ಕೇಜ್ರೀವಾಲ್ ಮತ್ತು ರಾಹುಲ್ ಪ್ರಕರಣಗಳು- ನ್ಯಾಯಮೂರ್ತಿಗಳ ಭಿನ್ನ ನಿರ್ಧಾರಗಳು ಹುಟ್ಟು ಹಾಕಿದ ಪ್ರಶ್ನೆಗಳಿವು!

Date:

ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಮೂರ್ತಿಗಳು ಯಾವಾಗಲೂ ನಿಷ್ಪಕ್ಷಪಾತವಾಗಿರಬೇಕು. ಇದು ಬಹಳ ಮುಖ್ಯ ಕೂಡ. ನಿಷ್ಪಕ್ಷಪಾತವಾಗಿರಬೇಕು ಅನ್ನೋದು ಕೇವಲ ಕಾನೂನು ಪುಸ್ತಕದಲ್ಲಿ ಬರೆದಿಡುವುದಕ್ಕೆ ಮಾತ್ರ ಇರುವುದಲ್ಲ. ಯಾವುದೇ ರಾಜಕೀಯ ಪಕ್ಷ, ಯಾವುದೇ ನಾಯಕ ಅಥವಾ ಸಾಮಾನ್ಯ ನಾಗರಿಕನಿಗೂ ನ್ಯಾಯ ಸಿಗಬೇಕು ಎಂದರೆ ನ್ಯಾಯಮೂರ್ತಿಗಳು ತಮ್ಮ ವೈಯಕ್ತಿಕ ಅಭಿಪ್ರಾಯಗಳಿಂದ, ರಾಜಕೀಯ ಸಂಪರ್ಕಗಳಿಂದ ದೂರವಿರಬೇಕು. 

- Advertisement -

ಇತ್ತೀಚೆಗೆ ಎರಡು ಪ್ರಕರಣಗಳಲ್ಲಿ ನ್ಯಾಯಮೂರ್ತಿಗಳ ನಿಷ್ಪಕ್ಷಪಾತತೆಯ ಬಗ್ಗೆ ಚರ್ಚೆಯಾಗುತ್ತಿದೆ. ಒಂದು ಅರವಿಂದ್ ಕೇಜ್ರಿವಾಲ್ ಅವರ ಮದ್ಯ ನೀತಿ ಪ್ರಕರಣ, ಇನ್ನೊಂದು ರಾಹುಲ್ ಗಾಂಧಿ ಅವರ ದ್ವಿಪೌರತ್ವ ಪ್ರಕರಣ. ಈ ಎರಡನ್ನೂ ಹೋಲಿಸಿ ನೋಡಿದರೆ ನ್ಯಾಯಮೂರ್ತಿಗಳು ನಿಷ್ಪಕ್ಷಪಾತವಾಗಿರುವುದು ಏಕೆ ಇಷ್ಟು ಮುಖ್ಯ ಎಂದು ಸ್ಪಷ್ಟವಾಗುತ್ತದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಮೊದಲು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಪ್ರಕರಣ ನೋಡೋಣ. ಮದ್ಯ ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ನ್ಯಾಯಮೂರ್ತಿ ಶರ್ಮಾ ಅವರನ್ನು ವಿಚಾರಣೆಯಿಂದ ಹಿಂದೆ ಸರಿಯುವಂತೆ ಅರ್ಜಿ ಸಲ್ಲಿಸಿದ್ದರು. ಅರಿವಿಂದ್‌ ಕೇಜ್ರಿವಾಲ್‌ ಅವರ ಆರೋಪ ಏನಾಗಿತ್ತು? “ನ್ಯಾಯಮೂರ್ತಿ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಅಧಿವಕ್ತ ಪರಿಷತ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ” ಅನ್ನೋದಾಗಿತ್ತು. “ಹಾಗಾಗಿ ಸ್ವರ್ಣಕಾಂತ್‌ ಶರ್ಮಾ ಅವರಂತಹ ನ್ಯಾಯಾಮೂರ್ತಿಗಳಿಂದ ನನಗೆ ನ್ಯಾಯ ಸಿಗುವ ನಿರೀಕ್ಷೆ ಇಲ್ಲ” ಅನ್ನೋದು ಕೇಜ್ರಿವಾಲ್ ಅವರ ವಾದವಾಗಿತ್ತು. ಇಷ್ಟೇ ಅಲ್ಲ, ನ್ಯಾಯಮೂರ್ತಿ ಶರ್ಮ ಅವರ ಮಗ ಮತ್ತು ಮಗಳು ಇಬ್ಬರೂ ದೆಹಲಿ ಹೈಕೋರ್ಟು-ಸುಪ್ರೀಮ್ ಕೋರ್ಟ್ ಮುಂದೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ವಕೀಲರ ಪಟ್ಟಿಯಲ್ಲಿದ್ದಾರೆ.  ಹಾಗಾಗಿ ವಿಚಾರಣೆಯ ಪ್ರಕ್ರಿಯೆಯಲ್ಲಿ ಪೂರ್ವಗ್ರಹದ ಸಕಾರಣ ಶಂಕೆಯಿದ್ದು, ನ್ಯಾಯಾಂಗದಲ್ಲಿ ಸಾರ್ವಜನಿಕರ ವಿಶ್ವಾಸಕ್ಕೆ ಕುಂದು ಬರುವ ಸಂಭವ ಕಂಡು ಬಂದಲ್ಲಿ ನ್ಯಾಯಮೂರ್ತಿಯವರು ಅಂತಹ ಕೇಸುಗಳ ವಿಚಾರಣೆಯಿಂದ ಹಿಂದೆ ಸರಿಯಬೇಕಾಗುತ್ತದೆ ಎನ್ನುತ್ತದೆ ಕಾನೂನು. 

ಆದರೆ ದೆಹಲಿ ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದೆ. ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಸ್ಪಷ್ಟವಾಗಿ ಹೇಳಿದ್ದಾರೆ, “ನನ್ನ ಮೇಲೆ ಮಾಡಲಾದ ಆರೋಪಗಳಲ್ಲಿ ಯಾವುದೇ ಪುರಾವೆಗಳಿಲ್ಲ. ಕಾರ್ಯಕ್ರಮಗಳು ರಾಜಕೀಯವಲ್ಲ, ಕಾನೂನು ವಿಷಯಗಳ ಬಗ್ಗೆ ಮಾತನಾಡಲು ಆಹ್ವಾನಿಸಲಾಗಿತ್ತು. ನಾನು ವಿಚಾರಣೆಯಿಂದ ಹಿಂದೆ ಸರಿಯುವುದಿಲ್ಲ” ಅಂತ. ಹಾಗೇ ಅವರು ಮುಂದುವರೆದು ಹೇಳ್ತಾರೆ, “ನ್ಯಾಯಮೂರ್ತಿಗಳನ್ನು ಬಾರ್ ಅಸೋಸಿಯೇಷನ್‌ಗಳು ಕಾರ್ಯಕ್ರಮಗಳಿಗೆ ಆಹ್ವಾನಿಸುವುದು ಸಾಮಾನ್ಯ. ಅದರಿಂದ ಪಕ್ಷಪಾತ ಮಾಡುತ್ತೇವೆ ಎಂದು ಅರ್ಥವಲ್ಲ” ಅಂತ. 

photo 6265028375197978443 y

ಆರೆಸ್ಸೆಸ್- ಬಿಜೆಪಿ ಸಾಮೀಪ್ಯ, ಈ ಹಿಂದೆ ಇದೇ ಅಬಕಾರಿ ಕೇಸಿನಲ್ಲಿ ಆಪ್ ಗಣ್ಯರಿಗೆ ಜಾಮೀನು ನಿರಾಕರಣೆ, ಬಿಜೆಪಿಯ ಮಾಜಿ ಕೇಂದ್ರ ಮಂತ್ರಿ ಕಲ್ಲಿದ್ದಿಲು ಹಗರಣದಲ್ಲಿ ಎದುರಿಸಿದ್ದ ಸಜೆಗೇ ತಡೆಯಾಜ್ಞೆ ನೀಡಿಕೆ ಹಾಗೂ ತಮ್ಮ ಇಬ್ಬರು ಮಕ್ಕಳು ಸುಪ್ರೀಮ್ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ವಕೀಲರ ಕೇಂದ್ರ ಸರ್ಕಾರದ ಪಟ್ಟಿಯಲ್ಲಿರುವ ಅಂಶಗಳು ನೈಸರ್ಗಿಕ ನ್ಯಾಯ ಸಿಗುವ ಕುರಿತು ಕಕ್ಷಿದಾರರಲ್ಲಿ ಶಂಕೆ ಹುಟ್ಟಿಸುವುದು ಮೇಲ್ನೋಟಕ್ಕೇ ಎದ್ದು ಕಾಣುವ ವಾಸ್ತವ. ಕರ್ನಾಟಕದ ನಿದರ್ಶನಗಳನ್ನೇ ನೀಡುವುದಾದರೆ ರಾಘವೇಶ್ವರ ಭಾರತಿಯವರು ಎದುರಿಸಿದ ಅತ್ಯಾಚಾರ ಮತ್ತು ಆಸ್ತಿಪಾಸ್ತಿ ವಿವಾದಗಳ ಕೇಸುಗಳ ವಿಚಾರಣೆಗೆ ಸಂಬಂಧಿಸಿದಂತೆ 2014-2019ರ ಅವಧಿಯಲ್ಲಿ ಕರ್ನಾಟಕ ಹೈಕೋರ್ಟಿನ 15 ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದ ಉದಾಹರಣೆಗಳೂ ಇವೆ. 

ಇದೇ ಸಮಯದಲ್ಲಿ ಇನ್ನೊಂದು ಪ್ರಕರಣದ ಬಗ್ಗೆಯೂ ಕಣ್ಣಾಡಿಸೋಣ. ಇದು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದಲ್ಲಿ ನಡೆದ ಘಟನೆ. ಇಲ್ಲಿ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರು ರಾಹುಲ್ ಗಾಂಧಿ ಅವರ ದ್ವಿಪೌರತ್ವ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಏಪ್ರಿಲ್ 17ರಂದು ಹೊರಡಿಸಿದ್ದ ತಮ್ಮ ಹಿಂದಿನ ಆದೇಶವನ್ನು (ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ) ಪರಿಷ್ಕರಿಸಿದ ನಂತರವೇ ಈ ನಿರ್ಧಾರ ಬಂದಿರುವುದು. ನ್ಯಾಯಾಲಯವು ಸ್ಪಷ್ಟವಾಗಿ ಅಭಿಪ್ರಾಯ ಪಟ್ಟಿದೆ, “ದೂರುದಾರ ವಿಘ್ನೇಶ್ ಶಿಶಿರ್ ನೀಡಿರುವ ಆಕ್ಷೇಪಾರ್ಹ ಹೇಳಿಕೆಯ ಕಾರಣಕ್ಕೆ  ನಾನು ಈ ಪ್ರಕರಣದಿಂದ ಹೊರಬರುತ್ತಿದ್ದೇನೆ” ಅಂತ.

ಹೌದು, ದ್ವಿಪೌರತ್ವ ಆರೋಪಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಹೇಳಿಕೆಯ ಎಫ್‌ಐಆರ್‌ ದಾಖಲಿಸುವಂತೆ ಆದೇಶ ನೀಡಿ, ಬಳಿಕ ತನ್ನದೇ ಆದೇಶಕ್ಕೆ ತಡೆ ನೀಡಿರುವ ಬಗ್ಗೆ ದೂರುದಾರ ಕರ್ನಾಟಕದ ಬಿಜೆಪಿ ಕಾರ್ಯಕರ್ತ ವಿಘ್ನೇಶ್‌ ಶಿಶಿರ್‌ ಅವರು ನೀಡಿರುವ ಹೇಳಿಕೆಯನ್ನ ನ್ಯಾಯಮೂರ್ತಿ ಸುಭಾಷ್‌ ಅವರು ಬಲವಾಗಿ ಖಂಡಿಸಿದ್ದಾರೆ. “ಇದು ನ್ಯಾಯಸಮ್ಮತವಲ್ಲದ ಮತ್ತು ಸ್ವೀಕಾರಾರ್ಹವಲ್ಲದ ವರ್ತನೆ” ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೇನೆ ಪ್ರಕರಣದ ವಿಚಾರಣೆಗೆ ಹೊಸ ಪೀಠ ರಚಿಸುವಂತೆ ಅಲಹಾಬಾದ್‌ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಗಳಿಗೆ ಮನವಿ ಮಾಡಿರುವ ಸುಭಾಷ್‌ ಅವರು, “ದೂರುದಾರರು ತನ್ನನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದರು” ಅಂತ ಆರೋಪಿಸಿದ್ದಾರೆ. 

 ಏಪ್ರಿಲ್ 20ರಂದು ವಿಚಾರಣೆ ನಿಗದಿಯಾಗಿತ್ತು, ಆದರೆ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರು ಸ್ವಯಂ ನಿರ್ಧಾರ ತೆಗೆದುಕೊಂಡು ಹಿಂದೆ ಸರಿದರು. ಆರೋಪ ಬಂದ ನಂತರ ಅಥವಾ ಸಂದೇಹ ಸೃಷ್ಟಿಯಾದ ನಂತರವೇ ಅವರು ವಿಚಾರಣೆಯಿಂದ ದೂರವಾಗಿದ್ದು. 

ಈಗ ಈ ಎರಡು ಪ್ರಕರಣಗಳನ್ನು ಹೋಲಿಸಿ ನೋಡೋಣ. ಮೊದಲ ಪ್ರಕರಣದಲ್ಲಿ ನ್ಯಾಯಮೂರ್ತಿ ಶರ್ಮಾ ಅವರು ಆರೋಪಗಳನ್ನು ತಿರಸ್ಕರಿಸಿ ವಿಚಾರಣೆ ಮುಂದುವರಿಸಲು ನಿರ್ಧರಿಸಿದರು. ಅವರ ಪ್ರಕಾರ ಆರೋಪಗಳಿಗೆ ಪುರಾವೆಗಳಿಲ್ಲ, ಕಾರ್ಯಕ್ರಮಗಳು ಕೇವಲ ಕಾನೂನು ಸಂಬಂಧಿ ಅನ್ನೋದಾಗಿತ್ತು. 

photo 6287528433256435715 y

ಎರಡನೇ ಪ್ರಕರಣದಲ್ಲಿ ನ್ಯಾಯಮೂರ್ತಿ ವಿದ್ಯಾರ್ಥಿ ಅವರು ಆಕ್ಷೇಪಾರ್ಹ ಹೇಳಿಕೆಯ ಕಾರಣಕ್ಕೆ ಸ್ವಯಂ  ನಿರ್ಧಾರ ತೆಗೆದುಕೊಂಡು ಹಿಂದೆ ಸರಿದರು. ಇಲ್ಲಿ ಯಾವುದೇ ದೊಡ್ಡ ಆರೋಪ ಬಂದಿಲ್ಲ, ಆದರೆ ಸಂದೇಹ ತಪ್ಪಿಸಲು ನ್ಯಾಯಮೂರ್ತಿ ಈ ನಿರ್ಧಾರ ತೆಗೆದುಕೊಂಡಿದ್ದಾಗಿತ್ತು. ಒಂದು ಕಡೆ ನ್ಯಾಯಮೂರ್ತಿ “ನಾನು ನಿಷ್ಪಕ್ಷಪಾತ” ಎಂದು ಘೋಷಿಸಿ ಮುಂದುವರಿದರೆ, ಇನ್ನೊಂದು ಕಡೆ “ಸಂದೇಹ ತಪ್ಪಿಸೋಣ” ಎಂದು ಹಿಂದೆ ಸರಿದರು. ಇದು ನ್ಯಾಯಾಂಗದಲ್ಲಿ ಎರಡು ವಿಧಾನಗಳನ್ನು ತೋರಿಸುತ್ತದೆ. ಒಂದು – ಆರೋಪವನ್ನು ಎದುರಿಸಿ ನಿಲ್ಲುವುದು. ಇನ್ನೊಂದು – ಸಂದೇಹವನ್ನು ತಪ್ಪಿಸಿ ವಿಶ್ವಾಸವನ್ನ ಕಾಯ್ದುಕೊಳ್ಳುವುದು.

ಆದರೆ ಇಲ್ಲಿ ಮುಖ್ಯ ಪ್ರಶ್ನೆ ಏನು? ನ್ಯಾಯಮೂರ್ತಿಗಳು ನಿಷ್ಪಕ್ಷಪಾತವಾಗಿರುವುದು ಏಕೆ ಇಷ್ಟು ಮುಖ್ಯ? ನಮ್ಮ ಸಂವಿಧಾನದಲ್ಲಿ ನ್ಯಾಯಾಂಗವನ್ನು ಸ್ವತಂತ್ರವಾಗಿಡಲು ತುಂಬಾ ಕಾಳಜಿ ವಹಿಸಲಾಗಿದೆ. ನ್ಯಾಯಮೂರ್ತಿ ಯಾರಿಗೂ ಭಯಪಡಬಾರದು, ಯಾರಿಗೂ ಪಕ್ಷಪಾತ ಮಾಡಬಾರದು. ಅವರು ಕ್ರಿಕೆಟ್ ಮ್ಯಾಚ್‌ನ ರೆಫರಿ ಹಾಗೆ. ಆಟಗಾರರು ಯಾವ ತಂಡದವರಾಗಿದ್ದರೂ ರೆಫರಿ ನಿಷ್ಪಕ್ಷಪಾತವಾಗಿರಬೇಕು. ಇಲ್ಲದಿದ್ದರೆ ರೆಫರಿ, ಆಟಗಾರರ ಮತ್ತು ಪ್ರೇಕ್ಷಕರು ವಿಶ್ವಾಸ ಕಳೆದುಕೊಳ್ಳುತ್ತಾರೆ. ಅದೇ ರೀತಿ ನ್ಯಾಯಾಲಯದಲ್ಲಿ ಪಕ್ಷಪಾತ ಇದೆ ಎಂದು ಜನರಿಗೆ ಒಂದು ಸಲ ಅನಿಸಿದರೆ ಸಾಕು ಜನರು ಕಾನೂನು ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಾರೆ. ದೊಡ್ಡ ದೊಡ್ಡ ನಾಯಕರು ಕೇಸುಗಳನ್ನು ಗೆಲ್ಲುತ್ತಾರೆ ಎಂದು ಸಾಮಾನ್ಯ ಜನರು ಭಾವಿಸುತ್ತಾರೆ. ಇದು ದೇಶದ ಜನತಾ ಪ್ರಭುತ್ವಕ್ಕೂ ದೊಡ್ಡ ಹೊಡೆತ.

ಫಾರ್‌ ಎಕ್ಸಾಂಪಲ್‌ ಕೇಜ್ರಿವಾಲ್ ಪ್ರಕರಣದಲ್ಲಿ ಆರೋಪ ಬಂದಾಗ ನ್ಯಾಯಮೂರ್ತಿ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಆದರೆ ಜನರ ಮನಸ್ಸಿನಲ್ಲಿ ಈಗಾಗಲೇ “ನ್ಯಾಯಮೂರ್ತಿ ವಿರುದ್ಧ ಆರೋಪ ಬಂದಿದೆಯಲ್ಲ” ಅನ್ನೋ ಸಂದೇಶ ಹಾಗೇ ಉಳಿದಿದೆ. ಅದೇ ರೀತಿ ರಾಹುಲ್ ಗಾಂಧಿ ಪ್ರಕರಣದಲ್ಲಿ ನ್ಯಾಯಮೂರ್ತಿ ಹಿಂದೆ ಸರಿದಿದ್ದು ಸರಿ. ಏಕೆಂದರೆ ಸಣ್ಣ ಸಂದೇಹವೂ ನ್ಯಾಯದ ಮೇಲೆ ಕರಿ ಛಾಯೆಯನ್ನ ಬೀರುತ್ತದೆ. 

photo 6265028375197978439 y

ಹಾಗಾದರೆ ನ್ಯಾಯಮೂರ್ತಿಗಳು ತಮ್ಮ ಜೀವನದಲ್ಲಿ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸರಿಯೇ? ಕಾನೂನು ವಿಷಯಗಳ ಬಗ್ಗೆ ಮಾತನಾಡುವುದು ತಪ್ಪಲ್ಲ. ಆದರೆ ಅದು ರಾಜಕೀಯ ರಂಗಕ್ಕೆ ಹೋಗದಂತೆ ನೋಡಿಕೊಳ್ಳಬೇಕು. ನ್ಯಾಯಮೂರ್ತಿಗಳು ಸಾರ್ವಜನಿಕರ ಆಸ್ತಿ, ಅವರು ತಮ್ಮ ಇಮೇಜ್ ಅನ್ನು ರಕ್ಷಿಸಿಕೊಳ್ಳಬೇಕು. 

ಇನ್ನು ನಿಷ್ಪಕ್ಷಪಾತತೆಯ ಮಹತ್ವವನ್ನು ಮತ್ತೊಂದು ರೀತಿಯಲ್ಲಿ ನೋಡೋಣ. ನಮ್ಮ ದೇಶದಲ್ಲಿ ಕಾಂಗ್ರೆಸ್, ಬಿಜೆಪಿ, ಎಎಪಿ ಎಲ್ಲಾ ಪಕ್ಷಗಳೂ ನ್ಯಾಯಾಲಯಕ್ಕೆ ಹೋಗುತ್ತವೆ. ಒಂದು ಪಕ್ಷದ ನಾಯಕನಿಗೆ ಪಕ್ಷಪಾತ ಇದೆ ಎಂದು ಅನಿಸಿದರೂ ಅದು ರಾಜಕೀಯ ಸ್ಥಿರತೆಯ ಮೇಲೂ ಪರಿಣಾಮ ಬೀರುತ್ತದೆ. ಸುಪ್ರೀಂ ಕೋರ್ಟ್ ಹಲವು ಬಾರಿ ಹೇಳಿದೆ, “ನ್ಯಾಯಮೂರ್ತಿ ಮನಸ್ಸು ಖಾಲಿ ಇರಬೇಕು. ಯಾವುದೇ ಪೂರ್ವಾಗ್ರಹ ಇರಬಾರದು” ಅಂತ. ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ, ನ್ಯಾಯಮೂರ್ತಿಗಳು ಕೋರ್ಟ್‌ನಿಂದ ಮನೆಗೆ ಹೋದಮೇಲೆ ಮನೆಯಲ್ಲಿ ಕುಳಿತುಕೊಂಡು “ಈ ವ್ಯಕ್ತಿ ನನ್ನ ಪರಿಚಯದವನು” ಎಂದು ಯೋಚಿಸಲೇ ಬಾರದು. ನ್ಯಾಯಮೂರ್ತಿ ಕೇವಲ ಕಾನೂನು ಹಾಗೂ ಪುರಾವೆಗಳನ್ನು ಮಾತ್ರ ನೋಡಬೇಕು.

ನ್ಯಾಯಮೂರ್ತಿಗಳು ತಮ್ಮ ಮೇಲೆ ಬಂದ ಆರೋಪಗಳನ್ನು ತಿರಸ್ಕರಿಸುವುದು ಸರಿ, ಆದರೆ ಅದು ಜನರ ವಿಶ್ವಾಸವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ಹಿಂದೆ ಸರಿಯುವುದೂ ಒಂದು ದೊಡ್ಡ ಗುಣ. ಅದು ಧೈರ್ಯದ ಕೆಲಸ. ಏಕೆಂದರೆ ಅದು “ನನ್ನ ಮೇಲೆ ಯಾವುದೇ ಸಂದೇಹ ಬರಬಾರದು” ಎನ್ನುವ ಸಂದೇಶವನ್ನ ಸಾಮಾನ್ಯ ಜನರಿಗೆ ಕೊಡುತ್ತದೆ. ಇಂದು ಕೇಜ್ರಿವಾಲ್ ಪ್ರಕರಣವಾಗಲಿ, ರಾಹುಲ್ ಗಾಂಧಿ ಪ್ರಕರಣವಾಗಲಿ – ಎರಡೂ ರಾಜಕೀಯ ನಾಯಕರದ್ದೇ ಪ್ರಕರಣ. ಆದರೆ ನಾಳೆ ಆ ರಾಜಕೀಯ ನಾಯಕರ ಜಾಗದಲ್ಲಿ ಸಾಮಾನ್ಯ ವ್ಯಕ್ತಿ ಇರಬಹುದು. 

ಇನ್ನು ಸ್ವಲ್ಪ ಆಳಕ್ಕೆ ಹೋಗೊದಾದರೆ, ನ್ಯಾಯಮೂರ್ತಿಗಳು ತಮ್ಮ ವೈಯಕ್ತಿಕ ಜೀವನದಲ್ಲಿ ಏನು ಮಾಡುತ್ತಾರೆ ಎನ್ನುವುದು ಅವರ ವೃತ್ತಿಗೆ ಸಂಬಂಧಿಸಿದ್ದು. ಆದರೆ ಅದು ನ್ಯಾಯದ ಮೇಲೆ ಪ್ರಭಾವ ಬೀರಬಾರದು. ಉದಾಹರಣೆಗೆ ನ್ಯಾಯಮೂರ್ತಿ ಯಾವುದೇ ಸಂಘಟನೆಯ ಕಾರ್ಯಕ್ರಮಕ್ಕೆ ಹೋಗುವುದಕ್ಕೂ ಮೊದಲು ತನ್ನ ಸ್ಥಾನದ ಬಗ್ಗೆ ಯೋಚಿಸಬೇಕು, ಆ ಕಾರ್ಯಕ್ರಮವೊಂದಕ್ಕೆ ಹೋದರೆ ಅದು ರಾಜಕೀಯ ಬಣ್ಣ ಬಳೆದರೆ ಏನಾಗಬಹುದು ಅನ್ನೋದನ್ನೂ ಯೋಚಿಸಬೇಕು. ಇನ್ನು ಜಡ್ಜಸ್ ಅಸೋಸಿಯೇಷನ್ ಕೂಡ ಇಂತಹ ವಿಷಯಗಳಲ್ಲಿ ಮಾರ್ಗಸೂಚಿ ನೀಡಬೇಕು. ಜನರು ನ್ಯಾಯಾಲಯವನ್ನು “ಕೊನೆಯ ಆಶ್ರಯ” ಎಂದು ನಂಬುತ್ತಾರೆ. ಆ ನಂಬಿಕೆ ಉಳಿಯಬೇಕು. ಹಾಗಾಗಿ ನ್ಯಾಯಮೂರ್ತಿಗಳು ನಿಷ್ಪಕ್ಷಪಾತವಾಗಿರುವುದು ರಾಜಕೀಯ ಪಕ್ಷಗಳಿಗೆ ಮಾತ್ರಲ್ಲ, ಎಲ್ಲಾ ನಾಗರಿಕರಿಗೂ ಮುಖ್ಯ. ಸೋ ನ್ಯಾಯಾಂಗವೂ ತನ್ನ ಇಮೇಜ್ ಅನ್ನು ರಕ್ಷಿಸಿಕೊಳ್ಳುವ ತುರ್ತಿದೆ. 

ಇಲ್ಲಿ ಇನ್ನೊಂದು ಪಾಂಯ್ಟ್‌ ಇದೆ. ನ್ಯಾಯಮೂರ್ತಿಗಳು ಪ್ರಕರಣದಿಂದ ಹಿಂದೆ ಸರಿಯೋದು ಅಥವಾ ಸರಿಯದೇ ಇರುವುದು ಸಂಪೂರ್ಣವಾಗಿ ಅವರ ವಿವೇಕಕ್ಕೆ ಬಿಟ್ಟ ವಿಚಾರ. ಯಾವುದೇ ಪ್ರಕರಣದಲ್ಲಿ ತಮ್ಮ ನಿಷ್ಪಕ್ಷಪಾತತೆಯ ಮೇಲೆ ಸಣ್ಣ ಮಟ್ಟಿನ ಅನುಮಾನವೂ ಮೂಡಬಹುದೆಂಬ ಭಾವನೆ ಬಂದಿದ್ದೇ ಆದಲ್ಲಿ ಅವರು ಸ್ವಯಂ ನಿರ್ಧಾರ ತೆಗೆದುಕೊಳ್ಳಬೇಕು. ಇದನ್ನು ಕಾನೂನಿನಲ್ಲಿ “ರಿಕ್ಯೂಸಲ್” ಎಂದು ಕರೆಯುತ್ತಾರೆ.

 ಇಲ್ಲಿ ಕಾನೂನುಬದ್ಧ ಬಾಧ್ಯತೆಗಿಂತ ಹೆಚ್ಚಾಗಿ ನೈತಿಕ ಜವಾಬ್ದಾರಿಯೂ ಕಾಣಿಸುತ್ತದೆ. ನ್ಯಾಯದ ಮೇಲೆ ಜನರ ವಿಶ್ವಾಸ ಉಳಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿರುವುದರಿಂದ, ನ್ಯಾಯಮೂರ್ತಿಗಳು ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅತ್ಯಂತ ಸಂವೇದನಾಶೀಲವಾಗಿ ನಡೆದುಕೊಳ್ಳಬೇಕು. 

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಹಲ್ಲೆಗೊಳಗಾಗಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಶಿವಮೊಗ್ಗ ರೈಲ್ವೆ ಹಳಿ ಬಳಿ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದ 26 ವರ್ಷದ...

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ; ತರಾತುರಿಯಲ್ಲಿ ಅಂತ್ಯಕ್ರಿಯೆ, ಕಾರಣ ನಿಗೂಢ!

ಸೊರಬ ತಾಲೂಕಿನ ಮುಟಗುಪ್ಪೆ ಗ್ರಾಮದಲ್ಲಿ 22 ವರ್ಷದ ಯುವತಿಯೊಬ್ಬರು ಮನೆಯಲ್ಲಿ ನೇಣು...

ಶಿವಮೊಗ್ಗ | ಗಾಂಜಾ ಮಾರಾಟ ಆರೋಪ: ಐವರು ಅರೆಸ್ಟ್‌, 1.23 ಕೆಜಿ ಮಾದಕ ವಸ್ತು ಜಪ್ತಿ

ಶಿವಮೊಗ್ಗ ನಗರದ ಅನುಪಿನಕಟ್ಟೆ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ತುಂಗಾನಗರ...