ಕಾವೇರಿ ಕಣಿವೆಯ ಪ್ರತಿಯೊಂದು ಹನಿ ನೀರನ್ನೂ ವೈಜ್ಞಾನಿಕವಾಗಿ ಲೆಕ್ಕಹಾಕಿ, ನ್ಯಾಯಯುತವಾಗಿ ಹಂಚಿ, ದಕ್ಷವಾಗಿ ಬಳಸಿದಾಗ ಮಾತ್ರ ಪ್ರತಿವರ್ಷ ಮಳೆಗಾಲದಲ್ಲಿ ಮರುಕಳಿಸುವ ಈ ಬಿಕ್ಕಟ್ಟಿಗೆ ದೀರ್ಘಕಾಲೀನ ಪರಿಹಾರ ದೊರೆಯಬಹುದು. ಸದ್ಯ ಜಲಾಶಯಗಳಿಗೆ ಹೆಚ್ಚಿದ ಒಳಹರಿವು ವಿವಾದಕ್ಕೆ ಅಂತ್ಯವಲ್ಲ; ಅದು ಎರಡೂ ರಾಜ್ಯಗಳಿಗೆ ಸಮಸ್ಯೆಯ ಮೂಲವನ್ನು ಅರಿತು ಸಮಗ್ರ ಪರಿಹಾರ ಕಂಡುಕೊಳ್ಳಲು ಪ್ರಕೃತಿ ನೀಡಿರುವ ಮತ್ತೊಂದು ಅವಕಾಶವಾಗಿದೆ
ಕಳೆದ ಕೆಲವು ವಾರಗಳಿಂದ ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೊಮ್ಮೆ ರಾಜಕೀಯ, ಕಾನೂನು ಮತ್ತು ಭಾವನಾತ್ಮಕ ಸಂಘರ್ಷಕ್ಕೆ ಕಾರಣವಾಗಿದ್ದ ಕಾವೇರಿ ನದಿ ನೀರು ಹಂಚಿಕೆಯ ಬಿಕ್ಕಟ್ಟಿಗೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಸದ್ಯಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಂತಾಗಿದೆ. ಕೇರಳದ ವಯನಾಡು, ಕರ್ನಾಟಕದ ಕೊಡಗು ಹಾಗೂ ಕಬಿನಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿರುವುದರಿಂದ ಕಬಿನಿ ಸೇರಿದಂತೆ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ಕಳೆದ 10 ದಿನಗಳ ಹಿಂದೆ ಕೆಆರ್ಎಸ್ ಡ್ಯಾಂನಲ್ಲಿ 82 ಅಡಿ ಇದ್ದ ನೀರಿನ ಮಟ್ಟ ಇದೀಗ 100 ಅಡಿ ದಾಟಿದೆ.
ಕಬಿನಿ ಜಲಾಶಯದ ನೀರಿನ ಲಭ್ಯತೆ ಸುಧಾರಿಸಿದ ಬೆನ್ನಲ್ಲೇ ಕರ್ನಾಟಕವು ತಮಿಳುನಾಡಿನತ್ತ ಮತ್ತೆ ನೀರು ಹರಿಸಲು ಆರಂಭಿಸಿದೆ. ಹೀಗಾಗಿ ಕೆಲವೇ ದಿನಗಳ ಹಿಂದೆ ಪ್ರತಿಭಟನೆ, ಪರಸ್ಪರ ಆರೋಪ, ಸರ್ವಪಕ್ಷ ಸಭೆ, ನ್ಯಾಯಾಲಯದ ಮೊರೆ ಹೋಗುವ ಎಚ್ಚರಿಕೆ ಹಾಗೂ ಎರಡು ರಾಜ್ಯಗಳ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ ಸೃಷ್ಟಿಸಿದ್ದ ಕಾವೇರಿ ಸಮಸ್ಯೆ ಈಗ ಸ್ವಲ್ಪಮಟ್ಟಿಗೆ ತಣ್ಣಗಾಗುತ್ತಿದೆ. ಆದರೆ ಈ ಬೆಳವಣಿಗೆ ಕಾವೇರಿ ವಿವಾದದಕ್ಕೆ ತುಸು ನಿರಾಳತೆಯೇ ಹೊರತು ಅಂತ್ಯವಲ್ಲ.
ಕರ್ನಾಟಕ ಮತ್ತು ತಮಿಳುನಾಡಿನ ಪಾಲಿಗೆ ಕಾವೇರಿ, ಕೇವಲ ಒಂದು ನದಿಯಲ್ಲ. ಎರಡೂ ರಾಜ್ಯಗಳ ಲಕ್ಷಾಂತರ ರೈತರ ಕೃಷಿ ಬದುಕು, ಹಲವು ನಗರಗಳ ಕುಡಿಯುವ ನೀರು, ಜಲವಿದ್ಯುತ್ ಉತ್ಪಾದನೆ, ಕೈಗಾರಿಕಾ ಚಟುವಟಿಕೆಗಳು ಹಾಗೂ ಪ್ರಾದೇಶಿಕ ಆರ್ಥಿಕತೆಯ ಪ್ರಮುಖ ಭಾಗ ಕಾವೇರಿ ನೀರಿನ ಮೇಲೆ ಅವಲಂಬಿತವಾಗಿದೆ. ಕರ್ನಾಟಕದಲ್ಲಿ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ, ರಾಜ್ಯದ ಹಲವು ಜಿಲ್ಲೆಗಳ ಮೂಲಕ ಹರಿದು ತಮಿಳುನಾಡು ಪ್ರವೇಶಿಸುತ್ತದೆ. ಕರ್ನಾಟಕದಲ್ಲಿ ಕೃಷ್ಣರಾಜ ಸಾಗರ, ಕಬಿನಿ, ಹೇಮಾವತಿ ಮತ್ತು ಹಾರಂಗಿ ಜಲಾಶಯಗಳು ಕಾವೇರಿ ಕಣಿವೆಯ ನೀರಿನ ಸಂಗ್ರಹ ಮತ್ತು ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ತಮಿಳುನಾಡಿನಲ್ಲಿ ಮೆಟ್ಟೂರು ಜಲಾಶಯವು ಕಾವೇರಿ ಜಲಾನಯನ ಪ್ರದೇಶದ ಕೃಷಿಗೆ ಜೀವನಾಡಿಯಾಗಿದೆ. ಹೀಗಾಗಿ ಮೇಲ್ದಂಡೆಯ ರಾಜ್ಯವಾದ ಕರ್ನಾಟಕ ತನ್ನ ಜಲಾಶಯಗಳಲ್ಲಿ ಎಷ್ಟು ನೀರು ಸಂಗ್ರಹಿಸಿಕೊಳ್ಳಬೇಕು ಮತ್ತು ಕೆಳದಂಡೆಯ ರಾಜ್ಯವಾದ ತಮಿಳುನಾಡಿಗೆ ಯಾವ ಅವಧಿಯಲ್ಲಿ ಎಷ್ಟು ನೀರು ಹರಿಸಬೇಕು ಎಂಬ ಪ್ರಶ್ನೆಯೇ ಹಲವು ದಶಕಗಳಿಂದ ವಿವಾದದಕ್ಕೆ ಕಾರಣವಾಗಿದೆ.
ಜುಲೈ ಅಂತ್ಯದ ವೇಳೆಗೆ ಜಲಾಶಯಗಳಲ್ಲಿದ್ದ ನೀರಿನ ಪರಿಸ್ಥಿತಿ ಈ ಆತಂಕಕ್ಕೆ ಕಾರಣವಾಗಿತ್ತು. ಜುಲೈ 27ರ ಅಧಿಕೃತ ಅಂಕಿಅಂಶಗಳ ಪ್ರಕಾರ ಕೃಷ್ಣರಾಜ ಸಾಗರ ಜಲಾಶಯದಲ್ಲಿ ಸುಮಾರು 17.13 ಟಿಎಂಸಿ, ಕಬಿನಿಯಲ್ಲಿ ಸುಮಾರು 13.28 ಟಿಎಂಸಿ, ಹೇಮಾವತಿಯಲ್ಲಿ ಸುಮಾರು 22.82 ಟಿಎಂಸಿ ಹಾಗೂ ಹಾರಂಗಿಯಲ್ಲಿ ಸುಮಾರು 7.58 ಟಿಎಂಸಿ ನೀರು ಸಂಗ್ರಹವಾಗಿತ್ತು. ಇದೇ ಅವಧಿಯಲ್ಲಿ ಹಿಂದಿನ ವರ್ಷದ ನೀರಿನ ಸಂಗ್ರಹಕ್ಕೆ ಹೋಲಿಸಿದಾಗ ಕೆಲವು ಜಲಾಶಯಗಳಲ್ಲಿ ಗಮನಾರ್ಹ ಕೊರತೆ ಕಂಡುಬಂದಿತ್ತು. ವಿಶೇಷವಾಗಿ ಕೆಆರ್ಎಸ್ ಮತ್ತು ಹೇಮಾವತಿ ಜಲಾಶಯಗಳ ಸಂಗ್ರಹ ಹಿಂದಿನ ವರ್ಷದ ಇದೇ ಅವಧಿಗಿಂತ ಕಡಿಮೆಯಾಗಿತ್ತು. ಈ ಅಂಕಿಅಂಶಗಳನ್ನು ಆಧರಿಸಿ ಕರ್ನಾಟಕವು ತನ್ನಲ್ಲಿಯೇ ನೀರಿನ ಕೊರತೆ ಇರುವುದರಿಂದ ತಮಿಳುನಾಡಿಗೆ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವುದು ಕಷ್ಟ ಎಂಬ ನಿಲುವನ್ನು ಬಲಪಡಿಸಿತ್ತು.
ಆದರೆ ಕೆಲವೇ ದಿನಗಳ ಮಳೆಯೇ ಕಾವೇರಿ ಕಣಿವೆಯ ಪರಿಸ್ಥಿತಿಯನ್ನು ವೇಗವಾಗಿ ಬದಲಾಯಿಸಿತು. ಕೇರಳದ ವಯನಾಡು ಮತ್ತು ಕರ್ನಾಟಕದ ಕೊಡಗು ಭಾಗಗಳಲ್ಲಿ ಭಾರೀ ಮಳೆಯಾದ ಪರಿಣಾಮ ಕಬಿನಿ ಮತ್ತು ಇತರ ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಏರಿತು. ಕಬಿನಿ ಜಲಾಶಯದ ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆ ಹೆಚ್ಚುವರಿ ನೀರನ್ನು ಹೊರಬಿಡಬೇಕಾದ ಅನಿವಾರ್ಯತೆ ಉಂಟಾಯಿತು. ಈ ನೀರು ನದಿಯ ಮೂಲಕ ತಮಿಳುನಾಡಿನತ್ತ ಹರಿಯತೊಡಗಿತು. ಶನಿವಾರ-ಭಾನುವಾರ ರಾತ್ರಿ ಅವಧಿಯಲ್ಲಿ ಕಬಿನಿಯಿಂದ ತಮಿಳುನಾಡಿನತ್ತ ಸುಮಾರು ನಾಲ್ಕು ಟಿಎಂಸಿಯಷ್ಟು ನೀರು ಹರಿದಿದೆ. ಇದರೊಂದಿಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿರ್ದೇಶಿಸಿದ್ದ ಪ್ರಮಾಣದ ಬಹುಭಾಗವು ಪ್ರಕೃತಿಯ ಸಹಾಯದಿಂದಲೇ ತಮಿಳುನಾಡಿಗೆ ತಲುಪಿದಂತಾಯಿತು. ಪರಿಣಾಮವಾಗಿ ಕರ್ನಾಟಕ ತಕ್ಷಣವೇ ನೀರು ಬಿಡುಗಡೆ ಮಾಡಬೇಕಿದ್ದ ಒತ್ತಡ ಕಡಿಮೆಯಾಯಿತು.
ಕಾವೇರಿ ನೀರು ಹಂಚಿಕೆಯ ವಿಚಿತ್ರ ವಾಸ್ತವ ಇಲ್ಲೇ ಕಂಡುಬರುತ್ತದೆ. ಕೆಲವೇ ದಿನಗಳ ಹಿಂದೆ ನೀರಿಲ್ಲವೆಂದು ಪರಸ್ಪರ ಆರೋಪ ಮಾಡುತ್ತಿದ್ದ ಎರಡೂ ರಾಜ್ಯಗಳು, ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾದ ಕೂಡಲೇ ವಿವಾದದ ತೀವ್ರತೆ ಕಡಿಮೆಯಾಗಿರುವುದು ಗಮನಾರ್ಹ. ಅಂದರೆ ರಾಜಕೀಯ ಸಭೆಗಳಿಗಿಂತಲೂ ಚನ್ನಾಗಿ ಮಳೆ ಬಂದು ನೀರಿನ ಪ್ರಮಾಣ ಹೆಚ್ಚಾದರೆ ಮತ್ತು ಜಲಾಶಯಗಳಿಗೆ ಬರುವ ಒಳಹರಿವು ಹೆಚ್ಚಿದರೆ ಕಾವೇರಿ ವಿವಾದ ನಿಯಂತ್ರಣವಾಗುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಅದೇ, ಮಳೆ ಕೊರತೆಯಾದಾಗ ಕಾನೂನು ಆದೇಶ, ಹಂಚಿಕೆ ಸೂತ್ರ ಮತ್ತು ರಾಜ್ಯಗಳ ಅಗತ್ಯಗಳ ನಡುವೆ ಸಂಘರ್ಷ ಉಂಟಾಗುತ್ತದೆ. ಮಳೆ ಹೆಚ್ಚಾದಾಗ ಜಲಾಶಯಗಳು ತುಂಬಿ ನೀರು ಸಹಜವಾಗಿ ಕೆಳದಂಡೆಗೆ ಹರಿಯುವುದರಿಂದ ಹಂಚಿಕೆಯ ಸಮಸ್ಯೆ ಕೆಲಕಾಲ ಹಿನ್ನೆಲೆಗೆ ಸರಿಯುತ್ತದೆ.
ಆದರೆ, ಈಗ ತಮಿಳುನಾಡಿಗೆ ನೀರು ಹರಿಯುತ್ತಿರುವುದರಿಂದ ವಿವಾದ ಸಂಪೂರ್ಣವಾಗಿ ಬಗೆಹರಿದಿದೆ ಎಂದು ಹೇಳಲಾಗದು. ಪ್ರಸ್ತುತ ಒಳಹರಿವು ಎಷ್ಟು ದಿನ ಮುಂದುವರಿಯುತ್ತದೆ ಎಂಬುದು ಮಳೆಯ ಮೇಲೆ ಅವಲಂಬಿತವಾಗಿದೆ. ಕೊಡಗು ಮತ್ತು ವಯನಾಡಿನಲ್ಲಿ ಮಳೆ ಮುಂದುವರೆದರೆ ಜಲಾಶಯಗಳ ಸಂಗ್ರಹ ಮತ್ತಷ್ಟು ಸುಧಾರಿಸಬಹುದು. ಮಳೆ ಏಕಾಏಕಿ ತಟಸ್ಥವಾದರೆ ಒಳಹರಿವು ಮತ್ತೆ ಕಡಿಮೆಯಾಗಬಹುದು. ಆಗ ಕರ್ನಾಟಕ ತನ್ನ ಕುಡಿಯುವ ನೀರು ಮತ್ತು ನೀರಾವರಿ ಅಗತ್ಯಗಳನ್ನು ಪರಿಗಣಿಸಿ ಹೊರಹರಿವು ಕಡಿಮೆ ಮಾಡಬಹುದು. ಮತ್ತೊಂದೆಡೆ, ತಮಿಳುನಾಡಿನ ಕುರವೈ(ಅಲ್ಪಾವಧಿ ಭತ್ತದ ಬೆಳೆ ಮತ್ತು ನಂತರದ ಸಾಂಬಾ(ದೀರ್ಘ ಕಾಲದ ಭತ್ತದ ಬೆಳೆ) ಬೆಳೆಗಳಿಗೆ ನಿರಂತರವಾಗಿ ನೀರು ಬೇಕಾಗುತ್ತದೆ. ಕೆಲವು ದಿನ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದ ಮಾತ್ರಕ್ಕೆ ಸಂಪೂರ್ಣ ಬೆಳೆ ಹಂಗಾಮಿನ ಅಗತ್ಯ ಪೂರೈಸುವುದಿಲ್ಲ. ಹೀಗಾಗಿ ಮುಂದಿನ ಕೆಲವು ವಾರಗಳು ಅಥವಾ ತಿಂಗಳುಗಳಲ್ಲಿ ಮಳೆಯ ಸೂಚನೆ ವಿವಾದದ ದಿಕ್ಕನ್ನು ನಿರ್ಧರಿಸಲಿದೆ.
ಕಾವೇರಿ ವಿವಾದದ ಕುರಿತು ಚರ್ಚಿಸುವಾಗ ನೀರಿನ ಪ್ರಮಾಣವನ್ನು ಕೇವಲ ಜಲಾಶಯದ ಮಟ್ಟ ಅಥವಾ ಕ್ಯುಸೆಕ್ಗಳ ಲೆಕ್ಕದಲ್ಲಿ ನೋಡಿದರಷ್ಟೇ ಸಾಲದು. ಕರ್ನಾಟಕದ ಮಂಡ್ಯ, ಮೈಸೂರು, ಕೊಡಗು ಮತ್ತು ಹಾಸನ ಜಿಲ್ಲೆಗಳ ರೈತರಿಗೆ ಕಾವೇರಿ ನೀರು ಕೃಷಿಗೆ ಪ್ರಮುಖ ಆಧಾರವಾಗಿದೆ. ಕಬ್ಬು, ಭತ್ತ ಮತ್ತು ಇತರ ನೀರಾವರಿ ಬೆಳೆಗಳನ್ನು ಬೆಳೆಯುವ ರೈತರು ಜಲಾಶಯಗಳಿಂದ ಕಾಲುವೆಗಳಿಗೆ ನೀರು ಹರಿಸುವಂತೆ ಹಾತೊರೆಯುತ್ತಾರೆ. ತಮಿಳುನಾಡಿನ ತಂಜಾವೂರು, ತಿರುವಾರೂರು, ನಾಗಪಟ್ಟಿಣಂ ಮತ್ತು ತಿರುಚಿರಾಪಳ್ಳಿ ಸೇರಿದಂತೆ ಜಲಾನಯನ ಜಿಲ್ಲೆಗಳ ಲಕ್ಷಾಂತರ ರೈತರ ಬದುಕು ಕೂಡ ಇದೇ ನದಿಯ ಮೇಲೆ ಅವಲಂಬಿತವಾಗಿದೆ. ಒಂದೇ ನದಿಯ ನೀರನ್ನು ಅವಲಂಬಿಸಿರುವ ಎರಡು ದೊಡ್ಡ ಕೃಷಿ ಪ್ರದೇಶಗಳ ನಡುವೆ ಮಳೆ ಕೊರತೆಯ ಸಮಯದಲ್ಲಿ ಬೇಡಿಕೆಗಳು ಮುಖಾಮುಖಿಯಾಗುವುದು ಸಹಜ. ಆದರೆ ಈ ಸಂಘರ್ಷವನ್ನು ರಾಜಕೀಯ ಭಾವೋದ್ರೇಕಕ್ಕೆ ಪರಿವರ್ತಿಸಿದಾಗ ರೈತರ ನಿಜವಾದ ಸಮಸ್ಯೆಗಳು ಹಿನ್ನೆಲೆಗೆ ಸರಿದು, ಭಾಷೆ ಮತ್ತು ರಾಜ್ಯಗಳ ನಡುವಿನ ವೈರತ್ವ ಮುನ್ನೆಲೆಗೆ ಬರುವ ಅಪಾಯವಿದೆ.
ಕಾವೇರಿ ವಿವಾದವು ಹಲವು ಬಾರಿ ಕೇವಲ ಸರ್ಕಾರಗಳು ಮತ್ತು ರೈತರ ನಡುವಿನ ಸಮಸ್ಯೆಯಾಗಿ ಉಳಿಯದೆ, ಎರಡು ರಾಜ್ಯಗಳ ಜನರ ನಡುವಿನ ಸಂಬಂಧಗಳ ಮೇಲೂ ಪರಿಣಾಮ ಬೀರುತ್ತದೆ. ಪ್ರತಿಭಟನೆಗಳು, ಬಂದ್ಗಳು, ವಾಹನ ಸಂಚಾರಕ್ಕೆ ಅಡ್ಡಿ, ಚಲನಚಿತ್ರ ಪ್ರದರ್ಶನಗಳ ಸ್ಥಗಿತ ಮತ್ತು ಭಾಷಾ ಆಧಾರಿತ ಆಕ್ರೋಶದಂತಹ ಘಟನೆಗಳು ಹಿಂದೆಯೂ ನಡೆದಿವೆ. ಪ್ರಸ್ತುತ ವಿವಾದದ ಸಂದರ್ಭದಲ್ಲಿಯೂ ತಮಿಳು ಚಲನಚಿತ್ರಗಳ ಪ್ರದರ್ಶನಕ್ಕೆ ಕೆಲವು ಭಾಗಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಇಂತಹ ಬೆಳವಣಿಗೆಗಳು ನೀರಿನ ಮೂಲ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಬದಲಾಗಿ, ಜೀವನೋಪಾಯಕ್ಕಾಗಿ ನೀರನ್ನು ನಿರೀಕ್ಷಿಸುತ್ತಿರುವ ಕರ್ನಾಟಕ ಮತ್ತು ತಮಿಳುನಾಡಿನ ಸಾಮಾನ್ಯ ರೈತರನ್ನು ಪರಸ್ಪರ ವಿರೋಧಿಗಳಂತೆ ಚಿತ್ರಿಸುತ್ತವೆ. ಕಾವೇರಿ ನೀರಿನ ಸಮಸ್ಯೆಯನ್ನು ಎರಡು ಭಾಷಾ ಸಮುದಾಯಗಳ ಸಂಘರ್ಷವನ್ನಾಗಿ ಪರಿವರ್ತಿಸದೆ, ವೈಜ್ಞಾನಿಕ ಜಲ ನಿರ್ವಹಣೆ ಮತ್ತು ನ್ಯಾಯಯುತ ಹಂಚಿಕೆಯ ಪ್ರಶ್ನೆಯಾಗಿ ನೋಡುವುದು ಎರಡೂ ರಾಜ್ಯಗಳ ಜವಾಬ್ದಾರಿಯಾಗಿದೆ.
ಕಾವೇರಿ ನೀರು ಹಂಚಿಕೆಯ ಸದ್ಯದ ಬಿಕ್ಕಟ್ಟಿನ ನಡುವೆಯೇ ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಮತ್ತೆ ಚರ್ಚೆಯ ಕೇಂದ್ರಕ್ಕೆ ಬಂದಿದೆ. ಕರ್ನಾಟಕ ಸರ್ಕಾರದ ವಾದದ ಪ್ರಕಾರ, ಮಳೆ ಹೆಚ್ಚಾದ ಸಂದರ್ಭದಲ್ಲಿ ಕಾವೇರಿಯಲ್ಲಿ ಹರಿದು ತಮಿಳುನಾಡು ಮತ್ತು ನಂತರ ಸಮುದ್ರ ಸೇರುವ ಹೆಚ್ಚುವರಿ ನೀರನ್ನು ಮೇಕೆದಾಟಿನಲ್ಲಿ ಸಂಗ್ರಹಿಸಬಹುದು. ಈ ನೀರನ್ನು ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಕ್ಕೆ ಬಳಸುವುದರ ಜತೆಗೆ, ಮಳೆ ಕೊರತೆಯ ಅವಧಿಯಲ್ಲಿ ತಮಿಳುನಾಡಿಗೆ ನಿಯಂತ್ರಿತವಾಗಿ ನೀರು ಬಿಡುಗಡೆ ಮಾಡಲು ಸಾಧ್ಯವಾಗುತ್ತದೆ ಎಂಬುದು ರಾಜ್ಯದ ವಾದ.
ಕಬಿನಿ ಜಲಾಶಯ ತುಂಬಿ ಕಡಿಮೆ ಅವಧಿಯಲ್ಲೇ ದೊಡ್ಡ ಪ್ರಮಾಣದ ನೀರು ತಮಿಳುನಾಡಿನತ್ತ ಹರಿದಿರುವುದನ್ನು ಉದಾಹರಣೆಯಾಗಿ ಮುಂದಿಟ್ಟುಕೊಂಡು, ಇಂತಹ ಹೆಚ್ಚುವರಿ ನೀರನ್ನು ಸಂಗ್ರಹಿಸಲು ಮೇಕೆದಾಟು ಯೋಜನೆ ಅಗತ್ಯ ಎಂದು ಕರ್ನಾಟಕ ಸರ್ಕಾರ ಹೇಳುತ್ತಿದೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮೇಕೆದಾಟು ಯೋಜನೆಯೇ ಕಾವೇರಿ ನೀರು ಹಂಚಿಕೆ ಸಮಸ್ಯೆಗೆ ದೀರ್ಘಕಾಲೀನ ಪರಿಹಾರವಾಗಬಹುದು ಎಂದು ಪ್ರತಿಪಾದಿಸಿದ್ದಾರೆ. ಆದರೆ ತಮಿಳುನಾಡು, ಮೇಕೆದಾಟು ಯೋಜನೆಯನ್ನು ಅನುಮಾನದಿಂದ ನೋಡುತ್ತಿದೆ.
ಕರ್ನಾಟಕವು ಹೊಸ ಜಲಾಶಯ ನಿರ್ಮಿಸಿದರೆ ಕೆಳದಂಡೆಗೆ ಹರಿಯಬೇಕಾದ ನೀರನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಮತ್ತು ಸಂಕಷ್ಟದ ವರ್ಷಗಳಲ್ಲಿ ತಮಿಳುನಾಡಿಗೆ ನೀರು ಬಿಡದೆ ತಡೆಹಿಡಿಯಬಹುದು ಎಂಬುದು ಅಲ್ಲಿನ ಆತಂಕವಾಗಿದೆ. ಕೆಳದಂಡೆಯ ರಾಜ್ಯದ ಒಪ್ಪಿಗೆಯಿಲ್ಲದೆ ಮೇಲ್ದಂಡೆಯ ರಾಜ್ಯವು ಅಂತಾರಾಜ್ಯ ನದಿಗೆ ಅಡ್ಡಲಾಗಿ ದೊಡ್ಡ ಯೋಜನೆಯನ್ನು ಕೈಗೊಳ್ಳಬಾರದು ಎಂದು ತಮಿಳುನಾಡು ವಾದಿಸುತ್ತಿದೆ. ಕೇಂದ್ರ ಸರ್ಕಾರದ ನಿಲುವಿನ ವಿರುದ್ಧವೂ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದ್ದು, ಅಲ್ಲಿನ ಮುಖ್ಯಮಂತ್ರಿ ಪ್ರಧಾನಮಂತ್ರಿಗೆ ಪತ್ರ ಬರೆದು ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ. ಹೀಗಾಗಿ ಈಗಿನ ಮಳೆಯು ನೀರು ಹಂಚಿಕೆಯ ತಕ್ಷಣದ ಸಮಸ್ಯೆಯನ್ನು ಕಡಿಮೆ ಮಾಡಿದರೂ, ಮೆಕೆದಾಟು ಯೋಜನೆ ವಿಚಾರದಲ್ಲಿ ಹೊಸ ಕಾನೂನು ಮತ್ತು ರಾಜಕೀಯ ಸಂಘರ್ಷ ಮುಂದುವರಿಯುವ ಸಾಧ್ಯತೆ ಇದೆ.
ಈ ಸಮಸ್ಯೆಗೆ ಕೇವಲ ಮತ್ತೊಂದು ಜಲಾಶಯ ನಿರ್ಮಿಸುವುದರಿಂದ ಅಥವಾ ನ್ಯಾಯಾಲಯದ ಆದೇಶದಿಂದಲೇ ಸಂಪೂರ್ಣ ಪರಿಹಾರ ಸಿಗುತ್ತದೆಂದು ಹೇಳಲಾಗದು. ಕಾವೇರಿ ಕಣಿವೆಯ ನೀರಿನ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಬೆಂಗಳೂರಿನ ಜನಸಂಖ್ಯೆ ಮತ್ತು ಕುಡಿಯುವ ನೀರಿನ ಬೇಡಿಕೆ ವೇಗವಾಗಿ ಏರುತ್ತಿದೆ. ಮೈಸೂರು ಸೇರಿದಂತೆ ಇತರ ನಗರಗಳೂ ಕಾವೇರಿ ನೀರನ್ನು ಹೆಚ್ಚು ಅವಲಂಬಿಸುತ್ತಿವೆ. ಎರಡೂ ರಾಜ್ಯಗಳಲ್ಲಿ ನೀರಾವರಿ ಪ್ರದೇಶಗಳು ವಿಸ್ತರಿಸಿರುವುದರಿಂದ ಕೃಷಿಗೆ ಬೇಕಾದ ನೀರಿನ ಪ್ರಮಾಣವೂ ಹೆಚ್ಚಾಗಿದೆ. ಕಬ್ಬು ಮತ್ತು ಭತ್ತದಂತಹ ಹೆಚ್ಚು ನೀರು ಬೇಡುವ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಇದೇ ವೇಳೆ ಮಳೆ ಮಾದರಿಗಳಲ್ಲಿ ಅನಿಶ್ಚಿತತೆ ಹೆಚ್ಚುತ್ತಿದೆ. ದೀರ್ಘಕಾಲ ಮಳೆಯಿಲ್ಲದೆ ಇದ್ದು, ನಂತರ ಕೆಲವೇ ದಿನಗಳಲ್ಲಿ ಭಾರೀ ಮಳೆಯಾಗುವ ಪರಿಸ್ಥಿತಿ ಜಲಾಶಯಗಳ ನಿರ್ವಹಣೆಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತಿದೆ.
ಹವಾಮಾನ ಬದಲಾವಣೆಯ ಪರಿಣಾಮವಾಗಿ ಮಳೆಯ ಪ್ರಮಾಣ ಮಾತ್ರವಲ್ಲದೆ, ಮಳೆ ಸುರಿಯುವ ಕಾಲ, ಪ್ರದೇಶ ಮತ್ತು ತೀವ್ರತೆಯಲ್ಲೂ ಬದಲಾವಣೆ ಸಂಭವಿಸುತ್ತಿದೆ. ಹಿಂದೆ ಹಲವು ವಾರಗಳ ಕಾಲ ಸಮಾನವಾಗಿ ಸುರಿಯುತ್ತಿದ್ದ ಮಳೆ ಈಗ ಕೆಲವೇ ದಿನಗಳಲ್ಲಿ ಅತಿಯಾದ ಪ್ರಮಾಣದಲ್ಲಿ ಸುರಿದು ಪ್ರವಾಹಕ್ಕೆ ಕಾರಣವಾಗಬಹುದು. ನಂತರ ದೀರ್ಘಕಾಲ ಮಳೆ ವಿರಾಮ ಉಂಟಾಗಬಹುದು. ಇಂತಹ ಸ್ಥಿತಿಯಲ್ಲಿ ಜಲಾಶಯಗಳು ಏಕಾಏಕಿ ತುಂಬಿ ಹೆಚ್ಚಿನ ನೀರನ್ನು ಹೊರಬಿಡಬೇಕಾಗುತ್ತದೆ. ಆದರೆ ಕೆಲವೇ ವಾರಗಳ ನಂತರ ಮತ್ತೆ ನೀರಿನ ಕೊರತೆ ಎದುರಾಗಬಹುದು. ಹೀಗಾಗಿ ಕಾವೇರಿ ನೀರಿನ ನಿರ್ವಹಣೆಯನ್ನು ಹಿಂದಿನ ಸರಾಸರಿ ಮಳೆ ಪ್ರಮಾಣದ ಆಧಾರದಲ್ಲಿ ಮಾತ್ರ ಯೋಜಿಸುವುದು ಮುಂದಿನ ದಿನಗಳಲ್ಲಿ ಕಷ್ಟವಾಗಲಿದೆ. ನೈಜ ಸಮಯದ ಮಳೆ ಮಾಹಿತಿ, ಜಲಾಶಯದ ಒಳಹರಿವು, ಬೆಳೆ ಪ್ರದೇಶ, ಮಣ್ಣಿನ ತೇವಾಂಶ ಮತ್ತು ಕುಡಿಯುವ ನೀರಿನ ಬೇಡಿಕೆಯನ್ನು ಆಧರಿಸಿದ ಸಮಗ್ರ ವ್ಯವಸ್ಥೆ ರೂಪಿಸಬೇಕಾಗಿದೆ.
ಎರಡೂ ರಾಜ್ಯಗಳು ನೀರನ್ನು ಪಡೆಯುವ ಹಕ್ಕಿನ ಬಗ್ಗೆ ಮಾತ್ರ ಮಾತನಾಡದೆ, ಲಭ್ಯವಿರುವ ನೀರನ್ನು ಎಷ್ಟು ದಕ್ಷವಾಗಿ ಬಳಸುತ್ತಿವೆ ಎಂಬುದನ್ನೂ ಪರಿಶೀಲಿಸಬೇಕಾಗಿದೆ. ಕೃಷಿಯಲ್ಲಿ ಹಳೆಯ ಮಾದರಿಯ ಪ್ರವಾಹ ನೀರಾವರಿ ಪದ್ಧತಿಯ ಬದಲು ಹನಿ ನೀರಾವರಿ, ತುಂತುರು ನೀರಾವರಿ ಮತ್ತು ನೀರು ಉಳಿಸುವ ಬೆಳೆ ಪದ್ಧತಿಗಳಿಗೆ ಉತ್ತೇಜನ ನೀಡಬೇಕು. ಹೆಚ್ಚು ನೀರು ಅಗತ್ಯವಿರುವ ಬೆಳೆಗಳನ್ನು ನೀರಿನ ಕೊರತೆಯ ಪ್ರದೇಶಗಳಲ್ಲಿ ನಿರ್ಬಂಧಿಸುವ ಅಥವಾ ಪರ್ಯಾಯ ಬೆಳೆಗಳಿಗೆ ಪ್ರೋತ್ಸಾಹಿಸುವ ನೀತಿ ಅಗತ್ಯವಾಗಿದೆ. ಕಾಲುವೆಗಳಲ್ಲಿ ಸೋರಿಕೆ ತಡೆಯುವುದು, ಕೆರೆಗಳನ್ನು ಪುನರುಜ್ಜೀವನಗೊಳಿಸುವುದು, ಮಳೆ ನೀರು ಸಂಗ್ರಹಿಸುವುದು ಮತ್ತು ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೈಗಾರಿಕೆ ಹಾಗೂ ಕೃಷಿಗೆ ಮರುಬಳಕೆ ಮಾಡುವುದರಿಂದ ಕಾವೇರಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು. ಬೆಂಗಳೂರಿನಂತಹ ನಗರಗಳಲ್ಲಿ ಕುಡಿಯುವ ನೀರಿನ ಬಳಕೆಗೆ ಕಠಿಣ ನಿಯಂತ್ರಣ, ಮಳೆ ನೀರು ಸಂಗ್ರಹ ಮತ್ತು ಕೆರೆಗಳ ಸಂರಕ್ಷಣೆ ಜಾರಿಯಾಗದೆ ಕಾವೇರಿಯಿಂದ ಮತ್ತಷ್ಟು ನೀರು ತರಲು ಮುಂದಾಗುವುದು ದೀರ್ಘಕಾಲೀನ ಪರಿಹಾರವಾಗುವುದಿಲ್ಲ.
ನೀರಿನ ಹಂಚಿಕೆ ಕುರಿತು ಜನರಿಗೆ ಪಾರದರ್ಶಕ ಮಾಹಿತಿ ನೀಡುವುದೂ ಅತ್ಯಂತ ಅಗತ್ಯವಾಗಿದೆ. ಜಲಾಶಯಗಳಲ್ಲಿ ಎಷ್ಟು ನೀರಿದೆ, ಎಷ್ಟು ಒಳಹರಿವು ಬರುತ್ತಿದೆ, ಎಷ್ಟು ನೀರನ್ನು ಕುಡಿಯಲು ಕಾಯ್ದಿರಿಸಲಾಗಿದೆ, ನೀರಾವರಿಗೆ ಎಷ್ಟು ಅಗತ್ಯವಿದೆ ಮತ್ತು ತಮಿಳುನಾಡಿಗೆ ಎಷ್ಟು ಹರಿಸಲಾಗಿದೆ ಎಂಬ ಮಾಹಿತಿಯನ್ನು ನಿತ್ಯವೂ ಸಾರ್ವಜನಿಕವಾಗಿ ಪ್ರಕಟಿಸಬೇಕು. ಇಲ್ಲದಿದ್ದಲ್ಲಿ ಮಾಹಿತಿ ಕೊರತೆಯಿಂದ ವದಂತಿಗಳು ಮತ್ತು ರಾಜಕೀಯ ಆರೋಪಗಳಿಗೆ ಕಾರಣವಾಗುತ್ತದೆ. ಒಂದು ರಾಜ್ಯ ಮತ್ತೊಂದು ರಾಜ್ಯಕ್ಕೆ ಅತಿಯಾಗಿ ನೀರು ಬಿಡುತ್ತಿದೆ ಅಥವಾ ಸಂಪೂರ್ಣವಾಗಿ ನೀರು ತಡೆಹಿಡಿದಿದೆ ಎಂಬ ವೈಭವೀಕೃತ ಹೇಳಿಕೆಗಳು ಜನರಲ್ಲಿ ಆಕ್ರೋಶ ಹೆಚ್ಚಿಸುತ್ತವೆ. ವಿಶ್ವಾಸಾರ್ಹ ಮತ್ತು ನೈಜ ಸಮಯದ ಅಂಕಿಅಂಶಗಳು ಲಭ್ಯವಿದ್ದರೆ ಸಾರ್ವಜನಿಕ ಚರ್ಚೆಯನ್ನು ಹೆಚ್ಚು ವಾಸ್ತವಿಕ ನೆಲೆಯಲ್ಲಿ ನಡೆಸಬಹುದು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಕೇವಲ ಆದೇಶ ಹೊರಡಿಸುವ ಸಂಸ್ಥೆಗಳಾಗಿರದೆ, ಎರಡೂ ರಾಜ್ಯಗಳ ನಡುವಿನ ವಿಶ್ವಾಸ ನಿರ್ಮಾಣದ ವೇದಿಕೆಯಾಗಬೇಕು. ನೀರು ಲಭ್ಯವಿರುವ ಸಾಮಾನ್ಯ ವರ್ಷ ಮತ್ತು ಕೊರತೆಯ ವರ್ಷಗಳಿಗೆ ಒಂದೇ ಮಾದರಿಯ ಹಂಚಿಕೆ ಅನ್ವಯಿಸುವ ಬದಲು, ನೈಜ ಲಭ್ಯತೆಯ ಆಧಾರದಲ್ಲಿ ಸಂಕಷ್ಟ ಹಂಚಿಕೆಯ ಸ್ಪಷ್ಟ ಸೂತ್ರ ರೂಪಿಸಬೇಕು ಎಂಬ ಬೇಡಿಕೆ ಬಹುಕಾಲದಿಂದಲೂ ಇದೆ. ಒಟ್ಟು ಲಭ್ಯವಿರುವ ನೀರಿನಲ್ಲಿ ಕೊರತೆ ಉಂಟಾದರೆ ಅದರ ಭಾರವನ್ನು ಕರ್ನಾಟಕ ಮತ್ತು ತಮಿಳುನಾಡು ಯಾವ ಪ್ರಮಾಣದಲ್ಲಿ ಹಂಚಿಕೊಳ್ಳಬೇಕು ಎಂಬುದನ್ನು ಮುಂಚಿತವಾಗಿಯೇ ಸ್ಪಷ್ಟಪಡಿಸಿದರೆ ಪ್ರತಿ ಬಾರಿ ಮಳೆ ಕೊರತೆಯಾದಾಗ ನ್ಯಾಯಾಲಯ, ಪ್ರತಿಭಟನೆ ಮತ್ತು ರಾಜಕೀಯ ಸಂಘರ್ಷದ ಪರಿಸ್ಥಿತಿ ತಗ್ಗಬಹುದು.
ಸದ್ಯ ಕಬಿನಿ ಸೇರಿದಂತೆ ಕಾವೇರಿ ಜಲಾಶಯಗಳಿಗೆ ಒಳಹರಿವು ಹೆಚ್ಚಿರುವುದು ಕರ್ನಾಟಕಕ್ಕೆ ತುಸು ನೆಮ್ಮದಿ ನೀಡಿದೆ. ಕುಡಿಯುವ ನೀರಿನ ಭದ್ರತೆ ಮತ್ತು ರೈತರ ನೀರಾವರಿ ಅಗತ್ಯಗಳ ಕುರಿತು ಇದ್ದ ತಕ್ಷಣದ ಆತಂಕ ಸ್ವಲ್ಪ ಕಡಿಮೆಯಾಗಿದೆ. ತಮಿಳುನಾಡಿಗೂ ನಿರೀಕ್ಷಿತ ನೀರಿನ ಒಂದು ಭಾಗ ತಲುಪಿರುವುದರಿಂದ ಅಲ್ಲಿನ ಕುರವೈ ಬೆಳೆಗೆ ಸಹಾಯವಾಗಲಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲಿಸುವ ಕುರಿತು ಕರ್ನಾಟಕದ ಮೇಲೆ ಇದ್ದ ಒತ್ತಡವೂ ತಾತ್ಕಾಲಿಕವಾಗಿ ಇಳಿದಿದೆ. ಆದರೆ ಇದು ಮಳೆಯ ನೆರವಿನಿಂದ ಸಿಕ್ಕಿರುವ ವಿರಾಮ ಮಾತ್ರ. ಜಲಾಶಯಗಳಿಗೆ ಒಳಹರಿವು ಕಡಿಮೆಯಾದರೆ, ತಮಿಳುನಾಡಿನಿಂದ ಹೆಚ್ಚುವರಿ ನೀರಿನ ಬೇಡಿಕೆ ಬಂದರೆ ಅಥವಾ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ನೀರಾವರಿ ಸಮಸ್ಯೆ ಉಂಟಾದರೆ ವಿವಾದ ಮತ್ತೊಮ್ಮೆ ತೀವ್ರಗೊಳ್ಳಬಹುದು.
ಆದ್ದರಿಂದ ʼಕಾವೇರಿ ಬಿಕ್ಕಟ್ಟಿನ ಶಮನವಲ್ಲ; ಸದ್ಯಕ್ಕೆ ಉದ್ವಿಗ್ನತೆ ಕಡಿಮೆಯಾಗಿದೆ. ಆದರೆ ವಿವಾದದ ಮೂಲ ಸಮಸ್ಯೆಗಳು ಬಗೆಹರಿದಿಲ್ಲ. ಮಳೆ ಹೆಚ್ಚಾಗಿ ನೀರು ಹರಿದಾಗ ಸ್ನೇಹ ಮತ್ತು ಮಳೆ ಕಡಿಮೆಯಾದಾಗ ಸಂಘರ್ಷ ಎಂಬ ಚಕ್ರದಿಂದ ಎರಡೂ ರಾಜ್ಯಗಳು ಹೊರಬರಬೇಕಾಗಿದೆ. ಕಾವೇರಿಯನ್ನು ಒಂದು ರಾಜ್ಯದ ಸ್ವತ್ತು ಅಥವಾ ಮತ್ತೊಂದು ರಾಜ್ಯದ ಹಕ್ಕು ಎಂಬ ಸೀಮಿತ ದೃಷ್ಟಿಯಿಂದ ನೋಡುವ ಬದಲು, ಸಂಪೂರ್ಣ ನದಿ ಕಣಿವೆಯ ಪರಿಸರ ವ್ಯವಸ್ಥೆ ಮತ್ತು ಅದನ್ನು ಅವಲಂಬಿಸಿರುವ ಜನರ ಸಾಮೂಹಿಕ ಸಂಪನ್ಮೂಲವೆಂದು ಪರಿಗಣಿಸಬೇಕು. ಜಲಾಶಯ ನಿರ್ಮಾಣ, ನೀರು ಬಿಡುಗಡೆ ಮತ್ತು ನ್ಯಾಯಾಲಯದ ತೀರ್ಪುಗಳ ಜತೆಗೆ ನೀರಿನ ಮಿತವ್ಯಯ, ಬೆಳೆ ಪದ್ಧತಿಯ ಬದಲಾವಣೆ, ಕೆರೆಗಳ ಪುನಶ್ಚೇತನ, ನಗರ ನೀರು ನಿರ್ವಹಣೆ, ಅರಣ್ಯ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ದೀರ್ಘಕಾಲೀನ ನೀತಿ ರೂಪಿಸಬೇಕು.
ಕೊಡಗು ಮತ್ತು ವಯನಾಡಿನ ಮಳೆ ಈಗ ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಕಾವೇರಿ ಸಂಘರ್ಷಕ್ಕೆ ತಾತ್ಕಾಲಿಕವಾಗಿ ಶಾಂತಿ ತಂದಿದೆ. ಆದರೆ ಈ ಶಾಂತಿಯ ಅವಧಿಯನ್ನು ಎರಡೂ ರಾಜ್ಯಗಳು ಮುಂದಿನ ಸಂಘರ್ಷಕ್ಕೆ ಸಿದ್ಧತೆ ನಡೆಸಲು ಬಳಸುವುದಕ್ಕಿಂತ, ಸಹಕಾರದ ವ್ಯವಸ್ಥೆಯನ್ನು ಬಲಪಡಿಸಲು ಬಳಸಬೇಕಾಗಿದೆ. ರೈತರು, ಜಲತಜ್ಞರು, ಪರಿಸರ ವಿಜ್ಞಾನಿಗಳು, ನಗರ ಯೋಜಕರು ಮತ್ತು ಎರಡೂ ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡ ಶಾಶ್ವತ ಸಮನ್ವಯ ವ್ಯವಸ್ಥೆ ರೂಪಿಸಬೇಕು. ಕಾವೇರಿ ಕಣಿವೆಯ ಪ್ರತಿಯೊಂದು ಹನಿ ನೀರನ್ನೂ ವೈಜ್ಞಾನಿಕವಾಗಿ ಲೆಕ್ಕಹಾಕಿ, ನ್ಯಾಯಯುತವಾಗಿ ಹಂಚಿ, ದಕ್ಷವಾಗಿ ಬಳಸಿದಾಗ ಮಾತ್ರ ಪ್ರತಿವರ್ಷ ಮಳೆಗಾಲದಲ್ಲಿ ಮರುಕಳಿಸುವ ಈ ಬಿಕ್ಕಟ್ಟಿಗೆ ದೀರ್ಘಕಾಲೀನ ಪರಿಹಾರ ದೊರೆಯಬಹುದು. ಸದ್ಯ ಜಲಾಶಯಗಳಿಗೆ ಹೆಚ್ಚಿದ ಒಳಹರಿವು ವಿವಾದಕ್ಕೆ ಅಂತ್ಯವಲ್ಲ; ಅದು ಎರಡೂ ರಾಜ್ಯಗಳಿಗೆ ಸಮಸ್ಯೆಯ ಮೂಲವನ್ನು ಅರಿತು ಸಮಗ್ರ ಪರಿಹಾರ ಕಂಡುಕೊಳ್ಳಲು ಪ್ರಕೃತಿ ನೀಡಿರುವ ಮತ್ತೊಂದು ಅವಕಾಶವಾಗಿದೆ
ಹಿನ್ನೆಲೆ
ಜೂನ್ ಮತ್ತು ಜುಲೈ ತಿಂಗಳ ಬಹುಪಾಲು ಅವಧಿಯಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗಿರಲಿಲ್ಲ. ಮಳೆ ಕೊರತೆಯಿಂದಾಗಿ ಕೆಆರ್ಎಸ್, ಕಬಿನಿ ಮತ್ತು ಹೇಮಾವತಿ ಸೇರಿದಂತೆ ಹಲವು ಜಲಾಶಯಗಳ ಸಂಗ್ರಹದಲ್ಲಿ ಆತಂಕಕಾರಿ ಇಳಿಕೆ ಕಂಡುಬಂದಿತ್ತು. ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದ್ದಂತೆ ಕರ್ನಾಟಕದ ರೈತರು ತಮ್ಮ ಬೆಳೆಗಳಿಗೆ ನೀರು ದೊರೆಯುವುದೇ ಎಂಬ ಆತಂಕಕ್ಕೆ ಒಳಗಾದರು. ಇದೇ ವೇಳೆ ಬೆಂಗಳೂರು, ಮೈಸೂರು ಮತ್ತು ಕಾವೇರಿ ನೀರನ್ನು ಅವಲಂಬಿಸಿರುವ ಇತರ ನಗರಗಳ ಕುಡಿಯುವ ನೀರಿನ ಭದ್ರತೆಯ ಪ್ರಶ್ನೆಯೂ ರಾಜ್ಯ ಸರ್ಕಾರದ ಮುಂದಿತ್ತು.
ರಾಜ್ಯದ ಜನರ ಕುಡಿಯುವ ನೀರು ಮತ್ತು ಬೆಳೆಗಳ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕೆಂದು ರಾಜ್ಯದ ರೈತ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳು ಒತ್ತಾಯಿಸಿದ್ದವು. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನಿಗದಿತ ಪ್ರಮಾಣದ ನೀರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂಬ ನಿಲುವನ್ನು ಕರ್ನಾಟಕ ಸರ್ಕಾರ ಕಾವೇರಿ ನೀರು ನಿಯಂತ್ರಣ ಸಮಿತಿಯ ಮುಂದೆ ಮಂಡಿಸಿತು.
ತಮಿಳುನಾಡಿನ ದೃಷ್ಟಿಯಲ್ಲಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿತ್ತು. ಅಲ್ಲಿನ ಕಾವೇರಿ ಜಲಾನಯನ ಭಾಗದಲ್ಲಿ ಭತ್ತ ಪ್ರಮುಖ ಬೆಳೆಯಾಗಿದ್ದು, ವಿಶೇಷವಾಗಿ ಕುರವೈ(ಅಲ್ಪಾವಧಿ ಭತ್ತದ ಬೆಳೆ) ಹಂಗಾಮಿನ ಕೃಷಿಗೆ ಮೆಟ್ಟೂರು ಜಲಾಶಯದಿಂದ ಸಕಾಲದಲ್ಲಿ ನೀರು ಹರಿಸುವುದು ಅತ್ಯಂತ ಮುಖ್ಯವಾಗಿದೆ. ಕೃಷಿ ಚಟುವಟಿಕೆ ಪ್ರಾರಂಭವಾದ ನಂತರ ನಿರಂತರವಾಗಿ ನೀರು ಸಿಗದಿದ್ದರೆ ನಾಟಿ ಮಾಡಿದ ಬೆಳೆ ಒಣಗುವ ಅಪಾಯವಿರುತ್ತದೆ. ಕರ್ನಾಟಕ ತನ್ನ ಮೇಲ್ದಂಡೆಯ ಜಲಾಶಯಗಳಲ್ಲಿ ನೀರನ್ನು ತಡೆಹಿಡಿಯುತ್ತಿರುವುದರಿಂದ ತಮಿಳುನಾಡಿನ ರೈತರ ಕೃಷಿ ಬದುಕು ಸಂಕಷ್ಟಕ್ಕೆ ಸಿಲುಕುತ್ತಿದೆ ಎಂದು ಅಲ್ಲಿನ ಸರ್ಕಾರ ಮತ್ತು ರೈತ ಸಂಘಟನೆಗಳು ಆರೋಪಿಸಿದವು.
ಕರ್ನಾಟಕವು ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ನೀರಿನ ಪಾಲನ್ನು ಬಿಡುಗಡೆ ಮಾಡಬೇಕು ಎಂದು ತಮಿಳುನಾಡಿನಿಂದ ಒತ್ತಡ ಹೆಚ್ಚಲಾರಂಭಿಸಿತು. ತಿರುಚಿರಾಪಳ್ಳಿ ಸೇರಿದಂತೆ ಕಾವೇರಿ ಜಲಾನಯನ ಭಾಗಗಳಲ್ಲಿ ರೈತರು ಪ್ರತಿಭಟನೆ ನಡೆಸಿ, ತಮ್ಮ ಬೆಳೆಗಳನ್ನು ಉಳಿಸಲು ತಕ್ಷಣ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಇದನ್ನೂ ಓದಿದ್ದೀರಾ? ಬೆಳಗಾವಿ | ಅಂಕಿ-ಅಂಶಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ, ನೈಜ ಪರಿಸ್ಥಿತಿ ಭಿನ್ನ
ಆಗಸ್ಟ್ 3ರಂದು ಕೆಲವು ರೈತರು ಕಾವೇರಿ ದಡದ ಮರಳಿನಲ್ಲಿ ಕುತ್ತಿಗೆಯವರೆಗೆ ಹೂತು ಕುಳಿತು ಪ್ರತಿಭಟನೆ ನಡೆಸಿದ್ದು, ನೀರಿನ ಸಮಸ್ಯೆ ಅಲ್ಲಿನ ಕೃಷಿ ಸಮುದಾಯದಲ್ಲಿಯೂ ಸೃಷ್ಟಿಯಾಗಿರುವ ಆತಂಕದ ತೀವ್ರತೆಯನ್ನು ತೋರಿಸುತ್ತಿದೆ. ಅಲ್ಲದೆ ಕಾವೇರಿ ನ್ಯಾಯಮಂಡಳಿ ತೀರ್ಪಿನ ಪ್ರಕಾರ ಕಾವೇರಿ ನೀರನ್ನು ಸಕಾಲದಲ್ಲಿ ಹರಿಸಲು ಕರ್ನಾಟಕಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್ಗೆ ಸೋಮವಾರ ಅರ್ಜಿ ಸಲ್ಲಿಸಿದೆ.
ಎರಡೂ ರಾಜ್ಯಗಳು ತಮ್ಮದೇ ಆದ ಸಮಸ್ಯೆಗಳು ಮತ್ತು ಅಗತ್ಯಗಳನ್ನು ಮುಂದಿಟ್ಟುಕೊಂಡ ಸಂದರ್ಭದಲ್ಲಿ, ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕವು ಜುಲೈ 29ರಿಂದ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕೆಂದು ಶಿಫಾರಸು ಮಾಡಿತು. ನಂತರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೂ ಈ ನಿರ್ದೇಶನವನ್ನು ಎತ್ತಿಹಿಡಿಯಿತು. ಈ ಪ್ರಮಾಣದಲ್ಲಿ 15 ದಿನ ನೀರು ಬಿಡುಗಡೆ ಮಾಡಿದರೆ ಒಟ್ಟಾರೆ ಸುಮಾರು ನಾಲ್ಕು ಟಿಎಂಸಿ ನೀರು ತಮಿಳುನಾಡಿಗೆ ಹರಿಯಲಿದೆ ಎಂದು ಅಂದಾಜಿಸಲಾಯಿತು. ಕರ್ನಾಟಕ ಸರ್ಕಾರ ಈ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ರಾಜ್ಯದ ಜಲಾಶಯಗಳಲ್ಲಿ ಸಾಕಷ್ಟು ನೀರು ಇಲ್ಲದ ಸಂದರ್ಭದಲ್ಲಿ ಇಂತಹ ನಿರ್ದೇಶನವನ್ನು ಪಾಲಿಸುವುದು ಕಷ್ಟವೆಂದು ಹೇಳಿತು. ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸಲು ಕಾನೂನಾತ್ಮಕ ಆಯ್ಕೆಗಳನ್ನು ಪರಿಶೀಲಿಸುವುದಾಗಿ ತಿಳಿಸಿದ ಸರ್ಕಾರ, ಸರ್ವಪಕ್ಷ ಸಭೆಯನ್ನೂ ಕರೆದಿತ್ತು.
ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ಸಾಮಾನ್ಯವಾಗಿ ಕಾಣಿಸುವ ಒಂದು ಮೂಲಭೂತ ವಿರೋಧಾಭಾಸ ಇಲ್ಲಿಯೂ ಎದುರಾಯಿತು. ತಮಿಳುನಾಡು ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಹಂಚಿಕೆ ಪ್ರಮಾಣದ ಆಧಾರದಲ್ಲಿ ತನ್ನ ಪಾಲಿನ ನೀರನ್ನು ಕೇಳುತ್ತದೆ. ಕರ್ನಾಟಕವು ಜಲಾಶಯಗಳಲ್ಲಿರುವ ವಾಸ್ತವಿಕ ನೀರಿನ ಸಂಗ್ರಹ, ಆ ವರ್ಷ ಸುರಿದ ಮಳೆ, ಕುಡಿಯುವ ನೀರಿನ ಅಗತ್ಯ ಮತ್ತು ರಾಜ್ಯದ ರೈತರ ಬೆಳೆ ಪರಿಸ್ಥಿತಿಯನ್ನು ಪರಿಗಣಿಸಬೇಕು ಎಂದು ವಾದಿಸುತ್ತದೆ. ಸಾಮಾನ್ಯ ಮಳೆಯ ವರ್ಷಗಳಲ್ಲಿ ಈ ಎರಡು ನಿಲುವುಗಳ ನಡುವಿನ ಅಂತರ ಹೆಚ್ಚು ಕಾಣಿಸದಿರಬಹುದು. ಆದರೆ ಮಳೆ ಕೊರತೆಯ ವರ್ಷಗಳಲ್ಲಿ ಅಥವಾ ಮುಂಗಾರು ತಡವಾದಾಗ ಕಾನೂನಿನಲ್ಲಿ ನಿಗದಿಯಾಗಿರುವ ಹಂಚಿಕೆ ಮತ್ತು ಜಲಾಶಯಗಳಲ್ಲಿ ನಿಜವಾಗಿ ಲಭ್ಯವಿರುವ ನೀರಿನ ನಡುವೆ ದೊಡ್ಡ ವ್ಯತ್ಯಾಸ ಉಂಟಾಗುತ್ತದೆ. ಆಗಲೇ ಕಾವೇರಿ ವಿವಾದ ರಾಜಕೀಯ ಸಂಘರ್ಷವಾಗಿ ರೂಪುಗೊಳ್ಳುತ್ತದೆ.




