ತಮಿಳುನಾಡಿನ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದೆ. ಒಂದೆಡೆ ಡಿಎಂಕೆ ನೇತೃತ್ವದ ಒಕ್ಕೂಟ ಅಧಿಕಾರವನ್ನು ಉಳಿಸಿಕೊಳ್ಳಬೇಕು ಎನ್ನುವ ಬಯಕೆಯಲ್ಲಿದ್ದರೆ, ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟ ಗೆದ್ದು ಅಧಿಕಾರ ಹಿಡಿಯಬೇಕು ಎಂಬ ಹಪಾಹಪಿಯಲ್ಲಿದೆ. ಈ ನಡುವೆ ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ, ʼದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ʼಗೆ ಸಂದರ್ಶನ ನೀಡಿದ್ದು, ʼನಮ್ಮ ಪಕ್ಷ ಕ್ಷೇತ್ರಗಳಿಗಿಂತ ಸಿದ್ಧಾಂತಕ್ಕೆ ಆದ್ಯತೆ ನೀಡುತ್ತದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೇವಲ 5 ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಸ್ಪರ್ಧಿಸುತ್ತಿದ್ದರೂ, ಬಿಜೆಪಿ ಮೈತ್ರಿಕೂಟವನ್ನು ಸೋಲಿಸುವುದು ನಮ್ಮ ಉದ್ದೇಶ. ಅದಕ್ಕಾಗಿಯೇ ನಾವು ಡಿಎಂಕೆ ಒಕ್ಕೂಟದ ಸೀಟು ಹಂಚಿಕೆಗೆ ಒಪ್ಪಿಕೊಂಡಿದ್ದೇವೆʼ ಎಂದು ಹೇಳಿದ್ದಾರೆ.
ಮೈತ್ರಿಯ ಗೊಂದಲಗಳ ನಡುವೆ ಡಿಎಂಕೆ ನೀಡಿದ ಐದು ಕ್ಷೇತ್ರಗಳಿಗೆ ಸಂಪೂರ್ಣ ತೃಪ್ತಿ ಇದೆಯೆ?
ಅನೇಕ ಹೊಸ ಪಕ್ಷಗಳು ನಮ್ಮ ಒಕ್ಕೂಟವನ್ನು ಸೇರಿಕೊಂಡಿವೆ. ಒಕ್ಕೂಟದಲ್ಲಿ ಈಗ ಸುಮಾರು 26 ಪಕ್ಷಗಳಿವೆ. ಇದು ತಮಿಳುನಾಡು ಕಂಡ ಅತಿದೊಡ್ಡ ಮೈತ್ರಿಕೂಟಗಳಲ್ಲಿ ಒಂದಾಗಿದೆ. ಕೆಲವು ಸಣ್ಣ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ನಮಗೆ ಬೆಂಬಲ ನೀಡಿವೆ. ಆದರೆ, ಆಗ ಆ ಸಣ್ಣ ಪಕ್ಷಗಳಿಗೆ ಸೀಟುಗಳು ದೊರಕಿರಲಿಲ್ಲ. ಈಗ ಆ ಪಕ್ಷಗಳೊಂದಿಗೂ ಸೀಟುಗಳನ್ನು ಹಂಚಿಕೊಳ್ಳಬೇಕಾಗಿದೆ. ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟವನ್ನು ಸೋಲಿಸುವುದು ನಮ್ಮ ಮುಖ್ಯ ಗುರಿಯಾಗಿರುವುದರಿಂದ ನಾವು ಡಿಎಂಕೆ ನೀಡಿದ ಐದು ಕ್ಷೇತ್ರಗಳಿಗೆ ಒಪ್ಪಿಕೊಂಡಿದ್ದೇವೆ. ನಮಗೆ, ಕ್ಷೇತ್ರಗಳ ಸಂಖ್ಯೆಗಿಂತ ರಾಜಕೀಯ ಸಿದ್ಧಾಂತ ಮುಖ್ಯವಾಗಿದೆ.
ಕಡಿಮೆ ಕ್ಷೇತ್ರಗಳು ನಿಮ್ಮ ಪಾಲಿಗೆ ಸಿಕ್ಕಿದ್ದು, ನಿಮ್ಮ ಕಾರ್ಯಕರ್ತರ ಮೇಲೆ ಪರಿಣಾಮ ಬೀರುತ್ತವೆಯೇ?
ನಮ್ಮ ಕಾರ್ಯಕರ್ತರು ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರೀಕ್ಷಿಸಿದ್ದರು. ಡಿಎಂಕೆ ಪಕ್ಷದೊಂದಿಗೆ ಮಾತುಕತೆ ಸಂದರ್ಭದಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಬೇಡಿಕೆ ಮುಂದಿಟ್ಟಿದ್ದೇವು. ನಮ್ಮ ಪಕ್ಷಕ್ಕೆ ಕಳೆದ ಚುನಾವಣೆಯಲ್ಲೇ ಕಡಿಮೆ ಕ್ಷೇತ್ರಗಳನ್ನು ನೀಡಲಾಗಿತ್ತು. ಈ ಬಾರಿ ಅದಕ್ಕಿಂತ ಒಂದು ಕ್ಷೇತ್ರ ಕಡಿಮೆ ನೀಡಿದ್ದು ಸಹಜವಾಗಿ ನೋವುಂಟು ಮಾಡಿತ್ತು. ನಮ್ಮ ಪಕ್ಷ ಸಿದ್ದಾಂತಕ್ಕೆ ಆದ್ಯತೆ ನೀಡುತ್ತದೆ. ಮೊದಲಿಗೆ ಸಣ್ಣ ನಿರಾಸೆ ಉಂಟಾಗಿದ್ದು ನಿಜ. ಆದರೆ, ನಾವು ಡಿಎಂಕೆ ಬಿಟ್ಟುಕೊಟ್ಟ ಐದು ಕ್ಷೇತ್ರಗಳಿಗೆ ಒಪ್ಪಿಕೊಂಡಿದ್ದೇವೆ. ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ. ನಮ್ಮ ಒಕ್ಕೂಟದ ಗೆಲುವಿಗಾಗಿ ತಮ್ಮ ಸಂಪೂರ್ಣ ಶ್ರಮವನ್ನು ವ್ಯಯಿಸುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.
ಐದು ಕ್ಷೇತ್ರಗಳಿಗೆ ಒಪ್ಪಿಕೊಂಡಿದ್ದು ನಿಮ್ಮ ಪಕ್ಷದ ಭವಿಷ್ಯದ ಮೇಲೆ ಪರಿಣಾಮ ಬೀರುವುದಿಲ್ಲವೆ?
ಇಲ್ಲ. ನಮ್ಮಲ್ಲಿ ಎಷ್ಟು ಸಂಸದರು ಅಥವಾ ಶಾಸಕರು ಇದ್ದಾರೆ ಎಂಬುದರ ಆಧಾರದ ಮೇಲೆ ಜನರು ಕಮ್ಯುನಿಸ್ಟ್ ಪಕ್ಷಕ್ಕೆ ಮತಗಳನ್ನು ಚಲಾಯಿಸುವುದಿಲ್ಲ. ಉದಾಹರಣೆಗೆ, 2004 ರಲ್ಲಿ, ನಮ್ಮ ಪಕ್ಷದಲ್ಲಿ 61 ಸಂಸದರಿದ್ದರು, ಕೆಲವು ವರ್ಷಗಳ ಬಳಿಕ, ನಮ್ಮ ಪಕ್ಷದ ಸಂಸದರು ಮತ್ತು ಶಾಸಕರ ಸಂಖ್ಯೆ ಕಡಿಮೆಯಾಯಿತು. ಆದರೆ, ಪಕ್ಷ ಇನ್ನೂ ಸಕ್ರಿಯವಾಗಿದೆ. ಎಂದಿಗೂ ತನ್ನ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ. ನಮ್ಮ ಏಳ್ಗೆ, ನಾವು ಎಷ್ಟು ಜನಪರವಾಗಿ ಇದ್ದೇವೆ ಎನ್ನುವುದರ ಮೇಲೆ ಅವಲಂಬಿಸಿದೆ. ಖಂಡಿತ ಇದು ನಮ್ಮ ಪಕ್ಷದ ಸಿದ್ಧಾಂತವಾಗಲಿ ಅಥವಾ ನಮ್ಮ ಪಕ್ಷದ ಭವಿಷ್ಯಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ.
2021ರ ಚುನಾವಣಾ ಪೂರ್ವದಲ್ಲಿ ಡಿಎಂಕೆ ನೀಡಿದ ಎಲ್ಲಾ ಭರವಸೆಗಳು ಈಡೇರಲಿಲ್ಲ. ಇದು ಚುನಾವಣೆಯಲ್ಲಿ ಪರಿಣಾಮ ಬೀರುತ್ತದೆಯೇ?
ನಮ್ಮ ಒಕ್ಕೂಟ ಸೇರಿದಂತೆ ಭಾರತದಲ್ಲಿ ಯಾವುದೇ ರಾಜಕೀಯ ಪಕ್ಷ ತನ್ನ ಭರವಸೆಗಳನ್ನು ಶೇ.100ರಷ್ಟು ಈಡೇರಿಸಿದ ಉದಾಹರಣೆ ಇಲ್ಲ. ಆದರೆ, ಹೆಚ್ಚಿನ ಭರವಸೆಗಳನ್ನು ಈಡೇರಿಸುವುದು ದೊಡ್ಡ ಸಾಧನೆಯಾಗಿದೆ. ಬಹುತೇಕ ಎಲ್ಲಾ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಕೆಲವು ಆಗದಿರಬಹುದು. ಅನೇಕ ಕಲ್ಯಾಣ ಯೋಜನೆಗಳು ಜನರನ್ನು ತಲುಪಿವೆ. ಉಳಿದ ಭರವಸೆಗಳನ್ನು ಮುಂಬರುವ ವರ್ಷಗಳಲ್ಲಿ ಈಡೇರಿಸಬಹುದು. ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾವು ನಂಬುತ್ತೇವೆ.
ಕಳೆದ ಚುನಾವಣೆಯಲ್ಲಿ ನೀವು ಸ್ಪರ್ಧಿಸಿದ್ದ ಆರು ಕ್ಷೇತ್ರಗಳಲ್ಲಿ 4 ಕ್ಷೇತ್ರಗಳನ್ನು ನಿಮ್ಮ ಪಕ್ಷ ಕಳೆದುಕೊಂಡಿತು. ಈಗ ನಿಮ್ಮ ಯೋಜನೆ ಏನು?
ಕಳೆದ ಚುನಾವಣೆಯಲ್ಲಿ, ನಾವು ಬಲಿಷ್ಠರಾಗಿರುವ ಕ್ಷೇತ್ರಗಳು ನಮಗೆ ಸಿಗಲಿಲ್ಲ. ಕ್ಷೇತ್ರಗಳ ಸಂಖ್ಯೆಯಲ್ಲಿ ನಮಗೆ ತೃಪ್ತಿ ಇಲ್ಲದ ಕಾರಣ ನಾವು ತಡವಾಗಿ ಒಕ್ಕೂಟಕ್ಕೆ ಸೇರಿದೆವು. ನಾವು ಒಪ್ಪುವ ಹೊತ್ತಿಗೆ, ನಮ್ಮ ಹೆಚ್ಚಿನ ಆದ್ಯತೆಯ ಕ್ಷೇತ್ರಗಳನ್ನು ಇತರೆ ಪಕ್ಷಗಳಿಗೆ ಹಂಚಲಾಗಿತ್ತು. ಡಿಎಂಕೆ ಕೂಡ ದುರ್ಬಲವಾಗಿದ್ದ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಸ್ಪರ್ಧಿಸಬೇಕಾಗಿತ್ತು. ಆದ್ದರಿಂದ, ನಮ್ಮ ಪಕ್ಷದ ಬಲವನ್ನು ಹಿಂದಿನ ಫಲಿತಾಂಶಗಳಿಂದ ನಿರ್ಣಯಿಸಬಾರದು. ಈ ಬಾರಿ, ನಾವು ಬಲವಾದ ಕ್ಷೇತ್ರಗಳನ್ನು ಕೇಳಿದ್ದೇವೆ. ಅಲ್ಲದೆ, ಮೈತ್ರಿ ಈಗ ಬಲವಾಗಿದೆ. ಕಲ್ಯಾಣ ಯೋಜನೆಗಳು, ತಮಿಳುನಾಡಿನಲ್ಲಿ ಬಿಜೆಪಿ ವಿರೋಧಿ ಭಾವನೆ ಮತ್ತು ಕೇಂದ್ರದ ವಿರುದ್ಧ ಜನರಲ್ಲಿರುವ ಅಸಹನೆಯಿಂದ ನಮಗೆ ಲಾಭ ಆಗುತ್ತದೆ.
ಹಾಲಿ ಸರ್ಕಾರ ಮರ್ಯಾದಾ ಹತ್ಯೆಗಳನ್ನು ತಡೆಯುವ ಕಠಿಣ ಕಾನೂನನ್ನು ಇನ್ನೂ ಜಾರಿಗೆ ತಂದಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮರ್ಯಾದಾ ಹತ್ಯೆ ಕೇವಲ ಸೂಕ್ತ ಕಾನೂನಿನ ಕೊರತೆ ಮಾತ್ರವಲ್ಲ. ಇದು ಜಾತಿ ಮತ್ತು ಜಾತಿವಾದಿ ಮನಸ್ಥಿತಿಗಳಿಗೆ ಸಂಬಂಧಿಸಿದ ಸಾಮಾಜಿಕ ಸಮಸ್ಯೆಯಾಗಿದೆ. ನಾವು ಇದರ ವಿರುದ್ಧ ಅನೇಕ ಹೋರಾಟ, ಪ್ರತಿಭಟನೆಗಳನ್ನು ಮಾಡಿದ್ದೇವೆ. ನಮ್ಮ ಒತ್ತಡದಿಂದಾಗಿ ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದೆ. ನಿವೃತ್ತ ನ್ಯಾಯಮೂರ್ತಿ ಕೆ.ಎನ್. ಬಾಷಾ ನೇತೃತ್ವದ ಆಯೋಗವನ್ನು ರಚಿಸಲಾಗಿದೆ. ಆಯೋಗ ನೀಡಿದ ವರದಿ ಮತ್ತು ಶಿಫಾರಸ್ಸಿನ ಆಧಾರದ ಮೇಲೆ ಕಾನೂನು ಜಾರಿಗೆ ಬರುತ್ತದೆ ಎಂದು ನಾವು ವಿಶ್ವಾಸದಲ್ಲಿದ್ದೇವೆ.
ಇದನ್ನೂ ಓದಿ : UAPA | ಪೂರ್ವಗ್ರಹೀತ ವರದಿ – ಸತ್ತ ಸತ್ಯ: ಖುಲಾಸೆಯಾದರೂ ಅಳಿಯದ ‘ಭಯೋತ್ಪಾದಕ’ ಕಳಂಕ
ನಿಮ್ಮಂತಹ ಸೈದ್ಧಾಂತಿಕ ಆಧಾರಿತ ಪಕ್ಷಗಳಿಗೆ ಸೇರುವ ಬದಲು ಹೊಸ ಪಕ್ಷಗಳಿಗೆ ಸೇರಲು ಅನೇಕ ಯುವಕರು ಬಯಸುತ್ತಿರುವಂತೆ ಕಾಣಿಸುತ್ತಿದೆಯೇ?
ಕೆಲವರು ರಾಜಕೀಯವನ್ನು ʼಕೊಳಕುʼ ಎಂದು ಭಾವಿಸುತ್ತಾರೆ. ಅನೇಕರು ರಾಜಕೀಯದಿಂದ ದೂರು ಇರುವುದಕ್ಕೆ ಬಯಸುತ್ತಾರೆ. ನಮ್ಮ ಪಕ್ಷ ಸಾಮಾಜಿಕ ಬದಲಾವಣೆ ಮತ್ತು ಸಮಾನತೆಗಾಗಿ ಕೆಲಸ ಮಾಡುತ್ತದೆ. ಬದಲಾವಣೆಗೆ ಸಮಯ ತೆಗೆದುಕೊಳ್ಳುತ್ತದೆ. ಒಂದು ಬದಲಾವಣೆ ತರುವುದಕ್ಕೆ ಬಲವಾದ ಶ್ರಮದ ಅಗತ್ಯವಿದೆ. ನಮ್ಮ ಚಳುವಳಿಯ ಮೂಲಕ ಯುವಕರನ್ನು ನಮ್ಮ ಪಕ್ಷ ಮತ್ತು ಸಿದ್ದಾಂತದೆಡೆಗೆ ಸೆಳೆಯುವುದಕ್ಕೆ ಪ್ರಯತ್ನಿಸುತ್ತಿದ್ದೇವೆ. ಆದರೆ, ಅನೇಕ ಯುವಕರು ತ್ವರಿತ ಯಶಸ್ಸನ್ನು ಬಯಸುತ್ತಾರೆ. ಅದಕ್ಕಾಗಿಯೇ ಅವರು ಹೊಸ ಪಕ್ಷಗಳತ್ತ ಮುಖ ಮಾಡುತ್ತಾರೆ. ನಾವು ಇನ್ನೂ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ ಎಂದು ನಾವು ಒಪ್ಪಿಕೊಳ್ಳುತ್ತೇವೆ.
ಕಾರ್ಮಿಕ ಸಂಘಗಳು ದುರ್ಬಲಗೊಳ್ಳುತ್ತಿವೆ ಮತ್ತು ಯುವಕರು ಸಿದ್ದಾಂತದ ಕಡೆಗೆ ಆಸಕ್ತಿ ತೋರುತ್ತಿಲ್ಲ. ಯುವಕರನ್ನು ಎಡ ಸಿದ್ದಾಂತದ ಕಡೆಗೆ ಸೆಳೆಯಲು ನಿಮ್ಮ ಯೋಜನೆ ಏನು?
ಜಾಗತೀಕರಣದ ನಂತರ, ಅನೇಕ ಬದಲಾವಣೆಗಳು ಸಂಭವಿಸಿವೆ. ಸರ್ಕಾರಗಳು ಮತ್ತು ಕಂಪನಿಗಳು ಕಾರ್ಮಿಕ ಸಂಘಗಳು ಅಗತ್ಯವಿಲ್ಲ ಎಂದು ಹೇಳುತ್ತವೆ. ಕಾರ್ಮಿಕರ ಮೇಲಿನ ಶೋಷಣೆ ಹೆಚ್ಚಾಗಿದೆ. ಕಾರ್ಮಿಕರ ಕೆಲಸದ ಸಮಯ ಹೆಚ್ಚಾಗಿದೆ ಮತ್ತು ಉದ್ಯೋಗ ಭದ್ರತೆ ಕಡಿಮೆಯಾಗಿದೆ. ಐಟಿ ವಲಯದಲ್ಲೂ ಇದೇ ಪರಿಸ್ಥಿತಿ ಇದೆ. ಶೋಷಣೆ ಇರುವವರೆಗೆ ಜನರು ಒಗ್ಗೂಡಿ ಹೋರಾಡುತ್ತಾರೆ. ಅದು ಕಮ್ಯುನಿಸಂನ ಶಕ್ತಿ.
ತಕ್ಷಣದ ಬದಲಾವಣೆ ನಿರೀಕ್ಷಸುವುದಕ್ಕೆ ಆಗದಿದ್ದರೂ, ದಕ್ಷಿಣ ಅಮೆರಿಕಾದ ಸೇರಿದಂತೆ ಅನೇಕ ದೇಶಗಳಲ್ಲಿ ಎಡ ಚಳುವಳಿಗಳು ಬೆಳೆಯುತ್ತಿವೆ. ಈ ಚಳುವಳಿಗಳಿಂದ ಭಾರತದಂತಹ ದೇಶ ಶಾಶ್ವತವಾಗಿ ಹೊರತಾಗಿರಲು ಸಾಧ್ಯವಿಲ್ಲ. ಅಸಮಾನತೆ ಮತ್ತು ಶೋಷಣೆ ಇರುವವರೆಗೆ, ಕಮ್ಯುನಿಸಂ ಪ್ರಸ್ತುತ ಮತ್ತು ಅಗತ್ಯವಾಗಿ ಉಳಿಯುತ್ತದೆ ಎಂದು ನಾವು ಬಲವಾಗಿ ನಂಬುತ್ತೇವೆ.
ಸೌಜನ್ಯ : The New Indian Express
ಕನ್ನಡಕ್ಕೆ : ಶ್ರೀರಾಜ್ ವಕ್ವಾಡಿ




