ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಇರಾನಿನ ಕವಿ ನಾಸೆರ್ ಫಯ್ಜ್ ಅವರ ಕವನವೊಂದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ ಹೆಚ್ ಭಾಗ್ಯ
ಅಳುವ ಮಗವೊಂದನು ಸುಟ್ಟು ಬೂದಿ ಮಾಡಿದರು.
ಅವನು ಏನೂ ಇಲ್ಲವೆಂದ.
ತನ್ನೆಲ್ಲಾ ದುಃಖ ಸಂಕಟಗಳನ್ನು ಹತ್ತಿಕ್ಕಿಕೊಂಡು ತಾಯಿಯೊಬ್ಬಳು
ಏನೂ ಇಲ್ಲವೆಂದಳು.
ಪ್ರೀತಿಯನ್ನು ನೆಚ್ಚಿದ್ದ ಹುತಾತ್ಮನೊಬ್ಬನ ವೃದ್ಧ ತಂದೆ
ಎದೆಯಲ್ಲಿ ಆ ಹುತಾತ್ಮನ ಭಾರ ಹೊತ್ತುಕೊಂಡೂ
ಏನೂ ಇಲ್ಲವೆಂದ.
ನೆರೆಯವನ ಹರೆಯದ ಮಗಳು ಸ್ವರ್ಗದೆಡೆಗೆ ನೆಗೆದಳು
ಕನ್ನಡಿ ಹೃದಯವು ಒಡೆದು ಚೂರಾಯಿತು
ಆದರೆ ಯಾರೂ
ಏನೂ ಹೇಳಲಿಲ್ಲ.
ನನ್ನ ತಾಯ್ನೆಲವು ನೂರಾರು ಬಾಕುಗಳ ಇರಿತದಿಂದ ಘಾಸಿಗೊಂಡಿದೆ ಆದರೂ,
ಕ್ರುದ್ಧ ಸಿಂಹಿಣಿಯಂತೆ ಅದು
ಏನೂ ಇಲ್ಲವೆಂದಿದೆ.
ಗುಮಾನಿಗಳ ಎತ್ತರದ ಇಮಾರತುಗಳ ಆಚೆ ಇರುವ ಜಾಣ ಕವಿಯೊಬ್ಬ
ಏನೂ ಇಲ್ಲವೆಂದ.
ನನ್ನ ಸುಂದರ ತಾಯ್ನೆಲವು ಹೊಗೆ ಬೆಂಕಿಯನ್ನು ದಾಟುತ್ತಾ ನಿಧಾನವಾಗಿ ಕರಗಿತು ಆದರೂ
ಆದು ಏನೂ ಇಲ್ಲವೆಂದಿತು.
ದುಃಖ ಹಾಗೂ ನಿರಾಕರಣೆಯ ಸಂಕಟ ಕುರಿತು
ಒಂದು ರಾತ್ರಿ ನನ್ನನ್ನೇ ನಾನು ಕೇಳಿಕೊಂಡೆ,
‘ಕನ್ನಡಿಯು ಏನು ಹೇಳಿತು’ ಎಂದು
ಮತ್ತದೇ ಉತ್ತರ “ಏನೂ ಇಲ್ಲ”
ನನ್ನ ದುಃಖ ಸಂಕಟಗಳ ತುಣುಕೊಂದು ಗಂಟಲಲ್ಲೇ ಸಿಕ್ಕಿಕೊಂಡಿದೆ.
ಆದರೆ,
ಈ ಅಗಾಧ ಸಂಕಟ ಹೊತ್ತು
” ಏನೂ ಇಲ್ಲ” ವೆಂದು ಹೇಳಲಾಗದು




