ಮೇಡ್ ಇನ್ ಇಂಡಿಯಾ: ಎ ಟೈಟಾನ್ ಸ್ಟೋರಿ | ಕಾರ್ಪೊರೇಟ್ ಯಶೋಗಾಥೆಯ ನಾಟಕೀಯ ನಿರೂಪಣೆ

Date:

'ಎ ಟೈಟಾನ್ ಸ್ಟೋರಿ' ಎಂಬ ವೆಬ್ ಸರಣಿ ಭಾರತೀಯ ಕಾರ್ಪೊರೇಟ್ ಇತಿಹಾಸವನ್ನು ಜನಪ್ರಿಯ ಮಾಧ್ಯಮದಲ್ಲಿ ಪರಿಚಯಿಸುವ ಯಶಸ್ವಿ ಪ್ರಯತ್ನವಾಗಿದೆ. ಇದು ಉದ್ಯಮಶೀಲತೆ, ನಾಯಕತ್ವ ಮತ್ತು ಬ್ರ್ಯಾಂಡ್ ನಿರ್ಮಾಣದ ಪಾಠಗಳನ್ನು ಮನರಂಜನೆಯೊಂದಿಗೆ ಜೋಡಿಸುತ್ತದೆ. ಆದರೆ ಇತಿಹಾಸದ ಸಂಪೂರ್ಣ ಸಂಕೀರ್ಣತೆಯನ್ನು ಅನಾವರಣಗೊಳಿಸುವುದಿಲ್ಲ. 

‘ಅಚ್ಛೇ ದಿನ್ ಆತೆ ನಹಿ ಹೈ, ವುನ್ಹೆ ಲಾನ ಪಡ್ತಾ ಹೈ’ ಅಂದರೆ, ಒಳ್ಳೆಯ ದಿನಗಳು ತಾನಾಗಿಯೇ ಬರುವುದಿಲ್ಲ, ಕಠಿಣ ಪರಿಶ್ರಮದಿಂದ ಪಡೆಯಬೇಕು ಎಂಬ ಒಂದು ಡೈಲಾಗ್ ‘ಮೇಡ್ ಇನ್ ಇಂಡಿಯಾ: ಎ ಟೈಟಾನ್ ಸ್ಟೋರಿ’ ಸೀರಿಸ್ ನಲ್ಲಿದೆ. ಇದು ಸ್ವಲ್ಪ ತಮಾಷೆಯಾಗಿ ಕಂಡರೂ, ಸದ್ಯದ ರಾಜಕಾರಣವನ್ನು ಅಣಕಿಸುವಂತಿದೆ. ಅಷ್ಟಕ್ಕೇ ಇದು ಇದ್ದದ್ದನ್ನು ಇದ್ದಂಗೆ ಹೇಳಿದ ಸರಣಿ ಎಂದು ಮೆಚ್ಚಬೇಕಾಗಿಲ್ಲ. ಹಾಗಂತ ಪೂರ್ವಗ್ರಹ ಪೀಡಿತವಾಗಿ ತೆಗಳುವಂತೆಯೂ ಇಲ್ಲ.

- Advertisement -

ಭಾರತದಲ್ಲಿ ನೈಜ ಘಟನೆಗಳು ಅಥವಾ ವ್ಯಕ್ತಿಗಳನ್ನು ಆಧರಿಸಿ ಸಿನಿಮಾ ಅಥವಾ ವೆಬ್‌ ಸೀರಿಸ್ ನಿರ್ಮಿಸುವುದು ಕೊಂಚ ಕಷ್ಟ. ಕಥೆಯಲ್ಲಿ ಚಿತ್ರಿತವಾಗುವ ನೈಜ ವ್ಯಕ್ತಿಗಳಿಂದ ಅಥವಾ ಸಂಸ್ಥೆಗಳಿಂದ ಮೊದಲೇ ಅನುಮತಿ ಪಡೆಯಬೇಕು. ಹಾಗೆ ಅನುಮತಿ ಪಡೆದು ಚಿತ್ರಿಸಿದ್ದು, ಅಕಸ್ಮಾತ್ ವಿಮರ್ಶಾತ್ಮಕವಾಗಿದ್ದರೆ ಒಪ್ಪಿ-ಅಪ್ಪಿಕೊಳ್ಳುವುದು ಅಷ್ಟು ಸುಲಭವಲ್ಲ. ಹೀಗಾಗಿ ಇಂತಹ ಕೃತಿಗಳು ಹೆಚ್ಚಾಗಿ ಕ್ರೀಮಿ ಲೇಯರ್ ನಿರೂಪಣೆಗಳಾಗಿಯೇ ಕಾಣಿಸುತ್ತವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ರಾಬಿ ಗ್ರೆವಾಲ್ ನಿರ್ದೇಶಿಸಿರುವ ‘ಮೇಡ್ ಇನ್ ಇಂಡಿಯಾ: ಎ ಟೈಟಾನ್ ಸ್ಟೋರಿ’ ಸರಣಿ ಮೇಲ್ನೋಟಕ್ಕೇ ಅಂತಹ ಅಭಿಪ್ರಾಯ ಮೂಡಿಸುತ್ತದೆ. ಅದಕ್ಕೆ ಪೂರಕವಾಗಿ, ವಿನಯ್ ಕಾಮತ್ ಅವರ ‘ಟೈಟಾನ್: ಇನ್‌ಸೈಡ್ ಇಂಡಿಯಾಸ್ ಮೋಸ್ಟ್ ಸಕ್ಸಸ್‌ಫುಲ್ ಕನ್ಸೂಮರ್ ಬ್ರ್ಯಾಂಡ್’ ಎಂಬ ಕೃತಿಯನ್ನು ಆಧರಿಸಿರುವುದು; ಈ ಸರಣಿಗೆ ಟೈಟಾನ್ ಕಂಪನಿಯೇ ಭಾಗಶಃ ಪ್ರಾಯೋಜಕತ್ವವನ್ನೂ ನೀಡಿರುವುದು- ಆ ಅಭಿಪ್ರಾಯಕ್ಕೆ ಪುಷ್ಟಿ ನೀಡುತ್ತದೆ.

ಹೀಗಿರುವಾಗ, ಕಂಪನಿ ಮತ್ತದರ ಅಧಿಕಾರಿಗಳನ್ನು ನಿಷ್ಪಕ್ಷಪಾತವಾಗಿ ಚಿತ್ರಿಸುವುದು, ಕೊಂಚ ಭಿನ್ನವಾಗಿ ನೋಡುವುದು ಒಪ್ಪಂದದ ಗಡಿ ಮೀರಿದಂತಾಗುತ್ತದೆ; ಟಾಟಾ ಸಂಸ್ಥೆಯ ಐತಿಹಾಸಿಕ ದಾಖಲೆಗಳಿಗೆ ಧಕ್ಕೆ ಬರುತ್ತದೆ. ಏಕೆಂದರೆ, ಆ ದಾಖಲೆಗಳೇ ಈ ಸರಣಿಯ ಪ್ರಮುಖ ಆಧಾರಗಳಾಗಿವೆ. ಆದ್ದರಿಂದ, ಇದು ಕಂಪನಿಯ ಒಂದು ಪಾರ್ಶ್ವಕ್ಕೆ ಮೀಸಲಾದ ಕಾರ್ಪೊರೇಟ್ ಜಾಹೀರಾತು ಎಂದು ಭಾವಿಸಬಹುದು. ಆರು ಕಂತುಗಳ ಈ ಸರಣಿಯಲ್ಲಿ ಕೆಲವು ಭಾಗಗಳು ನಿಜಕ್ಕೂ ಕಾರ್ಪೊರೇಟ್ ಪ್ರಚಾರಚಿತ್ರದಂತೆ ಭಾಸವಾಗುತ್ತವೆ. ಮತ್ತೆ ಕೆಲವು ಭಾಗಗಳು ‘ಆ ದಿನಗಳು’ ಎಂಬ ನೆನಪಿನ ಬುತ್ತಿ ಬಿಚ್ಚಿಕೊಂಡು ಕೂರುವ ಕಥೆಗಾರನ ಧಾಟಿಯಲ್ಲಿವೆ.

Titan story1
ಟೈಟಾನ್ ಕಂಪನಿಯ ಪಿಲ್ಲರ್ ಗಳು- ಮೇಘ ಮಾತ್ರೆ, ಗೌರವ್ ಧರ್, ದೇಸಾಯಿ ಮತ್ತು ಆಕಾಶ್

1980 ಮತ್ತು 1990ರ ದಶಕವನ್ನು ಮರುಸೃಷ್ಟಿಸುವ ಈ ಸರಣಿ, ಜೆ.ಆರ್.ಡಿ ಟಾಟಾ ಅವರ ಮಾರ್ಗದರ್ಶನದಲ್ಲಿ ಜರ್ಕ್ಸಿಸ್ ದೇಸಾಯಿ ಹಾಗೂ ಅವರ ಸಹೋದ್ಯೋಗಿಗಳು ಸೇರಿ ಸ್ವತಂತ್ರ ಭಾರತದ ಅತ್ಯಂತ ಪ್ರತಿಷ್ಠಿತ ಬ್ರ್ಯಾಂಡ್‌ಗಳಲ್ಲಿ ಒಂದಾದ ಟೈಟಾನ್ ವಾಚ್ ಹುಟ್ಟಿದ ಕತೆ ಹೇಳುತ್ತದೆ. ಟೈಟಾನ್ ಎಂಬ ಹೆಸರಿನ ಹುಟ್ಟಿನಿಂದ ಹಿಡಿದು, ಸಂಸ್ಥೆಯ ಆರಂಭ, ತಾಂತ್ರಿಕ ಸವಾಲುಗಳು, ಉತ್ಪನ್ನ ವಿನ್ಯಾಸ, ಮಾರುಕಟ್ಟೆ ತಂತ್ರಗಳು, ಪೈಪೋಟಿ ಮತ್ತು ಯಶಸ್ಸಿನ ಹಂತಗಳನ್ನು ಕ್ರಮಬದ್ಧವಾಗಿ ಕಟ್ಟಿಕೊಡಲಾಗಿದೆ.

ಭಾರತದ ಗಡಿಯಾರದ ಮಾರುಕಟ್ಟೆಯನ್ನು ಆಮದು ಉತ್ಪನ್ನಗಳು ಮತ್ತು ಅಸಂಘಟಿತ ಉತ್ಪಾದನಾ-ಮಾರಾಟ ವಲಯಗಳು ಆಳುತ್ತಿದ್ದ ಕಾಲಘಟ್ಟದಲ್ಲಿ, ದೇಶೀಯ ಬ್ರ್ಯಾಂಡ್ ನಿರ್ಮಾಣದ ಪ್ರಯತ್ನವನ್ನು ಈ ಸರಣಿ ಕಥೆಯ ಕೇಂದ್ರವಾಗಿಟ್ಟುಕೊಂಡಿದೆ. ಇದು ಒಂದು ಕಂಪನಿಯ ಯಶೋಗಾಥೆಯಲ್ಲ; ಆ ಕಾಲದ ಭಾರತದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿವರ್ತನೆಯ ಹಿನ್ನೆಲೆಯಲ್ಲಿ ಭಾರತೀಯ ಉದ್ಯಮಶೀಲತೆಯ ಬೆಳವಣಿಗೆಯನ್ನು ಚಿತ್ರಿಸುವ ನಾಟಕೀಯ ರೂಪಕವಾಗಿದೆ. ಈ ನಾಟಕೀಯ ರೂಪಕ ಏಕೆಂದರೆ, ಇಲ್ಲಿ ಯಾರೂ ಮತ್ತೊಬ್ಬರ ಬೆನ್ನಿಗೆ ಚೂರಿ ಹಾಕುವುದಿಲ್ಲ. ಯಾರೂ ಬೇರೆಯವರ ಸಾಧನೆಯ ಕೀರ್ತಿಯನ್ನು ಕಸಿದುಕೊಳ್ಳಲು ಯತ್ನಿಸುವುದಿಲ್ಲ. ಭ್ರಷ್ಟ ಅಧಿಕಾರಶಾಹಿಯನ್ನೂ ಸಹಿಸಬಲ್ಲ ಸೇವಕನಂತೆ ಚಿತ್ರಿಸಲಾಗಿದೆ.

ಹೊಸತನದ ಹುಚ್ಚು ಹೊಂದಿರುವ ಜರ್ಕ್ಸಿಸ್ ದೇಸಾಯಿ (ಜಿಮ್ ಸಾರ್ಬ್), ತಮ್ಮ ವರ್ಕೊಹಾಲಿಕ್ ಮನಸ್ಥಿತಿಯಿಂದ ‘ಎರಡನೇ ಕುಟುಂಬ’ವೆಂದೇ ಭಾವಿಸುವ ಟಾಟಾ ಸಮೂಹದಲ್ಲಿ ಹೊಸ ಸವಾಲಿನ ಹುಡುಕಾಟದಲ್ಲಿರುತ್ತಾರೆ. ಜೆ.ಆರ್.ಡಿ ಟಾಟಾರಿಗೆ ದೇಸಾಯಿ ತೀರಾ ಆಪ್ತ. ಹಾಗಾಗಿ ನಷ್ಟದಲ್ಲಿದ್ದ ಟಾಟಾ ಪ್ರೆಸ್ ಪುನರುಜ್ಜೀವನಗೊಳಿಸುವ ಹೊಣೆಯನ್ನು ಅವರಿಗೆ ಹೊರಿಸಲಾಗುತ್ತದೆ. ಇದೇ ವೇಳೆ, ಗಡಿಯಾರಗಳ ಆಮದು ವಿಚಾರದಲ್ಲಿ ಹುದ್ದೆ ಕಳೆದುಕೊಂಡ ಸರ್ಕಾರಿ ಅಧಿಕಾರಿಯೊಬ್ಬರನ್ನು ದೇಸಾಯಿ ಭೇಟಿಯಾಗುತ್ತಾರೆ. ಅದು ಭಾರತದ ಆರ್ಥಿಕ ಉದಾರೀಕರಣಕ್ಕೂ ಮುಂಚಿನ ಕಾಲ. ಅಧಿಕೃತವಾಗಿ ಆಮದು ಮಾಡಿದ ಗಡಿಯಾರಗಳಿಗೆ ಭಾರೀ ಸುಂಕ ವಿಧಿಸಲಾಗುತ್ತಿತ್ತು. ಹೀಗಾಗಿ ಅವು ಸಾಮಾನ್ಯ ಜನರಿಗೆ ದುಬಾರಿಯಾಗುತ್ತಿದ್ದವು. ಆದರೆ ಕಳ್ಳಸಾಗಾಣಿಕೆಯ ಮೂಲಕ ಬಂದ ಗಡಿಯಾರಗಳನ್ನು ಕಡಿಮೆ ಬೆಲೆಗೆ ಮಾರಿದರೂ ಉತ್ತಮ ಲಾಭ ಸಿಗುತ್ತಿತ್ತು.

ಇದನ್ನು ಓದಿದ್ದೀರಾ?: ರಜನಿಕಾಂತ್ ‘ಡೆಡ್ಲಿ ಡಾಕ್ಟರ್’ ಸೀಕ್ರೆಟ್ ಔಟ್; ವದಂತಿಗಳಿಗೆ ಬ್ರೇಕ್ ಹಾಕಿದ ‘ಧರ್ಮನ್’ ನಿರ್ದೇಶಕ

ಈ ಸ್ಥಿತಿಯಲ್ಲಿ ಯೂರೋಪಿಯನ್ ಮತ್ತು ಜಪಾನೀಸ್ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡಬಲ್ಲ ಭಾರತೀಯ ಬ್ರ್ಯಾಂಡ್‌ಗೆ ಮಾರುಕಟ್ಟೆಯಲ್ಲಿ ದೊಡ್ಡ ಅವಕಾಶವಿದೆ ಎಂಬುದನ್ನು ದೇಸಾಯಿ ಗುರುತಿಸುತ್ತಾರೆ. ಅದನ್ನು ಟಾಟಾ ಬಳಿ ಹೇಳಿದಾಗ, ಮಾಡು ನನ್ನ ಬೆಂಬಲವಿದೆ ಎನ್ನುತ್ತಾರೆ. ಕಾಕತಾಳೀಯವೆಂಬಂತೆ, ಸ್ವಿಸ್ ವಾಚ್ ಕಂಪನಿಯ ಮಾಲೀಕನಿಂದಾದ ಅವಮಾನ ಟಾಟಾ ಅವರಲ್ಲಿ ಕೊರಗಿನಂತೆ ಕಾಡುತ್ತಿರುತ್ತದೆ. ಅವನಿಗೆ ಉತ್ತರ ಕೊಡಲು ಸಮಯಕ್ಕಾಗಿ ಕಾಯುತ್ತಿರುತ್ತಾರೆ. ದೇಸಾಯಿ ಹುಡುಕಾಟ, ಟಾಟಾ ಅವರ ಕೊರಗು- ಎರಡೂ ಸೇರಿ ಟೈಟಾನ್ ಹುಟ್ಟಿಗೆ ಕಾರಣವಾಗುತ್ತದೆ.

ಸರಣಿಯ ಪ್ರಮುಖ ಬಲವೆಂದರೆ ಅದು ಕಾರ್ಪೊರೇಟ್ ಇತಿಹಾಸವನ್ನು ಕೇವಲ ವ್ಯಾವಹಾರಿಕ ಸಾಧನೆಯಾಗಿ ನೋಡದೆ, ರಾಷ್ಟ್ರ ನಿರ್ಮಾಣ, ಗ್ರಾಹಕ ಸಂಸ್ಕೃತಿ ಮತ್ತು ಬ್ರ್ಯಾಂಡ್ ಗುರುತಿನೊಂದಿಗೆ ಜೋಡಿಸುವ ಪ್ರಯತ್ನ ಮಾಡುತ್ತದೆ. ಒಂದು ಭಾರತೀಯ ಕಂಪನಿ ಜಾಗತಿಕ ಗುಣಮಟ್ಟದ ಉತ್ಪನ್ನವನ್ನು ನಿರ್ಮಿಸಿ ಮಧ್ಯಮ ವರ್ಗದ ಗ್ರಾಹಕರ ವಿಶ್ವಾಸವನ್ನು ಹೇಗೆ ಗಳಿಸಿತು ಎಂಬುದನ್ನು ಹೇಳುತ್ತದೆ. ಅದಕ್ಕೆ ಬಳಸಿರುವ ನಿರೂಪಣಾ ಶೈಲಿಯೂ ವಿಭಿನ್ನವಾಗಿದೆ.

ಆದರೆ ಈ ಸರಳ ನಿರೂಪಣೆಯೇ ಕೆಲವೊಮ್ಮೆ ಅದರ ಮಿತಿಯೂ ಆಗುತ್ತದೆ. ಸಂಘರ್ಷಗಳು, ಸವಾಲುಗಳು, ಸಮಸ್ಯೆಗಳು ಗಂಭೀರವಾಗಿ ಗರಿಗೆದರುವ ಮುನ್ನವೇ ಪರಿಹಾರ ಕಂಡುಕೊಳ್ಳುತ್ತವೆ. ಉದ್ಯಮ ವಲಯದಲ್ಲಿ ಸಹಜವಾಗಿ ಎದುರಾಗುವ ಆರ್ಥಿಕ, ರಾಜಕೀಯ ಮತ್ತು ಆಡಳಿತಾತ್ಮಕ ಒತ್ತಡಗಳು, ಸಂಘರ್ಷಗಳು ಇನ್ನಷ್ಟು ಸ್ಪಷ್ಟವಾಗಿ ಚಿತ್ರಿತವಾಗಿದ್ದರೆ ಕಥೆ ಹೆಚ್ಚು ವಿಶ್ವಾಸಾರ್ಹವಾಗುತ್ತಿತ್ತು ಎನಿಸುತ್ತದೆ.

ಜೊತೆಗೆ ಟೈಟಾನ್ ಕಂಪನಿಯನ್ನು ತಮಿಳುನಾಡಿನ ಹೊಸೂರಿನಲ್ಲಿ ಸ್ಥಾಪಿಸುವುದು, ಸ್ಥಳೀಯರಿಗೆ ಉದ್ಯೋಗ ಮತ್ತು ಲಾಭಾಂಶ ನೀಡಿಕೆಯಲ್ಲಿ ಸಿಂಹಪಾಲು ನೀಡುವುದು ಸರಿ ಎನಿಸುತ್ತದೆ. ಬೆಂಗಳೂರಿನಲ್ಲಿ ಕಾರ್ಪೊರೇಟ್ ಆಫೀಸ್ ತೆರೆಯುವುದು, ಸಫೀನಾ ಪ್ಲಾಜಾದಲ್ಲಿ ಷೋ ರೂಂ ಮಾಡುವುದು ವ್ಯಾವಹಾರಿಕವಾಗಿ ಸರಿ ಎನಿಸಿದರೂ, ಈಗಾಗಲೇ ಇದ್ದ, ಕನ್ನಡಿಗರ ಹೆಮ್ಮೆಯ ಗಡಿಯಾರದ ಕಂಪನಿ ಎಚ್ಎಂಟಿಯಿಂದ ಪರಿಣಿತರನ್ನು ಸೆಳೆದು, ಅದು ಮುಚ್ಚುವಂತೆ ನೋಡಿಕೊಳ್ಳುವುದನ್ನು ಪ್ರಜ್ಞಾಪೂರ್ವಕವಾಗಿಯೇ ಮರೆಮಾಚಿರುವುದು, ಮಿಕ್ಕ ರಾಜ್ಯಗಳಿಗೆ ಸರಿ ಎನಿಸಿದರೂ, ಕರ್ನಾಟಕಕ್ಕೆ ಮಾಡಿದ ಮೋಸದಂತೆ ಕಾಣುತ್ತದೆ.    

ಇನ್ನು ನಟ-ನಟಿಯರ ಅಭಿನಯಕ್ಕೆ ಬಂದರೆ, ಜೆ.ಆರ್.ಡಿ ಟಾಟಾ ಆಗಿ ನಾಸೀರುದ್ದೀನ್ ಶಾ, ತಮ್ಮ ಅನುಭವದ ಮೂಲಕ ದೂರದೃಷ್ಟಿಯ ಕೈಗಾರಿಕಾ ನಾಯಕತ್ವವನ್ನು ಅತ್ಯಂತ ಸಂಯಮದಿಂದ ಕಟ್ಟಿಕೊಡುತ್ತಾರೆ. ಯಾವುದೇ ಅತಿರೇಕವಿಲ್ಲದ ಸಹಜಾಭಿನಯದ ಅವರ ಪಾತ್ರ ಕಥೆಗೆ ಸ್ಥಿರತೆ ನೀಡುತ್ತದೆ. ಇನ್ನು ದೇಸಾಯಿಯಾಗಿ ಜಿಮ್ ಸಾರ್ಬ್ ಅಭಿನಯ ಸರಣಿಯ ಅತ್ಯಂತ ಜೀವಂತ ಅಂಶಗಳಲ್ಲಿ ಒಂದು. ಆಧುನಿಕ ದೃಷ್ಟಿಕೋನ, ಆತ್ಮವಿಶ್ವಾಸ ಮತ್ತು ವ್ಯಾವಹಾರಿಕ ಚಿಂತನೆಗಳನ್ನು ಅವರು ಪರಿಣಾಮಕಾರಿಯಾಗಿ ವ್ಯಕ್ತಪಡಿಸಿದ್ದಾರೆ. ನಾಸೀರುದ್ದೀನ್ ಶಾ ಮತ್ತು ಜಿಮ್ ಸಾರ್ಬ್- ಇಬ್ಬರೂ ಅದದೇ ಪಾತ್ರಗಳಾಗಿ ಬದುಕಿದಂತೆ, ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ಪೋಷಕ ಪಾತ್ರಧಾರಿಗಳಾದ ಆಕಾಶ್(ವೈಭವ್ ತತ್ವಾಡಿ), ಮೇಘಾ ಮಾತ್ರೆ(ಕಾವೇರಿ ಸೇಥ್), ಗೌರವ್ ಧರ್(ಲಕ್ಷವೀರ್ ಸರನ್) ಮತ್ತು ಕೆ.ಎಸ್. ಗೋಪಾಲನ್(ಜಾಯ್ ಸೇನ್ ಗುಪ್ತ) ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

deccanherald 2025 09 25 ibkn242f Made in India
ಜೆ.ಆರ್.ಡಿ ಟಾಟಾ ಆಗಿ ನಾಸೀರುದ್ದೀನ್ ಶಾ, ದೇಸಾಯಿಯಾಗಿ ಜಿಮ್ ಸಾರ್ಬ್

ಇನ್ನು ಸರಣಿಯ ಉದ್ದಕ್ಕೂ, ಸನ್ನಿವೇಶಗಳಿಗೆ ತಕ್ಕಂತೆ ಹಳೆಯ ಹಿಂದಿ ಚಿತ್ರಗೀತೆಗಳು ಪದೇ ಪದೆ ಕೇಳಿಬರುತ್ತವೆ. ಆದರೆ ಅವು ಬಹುತೇಕ ದೃಶ್ಯಗಳೊಂದಿಗೆ ಹೊಂದಿಕೊಳ್ಳುವುದಿಲ್ಲ; ದೃಶ್ಯಗಳನ್ನು ಪರಿಣಾಮಕಾರಿಯಾಗಿಸುವುದೂ ಇಲ್ಲ. ಬಹುಶಃ ಸರಣಿಯ ಸಹನಿರ್ಮಾಪಕರು ಟೀ-ಸೀರಿಸ್‌ನ ಮಾಲೀಕರಾಗಿರುವುದರಿಂದ, ಅವರನ್ನು ಓಲೈಸಲು ಸೇರಿಸಿರಬಹುದೆನಿಸುತ್ತದೆ. ಹಾಗೆಯೇ ಹಳೆಯ ಮುಂಬೈನ ಆರ್ಕೈವ್ ದೃಶ್ಯಗಳಿಗೆ ಹಾಕಿರುವ ರೆಟ್ರೋ ಫಿಲ್ಟರ್‌ಗಳ ಬಳಕೆಯೂ ಸ್ವಲ್ಪ ಹೊತ್ತಿನ ನಂತರ ಕಣ್ಣಿಗೆ ಕಷ್ಟ ಕೊಡುತ್ತದೆ. ವಿದೇಶಿಯರನ್ನು ಚಿತ್ರಿಸಿರುವ ರೀತಿಯೂ ರೂಢಿಗತವಾಗಿದೆ.

ಇಷ್ಟಾದರೂ ಸರಣಿ ನಿರ್ದೇಶಕರಾದ ರಾಬಿ ಗ್ರೆವಾಲ್, ಕಾರ್ಪೊರೇಟ್ ಜಗತ್ತನ್ನು ಅತಿಯಾದ ತಾಂತ್ರಿಕ ಪದಜಾಲದಿಂದ ಭಾರವಾಗಿಸದೆ, ಸಾಮಾನ್ಯ ಪ್ರೇಕ್ಷಕರಿಗೂ ಅರ್ಥವಾಗುವ ರೀತಿಯಲ್ಲಿ ನಿರೂಪಿಸಿರುವುದು, ಮೆಚ್ಚಬೇಕಾದ ಅಂಶ. ಇದಕ್ಕೆ ಪೂರಕವಾಗಿ, ಛಾಯಾಗ್ರಹಣ, ಕಲಾ ನಿರ್ದೇಶನ ಸರಣಿಯನ್ನು ಸಹ್ಯವಾಗಿಸಲು ಸಾಥ್ ನೀಡಿವೆ. ಹಿನ್ನೆಲೆ ಸಂಗೀತ ಕಥೆಯ ಭಾವನಾತ್ಮಕ ಹರಿವಿಗೆ ಹೆಗಲೆಣೆಯಾಗಿದೆ.

ಇದನ್ನು ಓದಿದ್ದೀರಾ?: ಮಣ್ಣಿನ ವಾಸನೆಯನ್ನು ಬೆಳ್ಳಿತೆರೆಯ ಮೇಲೆ ಹರಡಿದ ನಿರ್ದೇಶಕ ಭಾರತಿರಾಜ

‘ಮೇಡ್ ಇನ್ ಇಂಡಿಯಾ: ಎ ಟೈಟಾನ್ ಸ್ಟೋರಿ’ ಭಾರತೀಯ ಕಾರ್ಪೊರೇಟ್ ಇತಿಹಾಸವನ್ನು ಜನಪ್ರಿಯ ಮಾಧ್ಯಮದಲ್ಲಿ ಪರಿಚಯಿಸುವ ಯಶಸ್ವಿ ಪ್ರಯತ್ನವಾಗಿದೆ. ಇದು ಉದ್ಯಮಶೀಲತೆ, ನಾಯಕತ್ವ ಮತ್ತು ಬ್ರ್ಯಾಂಡ್ ನಿರ್ಮಾಣದ ಪಾಠಗಳನ್ನು ಮನರಂಜನೆಯೊಂದಿಗೆ ಜೋಡಿಸುತ್ತದೆ. ಆದರೆ ಇತಿಹಾಸದ ಸಂಪೂರ್ಣ ಸಂಕೀರ್ಣತೆಯನ್ನು ಅನಾವರಣಗೊಳಿಸುವುದಿಲ್ಲ. ಸಂಸ್ಥೆಯ ಸಾಧನೆಗಳಿಗೆ ಹೆಚ್ಚು ಒತ್ತು ನೀಡುವುದನ್ನೂ ಬಿಡುವುದಿಲ್ಲ.

ಹೀಗಾಗಿ, ಈ ಸರಣಿಯನ್ನು ಸಂಪೂರ್ಣ ಐತಿಹಾಸಿಕ ದಾಖಲೆಯಾಗಿ ಅಲ್ಲ, ಬದಲಿಗೆ ಕಾರ್ಪೊರೇಟ್ ಯಶೋಗಾಥೆಯನ್ನು ಆಧರಿಸಿದ ನಾಟಕೀಯ ನಿರೂಪಣೆಯಾಗಿ ನೋಡಬೇಕೆನಿಸುತ್ತದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

1,870 ಕೋಟಿ ರೂ. ದೇಣಿಗೆ ದಂಧೆ ಆರೋಪ: ಗುಜರಾತ್‌ನ 3 ರಾಜಕೀಯ ಪಕ್ಷಗಳ ಅಕ್ರಮ ಬಯಲು

ಗುಜರಾತ್‌ನಲ್ಲಿ ನೋಂದಾಯಿತವಾಗಿದ್ದ, ಆದರೆ ಮಾನ್ಯತೆ ಪಡೆಯದ ಮೂರು ರಾಜಕೀಯ ಪಕ್ಷಗಳು ಆದಾಯ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ ಮಂಡಳಿಯ ಚಪ್ಪಾಳೆ

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ...

ತಮಗೆ ಬಿಜೆಪಿ‌ ಸೇರುವಂತೆ ಗ್ಯಾನೇಶ್ ಕುಮಾರ್ ಆಹ್ವಾನಿಸಿದ್ದರು: ನಿವೃತ್ತ ಐಎಎಸ್ ಜಿಜಿ ಥಾಮ್ಸನ್

ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರು 2016ರಲ್ಲಿ ಸರ್ಕಾರಿ ಸೇವೆಯಲ್ಲಿದ್ದಾಗ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ ʼನೀರೋʼ; ಭಾರತ ಉರಿಯುತ್ತಿರುವಾಗ ಭಜನೆ ಮಾಡಿದ ʼಮೋದಿʼ!

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ,...