"ಒಂದೆಡೆ ಇಚ್ಛೆಯ ಕೊರತೆ, ಇನ್ನೊಂದೆಡೆ ಸಾಮರ್ಥ್ಯದ ಕೊರತೆ" - ಹೀಗೆ ಈ ಎರಡು ಪ್ರವೃತ್ತಿಗಳು ಒಂದೇ ಬಿಂದುವಿನಲ್ಲಿ ಸಂಧಿಸಿರುವುದರಿಂದ, ಇಂದು ಜಗತ್ತಿನ ಪ್ರಮುಖ ದೇಶಗಳಾದ ಜಪಾನ್, ದಕ್ಷಿಣ ಕೊರಿಯಾ, ಯುರೋಪಿನ ರಾಷ್ಟ್ರಗಳು ಮತ್ತು ಚೀನಾ ಮಾತ್ರವಲ್ಲದೆ ಭಾರತದಲ್ಲೂ ಸಹ ಒಟ್ಟು ಫಲವತ್ತತೆ ದರವು ತೃಪ್ತಿಕರ ಮಟ್ಟಕ್ಕಿಂತ ಕೆಳಗೆ ಇಳಿಯುವಂತೆ ಮಾಡಿದೆ.
ಆಧುನಿಕ ಜಗತ್ತಿನಲ್ಲಿ ತಾಂತ್ರಿಕ ಪ್ರಗತಿ ಮತ್ತು ಆರ್ಥಿಕ ಬೆಳವಣಿಗೆ ಜತೆಗೆ ಹಲವು ಬದಲಾವಣೆಗೂ ಆಗುತ್ತಿವೆ. ಒಂದೆಡೆ ಮನುಷ್ಯನ ಆಲೋಚನಾ ಲಹರಿ, ಜೀವನಶೈಲಿ ಮತ್ತು ಆದ್ಯತೆಗಳು ಸಂಪೂರ್ಣವಾಗಿ ಮಾರ್ಪಾಡಾಗುತ್ತಿದೆ. ಸಂತಾನೋತ್ಪತ್ತಿಯ ಮೇಲಿನ ಆಸಕ್ತಿ ಕುಸಿಯುತ್ತಿದೆ. ಜನಸಂಖ್ಯೆ ಹೆಚ್ಚಿರುವಾಗ ಮಕ್ಕಳು ಹೆತ್ತು ಇನ್ನಷ್ಟು ಜನಸಂಖ್ಯೆ ಏರಿಸುವುದೇಕೆ ಎಂಬ ತರ್ಕದೊಂದಿಗೆ ಹಲವರಲ್ಲಿ ಸಂತಾನೋತ್ಪತ್ತಿಯ ಮೇಲಿನ ಆಸಕ್ತಿ (ಚೈಲ್ಡ್ ಫ್ರೀ) ಕುಸಿಯುತ್ತಿದೆ. ಇನ್ನೊಂದೆಡೆ, ಮಾನವನ ದೇಹದ ಜೈವಿಕ ಸಾಮರ್ಥ್ಯವೇ ಕ್ಷೀಣಿಸುತ್ತಿದೆ. ಫಲವತ್ತತೆಯ ದರ (Fertility Rate) ಜಾಗತಿಕ ಮಟ್ಟದಲ್ಲಿ ತೀವ್ರ ಕುಸಿತವನ್ನು ಕಾಣುತ್ತಿದೆ. ಈ ಎರಡು ವಿದ್ಯಮಾನಗಳು ಒಂದಕ್ಕೊಂದು ಬೆಸೆದುಕೊಂಡಿದ್ದು, ಮಾನವ ಕುಲದ ಭವಿಷ್ಯದ ಜನಸಂಖ್ಯಾ ಸಮತೋಲನವನ್ನೇ ನಾವಿಂದು ಪ್ರಶ್ನಿಸುವಂತೆ ಮಾಡಿದೆ.
ಹಳೆಯ ತಲೆಮಾರಿನಲ್ಲಿ ಮದುವೆ ಮತ್ತು ಮಕ್ಕಳನ್ನು ಹೆರುವುದು ಜೀವನದ ಅನಿವಾರ್ಯ ಹಾಗೂ ಸ್ವಾಭಾವಿಕ ಘಟ್ಟಗಳೆಂದು ಪರಿಗಣಿಸಲಾಗುತ್ತಿತ್ತು. ಆದರೆ ಇಂದು ಸಮಾಜದಲ್ಲಿ ವ್ಯಕ್ತಿಯ ಆಲೋಚನೆಗಳು, ವೈಯಕ್ತಿಕ ನಿರ್ಧಾರಗಳಿಗೆ ಒತ್ತು ನೀಡಲಾಗುತ್ತಿದೆ. ಭವಿಷ್ಯದ ಬಗೆಗಿನ ಆತಂಕ, ಮಕ್ಕಳನ್ನು ಹೆತ್ತು ಸಾಕುವ ಹೊಣೆಗಾರಿಕೆ, ಆರ್ಥಿಕ ಹೊರೆ, ಅಸ್ಥಿರತೆ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ವೃತ್ತಿಜೀವನದ ಆದ್ಯತೆ- ಇವೆಲ್ಲವೂ ಕೆಲವರು ನಮಗೆ ಮಕ್ಕಳು ಬೇಡ ಅಥವಾ ಒಂದೇ ಮಗು ಸಾಕು ಎಂಬ ನಿರ್ಧಾರಕ್ಕೆ ಬರುವಂತೆ ಮಾಡಿದೆ. ತೀವ್ರ ಮಾನಸಿಕ ಒತ್ತಡ, ನಿದ್ರಾಹೀನತೆ, ಬದಲಾದ ಜೀವನಶೈಲಿ, ವಿಷಕಾರಿಯಾಗುತ್ತಿರುವ ಪರಿಸರ- ಕೆಲವರು ಮಕ್ಕಳಾಗುತ್ತಿಲ್ಲ ಎಂದು ಕೊರಗುವಂತೆ ಮಾಡಿದೆ.
ಇದನ್ನು ಓದಿದ್ದೀರಾ? 3 ಮಕ್ಕಳು ಮಾಡಿಕೊಂಡ್ರೆ 30,000 ರೂ., 4ನೇ ಮಗುವಿಗೆ 40,000 ರೂ.; ನಾಯ್ಡು ಸರ್ಕಾರ ಘೋಷಣೆ
ಜಾಗತಿಕ ಸಂತಾನ ಫಲವತ್ತತೆ ಕುಸಿತಕ್ಕೆ ಮುಖ್ಯವಾಗಿ ಆಧುನಿಕ ಜೀವನಶೈಲಿ, ರಾಸಾಯನಿಕಗಳ ಬಳಕೆ ಮತ್ತು ಮಾಲಿನ್ಯ ಕಾರಣ ಎಂದು ಹಲವು ಸಂಶೋಧನಾ ವರದಿಗಳು ಹೇಳುತ್ತವೆ. ಇವೆಲ್ಲವೂ ಮಾನವನ ಪ್ರಜನನ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಜಾಗತಿಕವಾಗಿ ಗಂಡು ಮತ್ತು ಹೆಣ್ಣು ಇಬ್ಬರಲ್ಲೂ ಹಾರ್ಮೋನ್ ವ್ಯತ್ಯಾಸ ಹಾಗೂ ಫಲವತ್ತತೆಯ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಮದುವೆ ಮುಂದೂಡಿಕೆ ಮಾಡುವುದರಿಂದ ವಯಸ್ಸಾದಂತೆ ನೈಸರ್ಗಿಕವಾಗಿ ಫಲವತ್ತತೆ ಕಡಿಮೆಯಾಗಿ ಮಕ್ಕಳಾಗುತ್ತಿಲ್ಲ.
ಇನ್ನೊಂದೆಡೆ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಪಾಲನೆಯ ವೆಚ್ಚ ಗಗನಕ್ಕೇರಿದೆ. ಸ್ಥಿರವಾದ ಆದಾಯವಿದ್ದರೂ ಸಹ, ಭವಿಷ್ಯದ ಆರ್ಥಿಕ ಭದ್ರತೆಯ ಆತಂಕದಿಂದಾಗಿ ಅನೇಕ ದಂಪತಿಗಳು ಒಂದೇ ಮಗುವಿಗೆ ಸೀಮಿತವಾಗುತ್ತಿದ್ದಾರೆ ಅಥವಾ ಮಕ್ಕಳೇ ಬೇಡ (child free concept) ಎಂಬ ನಿರ್ಧಾರಕ್ಕೆ ಬರುತ್ತಿದ್ದಾರೆ. ಅದರಲ್ಲೂ Millennials & Gen Z ಪೀಳಿಗೆಯು ತಮ್ಮ ವೃತ್ತಿಜೀವನ, ಪ್ರವಾಸ, ಮಾನಸಿಕ ನೆಮ್ಮದಿ ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ. ಜತೆಗೆ ಭೂಮಿಯ ತಾಪಮಾನ ಏರಿಕೆ, ಸಂಪನ್ಮೂಲಗಳ ಕೊರತೆ ಮತ್ತು ಕಲುಷಿತ ಪರಿಸರ ಇರುವಾಗ ‘ಮುಂದಿನ ಪೀಳಿಗೆಗೆ ಈ ಜಗತ್ತು ವಾಸಿಸಲು ಯೋಗ್ಯವಾಗಿಲ್ಲ’ ಎಂಬ ಆತಂಕ ಯುವ ಪೀಳಿಗೆಯನ್ನು ಕಾಡುತ್ತಿದೆ. ಇದೂ ಕೂಡ ಸಂತಾನ ನಿರಾಸಕ್ತಿಗೆ ಪ್ರಮುಖ ಕಾರಣವಾಗಿದೆ.
ಈ ಬಗ್ಗೆ ಈ ದಿನ. ಕಾಮ್ಗೆ ಪ್ರತಿಕ್ರಿಯಿಸಿದ ಸಾರ್ವಜನಿಕ ಆರೋಗ್ಯ ತಜ್ಞರು, ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾದ ಡಾ. ಸುನೀಲ್ ಕುಮಾರ್, “ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್) ದತ್ತಾಂಶದ ಪ್ರಕಾರ ಸಂತಾನ ಫಲವತ್ತತೆ ದರ ಕುಸಿಯುತ್ತಿದೆ. ಈ ಹಿಂದೆ ಕುಟುಂಬವೆಂದರೆ ಇಬ್ಬರು ಮಕ್ಕಳು ಇರಬೇಕು ಎಂಬ ಮನಸ್ಥಿತಿ ಇತ್ತು. ಆದರೆ ಈಗ ಒಬ್ಬರು ಮಕ್ಕಳು ಮಾತ್ರ ಸಾಕೆನ್ನುವವರು ಇದ್ದಾರೆ. ಈ ಹಿಂದೆ ತುಂಬು ಕುಟುಂಬವಿತ್ತು. ತಂದೆ, ತಾಯಿ, ಅಜ್ಜ, ಅಜ್ಜಿ, ಅತ್ತೆ, ಮಾವ ಹೀಗೆ ಎಲ್ಲರೂ ಸೇರಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಆದರೆ ಈಗ ಆ ರೀತಿ ಒಂದೇ ಮನೆಯಲ್ಲಿ ಇರುವುದಿಲ್ಲ” ಎಂದು ಹೇಳಿದ್ದಾರೆ.
“ಈಗ ಖರ್ಚು ಜಾಸ್ತಿ ಇದೆ. ಜೀವನ ವೆಚ್ಚ (cost of living) ಹೆಚ್ಚಾಗಿದೆ. ಈ ಕಾರಣದಿಂದಾಗಿ ಒಬ್ಬರೇ ಮಕ್ಕಳು ಸಾಕು ಎಂಬ ವಿದ್ಯಮಾನ ಹೆಚ್ಚಾಗುತ್ತಿದೆ. ಹಳ್ಳಿ ಕಡೆ ಹೋದರೂ ಎರಡು ಮಕ್ಕಳಷ್ಟೇ ಇರುತ್ತಾರೆ. ಮೂರು ಮಕ್ಕಳನ್ನು ಹೆರುವುದು ಅತಿ ಕಡಿಮೆ. ಎರಡು ಹೆಣ್ಣು ಮಕ್ಕಳು ಇರುವುದು, ನಮಗೆ ಗಂಡು ಮಕ್ಕಳು ಬೇಕು ಎಂಬ ಮನಸ್ಥಿತಿ ಇದ್ದರೆ ಮಾತ್ರ ಮೂರು ಮಕ್ಕಳನ್ನು ಹೆರುತ್ತಿದ್ದಾರೆ” ಎಂದಿದ್ದಾರೆ.
“ಕೆಲವು ಕಡೆ ಮಕ್ಕಳೇ ಬೇಡ ಎಂಬ (child free concept) ಎನ್ನುವವರಿದ್ದಾರೆ. ಎಷ್ಟೋ ಜನ ಮದುವೆ ಆದ ನಂತರವೂ ನಮಗೆ ಮಕ್ಕಳು ಬೇಡ. ನಾವು ಇರುವಷ್ಟು ದಿನ ನಾವಿಬ್ಬರೇ ಚೆನ್ನಾಗಿರೋಣ ಎಂದು ನಿರ್ಧರಿಸುತ್ತಾರೆ. ಇನ್ನೊಂದೆಡೆ ಗಂಡ, ಹೆಂಡತಿ ಇಬ್ಬರೂ ಉದ್ಯೋಗದಲ್ಲಿದ್ದಾಗ ‘child free concept’ ಎಂಬುದು ಹೆಚ್ಚಾಗಿ ಕಂಡುಬರುತ್ತದೆ” ಎಂದು ತಿಳಿಸಿದ್ದಾರೆ.
“ಇನ್ನೊಂದು ಮುಖ್ಯವಾಗಿ ಹಲವರಿಗೆ ಮಕ್ಕಳಾಗುತ್ತಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ಈ ಹಿಂದೆ ಪಿಸಿಒಡಿ ಎಂದು ಹೇಳಲಾಗುತ್ತಿದ್ದ ಹಾರ್ಮೋನ್ ಸಮಸ್ಯೆಯಿಂದ ಹಲವು ಬದಲಾವಣೆಗಳಾಗುತ್ತದೆ. ಇದರಿಂದಾಗಿ ಫಲವತ್ತತೆ ದರವು ತುಂಬ ಕಡಿಮೆಯಾಗುತ್ತಿದೆ. ಇದರ ಜತೆಗೆ ಜನಸಂಖ್ಯೆ ಕಡಿಮೆ ಮಾಡಬೇಕು ಎಂಬ ಸರ್ಕಾರದ ಯೋಜನೆಯು ಜನರ ಮನಸ್ಸಲ್ಲಿ ಇಂದಿಗೂ ಇದೆ” ಎಂದು ಹೇಳುತ್ತಾರೆ ಡಾ. ಸುನೀಲ್ ಕುಮಾರ್.
ಮಹಿಳೆಯ ನಿರ್ಧಾರ ಮತ್ತು ಆರ್ಥಿಕ ವೆಚ್ಚ ಹೆಚ್ಚಳ
ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವಲ್ಯೂಯೇಷನ್ (IHME) ನಡೆಸಿ, ‘ದಿ ಲ್ಯಾನ್ಸೆಟ್’ (The Lancet) ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನವು ಜಾಗತಿಕ ಜನಸಂಖ್ಯೆಯ ಭವಿಷ್ಯದ ಕುರಿತು ಅತ್ಯಂತ ಆಘಾತಕಾರಿ ಮುನ್ಸೂಚನೆಯನ್ನು ನೀಡಿದೆ. ಒಂದು ದೇಶದ ಜನಸಂಖ್ಯೆಯು ಮುಂದಿನ ಪೀಳಿಗೆಯಲ್ಲೂ ಯಾವುದೇ ಕುಸಿತವಿಲ್ಲದೆ ಸ್ಥಿರವಾಗಿರಲು ಸರಾಸರಿ 2.1ರಷ್ಟು ಜನನ ಪ್ರಮಾಣ ಇರಬೇಕಾಗುತ್ತದೆ. ಅಂದರೆ ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಸರಾಸರಿ 2.1 ಮಕ್ಕಳಿಗೆ ಜನ್ಮ ನೀಡಬೇಕು. ಇದು 2.1ಕ್ಕಿಂತ ಕಡಿಮೆಯಾದರೆ ಆ ದೇಶದ ಜನಸಂಖ್ಯೆಯು ಕಾಲಾನಂತರದಲ್ಲಿ ಕುಗ್ಗುತ್ತಾ ಹೋಗುತ್ತದೆ.
ಅಧ್ಯಯನದ ಪ್ರಕಾರ ಈ ಬದಲಾವಣೆಗೆ ಪ್ರಮುಖ ಕಾರಣ ಸಾಮಾಜಿಕ ಪ್ರಗತಿ. ಮಹಿಳೆಯರು ಉದ್ಯೋಗಸ್ಥರಾಗುತ್ತಿರುವುದರಿಂದ ಮದುವೆ ಮತ್ತು ಮಗುವಿನ ಹೆರಿಗೆಯನ್ನು ತಡವಾಗಿ ನಿರ್ಧರಿಸುತ್ತಿದ್ದಾರೆ ಅಥವಾ ಕಡಿಮೆ ಮಕ್ಕಳನ್ನು ಹೊಂದುವ ತೀರ್ಮಾನಕ್ಕೆ ಬರುತ್ತಿದ್ದಾರೆ. ಆಧುನಿಕ ಕುಟುಂಬ ಯೋಜನೆ ಮತ್ತು ಗರ್ಭನಿರೋಧಕಗಳು ಸುಲಭವಾಗಿ ಲಭ್ಯವಿರುವುದರಿಂದ, ಮಹಿಳೆಯರು ತಮ್ಮ ಸಂತಾನೋತ್ಪತ್ತಿಯ ಹಕ್ಕಿನ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿದ್ದಾರೆ. ಮಕ್ಕಳನ್ನು ಬೆಳೆಸಲು, ಶಿಕ್ಷಣ ನೀಡಲು ತಗಲುವ ಆರ್ಥಿಕ ವೆಚ್ಚ ಹೆಚ್ಚುತ್ತಿರುವುದು ಕೂಡ ದಂಪತಿಗಳು ಮಕ್ಕಳತ್ತ ಒಲವು ತೋರದಿರಲಿ ಕಾರಣವಾಗಿದೆ.
ಪುರುಷರ ವೀರ್ಯಾಣುಗಳ ಸಂಖ್ಯೆ ಕುಸಿತ
ಮೌಂಟ್ ಸಿನಾಯ್ ಐಕಾನ್ ಮೆಡಿಕಲ್ ಸ್ಕೂಲ್ನ ಪ್ರಸಿದ್ಧ ಪರಿಸರ ಮತ್ತು ಸಾರ್ವಜನಿಕ ಆರೋಗ್ಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞೆ ಡಾ. ಶನ್ನಾ ಸ್ವಾನ್ ಅವರು ತಮ್ಮ ‘Count Down’ (ಕೌಂಟ್ ಡೌನ್) ಎಂಬ ಪುಸ್ತಕದಲ್ಲಿ ತಮ್ಮ ಸಂಶೋಧನೆಯ ವರದಿಯನ್ನು ಪ್ರಕಟಿಸಿದ್ದಾರೆ. ಅವರ ಸಂಶೋಧನೆಯ ಪ್ರಕಾರ, ಪ್ಲಾಸ್ಟಿಕ್ ಮತ್ತು ರಾಸಾಯನಿಕಗಳಲ್ಲಿರುವ ‘ಥಾಲೇಟ್ಸ್’ನಂತಹ ಅಂಶಗಳಿಂದಾಗಿ ಜಾಗತಿಕವಾಗಿ ಪುರುಷರ ವೀರ್ಯಾಣುಗಳ ಸಂಖ್ಯೆ ಕಳೆದ 40 ವರ್ಷಗಳಲ್ಲಿ ವಿಶೇಷವಾಗಿ 1973 ರಿಂದ 2011 ರ ನಡುವೆ 50% ಕ್ಕಿಂತ ಹೆಚ್ಚು ಕುಸಿದಿದೆ. ಇದು ಜೈವಿಕವಾಗಿ ಫಲವತ್ತತೆ ಕುಸಿಯಲು ಪ್ರಮುಖ ಕಾರಣವಾಗಿದೆ.
ಇದನ್ನು ಓದಿದ್ದೀರಾ? ‘ಹೆರುವವರ ಕಷ್ಟ ನೀವು ಬಲ್ಲಿರಾ?’ ಹೆಚ್ಚು ಮಕ್ಕಳನ್ನು ಹೆರಿ ಎನ್ನುವ ಆಂಧ್ರ ಸರ್ಕಾರ vs ಮಹಿಳೆಯರು
ಈ ಕುಸಿತವು ನಿಂತಿಲ್ಲ, ಬದಲಿಗೆ ವಾರ್ಷಿಕವಾಗಿ ಸುಮಾರು 1% ಕ್ಕಿಂತ ಹೆಚ್ಚು ವೇಗದಲ್ಲಿ ಮುಂದುವರಿಯುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ, 2045ರ ಹೊತ್ತಿಗೆ ಜಗತ್ತಿನ ಬಹುತೇಕ ಪುರುಷರು ನೈಸರ್ಗಿಕವಾಗಿ ಮಗುವನ್ನು ಪಡೆಯುವ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು ಎಂದು ಡಾ. ಸ್ವಾನ್ ಎಚ್ಚರಿಸಿದ್ದಾರೆ. ಸ್ಥೂಲಕಾಯತೆ, ಕೆಟ್ಟ ಜೀವನಶೈಲಿ, ಧೂಮಪಾನ, ಮದ್ಯಪಾನ, ವಿಪರೀತ ಮಾನಸಿಕ ಒತ್ತಡ, ಮೊಬೈಲ್ ಮತ್ತು ಲ್ಯಾಪ್ಟಾಪ್ಗಳ ವಿಕಿರಣವೂ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕುಸಿಯಲು ಕಾರಣ ಎಂದು ಸಂಶೋಧನೆ ಹೇಳುತ್ತದೆ.
ಇತರೆ ಸಂಶೋಧನೆಗಳು
ಪ್ಯೂ ರಿಸರ್ಚ್ ಸೆಂಟರ್ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, 18ರಿಂದ 49 ವರ್ಷದೊಳಗಿನ ಮಕ್ಕಳಿಲ್ಲದ ವಯಸ್ಕರಲ್ಲಿ ಸುಮಾರು 44% ಜನರು ತಮಗೆ ಭವಿಷ್ಯದಲ್ಲಿ ಮಕ್ಕಳನ್ನು ಹೊಂದುವ ಆಸಕ್ತಿ ಇಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ಕೇವಲ ಆರ್ಥಿಕ ಕಾರಣಗಳಲ್ಲದೆ, ವೈಯಕ್ತಿಕ ಇಚ್ಛೆಯೂ ಕಾರಣವಾಗಿದೆ ಎಂದು ಈ ಸಂಶೋಧನೆ ಹೇಳುತ್ತದೆ.
ಇನ್ನು ಬಾತ್ ವಿಶ್ವವಿದ್ಯಾಲಯ (University of Bath) 10 ದೇಶಗಳ 10,000 ಯುವಜನರನ್ನು (16-25 ವರ್ಷ) ಸಮೀಕ್ಷೆಗೊಳಪಡಿಸಿದಾಗ, ಶೇ. 39ರಷ್ಟು ಯುವಕರು ಹವಾಮಾನ ಬದಲಾವಣೆಯ ಆತಂಕದಿಂದಾಗಿ ತಾವೂ ಮಕ್ಕಳನ್ನು ಹೆರಲು ಹಿಂಜರಿಯುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನು ‘ಎಕೋ-ಆಂಗ್ಸೈಟಿ’ (Eco-anxiety) ಎಂದು ಕರೆಯಲಾಗಿದೆ.
ಅಭಿವೃದ್ಧಿ ಹೊಂದಿದ ಮತ್ತು ಮುನ್ನಡೆಯುತ್ತಿರುವ ದೇಶಗಳ ಒಕ್ಕೂಟವಾದ ಒಇಸಿಡಿ ವರದಿಯ ಪ್ರಕಾರ, ಜೀವನ ವೆಚ್ಚದ ಏರಿಕೆ, ಮನೆಗಳ ಬೆಲೆ ಗಗನಕ್ಕೇರಿರುವುದು ಮತ್ತು ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನದ ನಡುವಿನ ಅಸಮತೋಲನದಿಂದಾಗಿ ಯುವ ಪೀಳಿಗೆಯು ಪೋಷಕರಾಗುವ ನಿರ್ಧಾರವನ್ನು ಸಂಪೂರ್ಣವಾಗಿ ಕೈಬಿಡುತ್ತಿದೆ.
ಒಂದೆಡೆ ಜನಸಂಖ್ಯೆ ನಿಯಂತ್ರಣದತ್ತ ಇಂದಿನ ಪೀಳಿಗೆ ಹೆಚ್ಚು ಗಮನಹರಿಸುತ್ತಿದೆ ಎಂದು ಹೇಳಿದರೆ, ಇನ್ನೊಂದೆಡೆ child free concept ಮತ್ತು ಫಲವತ್ತತೆ ಕುಸಿತದಿಂದಾಗಿ ಭವಿಷ್ಯದಲ್ಲಾಗುವ ಅಪಾಯಗಳ ಬಗ್ಗೆ ಸಂಶೋಧನೆಗಳು ಎಚ್ಚರಿಸುತ್ತವೆ. ಡಾ. ಶನ್ನಾ ಸ್ವಾನ್ ಅವರು ಫಲವತ್ತತೆ ಕುಸಿತವನ್ನು ಇದನ್ನು ಜಾಗತಿಕ ಅಸ್ತಿತ್ವದ ಬಿಕ್ಕಟ್ಟು ಎಂದು ಕರೆದಿದ್ದಾರೆ. ಹವಾಮಾನ ಬದಲಾವಣೆಯಷ್ಟೇ ಗಂಭೀರವಾಗಿ ಈ ‘ಫಲವತ್ತತೆಯ ಕುಸಿತ’ವನ್ನು ಜಗತ್ತು ಪರಿಗಣಿಸಬೇಕು ಎನ್ನುತ್ತಾರೆ ಡಾ. ಶನ್ನಾ.
“ಒಂದೆಡೆ ಇಚ್ಛೆಯ ಕೊರತೆ, ಇನ್ನೊಂದೆಡೆ ಸಾಮರ್ಥ್ಯದ ಕೊರತೆ” – ಹೀಗೆ ಈ ಎರಡು ಪ್ರವೃತ್ತಿಗಳು ಒಂದೇ ಬಿಂದುವಿನಲ್ಲಿ ಸಂಧಿಸಿರುವುದರಿಂದ, ಇಂದು ಜಗತ್ತಿನ ಪ್ರಮುಖ ದೇಶಗಳಾದ ಜಪಾನ್, ದಕ್ಷಿಣ ಕೊರಿಯಾ, ಯುರೋಪಿನ ರಾಷ್ಟ್ರಗಳು ಮತ್ತು ಚೀನಾ ಮಾತ್ರವಲ್ಲದೆ ಭಾರತದಲ್ಲೂ ಸಹ ಒಟ್ಟು ಫಲವತ್ತತೆ ದರವು ತೃಪ್ತಿಕರ ಮಟ್ಟಕ್ಕಿಂತ ಕೆಳಗೆ ಇಳಿಯುವಂತೆ ಮಾಡಿದೆ. ಇದು ಸದ್ಯ ವೈಯಕ್ತಿಕ ನಿರ್ಧಾರ ಮತ್ತು ವೈಯಕ್ತಿಕ ಆರೋಗ್ಯ ಸಮಸ್ಯೆಯಾಗಿ ಉಳಿದಿಲ್ಲ. ಬದಲಿಗೆ ಭವಿಷ್ಯದಲ್ಲಿ ಯುವ ಜನಸಂಖ್ಯೆಯ ಕೊರತೆ, ವೃದ್ಧರ ಸಂಖ್ಯೆ ಹೆಚ್ಚಳ ಮತ್ತು ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಲ್ಲ ಗಂಭೀರ ಸಾಮಾಜಿಕ ಬಿಕ್ಕಟ್ಟಾಗುತ್ತಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




