ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರ ಟೂರ್ನಿಯ ಗ್ರೂಪ್-1ರ ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟಾಸ್ ಗೆದ್ದಿರುವ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಇದರ ಜೊತೆಗೆ, ಪಾಕಿಸ್ತಾನದ ವಿರುದ್ಧ ಭಾರತ ತಂಡವು ಅನುಸರಿಸಿಕೊಂಡು ಬರುತ್ತಿರುವ ‘ನೋ ಹ್ಯಾಂಡ್‌ಶೇಕ್’ (ಹಸ್ತಲಾಘವ ಮಾಡದಿರುವ) ನೀತಿಯನ್ನು ಈ ಪಂದ್ಯದಲ್ಲೂ ಮುಂದುವರಿಸಲಾಗಿದ್ದು, ಟಾಸ್ ಪ್ರಕ್ರಿಯೆಯ ವೇಳೆ ಪಾಕ್ ನಾಯಕಿ ಫಾತಿಮಾ ಸನಾ ಅವರೊಂದಿಗೆ ಹರ್ಮನ್‌ಪ್ರೀತ್ ಕೌರ್ ಹಸ್ತಲಾಘವ ಮಾಡಲಿಲ್ಲ..
2025ರ ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಭೀಕರ ದಾಳಿಯಲ್ಲಿ 26 ಜನ ಅಮಾಯಕರು ಮೃತಪಟ್ಟಿದ್ದರು. ಈ ಘಟನೆಯ ಬಳಿಕ ಪಾಕಿಸ್ತಾನದ ವಿರುದ್ಧ ಯಾವುದೇ ಪಂದ್ಯವಿದ್ದರೂ ಕ್ರೀಡಾಸ್ಪೂರ್ತಿಯ ಸಂಕೇತವಾದ ‘ಹಸ್ತಲಾಘವ’ ಮಾಡದಿರಲು ಭಾರತ ತಂಡವು ತೀರ್ಮಾನಿಸಿತ್ತು. ಇದೀಗ ಇಂಗ್ಲೆಂಡ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಈ ಮಹತ್ವದ ವಿಶ್ವಕಪ್ ಪಂದ್ಯದಲ್ಲೂ ಅದೇ ನಿಲುವಿಗೆ ಅಂಟಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಫಿಫಾ ಜಗತ್ತಿನಲ್ಲಿ ಭಾರತದ ಹೆಜ್ಜೆಗುರುತು – ಕನ್ನಡಿಗ ಕೆಂಪಯ್ಯನವರ ಮರೆಯಲಾಗದ ಸಾಧನೆ
ಟಾಸ್ ಗೆದ್ದ ಬಳಿಕ ಮಾತನಾಡಿದ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್, “ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿರುವಂತೆ ಕಾಣುತ್ತಿದೆ. ಹೀಗಾಗಿ ನಾವು ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತ ಕಲೆಹಾಕುವ ವಿಶ್ವಾಸದಲ್ಲಿದ್ದೇವೆ. ಕಳೆದ ವಿಶ್ವಕಪ್‌ನಿಂದ ನಮಗೆ ಹೆಚ್ಚಿನ ಆತ್ಮವಿಶ್ವಾಸ ಸಿಕ್ಕಿದೆ. ಇಂದಿನ ಪಂದ್ಯದಲ್ಲಿ ಭಾರತಿ ಫುಲ್ಮಾಲಿ ಕಣಕ್ಕಿಳಿಯಲಿದ್ದು, ಒಟ್ಟು ಮೂವರು ಸ್ಪಿನ್ನರ್‌ಗಳು ಮತ್ತು ಇಬ್ಬರು ಮಧ್ಯಮ ವೇಗಿಗಳೊಂದಿಗೆ ಕಣಕ್ಕಿಳಿಯುತ್ತಿದ್ದೇವೆ,” ಎಂದು ಸ್ಪಷ್ಟಪಡಿಸಿದರು. ಇತ್ತ, ಪಾಕ್ ನಾಯಕಿ ಫಾತಿಮಾ ಸನಾ ಕೂಡ ತಾವು ಟಾಸ್ ಗೆದ್ದಿದ್ದರೆ ಬ್ಯಾಟಿಂಗ್ ಆಯ್ಕೆ ಮಾಡುತ್ತಿದ್ದೆವು ಎಂದು ಹೇಳಿದ್ದು, ತಮ್ಮ ತಂಡದಲ್ಲಿ ಸೈರಾ ಜಬೀನ್ ಈ ಪಂದ್ಯದ ಮೂಲಕ ವಿಶ್ವಕಪ್‌ಗೆ ಪದಾರ್ಪಣೆ ಮಾಡುತ್ತಿರುವುದನ್ನು ಖಚಿತಪಡಿಸಿದರು.
ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಮುಖಾಮುಖಿಯಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ. ಉಭಯ ತಂಡಗಳು ಈವರೆಗೆ 16 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ ಭಾರತ ಬರೋಬ್ಬರಿ 13 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಪಾಕಿಸ್ತಾನ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಗಮನಾರ್ಹ ಅಂಶವೆಂದರೆ, ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಕೊನೆಯದಾಗಿ 2016ರಲ್ಲಿ ಜಯ ಸಾಧಿಸಿತ್ತು. ಪ್ರಸ್ತುತ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿರುವ ಭಾರತ ತಂಡ, ಈ ಬಾರಿಯ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿ ಕಣಕ್ಕಿಳಿದಿದೆ.




