ಹಾಸನ ಮಣ್ಣಿನ ಹೆಣ್ಣು ಬೇರುಗಳು | ಸಾಹಿತ್ಯ ಕ್ಷೇತ್ರದಲ್ಲಿ ಜಿಲ್ಲೆಯ ಮಹಿಳೆಯರು

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

ಶಿಲ್ಪಕಲೆಯ ತೌರೂರು ಹಾಸನ ಹಲವಾರು ವೈಶಿಷ್ಟ್ಯಗಳ ಜಿಲ್ಲೆ. ಬೇಲೂರು-ಹಳೇಬೀಡನ್ನು ಶಿಲ್ಪಕಲೆಯ ಕೇಂದ್ರವನ್ನಾಗಿಸಿದ, ರಾಣಿ ಶಾಂತಲೆಯ ಹೆಜ್ಜೆ ಗುರುತಿನ ಛಾಪಿರುವ ಪ್ರದೇಶ. ಅಂತೆಯೇ ವಿವಿಧ ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಹಲವಾರು ಸ್ತ್ರೀ ಸಮೂಹವಿದೆ. ಹಾಗೆಯೇ ಸಾಹಿತ್ಯಕ ಕ್ಷೇತ್ರಕ್ಕೂ ಹಾಸನ ಜಿಲ್ಲೆಯಿಂದ ಅಪಾರವಾದ ಕೊಡುಗೆ ಮಹಿಳೆಯರಿಂದ ಸಂದಿದೆ. ಜಿಲ್ಲೆ ರಾಜ್ಯದ ಗಡಿಯನ್ನು ದಾಟಿ ದೇಶದಾದ್ಯಂತ ತಮ್ಮ ಬರಹಗಳ ಮೂಲಕ ಗುರುತಿಸಿಕೊಂಡಿರುವ ಸಾಹಿತ್ಯಕ ಕ್ಷೇತ್ರದ ಮಾನಿನಿಯರಿದ್ದಾರೆ. ಅಂತಹವರ ಪರಿಚಯವನ್ನು ಸಮಗ್ರವಾಗಿ ಒಂದು ಪುಟ್ಟ ಲೇಖನದಲ್ಲಿ ಮಾಡಲು ಸಾಧ್ಯವಿಲ್ಲವಾದ್ದರಿಂದ ಸಂಕ್ಷಿಪ್ತವಾಗಿ ಪರಿಚಯಿಸುತ್ತಿರುವೆ. ಈ ಸಂಕಲನಕ್ಕಾಗಿ ಈಗಾಗಲೇ ಹಲವು ಪ್ರಮುಖರ ಕುರಿತು ಲೇಖನಗಳು ಪ್ರತ್ಯೇಕವಾಗಿಯೇ ದಾಖಲಾಗಿರುವುದರಿಂದ, ಅಂತಹವರ ಕುರಿತು ಇಲ್ಲಿ ಹೆಚ್ಚು ಬರೆದಿಲ್ಲ.

- Advertisement -

ಹಾಸನ ಜಿಲ್ಲೆಯ ಮಹಿಳಾ ಸಾಹಿತಿಗಳು ಬಹುತೇಕ ಕಾದಂಬರಿ, ಕಥೆ, ಲಲಿತ ಪ್ರಬಂಧ, ಅನುವಾದ, ಹಾಸ್ಯ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಅಂಕಣ, ಜೀವನ ಕಥನ, ನಾಟಕ… ಹೀಗೆ ಬಹುತೇಕ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಕೃತಿರಚನೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ರಾಜ್ಯಮಟ್ಟದಲ್ಲೂ ಹೆಸರು ಮಾಡಿರುವವರಲ್ಲಿ ಪ್ರಮುಖವಾಗಿ ಹೆಸರಿಸಬಹುದಾದವರಲ್ಲಿ ಡಾ. ವಿಜಯಾ ದಬ್ಬೆ ಒಬ್ಬರು. ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ವಿಭಾಗದಲ್ಲಿ ವೃತ್ತಿಶೀಲರಾಗಿದ್ದ ಇವರು, ಉತ್ತಮ ಕವಯಿತ್ರಿ, ವಿದ್ವಾಂಸರು, ಸ್ತ್ರೀವಾದಿ ಚಿಂತಕಿ ಅಂತೆಯೇ ವಿಮರ್ಶಕರೂ ಹೌದು. ಇವರ ಇರುತ್ತವೆ(ಕವನಸಂಕಲನ), ಸಂಪ್ರತಿ, ನಯಸೇನಾ(ವಿಮರ್ಶೆ), ಸಾನಂದ ಗಣೇಶ ಸಾಂಗತ್ಯ(ಸಂಪಾದಿತ ಕೃತಿ), ಮೇರಿ ಮೆಕಲಿಯಾಡ್ ಬೆಥನ್, ನಾಗಚಂದ್ರ(ಒಂದು ಅಧ್ಯಯನ), ಗುರುಜಾಡ(ಅನುವಾದಿತ ಕೃತಿ), ಶ್ಯಾಮಲಾ ಸಂಚಯ(ಸಂಪಾದಿತ ಕೃತಿ), ಮಹಿಳೆ ಸಾಹಿತ್ಯ ಸಮಾಜ- ಪ್ರಮುಖವಾದವು. ಹಲವು ಪ್ರಶಸ್ತಿ, ಗೌರವಗಳಿಗಿವರು ಪಾತ್ರರಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಇದನ್ನು ಓದಿದ್ದೀರಾ?: ಸಮಾಜ ಸ್ಪಂದನಶೀಲೆ- ಸೌಭಾಗ್ಯ ಸಿ. 

ಜಿಲ್ಲೆಯ ಹಿರಿಯ ಲೇಖಕಿಯರ ಸಾಲಿನಲ್ಲಿ ಬರುವ ಮತ್ತಷ್ಟು ಲೇಖಕಿಯರಲ್ಲಿ- ಕರಗಡದ ಜಯಲಕ್ಷ್ಮಿಯವರು ದಿವಂಗತ ತ್ರಿವೇಣಿಯವರ ಕಾಲಘಟ್ಟದಲ್ಲಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ಓದುಗರ ಮೆಚ್ಚಿನ ಸಾಂಸಾರಿಕ ಕೃತಿಗಳನ್ನು ರಚಿಸಿ ಜನಮನ್ನಣೆ ಗಳಿಸಿದವರು. ಬೆಂಗಳೂರು ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಲೇ ನಾಲ್ಕು ಕಾದಂಬರಿಗಳ ರಚನೆ, ಹಾಗೆಯೇ ಹಿಂದಿಯಿಂದ ಹಲವಾರು ಕೃತಿಗಳು ಕನ್ನಡಕ್ಕೆ ಅನುವಾದಿತಗೊಂಡಿವೆ. ಕೆಲವು ಸಣ್ಣಕತೆಗಳ ಸಂಕಲನ, ನೇಸರ ನೆರಳು(ಕಾದಂಬರಿ), ನೆನಪು ಸಾಯಲಿಲ್ಲ(ಸಣ್ಣ ಕಥೆಗಳು), ಚಿಂತನ ಮಂಥನ(ಲೇಖನ ಸಂಗ್ರಹ), ದರ್ಬಾರಿ ರಾಗ ಶುಕ್ಲ ಅವರ ಹಿಂದಿ ಕಾದಂಬರಿಯ ಅನುವಾದಿತ ಸಾಹಿತ್ಯ, ಮಹಿಳಾ ದೃಷ್ಟಿ(ಲೇಖನ ಸಂಗ್ರಹ), ಹತ್ತಿರದವರು ಎಂಬ ಪ್ರಬಂಧ ಸಂಕಲನ ಹೀಗೆ ಇವರ ಪ್ರಕಟಿತ ಕೃತಿಗಳ ಸಂಖ್ಯೆ ಮೂವತ್ತೆರಡು. ಇವರ ಅನೇಕ ಕೃತಿಗಳಿಗೆ ಪ್ರಶಸ್ತಿ, ಬಹುಮಾನಗಳು ಸಂದಿವೆ. ಈಗ 97ರ ಹರೆಯದವರಾಗಿರುವ ನುಗ್ಗೇಹಳ್ಳಿ ಪಂಕಜಾ ಅವರು ಇನ್ನೋರ್ವ ಪ್ರಮುಖರು. ಆ ಕಾಲಕ್ಕೇ ಇವರು ಕತೆ, ಕಾದಂಬರಿ, ನಾಟಕ, ಹಾಸ್ಯ, ಪ್ರಬಂಧ, ಅನುವಾದಗಳ ಮೂಲಕ ಓದುಗರ ಮನಗೆದ್ದವರು. ‘ಬರಲೆ ಇನ್ನು ಯಮುನೆ’ ಕಾದಂಬರಿ ‘ಸಿಪಾಯಿ ರಾಮು’ ಹೆಸರಿನಿಂದ, ಗಗನ ಮತ್ತು ಮಲಯಮಾರುತ ಕಾದಂಬರಿಗಳು ಅದೇ ಹೆಸರಿನಿಂದ ಚಲನಚಿತ್ರಗಳಾಗಿರುವುದು ಹೆಮ್ಮೆಯ ವಿಷಯ.

ಇದನ್ನು ಓದಿದ್ದೀರಾ?: ಉದ್ದಿಮೆ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಪಾರ್ವತಿ ಕೃ.ನ.ಮೂರ್ತಿ ಹಿಂದಿಯಿಂದ ಶರತ್‌ಚಂದ್ರರ ಬಿರಾಜ್‌ಬಹು ಕೃತಿಯನ್ನು ಕನ್ನಡಕ್ಕೆ ಗೃಹದೇವಿ ಎಂಬ ಹೆಸರಿನಲ್ಲಿ ಅನುವಾದಿಸುವುದರ ಜೊತೆಗೆ ಕಾದಂಬರಿಗಳು, ಕಥಾಸಂಕಲನ, ಲೇಖನ ಸಂಗ್ರಹಗಳ ರಚನೆಯ ಜೊತೆಜೊತೆಗೆ ಶೇಕ್‌ಸ್ಪಿಯರ್ ಕವಿಯ ಹ್ಯಾಮ್‌ಲೆಟ್ ನಾಟಕವನ್ನು ಮಕ್ಕಳಿಗಾಗಿ ಸಂಗ್ರಹರೂಪವಾಗಿ ನೀಡಿದ್ದಾರೆ. ರೇಡಿಯೊ ನಾಟಕಗಳು ಕೂಡ ಇವರಿಂದ ರಚಿತವಾಗಿವೆ. ಕೋಲಾರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಿಣಿಯಾಗಿ ಸೇವೆ ಸಲ್ಲಿಸಿರುವ ಶ್ರವಣಬೆಳಗೊಳದ ಗುಡಿಬಂಡೆ ಪೂರ್ಣಿಮ ಅವರು ಮೂಲತಃ ಕಾದಂಬರಿಕಾರರೆನಿಸಿದರೂ ಕವನಸಂಕಲನಗಳನ್ನು ರಚಿಸಿ ಸೈ ಎನಿಸಿಕೊಂಡಿದ್ದಾರೆ. ಸುಮಾರು ಇಪ್ಪತ್ತೇಳಕ್ಕೂ ಹೆಚ್ಚಿನ ಕಾದಂಬರಿಗಳನ್ನು ರಚಿಸಿರುವ ಹೊಳೆನರಸೀಪುರದ ಮಂಗಳಾ ಸತ್ಯನ್ ಅವರದ್ದು ಕಾದಂಬರಿ ಕ್ಷೇತ್ರದಲ್ಲಿ ಮೇರು ಹೆಸರು. ಇವರ ಭಾಗ್ಯಜ್ಯೋತಿ, ಮುಗ್ಧಮಾನವ, ಬಿಸಿಲು-ಬೆಳದಿಂಗಳು ಕಾದಂಬರಿಗಳು ಚಲನಚಿತ್ರಗಳಾಗಿವೆ. ಬಿ.ಕೆ.ಸುಬ್ಬಲಕ್ಷ್ಮಿ ಮೂಲತಃ ಹಿಂದೀ ಮೇಡಮ್ ಎಂದೇ ಖ್ಯಾತರಾದವರು. ಇವರು ಮೂರು ಕೃತಿಗಳನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

ಇದನ್ನು ಓದಿದ್ದೀರಾ?: ಮರೆಯಬಾರದ ಮೊದಲ ಶಾಸಕಿ-ದ್ಯಾವಮ್ಮ ಮಂಜಪ್ಪ

ಅಂತೆಯೇ ಎಸಳೂರಿನ ಕಾತ್ಯಾಯಿನಿಯವರು ಭೌತವಿಜ್ಞಾನ ಪ್ರಾಧ್ಯಾಪಕರಾಗಿದ್ದು ಇವರು ಕೆಲವು ಪಠ್ಯಪುಸ್ತಕ ರಚನೆಯಲ್ಲಿ  ದುಡಿದಿದ್ದು, ಕಥೆ, ಕಾದಂಬರಿಗಳನ್ನು ರಚಿಸಿದ್ದಾರೆ. ಸ.ಉಷಾ ಹಾಸನ ಜಿಲ್ಲೆಯ ಮತ್ತೋರ್ವ ಉತ್ತಮ ಕವಯಿತ್ರಿ. ಇವರ ಸಾಹಿತ್ಯ ಕೃಷಿಯು ಪ್ರಶಂಸನಾರ್ಹವಾಗಿದ್ದು ಈ ನೆಲದ ಹಾಡು ಕವನ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ಪತ್ರಕರ್ತೆಯಾಗಿದ್ದವರು, ವಕೀಲೆಯಾಗಿ, ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿರುವ ಬಾನು ಮುಷ್ತಾಕ್ ಅವರದು ಕಥಾ ಪ್ರಪಂಚದಲ್ಲಿ ಅಚ್ಚಳಿಯದ ಹೆಸರು. ಇವರ ಸಣ್ಣಕಥೆಯೊಂದು ‘ಹಸೀನಾ’ ಹೆಸರಿನಲ್ಲಿ ಚಲನಚಿತ್ರವಾಗಿ ರಾಷ್ಟ್ರಪ್ರಶಸ್ತಿ ಗಳಿಸಿದ್ದು ದಾಖಲೆಯೇ ಹೌದು. ಮತ್ತೊಂದೊಡೆ ಇವರಿಗೆ ಸಂದ ಪೆನ್ ಮತ್ತು ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿಗಳು ಇವರನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದಿವೆ. ಹಿರಿಯ ಪತ್ರಕರ್ತೆ ಹಾಸನವಾಣಿಯ ಲೀಲಾವತಿ, ಬೂವನಹಳ್ಳಿಯ ಕೌಶಲ್ಯದೇವಿ, ಅರಸೀಕೆರೆಯ ಬಸವನಹಳ್ಳಿ ನೇತ್ರಾವತಿ ಹಾಲಪ್ಪ, ಹಾಸನ ತಾಲೂಕಿನ ಪೊನ್ನಾಥಪುರದ ಪದ್ಮಾ ಸೀತಾರಾಂ, ಚನ್ನರಾಯಪಟ್ಟಣದ ಕೆ.ಎಲ್.ಭಾಗ್ಯಲಕ್ಷ್ಮಿ, ಸಕಲೇಶಪುರ ತಾಲೂಕಿನ ಚಂಗಡಹಳ್ಳಿಯ ದಿವಂಗತ ಬಿ.ಎಸ್.ಯಶೋಧ, ಚನ್ನರಾಯಪಟ್ಟಣದ ನುಗ್ಗೆಹಳ್ಳಿಯವರಾದ ಲಲಿತ ರಾಜೇಗೌಡ, ಸರಸ್ವತಿ ವೆಂಕಟೇಶ್, ಬೇಲೂರು ತಾಲೂಕಿನ ಯಮಸಂಧಿಯವರಾದ ಜಾನಪದ ತಜ್ಞೆ ವೈ.ಸಿ.ಭಾನುಮತಿ, ಇತಿಹಾಸ ತಜ್ಞೆ ದಿವಂಗತ ವಸು ಮಳಲಿ… ಹೀಗೆ ಸಾಕಷ್ಟು ಲೇಖಕಿಯರನ್ನು ಹೆಸರಿಸಬಹುದಾಗಿದೆ. ಎರಡು ಮೂರು ದಶಕಗಳಿಂದ ಮಹಿಳಾ ಸಾಹಿತಿಗಳ ಸಾಹಿತ್ಯ ರಚನೆ ಅತ್ಯಂತ ಉತ್ತುಂಗಕ್ಕೇರಿತು ಎಂದರೆ ಅತಿಶಯೋಕ್ತಿಯಲ್ಲ. ಇದಕ್ಕೆ 25 ವರ್ಷಗಳ ಹಿಂದೆ ಹುಟ್ಟಿಕೊಂಡ ಜಿಲ್ಲಾ ಲೇಖಕಿಯರ ಬಳಗದ ಕೊಡುಗೆಯೂ ಸಾಕಷ್ಟಿದೆ.

ಇದನ್ನು ಓದಿದ್ದೀರಾ?: ಕಲ್ಲರಳಿ ಹೂವಾದ ಕ್ರೀಡಾಪಟು- ಕೆ.ವಿಜಯಕುಮಾರಿ

ಈ ಮೊದಲೇ ಹೇಳಿದಂತೆ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಇತ್ತೀಚೆಗಿನ ದಶಕಗಳಲ್ಲಿ ತೊಡಗಿಸಿಕೊಂಡಿರುವವರಲ್ಲಿ ಪ್ರಭಾಮಣಿ ನಾಗರಾಜ್, ಶ್ರೀವಿಜಯ ಹಾಸನ(ಹೇಮಾಕ್ಷಮ್ಮ), ಬಿ.ಎಂ.ಭಾರತಿ ಹಾದಿಗೆ, ಡಿ.ಸುಜಲಾದೇವಿ, ಸುಮಾರಮೇಶ್, ಸುಮವೀಣಾ, ಡಾ.ಶಾಂತಾಅತ್ನಿ, ಲಲಿತಾ ಎಸ್., ವನಜಾಸುರೇಶ್, ಕಲಾವತಿ ಮಧುಸೂಧನ್, ಮಮತಾಅರಸೀಕೆರೆ, ನಂದಿನಿಹೆದ್ದುರ್ಗ, ಕೆ.ಟಿ.ಜಯಶ್ರೀ, ಡಾ.ಭವ್ಯನವೀನ್.ಎಚ್.ಸಿ ರಾಜೇಶ್ವರಿಹುಲ್ಲೇನಹಳ್ಳಿ, ಸ.ವೆಂ.ಪೂರ್ಣಿಮಾ, ಜಯಂತಿಚಂದ್ರಶೇಖರ್, ಮಮತಪ್ರಭು, ಪಲ್ಲವಿಬೇಲೂರು, ರೇಖಾಪ್ರಕಾಶ್, ಹೆ.ವಿ.ಶುಭ, ಸುಕನ್ಯಾಮುಕುಂದರಾಜ್, ಸಿ.ಸುವರ್ಣ ಕೆ.ಟಿ.ಶಿವಪ್ರಸಾದ್, ಡಾ.ಶಾಂತಾ ಪಿ.ಆರ್, ರತ್ನಾವತಿ ಪಿ, ಡಾ.ಶಾಲಿನಿ, ಕೆ.ಸಿ.ಗೀತಾ, ಎಂ.ಬಿ.ಗಿರಿಜಾಂಬಿಕಾ ವಿಜಯಲಕ್ಷ್ಮಿ ಭಟ್, ಹರ್ಷಿಯಾಭಾನು, ಸುಷ್ಮ ಸಿಂಧು, ಕುಮುದಾ, ಕುಸುಮ, ಮೇಘನಾ, ನಾಝಿಮಾ ಎಚ್.ಎಂ, ಮನು ಕೆ.ಬಿ… ಹೀಗೆ ಸಾಕಷ್ಟು ಜನರನ್ನು ಹೆಸರಿಸಬಹುದಾಗಿದೆ. ಹಾಸನದವರಾಗಿದ್ದೂ ಹೊರಗೆ ನೆಲೆಸಿ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಮತ್ತಷ್ಟು ಬರಹಗಾರ್ತಿಯರೆಂದರೆ- ಎಂ.ಎಸ್.ವಿಜಯಾ ಹರನ್, ಪದ್ಮಾ ಶ್ರೀರಾಮ್, ಎಂ.ಆರ್.ಕಮಲ, ಮೀನಾ ಮೈಸೂರು, ರತ್ನ ಕಾಳೇಗೌಡ, ಎಚ್.ಆರ್.ಸುಜಾತಾ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಲೋಲಾಕ್ಷಿ, ಗೊರೂರು ಪಂಕಜಾ, ವಿಜಯಲಕ್ಷ್ಮಿ ನುಗ್ಗೇಹಳ್ಳಿ, ಮಧು ಅಕ್ಷರಿ, ಧನಲಕ್ಷ್ಮಿ ದೇವರಾಜ್, ರೇಖಾ ಹೊಸಹಳ್ಳಿ… ಮುಂತಾದವರು.

ಜಿಲ್ಲೆಯ ಗಡಿಯನ್ನು ದಾಟಿ ತಮ್ಮ ಗಟ್ಟಿ ಬರಹದ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವವರಲ್ಲಿ ರೂಪಹಾಸನ, ಶೈಲಜಹಾಸನ್, ಸುಶೀಲಾಸೋಮಶೇಖರ್, ಜ.ನಾ.ತೇಜಶ್ರೀ… ಮುಂತಾದವರು ಹಲವು ವರ್ಷಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು ಜಿಲ್ಲೆಗೆ ಹೆಸರು ತಂದಿರುವವರಲ್ಲಿ ಪ್ರಮುಖರು.

ಇದನ್ನು ಓದಿದ್ದೀರಾ?: ವಿಶೇಷ ಚೇತನರ ಆಶಾಕಿರಣ- ವಿಜಯಕುಮಾರಿ ಮುರಾರಪ್ಪ

ರೂಪ ಹಾಸನ ಕೇವಲ ಲೇಖಕಿಯಾಗಷ್ಟೇ ಗುರುತಿಸಿಕೊಳ್ಳದೆ ಸಮಾಜಮುಖಿಯಾಗಿ ನಿರಂತರವಾಗಿ ತೊಡಗಿಸಿಕೊಂಡಿರುವ ಕ್ರಿಯಾಶೀಲ ಹೋರಾಟಗಾರ್ತಿ. ಮೂಲತಃ ಮೈಸೂರಿನ ಹೆಣ್ಣುಮಗಳಾಗಿ, ಹಾಸನ ಜಿಲ್ಲೆಯ ಸೊಸೆಯಾಗಿ ನೆಲೆಸಿರುವ ಇವರು ‘ಒಂದಿಷ್ಟು ಹಸಿಮಣ್ಣು’, ‘ಬಾಗಿಲಾಚೆಯ ಮೌನ’, ‘ಕಡಲಿಗೆಷ್ಟೊಂದು ಬಾಗಿಲು’, ‘ಗಳಿಗೆ ಬಟ್ಟಲ ತಿರುವುಗಳಲ್ಲಿ’, ‘ತನ್ನಷ್ಟಕ್ಕೆ’, ‘ಒಂದು ನಿಸ್ತಂತುವಿನೆಳೆ’ ಕವನ ಸಂಕಲನಗಳನ್ನು; ‘ಲಹರಿ’, ‘ಹೇಮೆಯೊಡಲಲ್ಲಿ’, ‘ಹೆಣ್ಣೊಳನೋಟ’ ಅಂಕಣಬರಹ ಸಂಕಲನಗಳು; ‘ಮಹಿಳೆ ಮತ್ತು ಆಧುನಿಕತೆಯ ಸವಾಲುಗಳು’, ‘ಮಹಿಳೆಗೆ ಹಕ್ಕುಗಳೇನೋ ಇವೆ ಆದರೆ..?’, ‘ಇವಳ ಭಾರತ’ ಎಂಬ ಮಹಿಳಾ ಚಿಂತನ ಕೃತಿಗಳನ್ನು; ‘ತಾಯ್ನುಡಿಯ ಸಂಕಟಕ್ಕೆ ದನಿಯಾಗಿ’, ‘ಹೆಣ್ಣುಸಿರ ತಲ್ಲಣಗಳು’ ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ- ‘ಕವಿತೆ’ ಸಂಪಾದಿತ ಕೃತಿಗಳು. ‘ಮಹಾಸಂಗ್ರಾಮಿ’ ಎಸ್.ಆರ್.ಹಿರೇಮಠವರ ರಚನಾತ್ಮಕ ಪ್ರಯೋಗಗಳ ಬಾಳ್ಕಥನ; ‘ಭೂಮ್ತಾಯಿಯ ಕಕ್ಷೆಯಲಿ ಪಕ್ಷಿಯಾಗಿ’, ‘ಕೈಚಾಚುತಿವೆ ಕಂದಮ್ಮಗಳು’ ಹೀಗೆ ಒಟ್ಟು 19 ವಿಭಿನ್ನ ಆಯಾಮಗಳ ಕೃತಿಗಳು ಸಾಹಿತ್ಯ ಕ್ಷೇತ್ರಕ್ಕೆ ಸೇರ್ಪಡೆಗೊಂಡಿದ್ದು, ಇವರಿಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಮಹಿಳೆ, ಮಕ್ಕಳು, ಶಿಕ್ಷಣ, ಪರಿಸರ, ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿರುವ ಇವರಿಗೆ ಈ ಕ್ಷೇತ್ರದಲ್ಲಿಯೂ ಹಲವು ಪ್ರತಿಷ್ಠಿತ ಗೌರವಗಳು ಸಂದಿವೆ. ಇವರ ‘ಹೆಣ್ಣು ಕಾಣೆ-ಕಾರಣ ತಿಳಿಯದೇ’ ವಿಜಯ ಕರ್ನಾಟಕ ವಿಶೇಷ ವರದಿಗಾಗಿ ಲಾಡ್ಲಿ ಮುದ್ರಣ ಮಾಧ್ಯಮ ರಾಷ್ಟ್ರ ಪ್ರಶಸ್ತಿಯು 2013-14ರಲ್ಲಿ ಸಂದಿರುವುದು ಹೆಗ್ಗಳಿಕೆ. ಇವರ ರಚನೆಯ ಸಾಕಷ್ಟು ಕವಿತೆ-ಲೇಖನಗಳು ಹಲವಾರು ವಿಶ್ವವಿದ್ಯಾಲಯಗಳ ಶಾಲಾ ಕಾಲೇಜುಗಳಲ್ಲಿ ಪಠ್ಯವಾಗಿವೆ. ಇವರ ಹಲವು ಕವನಗಳು ಮಲಯಾಳಿ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮರಾಠಿ, ಉರ್ದು ಹಾಗೂ ಸ್ಪ್ಯಾನಿಷ್ ಮತ್ತು ಡಚ್ ಭಾಷೆಗಳಿಗೆ ಅನುವಾದಿತಗೊಂಡಿವೆ. ಸಾಹಿತ್ಯಕ-ಸಾಮಾಜಿಕ ಎರಡೂ ರಂಗಗಳಲ್ಲಿ ಅತ್ಯಂತ ಸಮರ್ಪಣಾಭಾವದಿಂದ ತೊಡಗಿಸಿಕೊಂಡಿರುವ ರೂಪ ಹಾಸನ ಅವರು ಹಾಸನ ಜಿಲ್ಲೆಯ ಹೆಮ್ಮೆಯ ಸಾಹಿತಿ.

ಇದನ್ನು ಓದಿದ್ದೀರಾ?: ಭಜನೆ ಕಲಾವಿದೆ- ವಿರಕ್ತೆ ಸಾವಿತ್ರಮ್ಮ

ಶೈಲಜಾ ಹಾಸನ್ ವೃತ್ತಿಯಲ್ಲಿ ಶಿಕ್ಷಕಿಯಾಗಿ, ಸಾಹಿತ್ಯ ರಚನೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ತಮ್ಮ ಕಾದಂಬರಿಗಳ ಮೂಲಕ ರಾಜ್ಯಮಟ್ಟದಲ್ಲಿ ಓದುಗರನ್ನು ಸೆಳೆೆದಿರುವ ಲೇಖಕಿಯರಲ್ಲಿ ಅಗ್ರಗಣ್ಯರು. ಕಾದಂಬರಿ ಅಷ್ಟೇ ಅಲ್ಲದೆ ಕಥಾ ಸಂಕಲನ, ಪ್ರಬಂಧ ಸಂಕಲನ, ಕವನ ಸಂಕಲನ, ಲೇಖನಗಳ ಸಂಕಲನ ಹೀಗೆ ಸಾಹಿತ್ಯದ ವೈವಿಧ್ಯ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಶೈಲಜಾ ಹಾಸನ್ ಅವರ 26 ಕೃತಿಗಳು ಈಗಾಗಲೇ ಹೊರಬಂದಿವೆ. ಇವರ ಅನೇಕ ಕಾದಂಬರಿಗಳು ಪ್ರಸಿದ್ಧ ವಾರಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಅಪಾರ ಓದುಗರ ಮೆಚ್ಚುಗೆ ಪಡೆದಿವೆ. ಇವರ ಸಾಹಿತ್ಯ ಕೃತಿಗಳು ಸಮಾಜಮುಖಿಯಾಗಿದ್ದು, ಸಾಮಾಜಿಕ ಸಮಸ್ಯೆಗಳಾದ ವೃದ್ಧಾಪ್ಯ, ವೃದ್ಧಾಶ್ರಮ, ರೈತರ ಆತ್ಮಹತ್ಯೆ ಮತ್ತು ಅದಕ್ಕೆ ಪರಿಹಾರ, ಸಾವಯವ ಕೃಷಿ, ಅದರ ಮಹತ್ವ, ಶಿಕ್ಷಣದ ಜೊತೆಗೆ ವೃತ್ತಿ ಕೌಶಲ, ಹದಿಹರೆಯದ ಮಕ್ಕಳ ಸಮಸ್ಯೆಗಳು, ಮಾನಸಿಕ ಅಸ್ವಸ್ಥರ ಬಗ್ಗೆ, ಹೆಣ್ಣುಮಕ್ಕಳ ಶಿಕ್ಷಣ, ಭ್ರೂಣಹತ್ಯೆಯಂತಹ ಗಂಭೀರವಾದ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ, ಸರಳ ವಿವಾಹ, ಹೆಣ್ಣುಮಕ್ಕಳ ಸಬಲೀಕರಣ, ಮಂಗಳಮುಖಿಯರ ಜೀವನ… ಹೀಗೆ ಹಲವಾರು ವಿಚಾರಗಳನ್ನು ಕಾದಂಬರಿಗಳ ವಸ್ತುವನ್ನಾಗಿಸಿಕೊಂಡು ಬರವಣಿಗೆ ಮಾಡಿರುವ, ಸಾಮಾಜಿಕ ಬದಲಾವಣೆಗೆ ಸ್ಫೂರ್ತಿದಾಯಕವಾದ ಬರಹಗಳು ಇವರ ಲೇಖನಿಯಿಂದ ಹೊರಹೊಮ್ಮಿದ್ದು ರಾಜ್ಯದ ಹೆಮ್ಮೆಯ ಬರಹಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ‘ಚಿಲ್ಲರೆ ಪುರಾಣ’ ಹಾಸ್ಯ ಸಂಕಲನ, ‘ಮತ್ತೊಂದು ಅಂಗಳ’, ‘ದರ್ಪಣ’, ‘ಹಿಂದಿನ ಬೆಂಚಿನ ಹುಡುಗಿಯರು’, ‘ನಕ್ಸಲೈಟ್’, ‘ನಿಲ್ಲು ನಿಲ್ಲೆ ಪತಂಗ’- ಕಥಾ ಸಂಕಲನಗಳು; ‘ಬೊಗಸೆಯೊಳಗಿನ ಬಿಂದು’- ಕವನಸಂಕಲನ; ‘ಮಂಥನ’, ‘ಮುಸ್ಸಂಜೆಯ ಮಿಂಚು’, ‘ಏನೊ ದಾಹ ಏನೊ ಮೋಹ’, ‘ಇಳಾ’, ‘ಮೋಹ’, ‘ಅಂತರ’, ‘ಹೊಸಬೆಳಗು’- ಕಾದಂಬರಿಗಳು; ‘ಶಿಕ್ಷಣದತ್ತ ಒಂದು ನೋಟ’- ಲೇಖನಗುಚ್ಛ; ‘ಮೌನ ಮೀರಿದ ಹೊತ್ತು’, ‘ಬದುಕಿನ ಬೊಗಸೆಯೊಳಗೆ’- ಅಂಕಣ ಬರಹಗಳ ಸಂಕಲನ; ‘ಮಕ್ಕಳ ಕಥಾಗುಚ್ಛ’- ಸಂಪಾದಿತ ಸಂಕಲನ; ‘ಸಿನಿಮಾ ಟಾಕೀಸು’, ‘ಸವಾರಿಗಳು’,- ಪ್ರಬಂಧ ಸಂಕಲನ; ‘ಹೋರಾಟದ ಹಾದಿಯಲ್ಲಿ ಬೆಳ್ಳಿ ಹೆಜ್ಜೆ’, ‘ಮಕ್ಕಳ ಸಾಹಿತ್ಯ’ ಸಂಪಾದಿತ ಕೃತಿ; ‘ನೆರೆಹೊರೆ’ ಲೇಖನಗಳ ಸಂಗ್ರಹ, ‘ಗಂಗೆಯ ದಡದಲಿ’ ಪ್ರವಾಸಕಥನ… ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಶೈಲಜಾ ಹಾಸನ್ ಅವರ ಮಡಿಲು ತುಂಬಿವೆ. ಹಾಸನ ಜಿಲ್ಲೆಯ 22ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿದ್ದೂ ಹೆಮ್ಮೆಯ ವಿಷಯ. ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಜಿಲ್ಲೆಯ ಲೇಖಕಿಯರನ್ನು ಹುರಿದುಂಬಿಸುವ ದಿಸೆಯಲ್ಲಿ- ‘ಅಭಿನಂದನಾ ಸಾಹಿತ್ಯ ಬಳಗ’ ಎಂಬ ಕ್ರಿಯಾಶೀಲ ಸಂಘಟನೆಯನ್ನು ಹುಟ್ಟುಹಾಕಿ ಸಾಕಷ್ಟು ಆಸಕ್ತರಿಗೆ ವೇದಿಕೆ ನಿರ್ಮಿಸಿಕೊಡುತ್ತಿದ್ದಾರೆ.

ಇದನ್ನು ಓದಿದ್ದೀರಾ?: ಅರಳುವ ಮುನ್ನವೇ ಉದುರಿಬಿದ್ದ ಮೊಗ್ಗು- ವಸು ಮಳಲಿ

ಸುಶೀಲಾ ಸೋಮಶೇಖರ್ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಲೇ ಸಾಹಿತ್ಯಿಕವಾಗಿಯೂ ತೊಡಗಿಸಿಕೊಂಡವರು. ಉತ್ತಮ ವಾಗ್ಮಿಯಾಗಿ, ಬರಹಗಾರ್ತಿಯಾಗಿ, ಸಂಘಟಕಿಯಾಗಿ ಗುರುತಿಸಿಕೊಂಡಿರುವ ಇವರ 20 ಕೃತಿಗಳು ಪ್ರಕಟಗೊಂಡಿವೆ. 2020ರಲ್ಲಿ ಇವರ ಕುರಿತು ‘ಸಹೃದಯಿ’ ಎಂಬ ಅಭಿನಂದನಾ ಗ್ರಂಥವನ್ನು ಸಾಹಿತ್ಯಾಭಿಮಾನಿಗಳು, ಜಿಲ್ಲಾ ಲೇಖಕಿಯರ ಬಳಗ ಹಾಗೂ ವಿದ್ಯಾರ್ಥಿಗಳು ಹೊರತಂದಿದ್ದಾರೆ. ಎರಡು ಕವನಗಳು ಹಿಂದಿ ಭಾಷೆಗೆ ಭಾಷಾಂತರಗೊಂಡಿವೆ. ಇವರು ನಿರರ್ಗಳವಾಗಿ ಮಾತನಾಡುವ ಛಾತಿ ಹೊಂದಿದ್ದು, ನಿವೃತ್ತಿಯ ನಂತರವೂ ಬರವಣಿಗೆಯ ಕಾಯಕ ಮುಂದುವರೆಸಿದ್ದಾರೆ. ಇವರಿಗೆ ರಾಜ್ಯ ಮಟ್ಟದ ಸಮಾವೇಶ, ಸಮಾರಂಭದಲ್ಲಿ ಸಾಹಿತ್ಯ ಹಾಗೂ ಸಮಾಜಸೇವೆಗಾಗಿ ಸನ್ಮಾನ, ಪ್ರಶಸ್ತಿ, ಗೌರವಗಳು ಸಂದಿವೆ. ಇವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ, ಸಕಲೇಶಪುರ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದೆ. 2014ರಲ್ಲಿ ನಡೆದ ಸಕಲೇಶಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು ನಿಜಕ್ಕೂ ಹೆಮ್ಮೆ.

ಇದನ್ನು ಓದಿದ್ದೀರಾ?: ಹಗರೆಯ ಮೂವರು ಮೌಖಿಕ ಕಥೆಗಾರ್ತಿಯರು…

ಜಿಲ್ಲೆಯ ಇನ್ನೋರ್ವ ಪ್ರತಿಭಾವಂತ ಸಾಹಿತಿ ಜ.ನಾ.ತೇಜಶ್ರೀ. ಅವರು ತಮ್ಮ ಸೂಕ್ಷ್ಮ ಬರವಣಿಗೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಎತ್ತರದ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಲಯ, ತಿಳಿಗೊಳ, ಕತ್ತಲೆಯ ಬೆಳಗು, ಅವನರಿವಲ್ಲಿ, ಉಸ್ರುಬುಂಡೆ, ಮಾಗಿ ಕಾಲದ ಸಾಲುಗಳು- ಇವರ ಕವನಸಂಕಲನಗಳು. ಭಾರತ ರಾಷ್ಟ್ರೀಯ ಚಳವಳಿ, ಚೀನೀ ತತ್ವಶಾಸ್ತ್ರದ ಕತೆ, ಕಡಲ ತಡಿಯ ಗುಡಾರ, ಬೆತ್ತಲೆ ಫಕೀರ, ಇರುವೆ ಮತ್ತು ಪಾರಿವಾಳ- ಅನುವಾದಿತ ಕೃತಿಗಳು. ನಿನಾಸಂಗಾಗಿ ವೋಲೆ ಶೋಯಿಂಕಾ ಅವರ ಸಾವು ಮತ್ತು ರಾಜನ ಕುದುರೆ ಸವಾರ ನಾಟಕದ ಅನುವಾದ, ಕವಿ ರವೀಂದ್ರ, ಬೆಟ್ಟದ ಮೇಲಿನ ಬೆಳಕು- ಸಂಪಾದಿತ ಕೃತಿಗಳು. ಸಾಹಿತಿ ಯು.ಆರ್.ಅನಂತಮೂರ್ತಿಯವರ ‘ಸುರಗಿ’ ಆತ್ಮಕತೆಯ ಸಂಯೋಜನೆ ಮತ್ತು ನಿರೂಪಣೆಯನ್ನು ಮಾಡಿದ್ದಾರೆ. ಇತ್ತೀಚೆಗೆ ಅವರ ‘ಜೀವರತಿ’ ಕಾದಂಬರಿ ಹೊರಬಂದಿದೆ. ಇವರಿಗೆ ಸಾಹಿತ್ಯ ಕ್ಷೇತ್ರದ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದು, ಜಿಲ್ಲೆಯ ಭರವಸೆಯ ಬರಹಗಾರ್ತಿಯಾಗಿರುವುದು ಹೆಮ್ಮೆಯ ವಿಷಯವಾಗಿದೆ.

ಇದನ್ನು ಓದಿದ್ದೀರಾ?: ಜಾನಪದ ಕ್ಷೇತ್ರದ ಅನನ್ಯ ಸಾಧಕಿ- ಡಾ. ವೈ.ಸಿ.ಭಾನುಮತಿ

ಹಾಸನ ಜಿಲ್ಲೆ ನಾಡು ನುಡಿಗೆ ಭರವಸೆ ಹುಟ್ಟಿಸುವಂಥ ಹಲವಾರು ಲೇಖಕಿಯರನ್ನು ಕೊಟ್ಟಿದೆ. ಈ ಲೇಖನದ ಮಿತಿಯಲ್ಲಿ ಮತ್ತು ನನ್ನ ಗ್ರಹಿಕೆಯ ಮಿತಿಯಲ್ಲಿ ಇಲ್ಲಿ ಕೆಲವರನ್ನು ದಾಖಲಿಸಿರುವೆ. ಇನ್ನೂ ಅನೇಕ ಲೇಖಕಿಯರು ದಾಖಲೆಯ ಹೊರಗಿರುವ ಸಾಧ್ಯತೆಯಿದೆ. ನಮ್ಮ ಜಿಲ್ಲೆಯ ಅನೇಕ ಬರಹಗಾರ್ತಿಯರ ಕೃತಿಗಳ ವಸ್ತುವಿನಲ್ಲಿ ವಿನೂತನ ದೃಷ್ಟಿ, ಚಿಂತನ-ಮಂಥನಗಳು ವ್ಯಕ್ತಗೊಂಡಿವೆ. ಬದುಕಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನದಲ್ಲಿ ಮಹಿಳೆಯರು ತೊಡಗಿದ್ದಾರೆ. ಲೇಖಕಿಯರ ಬರಹಗಳ ವಸ್ತು ಹಾಗೂ ಶೈಲಿಗಳಲ್ಲಿ ಪ್ರಗತಿಪರ ಧೋರಣೆಯ ಚಿಂತನೆ ಹರಿದಿದೆ. ಸದ್ಯ ಮಹಿಳೆಯರ ಅನುಭವ ಲೋಕ ಇಂದು ವಿಸ್ತಾರಗೊಂಡಿದೆ. ಇದರಿಂದಾಗಿ ತನ್ನ ಹಳೆಯ ಜೀವನ ಮೌಲ್ಯಗಳಿಂದ ಕಳಚಿಕೊಳ್ಳುತ್ತಾ ಹೊಸ ಬೆಳಕಿನತ್ತ ಮುಖ ಮಾಡಿರುವ ಸ್ಪಷ್ಟತೆ ಎದ್ದು ಕಾಣುತ್ತಿದೆ. ಇಂದು ಜಿಲ್ಲಾ ಲೇಖಕಿಯರು ಹಲವಾರು ಪ್ರಚಲಿತ ಸಮಸ್ಯೆಗಳ ಬೆನ್ನು ಹತ್ತಿದ್ದಾರೆ. ಬದುಕಿನ ಮತ್ತು ಸಮಾಜದ ಕೆಲವು ನಿಟ್ಟುಗಳನ್ನಾದರೂ ದರ್ಶಿಸುವ, ಅದನ್ನು ಸಮರ್ಥವಾಗಿ ಚಿತ್ರಿಸುವ ಬರಹಗಳಲ್ಲಿ ತೊಡಗಿದ್ದಾರೆ. ಭಾವನಾ ಪ್ರಧಾನವಾದ ಶೈಲಿಯಲ್ಲಿ ರಚಿತವಾಗಿರುವ ಕತೆ, ಕಾದಂಬರಿ, ಪ್ರಬಂಧಗಳಂತೆಯೇ- ವಸ್ತುವಿನ ವಿಭಿನ್ನತೆ, ಸಮಾಜದ ಅನೇಕ ಸಮಸ್ಯೆಗಳ ದರ್ಶನ ಮಾಡಿಸುವ ಕೃತಿ ರಚನೆ ನಮ್ಮ ಜಿಲ್ಲೆಯ ಲೇಖಕಿಯರಿಗೆ ಸಿದ್ದಿಸಿದೆ. ನಮ್ಮ ಜಿಲ್ಲೆಯ ಲೇಖಕಿಯರಿಗೆ ಮತ್ತೂ ಸಾಕಷ್ಟು ಪ್ರೋತ್ಸಾಹ ದೊರೆಯುವುದರೊಂದಿಗೆ ಅವರ ಅಧ್ಯಯನ, ಅನುಭವ, ಚಿಂತನ, ಅಭಿವ್ಯಕ್ತಿ ಮುಂದುವರಿದಂತೆ ಮತ್ತಷ್ಟು ಉತ್ತಮ ಬರಹಗಾರ್ತಿಯರಾಗುವ ಭರವಸೆಯನ್ನು ಅನೇಕರಲ್ಲಿ ಈಗಾಗಲೇ ಕಾಣುತ್ತಿದ್ದೇವೆ. ತಮ್ಮ ಸತ್ವಯುತ ಬರವಣಿಗೆಯ ಮೂಲಕ ಜಿಲ್ಲೆಯ ಲೇಖಕಿಯರು ಇನ್ನಷ್ಟು ಮಹತ್ವವಾದುದನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಲೆಂದು ಆಶಿಸುತ್ತೇನೆ.  

-ಡಿ. ಸುಜಲಾದೇವಿ                                                                              

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ ಸಿಜೆಪಿ ಪ್ರತಿಭಟನೆ ಬೆನ್ನಲ್ಲೇ ಹೋರಾಟಗಾರರ ವಿರುದ್ಧ ಮೂರು ಎಫ್‌ಐಆರ್ ದಾಖಲು

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಲ್ಲಿ (SIR) ಅಕ್ರಮ ನಡೆದಿದೆ ಎಂದು ಆರೋಪಿಸಿ,...

ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಬೀದರ್ ತಾಲೂಕು ಅಧ್ಯಕ್ಷರಾಗಿ ವೀರೇಂದ್ರಕುಮಾರ್

ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ (6ರಿಂದ 8ನೇ ತರಗತಿ) ಶಿಕ್ಷಕರ ಸಂಘದ...

ಭದ್ರಾವತಿ | ಗಾಂಧಿ ಜಯಂತಿ ಪ್ರಯುಕ್ತ ವಿಶೇಷ ಗ್ರಾಮ ಸಭೆಯಲ್ಲಿ ʻಬಾಲ್ಯ ವಿವಾಹ ಮುಕ್ತ ಅರಳಿಹಳ್ಳಿʼ ಶಪಥ

ಭದ್ರಾವತಿ ತಾಲ್ಲೂಕಿನ ಅರಳಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ಜಯಂತಿ ದಿನಾಚರಣೆಯ...