗಿರದೆ; ಅಪರಾಧಿಯ ಮನಸ್ಥಿತಿ, ತನಿಖಾಧಿಕಾರಿಯ ಕೌಟುಂಬಿಕ-ವೈಯಕ್ತಿಕ ಸಂಘರ್ಷ, ಸಾಮಾಜಿಕ-ರಾಜಕೀಯ ಸಮಸ್ಯೆಗಳು ಮತ್ತು ನೈತಿಕ ದ್ವಂದ್ವಗಳನ್ನೂ ಒಳಗೊಂಡಿರುತ್ತವೆ. ಇತ್ತೀಚಿಗೆ ಬಿಡುಗಡೆಯಾದ ‘ಪ್ರೀತಮ್ ಅಂಡ್ ಪೆಡ್ರೊ’ ವೆಬ್ ಸರಣಿ ಇದೆಲ್ಲವನ್ನೂ ಒಳಗೊಂಡಿದೆ.

hq720 27

ಮೇಲ್ನೋಟಕ್ಕೇ ಇದು ಯಥಾಪ್ರಕಾರದ ಕ್ರೈಮ್ ಥ್ರಿಲ್ಲರ್ ಎನಿಸಿದರೂ, ನೋಡುತ್ತಾ ಹೋದಂತೆ ಸ್ನೇಹ, ಸಾಹಸ ಮತ್ತು ಹಾಸ್ಯವನ್ನು ಹದವರಿತು ಬೆರೆಸಿರುವ ಭಿನ್ನ ಸರಣಿ ಎನ್ನುವುದು ಗೊತ್ತಾಗುತ್ತದೆ. ವಿಭಿನ್ನ ಕತೆ, ಕತೆಗೆ ಪೂರಕವಾಗಿ ಆಯ್ಕೆ ಮಾಡಿಕೊಂಡಿರುವ ಗೋವಾ-ಕಾರವಾರಗಳ ಸಹಜ ಸೌಂದರ್ಯ ನೋಡುಗರಿಗೆ ಹಿತಾನುಭವ ನೀಡುತ್ತದೆ. ಸರಣಿಯ ಪ್ರಮುಖ ಪಾತ್ರಗಳಾದ ಪ್ರೀತಮ್ ಮತ್ತು ಪೆಡ್ರೊ, ಅವರ ವಿಭಿನ್ನ ಸ್ವಭಾವಗಳು ಕಥೆಗೆ ಜೀವ ತುಂಬುತ್ತವೆ. ಅವರ ನಡುವಿನ ಸಂಭಾಷಣೆಗಳು, ಸಮಸ್ಯೆಗಳನ್ನು ಎದುರಿಸುವ ವಿಧಾನಗಳು ಮತ್ತು ಪರಿಹರಿಸುವಾಗಿನ ಪ್ರಹಸನಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತವೆ. ರಂಜಿಸುವ ಜೊತೆಗೆ ಕುತೂಹಲವನ್ನೂ ಕೆರಳಿಸುತ್ತವೆ.

ಇದನ್ನು ಓದಿದ್ದೀರಾ?: ‘ಸಟ್ಲುಜ್‌’ ಸಿನಿಮಾ: ಹೇಳಬೇಕಾಗಿದ್ದೇನು, ಹೇಳಿದ್ದೇನು?

ಪ್ರೀತಮ್- ವ್ಯಾಕ್ಯೂಮ್ ಕ್ಲೀನರ್ ಮಾರುವ ಒಬ್ಬ ಸಾಮಾನ್ಯ ಯುವಕ. ಎಂಜಿನಿಯರಿಂಗ್ ಡ್ರಾಪ್ ಔಟ್. ಆದರೆ ತಂತ್ರಜ್ಞಾನವನ್ನು ಅರೆದು ಕುಡಿದವನು. ಡಿಕೋಡ್ ಮಾಡುವುದರಲ್ಲಿ ನಿಷ್ಣಾತ. ಸೂಕ್ತ ಕೆಲಸ ಮತ್ತು ಗುರುತಿಸುವಿಕೆಯಿಲ್ಲದೆ ಕುಡಿತದ ದಾಸನಾಗಿದ್ದಾನೆ. ಪೆಡ್ರೊ- ಪೊಲೀಸ್ ಅಧಿಕಾರಿ. ಮನೆ-ಮಡದಿ ಮರೆತು ವೃತ್ತಿಯಲ್ಲಿ ಮೈಮರೆಯುವ ಸ್ವಭಾವ. ಕ್ರೈಮ್- ಆತನ ಪೆಟ್ ಸಬ್ಜೆಕ್ಟ್. ಸೈಬರ್ ಕ್ರೈಮ್ ಎಂದರೆ ಕಿರಿಕಿರಿ. ಹಳೆಯ ವಿಧಾನಗಳನ್ನು ನಂಬುವ ಪೊಲೀಸ್ ಅಧಿಕಾರಿ ಮತ್ತು ಆಧುನಿಕ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ತಂತ್ರಜ್ಞನನ್ನು ಒಂದು ಎಟಿಎಂ ದರೋಡೆ ಒಂದುಮಾಡಿಸುತ್ತದೆ.

ಸರಣಿಯ ಮೊದಲ ದೃಶ್ಯವೇ ಎಟಿಎಂ ದರೋಡೆ. ಪೊಲೀಸರಿಗೆ ತಲೆಬಿಸಿ. ಅದೇ ಸಮಯಕ್ಕೆ ಒಬ್ಬ ಮುದುಕನ ಜೊತೆಯಲ್ಲಿ ಠಾಣೆಗೆ ದೂರು ದಾಖಲಿಸಲು ಬರುವ ಯುವಕ ಪ್ರೀತಮ್, ‘ನನ್ನ ಅಜ್ಜನ ಟೇಪ್ ರೆಕಾರ್ಡರ್ ಕಳುವಾಗಿದೆ, ಎಫ್ಐಆರ್ ಮಾಡಿ’ ಎನ್ನುತ್ತಾನೆ. ಪೊಲೀಸರಿಗೆ ಎಟಿಎಂ ದರೋಡೆ ಮುಂದೆ ಅದು ಪುಟ್ಟ ಕೇಸು ಎನಿಸಿ, ‘ನೋಡನ ನಡಿ’ ಸಾಗಹಾಕಲು ನೋಡುತ್ತಾರೆ. ಯುವಕ ಅಜ್ಜನನ್ನು ಮನೆಗೆ ಕಳಿಸಿ, ಕುಡಿದು ಪುನಃ ಠಾಣೆಗೆ ಬಂದು, ‘ಆ ಟೇಪ್ ರೆಕಾರ್ಡರ್ ಬಹಳ ಮುಖ್ಯವಾದ ವಸ್ತು. ಅದರಲ್ಲಿ ನನ್ನಜ್ಜನ ಸಂತೋಷವಿದೆ, ಜೀವವಿದೆ. ಎಫ್ಐಆರ್ ಯಾಕೆ ಮಾಡ್ತಿಲ್ಲ’ ಎಂದು ಕೂಗಾಡುತ್ತಾನೆ. ಪೊಲೀಸರು ಆತನಿಗೆ ಎರಡು ಬಿಗಿದು, ಕಂಬಿ ಹಿಂದೆ ಕೂರಿಸುತ್ತಾರೆ. ಆತ ಅಲ್ಲಿಂದಲೇ ಅರಚುತ್ತಿರುತ್ತಾನೆ. ಅದೇ ಸಮಯಕ್ಕೆ ಪೊಲೀಸ್ ಅಧಿಕಾರಿ ಪೆಡ್ರೊ ಎಂಟ್ರಿಯಾಗುತ್ತದೆ.

ಕೂಗಾಡುತ್ತಿರುವ ಯುವಕನನ್ನು ಕರೆದು ಮುಂದೆ ನಿಲ್ಲಿಸಿಕೊಳ್ಳುವ ಪೆಡ್ರೊ, ‘ಏನ್ ನಿನ್ ಸಮಸ್ಯೆ’ ಎನ್ನುತ್ತಾನೆ. ‘ಟೇಪ್ ರೆಕಾರ್ಡರ್ ಕಳುವಾಗಿದೆ, ದೂರು ದಾಖಲಿಸಿಕೊಳ್ಳಿ’ ಎನ್ನುತ್ತಾನೆ. ಪೆಡ್ರೊಗೆ ಎಟಿಎಂ ತಲೆಬಿಸಿ, ‘ನೋಡನಿರು’ ಎಂದು ಅವನೂ ಕೂಡ ನಿರ್ಲಕ್ಷಿಸುತ್ತಾನೆ. ಆಗ ಆ ಯುವಕ, ‘ಐದು ನಿಮಿಷ ಟೈಮ್ ಕೊಡಿ, ಆ ಎಟಿಎಂ ದರೋಡೆಕೋರರನ್ನು ಹುಡುಕಿಕೊಡುತ್ತೇನೆ, ಆಮೇಲೆ ಟೇಪ್ ರೆಕಾರ್ಡರ್ ಹುಡುಕಿಕೊಡ್ತೀರ’ ಎಂದು ಸವಾಲು ಹಾಕುತ್ತಾನೆ. ಅಚಾನಕ್ ಆಫರ್, ಬೇರೆ ದಾರಿ ಇಲ್ಲ, ಓಕೆ ಎನ್ನುತ್ತಾನೆ ಪೆಡ್ರೊ. ಐದು ನಿಮಿಷದಲ್ಲಿ ಹುಡುಕಿ, ಆ ದರೋಡೆಕೋರರು ಇರುವ ಜಾಗ ತಿಳಿಸುತ್ತಾನೆ ಪ್ರೀತಮ್. ದರೋಡೆಕೋರರು ಸಿಗುತ್ತಾರೆ. ಆದರೆ, ಹುಡುಕಿದ್ದು ಹೇಗೆ ಎಂಬ ಕುತೂಹಲ. ಕೇಳಿದಾಗ, ‘ಏನಿಲ್ಲ, ಎಟಿಎಂ ಸೆಂಟರ್ ಸುತ್ತಲಿನ ನಂಬರ್‍‌ಗಳನ್ನು ಹ್ಯಾಕ್ ಮಾಡಿ ಟ್ರೇಸ್ ಮಾಡಿದೆ, ನಾಲ್ಕು ನಂಬರ್‍‌ಗಳು ಪದೇ ಪದೇ ಚಾಲ್ತಿಯಲ್ಲಿದ್ದೋ, ಸಿಂಪಲ್’ ಎನ್ನುತ್ತಾನೆ.

ಇದನ್ನು ಓದಿದ್ದೀರಾ?: ಜಾನಕಿ ಅಮ್ಮ | ಭಾಷೆ, ಸೀಮೆಗಳ ಗಡಿದಾಟಿದ ಸ್ವರಯಾನ; ಕಂಠಸಿರಿಯ ಸಂಗೀತಯಾನ

ಅದೇ ಸಮಯಕ್ಕೆ ಸರಿಯಾಗಿ, ಮಂತ್ರಿ ಮನೆಯಲ್ಲಿ ಕಳ್ಳತನವಾಗಿ, ಅರ್ಜೆಂಟ್ ಕರೆ ಬರುತ್ತದೆ. ಎದ್ದುಬಿದ್ದು ಹೋದರೆ, ಮಂತ್ರಿ ಮಡದಿ ಫೋನ್ ಕಳುವಾಗಿರುತ್ತದೆ. ಬೇಸರಿಸದ ಪೊಲೀಸ್ ಅಧಿಕಾರಿ ಪೆಡ್ರೊ ತಪಾಸಣೆ ಮಾಡಿ, ‘ಫೋನ್ ಎಲ್ಲೂ ಕಳುವಾಗಿಲ್ಲ, ಮನೆಯಲ್ಲೇ ಇದೆ, ನಿಮ್ಮ ಮಗನನ್ನು ವಿಚಾರಣೆಗೊಳಪಡಿಸಬೇಕು, ಅನುಮತಿ ನೀಡಿ’ ಎನ್ನುತ್ತಾನೆ. ಪುಟ್ಟ ಬಾಲಕನನ್ನು ವಿಚಾರಣೆಗೊಳಪಡಿಸುವುದು ಮಂತ್ರಿಗೆ ಅಪರಾಧದಂತೆ ಕಾಣಿಸುತ್ತದೆ. ಪ್ರತಿಷ್ಠೆಯೂ ಜೊತೆಗೂಡುತ್ತದೆ. ಕೋಪಗೊಂಡ ಮಂತ್ರಿ, ಆತನನ್ನು ಮನೆಯಿಂದ ಹೊರಗಟ್ಟಿ, ದಂಡನೆಯ ವರ್ಗಾವಣೆಯಾಗಿ ಸೈಬರ್ ಕ್ರೈಮ್‌ಗೆ ಹಾಕಲು ಸೂಚಿಸುತ್ತಾನೆ. ಎಟಿಎಂ ದರೋಡೆಕೋರರನ್ನು ಹಿಡಿದರೂ, ಮಂತ್ರಿ ಮನೆಯ ಫೋನ್ ಪತ್ತೆ ಮಾಡದ್ದರಿಂದ ಸೈಬರ್ ಸೆಲ್‌ನ ಕುರ್ಚಿಯಲ್ಲಿ ಕೂರುವಂತಾಗುತ್ತದೆ. ಇಷ್ಟವಿಲ್ಲದ ಕೆಲಸದಿಂದ ಮುಕ್ತಗೊಳಿಸಲು ಮೇಲಿನ ಅಧಿಕಾರಿಯಲ್ಲಿ ಮನವಿ ಮಾಡಿಕೊಳ್ಳುತ್ತಾನೆ. ‘ಒಂದೆರಡು ಕೇಸ್ ಸಾಲ್ವ್ ಮಾಡು, ನೋಡೋಣ’ ಎನ್ನುತ್ತಾರೆ ಉನ್ನತಾಧಿಕಾರಿ.

ಆಗ ಪೆಡ್ರೋಗೆ ನೆನಪಾಗುವುದು ಟೆಕ್ ಸ್ಯಾವಿ ಪ್ರೀತಮ್. ಆತನ ಟೇಪ್ ರೆಕಾರ್ಡರ್ ಹುಡುಕಿಕೊಡುವ ಭರವಸೆ ನೀಡಿ, ತನ್ನ ಸೈಬರ್ ಕ್ರೈಮ್ ಸಾಲ್ವ್ ಮಾಡುವ ಕೆಲಸಕ್ಕೆ ಸಹಕರಿಸುವಂತೆ ಕೇಳಿಕೊಳ್ಳುತ್ತಾನೆ. ಹಾಗಾಗಿ ಅವರಿಬ್ಬರ ನಡುವೆ ಸ್ನೇಹ ಬೆಳೆಯುತ್ತದೆ. ಏತನ್ಮಧ್ಯೆ, ಅದೇ ಮಂತ್ರಿ ಮಗನ ಕಿಡ್ನ್ಯಾಪ್ ಆಗುತ್ತದೆ. ಅದನ್ನು ಕಂಡುಹಿಡಿಯಲು ಅದೇ ಪೊಲೀಸ್ ಅಧಿಕಾರಿ ಪೆಡ್ರೊಗೆ ವಹಿಸಲಾಗುತ್ತದೆ.

ಮಂತ್ರಿ ಮಗನ ಹೈ-ಪ್ರೊಫೈಲ್ ಕಿಡ್ನ್ಯಾಪ್ ಕೇಸನ್ನು ಭೇದಿಸುವ ನಿಟ್ಟಿನಲ್ಲಿ ಪ್ರಕರಣ ಒಂದೊಂದೇ ತಿರುವು ಪಡೆಯುತ್ತ ರೋಮಾಂಚಕ ಘಟ್ಟಕ್ಕೆ ಬಂದು ನಿಲ್ಲುತ್ತದೆ. ಆ ನಿಟ್ಟಿನಲ್ಲಿ ಪ್ರೀತಮ್ ಹಿನ್ನಲೆಯ ಕತೆ ಬಿಚ್ಚಿಕೊಳ್ಳುತ್ತದೆ, ಮಂತ್ರಿ ಮಡದಿಯ ಹಳೇ ಅಫೇರ್ ಬೆಳಕಿಗೆ ಬರುತ್ತದೆ, ಆ ಪ್ರಿಯಕರನ ಬ್ಲಾಕ್ ಮೇಲ್ ಬಯಲಾಗುತ್ತದೆ, ಅವನ ಮೂಲಕ ಹ್ಯಾಕರ್ ಮಾರ್ಟಿನ್ ಮುನ್ನಲೆಗೆ ಬರುತ್ತಾನೆ, ಮಾರ್ಟಿನ್‌ಗೂ ಪ್ರೀತಮ್‌ಗೂ ಇರುವ ಹಳೇ ದ್ವೇಷ ಗೊತ್ತಾಗುತ್ತದೆ, ಲೈಟ್ ಹೌಸ್‌ಗೂ ಆತ್ಮಹತ್ಯೆಗೂ ಇರುವ ಲಿಂಕ್, ಮಂತ್ರಿ ಮಗನ ಕಿಡ್ನ್ಯಾಪ್‌ಗೂ ಬ್ಲೂ ವೇಲ್ ಎಂಬ ಸೈಬರ್ ಗೇಮ್‌ಗೂ ಇರುವ ಸಂಬಂಧ ಹೊರಬರುತ್ತದೆ… ಹೀಗೆ ಇಡೀ ಸರಣಿ ಕುತೂಹಲದ ಕಡಲಾಗುತ್ತದೆ. ಆ ಕಡಲಿನಲ್ಲಿ ಪ್ರೇಕ್ಷಕರು ವಿಹರಿಸುತ್ತಲೇ, ನಾವು ಅದರಲ್ಲಿ ಭಾಗವಾಗಿರಬಹುದೇ ಎಂಬ ಭಯ ಹುಟ್ಟಿಸುತ್ತದೆ. ಸಾಮಾಜಿಕ ಜಾಗೃತಿಯನ್ನೂ ಬಿತ್ತುತ್ತದೆ. 

ಇದನ್ನು ಓದಿದ್ದೀರಾ?: ಮೇಡ್ ಇನ್ ಇಂಡಿಯಾ: ಎ ಟೈಟಾನ್ ಸ್ಟೋರಿ | ಕಾರ್ಪೊರೇಟ್ ಯಶೋಗಾಥೆಯ ನಾಟಕೀಯ ನಿರೂಪಣೆ

ಕಥಾವಸ್ತು ಸರಳವಾಗಿದ್ದರೂ ಕುತೂಹಲವನ್ನು ಉಳಿಸಿಕೊಳ್ಳುವ ಬಗೆಯಲ್ಲಿ, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸರಣಿ ಸಫಲವಾಗುತ್ತದೆ. ಪ್ರತಿಯೊಂದು ಸಂಚಿಕೆಯೂ ಹೊಸ ಅನುಭವ, ಹೊಸ ಸವಾಲು ಮತ್ತು ಮನರಂಜನೆಯ ಅಂಶಗಳನ್ನು ಒಳಗೊಂಡಿದೆ. ಹಾಸ್ಯದ ಜೊತೆಗೆ ಸ್ನೇಹ, ಸ್ನೇಹದೊಂದಿಗೆ ನಂಬಿಕೆ, ನಂಬಿಕೆಯೊಂದಿಗೆ ಸಹಕಾರ ಒಂದರೊಳಗೊಂದು ಬೆಸೆದುಕೊಂಡಿವೆ. ಜೊತೆಗೆ ಕುಟುಂಬ, ಪ್ರೀತಿ, ಸಂಬಂಧಗಳ ಸರಮಾಲೆಯನ್ನೂ ನಾಜೂಕಾಗಿ ಪೋಣಿಸಲಾಗಿದೆ. ನಿರ್ದೇಶನ, ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತವು ಕಥೆಯ ನಿರೂಪಣೆಗೆ ಬೆಂಬಲವಾಗಿ ನಿಂತಿವೆ. ಪಾತ್ರಧಾರಿಗಳ ಅಭಿನಯ ಸಹಜವಾಗಿದ್ದು, ಪ್ರೇಕ್ಷಕರು ಅವರೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಳ್ಳುವಂತೆ ಮಾಡುತ್ತದೆ.

Pritam and Pedro1
ಅರ್ಷದ್ ವಾರ್ಸಿ, ವೀರ್ ಹಿರಾನಿ ಮತ್ತು ರಾಜಕುಮಾರ್ ಹಿರಾನಿ

ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಜಕುಮಾರ್ ಹಿರಾನಿಯವರು ಕತೆ ರಚಿಸಿದ್ದಾರೆ ಮತ್ತು ಸರಣಿಯ ನಿರ್ಮಾಪಕರಾಗಿದ್ದಾರೆ. ಅವರ ಚಿತ್ರಗಳಲ್ಲಿ ಕಾಣುವ ಸರಳ ನಿರೂಪಣೆ, ಮನಮುಟ್ಟುವ ಸಂದೇಶ ಮತ್ತು ನವಿರು ಹಾಸ್ಯದ ಶೈಲಿ ಈ ಸರಣಿಯಲ್ಲಿಯೂ ಕಾಣಿಸುತ್ತದೆ. ಜೊತೆಗೆ ಅವರ ಮಗ ವೀರ್ ಹಿರಾನಿ, ಪ್ರೀತಮ್ ಪಾತ್ರದ ಮೂಲಕ ಮೊದಲ ಬಾರಿಗೆ ಕ್ಯಾಮರಾ ಎದುರಿಸಿ, ಸೈ ಎನಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ಪೆಡ್ರೊ ಪಾತ್ರದಲ್ಲಿ ಅರ್ಷದ್ ವಾರ್ಸಿ, ತಮ್ಮ ಅದ್ಭುತ ಕಾಮಿಡಿ ಟೈಮಿಂಗ್ ಮೂಲಕ ಮನ ಗೆದ್ದಿದ್ದಾರೆ. ಮಾರ್ಟಿನ್ ಎಂಬ ಭಿನ್ನ ಬಗೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಕ್ರಮ್ ಮಸ್ಸಿ, ಗಮನ ಸೆಳೆಯುತ್ತಾರೆ. ಇವರೊಂದಿಗೆ ಕತೆಯ ತಿರುವಿಗೆ ಕಾರಣರಾಗುವ ದುರಂತ ಪಾತ್ರದಲ್ಲಿ ಬೊಮನ್ ಇರಾನಿ ಬಂದುಹೋಗುತ್ತಾರೆ. 

ಆರು ಕಂತುಗಳ ಸರಣಿಯನ್ನು ನಿರ್ದೇಶಿಸಿರುವ ಅವಿನಾಶ್ ಅರುಣ್, ಸೈಬರ್ ಅಪರಾಧದಂತಹ ಗಂಭೀರ ವಿಷಯಕ್ಕೆ ಸ್ನೇಹ, ಹಾಸ್ಯ, ರಹಸ್ಯವನ್ನು ಲೇಪಿಸಿದ್ದಾರೆ. ಭಾವನಾತ್ಮಕ ಬೆಸುಗೆ ಹಾಕಿದ್ದಾರೆ. ಫಿಷಿಂಗ್, ಒಟಿಪಿ ವಂಚನೆ, ಡೀಪ್‌ಫೇಕ್ , ಆನ್‌ಲೈನ್ ಮೋಸಗಳಂತಹ ಇಂದಿನ ಸಮಸ್ಯೆಗಳನ್ನು ಕಥೆಯಲ್ಲಿ ತರುವ ಮೂಲಕ ಸಮಕಾಲೀನಗೊಳಿಸಿದ್ದಾರೆ. ಜೊತೆಗೆ ಸಾಮಾನ್ಯ ಡಾರ್ಕ್ ಕ್ರೈಮ್ ಥ್ರಿಲ್ಲರ್‍‌ಗಳಿಂದ ಭಿನ್ನವಾಗಿರುವಂತೆ ನೋಡಿಕೊಂಡಿದ್ದಾರೆ.

ಹಾಗೆಯೇ ಅಜ್ಜನ ಜೀವನೋತ್ಸಾಹ ಚಿಗುರಿಸುವ ಹಾಡು, ಆ ಹಾಡನ್ನು ಹಾಡುವ ಪೆಡ್ರೊ ಮಡದಿ, ಆಕೆ ಸಂಬಂಧಗಳ ಕುರಿತ, ‘ಸಂಬಂಧಗಳನ್ನು ಕಾಪಾಡಿಕೊಳ್ಳುವ ತಂತ್ರವೇನೆಂದರೆ, ಕೆಲವೊಮ್ಮೆ ನೀವೇ ಕ್ಷಮೆ ಕೇಳಿ, ಕೆಲವೊಮ್ಮೆ ಇತರರನ್ನು ಕ್ಷಮಿಸಿಯೂ ಬಿಡಿ’ ಎಂಬ ಸಂದೇಶ… ನೋಡುಗರ ಎದೆಗಿಳಿಯುತ್ತದೆ, ನೇವರಿಸುತ್ತದೆ, ಸಂಬಂಧಗಳನ್ನು ನವೀಕರಿಸುತ್ತದೆ.

(ಈ ಸರಣಿ Jio Hotstar ನಲ್ಲಿ ಲಭ್ಯವಿದೆ, ಆಸಕ್ತರು ನೋಡಬಹುದು)

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | SIR ರದ್ದತಿ ಆಗ್ರಹಿಸಿ ಸಿಪಿಐ(ಎಂ)ನಿಂದ ಮೇಣದಬತ್ತಿ ಪ್ರತಿಭಟನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ...

ಸಿದ್ದರಾಮಯ್ಯ ‘ಸ್ಟಿಂಗ್’ ವಿವಾದದ ಅಸಲಿ ವೃತ್ತಾಂತವೇನು? ‘ಸತ್ಯಕ್ಕೇ ಜಯ’ ಎಂದು ಮಾಜಿ ಸಿಎಂ ಹೇಳಿದ್ದೇಕೆ?

ಕರ್ನಾಟಕ ರಾಜಕಾರಣದಲ್ಲಿ ಇದೀಗ ‘ಸ್ಟಿಂಗ್ ಆಪರೇಷನ್’ ಹೆಸರಿನಲ್ಲಿ ಹೊಸ ವಿವಾದ ಭುಗಿಲೆದ್ದಿದೆ....

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ...