NCRB ಮಾಹಿತಿಯ ಪ್ರಕಾರ, ಯುಎಪಿಎ ಪ್ರಕರಣಗಳಲ್ಲಿ ದಾಖಲಾಗುವ ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುವ ಪ್ರಮಾಣ ಅತ್ಯಂತ ಕಡಿಮೆ. ಸುಮಾರು ಶೇ.90 ರಿಂದ ಶೇ.94ರಷ್ಟು ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಳ್ಳುತ್ತಿದ್ದಾರೆ. ಕೇವಲ ಶೇ.2.6 ರಿಂದ ಶೇ.5ರಷ್ಟು ಪ್ರಕರಣಗಳಲ್ಲಿ ಮಾತ್ರ ಆರೋಪ ಸಾಬೀತಾಗಿ ಶಿಕ್ಷೆಯಾಗುತ್ತಿದೆ.
ಯುಎಪಿಎ – (Unlawful Activities (Prevention) Act / ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಜಾರಿಯಾದಾಗಿನಿಂದ ಇಂದಿಗೂ ಸಾಕಷ್ಟು ವಿವಾದಗಳಿಗೆ ಗುರಿಯಾಗುತ್ತಲೇ ಬಂದಿದೆ. ಈ ಕಾಯ್ದೆಯ ಲೋಪಗಳನ್ನು ಆರಂಭದಿಂದಲೇ ಹಲವು ಕಾನೂನು ತಜ್ಞರು, ಸಾಮಾಜಿಕ ಕಾರ್ಯಕರ್ತರು ಎತ್ತಿ ತೋರಿಸಿದ್ದಾರೆ. ಆದರೆ, ಲೋಪಗಳನ್ನೇ ಬಳಸಿಕೊಂಡ ಕೇಂದ್ರದ ಮೋದಿ ಸರ್ಕಾರ ಯಾವೆಲ್ಲ ರೀತಿಯಲ್ಲಿ ಯುಎಪಿಎ ದುರುಪಯೋಗ ಮಾಡುತ್ತಿದೆ, ಹೋರಾಟಗಾರರನ್ನು ಬಂಧಿಸಲಾಗುತ್ತಿದೆ ಎಂಬುದು ನಾವೆಲ್ಲ ತಿಳಿದಿರುವ ವಿಚಾರ. ಆದರೆ ಈ ನಕಲಿ ಪ್ರಕರಣಗಳನ್ನು ಸಾಬೀತುಪಡಿಸಲು ಸಾಧ್ಯವಾಗದೆ ತನಿಖೆಗಳನ್ನು ಎಳೆಯಲಾಗುತ್ತದೆ, ಹೋರಾಟಗಾರರನ್ನು ವರ್ಷಾನುಗಟ್ಟಲೆ ವಿಚಾರಣೆಗಳೇ ಇಲ್ಲದೆ ಜೈಲಿನಲ್ಲಿರುವಂತೆ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಎನ್‌ಸಿಆರ್‌ಬಿ ಅಂಕಿಅಂಶಗಳನ್ನು ಮುಂದಿಟ್ಟು ಮೋದಿ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಯುಎಪಿಎ ವಿಚಾರದಲ್ಲಿ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭೂಯಾನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠವು ಕಳವಳ ವ್ಯಕ್ತಪಡಿಸಿದೆ. 2020ರಿಂದ ವಿಚಾರಣೆಯೇ ಆರಂಭ ಆಗದೆ, ನಾರ್ಕೋಟೆರರಿಸಂ ಕೇಸಿನಲ್ಲಿ ಜೈಲಿನಲ್ಲಿದ್ದ ಆರೋಪಿಗೆ ಜಾಮೀನು ನೀಡಿದ ನ್ಯಾಯಪೀಠ, ಪ್ರಮುಖವಾಗಿ ವಿಚಾರಣೆಯಿಲ್ಲದೆ ದೀರ್ಘಾವಧಿ ಬಂಧನದಲ್ಲಿಡುವ ವಿಚಾರವನ್ನು ನ್ಯಾಯಾಲಯ ಪ್ರಸ್ತಾಪಿಸಿದೆ. ದೇಶದಲ್ಲಿ ಯುಎಪಿಎ ಅಡಿಯಲ್ಲೂ ಜಾಮೀನು ನಿಯಮವಿದೆ ಎಂದು ಸ್ಪಷ್ಟಪಡಿಸಿದೆ. “ಗುಲ್ಫಿಶಾ ಫಾತಿಮಾ (ಉಮರ್ ಖಾಲಿದ್ ಜಾಮೀನು ಪ್ರಕರಣ) ಪ್ರಕರಣದ ತೀರ್ಪಿನ ಬಗ್ಗೆ ನಮಗೆ ಗಂಭೀರವಾದ ಆಕ್ಷೇಪಣೆಗಳಿವೆ. ಯುಎಪಿಎ ಅಡಿಯಲ್ಲಿಯೂ ಸಹ, ಜಾಮೀನು ನಿಯಮವಾಗಿದೆ ಮತ್ತು ಜೈಲು ಶಿಕ್ಷೆ ಇದಕ್ಕೆ ಅಪವಾದ” ಎಂದು ಹೇಳಿದೆ.
ಇದನ್ನು ಓದಿದ್ದೀರಾ?: ಮೋದಿ – ಶಾ ಕುತಂತ್ರಕ್ಕೆ ಬಲಿಯಾದವರು ಯಾರ್‍ಯಾರು ಗೊತ್ತಾ?
“ವಿಚಾರಣೆಯೇ ಆರಂಭವಾಗದೆ ವರ್ಷಗಟ್ಟಲೆ ಜೈಲಿನಲ್ಲಿಡುವುದು ಸಂವಿಧಾನದ 21ನೇ ವಿಧಿಯಡಿ ನೀಡಲಾಗಿರುವ ‘ವೈಯಕ್ತಿಕ ಸ್ವಾತಂತ್ರ್ಯ ಮತ್ತು ಜೀವಿಸುವ ಹಕ್ಕಿನ’ ಉಲ್ಲಂಘನೆಯಾಗುತ್ತದೆ. ಕೇವಲ ಆರೋಪ ಹೊರಿಸಲಾಗಿದೆ ಎಂಬ ಕಾರಣಕ್ಕೆ ಒಬ್ಬ ವ್ಯಕ್ತಿಯನ್ನು ಅನಿರ್ದಿಷ್ಟಾವಧಿ ಜೈಲಿನಲ್ಲಿಡಲು ಸಾಧ್ಯವಿಲ್ಲ. ಯುಎಪಿಎ ಕಾಯ್ದೆಯ ಸೆಕ್ಷನ್ 43D(5) ಅಡಿಯಲ್ಲಿ ಜಾಮೀನು ಪಡೆಯುವುದು ಅತ್ಯಂತ ಕಠಿಣವಾಗಿದ್ದರೂ, ವಿಚಾರಣೆ ವಿಳಂಬವಾಗುತ್ತಿದ್ದರೆ ಅಥವಾ ಆರೋಪಿಯ ದೀರ್ಘಾವಧಿ ಬಂಧನವಾಗಿದ್ದರೆ ಸಂವಿಧಾನ ಬದ್ಧ ಹಕ್ಕುಗಳನ್ನು ಎತ್ತಿಹಿಡಿಯಲು ನ್ಯಾಯಾಲಯಗಳು ಜಾಮೀನು ನೀಡಬಹುದು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಿಚಾರಣೆಯೂ ಇಲ್ಲ – ಜಾಮೀನೂ ಇಲ್ಲ
ಯುಎಪಿಎ ಪ್ರಕರಣಗಳಲ್ಲಿ ವಿಚಾರಣೆಯೂ ಇಲ್ಲದೆ, ಜಾಮೀನೂ ಇಲ್ಲದೆ ಹಲವು ವರ್ಷಗಳಿಂದ ಜೈಲಿನಲ್ಲೇ ಇರುವ ಹೋರಾಟಗಾರರು ನಮ್ಮ ನೆನಪಿಗೆ ಬರುತ್ತಾರೆ. ಈ ಪೈಕಿ ಯುವ ಹೋರಾಟಗಾರರು ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಮುಂಚೂಣಿಯಲ್ಲಿರುವವರು. ಸಿಎಎ ವಿರೋಧಿ ಪ್ರತಿಭಟನೆ ವೇಳೆ ಪ್ರಚೋದನಾತ್ಮಕ ಭಾಷಣ ಮಾಡಿದ ಆರೋಪದಡಿ ಬಂಧನಕ್ಕೊಳಗಾಗಿರುವ ಉಮರ್ ಖಾಲಿದ್ 2020ರ ಸೆಪ್ಟೆಂಬರ್‌ನಿಂದ ಮತ್ತು ಶಾರ್ಜೀಲ್ ಇಮಾಮ್ 2020ರ ಜನವರಿಯಿಂದ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ಇವರಿಬ್ಬರ ಜಾಮೀನು ಅರ್ಜಿಗಳನ್ನು ಹಲವು ಬಾರಿ ತಿರಸ್ಕರಿಸಿವೆ. ಅತ್ತ ವಿಚಾರಣೆಯೂ ನಡೆಯುತ್ತಿಲ್ಲ. ಇತ್ತ ಜಾಮೀನೂ ಸಿಗುತ್ತಿಲ್ಲ.
ಭೀಮಾ ಕೊರೆಗಾಂವ್ – ಎಲ್ಗಾರ್ ಪರಿಷತ್ ಪ್ರಕರಣದಲ್ಲಿಯೂ ನಡೆದಿದ್ದು ಇದುವೇ. ಮಾವೋವಾದಿ ನಂಟು ಹೊಂದಿದ್ದಾರೆ, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದಲ್ಲಿ 2018ರಿಂದ ಹಲವು ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಪ್ರೊಫೆಸರ್‌ಗಳು ಇನ್ನೂ ಜೈಲಿನಲ್ಲಿದ್ದಾರೆ ಅಥವಾ ದೀರ್ಘಕಾಲ ಜೈಲಿನಲ್ಲಿದ್ದರು. ಮಾನವ ಹಕ್ಕುಗಳ ವಕೀಲ ಸುರೇಂದ್ರ ಗಾಡ್ಲಿಂಗ್ ಎಂಟು ವರ್ಷಗಳ ಕಾಲ ಜೈಲಿನಲ್ಲಿದ್ದ ಕಾರಣ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. 2018ರಿಂದ ಜೈಲಿನಲ್ಲಿದ್ದ ದಲಿತ ಹಕ್ಕುಗಳ ಹೋರಾಟಗಾರ ಮತ್ತು ‘ವಿದ್ರೋಹಿ’ ಪತ್ರಿಕೆಯ ಸಂಪಾದಕ ಸುಧೀರ್ ಧಾವಳೆ, ರೋನಾ ವಿಲ್ಸನ್ 2025ರ ಜನವರಿಯಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ಇದೇ ಪ್ರಕರಣದಲ್ಲಿ 2018ರಲ್ಲಿ ಬಂಧನಗೊಂಡಿದ್ದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಹ್ಯಾನಿ ಬಾಬು 2025ರ ಡಿಸೆಂಬರ್‌ನಲ್ಲಿ ಜಾಮೀನು ಪಡೆದಿದ್ದಾರೆ.
ಶೇ.94ರಿಂದ 98ರಷ್ಟು ಯುಎಪಿಎ ಕೇಸುಗಳು ಖುಲಾಸೆ
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಮಾಹಿತಿಯ ಪ್ರಕಾರ, ಯುಎಪಿಎ ಪ್ರಕರಣಗಳಲ್ಲಿ ದಾಖಲಾಗುವ ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುವ ಪ್ರಮಾಣ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಸುಮಾರು ಶೇ.90 ರಿಂದ ಶೇ.94 ರಷ್ಟು ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಳ್ಳುತ್ತಿದ್ದಾರೆ ಅಥವಾ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಬಿಡುಗಡೆಯಾಗುತ್ತಿದ್ದಾರೆ. ಕೇವಲ ಶೇ.2.6 ರಿಂದ ಶೇ.5 ರಷ್ಟು ಪ್ರಕರಣಗಳಲ್ಲಿ ಮಾತ್ರ ಆರೋಪ ಸಾಬೀತಾಗಿ ಶಿಕ್ಷೆಯಾಗುತ್ತಿದೆ. ಯುಎಪಿಎ ಅಡಿಯಲ್ಲಿ ದಾಖಲಾಗುವ ಪ್ರಕರಣಗಳ ತನಿಖೆ ಮತ್ತು ನ್ಯಾಯಾಲಯದ ವಿಚಾರಣೆ ಮುಗಿಯಲು ಸರಾಸರಿ 5 ರಿಂದ 7 ವರ್ಷಗಳಿಗಿಂತಲೂ ಅಧಿಕ ಸಮಯ ಹಿಡಿಯುತ್ತಿದೆ. ಅಷ್ಟೂ ಸಮಯ ಆರೋಪಿಗಳು ಜೈಲಿನಲ್ಲೇ ಇರುವಂತಾಗಿದೆ.
ಇದನ್ನು ಓದಿದ್ದೀರಾ? ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳು ರದ್ದು; ನ್ಯಾಯಾಂಗ ಕೊಟ್ಟ ಸಂದೇಶವೇನು?
“ಒಬ್ಬ ವ್ಯಕ್ತಿಯ ಮೇಲೆ ಯುಎಪಿಎ ಅಡಿಯಲ್ಲಿ ಕೇಸ್ ದಾಖಲಾದಾಗ, ಆತ ಅಂತಿಮವಾಗಿ ನಿರ್ದೋಷಿ ಎಂದು ಸಾಬೀತಾಗುವಷ್ಟರಲ್ಲಿ ತನ್ನ ಜೀವನದ ಅತ್ಯಮೂಲ್ಯ ವರ್ಷಗಳನ್ನು ಜೈಲಿನಲ್ಲೇ ಕಳೆದಿರುತ್ತಾನೆ. ಇಲ್ಲಿ ಶಿಕ್ಷೆಗಿಂತಲೂ ‘ವಿಚಾರಣೆಯ ಪ್ರಕ್ರಿಯೆಯೇ ದೊಡ್ಡ ಶಿಕ್ಷೆಯಾಗಿ’ ಪರಿಣಮಿಸುತ್ತಿದೆ” ಎಂದು ಹಲವು ಕಾನೂನು ತಜ್ಞರು ಈ ಹಿಂದೆಯೇ ಕಳವಳ ವ್ಯಕ್ತಪಡಿಸಿದ್ದಾರೆ. ಇದು ನಿಜವೂ ಹೌದು. ಸ್ಪಷ್ಟ ಸಾಕ್ಷಿ ಜಾರ್ಖಂಡ್‌ನಲ್ಲಿ ಆದಿವಾಸಿಗಳು ಮತ್ತು ದಲಿತರ ಭೂಮಿ ಹಾಗೂ ಸಾಂವಿಧಾನಿಕ ಹಕ್ಕುಗಳಿಗಾಗಿ ದಶಕಗಳ ಕಾಲ ಶ್ರಮಿಸಿದ್ದ ಫಾದರ್ ಸ್ಟಾನ್ ಸ್ವಾಮಿ ಸಾವು.
2018ರ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರಲ್ಲಿ ಸ್ಟಾನ್ ಸ್ವಾಮಿ ಅವರನ್ನು ಬಂಧಿಸಲಾಗಿತ್ತು. ತಲೋಜಾ ಜೈಲಿನಲ್ಲಿದ್ದ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಇವರಿಗೆ ವೈದ್ಯಕೀಯ ಜಾಮೀನು ನಿರಾಕರಿಸಲಾಗಿತ್ತು. ಅಂತಿಮವಾಗಿ ಅನಾರೋಗ್ಯದ ಕಾರಣ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಜಾಮೀನು ಅರ್ಜಿಯ ವಿಚಾರಣೆಯ ದಿನವೇ (ಜುಲೈ 5, 2021) ಅವರು ಹೃದಯಾಘಾತದಿಂದ ನಿಧನರಾದರು. ಅಂದರೆ ಸ್ಟಾನ್ ಸ್ವಾಮಿ ತನ್ನ ಜೀವನದ ಕೊನೆಯ ಕ್ಷಣಗಳನ್ನೂ ತಮ್ಮ ಕುಟುಂಬದೊಂದಿಗೆ ಕಳೆಯುವ ಅವಕಾಶ ಈ ವ್ಯವಸ್ಥೆ ನೀಡಿಲ್ಲ. ಯುಎಪಿಎ ನೆಪದಲ್ಲಿ ಕನಿಷ್ಠ ಸೂಕ್ತ ಚಿಕಿತ್ಸೆಯೂ ನೀಡದೆ ಸಾವಿಗೆ ತಳ್ಳಿತು.
ಹೀಗೆ ಯುಎಪಿಎ ದುರುಪಯೋಗಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಲಿದೆಯೋ? ಈ ಕಾಯ್ದೆಯಡಿ ಕೇವಲ ಶಂಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಬಹುದು. ಆದರೆ ದೀರ್ಘ ಕಾನೂನು ಹೋರಾಟ ನಡೆದ ಬಳಿಕವೇ ಆ ವ್ಯಕ್ತಿಯ ಮೇಲಿನ ಶಂಕೆ ತಪ್ಪು ಎಂದು ತಿಳಿಯುವುದು! ಇಂತಹ ಹಲವು ಪ್ರಕರಣಗಳು ಯುಎಪಿಎ ಕಾಯ್ದೆಯ ಸವಾಲಿನ ಬಗ್ಗೆ ಪ್ರಶ್ನೆ ಸೃಷ್ಟಿಸಿದೆ. ಈ ಹಿಂದೆಯೇ ಯುಎಪಿಎ ಬಗ್ಗೆ ಹಲವು ತಜ್ಞರುಗಳು ಎಚ್ಚರಿಕೆ ನೀಡಿದ್ದರು. “ಈ ಕಾಯ್ದೆಯು ಸಹಜ ನ್ಯಾಯದ ಪರಿಕಲ್ಪನೆಗಳನ್ನು ತಲೆಕೆಳಗು ಮಾಡುತ್ತದೆ” ಎಂದು ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವ್ಲಖಾ ಹೇಳಿದ್ದರು. ಆದರೆ ಈ ಹೇಳಿಕೆ ನೀಡಿದ ಬಳಿಕ ಸ್ವತಃ ಅವರನ್ನೇ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಬಂಧಿಸಲಾಗಿದೆ!
ಇನ್ನು ಆಕ್ಸ್‌ಫರ್ಡ್ ಹ್ಯೂಮನ್ ರೈಟ್ಸ್ ಹಬ್‌ನಲ್ಲಿ ಹೋರಾಟಗಾರ ರೊಂಗೀತ್ ಪೊದ್ದಾರ್ “2019ರ ಯುಎಪಿಎ ತಿದ್ದುಪಡಿಯು ಯಾವುದೇ ಕಾನೂನು ಪ್ರಕ್ರಿಯೆಗಳಿಲ್ಲದೆ ಜನರನ್ನು ಭಯೋತ್ಪಾದಕರು ಎಂದು ಗುರುತಿಸಲು ಅವಕಾಶ ನೀಡಿದೆ” ಎಂದು ಟೀಕಿಸಿದ್ದಾರೆ. ಮಾಜಿ ನ್ಯಾಯಾಧೀಶರಾದ ಅಂಜನಾ ಪ್ರಕಾಶ್ ಸೇರಿದಂತೆ ಹಲವರು, “ಪೋಟಾ ಕಾನೂನುಗಳ ದುರ್ಬಳಕೆಯನ್ನು ನಿಲ್ಲಿಸಲು ಯುಎಪಿಎ ತರಲಾಯಿತು. ಆದರೆ ಆ ಕಾನೂನೇ ದುರ್ಬಳಕೆಯಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರುಗಳೂ ಯುಎಪಿಎ ಕಾನೂನನ್ನು ಟೀಕಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಮಾತ್ರ ಈ ಕಾಯ್ದೆಯ ದುರುಪಯೋಗವನ್ನು ಭರಪೂರವಾಗಿ ನಡೆಸುತ್ತಿದೆ. ತಮ್ಮ ವಿರೋಧಿಗಳನ್ನೇ ಹೆಕ್ಕಿ ಜೈಲಿನಲ್ಲಿಟ್ಟು ಮಜಾಮಾಡುತ್ತಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



