- ಘೋಷಿತ ಅಭ್ಯರ್ಥಿಗಳ ವಿರುದ್ಧ ಪೋಸ್ಟ್ ಮಾಡುವಂತಿಲ್ಲ- ಸೂಚನೆ
- ಶಿಸ್ತು ಕ್ರಮ ತೆಗೆದುಕೊಳ್ಳುವ ಬಗ್ಗೆ ಕೆ ರೆಹಮಾನ್ ಖಾನ್ ಎಚ್ಚರಿಕೆ
ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಬಗ್ಗೆ ಕೆಲವು ಕಡೆ ಎದ್ದಿರುವ ಅಸಮಾಧಾನ ಹತ್ತಿಕ್ಕಲು ಕಾಂಗ್ರೆಸ್ ತನ್ನ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಖಡಕ್ ಸೂಚನೆ ರವಾಣಿಸಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಕೆ ರೆಹಮಾನ್ ಖಾನ್ ಸೋಮವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿ, ಘೋಷಿಸಿದ ಅಭ್ಯರ್ಥಿಗಳ ಬಗ್ಗೆ ಅಸಮಾಧಾನಗೊಳ್ಳದಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರಿಗೆ ಸೂಚನೆ ಕೊಟ್ಟಿದೆ.
“ಕರ್ನಾಟಕ ವಿಧಾನ ಸಭಾ ಚುನಾವಣೆ ಸಂಭಂದ ಜಾಲತಾಣದಲ್ಲಿ (ಫೇಸ್ಪುಕ್, ವಾಟ್ಸಾಪ್, ಇನ್ಸಾಗ್ರಾಂ, ಟ್ವಿಟ್ಟರ್ ಹಾಗೂ ಇನ್ನಿತರ ಮಾಧ್ಯಮಗಳಲ್ಲಿ) ಪಕ್ಷದ ಕಾರ್ಯಕರ್ತರು ಮತ್ತು ನಾಯಕರು, ಕಾಂಗ್ರೆಸ್ ಪಕ್ಷ, ಪಕ್ಷದ ನಾಯಕರುಗಳ ಅಥವಾ ಪಕ್ಷ ಘೋಷಿಸಿರುವ ಅಭ್ಯರ್ಥಿಗಳ ವಿರುದ್ಧ ಪೋಸ್ಟ್ ಮಾಡುವುದಾಗಲಿ ಅಥವಾ ಕಮೆಂಟ್ ಮಾಡುವುದನ್ನು ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯು ಗಂಭೀರವಾಗಿ ಪರಿಗಣಿಸಲಿದೆ. ಅವರುಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಕೆ ರೆಹಮಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಎರಡನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಈ ನಡುವೆ ಮೊದಲ ಪಟ್ಟಿಯಲ್ಲಿ ಪ್ರಕಟವಾದ ಅಭ್ಯರ್ಥಿಗಳ ಬಗ್ಗೆ ನಾನಾ ಕಡೆ ಅಸಮಾಧಾನ ಭುಗಿಲೆದ್ದಿದೆ.
ಈ ಸುದ್ದಿ ಓದಿದ್ದೀರಾ? ವಿಪಕ್ಷಗಳ ಒಗ್ಗೂಡಿಸಲು ʻಸಾಮಾಜಿಕ ನ್ಯಾಯ ಸಮ್ಮೇಳನʼ; ಸ್ಟಾಲಿನ್ ನೇತೃತ್ವ
ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, “ಅಧಿಕ ಸಂಖ್ಯೆಯಲ್ಲಿ ಟಿಕೆಟ್ ಬಯಸಿ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ. ಆದರೆ, ಗೆಲ್ಲುವ ಅಭ್ಯರ್ಥಿಗೆ ಮಾತ್ರ ಟಿಕೆಟ್ ನೀಡುತ್ತಿದ್ದೇವೆ. ಟಿಕೆಟ್ ವಂಚಿತರು ಸಹಜವಾಗಿ ಕೆಲವು ಕಡೆ ಬೇಸರಗೊಂಡಿದ್ದಾರೆ. ಅದನ್ನೇ ಬಂಡಾಯ ಎಂದು ಬಿಂಬಿಸುವ ಕೆಲಸವಾಗುತ್ತಿದೆ. ಈ ವಿಚಾರವಾಗಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಘೋಷಿಸಿದ ಅಭ್ಯರ್ಥಿಗಳ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕದಂತೆ ಸೂಚಿಸಿದ್ದೇವೆ” ಎಂದಿದ್ದಾರೆ.