ಆರ್.ಎಸ್.ಎಸ್. ಗೆ ಗುರುದಕ್ಷಿಣೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ಹರಿದುಬರುತ್ತದೆ. ದೇಶ-ವಿದೇಶಗಳಿಂದ ಬರುವ ಈ ನಿಧಿ ಯಾರ ಖಾತೆಗೆ ಜಮೆಯಾಗುತ್ತದೆ? ಇದರ ಆಡಿಟ್ ವರದಿ ಎಲ್ಲಿದೆ? ಇಷ್ಟು ದೊಡ್ಡ ಮಟ್ಟದ ಆರ್ಥಿಕ ಸಾಮ್ರಾಜ್ಯಕ್ಕೆ ಯಾವುದೇ ತೆರಿಗೆ ಅಥವಾ ಕಾನೂನಿನ ನಿಗಾ ಇಲ್ಲದಿರುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಚಾರವಲ್ಲವೇ? ಎಲ್ಲೆಲ್ಲಿಂದ ರೊಕ್ಕ ಬರುತ್ತದೆ ಮತ್ತು ಅದು ಎಲ್ಲೆಲ್ಲಿಗೆ ಬಳಕೆಯಾಗುತ್ತದೆ ಎಂಬುದು ದೇಶದ ಜನರಿಗೆ ತಿಳಿಯಲೇಬಾರದೇ?
ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಇಂದು ಬಲವಾಗಿ ಕೇಳಿಬರುತ್ತಿರುವ ಪ್ರಶ್ನೆಯೊಂದಿದೆ. ಹಿರಿಯ ನಾಯಕ ಬಿ. ಕೆ. ಹರಿಪ್ರಸಾದ್ ಸೇರಿದಂತೆ ಹಲವರು ಆರ್.ಎಸ್.ಎಸ್. (ರಾಷ್ಟ್ರೀಯ ಸ್ವಯಂಸೇವಕ ಸಂಘ) ಸಂಸ್ಥೆಯನ್ನು ಕಾನೂನುಬದ್ಧವಾಗಿ ನೋಂದಣಿ (ರಿಜಿಸ್ಟ್ರೇಷನ್) ಮಾಡಲು ನಿಮಗಿರುವ ತೊಂದರೆಯಾದರೂ ಏನು ಎಂದು ಕೇಳುತ್ತಿದ್ದಾರೆ. ಈ ಪ್ರಶ್ನೆ ಕೇವಲ ರಾಜಕೀಯ ಕೆಸರೆರಚಾಟವಲ್ಲ; ಇದು ಈ ದೇಶದ ಸಂವಿಧಾನ, ಪಾರದರ್ಶಕತೆ ಮತ್ತು ಹನ್ನೆರಡನೇ ಶತಮಾನದ ಬಸವಾದಿ ಶರಣರು ಪ್ರತಿಪಾದಿಸಿದ ಸಮಾನತೆಯ ಆಶಯದ ನೇರ ಮುಖಾಮುಖಿ.
ಇವತ್ತು ದೇಶದ ಮೂಲೆ ಮೂಲೆಯಲ್ಲಿರುವ ಬಸವ ಪರ ಸಂಘಟನೆಗಳು, ಅಂಬೇಡ್ಕರ್ ವಾದಿ ಸಂಘಟನೆಗಳು, ಬುದ್ಧನ ಶಾಂತಿ ಮಾರ್ಗದ ಸಂಸ್ಥೆಗಳು, ಸಣ್ಣಪುಟ್ಟ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಕಾನೂನಿಗೆ ಗೌರವ ಕೊಟ್ಟು ಸೊಸೈಟಿ ಆಕ್ಟ್ ಅಡಿಯಲ್ಲಿ ನೊಂದಣಿ ಮಾಡಿಕೊಂಡಿವೆ. ತಮ್ಮ ಆದಾಯ, ಖರ್ಚು-ವೆಚ್ಚ, ಲೆಕ್ಕಪರಿಶೋಧನೆ (Audit) ಎಲ್ಲವನ್ನೂ ಸರ್ಕಾರದ ಮುಂದೆ ಇಡುತ್ತಿವೆ. ಕಾನೂನಿನ ಚೌಕಟ್ಟಿಗೆ ತಲೆಬಾಗುವುದು ಈ ದೇಶದ ಪ್ರತಿಯೊಬ್ಬ ಪ್ರಜೆಯ ಮತ್ತು ಸಂಸ್ಥೆಯ ಆದ್ಯ ಕರ್ತವ್ಯ ಎಂದು ಈ ಸಂಘಟನೆಗಳು ನಂಬಿವೆ. ಆದರೆ, ಶತಮಾನದ ಇತಿಹಾಸವಿದೆ ಎಂದು ಹೇಳಿಕೊಳ್ಳುವ, ದೇಶದ ಅಧಿಕಾರದ ಚುಕ್ಕಾಣಿಯನ್ನೇ ನಿಯಂತ್ರಿಸುವ ಶಕ್ತಿಯಾಗಿ ಬೆಳೆದಿರುವ ಆರ್.ಎಸ್.ಎಸ್. ಮಾತ್ರ ಇವತ್ತಿಗೂ ಒಂದು ಅಧಿಕೃತ ನೋಂದಾಯಿತ ಸಂಸ್ಥೆಯಾಗಿ ತನ್ನನ್ನು ಗುರುತಿಸಿಕೊಳ್ಳಲು ಹಿಂಜರಿಯುತ್ತಿರುವುದು ಯಾಕೆ?
ಬಸವಣ್ಣನವರು ಅಂದೇ ಹೇಳಿದರು: “ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು.” ಅಂದರೆ ನಮ್ಮ ನಡೆ ಮತ್ತು ನುಡಿ ಎರಡರಲ್ಲೂ ಪಾರದರ್ಶಕತೆ ಇರಬೇಕು. ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡ ಮೇಲೆ ಅಲ್ಲಿ ಮುಚ್ಚುಮರೆಗೆ ಜಾಗವಿರಬಾರದು. ಕಾನೂನಾತ್ಮಕ ನೋಂದಣಿ ಇಲ್ಲದಿದ್ದಾಗ ಮೂಡುವ ಮೊದಲ ಅನುಮಾನ ಹಣಕಾಸಿನ ವ್ಯವಹಾರ.
ಆರ್.ಎಸ್.ಎಸ್. ಗೆ ಗುರುದಕ್ಷಿಣೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ಹರಿದುಬರುತ್ತದೆ. ದೇಶ-ವಿದೇಶಗಳಿಂದ ಬರುವ ಈ ನಿಧಿ ಯಾರ ಖಾತೆಗೆ ಜಮೆಯಾಗುತ್ತದೆ? ಇದರ ಆಡಿಟ್ ವರದಿ ಎಲ್ಲಿದೆ? ಇಷ್ಟು ದೊಡ್ಡ ಮಟ್ಟದ ಆರ್ಥಿಕ ಸಾಮ್ರಾಜ್ಯಕ್ಕೆ ಯಾವುದೇ ತೆರಿಗೆ ಅಥವಾ ಕಾನೂನಿನ ನಿಗಾ ಇಲ್ಲದಿರುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಚಾರವಲ್ಲವೇ? ಎಲ್ಲೆಲ್ಲಿಂದ ರೊಕ್ಕ ಬರುತ್ತದೆ ಮತ್ತು ಅದು ಎಲ್ಲೆಲ್ಲಿಗೆ ಬಳಕೆಯಾಗುತ್ತದೆ ಎಂಬುದು ದೇಶದ ಜನರಿಗೆ ತಿಳಿಯಲೇಬಾರದೇ?
ನೋಂದಣಿ ಇಲ್ಲದ ಸಂಸ್ಥೆಯಾಗಿ ಉಳಿಯುವುದರ ಹಿಂದೆ ಮತ್ತೊಂದು ತಂತ್ರವಿದೆ. ದೇಶದ ವಿವಿಧೆಡೆ ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವ ಘಟನೆಗಳು, ಕೋಮು ಸಂಘರ್ಷಗಳು ಅಥವಾ ‘ದಾಂದ್ಲಿ’ಗಳು ನಡೆದಾಗ, ಅದರಲ್ಲಿ ಭಾಗಿಯಾದವರು ತಾವೂ ಸಂಘದ ಸ್ವಯಂಸೇವಕರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಕಾನೂನಿನ ಕ್ರಮ ಜರುಗಿಸುವಾಗ, “ನಮ್ಮ ಸಂಘಕ್ಕೆ ಅಧಿಕೃತ ಸದಸ್ಯತ್ವದ ನೋಂದಣಿಯೇ ಇಲ್ಲ, ಹಾಗಾಗಿ ಇವರಿಗೂ ನಮಗೂ ಸಂಬಂಧವಿಲ್ಲ” ಎಂದು ಸಂಘಟನೆ ಅತಿ ಸುಲಭವಾಗಿ ಜಾರಿಕೊಳ್ಳುತ್ತದೆ. ಮಂಗಳೂರಿನ ಸೌಹಾರ್ದತೆಗೆ ಧಕ್ಕೆ ತಂದ ಘಟನೆಗಳಿರಲಿ, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ನಡೆದ ನೈತಿಕ ಪೊಲೀಸ್ ಗಿರಿ (Moral Policing) ಇರಲಿ, ಅಥವಾ ಉತ್ತರ ಭಾರತದ ಹಲವು ಹಿಂಸಾಚಾರಗಳಿರಲಿ—ಅಲ್ಲಿ ಸಂಘಟನೆಯ ಸದಾಶಯಗಳಿಗಿಂತ ಹೆಚ್ಚಾಗಿ ದ್ವೇಷದ ದಾಂದ್ಲಿಕೋರತನವೇ ಎದ್ದು ಕಾಣುತ್ತಿದೆ. ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಈ ‘ನೋಂದಣಿ ಇಲ್ಲದ’ ಮುಖವಾಡ ಅವರಿಗೆ ಕವಚವಾಗುತ್ತಿದೆ.
ಇದು ಶರಣರ ನಾಡು. ಇಲ್ಲಿ ಕಾಯಕವೇ ಕೈಲಾಸ, ದಾಸೋಹವೇ ಪರಮಧರ್ಮ. ಕಾಯಕದಲ್ಲಿ ಪ್ರಾಮಾಣಿಕತೆ ಇರಬೇಕು, ದಾಸೋಹದಲ್ಲಿ ಸಾರ್ವಜನಿಕ ಹಿತವಿರಬೇಕು. ಸರ್ಕಾರದ ನಿಯಮಗಳಿಗೆ ಒಳಪಟ್ಟು ಬಸವ ಧರ್ಮದ ತತ್ವಗಳನ್ನು ಹರಡುವ ಸಣ್ಣ ಸಂಸ್ಥೆಗಳಿಗೊಂದು ನ್ಯಾಯ, ಇಡೀ ದೇಶವನ್ನೇ ಆಳುವ ಶಕ್ತಿಗೆ ಮತ್ತೊಂದು ನ್ಯಾಯವೇ?
ಬಿ. ಕೆ. ಹರಿಪ್ರಸಾದ್ ಅವರ ಪ್ರಶ್ನೆಗೆ ಆರ್.ಎಸ್.ಎಸ್. ಉತ್ತರಿಸಬೇಕಾಗಿದೆ. ನೀವು ದೇಶಭಕ್ತ ಸಂಘಟನೆಯಾಗಿದ್ದರೆ, ಸಂವಿಧಾನಕ್ಕೆ ಬದ್ಧರಾಗಿದ್ದರೆ ಮೊದಲು ನೋಂದಣಿ ಮಾಡಿಕೊಳ್ಳಿ. ನಿಮ್ಮ ಹಣಕಾಸಿನ ಮೂಲವನ್ನು ದೇಶದ ಮುಂದೆ ಇಡಿ. ಮುಚ್ಚುಮರೆಯ ಆಟ ಮುಗಿಯಲಿ, ಸಂವಿಧಾನದ ಆಶಯದಂತೆ ಎಲ್ಲರಿಗೂ ಒಂದೇ ಕಾನೂನು ಅನ್ವಯವಾಗಲಿ.

ಬಸವ ಪಾಟೀಲ್
ಆರೋಗ್ಯ-ತಂತ್ರಜ್ಞಾನ ಸಲಹೆಗಾರ, ಬರಹಗಾರ. ಲಂಡನ್




