ಕೋಟಿಗಟ್ಟಲೆ ಹಣ ಕ್ರೀಡಾ ಮೈದಾನದಲ್ಲಿ ಹರಿಯುತ್ತಿರುವಾಗ, ಸಾಮಾನ್ಯ ಕನ್ನಡಿಗನ ಬದುಕು ಹದಗೆಡದಂತೆ ನೋಡಿಕೊಳ್ಳುವ, ವ್ಯವಸ್ಥೆಯನ್ನು ಪ್ರಶ್ನಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೇವಲ ಮೈದಾನದ ಗೆಲುವಿಗೆ ಸಂಭ್ರಮಿಸುವ, ಫ್ರಾಂಚೈಸಿಗಳ ಪರವಾಗಿ ಕಿತ್ತಾಡುವ ಬದಲು, ನಮ್ಮ ಬದುಕಿನ ಹಕ್ಕುಗಳಿಗಾಗಿ, ಸಮಾನತೆಗಾಗಿ ಎಚ್ಚೆತ್ತುಕೊಳ್ಳಬೇಕಾದ ತುರ್ತು ಅಗತ್ಯವಿದೆ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೇವಲ ಒಂದು ಕ್ರೀಡಾಕೂಟವಾಗಿ ಉಳಿದಿಲ್ಲ; ಅದೊಂದು ಬೃಹತ್ ಬಂಡವಾಳಶಾಹಿ ಮಾರುಕಟ್ಟೆಯಾಗಿ, ಜನಸಾಮಾನ್ಯರ ವಾಸ್ತವದ ಬದುಕನ್ನು ಮರೆಮಾಚುವ ಅಸ್ತ್ರವಾಗಿ ಬೆಳೆದು ನಿಂತಿದೆ. ಇತ್ತೀಚೆಗೆ ಕೇವಲ ಎರಡು ಐಪಿಎಲ್ ಫ್ರಾಂಚೈಸಿಗಳಾದ (ಆರ್‌ಸಿಬಿ ಮತ್ತು ಆರ್‌ಆರ್) ಒಟ್ಟು ಮಾರಾಟ ಮೌಲ್ಯ ಬರೋಬ್ಬರಿ 31,500 ಕೋಟಿ ರೂಪಾಯಿಗಳನ್ನು ತಲುಪಿರುವುದು ಕೇವಲ ಆಶ್ಚರ್ಯವಷ್ಟೇ ಅಲ್ಲ, ನಮ್ಮ ಇಡೀ ವ್ಯವಸ್ಥೆಯ ಆದ್ಯತೆಗಳ ಬಗ್ಗೆ ಬೆಚ್ಚಿಬೀಳಿಸುವ ಕಟು ಸತ್ಯವಾಗಿದೆ. ಅಭಿವೃದ್ಧಿಯ ಮೂಲಭೂತ ಪ್ರಶ್ನೆಗಳನ್ನು ಬದಿಗೊತ್ತಿ, ಸಮಾಜವೊಂದು ಕ್ರೀಡಾ ವ್ಯಾಪಾರದ ಬೆನ್ನೇರಿ ಹೊರಟಿರುವುದು ದೊಡ್ಡ ವಿಪರ್ಯಾಸ.
ಈ ಬೃಹತ್ ಕ್ರಿಕೆಟ್ ಮಾರುಕಟ್ಟೆಯ ಗಾತ್ರವನ್ನು ನಮ್ಮ ರಾಜ್ಯದ ಅಭಿವೃದ್ಧಿ ಬಜೆಟ್‌ಗೆ ಹೋಲಿಸಿದರೆ ಆಘಾತಕಾರಿ ಸತ್ಯವೊಂದು ತೆರೆದುಕೊಳ್ಳುತ್ತದೆ. 2026-27ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಇಡೀ ರಾಜ್ಯದ ಅಭಿವೃದ್ಧಿಯ ಜೀವಾಳವಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಗೆ ಮೀಸಲಿಟ್ಟಿರುವುದು ಕೇವಲ 26,559 ಕೋಟಿ ರೂ. ಮಾತ್ರ. ಹಾಗೆಯೇ, ನಾಡಿನ ರೈತರ ಜೀವನಾಡಿಯಾದ ನೀರಾವರಿಗೆ 22,436 ಕೋಟಿ ರೂ. ಹಾಗೂ ನಗರಾಭಿವೃದ್ಧಿ ಮತ್ತು ವಸತಿಗೆ 22,203 ಕೋಟಿ ರೂ. ಒದಗಿಸಲಾಗಿದೆ. ಅಂದರೆ, ಕೋಟ್ಯಂತರ ಜನರ ಬದುಕನ್ನು ಕಟ್ಟಿಕೊಡುವ ಪ್ರಮುಖ ಇಲಾಖೆಗಳ ವಾರ್ಷಿಕ ಅನುದಾನಕ್ಕಿಂತಲೂ ಕೇವಲ ಎರಡು ಕ್ರಿಕೆಟ್ ತಂಡಗಳ ವ್ಯಾಪಾರವೇ ಮಿಗಿಲಾಗಿದೆ!
ಕ್ರೀಡೆಯ ಹೆಸರಿನಲ್ಲಿ ನಡೆಯುತ್ತಿರುವ ಈ ಫ್ರಾಂಚೈಸಿ ಹಾಗೂ ಆಟಗಾರರ ಹರಾಜು ಪ್ರಕ್ರಿಯೆಯು ಆರ್ಥಿಕ ಅಸಮಾನತೆಯ ಅತಿರೇಕವನ್ನು ಬಿಂಬಿಸುತ್ತದೆ. ಆಟಗಾರರನ್ನು ಸಾವಿರಾರು ಕೋಟಿಗಳಿಗೆ ಹರಾಜು ಹಾಕುವ ಈ ವ್ಯವಸ್ಥೆ, ವಾಸ್ತವದಲ್ಲಿ ಕಾರ್ಪೊರೇಟ್ ಕುಳಗಳ ಸಂಪತ್ತು ವೃದ್ಧಿಯ ಒಂದು ಸಾಧನವಷ್ಟೇ. ಮೈದಾನದಲ್ಲಿ ಹರಿಯುವ ಈ ಹಣದ ಪ್ರವಾಹವು, ಸಾಮಾನ್ಯ ಮನುಷ್ಯನ ದೈನಂದಿನ ಹೋರಾಟಗಳನ್ನು ಅಣಕಿಸುವಂತಿದೆ. ಬಂಡವಾಳಶಾಹಿಗಳ ಈ ಆಟದಲ್ಲಿ ಜನರ ಮತ್ತು ಅಭಿಮಾನಿಗಳ ಮುಗ್ಧ ಭಾವನೆಗಳು ಕೇವಲ ಬಿಕರಿಯಾಗುವ ಸರಕುಗಳಾಗಿ ಮಾರ್ಪಟ್ಟಿವೆ.
ಇದೊಂದು ಅತ್ಯಂತ ಅಪಾಯಕಾರಿ ‘ಸಮೂಹ ಸನ್ನಿ’ಯಲ್ಲದೆ ಮತ್ತೇನಲ್ಲ. ಬಡತನ, ನಿರುದ್ಯೋಗ, ಆರ್ಥಿಕ ಅಸಮಾನತೆ, ಬೆಲೆ ಏರಿಕೆಯಂತಹ ನೈಜ ಜ್ವಲಂತ ಸಮಸ್ಯೆಗಳು ಜನರನ್ನು ದಿನನಿತ್ಯ ಕಾಡುತ್ತಿವೆ. ಆದರೆ, ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿರುವ ಇಂತಹ ಬೃಹತ್ ಮನರಂಜನಾ ಮಾರುಕಟ್ಟೆಯು ಜನರ ಮನಸ್ಸನ್ನು ಸಂಪೂರ್ಣವಾಗಿ ಮರಳು ಮಾಡಿ, ಅವರನ್ನು ಮೂರ್ಖರನ್ನಾಗಿಸುತ್ತಿದೆ. ತಮ್ಮ ಹಕ್ಕುಗಳಿಗಾಗಿ ಧ್ವನಿಯೆತ್ತಬೇಕಾದ ಯುವಸಮೂಹ, ಕಾರ್ಪೊರೇಟ್ ಮಾಲೀಕತ್ವದ ತಂಡಗಳ ಗೆಲುವಿಗಾಗಿ ಬೀದಿಬೀದಿಗಳಲ್ಲಿ ಸಂಭ್ರಮಿಸುತ್ತಿರುವುದು ಈ ವ್ಯವಸ್ಥೆ ಹೆಣೆದಿರುವ ಮಾಯಾಜಾಲದ ಯಶಸ್ಸನ್ನು ತೋರಿಸುತ್ತದೆ.
ಇದನ್ನು ಓದಿದ್ದೀರಾ? ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ
ಸಮಾಜವು ತನ್ನ ಮೂಲಭೂತ ಪ್ರಶ್ನೆಗಳನ್ನು, ಹಕ್ಕುಗಳನ್ನು ಮತ್ತು ಅಭಿವೃದ್ಧಿಯ ಚಿಂತನೆಗಳನ್ನು ಮರೆತು, ಕ್ರೀಡೆಯ ಹೆಸರಿನಲ್ಲಿ ಸೃಷ್ಟಿಸಲಾದ ಈ ಭ್ರಮೆಯ ಲೋಕದಲ್ಲಿ ತೇಲುತ್ತಿದೆ. ಹಳ್ಳಿಗಳಿಗೆ ಕುಡಿಯುವ ನೀರಿಲ್ಲ, ಯುವಕರಿಗೆ ಉದ್ಯೋಗವಿಲ್ಲ, ಸರ್ಕಾರಿ ಶಾಲೆ-ಆಸ್ಪತ್ರೆಗಳಲ್ಲಿ ಸರಿಯಾದ ಸೌಲಭ್ಯಗಳಿಲ್ಲ, ನಗರಗಳು ಹಾಗೂ ಹಳ್ಳಿಗಳಲ್ಲಿ ರಸ್ತೆ ಸೇರಿದಂತೆ ಸರಿಯಾದ ಮೂಲಸೌಕರ್ಯಗಳಿಲ್ಲ; ಆದರೆ ಟಿವಿ ಪರದೆಯ ಮೇಲಿನ ಕೋಟಿ ಕೋಟಿ ಹರಾಜಿನ ಅಂಕಿ-ಅಂಶಗಳೇ ಇಂದು ಬಹುದೊಡ್ಡ ಚರ್ಚೆಯ ವಿಷಯವಾಗಿವೆ. ಮೂಲ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಇದಕ್ಕಿಂತ ಅತ್ಯುತ್ತಮ ಅಸ್ತ್ರ ಇನ್ನೊಂದಿಲ್ಲ ಎಂಬಂತೆ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ.
ಕ್ರಿಕೆಟ್ ಒಂದು ಕ್ರೀಡೆಯಾಗಿ ಮನರಂಜನೆ ನೀಡುವುದು ಸಹಜವೇ ಮತ್ತು ಅದು ಮನುಷ್ಯನಿಗೆ ಸ್ವಲ್ಪಮಟ್ಟಿಗೆ ಅಗತ್ಯವೂ ಹೌದು. ಆದರೆ, ಮನರಂಜನೆಯೇ ಬದುಕಿನ ಸರ್ವಸ್ವ ಎಂಬಂತೆ ಬಿಂಬಿತವಾಗುತ್ತಿರುವುದು ಹಾಗೂ ನೈಜ ಸಮಸ್ಯೆಗಳ ಕಡೆಗಣನೆ ಆಗುತ್ತಿರುವುದು ಪ್ರಜ್ಞಾವಂತ ಸಮಾಜದ ಲಕ್ಷಣ ಖಂಡಿತಾ ಅಲ್ಲ. ಐಪಿಎಲ್‌ನಂತಹ ಟೂರ್ನಿಗಳು ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ನೀಡುತ್ತವೆ ಎಂಬ ವಾದವಿದ್ದರೂ, ಅದರ ಹಿಂದಿನ ಆರ್ಥಿಕ ಏಕಸ್ವಾಮ್ಯತೆಯನ್ನು ನಾವು ಮರೆಯುವಂತಿಲ್ಲ. ಇದು ಕೇವಲ ಕ್ರೀಡೆಯಲ್ಲ, ಇದು ಜನರ ಸಮಯ ಮತ್ತು ದುಡ್ಡಿನ ಮೇಲೆ ನಡೆಯುತ್ತಿರುವ ಸಾಂಸ್ಥಿಕ ವ್ಯಾಪಾರ.
ಕೋಟಿಗಟ್ಟಲೆ ಹಣ ಕ್ರೀಡಾ ಮೈದಾನದಲ್ಲಿ ಹರಿಯುತ್ತಿರುವಾಗ, ಸಾಮಾನ್ಯ ಕನ್ನಡಿಗನ ಬದುಕು ಹದಗೆಡದಂತೆ ನೋಡಿಕೊಳ್ಳುವ, ವ್ಯವಸ್ಥೆಯನ್ನು ಪ್ರಶ್ನಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೇವಲ ಮೈದಾನದ ಗೆಲುವಿಗೆ ಸಂಭ್ರಮಿಸುವ, ಫ್ರಾಂಚೈಸಿಗಳ ಪರವಾಗಿ ಕಿತ್ತಾಡುವ ಬದಲು, ನಮ್ಮ ಬದುಕಿನ ಹಕ್ಕುಗಳಿಗಾಗಿ, ಸಮಾನತೆಗಾಗಿ ಎಚ್ಚೆತ್ತುಕೊಳ್ಳಬೇಕಾದ ತುರ್ತು ಅಗತ್ಯವಿದೆ. ಭ್ರಮೆಯ ಲೋಕದಿಂದ ಹೊರಬಂದು, ವಾಸ್ತವಿಕ ಬಜೆಟ್ ಮತ್ತು ಅಭಿವೃದ್ಧಿಯತ್ತ ನಮ್ಮ ದೃಷ್ಟಿ ನೆಡದಿದ್ದರೆ ಭವಿಷ್ಯದಲ್ಲಿ ನಾವೆಲ್ಲರೂ ಈ ಬಂಡವಾಳಶಾಹಿ ಆಟದ ಮೂಕ ಪ್ರೇಕ್ಷಕರಾಗಿಯೇ ಉಳಿಯಬೇಕಾಗುತ್ತದೆ.




