ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಹಳ್ಳಿಯಲ್ಲಿ ಎಲ್ಲಕ್ಕೂ ಅನಾನುಕೂಲ. ಒಳ್ಳೆ ಟೀ ಅಂತೂ ಸಿಗುವುದಿಲ್ಲ. ಕುಡಿಯುವ ನೀರೋ? ಅದೊಂದು ಶಿಕ್ಷೆ. ಹೋಗುವ ಹಳ್ಳಿಯಲ್ಲಿ ಸಿಹಿ ನೀರು ಸಿಗುತ್ತದೆ ಎಂಬ ಗ್ಯಾರಂಟಿ ಏನು? ಧೂಳು ತುಂಬಿದ ದಾರಿಗಳು ಎಂಥ ಕಣ್ಣಿನಲ್ಲೂ ನೀರು ತರುತ್ತವೆ. ಸುಂಟರಗಾಳಿಯ ಭೂತದ ಕುಣಿತ ತೊಟ್ಟ ಬಟ್ಟೆಗೆಲ್ಲ ಧೂಳು ತುಂಬುತ್ತದೆ. ಯಾವುದಾದರೂ ಪೋಲಿ ದನ ನಡುವೆ ಬಂದು ತಿವಿದು ಊರು ತಲುಪುವಷ್ಟರಲ್ಲಿಯೇ ಸತ್ತರೆ ಅದೇನೂ ಆಶ್ಚರ್ಯವಲ್ಲ. ಹೆಜ್ಜೆ ಹೆಜ್ಜೆಗೂ ಹಾವಿನ ಭಯ.
ಆದ್ದರಿಂದ ನಾನು ಹಳ್ಳಿಗೆ ಹೋಗುವುದೇ ಅಪರೂಪ. ಒಂದು ಸಲ ಹಳ್ಳಿ ಬಿಟ್ಟ ಮೇಲೆ ಮತ್ತೆ ಹಿಂದಿರುಗಿಯೇ ಇಲ್ಲ. ಪಟ್ಟಣದ ವಾಸವೇನೂ ಸ್ವರ್ಗ ಸಮಾನವಲ್ಲ. ಇಲ್ಲಿಯ ಸಂಕಟಗಳೂ ಭಯಂಕರ. ಆದರೆ ಪಟ್ಟಣ ಎಷ್ಟೋ ವಾಸಿ. ನನ್ನ ಜಾತಿ ಯಾವುದೆಂದು ಯಾರೂ ನನ್ನನ್ನು ಕೇಳಿಲ್ಲ. ಕೆಲವರಿಗೆ ಹೇಗೋ ಗೊತ್ತಾದರೂ ಅದರಿಂದ ನನಗೇನೂ ಹಾನಿ ಆಗಿಲ್ಲ. ಯಾವ ಹೋಟೆಲಿನವರೂ ನನ್ನನ್ನು ತಡೆದಿಲ್ಲ. ಪೂಜಾರಿಗಳು ದೇವಸ್ಥಾನಕ್ಕೆ ಬರಬೇಡ ಎಂದಿಲ್ಲ. ಈ ಬಸ್ಸು, ಕಾರು, ಲಾರಿ ಜನಜಂಗುಳಿ ಒಂದೊಂದು ಸಲ ಹಿಡಿಸುವುದಿಲ್ಲ. ಆದರೂ ಹಳ್ಳಿಯಲ್ಲಿ ಕಾಣಲಾಗದ ಸ್ವಾತಂತ್ರ್ಯವನ್ನು ಇಲ್ಲಿ ಕಂಡಿದ್ದೇನೆ.
ಮಹಾತ್ಮಾ ಗಾಂಧಿಯವರು ಭಾರತದ ವಿದ್ಯಾವಂತರಿಗೆ “ಹಳ್ಳಿಗೆ ಮರಳಿ” ಎಂದರು. ಆದರೆ ನಾನು ಮಾತ್ರ ಹಳ್ಳಿಗೆ ಹಿಂದಿರುಗುವುದಿಲ್ಲ. ಯಾಕೆಂದರೆ ಹಳ್ಳಿಯಲ್ಲಿ ನಾನು ಅಸ್ಪೃಶ್ಯ. ನನ್ನ ಆರೋಗ್ಯ ಚಂದಾಗಿದೆ. ಆದರೂ ಅಲ್ಲಿ ನಾನು ಕುಷ್ಟ ರೋಗಿಗಿಂತ ಕಡೆ. ಹಳ್ಳಿಗಳೆಂದರೆ ಉರಿದುಬೀಳುವ ನನ್ನನ್ನು ನನ್ನ ಗೆಳೆಯ ರಮೇಶ ತನ್ನ ಊರಿಗೆ ಬರುವಂತೆ ಬಹಳ ಬಲವಂತ ಮಾಡಿದ ಮೇಲೆ ಒಂದು ದಿನ ಹೊರಡಲು ನಿರ್ಧರಿಸಿದೆ. ರಮೇಶ ಬೆಂಗಳೂರಿನ ಆಫೀಸೊಂದರಲ್ಲಿ ನೌಕರ. ಇವನು ಬಾಡಿಗೆ ಇರುವ ಮನೆಯ ಮಾಲೀಕ ಶೆಟ್ಟಿ, ರಮೇಶ ಬಾಡಿಗೆ ಸೇರುವ ಮೊದಲು ತನ್ನ ಜಾತಿಯನ್ನು ಸುಳ್ಳು ಹೇಳಿದ್ದನೆಂದು ಕಾಣುತ್ತದೆ. ಬಾಡಿಗೆ ಮನೆಗೆ ಬಂದ ನಾಲ್ಕು ತಿಂಗಳಿಗೆ ರಮೇಶನ ಜಾತಿ ಮಾಲೀಕನಿಗೆ ಗೊತ್ತಾಯಿತು.
ಇದನ್ನು ಓದಿದ್ದೀರಾ?: ಪಾಟೀಲ ಪುಟ್ಟಪ್ಪ ಅವರ ಕತೆ | ಸಾವಿನ ಮೇಜವಾನಿ
ಗೊತ್ತಾದದ್ದು ಹೀಗೆ… ಬೆಂಗಳೂರಿಗೆ ಬಂದಿದ್ದ ರಮೇಶನ ಚಿಕ್ಕಪ್ಪ ಇವನ ರೂಮಿಗೆ ಬಂದ, ಬೀಗ ಹಾಕಿತ್ತು. ಬಾಗಿಲಲ್ಲೇ ನಿಂತು ಕಾಯುತ್ತಿದ್ದವ ಮಾಲೀಕನ ಹೆಂಡತಿಯನ್ನು ನೋಡಿ “ನಮಸ್ಕಾರ ತಾಯೀ” ಎಂದ. ಒಂದು ಕೊಳಕು ಷರಟು, ಅಷ್ಟೇ ಕೊಳೆಯಾದ ಚಡ್ಡಿ, ಹೆಗಲಿಗೆ ಒಂದು ಹರಕು ಟಾವೆಲ್ಲು, ಬರಿಕಾಲಿನಲ್ಲಿ ನಿಂತಿರುವ ಆ ಮನುಷ್ಯನನ್ನು ನೋಡಿ ಶೆಟ್ಟಿಯ ಹೆಂಡತಿ ಭಿಕ್ಷುಕನೆಂದು ತಿಳಿದು. “ಏನೂ ಇಲ್ಲ ಹೋಗೋ” ಎಂದಳು. ಬೆಂಗಳೂರಿಗೆ ಬರುತ್ತಿರುವುದು ಎರಡನೆಯ ಸಲ. ಈ ರೀತಿಯ ಪ್ರತಿಕ್ರಿಯೆಯಿಂದ ಇವನು ಎದೆಗುಂದಲಿಲ್ಲ. “ತಪ್ಪ್ ತಿಳೀಬ್ಯಾಡಿ ತಾಯಿ ನಾನು ರಮೇಶಪ್ಪನ ಚಿಕ್ಕಪ್ಪ, ನಮ್ಮ ಹುಡುಗ ಯಾವಾಗ ಬತ್ತಾರೆ” ಎಂದ. ಆಕೆ ಏನೂ ತಿಳಿಯದೇ “ಯಾರು? ಯಾರು?” ಎಂದಳು. ನನ್ನ ಗೆಳೆಯನ ಹೆಸರು ರಮೇಶ, ಅವಿದ್ಯಾವಂತನಾದ ಅವರ ಚಿಕ್ಕಪ್ಪ ಗೌರವದಿಂದ ರಮೇಶಪ್ಪ ಎಂದ. ಇದು ಮನೆಯ ಒಡತಿಗೆ ತಿಳಿಯಲಿಲ್ಲ. ರಮೇಶ ಎಂದಿದ್ದರೆ ಆಕೆಗೆ ಗೊತ್ತಾಗುತ್ತಿತ್ತು. ರಮೇಶಪ್ಪ ಎಂದಾಗ ಅವಳ ಕಣ್ಣಿಗೆ ವಯಸ್ಸಾದ ವ್ಯಕ್ತಿಯ ಚಿತ್ರ ಬಂದು, ಅವಳು “ಅಂಥಾ ಹೆಸರಿನೋರು ಯಾರೂ ಇಲ್ಲಪ್ಪ” ಎಂದಳು.
ಆಗ ಈ ಚಿಕ್ಕಪ್ಪನಿಗೆ ಇನ್ನೊಂದು ಐಡಿಯಾ ಹೊಳೆಯಿತು. ರಮೇಶನ ಮೊದಲ ಹೆಸರು ಚಿಕ್ಕತಿಮ್ಮಯ್ಯ, ಅವನು ಸರ್ಕಾರಿ ಕೆಲಸಕ್ಕೆ ಸೇರಿಕೊಂಡ ಮೇಲೆ ತನ್ನ ಹೆಸರನ್ನು ರಮೇಶ ಎಂದು ಬದಲಾಯಿಸಿಕೊಂಡಿರುವನು. ಹಳೆಯ ಹೆಸರನ್ನು ಇಲ್ಲೇನಾದರೂ ಹೇಳಿಕೊಂಡಿರಬಹುದೆಂದು “ಅದೇ ತಾಯಿ ನಮ್ಮ ಚಿಕ್ಕತಿಮ್ಮಯ್ಯ” ಎಂದ.
ಆಕೆಗೆ ಇವನ ಬಗ್ಗೆ ಯಾಕೋ ಕುತೂಹಲ ಹುಟ್ಟಿತು. ”ಅವರು ಹೇಗಿದ್ದಾರೆ ಹೇಳು” ಎಂದಳು. ಇವನು ಸರಿಯಾಗಿ ಹೇಳಿದ. ಆಕೆಗೆ ಕುತೂಹಲ ಹೆಚ್ಚುತ್ತಾ ಹೋಯಿತು. ”ನೀನು ಅವ್ರು ಕಡೇನು ಅಂತ ಗೊತ್ತಾಗಲಿಲ್ಲಪ್ಪ” ಎಂದಳು. ತನ್ನ ಮನೆಯ ಬಾಗಿಲಲ್ಲೇ ನಿಂತಿದ್ದವಳು ಇವನಿಗೆ ಕೊಂಚ ಹತ್ತಿರ ಬಂದಳು. ರಮೇಶನ ಜಾತಿಯನ್ನು ತಿಳಿದುಕೊಳ್ಳಲು ಇದೇ ಸುಸಮಯವೆಂದು ಅವಳು ಇವನನ್ನು ಕೆದಕಲು ತೊಡಗಿದಳು.
ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ
“ಯಾವೂರಪ್ಪ ನೀವು?”
”ನಮ್ದು ನೆಲಮಂಗಲದ ತಾವು ಆದಿಪುರ.”
”ಓ ಆದಿಪುರಾನಾ; ಯಾವ ಜನಾ?”
ಇವನಿಗೆ ಇರುಸು ಮುರಸಾಯಿತು. ಸತ್ಯ ಹೇಳುವುದು ಯಾವುದಕ್ಕೂ ಒಳ್ಳೆಯದು ಎಂದು ಯೋಚಿಸಿದ. ಇನ್ನೊಂದು ಸಲ ಬೇರೆ ಜಾತಿ ಹೇಳು ಎಂದು ಮನಸು ಹೇಳಿತು. ಆಕೆಯ ಗಮನವನ್ನು ಬೇರೆ ಕಡೆ ಸೆಳೆಯಲು ನೋಡಿದ. ಎದುರಿಗೆ ಬೀದಿಯಲ್ಲಿ ಓಡಿಬರುತ್ತಿದ್ದ ಒಬ್ಬ ಪುಟ್ಟ ಹುಡುಗ ಕೆಳಕ್ಕೆ ಬಿದ್ದು ‘ವ್ಯಾ’ ಎಂದು ಅಳಲು ಶುರು ಮಾಡಿದ. ಇವಳ ಮಾತಿನಿಂದ ತಪ್ಪಿಸಿಕೊಳ್ಳಲು ಒಳ್ಳೆಯ ನೆಪ ಸಿಕ್ಕಿತು ಎಂದು ಓಡಿ ಹೋಗಿ ಆ ಹುಡುಗನನ್ನು ಮೇಲೆತ್ತಿ ನಿಲ್ಲಿಸಿ ಹಿಂತಿರುಗಿದ. ಅವನ ಅನಾಸಕ್ತಿ ಈಕೆಯ ಅನುಮಾನವನ್ನು ಹೆಚ್ಚು ಮಾಡಿತು. ಆಕೆ ‘ಮನುಷ್ಯ ಅಂದ ಮೇಲೆ ಎಲ್ಲಾ ಒಂದೇ ಪರವಾಗಿಲ್ಲ ಹೇಳಪ್ಪ’ ಎಂದಳು. ಅವಳ ಮಾತನ್ನು ನಂಬಿಬಿಟ್ಟ, ‘ನಾವು ಹೊಲೇರು’ ಎಂದು ಅಪರಾಧ ಮಾಡಿದವನಂತೆ ಮೆತ್ತಗೆ ಹೇಳಿದ. ಅವಳು ಹೆಚ್ಚು ಮಾತಾಡಲಿಲ್ಲ. “ಅವರು ರಾತ್ರಿ 9 ಗಂಟೆಗೆ ಬರ್‍ತಾರೆ” ಎಂದು ಒಳಗೆ ಹೋದವಳು ಮತ್ತೆ ಹೊರಗೆ ಬರಲಿಲ್ಲ.
ಅದಾದ ಎರಡು ದಿನದಿಂದ ಶೆಟ್ಟಿ, ರಮೇಶನನ್ನ ಮನೆ ಖಾಲಿ ಮಾಡುವಂತೆ ಗಲಾಟೆ ಮಾಡುತ್ತಿದ್ದ. ಶೆಟ್ಟಿಯ ಇಬ್ಬರು ರೌಡಿಗಳು ರಮೇಶ ಆಫೀಸಿಗೆ ಹೋಗುವಾಗ ಬರುವಾಗ ರೇಗಿಸುವುದಕ್ಕೆ ಶುರು ಮಾಡಿದ್ದರು. ಒಂದು ದಿನ ರಾತ್ರಿ ಬಾಗಿಲು ತೆಗೆಯುತ್ತಿದ್ದಾಗ ಅವರಿಬ್ಬರೂ ರಮೇಶನ ಮುಂದೆ ಬಂದು ನಿಂತರು. ಒಬ್ಬನಂತೂ ಬೀಳುವ ಸ್ಥಿತಿಯಲ್ಲಿದ್ದ. ಇನ್ನೊಬ್ಬ “ರೀ ಮನೆ ಖಾಲಿ ಮಾಡಿ, ದನಾ ತಿನ್ನೋರಿಗೆ, ಹೆಂಡ ಕುಡಿಯೋರಿಗೆಲ್ಲಾ ಮನೆ ಕೊಡೋಕಾಗುತ್ತೇನ್ರಿ” ಎಂದು ಕಿರುಚುತ್ತಿದ್ದ.
ರಮೇಶ ಇದನ್ನೆಲ್ಲ ನನಗೆ ಹೇಳಿದಾಗ ಬೆಂಗಳೂರು ಹಳ್ಳಿಯ ರೀತಿಯೇ ಎಂದು ನನಗೆ ಅನುಮಾನವಾಯಿತು. ನಾನು ಕೊಳಚೆ ಪ್ರದೇಶದಲ್ಲಿದ್ದುದರಿಂದ ಈ ಜಾತಿಯ ಬಿಸಿ ತಟ್ಟಿರಲಿಲ್ಲ ಎಂಬ ಅರಿವಾಯಿತು. ರಮೇಶ ಅವರಿಗೆ ಗೌಡ ಎಂದು ಹೇಳಿಕೊಂಡಿದ್ದನಂತೆ. ಆದೂ ತಪ್ಪಲ್ಲವೆ?
ಇದನ್ನು ಓದಿದ್ದೀರಾ?: ಬಾಗಲೋಡಿ ದೇವರಾಯ ಅವರ ಕತೆ | ಅವರವರ ಸುಖದುಃಖ
ಈ ತರಲೆ ರಂಕಲಿನಲ್ಲಿಯೇ ಅವನು ಊರಿಗೆ ಬರಲು ಒತ್ತಾಯ ಮಾಡುತ್ತಿದ್ದ. ನನಗೆ ಇಷ್ಟವಿಲ್ಲದಿದ್ದರೂ ಅವನ ಮುಖ ನೋಡಿ ಒಪ್ಪಿಕೊಂಡೆ.
*
ಆದಿಪುರ ಬಸ್ಸು ರೋಡಿನಿಂದ 2 ಮೈಲಿ ದೂರದಲ್ಲಿದೆ. 2 ಮೈಲಿ ನಡದೇ ಹೋಗಬೇಕು. ದೂರದಲ್ಲಿ ಕುಣಿಯುವ ಸುಂಟರಗಾಳಿ ನಮ್ಮ ಕಡೆಗೇ ಬರುತ್ತಿತ್ತು. ಮಳೆ ನೆನ್ನೆ ಆಗಿರಬಹುದು. ಕೆಲವರು ಹೊಲ ಉಳುತ್ತಿದ್ದರು. ನನಗೆ ಯಾಕೋ ಒಂದು ಬಗೆಯ ನಿರಾಶೆಯಾದರೂ ನನ್ನ ಗೆಳೆಯನಿಗೆ ತೋರಿಸಿಕೊಳ್ಳಲಿಲ್ಲ. ಯಾವ ಕಾರಣವೂ ಇಲ್ಲದೇ ಹೀಗೆ ನಿರಾಶೆ ಆಗುವುದು ನನಗೆ ಸಾಮಾನ್ಯವಾಗಿಬಿಟ್ಟಿದೆ. ಆಗ ಮಂಕು ಕವಿದು ಬಿಡುತ್ತದೆ. ಒಂದು ಒಳ್ಳೆಯ ಟೀ ಮಾತ್ರ ನನ್ನ ಮಂಕನ್ನು ಹೊಡೆದೋಡಿಸಬಲ್ಲುದು. ಈ ದಾರಿಯಲ್ಲಿ ದೂರದಲ್ಲಿ ಊರು ಕಾಣುತ್ತಿರುವುದನ್ನು ಬಿಟ್ಟರೆ ನಡುವೆ ಎಲ್ಲೂ ಹೋಟೆಲ್ ಇದ್ದಂತೆ ಕಾಣಲಿಲ್ಲ.
ಊರಿಗೆ ಮೊದಲು ಹೊಲೆಯರ ಕೇರಿಯನ್ನೇ ಕಂಡೆ. ಬೇರೆ ದಾರಿ ಇಲ್ಲದಿರುವುದರಿಂದ ಇಷ್ಟವಿರಲಿ, ಇಲ್ಲದಿರಲಿ ಈ ಮೂಲಕವೇ ಎಲ್ಲರೂ ಊರಿಗೆ ಹೋಗಬೇಕು. ಊರ ಹತ್ತಿರ ಸಮಾಧಿ ಸಿಕ್ಕಿತು. ಅದರ ಮೇಲೆ ಒಂದು ದೇವಸ್ಥಾನ ಕಟ್ಟಿದ್ದಾರೆ. ಅಲ್ಲಿ ಮಣ್ಣಾಗಿರುವವನು ಊರಿನ ಒಬ್ಬ ದೊಡ್ಡ ಬಡ್ಡಿ ವ್ಯಾಪಾರಿ. ಅವನ ಮಕ್ಕಳು ಅವನ ಗುಂಡಿಯ ಮೇಲೆ ಗುಡಿ ಕಟ್ಟಿಸಿದ್ದರೂ ಜನ ಅವನ ಸಮಾಧಿಗೆ ಪೂಜೆಗೆ ಹೋಗುವುದಿಲ್ಲವಂತೆ. ಮುಂದೆ ಏನಾಗುವುದೋ ನೋಡಬೇಕು!
ಈ ಊರಿನಲ್ಲಿ ಹೊಲೆಯರ ಮನೆಗಳು ನಾಲ್ಕು. ಇವರನ್ನು ಜತೆ ಪಂಚಮರೆಂದೂ ಹೇಳುತ್ತಾರೆ. ಒಕ್ಕಲಿಗರ ಮನೆಗಳು ನೂರು, ಉಳಿದ ಜಾತಿಗಳದು ಇಪ್ಪತ್ತು ಮನೆಗಳಿವೆ. ನನ್ನ ಗೆಳೆಯನ ಮನೆ ಊರಿನ ಆರಂಭದಲ್ಲೇ ಇರುವುದರಿಂದ ನನಗೆ ಊರಿನ ಪರಿಚಯವೇ ಆಗಲಿಲ್ಲ. ಹೊಲೆಯರಲ್ಲೇ ವಿದ್ಯಾವಂತನಾಗಿರುವುದರಿಂದ ಮನೆಯನ್ನು ಊರಿನಲ್ಲಿ ಚೆನ್ನಾಗಿ ಕಟ್ಟಿಸಿಕೊಂಡಿರುತ್ತಾನೆ ಎಂದು ತಿಳಿದುಕೊಂಡಿದ್ದೆ. ಇವನ ನಿರಾಸಕ್ತಿಯೋ ಅಥವಾ ಅಧಿಕಾರಿಗಳ ರಾಜಕೀಯವೋ ಇವನ ಮನೆ ಇನ್ನೂ ಜೋಪಡಿ. ಮೇಲೆ ಹುಲ್ಲಿನ ಹೊದಿಕೆ. ಸುತ್ತ ಬಿದಿರಿನ ತಡಿಕೆ. ಮನೆಯ ಬಾಗಿಲು ಇಂದೋ ಈಗಲೋ ಬೀಳುವಂತೆ ಇದೆ. ಆ ಬಾಗಿಲಿಗೆ ಸೀಮೆಸುಣ್ಣದಲ್ಲಿ “ರಮೇಶ್, ಬಿ.ಕಾಂ,” ಎಂದು ಬರೆಯಲಾಗಿದೆ. ಅಕ್ಷರ ಸರಿಯಾಗಿರುವುದರಿಂದ ಅದನ್ನು ಇವನೇ ಬರೆದಿರಬಹುದು. ಅದು ಅಳಿಸಿಹೋಗಿಲ್ಲ. ಸೀಮೆಸುಣ್ಣಕ್ಕೆ ನೀರನ್ನು ಎಜ್ಜಿಕೊಂಡು ಬರೆದಿದ್ದ ಎಂದು ಕಾಣುತ್ತದೆ. ಮನೆ ಬಾಗಿಲನ್ನು ತಳ್ಳುತ್ತಿದ್ದಂತೆ ಒಬ್ಬ ಮುದುಕ “ಬಂದೇನೋ ಚಿಕ್ಕತಿಮ್ಮ” ಎಂದ. ಇವನು ಬಂದೆ ಎನ್ನಲೂ ಇಲ್ಲ ಅಥವಾ ಇಲ್ಲ ಎನ್ನಲೂ ಇಲ್ಲ. ಅವನೇ ಇವನ ಅಪ್ಪ.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
ಊರಿನ ವಿಚಾರಗಳನ್ನು ಕೇಳುವ ಕುತೂಹಲ ನನಗೆ. ಆದರೆ ಏಕೋ ಅನವಶ್ಯಕವಾದ ಗಾಂಭೀರ್ಯವನ್ನು ಧರಿಸುತ್ತಿದ್ದಾನೆ! ಒಂದು ಲೋಟ ನೀರು ಕುಡಿದೆ. ನೀರು ಸಿಹಿಯಾಗಿತ್ತು. ಮಾತು ಶುರು ಮಾಡಲು “ಸಿಹಿ ನೀರು ಗುರು!” ಎಂದೆ. ಅವನು “ಹೌದು ಗುರು” ಎಂದ. ನಾನು ಈ ನೀರಿರುವ ಬಾವಿಯ ಬಗ್ಗೆ ಕೇಳಿದೆ. ಅದು ವಿಚಿತ್ರ ಅನ್ನಿಸಿತು:
ಊರಿನಲ್ಲಿ ಎರಡು ಬಾವಿಗಳಿವೆ. ಸವರ್ಣೀಯ ಹಿಂದುಗಳಿಗೆ ಒಂದು ಬಾವಿ. ಅಲ್ಲಿ ಹಿಂದುಗಳೂ ಮುಸಲ್ಮಾನರೂ ನೀರನ್ನು ತೆಗೆದುಕೊಳ್ಳುತ್ತಾರೆ. ಅದು, ಉಪ್ಪು ನೀರು ಬಾವಿ. ಹೊಲೆಯರಿಗೆ ಪ್ರತ್ಯೇಕವಾಗಿ ಒಂದು ಬಾವಿ ಇದೆ. ಅದರಲ್ಲಿ ಇತರರು ಯಾರೂ ನೀರು ತೆಗೆದುಕೊಳ್ಳುವುದಿಲ್ಲ. ಹೊಲೆಯರು ನಾವೇನು ಕಡಿಮೆ ಎಂದು ಸವರ್ಣೀಯರ ಬಾವಿಯ ನೀರು ತೆಗೆದುಕೊಳ್ಳಲು ಪ್ರಯತ್ನಿಸಿ ಏಟು ತಿಂದು ಸುಮ್ಮನಾದರು. ತಮ್ಮ ಬಾವಿಯಲ್ಲಿ ಸಿಹಿ ನೀರು ಸಿಗುತ್ತದೆ ಎಂಬ ಭಾವನೆ ಅವರಿಗೆ ಸಮಾಧಾನ ತಂದಿತ್ತು.
ಸವರ್ಣೀಯರ ಸಂಖ್ಯೆ ಹೆಚ್ಚು ಹೀಗಾಗಿ ಅವರ ಬಾವಿಯ ನೀರು ಕರಗುತ್ತಾ ಬಂತು. ಹೊಲೆಯರು ನಾಲ್ಕೇ ಮನೆ ಇರುವುದರಿಂದ ಅವರ ಬಾವಿಯಲ್ಲಿ ನೀರು ತುಂಬಿ ತುಳುಕುತ್ತಿತ್ತು. ಆದರೂ ಸವರ್ಣೀಯರು ತಮ್ಮ ಮರ್ಯಾದೆಗೆ ಕಡಿಮೆ ಎಂದು ಭಾವಿಸಿ ಒಂದೂವರೆ ಮೈಲಿ ದೂರ ನಡೆದು ಒಂದು ಹಳ್ಳದ ಕೆಟ್ಟ ನೀರನ್ನು ತಂದು ಕುಡಿಯುತ್ತಿದ್ದರು. ಹೊಲೆಯರು ತಮ್ಮ ಬಾವಿಯಲ್ಲಿ ನೀರನ್ನು ತೆಗೆದುಕೊಳ್ಳುವಂತೆ ಅವರಿಗೆ ಹೇಳಿ ಬೈಸಿಕೊಂಡರು.
ಒಂದು ದಿನ ಮಧ್ಯರಾತ್ರಿ ಹೊರಗೆ ಬಂದಿದ್ದ ಕರಿಯಪ್ಪನಿಗೆ ತಮ್ಮ ಬಾವಿಯ ಮುಂದೆ ವಿಚಿತ್ರ ಕಾಣಿಸಿತು. ಮೂವರು ಸವರ್ಣೀಯರು ಹೊಲೆಯರ ಬಾವಿಯಲ್ಲಿ ನೀರು ತೆಗೆದುಕೊಳ್ಳುತ್ತಿದ್ದಾರೆ. ಗಾಲಿಯಲ್ಲಿ ಸೇದಿದರೆ ಶಬ್ದವಾಗುತ್ತದೆ ಎಂದು ಹೆದರಿ ಹಗ್ಗವನ್ನು ಇಳಿಬಿಟ್ಟು ನೀರು ತೆಗೆದುಕೊಳ್ಳುವುದನ್ನು ಕಂಡ ಕರಿಯಪ್ಪ ಬೆಳಿಗ್ಗೆ ಹೊಲೆಯರಿಗೆಲ್ಲ ಹೇಳಿಬಿಟ್ಟ.
ಇದನ್ನು ಓದಿದ್ದೀರಾ?: ಭಾರತೀಪ್ರಿಯ ಅವರ ಕತೆ | ಒಂದು ಹಳೆಯ ಕತೆ
ಮಾರನೇ ದಿನ ರಾತ್ರಿ ಹೊಳೆಯರಿಗೆ ನಿದ್ದೆ ಇಲ್ಲ, ಸವರ್ಣೀಯರು ತಮ್ಮ ಬಾವಿಯ ಹತ್ತಿರ ಬರುವುದನ್ನೇ ಅವರು ಕಾಯುತ್ತಿದ್ದರು. ರಾತ್ರಿ ಒಂದು ಗಂಟೆ ಇರಬಹುದು. ಅದೇ ಮೂರು ಜನ ಬಾವಿ ಹತ್ತಿರ ಬಂದು ಹಗ್ಗ ಇಳಿಬಿಟ್ಟರು. ನಾಲ್ಕು ಮನೆಯ ಹೊಲೆಯರು ”ಹಿಡೀರೋ ಹಿಡೀರೋ” ಎಂದು ಕೂಗುತ್ತಾ ಬಾವಿಯ ಕಡೆ ನುಗ್ಗಿದರು. ಸವರ್ಣೀಯರು ಹಗ್ಗ ಅಲ್ಲೆ ಬಿಟ್ಟು ಪರಾರಿಯಾದರು. ಬೆಳಿಗ್ಗೆ ಮೂವರು ಸವರ್ಣೀಯರು ಇದರ ಬಗ್ಗೆ ಯಾರಿಗೂ ಏನೂ ಹೇಳಲಿಲ್ಲ. ಹೊಲೆಯರೂ ಸುಮ್ಮನಾದರು.
ಅಂದಿನ ರಾತ್ರಿ ಸವರ್ಣೀಯರು ಬಿಟ್ಟುಹೋದ ಬಿಂದಿಗೆ, ಬಕೀಟು, ಹಗ್ಗ ಎಲ್ಲಾ ಇನ್ನೂ ರಮೇಶನ ಮನೆಯಲ್ಲಿಯೇ ಇವೆ. ರಮೇಶ ಅವನ್ನೆಲ್ಲ ತೋರಿಸಿ, ಈ ಕತೆ ಹೇಳಿದ.
*
ಆದಿಪುರಕ್ಕೆ ಬಂದು ಇನ್ನೂ ಅರ್ಧ ಗಂಟೆಯೂ ಆಗಿಲ್ಲ. ಪಕ್ಕದ ಹಳ್ಳಿಗೆ ಹೋಗಿ ಬರುವಂತೆ ರಮೇಶನ ತಂದೆ ಅವನಿಗೆ ಒತ್ತಾಯ ಮಾಡತೊಡಗಿದ. ರಮೇಶ ಒಲ್ಲದ ಮನಸ್ಸಿನಿಂದ ಹೊರಟ.
ಊರ ಮಧ್ಯದಿಂದಲೇ ನಾವು ಹಾದು ಹೋಗಬೇಕು. ಆ ಊರಿನಲ್ಲೊಂದು ಹೋಟೆಲು. ಹೋಟೆಲಿದ್ದ ಗುಡಿಸಲು ಇಂದೋ ಈಗಲೋ ಬೀಳುವ ರೀತಿ ಇದೆ. ಒಳಗಡೆ ಒಬ್ಬ ಹೆಂಗಸು ಟೀ ಮಾಡುತ್ತಿದ್ದಳು. ಅವಳ ಕಡೆಯೇ ನೋಡುತ್ತಾ ಟೀ ಕುಡಿಯುತ್ತಿದ್ದ ಒಬ್ಬ ಮನುಷ್ಯ ಕುಳಿತಿದ್ದ. ಅವಳು ಅಂಥ ಸುಂದರಿಯಲ್ಲ. ಹಣೆಯ ಬೆವರನ್ನು ಆಗಾಗ ಸೆರಗಿನಿಂದ ಒರೆಸಿಕೊಳ್ಳುತ್ತಿದ್ದಳು. ಆ ಬೆವರು ಒಮ್ಮೊಮ್ಮೆ ಅವಳ ಮೂಗಿನ ಮೂಲಕ ತೊಟ್ಟಿಕ್ಕುತ್ತಿತ್ತು. ಅದು ಟೀ ಪಾತ್ರೆಗೆ ಬಿದ್ದಿದ್ದರೂ ಬಿದ್ದಿರಬಹುದು. ಆದರೆ ಟೀ ಕುಡಿಯುತ್ತಿದ್ದವನ ಟೀ ಮಾತ್ರ ಅವನ ಷರಟಿನ ಮೇಲೆ ಬಿದ್ದಿತ್ತು. ಅದರ ಪರಿವೆಯೇ ಅವನಿಗಿರಲಿಲ್ಲ.
ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ
ಗುಡಿಸಲ ಹೊರಗಿನ ಸೂರಿನಲ್ಲಿ ಎರಡು ಸಿಲವಾರದ ಲೋಟಗಳನ್ನು ಸಿಗಿಸಿದ್ದರು. ಅವು ಹೊಲೆಯರ ಬಳಕೆಗಾಗಿ. ಅದರ ಪಕ್ಕದಲ್ಲೇ ಇರುವ ಎರಡು ತಟ್ಟೆಗಳು ಹೊಲೆಯರ ಉಪಯೋಗಕ್ಕಾಗಿಯೇ.
”ಗುರೂ ಟೀ ಕುಡಿಯಾನ?” ನಾನೆಂದೆ.
“ನಮಗೆ ಟೀ ಕೊಡಲ್ಲ” ಅವನೆಂದ.
“ಯಾಕ್ಕೊಡಲ್ಲ ನೋಡಾನ?” ಕೋಪದಿಂದ ಅಂದೆ.
“ಸೂರಿನ ಲೋಟದಲ್ಲಿ ಟೀ ಕುಡಿತೀಯೇನು?” ಅವನು ಹೇಳಿದ್ದನ್ನು ಕೇಳಿ ಬೇಸರವಾಯಿತು. ಟೀ ಇಲ್ಲದ್ದು ಒಂದು ಕಡೆ, ಜಾತಿಯ ಕಾರಣದ ಅವಮಾನ ಬೇರೆ. ಈ ಗುಡಿಸಲಿಗೆ ಬೆಂಕಿ ಇಡಬೇಕು. ಇದನ್ನು ಸುಟ್ಟು ಬೂದಿ ಮಾಡಬೇಕು ಅನ್ನಿಸಿತು. ಈ ಆಲೋಚನೆ ಬಂದ ತಕ್ಷಣ ಹಣೆಯಲ್ಲಿ ಬೆವರು, ಮೈಯಲ್ಲಿ ನಡುಕ. ಆ ಭಾವನೆ ಸಂಚಾರಿ ಎನ್ನಿಸುತ್ತದೆ. ಒಂದು ಕ್ಷಣ ಆದ ಮೇಲೆ ಕೋಪ ಇಳಿಯಿತು. ಒಂದು ರೀತಿಯ ಭಯ ಅವಮಾನಗಳು ನನ್ನನ್ನು ಕಾಡಿದವು. ನನ್ನ ಸ್ನೇಹಿತನಿಗೆ ಏನೂ ಆದಂತೆ ಕಾಣಲಿಲ್ಲ. ಟೀ ಕುಡಿಯದೇ ಹೊರಟೆವು.
ಊರಾಚೆ ಇರುವ ಪುಟ್ಟದಾದ, ಜನವೇ ಇಲ್ಲದ ದೇವಸ್ಥಾನವನ್ನು ನೋಡಿ ದೇವರ ಹೆಸರನ್ನು ಕೇಳಿದೆ. ಆಕೆಯ ಹೆಸರು “ಮುತ್ತಿನಮ್ಮ”. ಮುತ್ತಿನಮ್ಮನ ಗುಡಿಗೆ ಹೊಲೆಯರ ಪ್ರವೇಶವಿಲ್ಲ. ಆ ಗುಡಿಯ ಹತ್ತಿರ ಕೂಡ ಸುಳಿಯಬಾರದು. ಹೊಲೆಯರು ಆ ಧೈರ್ಯ ಮಾಡಿದರೆ ದೇವರು ಹೊಲೆಯರನ್ನಷ್ಟೇ ಅಲ್ಲ, ಹಿಂದೂಗಳನ್ನು ಮುಸಲ್ಮಾನರನ್ನು ಸುಟ್ಟು ಹಾಕುತ್ತಾಳೆ. ಆದ್ದರಿಂದ ಹೊಲೆಯರು ಅತ್ತ ಸುಳಿಯುವುದಿಲ್ಲ.
ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ
ಮುತ್ತಿನಮ್ಮನ ಗುಡಿಯನ್ನು ದಾಟಿ ರಮೇಶನ ನಂಟರ ಊರಿಗೆ ಹೋಗಿ ವಾಪಸ್ಸು ಬರುವಾಗ ಕತ್ತಲೆ ಕವಿಯತೊಡಗಿತ್ತು. ಸುತ್ತಲೂ ಕಪ್ಪು ಮೋಡಗಳ ಸಾಲು; ಭೋರೆಂದು ಬೀಸುವ ಗಾಳಿ, ಸುತ್ತಮುತ್ತ ಬೆಟ್ಟ ಗುಡ್ಡ ಕಾಣುತ್ತಿಲ್ಲ. ಆದ್ದರಿಂದಲೇ ಗಾಳಿ ಅಡೆ ತಡೆ ಇಲ್ಲದೇ ಬೀಸುತ್ತಿದೆ. ಅಲ್ಲೊಂದು ಇಲ್ಲೊಂದು ಮರಗಳು; ಸೀಳುದಾರಿಯ ಸುತ್ತ ಕಳ್ಳಿ ಗಿಡಗಳು. ನಾವು ಬಿರಬಿರನೆ ಹೆಜ್ಜೆ ಹಾಕತೊಡಗಿದೆವು. ಎಷ್ಟೇ ನಡೆದರೂ ಮುಗಿಯದ ದಾರಿ ಇದು. ಮಳೆಗೆ ಸಿಕ್ಕಿಬಿದ್ದರೆ ಆಶ್ರಯಕ್ಕೆಂದು ಹತ್ತಿರದಲ್ಲಿ ಒಂದು ಮರವೂ ಇಲ್ಲ. ಬೇರೆ ಊರುಗಳ ದಾರಿಯಲ್ಲಿ ಆಗಾಗ ಸಿಗುವ ಹಾಳು ಮಂಟಪಗಳೂ ಇತ್ತ ಇಲ್ಲ. ರಾತ್ರಿ ಪೂರ್ತಿ ಮಳೆಯಲ್ಲಿ ನೆನೆದರೆ ಉಂಟಾಗುವ ಅನಾರೋಗ್ಯದ ಕಲ್ಪನೆ ನನ್ನನ್ನು ಕಾಡಲು ತೊಡಗಿತು. ಇಬ್ಬರು ಬಿದ್ದಂಬೀಳ ಓಡತೊಡಗಿದೆವು. ಅಡ್ಡದಾರಿ ಸರಿಯೆಂದು ದಾರಿ ಬಿಟ್ಟು ಹೊಲಗಳಲ್ಲಿ ಓಡಿದ್ದಾಯಿತು. ಊರು ಹತ್ತಿರ ಬರುತ್ತಿದ್ದಂತೆ ಮಳೆ ನಮ್ಮನ್ನು ಹಿಡಿಯಿತು.
ನೆನೆಯುತ್ತಲೇ ಓಡಿದೆವು. ಊರು ತಲಪಲೇ ಇಲ್ಲ, ಊರ ಕೊನೆಯ ಮುತ್ತಿನಮ್ಮನ ಗುಡಿಯ ಹತ್ತಿರ ಬಂದೆವು. ಗುಡಿಯ ಒಳಗೆ ಹೊಲೆಯರಿಗೆ ಪ್ರವೇಶವಿಲ್ಲ.
ಗುಡಿಯ ಹಿಂದೆ ನಿಂತುಕೊಂಡೆವು. ಗೋಡೆಯ ಆಶ್ರಯದಲ್ಲಿ ಮಳೆಯಿಂದ ತಪ್ಪಿಸಿಕೊಳ್ಳುವ ಉದ್ದೇಶ ನಮ್ಮದು. ಕಾಲ ಮೇಲೆ ಮಾತ್ರ ತೊಟ್ಟಿಕ್ಕುತ್ತಾ ಇದ್ದ ಮಳೆಯ ಹನಿ ಬರುಬರುತ್ತಾ ಮೈಯಮೇಲೆಲ್ಲ ತೊಟ್ಟಿಕ್ಕಲು ಶುರು ಮಾಡಿತು.
”ಮಳೆಯಿಂದ ತಪ್ಪಿಸ್ಕೋ ಬೇಕಾದ್ರೆ ಗುಡಿ ಒಳಗೆ ಹೋಗಬೇಕು ಗುರು”. ನನ್ನ ಮಾತಿನಿಂದ ರಮೇಶನಿಗೆ ರೋಮಾಂಚನವಾಗಿರಬೇಕು. ಅಥವಾ ಮಳೆ, ಗುಡುಗು ಮಿಂಚಿನ ಕಾಟದಲ್ಲಿ ಬಿರುಗಾಳಿಯ ಆರ್ಭಟದಲ್ಲಿ ಅವನಿಗೆ ಅದು ಕೇಳಿಸದೆ ಇರಬೇಕು, ಯಾಕೋ ಮೌನವಾಗೇ ಇದ್ದ. ನಾನು ಅದೇ ಮಾತನ್ನು ಇನ್ನೊಂದು ಸಲ ಹೇಳಿದೆ.
“ಬೇಡ ಗುರು ದರಿದ್ರ ನನ್ ಮಕ್ಳುಗೆ ಗೊತ್ತಾದರೆ ಸುಮ್ಮೆ ಬಿಡಲ್ಲ”
ಅವನಿಗೆ ಹೋಗುವ ಮನಸ್ಸಿತ್ತು. ಆದರೆ ಆತನ ಊರಿನ ಪರಿಸ್ಥಿತಿ ನನಗಿಂತ ಅವನಿಗೆ ಚೆನ್ನಾಗಿ ಗೊತ್ತಿತ್ತು.
ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ
ಇಲ್ಲಿ ನಿಲ್ಲುವುದಕ್ಕಂತೂ ಸಾಧ್ಯವಿಲ್ಲ. ಈಗಾಗಲೇ ತೊಪ್ಪೆ ಆಗಿದ್ದೇವೆ. ಊರಿಗೆ ಓಡೋಣವೆಂದರೆ ನಾವು ಬರುವಾಗ ಕಾಲಿ ಇದ್ದ ಒಂದು ಪುಟ್ಟ ಹಳ್ಳ ತುಂಬಿ ಹರಿಯುತ್ತಿದೆ. ಅದರ ನೀರು ಕಡಿಮೆ ಆಗದೆ ಊರು ತಲುಪುವುದು ಅಸಾಧ್ಯ. ಈ ರೀತಿ ಇಕ್ಕಟ್ಟಿಗೆ ಎಂದೂ ಸಿಕ್ಕಿರಲಿಲ್ಲ.
ರಪರಪನೆ ಹೊಡೆಯುವ ಮಳೆ, ಗುಡಿಯ ಹಿಂದಿನ ಗೋಡೆಯಿಂದ ಗುಡಿಯ ಬಾಗಿಲಿಗೆ ಬಂದು ನಿಂತುಕೊಳ್ಳಲು ನಿರ್ಧರಿಸಿದೆವು. ಊರಿನವರಿಗೆ ಗುಡಿಯ ಬಾಗಿಲಲ್ಲಿ ನಿಲ್ಲುವುದೂ ಅಪರಾಧವೆ. ನಮಗೆ ಅದು ಅನಿವಾರ್ಯವಾಗಿತ್ತು. ಊರಿನವರು ಯಾರಾದರೂ ನೋಡಿದರೆ ತಮ್ಮ ಗತಿ ಏನು ಎಂಬ ಭಯ ಶುರುವಾಯಿತು. ಯಾರೂ ಎಲ್ಲೂ ನಮ್ಮಂತೆ ನಿಂತದ್ದು ಕಂಡು ಬರಲಿಲ್ಲ. ಈ ಕತ್ತಲೆಯಲ್ಲಿ ಯಾರಿಗೆ ಯಾರೂ ಕಾಣಿಸುವುದಿಲ್ಲ.
ಆ ದಿನ ಮಳೆಗೆ ಏನಾಗಿತ್ತೋ ಕಾಣೆ, ಬಾಗಿಲ ಕಡೆಯಿಂದಲೂ ಹೊಡೆಯಲು ಶುರುಮಾಡಿತು. ನಮ್ಮಿಬ್ಬರ ಬಟ್ಟೆಯಿಂದ ಧಾರಾಕಾರವಾಗಿ ಹರಿಯುವ ನೀರು, ರಮೇಶ ಇದ್ದಕ್ಕಿದ್ದಂತೆ ಹೇಳಿದ “ಒಳಗೆ ಹೋಗಾನ ಗುರು”. ನಾನು “ನಡೀ ಗುರು” ಎಂದೆ.
ಮೊದಲು ಹೊಸಲು ಒಳಗೆ ಹೋಗಿ ಹಾಗೆಯೇ ಕೊಂಚ ಕೊಂಚವೇ ಒಳಗೆ ಹೋದೆವು. ಮಳೆ ಗುಡಿಯ ಒಳಗೆ ಬೀಳುತ್ತಿರಲಿಲ್ಲ. ಚಪ್ಪಲಿಯನ್ನು ಕೂಡ ಕಳಚಿರಲಿಲ್ಲ. ಒಳಗೆ ಹೋದಕೂಡಲೇ ಮನಸ್ಸಿಗೆ ಏನೋ ಒಂದು ಬಗೆಯ ಆತಂಕ. ಈ ಗುಡಿಗೆ ಪ್ರವೇಶ ಮಾಡಿದ ಮೊದಲ ಹೊಲೆಯರು ನಾವು ಎಂದುಕೊಂಡೆವು. ವಿಚಿತ್ರ ರೀತಿಯ ಖುಷಿ ಆಯಿತು. ಮೇಲು ಜಾತಿಯ ಜನರ ಹಲ್ಲೆಯ ಭಯ ಇಲ್ಲವಾಯಿತು.
ರಮೇಶ ದೇವರ ಹತ್ತಿರಕ್ಕೆ ಹೋದ. ಏನೋ ಶಬ್ದವಾಯಿತು. ಅದು ಇವನು ಕ್ಯಾಕರಿಸಿದ್ದು. ನಾನು ಕುತೂಹಲದಿಂದ ಅವನನ್ನೇ ನೋಡುತ್ತಿದ್ದೆ. “ಥೂ” ಎಂದು ದೇವರ ಮೇಲೆ ಉಗಿದ. ದೇವರ ಹತ್ತಿರ ಹೋದ. ನಾನು ಹುಡುಗಾಟಕ್ಕಾಗಿ ನನ್ನ ಚಪ್ಪಲಿಯನ್ನು ದೇವರ ತಲೆಯ ಮೇಲೆ ಇಟ್ಟೆ. ದೇವರಲ್ಲಿ ಭಕ್ತಿ ಇಲ್ಲದ ನಾವಿಬ್ಬರೂ ಹೀಗೆ ಮಾಡುವುದಕ್ಕೆ ಕಾರಣಗಳೇ ನಮಗೆ ಹೊಳೆಯಲಿಲ್ಲ.
ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ
ಸುಮಾರು ಹೊತ್ತು ಅಲ್ಲೇ ಇದ್ದೆವು. ಮಳೆ ಸ್ವಲ್ಪ ಕಡಿಮೆ ಆಗತೊಡಗಿತು. ನಾವಿಬ್ಬರು ಹಗುರವಾಗಿ ಹೊರಬಂದೆವು. ರಮೇಶನ ಮನೆಯಲ್ಲಿ ಕೋಳಿ ಕೊಯ್ದಿದ್ದರು. ಮನೆಯಲ್ಲಿ ಊಟಕ್ಕೆ ಕುಳಿತಾಗ ಇನ್ನಿಬ್ಬರು ವಯಸ್ಸಾದವರು ನಮ್ಮ ಜೊತೆ ಊಟಕ್ಕೆ ಕುಳಿತರು. ಅವರಿಬ್ಬರೂ ಪ್ರೈಮರಿ ಸ್ಕೂಲಿನ ಮೇಷ್ಟ್ರುಗಳು. ಅವರಲ್ಲಿ ಒಬ್ಬ ಚೂಟಿಯ ಮನುಷ್ಯ. ಆತನ ಗೆಳೆಯನೊಡನೆ ಮಾತನಾಡುತ್ತಾ ಆಗಾಗ ಜೋಕ್ ಹೊಡೆಯುತ್ತಿದ್ದ. ನಾವಿಬ್ಬರೂ ಏನೇನೋ ಮಾತನಾಡಿಕೊಳ್ಳುತ್ತಿದ್ದು, ನಮ್ಮಿಬ್ಬರ ಮಾತಿನಲ್ಲಿ ಮಾರ್ಕ್ಸ್, ಅಂಬೇಡ್ಕರ್, ಮಾವೋ ಇವರೆಲ್ಲ ಬಂದುಹೋದರು.
ಚೂಟಿಯಾದ ಮನುಷ್ಯ ತಾನೇ ನಮ್ಮ ಜೊತೆ ಮಾತಿಗಾರಂಭಿಸಿದ. “ಜಾತಿ ಎಲ್ಲಿ ಹೋಗುತ್ತೆ ಬಿಡಿ ಸಾರ್? India is a caste ridden society” ಎಂದ.
Schedule Catse people should arise their head. They must came out from this Hindu fold ಹೀಗೆಯೇ ಸರಿಯಾದ ಮತ್ತು ತಪ್ಪಾದ ಇಂಗ್ಲಿಷಿನಲ್ಲಿ ಸಾಗಿತ್ತು ಅವನ ಭಾಷಣ. ಹೊಲೆಯರನ್ನೂ ಸ್ವಲ್ಪ ಹೊತ್ತು ಬೈದ. ಅವರ ಸೋಮಾರಿತನ, ಕೊಳಕುತನವನ್ನು ಗೇಲಿ ಮಾಡಿದ. “ನನ್ನ ಮನೆಯೂ ಹೊಲಗೇರಿಯಲ್ಲೇ ಇದೆ. ಬಂದು ನೋಡಿ ಎಷ್ಟು clean ಆಗಿದೆ” ಎಂದು ನನಗೆ ಆಹ್ವಾನ ಕೊಟ್ಟ.
ಬಿಳಿ ಷರಟು, ಬಿಳಿ ಪ್ಯಾಂಟು, ಒಂದು ಕನ್ನಡಕ, ಈ ಮನುಷ್ಯ ಶುಚಿಯಾಗಿದ್ದಾನೆ ಎನ್ನಿಸಿತು. ಮುಖದ ಗೆರೆಗಳು ಇವನು ಅನುಭವಸ್ಥ ಎಂಬುದನ್ನು ಹೇಳುತ್ತಿತ್ತು. ಪದೇ ಪದೇ ಮಾತಿನಲ್ಲಿ ತೂರಿ ಬರುವ ಇಂಗ್ಲಿಷ್ ನನ್ನ ಕುತೂಹಲವನ್ನು ಕೆರಳಿಸಿತು. ಕನ್ನಡವನ್ನು ಆದಷ್ಟು ಸ್ವಚ್ಛವಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದ.
ಇದನ್ನು ಓದಿದ್ದೀರಾ?: ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಕತೆ | ನೋಂಬು
ಆತನ ಬಗ್ಗೆ ಆರಂಭದಲ್ಲಿ ನನಗೆ ಇದ್ದ ಕುಹಕದ ಜೊತೆಗೆ ಗೌರವವೂ ಸೇರಿಕೊಂಡಿತು. ಈ ಎರಡರ ಮಿಶ್ರಣದಲ್ಲಿಯೇ ನಾನು “ನಿಮ್ಮ ಹೆಸರು ಏನ್ ಸಾರ್?” ಎಂದೆ.
ಹೆಸರು ಕೇಳುವುದನ್ನೇ ಆತ ಕಾಯುತ್ತಿದ್ದ ಎಂದು ಕಾಣುತ್ತದೆ. ಅವನ ಮುಖದಲ್ಲಿ ಉಲ್ಲಾಸ ಲಾಸ್ಯವಾಡಿತು. ದೀಪದ ಬೆಳಕಿನಲ್ಲೂ ಅವನ ಕಣ್ಣು ಮಿಂಚಿದ್ದು ಗೊತ್ತಾಗುತ್ತಿತ್ತು. “ನನ್ನ ಹೆಸರು ಜೋಸೆಫ್‌ರಾಜ್, ನಾನು ಕ್ರಿಶ್ಚಿಯನ್ ಆಗಿರುವುದರಿಂದ ನನ್ನ ಮನೆಯಲ್ಲಿ ಹೆಂಡತಿ ಮಕ್ಕಳೂ ಕ್ರಿಶ್ಚಿಯನ್ ಆಗಿದ್ದಾರೆ.”
ಈತ ಕ್ರಿಶ್ಚಿಯನ್ ಆಗಲು ಕಾರಣ ಕೇಳಿದೆ. ಅವನಿಗೆ ಇನ್ನೂ ಆನಂದವಾದಂತೆ ಕಂಡಿತು. “ನೋಡಿ ಸಾರ್, ಈ ದೇಶದ Caste system ಹೋಗಬೇಕಾದ್ರೆ ಕ್ರಿಶ್ಚಿಯನ್ ಆಗೋದು ಒಂದೇ ದಾರಿ. ನಮ್ಮ ಹೊಲೇರೆಲ್ಲ ಕ್ರಿಶ್ಚಿಯನ್ ಆದರೆ ಆ ಹೊತ್ತೇ ನಮಗೆ ವಿಮೋಚನೆ. ನಾನು ಪ್ರತಿ ಭಾನುವಾರ ಚರ್ಚ್‌ಗೆ ಹೋಗ್ತಿನಿ. ನಾನೊಬ್ಬನೇ ಕ್ರಿಶ್ಚಿಯನ್ ಆಗಿರೋದು ನನಗೆ ನೋವಿನ ವಿಚಾರ. ಈ ಊರಿನ ಹೊಲೇರು ಈ ದೇಶದ ಹೊಲೇರು ಎಲ್ಲರೂ ಕ್ರಿಶ್ಚಿಯನ್ ಆಗಬೇಕು” ಎಂದು ಆವೇಶದಿಂದ ಹೇಳಿದ.
ಮೂಡಿನಲ್ಲಿದ್ದ ಆತನನ್ನು ನಾನು ಮತ್ತೆ ಕೆಣಕಿದೆ. “ಕ್ರಿಶ್ಚಿಯನ್ ಆಗಿರೋದ್ರಿಂದ ನಿಮ್ಮನ್ನ ಮೇಲುಜಾತಿಯ ಜನ ಹೋಟೆಲಿಗೆ ಸೇರಿಸ್ತಾರೋ?” ಜೋಸೆಫ್ ರಾಜ್‌ಗೆ ಕೊಂಚ ನಿರಾಸೆಯಾಯಿತು. ಆತ ಮೆತ್ತಗೆ ಹೇಳಿದ “ಸೇರಿಸೋಲ್ಲ” ಎಂದು. ಒಂದು ತಿಂಗಳ ಹಿಂದೆ ಜನಗಣತಿಗೆ ಹೋಗಿದ್ದಾಗ ಆದ ಘಟನೆಯನ್ನು ನೆನಪು ಮಾಡಿಕೊಂಡ:
ಈ ಊರಿಗೆ ಎರಡು ಮೈಲಿ ದೂರದಲ್ಲಿರುವ ಸೀಗೆಹಳ್ಳಿಯಲ್ಲಿ ಆ ದಿನ ಜನಗಣತಿ ಇತ್ತು. ಜೋಸೆಫ್ ರಾಜ್ ತನ್ನ ಗೆಳೆಯ ಚಿಕ್ಕೇಗೌಡನ ಜೊತೆ ಆ ಊರಿನ ಹೋಟೆಲಿನ ಮುಂದೆ ಬರುತ್ತಿದ್ದ. ಚಿಕ್ಕೇಗೌಡನಿಗೆ ಕಾಫಿ ಕುಡಿಯುವ ಮನಸಾಯಿತು. ತನ್ನ ಮಿತ್ರನನ್ನು ಬಿಟ್ಟು ಕಾಫಿ ಕುಡಿಯಲು ಆತ ಸಿದ್ಧನಿಲ್ಲ. ”ಬನ್ನಿ ಜೋಸೆಫ್ ಕಾಫಿ ಕುಡಿಯೋಣ” ಎಂದ. ಜೋಸೆಫ್‌ಗೆ ಭಯ. ತಾನು ಕ್ರಿಶ್ಚಿಯನ್ ಆಗಿದ್ದರೂ ಮಾಜಿ ಹೊಲೆಯನೆಂಬ ನೆನಪು. ಅವನು “ನನಗೆ ಕಾಫಿ ಬೇಡಿ” ಎಂದ. ಚಿಕ್ಕೇಗೌಡ ಒತ್ತಾಯಿಸಿದ. ಇದು ಹೋಟೆಲಿನ ಮುಂದೆಯೇ ನಡೆಯಿತು. ಹೋಟೆಲಿನ ಸೂರಿಗೆ ನೇತು ಹಾಕಿದ ಲೋಟವನ್ನು ತೆಗೆದುಕೊಂಡು ಹೊಲೆಯರ ತಿಮ್ಮಯ್ಯ ಕಾಫಿ ಕುಡಿಯುತ್ತಿದ್ದವನು ಜೋಸೆಫ್ ಕಡೆ ತಿರುಗಿ ”ಹೋಗಿ ಸಾ ಒಳೀಕೆ” ಎಂದ.
ಇದನ್ನು ಓದಿದ್ದೀರಾ?: ಎಸ್.ಎಫ್. ಯೋಗಪ್ಪನವರ್ ಅವರ ಕತೆ | ಆರಾಮ ಕುರ್ಚಿ
ಚಿಕ್ಕೇಗೌಡ ಬೇರೆ ಅತಿಯಾಗಿ ಒತ್ತಾಯಿಸುತ್ತಿದ್ದನಾದರೂ ಒಳಗೆ ಹೋಗುವಂತಿರಲಿಲ್ಲ. ತನ್ನ ದೂರದ ನಂಟ ಜೋಸೆಫ್ ಆದರೂ ಒಳಗೆ ಹೋಗಿ ಕಾಫಿ ಕುಡಿಯಲೆಂದು ತಿಮ್ಮಯ್ಯನ ಆಸೆ.
ಜೋಸೆಫ್ ಒಳಗೆ ಹೋದ. ಎಲ್ಲರ ಕಣ್ಣು ಇತ್ತ ತಿರುಗಿದವು. ಚಿಕ್ಕೇಗೌಡ ಇಬ್ಬರಿಗೂ ಕಾಫಿ ಹೇಳಿದ. ಅಲ್ಲೇ ಕುಳಿತಿದ್ದ ಒಬ್ಬ ವ್ಯಕ್ತಿ ಜೋಸೆಫ್‌ಗೆ “ಏಳೋ ಮ್ಯಾಕ್ಕೆ” ಎಂದ. ಜೋಸೆಫ್ ಏಳುವುದಿರಲಿ, ಅಷ್ಟರಲ್ಲಿ ನಾನಾ ಕಡೆಯಿಂದ ಹೊಡೆತಗಳು. ಅಲ್ಲೇ ಕೆಳಕ್ಕೆ ಬಿದ್ದ. ಪಕ್ಕದಲ್ಲಿದ್ದ ಚಿಕ್ಕೇಗೌಡ ಪರಾರಿ. ಈ ಗಲಾಟೆಯಲ್ಲಿ ಹೋಟೆಲಿನ ಸ್ಟವ್ ಹೊತ್ತಿಕೊಂಡಿತು. ಅಲ್ಲಿದ್ದ ಹೆಂಗಸು ಹೋ ಎಂದಳು. ಜೋಸೆಫ್ ಚಿಕ್ಕೇಗೌಡನ ದಾರಿ ಅನುಸರಿಸಬೇಕಾಯಿತು. ಬಟ್ಟೆ ಹರಿದಿತ್ತು. ತುಟಿ ಒಡೆದು ರಕ್ತ ಸೋರುತ್ತಿತ್ತು. ಕುಂಟುತ್ತ ಓಡುತ್ತ ಕುಂಟೋಡುತ್ತಾ ಜೋಸೆಫ್ ಮನೆ ತಲುಪಿದನಂತೆ.
*
ಆರು ವರುಷಗಳ ಮೇಲೆ ನಾನು ಇತ್ತೀಚೆಗೆ ಆದಿಪುರಕ್ಕೆ ಹೋಗಬೇಕಾಯಿತು. ಬೆಳಿಗ್ಗೆ ಟೀ ಷಾಪ್‌ನಲ್ಲಿ ಪೇಪರ್ ಓದುತ್ತಿದ್ದೆ. ಒಂದೇ ಪತ್ರಿಕೆಯನ್ನು ನಾಲ್ಕಾರು ಜನ ಎಗರೆಗರಿ ಓದುತ್ತಿದ್ದರು. ”ಆದಿಪುರದಲ್ಲಿ ಮತಾಂತರ” ಎಂದು ದಪ್ಪ ಅಕ್ಷರಗಳಲ್ಲಿ ಇತ್ತು. ಅಲ್ಲಿಯ ಹರಿಜನರು ಮುಸ್ಲಿಮರಾದ ವಿಚಾರ ಓದಿ ರಮೇಶ ಇಲ್ಲದಿದ್ದರೂ ಚಿಂತೆಯಿಲ್ಲ ಎಂದು ಆದಿಪುರಕ್ಕೆ ಹೊರಟೆ. ಹೊಲೆಯರ ಕೇರಿಗೆ ಹೋದರೆ, ಅದು ಗುರುತೇ ಸಿಕ್ಕಲಿಲ್ಲ. ಮನೆಮನೆಯ ಮೇಲೆಲ್ಲ ಹಸಿರು ಬಾವುಟ. ಪುಟ್ಟ ಹುಡುಗರ ತಲೆಯ ಮೇಲೆ ಟೋಪಿ. ಹೊಸದಾದ ಆದರೂ ಕೊಳಕಾದ ಪಾಯಿಜಾಮ, ಷರಟು. ನನಗೆ ಆಶ್ಚರ್ಯ. ಅವರಿಗೆ ಆನಂದ.
ಇದನ್ನು ಓದಿದ್ದೀರಾ?: ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…
ದೊಗಳೆ ಷರಟು, ದೊಗಳೆ ಪಾಯಿಜಾಮ, ಕೆಂಪು ಟೋಪಿ ಹಾಕಿಕೊಂಡು ಬರುತ್ತಿದ್ದ ವ್ಯಕ್ತಿಯನ್ನು ಗುರುತಿಸುವುದು ಕಷ್ಟವಾಗಲಿಲ್ಲ. “ಹಲೊ ಜೋಸೆಫ್” ಎಂದೆ.
ಆ ವ್ಯಕ್ತಿ ರೇಗಿದವನಂತೆ ಕಂಡ. ನನ್ನ ಹೆಸರು ಸಲೀಂ ಅಂತ ಸಾರ್. ಮೊನ್ನೆ ಮುಸ್ಲಿಂಗೆ ಕನ್‌ವರ್ಟ್ ಆಗ್ಬಿಟ್ಟೊ ಸಾರ್” ಎಂದ. ನನಗೆ ಮಾತೇ ಹೊರಡಲಿಲ್ಲ. “ಇದ್ದಕ್ಕಿದ್ದಂತೆ ಯಾಕೆ ಮುಸ್ಲಿಂ ಆದ್ರಿ?” ಎಂದೆ. “ಎಂದೋ ಮುಸ್ಲಿಂ ಆಗಬೇಕಿತ್ತು ಸಾರ್” ಎಂದ.
ಕ್ರಿಶ್ಚಿಯನ್ ಧರ್ಮ ಬಿಟ್ಟ ಕಾರಣ ಗೊತ್ತಾಗಲಿಲ್ಲ, ಕೇಳಿದೆ. “ಕ್ರಿಶ್ಚಿಯನ್ನರಿಗೆ ತಾಕತ್ತಿಲ್ಲ ಸಾರ್. ಫಾದರ್ ಸಿಸ್ಟರ್ ಅಂತ ಅಂದ ಮಾತ್ರಕ್ಕೆ ಏನೂ ಆಗಲ್ಲ. ಭೋಸೂಡಿ ಮಗನೇ ಮಾದರ್‌ಚೋದ್ ಅನ್ನಬೇಕು ಸಾರ್” ಇವನ ಮಾತುಗಳನ್ನು ಕೇಳಿ ದಂಗಾದೆ.
ಚಿಕ್ಕ ಹುಡುಗರು “ಕ್ಯಾರೆರೇ ತೇರಿ…” ಎಂದು ಜಗಳವಾಡುತ್ತಿದ್ದವು. ಇದು ಮತಾಂತರ ಮಾತ್ರವಲ್ಲ, ಭಾಷಾಂತರವೂ ಹೌದು ಅನ್ನಿಸಿತು.
ಸಲೀಮನ ಮನೆಗೆ ಹೋದೆ. ದೇವರಿಲ್ಲದ ಮನೆ. ಅವನ ಹೆಂಡತಿ ಬುರ್ಖಾಧಾರಿಣಿ. ದಲಿತ ಮಹಿಳೆಯರೆಲ್ಲ ಬುರ್ಖಾ ಧರಿಸಿದ್ದರಿಂದ ಅವರನ್ನು ಗುರುತು ಹಿಡಿಯುವುದು ಸಾಧ್ಯವಾಗಲಿಲ್ಲ. ನಾನು ಟೋಪಿ ಧರಿಸಿಲ್ಲ. ನನ್ನ ಹೆಸರು ಕನ್ನಡದ್ದು. ಜನ ನನ್ನನ್ನು ಅನುಮಾನಿಸಿದರು. ಪತ್ತೇದಾರನಂತೆ ಕಂಡರು. ಒಮ್ಮೆ ಪ್ರೀತಿಯಿಂದ ಕರೆದವರು ಈಗ ಗುರುತು ಕೂಡ ಹಿಡಿಯಲಿಲ್ಲ.
ಇದನ್ನು ಓದಿದ್ದೀರಾ?: ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ
ಎದುರಿಗೆ ಬಂದ ನಾಲ್ಕು ಮಕ್ಕಳು ಹೊಲೆಯರವೇ. ಅವು ಮುಸ್ಲಿಮರಾಗಿದ್ದವು. ಎಲ್ಲಿಲ್ಲದ ಉತ್ಸಾಹ ಅವರ ಮುಖದಲ್ಲಿ ಲಾಸ್ಯವಾಡುತ್ತಿತ್ತು. ಅವು ನನ್ನನ್ನು ನೋಡಿದವು. ಅವುಗಳ ಮುಖದಲ್ಲಿ ಕುಹುಕ ನಗೆಯೊಂದು ಸುಳಿದಂತೆ ನನಗೆ ಭಾಸವಾಯಿತು. ಅವರು ಮನಸ್ಸಿನಲ್ಲಿ “ಹೊಲೆಯನಾಗೇ ಉಳಿದವನು” ಎಂದು ಅಪಹಾಸ್ಯ ಮಾಡಿರಬಹುದು. ಮುಸ್ಲಿಮರಾದ ಆ ಮಕ್ಕಳ ಮುಂದೆ ನಾನು ಕೀಳಾದವನು ಎನ್ನಿಸಿತು. ಅವರನ್ನೇ ನೋಡಿದೆ. ಅವರ ಕೈಯಲ್ಲಿ ಬಟ್ಟಲುಗಳಿದ್ದವು. ಅದರ ತುಂಬ ಬಿರಿಯಾನಿ. ಅವರು ಅದನ್ನು ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗುತ್ತಿದ್ದರು.
ಇವರಿಗೆ ಇದು ಹೇಗೆ ದಕ್ಕಿತು? ಒಬ್ಬನನ್ನು ಕೇಳಿದೆ. “ಎಲ್ಲಿದೋ ಮರಿ ಬಿರಿಯಾನಿ?” ಅವನು “ಬಡೇ ಸಾಬರ ಮನೇದು” ಎಂದವನೇ ಮುಂದಕ್ಕೆ ಹೋದ. ಉಳಿದವರೂ ಅವನನ್ನು ಹಿಂಬಾಲಿಸಿದರು. ಬಡೇ ಸಾಬಿ ಈ ಸುತ್ತಿನ ಮುಸಲ್ಮಾನರ ನಾಯಕ. ದಲಿತರ ಮತಾಂತರದಿಂದ ಆತನಿಗೆ ಸಂತೋಷ ಆಗಿರಲೇಬೇಕು.
ಹೊತ್ತು ಮುಳುಗಿರಲಿಲ್ಲ. ಕತ್ತಲಾಗುವುದರ ಒಳಗೆ ಹೋಗಬೇಕು. ಬಸ್ಸು ಹತ್ತಿಸಲು ಬಸ್ ಸ್ಟಾಂಡಿಗೆ ಯಾರೂ ಬರಲಿಲ್ಲ. ನನ್ನ ಗೆಳೆಯನೂ ಇಲ್ಲ. ನಿಧಾನವಾಗಿ ನಡೆದೆ.
(ಕೃಪೆ: ಸಿದ್ಧಲಿಂಗಯ್ಯ ವಾಚಿಕೆ, ಸಂ: ದಂಡಪ್ಪ ಕೊಂಡ್ರಹಳ್ಳಿ, ಪ್ರ: ನುಡಿ ಪುಸ್ತಕ, ಬೆಲೆ: 125, ಸಂಪರ್ಕ: 80733 21430)

ಸಿದ್ಧಲಿಂಗಯ್ಯ (1954-2021): ಚಿಂತಕ, ಸೃಜನಶೀಲ ಕವಿ. 1954ರ ಫೆಬ್ರವರಿ 3ರಂದು ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ ಜನಿಸಿದರು. ಮಾಗಡಿಯ ಹೊಸಹಳ್ಳಿಯ ಬಿಸಿಲಮ್ಮನ ಗುಡಿಯಲ್ಲಿ ಅಕ್ಷರಾಭ್ಯಾಸ ಪ್ರಾರಂಭಿಸಿದ ಇವರು 1974ರಲ್ಲಿ ಬಿಎ ಆನರ್ಸ್ (ಐಚ್ಛಿಕ ಕನ್ನಡ) ಪದವಿ, 1976ರಲ್ಲಿ ಎಂಎ ಪದವಿ, ‘ಗ್ರಾಮದೇವತೆಗಳು’ ಎಂಬ ಪ್ರೌಢ ಪ್ರಬಂಧಕ್ಕೆ 1989ರಲ್ಲಿ ಪಿಎಚ್.ಡಿ ಪದವಿ ಗಳಿಸಿದರು. ಪ್ರಕಟಿತ ಕೃತಿಗಳು: ಹೊಲೆ ಮಾದಿಗರ ಹಾಡು, ಸಾವಿರಾರು ನದಿಗಳು, ಕಪ್ಪುಕಾಡಿನ ಹಾಡು, ಮೆರವಣಿಗೆ, ನನ್ನ ಜನಗಳು ಮತ್ತು ಇತರ ಕವಿತೆಗಳು, ಆಯ್ದ ಕವನಗಳು (ಕವನ ಸಂಕಲನಗಳು); ಪಂಚಮ ಮತ್ತು ನೆಲಸಮ, ಏಕಲವ್ಯ (ನಾಟಕಗಳು); ಅವತಾರಗಳು (ಪ್ರಬಂಧ); ಹಕ್ಕಿನೋಟ, ಜನಸಂಸ್ಕೃತಿ, ಉರಿಕಂಡಾಯ (ವಿಮರ್ಶೆ); ಊರು ಕೇರಿ ಭಾಗ 1-2 (ಆತ್ಮಕಥೆ); ಗ್ರಾಮದೇವತೆಗಳು (ಸಂಶೋಧನೆ); ಮತಾಂತರ (ಕತೆ); ಸಮಕಾಲೀನ ಕನ್ನಡ ಕವಿತೆಗಳು, ಸಾಹಿತ್ಯ ಸಂಪದ, ವಿಚಾರ ವಾಹಿನಿ, ಆಧುನಿಕ ಕನ್ನಡ ಕಾವ್ಯ (ಸಂಪಾದನೆ) ಮತ್ತು ಸದನದಲ್ಲಿ ಸಿದ್ಧಲಿಂಗಯ್ಯ ಭಾಗ 1-2. ಊರು ಕೇರಿ ಆತ್ಮಕಥೆ ಇಂಗ್ಲಿಷ್ ಹಾಗೂ ತಮಿಳಿಗೂ ಅನುವಾದಗೊಂಡಿದೆ. ಇವರ ಹಲವಾರು ಕವಿತೆಗಳು ಇಂಗ್ಲಿಷ್, ಹಿಂದಿ, ತಮಿಳು, ಬಂಗಾಳಿ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಅನುವಾದಗೊಂಡಿವೆ. ದಲಿತ ಸಂಘರ್ಷ ಸಮಿತಿ, ಬಂಡಾಯ ಸಾಹಿತ್ಯ ಸಂಘಟನೆಗಳ ಸ್ಥಾಪಕ ಸದಸ್ಯರಾಗಿದ್ದರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಡಾ. ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ ಸೇರಿ ಹಲವಾರು ಪುರಸ್ಕಾರಗಳು ಸಂದಿವೆ. ಪುಟ್ಟಣ್ಣ ಕಣಗಾಲರು ನಿರ್ದೇಶಿಸಿದ ‘ಧರಣಿಮಂಡಲ ಮಧ್ಯದೊಳಗೆ’ ಚಿತ್ರಕ್ಕೆ ಇವರು ಬರೆದ ಗೀತೆಗೆ 1983-84ರಲ್ಲಿ ರಾಜ್ಯಪ್ರಶಸ್ತಿ ಸಿಕ್ಕಿದೆ. ಎರಡು ಬಾರಿ ಕರ್ನಾಟಕ ವಿಧಾನ ಪರಿಷತ್ತಿನ ನಾಮಕರಣ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಇವರು, ಪ್ರಾಧ್ಯಾಪಕರಾಗಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ನಿವೃತ್ತರಾದರು. 2021ರ ಜೂನ್ 11ರಂದು ಬೆಂಗಳೂರಿನಲ್ಲಿ ನಿಧನರಾದರು.




